Saturday, July 27, 2024

ನಾನು ಮದ್ವೆ ಆಗಿಲ್ಲ ಆದ್ರೂ ಕೂಡಾ ತುಂಬಾ ಮಕ್ಕಳು”

Most read

ಯಾವುದೇ ದಂಧೆ ಮಾಡುವ ಏರಿಯಾದಲ್ಲಿ ಹೊಸ ಹದಿಹರೆಯದ ಅಥವಾ ಇಷ್ಟವಿಲ್ಲದೇ ಈ ಕೆಲಸಕ್ಕೆ ಜನರು ಸಾಗಾಣಿಕೆ ಗೊಂಡರೆ ಯಾರೇ ಆಗಲಿ ಒಬ್ಬರನ್ನೂ ಬಿಡದಂತೆ ಸೆಕ್ಸ್‌ ವರ್ಕ್‌ ನಿಂದ  ಹೊರ ತೆಗೆದು ಓದಿಸೋಕ್ಕೋ, ಅವರ ಮನೆಗೆ ವಾಪಸ್ಸು ಕಳಿಸೋಕ್ಕೋ ಕಾವಲು ಕಾದು ನಿಂತು ಹೊಸಬರು ಈ ಕೆಲಸಕ್ಕೆ ಬರದಿರಲು ಫಿಲ್ಟರ್ ಮಾಡುತ್ತಿದ್ದಳು ಅವಳು.  ಸುಮಾರು 500 ಮಕ್ಕಳನ್ನು ತನ್ನ ಚಿಕ್ಕ ಜೀವಮಾನದಲ್ಲಿ ರಕ್ಷಿಸಿ ಓದಲು ಹಾಕಿದ್ದಳು. ಸಾಗಾಣಿಕೆಗೆ ಒಳಗಾದ ಹಲವಾರು ಮಕ್ಕಳು ಅವಳಿಂದಾಗಿ ಓದಿ ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ- ರೂಮಿ ಹರೀಶ್.

1999ರಲ್ಲಿ ಒಂದು ಪಿಯುಸಿಎಲ್ (ಪೀಪಲ್ಸ್ ಯುನಿಯನ್ ಆಫ್ ಸಿವಿಲ್ ಲಿಬರ್ಟೀಸ್) ಸಭೆಯಲ್ಲಿ ನಂಗೆ ಲೈಲ ಸಿಕ್ಕಳು. ಮೀಟಿಂಗ್‌ ನಲ್ಲಿ ನಾನು ಅವಳ ಪಕ್ಕದಲ್ಲೇ ಕೂತಿದ್ದು ಅವಳನ್ನು ಮೊದಲನೆ ಸರಿ ನೋಡಿದ್ದು. “ಕ್ಯಾಜಿ ಬರಖಾ ನೈ ಪೆನ್ತಿ”  ಅಂದ್ಲು. ನಾನು ಫುಲ್ ಕನ್ಫ್ಯೂಸ್‌ ಆದೆ. ಯಾಕೆ  ಹೀಗೆ ಕೇಳ್ತಾಳೆ ಅಂತ.  ಅವಳು ಮತ್ತೆ ಕೇಳಿದ್ಲು  “ನಿಂದು ಏರಿಯಾ ಯಾವ್ದು?”.  ನನಗಾಗಲೂ ಗೊತ್ತಾಗಲಿಲ್ಲ. ನನಗೆ ರಾಮ್ ದಾಸ್ ರಾವ್ ಅವರು ಹೇಳಿದ್ರು ಸೆಕ್ಸ್ ವರ್ಕರ್ಸ್‌ ಗೆ ಪೋಲೀಸರು ಬೀದೀಲಿ ತುಂಬಾ ಹಿಂಸೆ ಕೊಡ್ತಿದ್ದಾರೆ, ಬೆಂಬಲ ಗುಂಪಿನ ಮೀಟಿಂಗ್‌ ಗೆ ಬಾ, ಏನಾದ್ರೂ ಬೇರೆ ತರ ಪ್ಲಾನ್ ಮಾಡ್ಬೇಕು ಅಂತ. ಇಷ್ಟಾದ್ರೂ ನಂಗೆ ಹೊಳೀಲಿಲ್ಲ ಲೈಲಾ ಯಾಕೆ ಹೀಗೆ ಕೇಳ್ತಿದ್ದಾಳೆ ಅಂತ.

ಸಭೆ ಶುರುವಾಯಿತು. ಎಲ್ಲರೂ ಪರಿಚಯ ಮಾಡಿಕೊಂಡಾಗ ನನಗೆ ಲೈಲಾ ಮತ್ತೆ ಲೈಲಾಗೆ ನಾನು ಚೆನ್ನಾಗಿ ಪರಿಚಯ ಆಯ್ತು. ನಾನು ಸೆಕ್ಸ್‌ ವರ್ಕ್‌ ಮಾಡಲ್ಲ ಅಂತ ಅವಳಿಗೆ ತಿಳಿಯಿತು. ಅವಳು ಅದೇ ಕೆಲಸ ಮಾಡೋದು ಮತ್ತು ಅದರ ಜೊತೆಗೆ ಯಾವುದೇ ದಂಧೆ ಮಾಡುವ ಏರಿಯಾದಲ್ಲಿ ಹೊಸ ಹದಿಹರೆಯದ ಅಥವಾ ಇಷ್ಟವಿಲ್ಲದೇ ಈ ಕೆಲಸಕ್ಕೆ ಜನರು ಸಾಗಾಣಿಕೆ ಗೊಂಡರೆ ಯಾರೇ ಆಗಲಿ ಒಬ್ಬರನ್ನೂ ಬಿಡದಂತೆ ಲೈಂಗಿಕ ಕೆಲಸದಿಂದ ಹೊರ ತೆಗೆದು ಓದಿಸೋಕ್ಕೋ, ಅವರ ಮನೆಗೆ ವಾಪಸ್ಸು ಕಳಿಸೋಕ್ಕೋ ಕಾವಲು ಕಾದು ನಿಂತು ಹೊಸಬರನ್ನು ಈ ಕೆಲಸಕ್ಕೆ ಬರದಿರಲು ಫಿಲ್ಟರ್ ಮಾಡುತ್ತಿದ್ದಳು.  ಸುಮಾರು 500 ಮಕ್ಕಳನ್ನು ತನ್ನ ಚಿಕ್ಕ ಜೀವಮಾನದಲ್ಲಿ ರಕ್ಷಿಸಿ ಓದಲು ಹಾಕಿದ್ದಳು. ಸಾಗಾಣಿಕೆಗೆ ಒಳಗಾದ ಹಲವಾರು ಮಕ್ಕಳು ಅವಳಿಂದಾಗಿ ಓದಿ ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ.

