Saturday, July 27, 2024

ಎಲೆ ಮರೆಯ ಕಾಯಿಯಾಗಿದ್ದ ಮಹಾನ್‌ ಸಾಧಕ ಅಮೃತ ಸೋಮೇಶ್ವರ

Most read

ಕನ್ನಡ ನಾಡಿನ ಹಿರಿಯ ವಿದ್ವಾಂಸರಲ್ಲೊಬ್ಬರಾದ ಡಾ. ಅಮೃತ ಸೋಮೇಶ್ವರರು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸಾಹಿತಿಯಾಗಿರುವುದು ಮಾತ್ರವಲ್ಲ, ಕರಾವಳಿ ಭಾಗದ ಸಾಂಸ್ಕೃತಿಕ ವೈಶಿಷ್ಟ್ಯಗಳಾದ ಯಕ್ಷಗಾನ, ಭೂತಾರಾಧನೆ, ತುಳುವ ಜಾನಪದ ಇತ್ಯಾದಿ ಕ್ಷೇತ್ರಗಳಲ್ಲಿ ವ್ಯಾಪಕ ಸಂಶೋಧನೆ ನಡೆಸಿದವರೂ ಹೌದು. ಅವರು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸಾಹಿತ್ಯ ಕೃತಿಗಳು, ಯಕ್ಷಗಾನ ಪ್ರಸಂಗ ಕೃತಿಗಳು, ಸಂಶೋಧನೆ, ವಿಮರ್ಶೆ ಹಾಗೂ ಇತರ ವಿಭಾಗಗಳಲ್ಲಿ ನೂರಕ್ಕೂ ಹೆಚ್ಚು ಕೃತಿಗಳನ್ನು ಹೊರತಂದು ಕನ್ನಡ, ತುಳು ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.

ಸಾಹಿತ್ಯದ ಹರಹು

ಅಮೃತರು ಕನ್ನಡದಲ್ಲಿ ರಚಿಸಿರುವ ಕೃತಿಗಳು- ಕಥಾಸಂಕಲನ, ಕವನ ಸಂಕಲನ, ಕಾದಂಬರಿ, ನಾಟಕ, ವ್ಯಕ್ತಿ ಚಿತ್ರಗಳು, ಜನಾಂಗ ಪರಿಚಯ, ಸಾಹಿತ್ಯ ವಿಮರ್ಶೆ, ರೇಡಿಯೋ ರೂಪಕಗಳು, ಸ್ವತಂತ್ರ ಗಾದೆಗಳು, ಶಬ್ದಕೋಶ, ಸಂಸ್ಕೃತಿ ಚಿಂತನ, ವಚನ ಸಾಹಿತ್ಯ, ಅಂಕಣ ಲೇಖನ, ಕುಚೋದ್ಯ ಕೋಶ, ನವಸಾಕ್ಷರರಿಗೆ ಸಾಹಿತ್ಯ, ಯಕ್ಷಗಾನ ಪ್ರಸಂಗಗಳು, ಯಕ್ಷಗಾನ ಸಂಶೋಧನೆ ಹಗೂ ವಿಮರ್ಶಾ ಕೃತಿಗಳು, ಸಂಪಾದಿತ, ಸಹಸಂಪಾದಿತ ಕೃತಿಗಳು ಇತ್ಯಾದಿ. ತುಳುವಿನಲ್ಲಿ ಕವನ ಸಂಗ್ರಹ, ಪಾಡ್ದನ ಸಂಗ್ರಹ, ನಾಟಕ, ಅನುವಾದಿತ ಕಾವ್ಯ, ನೃತ್ಯ ರೂಪಕ, ರೇಡಿಯೋ ರೂಪಕ, ಅನುವಾದಿತ ನಾಟಕ, ತುಳು ಜಾನಪದಕ್ಕೆ ಸಂಬಂಧಿಸಿದ ಕೃತಿಗಳು. ಸ್ವತಂತ್ರ ಗಾದೆಗಳು, ಭಕ್ತಿಗೀತೆಗಳು, ಭಾವಗೀತೆಗಳು ಮೊದಲಾದವು.

