ಸಾವರ್ಕರ್‌ ಬಲೂನ್‌ಗೆ ಶೌರಿ ಚುಚ್ಚಿದ ಸೂಜಿಗಳು (ಭಾಗ-3)

Most read

ಹಿಂದಿನ ಭಾಗದ ಕೊನೆಯಲ್ಲಿ ಶೌರಿಗೆ ಬಿಬಿಸಿ ಕೇಳಿದ ಪ್ರಶ್ನೆ ಹೀಗಿದೆ:

ಬಿಬಿಸಿ:  ಶೌರಿಯವರೆ, ನಿಮ್ಮ ಬಗ್ಗೆ ಕೂಡ ಒಂದು ವರ್ಗದ ಜನರು ನಾನಾ ಟೀಕಾಪ್ರಹಾರ ಮಾಡುತ್ತಾರಲ್ಲ? ನೀವೊಬ್ಬ ಸುಪಾರಿ ಕೊಲೆಗಡುಕ; ಬುದ್ಧಿಜೀವಿ ಕೊಲೆಗಡುಕ. ಕೆಲವರ ಪ್ರಕಾರ ನೀವೀಗ ಸರ್ಕಾರದ ಜೊತೆಗಿಲ್ಲ. ಬಿಜೆಪಿಯ ಜೊತೆಗೂ ಇಲ್ಲ. ಇಂಥ ಟೀಕೆಗಳಿಗೆ ನೀವೇನನ್ನುತ್ತೀರಿ?

**

ಶೌರಿ: ನನ್ನ ಬಗ್ಗೆ ಅದೆಷ್ಟೇ ಅವಹೇಳನದ ಮಾತು ಬಂದರೂ ನೀವು ಅದನ್ನು ನಿಜವೆಂದೇ ನಂಬಿ. ನನ್ನದೇನೂ ತಕರಾರಿಲ್ಲ. ನಾನು ಕಳ್ಳ, ನಾನು ಢಕಾಯಿತ, ಏನೇ ಆಪಾದನೆ ಇದ್ದರೂ ನಂಬಿ. ಆದರೆ ದಾಖಲೆಗಳು ಏನು ಹೇಳುತ್ತವೆ ಅದನ್ನು ನೋಡಿ. ಆತ (ಸಾವರ್ಕರ್‌) ಬ್ರಿಟಿಷರಿಗೆ ದಯಾ ಅರ್ಜಿಯನ್ನು ಬರೆದಿದ್ದು ನಿಜವೊ ಸುಳ್ಳೊ? ಆತ ಬ್ರಿಟಿಷರಿಗೆ ಸಹಾಯ ಮಾಡಿದ್ದರೋ ಇಲ್ಲವೊ? ಗಾಂಧೀಜಿಯ ಮೇಲೆ ಬಯ್ಗುಳದ ಸುರಿಮಳೆ ಸುರಿಸಿದ್ದರೊ ಇಲ್ಲವೊ? ʻಕ್ವಿಟ್‌ ಇಂಡಿಯಾʼ ಚಳವಳಿಯನ್ನು ವಿರೋಧಿಸಿದ್ದು ನಿಜವೋ ಸುಳ್ಳೊ? ಮುಸ್ಲಿಂ ಲೀಗ್‌ ಮೇಲೆ  ಹಿಂದೂ ಮಹಾಸಭಾ ಪರವಾಗಿ ಹಿಗ್ಗಾಮುಗ್ಗಾ ಬೈದಿದ್ದು ನಿಜವೊ ಸುಳ್ಳೊ? ಆಮೇಲೆ ಸಿಂಧ್‌ ಪ್ರಾಂತದಲ್ಲಿ ಮತ್ತು ಬಂಗಾಳದಲ್ಲಿ ಅದೇ ಮುಸ್ಲಿಂ ಲೀಗ್‌ ಸರಕಾರದಲ್ಲಿ ಹಿಂದೂ ಮಹಾಸಭಾ ಸದಸ್ಯರನ್ನು ಮಂತ್ರಿಗಳನ್ನಾಗಿ ಮಾಡುವಲ್ಲಿ ಇವರ ಪಾತ್ರ ಇತ್ತೊ ಇಲ್ಲವೊ? ನನ್ನ ಕೆಲಸ, ನಿಮ್ಮ ಕೆಲಸ ಎಲ್ಲ ಏನೆಂದರೆ ಸತ್ಯ ಸಂಗತಿ ಏನಿದೆ ಎಂಬುದನ್ನು  ಶೋಧಿಸಿ ತೋರಿಸುವುದು. ಈಗ ನಾನು (ಶೌರಿ) ಹಿಂದೂ ವಿರುದ್ಧ ಇದ್ದೇನೆಂದು ಹುಯಿಲು ಎಬ್ಬಿಸಿದ್ದಾರೆ. ನಾನು ಹಿಂದೂ ಅವನತಿಯನ್ನು ತಡೆಯಲು ಇದನ್ನೆಲ್ಲ ಬರೆಯುತ್ತಿದ್ದೇನೆ.

