ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ಕ್ರಮ ವಹಿಸಲು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಯಮಕನಮರಡಿ ವಿಧಾನಸಭಾ ಕ್ಷೇತ್ರದ್ರ ಪ್ರತಿ ಹಳ್ಳಿಯಲ್ಲೂ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿದೆ. ಸದ್ಯ ಬೆಳಗಾವಿ ನಗರದಲ್ಲೂ ಅನುಕೂಲವಾಗಲೆಂದು ಫೌಂಡೇಶನ್ ವತಿಯಿಂದ ಮಹಾನಗರ ಪಾಲಿಕೆಗೆ ಎರಡು ಟ್ಯಾಂಕರ್ ಹಾಗೂ ಕಸ ವಿಲೇವಾರಿಗಾಗಿ ಒಂದು ಟ್ರ್ಯಾಕ್ಟರ್ ನೀಡಲಾಗಿದೆ ಎಂದು ಯುವನಾಯಕ ರಾಹುಲ ಜಾರಕಿಹೊಳಿ ಹೇಳಿದರು.
ಅವರು, ಭಾನುವಾರ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಬೆಳಗಾವಿ ಮಹಾನಗರ ಪಾಲಿಕೆಗೆ ನೀರು ಪೂರೈಸಲು ಅನುಕೂಲವಾಗಲೆಂದು ನೀಡಿದ ಎರಡು ಟ್ಯಾಂಕರ್ ಗಳನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ಬೇಸಿಗೆಯಲ್ಲಿ ನಡೆಯುವ ಜಾತ್ರೆ, ಸಮಾರಂಭಗಳಲ್ಲಿ ನೀರಿನ ಅಭಾವ ಉಂಟಾಗುತ್ತದೆ. ಈ ಸಮಸ್ಯೆಯನ್ನು ಅರಿತು ಪ್ರತಿ ಬಾರಿ ತಂದೆಯವರಾದ ಸತೀಶ ಜಾರಕಿಹೊಳಿ ಅವರು ಜನರ ನೀರಿನ ಬವನೆ ನೀಗಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತಾರೆ. ಜನರು ಸ್ವಚ್ಛತೆಯನ್ನು ಕಾಪಾಡುವ ಜೊತೆಗೆ ನೀರಿನ ಸದ್ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಉತ್ತರದ ಶಾಸಕ ರಾಜು ಶೇಟ್, ಬೆಳಗಾವಿ ಮಹಾನಗರ ಪಾಲಿಕೆ ಪ್ರಭಾರಿ ಆಯುಕ್ತೆ ರಾಜಶ್ರೀ ಜೈನಾಪುರೆ, ಪಾಲಿಕೆಯ ಸದಸ್ಯರು, ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರು, ನೂರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.