ಕನ್ನಡ ಕೃತಿಗಳು

ಬರವಣಿಗೆಯ ಕ್ಷೇತ್ರದಲ್ಲಿ ಅಮೃತರದ್ದು ಸುಮಾರು ಏಳು ದಶಕಗಳ ದುಡಿಮೆ. ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗಲೇ ಸಾಹಿತ್ಯ ರಚನೆಯ ಕೆಲಸ ಶುರು ಮಾಡಿದ ಅವರು ‘ಎಲೆಗಿಳಿ’, ‘ರುದ್ರಶಿಲೆ ಸಾಕ್ಷಿ’, ‘ಕೆಂಪು ನೆನಪು’, ಮಾನವತೆ ಗೆದ್ದಾಗ ಮತ್ತು ಇತರ ಕಥೆಗಳು’ ಕಥಾ ಸಂಗ್ರಹಗಳು, ‘ವನಮಾಲೆ’, ‘ಭ್ರಮಣ’, ‘ಜ್ಯೋತಿ ದರ್ಶನವಾಯಿತು’, ‘ಉಪ್ಪುಗಾಳಿ’, ‘ಸಂಜೆ ಪಯಣದ ಹಾಡು’ ಮೊದಲಾದ ಕವನ ಸಂಕಲನಗಳು, ‘ವಿಶ್ವರೂಪ’ ರೇಡಿಯೋ ರೂಪಕ, ‘ಗೋಂದೊಳು’, ‘ಕೋಟಿ ಚೆನ್ನಯ’, ‘ವೀರರಾಣಿ ಅಬ್ಬಕ್ಕಾ ದೇವಿ’ ಮೊದಲಾದ ನಾಟಕಗಳು, ‘ಸಪ್ತಮಾತೃಕೆಯರು’, ‘ಬಲಿ ಚಕ್ರವರ್ತಿ’, ‘ನಿಸರ್ಗ ವಿಜಯ’ ಸಹಿತ ಒಂಬತ್ತು ನೃತ್ಯರೂಪಕಗಳು, ‘ಬಡೆಕ್ಕಿಲ ವೆಂಕಟರಮಣ ಭಟ್ಟರ ಜೀವನ ಮತ್ತು ಕೃತಿಗಳು’, ‘ಮಹನೀಯ ಚೇತನಗಳು’ ವ್ಯಕ್ತಿಚಿತ್ರ, ‘ನಾಟ್ಯಮೋಹನ’, ‘ಅಮ್ಮೆಂಬಳ’ ಸಹಸಂಪಾದನೆ, ‘ಎದೆಯ ನಂಟು ನೂರೆಂಟು’, ‘ಸುಂದರ ಕಾಂಡ’, ‘ಅಬ್ಬಕ್ಕ ಸಂಕಥನ’, ‘ವಜ್ರಕುಸುಮ’, ‘ಯಕ್ಷಗಂಗೋತ್ರಿ’ ಸಂಪಾದನೆ, ‘ಸಿಂಗಾರ ಗಾದೆಗಳು’ ಸ್ವತಂತ್ರ ಗಾದೆಗಳು, ‘ಅಪಾರ್ಥಿನೀ’ ಕುಚೋದ್ಯಕೋಶ, ‘ಕಲ್ಲುರ್ಟಿ ಕಲ್ಕುಡ’, ‘ಉತ್ಸವಗಳು’, ‘ಯಕ್ಷಗಾನ’ ಮೊದಲಾದ ನವಸಾಕ್ಷರರಿಗಾಗಿನ ಕೃತಿಗಳು, ‘ದೀಪದ ಕೆಳಗೆ’ ಅಂಕಣ ಲೇಖನ ಸಂಕಲನ, ‘ಮೋಯ ಮಲಯಾಳ ಕನ್ನಡ ಪದಕೋಶ’ ಶಬ್ದಕೋಶ, ‘ಅಮರಶಿಲ್ಪಿ ವೀರ ಕಲ್ಕುಡ’, ‘ಸಹಸ್ರ ಕವಚ ಮೋಕ್ಷ’, ‘ಕಾಯಕಲ್ಪ’ ಸಹಿತ 30 ಯಕ್ಷಗಾನ ಪ್ರಸಂಗಗಳು, ‘ಯಕ್ಷಗಾನ ಹೆಜ್ಜೆಗುರುತುಗಳು’, ‘ಯಕ್ಷಗಾನ ಬಯಲಾಟ’, ‘ಯಕ್ಷಾಂದೋಳ’, ‘ಯಕ್ಷತರು’ ಮೊದಲಾದ ಯಕ್ಷಗಾನ ವಿಚಾರ ವಿಮರ್ಶೆ ಕೃತಿಗಳು, ‘ಜಿಪಿ ರಾಜರತ್ನಂ ಅವರ ಕವಿತೆಗಳು’, ‘ನಂದಳಿಕೆಯ ನಂದಾದೀಪ’, ‘ಮಹನೀಯ ಚೇತನಗಳು’, ‘ಅರಿವಿನ ಹರಿಕಾರರು’ ಮೊದಲಾದ ಸಾಹಿತ್ಯ ವಿಮರ್ಶೆ-ಕೃತಿಗಳು, ಕೊರಗರು ಜನಾಂಗ ಪರಿಚಯ ಹೀಗೆ ಅನೇಕ ಕನ್ನಡ ಕೃತಿಗಳನ್ನು ರಚಿಸಿದ್ದಾರೆ.

