ಕವಿ, ಸಾಹಿತಿ ,ಹೋರಾಟಗಾರ, ಪತ್ರಕರ್ತ, ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣ ಸಮಿತಿಯ ಸದಸ್ಯ, ಪೌರಕಾರ್ಮಿಕರ ಮತ್ತು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗಾಗಿ ಪ್ರಾಮಾಣಿಕ ಸೇವೆಯನ್ನು ಮಾಡುತ್ತಿರುವ ಶಂಕರ ಸಿ. ಅಂಕನಶೆಟ್ಟಿಪುರ ಅವರ ಬಗ್ಗೆ ಬರೆದಿದ್ದಾರೆ ರಾಯಚೂರಿನ ಶಿವರಾಜ್ ಮೋತಿ
ದ್ವಿತೀಯ ಬಿಎ ತನಕ ಓದಿ ಬಡತನದ ಕಾರಣದಿಂದ ಪದವಿ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿ ಟೈಪಿಂಗ್ ವೃತ್ತಿ ಪ್ರಾರಂಭಿಸಿ ಅದರಲ್ಲಿಯೇ ಯಶಸ್ಸು ಕಂಡು ಬದುಕು ಕಟ್ಟಿಕೊಳ್ಳುತ್ತಿರುವವರು ಶಂಕರ ಸಿ. ಅಂಕನಶೆಟ್ಟಿಪುರ. ಯಾವುದೇ ಕೆಲಸವಾದರೂ ಸರಿ ನಿಷ್ಠೆಯಿಂದ ಮಾಡಿ ಬದುಕನ್ನು ಅದ್ಭುತವಾಗಿ ಕಟ್ಟಿಕೊಳ್ಳಬಹುದು ಎಂಬುದನ್ನು ಇವರನ್ನು ನೋಡಿಯೇ ಕಲಿಯಬೇಕಿದೆ. ಯುವ ಪ್ರತಿಭೆಗಳು ಏನಾದರೂ ಸಾಧಿಸಬೇಕು, ಕೀರ್ತಿಯನ್ನು ಬೆಳಗಬೇಕೆಂದು, ಉತ್ತಮ ಕೆಲಸಗಳನ್ನು ಮಾಡಲು ಹೊರಟಿರುವ ಇವರು ಚಾಮರಾಜನಗರದಲ್ಲಿ “ಶಂಕರ್ ಮಾಡ್ರನ್ ಕಂಪ್ಯೂಟರ್ ಡಿಟಿಪಿ ಸೆಂಟರ್” ಸ್ಥಾಪಿಸಿ, 40 ಕ್ಕಿಂತ ಹೆಚ್ಚು ಯುವಜನತೆಗೆ ಡಿಟಿಪಿ ಕಲಿಸಿ, ಸ್ವಯಂ ಉದ್ಯೋಗ ಪ್ರಾರಂಭಿಸಲು ಪ್ರೇರಣೆಯಾಗಿದ್ದಾರೆ. ಚಾಮರಾಜನಗರದಲ್ಲಿ ಯಾರಾದರೂ ಡಿಟಿಪಿ ಸೆಂಟರ್ ಕೇಳಿದಾಗ ಥಟ್ಟನೆ ಶಂಕರಣ್ಣನ ಅಂಗಡಿ ಇದೆ ಅಂತ ಸೂಚಿಸುವಷ್ಟು ಜನಮಾನಸದಲ್ಲಿ ಗುರುತಿಸಿಕೊಂಡಿದ್ದಾರೆ.