ಬಿಬಿಸಿ:  2021ರಲ್ಲಿ ರಕ್ಷಾಸಚಿವ ರಾಜನಾಥ್‌ ಸಿಂಗ್‌ ಒಂದು ಮಾತನ್ನು ಹೇಳಿದ್ದಾರೆ. ಸಾವರ್ಕರ್‌ ದುಷ್ಟ ಪ್ರಚಾರಗಳ ಬಲಿಪಶು ಆಗಿದ್ದಾರೆ. ಅವರು ಬ್ರಿಟಿಷರಿಗೆ ದಯಾ ಅರ್ಜಿಯನ್ನು ಗಾಂಧೀಜಿಯ ಸಲಹೆಯ ಪ್ರಕಾರ ಬರೆದಿದ್ದರು….

ಶೌರಿ: ರಾಜನಾಥ್‌ ಸಿಂಗ್‌ ಬಗ್ಗೆ ನನಗೆ ಗೌರವ, ಪ್ರೀತಿ ಇದೆ. ಆದರೆ ಈ ವಿಷಯದಲ್ಲಿ ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ.  ಸಾವರ್ಕರ್‌ 2010ರಲ್ಲಿ ಬ್ರಿಟಿಷರ ಬಂಧಿಯಾಗಿ ಜೈಲು ಸೇರುತ್ತಾರೆ. ಎರಡೇ ತಿಂಗಳಲ್ಲಿ ದಯಾ ಅರ್ಜಿಯನ್ನು ಸಲ್ಲಿಸುತ್ತಾರೆ. ಆನಂತರವೂ ಸರಣಿಯಲ್ಲಿ ಏಳು ದಯಾ ಅರ್ಜಿಗಳನ್ನು ಸಲ್ಲಿಸುತ್ತಾರೆ. ಆ ಅವಧಿಯಲ್ಲಿ ಅಂದರೆ 1910-11ರಲ್ಲಿ ಗಾಂಧೀಜಿ ಎಲ್ಲಿದ್ದರು?   ದಕ್ಷಿಣ ಆಫ್ರಿಕದಲ್ಲಿದ್ದರು. ಅಲ್ಲಿ ಅವರು ಚಳವಳಿ ನಡೆಸಿದ್ದರು. ಮುಂದೆ 1915ರಲ್ಲಿ  ಭಾರತಕ್ಕೆ ಬಂದರು. ಆವೇಳೆಗೆ ಸಾವರ್ಕರ್‌ ಜೈಲಿನಲ್ಲಿ 4 ವರ್ಷ ಕಳೆದಿದ್ದರು; ಐದು ಬಾರಿ ಬ್ರಿಟಿಷರಿಗೆ ದಯಾ ಅರ್ಜಿ ಸಲ್ಲಿಸಿದ್ದರು. ಗಾಂಧೀಜಿ ಇಲ್ಲಿಗೆ ಬಂದು ಬ್ರಿಟಿಷರ ವಿರುದ್ಧ ಚಳವಳಿ ಆರಂಭಿಸಿದರು. ರಾಜ್‌ಮೋಹನ್‌ ಗಾಂಧಿ ಇದನ್ನು ತುಂಬ ಚೆನ್ನಾಗಿ ವಿವರಿಸಿದ್ದಾರೆ: ಗಾಂಧೀಜಿ ಇಲ್ಲಿ ಚಂಪಾರಣ್‌ ಸತ್ಯಾಗ್ರಹ ನಡೆಸುತ್ತಾರೆ, ಖೇಡಾ ಆಂದೋಲನ, ಬಾರ್ದೋಲಿ ಆಂದೋಲನ… ಆಮೇಲೆ ಜಲಿಯನ್‌ವಾಲಾ ಹತ್ಯಾಕಾಂಡ ಆಗುತ್ತದೆ. ಅದಾದನಂತರ ರೌಲೆಟ್‌ ಆಕ್ಟ್‌ ಬರುತ್ತದೆ. ಗಾಂಧೀಜಿ  ಬ್ರಿಟಿಷರ ವಿರುದ್ಧ ಜೈಲ್‌ಭರೋ ಕರೆಕೊಡುತ್ತ ಪಂಜಾಬಿನಲ್ಲಿ ಹಳ್ಳಿಹಳ್ಳಿ ಸುತ್ತುತ್ತಾರೆ. ಬ್ರಿಟಿಷರ ಕ್ರೌರ್ಯದ ವಿರುದ್ಧ ಅಷ್ಟೊಂದು ಸಮರ ಸಾರಿರುವಾಗ, ಅವರು  (ಗಾಂಧೀಜಿ) ಸಾವರ್ಕರ್‌ ಗೆ ‘ದಯಾ  ಅರ್ಜಿ ಹಾಕಿ’ ಎಂದು ಹೇಳಲು ಸಾಧ್ಯ ಇದೆಯೆ? ಸಾಧ್ಯವೇ ಇಲ್ಲ! ಗಾಂಧೀಜಿ ಹೇಳಿದ್ದರಿಂದಲೇ ಅರ್ಜಿ ಹಾಕಿದೆ ಎನ್ನುತ್ತಾರಲ್ಲ, ಹಾಗಿದ್ದರೆ ಗಾಂಧೀಜಿಯವರ ಬೇರೆ ಯಾವ ಯಾವ ಮಾತುಗಳನ್ನು ಸಾವರ್ಕರ್ ಪಾಲಿಸಿದ್ದಾರೆ? ಮುಂದೇನಾಯ್ತು ಅಂದರೆ, ಸರಕಾರ ಎಲ್ಲ ರಾಜಕೀಯ ಕೈದಿಗಳ ಬಿಡುಗಡೆಯನ್ನು ಘೋಷಿಸಿತು. ಆ ವೇಳೆಯಲ್ಲಿ ಸಾವರ್ಕರ್‌ ಬಿಡುಗಡೆ ಆಗಲಿಲ್ಲವಲ್ಲ ಎಂದು ಆತನ ಸಹೋದರ (ಆತ ಜೈಲಲ್ಲಿರಲಿಲ್ಲ) ಬ್ರಿಟಿಷರಿಗೆ ಸಾಲು ಸಾಲು ಅರ್ಜಿ ಬರೆಯುತ್ತಿದ್ದ; ಸಾವರ್ಕರ್‌ ಪತ್ನಿಯ ಹೆಸರಿನಲ್ಲಿ ಮತ್ತು ಸ್ವಂತ ಹೆಸರಿನಲ್ಲಿ ಅರ್ಜಿ ಬರೆಯುತ್ತಲೇ ಇದ್ದ…. ಗಾಂಧೀಜಿಗೂ ಬರೆದಿದ್ದ. ಈ ವಿಷಯ ಕುರಿತು ಗಾಂಧೀಜಿ ಬರೆದಿದ್ದು  ಹೀಗಿದೆ: ʻಸಾವರ್ಕರ್‌ ರಾಜಕೀಯ ಕೈದಿ ಹೌದು, ಅವರು ಯಾರದ್ದೂ ಕೊಲೆ ಮಾಡಿಲ್ಲ. ಸರಕಾರೀ ಕ್ಷಮಾನೀತಿಯ ಅನುಗುಣವಾಗಿ ಅವರ ಬಿಡುಗಡೆ ಆಗಬೇಕು. ಮೇಲಾಗಿ  ಭಾರತದಲ್ಲಿ ಬ್ರಿಟಿಷರ ಶಾಸನ ಮುಂದುವರೆಯಲು (ಸಹಾಯ ಮಾಡುತ್ತೇವೆಂದು) ಇಬ್ಬರೂ ಸಹೋದರರು ಪ್ರಮಾಣ ಮಾಡಿದ್ದಾರೆ. ಆದ್ದರಿಂದ ಅವರ ಬಿಡುಗಡೆ ಆಗಬೇಕಾಗಿದ್ದು ನ್ಯಾಯಸಮ್ಮತ ಆಗಿದೆʼ ಎಂದು ಗಾಂಧೀಜಿ ಬರೆದಿದ್ದಾರೆ. ಆದರೆ ಸಾವರ್ಕರ್‌ ಹೇಳಿಕೊಂಡಿದ್ದು ನೋಡಿ: ತಾನು ಹಿಂದೆ ಐದಾರು ಬಾರಿ ದಯಾ ಅರ್ಜಿ ಹಾಕಿದ್ದೆ ಎಂಬುದನ್ನು ಮರೆಮಾಚಿ, ಈಗ ʻಗಾಂಧೀಜಿಯ ಸಲಹೆಯ ಪ್ರಕಾರ ಅರ್ಜಿ ಹಾಕಿದೆʼ ಎನ್ನುತ್ತಾರಲ್ಲ?