ತುಳು ಕೃತಿಗಳು

‘ತಂಬಿಲ’, ‘ರಂಗಿತ’ ಕವನ ಸಂಕಲನಗಳು, ‘ಬಾಮಕುಮಾರ ಸಂಧಿ’, ‘ತುಳು ಪಾಡ್ದನ ಸಂಗ್ರಹ’ ಪಾಡ್ದನ ಸಂಗ್ರಹ, ‘ಕಲೇವಾಲ’ ಅನುವಾದಿತ ಕಾವ್ಯ, ‘ರಾಯರಾವುತೆ’, ‘ಪುತ್ತೂರ‍್ದ ಪುತ್ತೊಳಿ’, ‘ತುಳುನಾಡ ಕಲ್ಕುಡೆ’, ಮೊದಲಾದ ಎಂಟು ನಾಟಕಗಳು, ‘ಜೋಕುಮಾರ ಸ್ವಾಮಿ’ ಅನುವಾದಿತ ನಾಟಕ, ‘ಮದನಗ’, ‘ಪೆರಿಂಜಗುತ್ತು ದೇವಪೂಂಜ’, ‘ಕೋಟಿ ಚೆನ್ನಯ’ ರೇಡಿಯೋ ರೂಪಕಗಳು, ‘ಎಳುವೆರ್ ದೆಯ್ಯಾರ್’, ‘ತುಳುವಾಲ ಬಲಿಯೇಂದ್ರ’, ‘ಸತ್ಯನಾಪುರದ ಸಿರಿ’ ನೃತ್ಯರೂಪಕಗಳು, ‘ತುಳುಪಾಡ್ದನದ ಕಥೆಗಳು’, ‘ಅವಿಲು’, ‘ಬಾಮಕುಮಾರ ಸಂಧಿ’ ಸಹಿತ ಆರು ತುಳು ಜಾನಪದ ಸಂಬಂಧಿತ ಕೃತಿಗಳು, ‘ಪೊಸ ಗಾದೆಲು’ ಸ್ವತಂತ್ರ ಗಾದೆಗಳು, ‘ಪೂಪೂಜನೆ’ ತುಳು ಭಕ್ತಿಗೀತೆಗಳು ಇವು ಅವರ ತುಳು ಕೃತಿಗಳು.

ಧ್ವನಿಸುರುಳಿಗಳು

ಕನ್ನಡದಲ್ಲಿ ‘ಶ್ರೀ ಭಗವತೀ ಭಕ್ತಿಗೀತೆಗಳು’, ‘ಧರ್ಮಜ್ಯೋತಿ’, ‘ಶರಣು ಶಬರೀಶ’ ಸಹಿತ ಒಂಬತ್ತು ಭಕ್ತಿಗೀತೆಗಳ ಧ್ವನಿಸುರುಳಿಗಳು, ‘ಮಹಾಶೂರ ಭೌಮಾಸುರ’, ‘ಮಹಾಕಲಿ ಮಗಧೇಂದ್ರ’, ‘ತ್ರಿಪುರ ಮಥನ’ ಸಹಿತ 18 ಯಕ್ಷಗಾನ ಧ್ವನಿಸುರುಳಿಗಳು. ತುಳುವಿನಲ್ಲಿ ‘ಪಾದುಕಾ ಪ್ರದಾನ’ ಯಕ್ಷಗಾನ ಧ್ವನಿಸುರುಳಿ, ‘ಪನ್ನೀರ್’, ‘ಸಿಂಗಾರ’, ‘ಆಟಿಕಳೆಂಜ’, ‘ಕರೆಗಾಳಿ’ ಮೊದಲಾದ ಭಾವಗೀತೆಗಳ ಧ್ವನಿಸುರುಳಿಗಳು, ‘ಮಾಯೊದ ಪುರಲ್’, ‘ಮಲೆತ ತುಡರ್’, ‘ಕ್ಷೇತ್ರ ದರ್ಶನ’ ಸಹಿತ ಏಳು ಭಕ್ತಿಗೀತೆಗಳ ಧ್ವನಿ ಸುರುಳಿಗಳು.

