ದರ್ಶನ್ ಈಗ ನಂಬರ್ ಒನ್ ಸ್ಟಾರ್ ಪಟ್ಟದಲ್ಲಿದ್ದಾರೆ. ಅವರ ಒಂದೊಂದು ಸಿನಿಮಾವೂ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತದೆ. ಹೆಸರಿಗೆ ತಕ್ಕ ಹಾಗೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಸರದಾರ. ದರ್ಶನ್ ಗೆ ಆರಂಭದಲ್ಲಿ ಸಾರಥಿ ಹಾಗೂ ನವಗ್ರಹ ಸಿನಿಮಾಗಳನ್ನು ತಮ್ಮ ದಿನಕರ್ ತೂಗುದೀಪ ಅವರೇ ಆಕ್ಷನ್ ಕಟ್ ಹೇಳಿದ್ದರು. ಸಿನಿಮಾ ಕೂಡ ಸಕ್ಸಸ್ ಆಗಿತ್ತು. ಸಾರಥಿಯ ದಿನಗಳು ಅಷ್ಟು ಸುಖಕರವಾಗಿರಲಿಲ್ಲ. ಆ ಬಗ್ಗೆ ಇದೀಗ ದಿನಕರ್ ತೂಗುದೀಪ ಮಾತನಾಡಿದ್ದಾರೆ.
ಸಾರಥಿ ಸಿನಿಮಾ ರಿಲೀಸ್ ಸಮಯದಲ್ಲಿ ದರ್ಶನ್ ಅವರು ಜೈಲಿನಲ್ಲಿದ್ದರು. ಕೆ.ವಿ. ಸತ್ಯಪ್ರಕಾಶ್ ಇದಕ್ಕೆ ಸಾಲ ಮಾಡಿ ಬಂಡವಾಳ ಹಾಕಿದ್ದರು. ಸಿನಿಮಾವನ್ನು ಈ ಸಮಯದಲ್ಲಿ ರಿಲೀಸ್ ಮಾಡುವುದು ಬೇಡ ಅಂತಾನೇ ದಿನಕರ್ ಹೇಳಿದ್ದರಂತೆ. ಆದರೂ ಸತ್ಯಪ್ರಕಾಶ್ ಕೇಳದೆ, ಅದೇ ದಿನ ಸಿನಿಮಾ ರಿಲೀಸ್ ಮಾಡಿದ್ದರು. ಸಾರಥಿ ರಿಲೀಸ್ ಆದ ಎರಡು ವಾರಕ್ಕೆ ದರ್ಶನ್ ರಿಲೀಸ್ ಆದರು. ಆದರೆ ಸಿನಿಮಾ ಅಷ್ಟರಲ್ಲಿ ಒಳ್ಳೆ ಒಪೆನಿಂಗ್ ಪಡೆದುಕೊಂಡಿತ್ತು. ಆ ದಿನದ ಆತಂಕವನ್ನು ದಿನಕರ್ ತೂಗುದೀಪ ಅವರು ಹಂಚಿಕೊಂಡಿದ್ದಾರೆ.
‘ಸಾರಥಿ ಸಿನಿಮಾ ರಿಲೀಸ್ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾದವು. ನಿರ್ಮಾಪಕರು ಫೈನ್ಯಾನ್ಸ್ ಕ್ಲಿಯರ್ ಮಾಡದೆ ರಿಲೀಸ್ ಗೆ ಅವಕಾಶವನ್ನೇ ಕೊಡಲಿಲ್ಲ. ಸಿನಿಮಾ ರಿಲೀಸ್ ಹೊತ್ತಲ್ಲೇ ದರ್ಶನ್ ಹಾಗೂ ಅತ್ತಿಗೆಯ ಇಶ್ಯೂ ಆಯ್ತು. ಸೆಪ್ಟೆಂಬರ್ 30ಕ್ಕೆ ಸಿನಿಮಾ ರಿಲೀಸ್ ಮಾಡಲೇಬೇಕೆಂದು ನಿರ್ಮಾಕರು ಫಿಕ್ಸ್ ಆದರು. ದರ್ಶನ್ ಹೊರಗೆ ಬಂದ ಮೇಲೆ ಸಿನಿಮಾ ರಿಲೀಸ್ ಮಾಡೋಣಾ ಎಂದೇ. ಅದರಲ್ಲಿ ಮದರ್ ಸೆಂಟಿಮೆಂಟ್ ಇದ್ದಿದ್ದರಿಂದ ಹೆಣ್ಣುಮಕ್ಕಳು ಏನು ಅನ್ನುತ್ತಾರೆ ಎಂಬ ಭಯವಿತ್ತು. ಆದರೆ ಅದೇ ದಿನ ಬಿಡುಗಡೆ ಆಯ್ತು. ಸಿನಿಮಾ ಸೂಪರ್ ಡೂಪರ್ ಹಿಟ್ ಆಯ್ತು. ನಾನು ಸಿನಿಮಾ ಹಿಂದಿನ ದಿನ ಜೈಲಿಗೆ ಹೋಗಿ ಮಾತನಾಡಿಸಿಕೊಂಡು ಬಂದೆ. ಜೈಲಿನಲ್ಲಿರುವ ಸಮಯದಲ್ಲಿ ಸಿನಿಮಾ ಯಾಕೆ ರಿಲೀಸ್ ಮಾಡ್ತೀರ ಎಂದ. ಈ ಸಿನಿಮಾ ಗೆಲ್ಲದಿದ್ದರೆ ನಾನು ಇನ್ಮುಂದೆ ನಿರ್ದೇಶನ ಮಾಡಲ್ಲ ಎಂದಿದ್ದೆ. ಆದರೆ ಅಂದು ಧೈರ್ಯ ತುಂಬಿದ್ದ. ಸಿನಿಮಾ ಗೆದ್ದಿತ್ತು’ ಎಂದು ಅಂದಿನ ದಿನಗಳನ್ನು ನೆನೆದಿದ್ದಾರೆ.