ಕೆಲಸ ಮಾಡ್ತಾ ಮಾಡ್ತಾ ನಾನೂ ಲೈಲಾ ತುಂಬಾ ಹತ್ತಿರ ಆದ್ವಿ. ಯಾವುದೋ ಒಂದು ಟ್ರೈನಿಂಗ್ ಗೆ ನಾನು, ಲೈಲಾ ಮತ್ತು ಇನ್ನೊಬ್ಬರು ವಕೀಲರು ರೈಲಲ್ಲಿ ಹೋಗಿದ್ವಿ. ಆ ರೈಲು ಪ್ರಯಾಣ ನಾನೆಂದಿಗೂ ಮರೆಯೋಲ್ಲ. ನಮ್ಮ ಜೊತೆ ಬಂದ ವಕೀಲರು ಒಂದು ಪ್ರಶ್ನೆ ಕೇಳಿ ಬಿಟ್ಟರು “ಸಲಿಂಗ ಕಾಮ/ಒಲವು ಇದರಲ್ಲಿ ಹೇಗೆ ಮಜ ಸಿಗುತ್ತೆ. ಶಿಶ್ನ ಇಲ್ಲದ ಸಂಭೋಗ ನಿಜಕ್ಕೂ ಏನು ಪ್ರಯೋಜನ? ಯಾಕೆ ನೀವು ಲೆಸ್ಬಿಯನ್, ಗೇ ಅಂತ ಹೇಳ್ಕೊತಿರ್ತೀರ? ಹೆಣ್ ಮಕ್ಕಳಿಗೆ ಗಂಡಸರು ಬಾಳು ಕೊಡೋದನ್ನ ತಪ್ಪಿಸ್ತೀರ”. ಮುಗೀತು ಕತೆ. ಲೈಲಾ ಒಂದ್ ನಾಕು ಪೆಗ್ ಹಾಕಿದ್ಲು. ನಂಗೆ ಮಾತಾಡಕ್ಕೆ ಬಿಡದೇ ಶುರು ಮಾಡಿದ್ಲು. “ಯಾರಿಗ್ ಯಾರು ಬಾಳು ಕೊಡೋದು? ಈ ಗಂಡಸರಾ ಬಾಳು ಕೊಡ್ತಾರೆ? ಬಂದು ಹಾಕಿ ಹೋಗ್ತಾರೆ. ಆ ಮೇಲೆ ಏನಾಯ್ತು ಅಂತನೂ ಕೇಳಲ್ಲ. ಅದೂ ಫ್ರೀ. ಸಾರ್ ನಾನು ಪ್ರೆಗ್ನೆಂಟು ಅಂದ್ರೆ 200 ಕೊಟ್ಟು ಅಬಾರ್ಶನ್ ಮಾಡುಸ್ಕೊ ಅಂತ ಹೇಳಿ, 11 ಸಾರಿ ಅಬಾರ್ಶನ್ ಆಯ್ತು. ಇದಾ ಬಾಳು ಕೊಡೋದು? ಅದೂ ನಾನು ಒಂದು ಫ್ಯಾಕ್ಟ್ರೀಲಿ ಕೆಲಸ ಮಾಡುತ್ತಿದ್ದಾಗ ಆ ಮ್ಯಾನೇಜರ್ ಮಾಡಿದ್ದು. ಅದು ಸಿಕ್ದಾಗೆಲ್ಲ ಎಲ್ಲಂದ್ರಲ್ಲಿ ಕೇಯೋದ್ ಬಿಟ್ರೆ ಬೇರೆ ತರದ ಬಾಳು ಕೊಡಕ್ಕೆ ಗೊತ್ತಿಲ್ಲ. ನೀವು ಇಷ್ಟು ದೊಡ್ಡ ವಕೀಲರು ಆದ್ರೂ ಯಾಕ್ ಹೇಳ್ತೀರ ಗಂಡಸರು ಹೆಂಗಸರಿಗೆ ಬಾಳು ಕೊಡ್ತಾರೆ ಅಂತ. ನಾಚ್ಕೆ ಅಗಲ್ಲ ನಿಮ್ಗೆ”. ಆಗ ವಕೀಲರು ಏನೋ ಹೇಳಲು ಹೊರಟರು … ಲೈಲಾಳ ನಾಕು ಪೆಗ್ ಚಂದ ಕೆಲಸ ಮಾಡಿತು “ಇಲ್ ಕೇಳಮ್ಮ ಲಾಯರ್ರು, ಸಿಸ್ನ ಇಲ್ದೆ ಸೆಕ್ಸ್ ಮಾಡಕ್ಕಾಗಲ್ವ? ಯಾವತ್ತಾದ್ರು ನಿಮ್ಮನ್ನ ನೀವೇ ಮುಟ್ಕೊಂಡು ನೋಡಿದ್ದೀರ?”

ನಾನು ಮೆಲ್ಲಗೆ ಲೈಲಾಳನ್ನು ಮುಟ್ಟಿ ಸೂಚಿಸಿದೆ ‘ಸಾಕು ಇನ್ನು ಹುರಿಬೇಡ’ ಅಂತ. ಅವಳು ಜೋರಾಗಿ ನಕ್ಕು “ಸುಖದ ಬದುಕು ಕಲ್ತು ಓದಿ ಮನೆಯವರು ಹೇಳಿದಾಗ ಮದ್ವೆ ಮಾಡ್ಕೊಂಡು ಈಗ ಅದೇನು ಇದೇನು ಅಂತ ಕೇಳಿದ್ರೆ?”.

ಲೈಲಾ ಒಂಥರಾ ವಿಚಿತ್ರ. ಈಗೆಲ್ಲ ರಾಜಕೀಯ ಮಾತಾಡಕ್ಕೆ ಒಂದು ಭಾಷೆ ಬೆಳೆದಂತಿದೆ ಕನ್ನಡದಲ್ಲಿ. ಲೈಲಾ ತನ್ನ ಕನ್ನಡದಲ್ಲಿ ಕ್ಲೈಂಟ್ ಜೊತೆನೂ ಮಾತಾಡ್ತಿದ್ಲು. ಅದೇ ಕನ್ನಡದಲ್ಲಿ ರಾಜಕೀಯನೂ ಮಾತಾಡ್ತಿದ್ಲು. 2021ರ ಜುಲೈ ತಿಂಗಳಲ್ಲಿ ಬಹಳ ನರಳಾಡಿ ತೀರಿ ಹೋದಳು.