ಗಮನೀಯ ಪುಸ್ತಕಗಳು

ಯಕ್ಷಗಾನ ಕೃತಿ ಸಂಪುಟ, ತುಳು ಪಾಡ್ದನ ಸಂಪುಟ, ತುಳು ಬದುಕು, ತುಳು ಜಾನಪದ ಕೆಲವು ನೋಟಗಳು, ತುಳು ನಾಟಕ ಸಂಪುಟ, ಭಗವತೀ ಆರಾಧನೆ, ಮೋಯ ಮಲೆಯಾಳ ಕನ್ನಡ ಕೋಶ, ತೀರದ ತೆರೆ (ಕಾದಂಬರಿ), ಕಲ್ಲೋಜ ಕಲ್ಕುಡ ಮತ್ತು ಇತರ ನಾಟಕಗಳು, ಯಕ್ಷಾಂದೋಳ (ವಿವೇಚನೆ), ಕರೆಗಾಳಿ (ತುಳು-ಕನ್ನಡ ಭಾವಗೀತಗಳು), ಹೃದಯ ವಚನಗಳು (ಹೃದಯ ಕೇಂದ್ರಿತ ವಚನಗಳು) ಇವರ ಕೆಲವು ಗಮನೀಯ ಪುಸ್ತಕಗಳು.

ಪ್ರಮುಖ ಪ್ರಶಸ್ತಿಗಳು

ಮಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಶ್ರೀ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ, ಆಕಾಶವಾಣಿ ಪ್ರಶಸ್ತಿ, ಸಂದೇಶ ಪ್ರತಿಷ್ಠಾನ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ, ಡಾ ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಎಮಿನೆಂಟ್ ಅಲೋಶಿಯಸ್ ಪ್ರಶಸ್ತಿ, ಮಣಿಪಾಲ ಅಕಾಡೆಮಿ ಫೆಲೋಶಿಪ್, ದ.ಕ. ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ರೋಟರಿ ಕ್ಲಬ್ ಪ್ರಶಸ್ತಿ, ಡಾ ಶಿವರಾಮ ಕಾರಂತ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಕು ಶಿ ಹರಿದಾಸ ಭಟ್ಟ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಕೀರಿಕ್ಕಾಡು ಪ್ರಶಸ್ತಿ, ಕರ್ಕಿ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ವಿಶುಕುಮಾರ್ ಪ್ರಶಸ್ತಿ, ಸೀತಾನದಿ ಪ್ರಶಸ್ತಿ, ಗುಂಡ್ಮಿ ಚಂದ್ರಶೇಖರ ಐತಾಳ ಪ್ರಶಸ್ತಿ, ಕೊ ಅ ಉಡುಪ ಪ್ರಶಸ್ತಿ, ಬೈದಶ್ರೀ ಜಾನಪದ ಪ್ರಶಸ್ತಿ, ನವೋದಯ ಟ್ರಸ್ಟ್ ಪ್ರಶಸ್ತಿ, ಕರ್ನಾಟಕ ಶ್ರೀ ಪ್ರಶಸ್ತಿ, ಸನಾತನ ಸೌರಭ ಪ್ರಶಸ್ತಿ, ಸಂಸ್ಕಾರ ಸೌರಭ ಪ್ರಶಸ್ತಿ, ಭಾವನಾ ಪ್ರಶಸ್ತಿ, ಕೆಮ್ಮಲಜೆ ಪ್ರಕಾಶನ ಪ್ರಶಸ್ತಿ, ಆತ್ಮಶಕ್ತಿ ಪ್ರಶಸ್ತಿ ಹೀಗೆ ಲೆಕ್ಕ ಇಲ್ಲದಷ್ಟು ಪುರಸ್ಕಾರಗಳು ಅಮೃತರನ್ನು ಅರಸಿಕೊಂಡು ಬಂದಿವೆ.