ಇವರದು ನೋಡಲು ತೆಳ್ಳನೆಯ ಮೈಕಟ್ಟು, ಅಪ್ಪಟ ಗ್ರಾಮೀಣ ಭಾಷೆ. ಕಲಿತ ಅಕ್ಷರ, ವೃತ್ತಿನಿಷ್ಠೆ ಮನುಷ್ಯನ ಕೈ ಬಿಡಲಾರದು ಎಂಬುದಕ್ಕೆ ಇವರನ್ನು ಉದಾಹರಿಸಬಹುದೇನೋ! ಸಾಹಿತಿಗಳು, ಚಾಮರಾಜನಗರದ ಕವಿಗಳು ಅಂತಾನೇ ಖ್ಯಾತಿ ಪಡೆದಿರುವ ಶಂಕ್ರಣ್ಣ, ಪೌರಕಾರ್ಮಿಕರಿಗೆ ಅರ್ಪಿಸಿದ ತಮ್ಮ ನಾಲ್ಕನೇ ಕೃತಿ ʼಪೊರಕೆʼ ಕವನಸಂಕಲವು ಕರ್ನಾಟಕದಲ್ಲಿ ಪೌರಕಾರ್ಮಿಕರಿಗೆ ಸಲ್ಲಿಸಿದ ಮೊದಲ ಕೃತಿ ಇರಬಹುದು ಅಂತ ನನ್ನ ಅನಿಸಿಕೆ. ಪೊರಕೆ ಕವನ ಸಂಕಲನವು ಜಾಗೃತಿಯ ಜೊತೆಗೆ ಎಚ್ಚರಿಕೆಯ ಗಂಟೆಯೂ ಹೌದು ಎಂದು ಈಗಾಗಲೇ ಹಲವಾರು ಓದುಗರು ಬಣ್ಣಿಸಿ, ಅಭಿನಂದಿಸಿದ್ದಾರೆ. ʼಪೊರಕೆʼ ಪುಸ್ತಕ ಬರೆದಿದ್ದಕ್ಕೂ ಇವರು ಮಾಡುತ್ತಿರುವ ಕೆಲಸಕ್ಕೂ ಹೋಲಿಸಿ ನೋಡಿದರೆ ಇವರು ಬರೆದಂತೆ ಬದುಕಿದ್ದಾರೆ ಎಂದು ಧಾರಾಳ ಹೇಳಬಹುದು. ಪ್ರಸ್ತುತ ಪೌರಕಾರ್ಮಿಕರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿರುವವರ ಬದುಕು ಬವಣೆಗಳಿಗಾಗಿ ಈ ಕವನ ಸಂಕಲನವನ್ನು ಅವರಿಗೆ ಅರ್ಪಿಸಿದ್ದಾರೆ.
ಕಾವ್ಯ ಮಾತ್ರವಲ್ಲದೇ ಇವರ ಆರನೇ ಕೃತಿ “ಆದಿದ್ರಾವಿಡರ ಹೆಜ್ಜೆ ಗುರುತುಗಳು ಹಾಗೂ ಅವರ ಸಮಸ್ಯೆಗಳು”. ಆದಿ ದ್ರಾವಿಡರ ಸಮುದಾಯದ ಬಗೆಗಿನ ಅವರ ಸಂವೇದನೆಗಳನ್ನು ಇದರಲ್ಲಿ ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಚಾಮರಾಜನಗರದಿಂದ ಬಂದು ಉತ್ತರ ಕರ್ನಾಟಕದ ಗದಗಿನಲ್ಲಿ ತಮ್ಮ ಏಳನೇ ಕೃತಿ “ಕನ್ನಡಿ” ಕವನ ಸಂಕಲನವನ್ನು, ಅಣ್ಣಿಗೇರಿ ಕುಟುಂಬ ಎಂತಲೇ ಪ್ರಸಿದ್ಧಿಯಾದ ದಿ. ರಾಮಪ್ಪ ಮೂರ್ತಪ್ಪ ಅಣ್ಣಿಗೇರಿ ಅವರಿಗೆ ಅರ್ಪಿಸಿ, ಗದಗಿನ ತೋಂಟದಾರ್ಯ ಮಠದಲ್ಲಿ ಪೂಜ್ಯ ಶ್ರೀ ಜಗದ್ಗುರು ಡಾ.ತೋಂಟದ ಸಿದ್ದರಾಜು ಸ್ವಾಮಿಗಳ ಸಾನಿಧ್ಯದಲ್ಲಿ ಬಿಡುಗಡೆಗೊಳಿಸಿದರು. ಅಂದೇ ನಾನು ಇವರನ್ನು ಮೊದಲು ಭೇಟಿಯಾಗಿದ್ದು. ಆ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲೂ ನಾನೂ ಭಾಗವಹಿಸಿದ್ದೆ ಎಂಬ ಹೆಮ್ಮೆ ನನ್ನದು.