ಬಿಬಿಸಿ: ಸಾವರ್ಕರ್‌ ಆರೆಸ್ಸೆಸ್‌ನ ಭಾಗವೂ ಆಗಿರಲಿಲ್ಲ. ಜನಸಂಘಕ್ಕೂ ಸೇರಿರಲಿಲ್ಲ. ಭಾಜಪ ಅಂತೂ ಆಗ ಅಸ್ತಿತ್ವದಲ್ಲೇ ಇರಲಿಲ್ಲ. ಆದರೆ ಈಗ ಸರ್ಕಾರ ಸಾವರ್ಕರ್‌ಗೆ ಅಷ್ಟೊಂದು ಮಾನ ಸಂಮಾನ ಕೊಡುತ್ತಿದೆ ಎಂದರೆ ಅದು ಅವರ ತ್ಯಾಗ ಮತ್ತು ಬಲಿದಾನದ ಮಹತ್ವವನ್ನು ಸಾರುತ್ತಿದೆ ಅಲ್ಲವೆ?

ಶೌರಿ: ಒಂದು ಮಹತ್ವದ ವಿಚಾರ ಹೇಳಿದಿರಿ ನೀವು. ಅದು ಹೌದು, ಆರೆಸ್ಸೆಸ್‌ ಇವರನ್ನು (ಸಾವರ್ಕರರನ್ನು) ಹತ್ತಿರ ಬರಲು ಬಿಡಲಿಲ್ಲ. ದೂರದಿಂದಲೇ ನಮಸ್ಕಾರ ಹಾಕುತ್ತಿತ್ತು. ಏಕೆಂದರೆ ಅವರಿಗೆ ಈತನ ಚಾರಿತ್ರ್ಯ ಗೊತ್ತಿತ್ತು. ಗೊಲ್ವಾಲ್ಕರ್‌ ಶಿಸ್ತಿನ ಮನುಷ್ಯ ಆಗಿದ್ದರು. ಈತನನ್ನು ದೂರವಿಟ್ಟಿದ್ದರು. ಆದರೆ  ಸಾವರ್ಕರ್‌ಗೆ ಈಗ ಮರ್ಯಾದೆ ಸಿಗಲು ಎರಡು ಕಾರಣ ಇವೆ: (1) ಇವರ ಬಳಿ (ಭಾಜಪ ಬಳಿ) ಗಣನೀಯ ಹೀರೋಗಳೇ ಇಲ್ಲ. ಒಮ್ಮೆ ನೇತಾಜಿಯನ್ನು ಎತ್ತಿ ಹಿಡಿಯುತ್ತಾರೆ. ಆದರೆ ನೇತಾಜಿ ಕೋಮುದ್ವೇಷ ಹರಡುವವರ ಹಾಗೂ ಈ ಹಿಂದೂವಿಂದೂಗಳ ವಿರುದ್ಧ ಸಖತ್‌ ಹರಿತವಾಗಿ ಮಾತಾಡುತ್ತಿದ್ದರು. ಅವರು ನಿಜಕ್ಕೂ ಸೆಕ್ಯೂಲರ್‌ ಇದ್ದರು. (2) ಗಾಂಧೀಜಿಗೆ ಬಯ್ಗುಳ ಸುರಿಸುವವರೊಬ್ಬರು ಭಾಜಪಾಕ್ಕೆ ಬೇಕಾಗಿತ್ತು. ಇವರಿಗೆ (ಭಾಜಪಾದವರಿಗೆ) ಗಾಂಧೀಜಿ ಮುಖ್ಯ ಸಮಸ್ಯೆಯಾಗಿದ್ದರು.

ಬಿಬಿಸಿ: ಏಕೆ?