ಕೇಂದ್ರ ವಿದ್ಯಾ ಇಲಾಖೆ (ತುಳು ಪಾಡ್ದನ ಕಥೆಗಳು), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ (ಯಕ್ಷಗಾನ ಕೃತಿ ಸಂಪುಟ), ಆರ್ಯಭಟ (ಅಪಾರ್ಥಿನೀ), ಕರ್ನಾಟಕ ಸಾಹಿತ್ಯ ಅಕಾಡೆಮಿ (ತುಳುನಾಡ ಕಲ್ಕುಡೆ), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ (ಭಗವತೀ ಆರಾಧನೆ) ಮೊದಲಾದ ಪುಸ್ತಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಅಧ್ಯಕ್ಷತೆ, ಮಾನ ಸಮ್ಮಾನ

ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ (ಮುಂಬಯಿ), ವಿಶ್ವ ತುಳು ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ, ಅ.ಕ. ಜಾನಪದ ಸಮ್ಮೇಳನದ ಅಧ್ಯಕ್ಷತೆ, ಬಹರೈನ್ ಕನ್ನಡ ಸಂಘ, ದುಬೈ ತುಳುಕೂಟ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಗೌರವವೂ ಸಂದಿದೆ.

ಸಾಹಿತ್ಯಕೃತಿಗಳಾಚೆಗೆ, ಸಮಾಜಕ್ಕೆ ಉಪಕಾರವಾಗುವ. ಸಮಾಜದ ಆಸ್ತಿ ಎನಿಸಿಕೊಳ್ಳುವ ಓರ್ವ ಆದರ್ಶ ವ್ಯಕ್ತಿ ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಮಾದರಿ ಅಮೃತ ಸೋಮೇಶ್ವರರು. ಸರಿಸುಮಾರು ಏಳು ದಶಕಗಳ ತಮ್ಮ ಸಾಹಿತ್ಯ ದುಡಿಮೆಯ ಮೂಲಕ, ಅಸಾಧಾರಣವಾದುದನ್ನು ಸಾಧಿಸಿದ್ದರೂ, ತನ್ನದು ಕೇವಲ ‘ಗೂಡಂಗಡಿ’ ಎನ್ನುವಂತಹ ನಿಗರ್ವಿ, ವಿನಯಶೀಲ ಅವರು. ಉಸಿರಿನ ಕೊನೆಯ ತನಕದವರೆಗೂ ‘ಬದ್ಧ ಕಂಕಣರಾಗಿ ಪ್ರೇಮ ಸೇತುವೆ ಬಲಿವ/ ರೂವಾರಿಗಳು ತೋಷದಿಂದ ಬನ್ನಿ/ ಮಾನವತೆಯೊಂದು ಮಂತ್ರದ ಘೋಷಗೈಯುತ್ತ/ ಸಾಮರಸ್ಯಕ್ಕೆ ಸದಾ ವಿಜಯವೆನ್ನಿ’ ಎಂದು ಸಾಮಾಜಿಕ ಸಾಮರಸ್ಯಕ್ಕೆ, ಸಹಬಾಳ್ವೆಗೆ ತುಡಿದವರು, ದುಡಿದವರು ಅವರು.

ಸಾಧಕರ ಅವಗಣನೆ

ಸಾಹಿತ್ಯದ ಒಳಗೂ ಸಾಹಿತ್ಯದಾಚೆಗೂ ಇಂತಹ ಮಹಾನ್ ಸಾಧನೆ ಮಾಡಿದ ವಿಶ್ವಮಾನವ ಅಮೃತ ಸೋಮೇಶ್ವರರು ಇಡೀ ರಾಜ್ಯಕ್ಕೇ ಪರಿಚಿತರಾಗಬೇಕಿತ್ತು, ಅಖಿಲ ಭಾರತ ಕನ್ನಡ ಸಮ್ಮೇಳನದ ಅ‍ಧ್ಯಕ್ಷರಾಗಬೇಕಿತ್ತು, ನಾಡೋಜ ಆಗಬೇಕಿತ್ತು, ಭಾರತ ಸರಕಾರದ ಪದ್ಮ ಪುರಸ್ಕಾರಗಳಿಗೆ ಭಾಜನರಾಗಬೇಕಿತ್ತು. ಆದರೆ ಪ್ರಚಾರ ಬಯಸುವ, ಪ್ರಶಸ್ತಿಯ ಹಿಂದೆ ಹೋಗುವ, ಲಾಬಿ ಮಾಡುವ ವ್ಯಕ್ತಿತ್ವ ಅಮೃತರದಲ್ಲ. ಹಾಗಾಗಿ ಆಳುವವರನ್ನು ಹೊಗಳಿ ಕೆಲವರು ಪದ್ಮಶ್ರೀ ಪದ್ಮ ಭೂಷಣ ಪ್ರಶಸ್ತಿ ಪಡೆದುಕೊಂಡರೂ ಅಮೃತರಂತಹ ನಿಜ ಸಾಧಕರಿಗೆ ಅಂತಹ ಯಾವ ಪುರಸ್ಕಾರವೂ ಲಭಿಸಲಿಲ್ಲ. ಬೆಂಗಳೂರಿನಿಂದ ದೂರ ಇರುವ ಬಹುತೇಕ ಸಾಹಿತಿಗಳ ದುಃಖದ ಕತೆಯಿದು. ಬೆಂಗಳೂರಿನಲ್ಲಿ ಶಕ್ತಿ ಕೇಂದ್ರಕ್ಕೆ ಹತ್ತಿರವಿದ್ದು, ಎಲ್ಲ ಲಾಬಿಗಳಲ್ಲೂ ನಿಷ್ಣಾತರಾಗಿ, ಎಲ್ಲವನ್ನೂ ಬಾಚಿಕೊಳ್ಳುವ ಮಂದಿಯ ನಡುವೆ, ನಾಡಿನ ಮೂಲೆಯಲ್ಲಿ ಕುಳಿತು ನಿಜ ಸಾಧನೆಯ ಹೊರತಾಗಿಯೂ, ಸೂಕ್ತ ಮಾನ್ಯತೆ ಗಳಿಸದವರ ಬಗ್ಗೆ ಮತ್ತು ಎಲ್ಲವೂ ಬೆಂಗಳೂರು (ರಾಜಧಾನಿ) ಕೇಂದ್ರಿತವಾಗುತ್ತಿರುವ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ. ಯಾಕೆಂದರೆ ಇದು ಸಾಹಿತ್ಯ, ಸಂಸ್ಕೃತಿಗೆ ಹಾಗೆಯೇ ಅರ್ಹರಿಗೆ ಮಾಡುವ ದೊಡ್ಡ ಅವಮಾನ ಮತ್ತು ಅನ್ಯಾಯ.