ತುಂಬಾ ಕಷ್ಟದಲ್ಲಿ ಬೆಳೆದ ಸಿ. ಶಂಕರ ಅವರು 2020 ರಲ್ಲಿ, ಮ್ಯಾನ್ಯುಯಲ್ ಸ್ಕ್ಯಾವೆಂಜರ್ ವೃತ್ತಿ/ಕೆಲಸ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013 ರ ಅಡಿಯಲ್ಲಿ ರಚಿಸಿರುವ ಚಾಮರಾಜನಗರ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾಗಿ ಈಗಾಗಲೇ ಸಾಕಷ್ಟು ಕೆಲಸಗಳನ್ನು ಮಾಡಿರುತ್ತಾರೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ವಿಚಕ್ಷಣಾ ಸಮಿತಿ ಸದಸ್ಯರಾದ ಮೇಲೆ ಅವರು ಚಾಮರಾಜನಗರ ಜಿಲ್ಲೆಯಲ್ಲಿ ಮಾಡಿದ ಹಲವು ಹೋರಾಟಗಳ ಪ್ರಯತ್ನದಿಂದ ಆದ ಕೆಲಸಗಳಲ್ಲಿ ಕೆಲವೊಂದನ್ನು ಮೆಲುಕು ಹಾಕೋಣ.
1. ಪೌರಕಾರ್ಮಿಕರಿಗಾಗಿ ಪ್ರತ್ಯೇಕ 14 ಗುಂಟೆ ಭೂಮಿಯನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಿಸಿದ್ದಾರೆ.
2. ಸ್ವಚ್ಛತಾಗಾರರ 92 ಮನೆಗಳಿಗೆ ಎರಡೇ ಕಂಬದಿಂದ ಕರೆಂಟ್ ಹೋಗುತ್ತಿರುತ್ತದೆ. ನಗರಸಭೆಯವರೊಂದಿಗೆ ಸೇರಿ ಅಲ್ಲಿ ಅವಶ್ಯಕತೆ ಇದ್ದ ಹೆಚ್ಚಿನ ಕಂಬಗಳನ್ನು ಹಾಕಿಸಲು ಕಾರಣರಾಗಿದ್ದಾರೆ.
3. ಹನೂರು ತಾಲೂಕು ಕೇಂದ್ರದಲ್ಲಿ ಇತರೆ ಸಮುದಾಯಗಳ ಬೇರೆ ಬೇರೆ ಕೇರಿಗಳಿಗೆ ತೊಂಬೆ ಅಂದರೆ Water Tank (ಕಿರು ನೀರು ಸರಬರಾಜು) ಇರುತ್ತದೆ. 10-12 ಕುಟುಂಬದ ಪೌರಕಾರ್ಮಿಕರ ಕೇರಿಗೆ ತೊಂಬೆ ಹಾಕಿಸಿದ್ದು ಒಂದು ಮೈಲಿಗಲ್ಲು.