ಶೌರಿ: ಏಕೆಂದರೆ ಗಾಂಧೀಜಿ ಸತ್ಯದ ಪರವಾಗಿ ಇದ್ದರು. ಹಿಂಸೆಯನ್ನು ಇಷ್ಟ ಪಡುತ್ತಿರಲಿಲ್ಲ. ಮೇಲಾಗಿ ಸರ್ವಧರ್ಮ ಸಮಭಾವವನ್ನು ಒತ್ತಿ ಹೇಳುತ್ತಿದ್ದರು. ಭೋಗಸಂಸ್ಕೃತಿಯ ವಿರುದ್ಧವಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ, ಈಗಿನ ಅತೀ ಧಾರ್ಮಿಕತೆ… ಚಾರ್‌ಧಾಮ್‌ ಯಾತ್ರೆ, ಅಲ್ಲಿ ಹೋಗಿ ಫೋಟೊ ತೆಗೆಸಿಕೋ, ಗಿನ್ನೆಸ್‌ ಬುಕ್‌ ದಾಖಲೆಗೆಂದು ಮಹಾಕುಂಭ ಆಯೋಜಿಸೋಣ.. ಗಾಂಧೀಜಿಗೆ ಇಂಥ ಬಹಿರಂಗ ಪ್ರಚಾರಕ್ಕೆ ಮಾನ್ಯತೆ ಕೊಡುತ್ತಿದ್ದರಾ ಎಂದಾದರೂ…?

ಬಿಬಿಸಿ: ಅಟಲ್‌ ಬಿಹಾರಿ ವಾಜಪೇಯಿಯರ ಜೊತೆ ನಿಮ್ಮ ಸಂಬಂಧ ಚೆನ್ನಾಗಿತ್ತು. ನೀವು ಅವರ ಸಂಪುಟದಲ್ಲಿ ಕೆಲಸವನ್ನೂ ಮಾಡಿದಿರಿ. ಅವರು ಸಾವರ್ಕರ್‌ ಬಗ್ಗೆ ತಮ್ಮದೊಂದು ಭಾಷಣದಲ್ಲಿ ಸುಂದರ ಕವಿತೆ ಬರೆದು ಓದಿದ್ದರು. ಅದಕ್ಕೇನಂತೀರಿ?

ಶೌರಿ: ಸಾವರ್ಕರ್‌ ಕುರಿತು ವಾಜಪೇಯಿಜೀ ಮತ್ತು ನನ್ನ ಮಧ್ಯೆ ಎಂದೂ ಸಂವಾದ ಆಗಿರಲಿಲ್ಲ. ಆದರೆ ಆ ಕವಿತೆಯನ್ನು ಅವರೊಬ್ಬ  ಕವಿಯಾಗಿ ವರ್ಣಿಸಿದ್ದು ತುಂಬ ಸ್ವಾರಸ್ಯಕರವಾಗಿದೆ. ಸಾವರ್ಕರ್‌ ಹೀಗಿದ್ದರು, ಹಾಗಿದ್ದರು, ತಮ್ಮದೆಲ್ಲವನ್ನೂ ತ್ಯಾಗ ಮಾಡಿದ್ದರು… ಅವರ ರಾಷ್ಟ್ರಪ್ರೇಮ ಅದೆಷ್ಟು ಪ್ರಖರವಾಗಿತ್ತೆಂದರೆ ಸಮುದ್ರದ ಭೀಕರ ಅಲೆಗಳನ್ನೂ ಛಿದ್ರಗೊಳಿಸಿ ಮೇಲೆದ್ದು ಬಂದು… ಇವೆಲ್ಲ ಕವಿಸಮಯದ ವರ್ಣನೆಗಳು. ವಾಸ್ತವ ಏನು ಗೊತ್ತೆ? …..

(ಭಾಗ -3 ಮುಗಿಯಿತು)

(ಮುಂದಿನ ಭಾಗದಲ್ಲಿ ಸಾವರ್ಕರ್‌ ಸಮುದ್ರಕ್ಕೆ ಜಿಗಿದ ರೋಚಕ ಮಾಹಿತಿ ಇದೆ)

ನಾಗೇಶ ಹೆಗಡೆ

ಕನ್ನಡದ ಪ್ರಮುಖ ವಿಜ್ಞಾನ ಹಾಗೂ ಪರಿಸರ ಬರಹಗಾರ

ಭಾಗ ಎರಡು ಓದಿದ್ದೀರಾ? ಸಾವರ್ಕರ್‌ ಬಲೂನ್‌ಗೆ ಶೌರಿ ಚುಚ್ಚಿದ ಸೂಜಿಗಳು (ಭಾಗ-2)

More articles

Latest article