ಅವಳು ನನ್ನ ಮತ್ತು ಸುನಿಲನ್ನ ಯಾವಾಗಲೂ ಡಾರ್ಲಿಂಗ್ ಎಂದು ಕರೆಯುತ್ತಿದ್ದಳು. ನಾವೂ ಕೂಡ. ತುಂಬಾ ಹಿಂದೆ ಅಂದ್ರೆ ಸುಮಾರು 1998ರಲ್ಲಿ ಒಮ್ಮೆ ಅವಳು ದಂಧೆಗೆ ನಿಂತಿದ್ಲು, ಎಂ ಜಿ ರಸ್ತೆಯಲ್ಲಿ. ಆಗ ಪೋಲೀಸರು ಅವಳನ್ನು ಹಿಡಿದು ಅವಳ ತೊಡೆಗೆ ಚೆನ್ನಾಗಿ ಲಾಠಿಯಲ್ಲಿ ಹೊಡೆದು ಅವಳು ಓಡಲು ಶುರು ಮಾಡಿದಳು. ಇದು ಮೊದಲು ಕಿಡ್ಸ್ ಕ್ಯಾಂಪ್ ಇದ್ದ ಜಾಗದಿಂದ ಅವಳು ಬೌರಿಂಗ್ ಹಾಸ್ಪೆಟಲ್ ತನಕ ಪೋಲೀಸರಿಂದ ತಪ್ಪಿಸಿಕೊಳ್ಳಲು ಓಡಿದ್ದಾಳೆ (ಅವಳು ಯಾವಾಗಲೂ ಜೋಕ್ ಮಾಡುತ್ತಿದ್ದಳು, ನಾನು ಹೀಗೆ ಓಡಿದ್ರೆ ನಂಗೆ ಡಯಬಿಟೀಸೇ ಬರಲ್ಲ ಅಂತ ). ಬೌರಿಂಗ್ ಆಸ್ಪತ್ರೆಯಲ್ಲಿ ಹೋಗಿ ಯಾವುದೋ ಯಾರೂ ಕಾಣದ ಜಾಗದಲ್ಲಿ ಬಚ್ಚಿಟ್ಟು ಕೊಂಡಳು. ಪೋಲೀಸರು ಅಲ್ಲಿ ಇಲ್ಲಿ ನೋಡಿ ಹೊರಟು ಹೋದರು. ಇವಳು ಮೆಲ್ಲಗೆ ಹೊರ ಬಂದು ನೋಡಿದಾಗ ಯಾವ ಪೋಲೀಸರೂ ಇರಲಿಲ್ಲ. ಅಬ್ಬ! ಯಾರಿಲ್ಲ ಅಂತ ಖಾತ್ರಿ ಮಾಡಿಕೊಂಡು ಆರಾಮಕ್ಕೆ ಒಂದು ಎಳನೀರು ಕುಡಿದಳು. ಅದು ಸಂಜೆ ಹೊತ್ತು. ಅಲ್ಲೊಂದು ರೋಡಿನ ಸೈಡಲ್ಲಿ ಎರಡು ದಿವಸದ ಮಗು ಬಿದ್ದಿತ್ತು. ಅದಕ್ಕೆ ಒಂದು ಕಣ್ಣು ಇರಲಿಲ್ಲ. ಇವಳು ಆ ಮಗುವನ್ನು ತೆಗೆದುಕೊಂಡು ಆಸ್ಪತ್ರೆ ಎಲ್ಲಾ ಸುತ್ತಿದ್ಲು. ಆದ್ರೂ ಯಾರೂ ಆ ಮಗುವನ್ನು ತಮ್ಮದು ಎಂದು ಕ್ಲೇಮ್ ಮಾಡಿಲ್ಲ.

ಎಷ್ಟು ಹುಡುಕಿದ್ರೂ ಆ ಮಗುವಿನ ತಂದೆ ತಾಯಿ ಸಿಗದೆ, ತಾನೇ ಆ ಮಗುವನ್ನ ಎತ್ತಿಕೊಂಡು ಆಸ್ಪತ್ರೆಯ ಆಚೆ ಕೂತಿರುವಾಗ  ಅಲ್ಲಿದ್ದ ಬೀದಿ ವ್ಯಾಪಾರಿಗಳು ಅವಳಿಗೆ ಅಡ್ವೈಸ್‌ ಮಾಡಿದರು -ಅನಾಥಾಶ್ರಮದಲ್ಲಿ ಬಿಟ್ಟು ಬಿಡು ಎಂದು. ಅವಳಿಗೆ ಮನಸ್ಸು ಬರಲಿಲ್ಲ. ತನ್ನ ಮನೆಗೆ ಆ ಮಗುವನ್ನು ಕರೆದುಕೊಂಡು ಹೋದಳು. ಆ ಮಗುವನ್ನು ಓದಿಸಿದಳು. ಇಂದು ಆ ಹುಡುಗಿ ಸರ್ಕಾರಿ ಕಾಲೇಜಿನಲ್ಲಿ ಕಾನೂನೂ ವ್ಯಾಸಂಗ ಮಾಡುತ್ತಿದ್ದಾಳೆ. ಅವಳು ಪಿಯೂ ಓದುವಾಗ ಹುಲಿಕುಂಟೆ ಮೂರ್ತಿ ಸಾರ್ ಬಹಳ ಸಹಾಯ ಮಾಡಿದರು. ಅಷ್ಟೊತ್ತಿಗೆ ಲೈಲಾ ತೀರಿಕೊಂಡಿದ್ದಳು.