4. ಸಫಾಯಿ ಕರ್ಮಚಾರಿ ಆಯೋಗದಿಂದ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡುತ್ತಾರೆ. ಇಡೀ ಜಿಲ್ಲೆಗೆ 10 ಟ್ಯಾಬ್ ಬಂದಿರುತ್ತದೆ. ಆದರೆ 29 ವಿದ್ಯಾರ್ಥಿಗಳು ಅರ್ಜಿ ಹಾಕಿರುತ್ತಾರೆ. ಆಗ ಆಯೋಗದ ಅಭಿವೃದ್ಧಿ ನಿಗಮಕ್ಕೆ ಹೋಗಿ ಅವರಿಗೆ ಮನವರಿಕೆ ಮಾಡಿ ಎಲ್ಲ 29 ವಿದ್ಯಾರ್ಥಿಗಳಿಗೂ ಟ್ಯಾಬ್ ಸಿಗುವಂತೆ ಮಾಡಿದ್ದಾರೆ.
5. ರಾಮಸಮುದ್ರದಲ್ಲಿ ಗೃಹಭಾಗ್ಯ ಯೋಜನೆಯಡಿಯಲ್ಲಿ ನಿರ್ಮಿಸಿದ ಮನೆಗಳಿಗೆ ನೀರು, ವಿದ್ಯುತ್ ಸಂಪರ್ಕ ಇರಲಿಲ್ಲ, ಅದನ್ನು ಮಾಡಿಸುವಲ್ಲಿ ಶ್ರಮಿಸಿದ್ದಾರೆ.
6. ನಗರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಿಗೆ ESI ಮತ್ತು PFI ಕೊಡದೇ ವಂಚಿಸುತ್ತಿದ್ದನ್ನು ಕಂಡು ಬೆಂಬಿಡದೇ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿದ್ದಾರೆ.
7. ಮಹೇಶ್ವರ ಬೆಟ್ಟದಲ್ಲಿ ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿಗಳನ್ನು ಮಾಡಿಸಿದ್ದಾರೆ.
8. ಇದುವರೆಗೂ 125 ಕಾರ್ಮಿಕರಿಗೆ ವಾಸ ಮಾಡಲು ಮನೆಗಳಿಲ್ಲ. ಎರಡು ಎಕರೆ ಜಮೀನನ್ನು ಇದಕ್ಕಾಗಿ ಈಗ ಮೀಸಲಿಟ್ಟಿದ್ದಾರೆ. ಈಗ ಅಲ್ಲಿನವರು ಅದು ತೀರ ಹಳ್ಳದ ಪ್ರದೇಶವಾದ್ದರಿಂದ ಬೇರೆ ಕೊಡಿ ಎಂದಾಗ, ಪರ್ಯಾಯ ವ್ಯವಸ್ಥೆಯ ತಯಾರಿ ನಡೆಸಲಾಗುತ್ತಿದೆ.
9. ತೆರಕನಾಂಬಿ ಹಳ್ಳಿಯಲ್ಲಿ ತಲೆಮಾರುಗಳಿಂದ ಪೌರಕಾರ್ಮಿಕರು ವಾಸಿಸುತ್ತಾರೆ. ಅವರಿಗೆ ಹಕ್ಕು ಪತ್ರಗಳು ಇರಲಿಲ್ಲ. ಸುಮಾರು 28 ಮನೆಗಳಿಗೆ ಹಕ್ಕು ಪತ್ರಗಳನ್ನು ಕೊಡಿಸಿದ್ದಾರೆ.
10. ಯಳಂದೂರು ಟೌನ್‌ನಲ್ಲೂ ಕೂಡ ಸಣ್ಣಪುಟ್ಟ ಮನೆಗಳಲ್ಲಿ ವಾಸಮಾಡುವವರಿಗೆ ಹಕ್ಕುಪತ್ರಗಳು ಇರಲಿಲ್ಲ. ಅಲ್ಲೂ 28 ಕ್ಕಿಂತ ಹೆಚ್ಚಿನವರಿಗೆ ಹಕ್ಕು ಪತ್ರ ಕೊಡಿಸಿದ್ದಾರೆ.
11. ವಿ. ಸೋಮಣ್ಣ ಸಚಿವರಿದ್ದಾಗ 65 ಕುಟುಂಬಗಳಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಿಸಿ ಕೊಡಬೇಕೆಂಬ ನಡಾವಳಿ ಬಂದಿದೆ. ಇದರ ಕಾರ್ಯ ಪ್ರಗತಿಯಲ್ಲಿದೆ.
12. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳಿಗೆ ವಿಶ್ರಾಂತಿ ಕೊಠಡಿ ಕೊಡಿಸಿ, ಉತ್ತಮ ವೇತನ ನೀಡಿ ಎಂದು ಈಗಾಗಲೇ ಅಲ್ಲಿನ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಒತ್ತಡ ತಂದಿದ್ದಾರೆ.
13. ಕೊಳ್ಳೇಗಾಲದ ತಾಲೂಕು ಆಸ್ಪತ್ರೆಯಲ್ಲಿ ESI & PFI ಕೊಡಿಸುವಲ್ಲಿ ಸಹಕಾರಿಯಾಗಿದ್ದಾರೆ.
14. ಇಡೀ ಚಾಮರಾಜನಗರ ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ವಸತಿ ಸೌಲಭ್ಯ, ನಿಯತವಾಗಿ ಸಂಬಳ, ಸರಣಿಯಾಗಿ ಆರೋಗ್ಯ ತಪಾಸಣೆಗೆ ಕ್ರಮಕೈಗೊಳ್ಳಲು PDO ಗಳಿಗೆ ಕಾರ್ಯಾಗಾರ ಮಾಡಲು CEO ಅವರಿಗೆ ಮನವರಿಕೆ ಮಾಡಿದ್ದಾರೆ.
15. ಪೌರಕಾರ್ಮಿಕರ ಭವನ ಮತ್ತು ಆ ಮಕ್ಕಳ ವಸತಿ ನಿಲಯಕ್ಕಾಗಿ ಸರಕಾರವು ಎರಡು ಎಕರೆ ಜಮೀನನ್ನು ಮೀಸಲಿಡುವಲ್ಲಿ ಹಗಲಿರುಳು ದುಡಿದಿದ್ದಾರೆ.
ಇಡೀ ರಾಜ್ಯಾದ್ಯಂತ ಪೌರಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಂಘಟನೆ ಕಟ್ಟಿದ್ದಾರೆ. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಮತ್ತು ಸಫಾಯಿ ಕರ್ಮಚಾರಿಗಳ ಸಂಘವನ್ನು ಅಧಿಕೃತವಾಗಿ ನೋಂದಣಿಯಾಗಿಸಿ, ಅದರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿ ರಾಜ್ಯಾದ್ಯಂತ ಮಾಡಿದ ಕಾರ್ಯಗಳ ಪಟ್ಟಿಯೂ ಸಾಕಷ್ಟು ಇದೆ. ಈ ಸಂಘಟನೆಯಿಂದ ಗದಗ ಜಿಲ್ಲೆಯ ಕಳಸಾಪೂರ ಗ್ರಾಮದ ಪಂಚಾಯತಿಯಲ್ಲಿ ಪೌರಕಾರ್ಮಿಕರಿಗೆ ನಾಲ್ಕು ತಿಂಗಳಿಂದ ಸಂಬಳ ಇಲ್ಲದ್ದನ್ನು ಮಾಧ್ಯಮವೊಂದು ವರದಿ ಮಾಡಿತ್ತು. ಈ ವಿಷಯ ಗೊತ್ತಾಗಿ ಆ ವರದಿಯನ್ನಾಧರಿಸಿ ಪಂಚಾಯತಿಗೆ ಹೋಗಿ ತಕ್ಷಣ ಬಗೆಹರಿಸಿದಾಗ ಖುದ್ದು ನಾನೂ ಕೂಡ ಅಲ್ಲೇ ಹಾಜರಿದ್ದೆ. ಹುಬ್ಬಳ್ಳಿ ರೈಲ್ವೆ ಸ್ಟೇಷನ್‌ನಲ್ಲಿ ಇವರ ಸಂಘಟನೆಯ ವಿಭಾಗವಿದೆ.