ಅದೇನೇ ಇರಲಿ, ಅಮೃತರಂಥವರಿಗೆ ಸಿಗಬೇಕಾದ ಮಾನ ಸಮ್ಮಾನ ಸಿಗದೇ ಹೋದುದರಿಂದ ಅವರ ಕೀರ್ತಿಯೇನೂ ಕಡಿಮೆಯಾಗುವುದಿಲ್ಲ. ಯಾಕೆಂದರೆ, ಸಾಮಾನ್ಯ ಜನರ ಜನಮಾನಸದಲ್ಲಿ ಸಿಗುವ ಉನ್ನತ ಸ್ಥಾನದ ಮುಂದೆ ಈ ಯಾವ ಪ್ರಶಸ್ತಿಯೂ ದೊಡ್ಡದಲ್ಲ. ಇದೇ ಕಾರಣಕ್ಕೆ ‘ಅಳಿವುದು ಕಾಯ, ಉಳಿವುದು ಕೀರ್ತಿ’ ಎಂಬಂತೆ ಕರಾವಳಿಯ ಸಾಹಿತ್ಯ, ಸಂಸ್ಕೃತಿ, ಜಾನಪದ, ಯಕ್ಷಗಾನ ಇತ್ಯಾದಿ ಉಲ್ಲೇಖವಾಗುತ್ತಲೇ ಅಲ್ಲಿ ಎಂದೆಂದೂ ಅಮೃತ ಸೋಮೇಶ್ವರರೂ ನೆನಪಾಗುತ್ತಾರೆ; ಅಮೃತರು ಸದಾ ಕಾಲದ ನೆನಪಾಗಿ ಉಳಿಯಲಿದ್ದಾರೆ.

(ಈ ಲೇಖನಕ್ಕೆ ಕೆ ಸದಾಶಿವ ಅವರು ಸಂಪಾದಿಸಿದ ಅಮೃತ ಲಹರಿ ಕೃತಿಯಿಂದ ಅನೇಕ ಮಾಹಿತಿಗಳನ್ನು ಬಳಸಿಕೊಳ್ಳಲಾಗಿದೆ. ಅವರಿಗೆ ಕೃತಜ್ಞತೆಗಳು)

ಶ್ರೀನಿವಾಸ ಕಾರ್ಕಳ, ಸಾಮಾಜಿಕ ಚಿಂತಕರು

ಇದನ್ನೂ ಓದಿ-ನುಡಿನಮನ |ಅಸ್ತಂಗತವಾದ ಕರಾವಳಿಯ ಇನ್ನೊಂದು ಸಾಕ್ಷಿಪ್ರಜ್ಞೆ ʼಅಮೃತ ಸೋಮೇಶ್ವರʼ

More articles

Latest article