ಲೈಲಾ ಒಂದು ಇಂಟರ್‌ ವ್ಯೂನಲ್ಲಿ ಹೇಳಿದ್ದಳು “ನಾನು ಮದ್ವೆನೇ ಮಾಡ್ಕೊಂಡಿಲ್ಲ. ಆದ್ರೂ ಒಂದು ಮಗುಗೆ ಜನ್ಮ ಕೊಟ್ಟೆ, ಬಾಕಿ ಹನಿ ಮತ್ತೆ ಸಿನುನ ಮನೇಲೇ ಸಾಕಿ ಓದ್ಸಿದೆ. ನಂಗೆ ನನ್ನ ಹೆಣ್ಣು ಮಕ್ಕಳು ಓದ್ಲೇ ಬೇಕು ಅಂತಿತ್ತು. ಇನ್ನು ನಾನು ರಕ್ಷಿಸಿರುವ ಮಕ್ಕಳು ನನ್ನ ನಂಬಿಕೆಯನ್ನು ಮುರಿಯುವುದಿಲ್ಲ”. ಅವಳು ಅಷ್ಟು ಹುಶಾರಿಲ್ಲದೇ ಆಸ್ಪತ್ರೆಯ ಐಸಿಯುನಲ್ಲಿ ನರಳುತ್ತಿದ್ದಾಗಲೂ ನಮ್ಮ ಕೈ ಹಿಡಿದು ಅತ್ತಿದ್ದು ಹನಿ ಮತ್ತು ಸೈನು ಬಗ್ಗೆನೇ.  ಕಣ್ಣೆಲ್ಲಾ ಕೆಂಪಗಾಗಿ ನಮ್ಮನ್ನು ನೋಡಿ ವಿಚಲಿತಗೊಂಡು ಓದ್ಸಿ ಅಂತ ನಂಗೆ ಸುನಿಲಿಗೆ ಹೇಳಿದಳು.