ಶ್ರೀರಂಗಪಟ್ಟಣ ತಾಲೂಕಿನ ತಹಶೀಲ್ದಾರ್ ಆಗಿದ್ದ ರೇಖಾರವರನ್ನು ಇವರು ಭೇಟಿಯಾಗಿ, ಪಾಲಹಳ್ಳಿ ಗ್ರಾಮದ ಪಾಲಹಳ್ಳಿ ರೈಲ್ವೆ ಬ್ರಿಡ್ಜ್ ಪಕ್ಕದ ಕಾಲುವೆ ಹತ್ತಿರದ ಜಾಗ ಶವ ಹೂಳಲು ಯೋಗ್ಯವಾಗಿರುವುದಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿದಾಗ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಬಲ್ಲವರು ತಿಳಿಸಿದ್ದಾರೆ.
ಪೌರಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಚಾಮರಾಜನಗರದ ನಗರಸಭೆಯ ಗಮನಕ್ಕೆ ತರುವುದಕ್ಕೆ ಮೊದಲು ಹೆದರುತ್ತಿದ್ದರು. ಈಗ ಚಿಕ್ಕ ಮಗು ಕೂಡ ಅಧಿಕಾರಿಗಳ ಗಮನಕ್ಕೆ ಸಮಸ್ಯೆ ಒಯ್ಯುವಷ್ಟು ಧೈರ್ಯ ಬಂದಿದೆ. ಇಂತಹವರಿಗೆ ಅಧಿಕಾರ ಸಿಗಬೇಕೆಂದು ಬಯಸುವುದು ತಪ್ಪೇನಲ್ಲ. ಇಡೀ ರಾಜ್ಯದಲ್ಲಿಯೇ ಪೌರಕಾರ್ಮಿಕರ ಭವನವನ್ನು ಕಟ್ಟಬೇಕೆಂಬುದು ಇವರ ಜೀವನದ ಬಹುದೊಡ್ಡ ಆಶಯವಾಗಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಪೌರಕಾರ್ಮಿಕರ ವಸತಿಗಾಗಿ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗದಿರಲೆಂದು ಸರಣಿಯಾಗಿ ಪೌರ ಕಾರ್ಮಿಕರೊಂದಿಗೆ ಸಂವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಳ್ಳಿ ಹಕ್ಕಿ ಎಂಬ ಸಾಹಿತ್ಯ, ಸಾಂಸ್ಕೃತಿಕ ಸಂಸ್ಥೆಯನ್ನು ರಚಿಸಿಕೊಂಡು ಅದರ ಮೂಲಕವೂ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವಲ್ಲಿ ಮುಂದಾಗುತ್ತಿದ್ದಾರೆ. ದೇಶಕ್ಕೆ ಸೈನಿಕರು ಎಷ್ಟು ಮುಖ್ಯವೋ, ಪೌರಕಾರ್ಮಿಕರು ಅಷ್ಟೇ ಮುಖ್ಯ ಎಂಬ ಧ್ಯೇಯವಾಕ್ಯ ಇವರದಾಗಿದೆ. ಇಂತಹ ಸಂವೇದನಾಶೀಲ ವ್ಯಕ್ತಿಗಳ ಸಂತತಿ ಹೆಚ್ಚಾಗಲಿ.
(ಶ್ರೀ ಸಿ. ಶಂಕರ ಅಂಕನಶೆಟ್ಟಿಪುರ ಅವರ ಸಂಪರ್ಕ ಸಂಖ್ಯೆ- 9632632072)
ಶಿವರಾಜ್ ಮೋತಿ
ಯುವ ಬರಹಗಾರ, ರಾಯಚೂರು
ಇದನ್ನೂ ಓದಿ- ಕೆ ಪಿ ಎಸ್ ಸಿಯ ಮಹಾ ಎಡವಟ್ಟು – ಕನ್ನಡಿಗರಿಗೆ ಮೋಸ