2010ರಲ್ಲಿ ಸುನಿಲ ಮತ್ತು ನಾನು ಎನ್ ಜಿ ಒಗಳನ್ನು ಬಿಟ್ಟು ಸ್ವತಂತ್ರವಾಗಿ ಕೆಲಸ ಮಾಡಲು ಶುರು ಮಾಡಿದ್ವಿ. ಫೆಲೋಶಿಪ್ ತಗೊಂಡು ಕೆಲಸ ಮಾಡೋದು. ನಮ್ಮೆಲ್ಲಾ ಕೆಲಸಗಳನ್ನು ಶೋಷಿತ ಸಮುದಾಯಗಳ ಜೊತೆಯೇ ಮಾಡುತ್ತಿದ್ದೆವು. ಆಗ 2013 ರಲ್ಲಿ ನಮಗೆ 8 ತಿಂಗಳು ಫೆಲೋಶಿಪ್ ಸಿಗುವುದು ತಡವಾಯಿತು. ಆಗ ನಮ್ಮಲ್ಲಿ ಹೆಚ್ಚು ಹಣ ಇರುತ್ತಿರಲಿಲ್ಲ. ಊಟಕ್ಕೆ ದುಡ್ಡು ಹಾಕಿದರೆ ಆಫೀಸಿಗೆ ಅಂದ್ರೆ ಪರ್ಯಾಯ ಕಾನೂನು ವೇದಿಕೆಗೆ ಹೋಗಲು ಆಗುತ್ತಿರಲಿಲ್ಲ. ಹೀಗೆ, ಆಗ ಒಮ್ಮೆ “ಡಾರ್ಲಿಂಗ್ ಒಂದು ಸಹಾಯ ಮಾಡ್ತೀಯ?” ಅಂತ ಕೇಳಿದಳು ಸರ್ಸಿಮಾ (ದು ಸರಸ್ವತಿ). ಇವರೆಲ್ಲರಿಗೂ ಅಂದ್ರೆ ಮಹಿಳಾ ಲೈಂಗಿಕ ಕಾರ್ಮಿಕರಿಗೆ ನಾಟಕ ಮಾಡಿಸ್ತಿದ್ಲು. ಅದಕ್ಕೆ ಅವರೆಲ್ಲರ ಕಥೆಗಳನ್ನು ದಾಖಲಿಸಬೇಕಿತ್ತು. ಅದನ್ನು ನಾನು ಸುನಿಲ ಮಾಡುತ್ತಿದ್ದೆವು. ಆದ್ರೆ ನಮಗೆ ಬೆಳಿಗ್ಗೆ ತಿಂಡಿ ಇಲ್ಲ. ಮಧ್ಯಾಹ್ನ ಊಟ ಇಲ್ಲ. ಅದು ಗೊತ್ತಾಗಿದ್ ಕೂಡ್ಲೇ ಅವತ್ತೇನು  ನಮ್ ಹತ್ರ ಮಾತಾಡಿಲ್ಲ. ಎರಡನೆ ದಿನ ಮಧ್ಯಾಹ್ನ ಹೋದಾಗ 2 ಕ್ಯಾರಿಯರ್ ರೆಡಿ. ಒಂದು ಮಧ್ಯಾಹ್ನ ಕ್ಕೆ ಒಂದು ರಾತ್ರಿಗೆ. ಮತ್ತೆ ನಮ್ಮ ನೆಚ್ಚಿನ ಬಿಯರ್. ಮಧ್ಯಾಹ್ನ ಮೊದಲನೆ ಡಬ್ಬದಲ್ಲಿ ಎರಡೆರಡು ಕಬಾಬ್, ಎರಡನೆ ಡಬ್ಬದಲ್ಲಿ ರಸಂ ಮೂರನೆದ್ರಲ್ಲಿ ಅನ್ನ. ಹೀಗೆ 8 ತಿಂಗಳು ನಮ್ಮಿಬ್ಬರನ್ನೂ ನೋಡಿಕೊಂಡವಳು ಈ ಲೈಲಾ.

ಇದನ್ನೂ ಓದಿ- ಸತ್ಯವನ್ನೇ ಹೇಳುತ್ತೇನೆ ಬೋರ್‌ ಹೊಡೆಸಲ್ಲ..

ಲೈಲಾ ತೀರಿಕೊಂಡಾಗ ನಾನು ಹೋಗಿ ಅವಳ ಅಪ್ಪಿ ಹಿಡಿದೆ. 42 ವರ್ಷ. ಡಾರ್ಲಿಂಗ್ ಇಷ್ಟು ಬೇಗ ಹೋಗಬೇಕಿತ್ತೆ. ನಾವಿನ್ನೂ ಬಾಲಾಜಿ ಬಾರಿನಲ್ಲಿ ಕೂತು ಕುಡಿದು ಹರಟೆ ಹೊಡೆದು ಹೊಟ್ಟೆ ತುಂಬಾ ನಗೋದು ಬಾಕಿ ಉಳಿದಿದೆಯಲ್ಲಾ ಡಾರ್ಲಿಂಗ್….

ಹೆಜ್ಜೆ ಹೆಜ್ಜೆಯ ಸಮರದಲ್ಲೂ

ಜೋರಾಗಿ ನಗುತ್ತಾ

ಕಣ್ಣಂಚಲಿ ಹನಿಗಳು ಮೂಡಿದರೂ

ಅದನ್ನು ತಿಂದು ತೇಗಿ

ಮುಂದಿನ ದಿನದ

ಹುಡುಕಾಟದಲ್ಲಿ

ಮುಳುಗುತ್ತಲೇ

ತನ್ನ ಸಾವಿರಾರು ಮಕ್ಕಳ

ಬದುಕಿಗೆ

ಕನಸುಗಳ ಕಟ್ಟುತ್ತಾ

ಮುಂದಿನ ಗಿರಾಕಿಯ ಜೊತೆ

ಸೆಣಸಾಡುತ್ತಾ

ಕೆಲವೊಮ್ಮೆ ಮೇಕಪ್

ಮಾಡುವುದ ಹೇಳಿ ಕೊಡುತ್ತಾ

ನನಗೆ ದಾಡಿ ಮೀಸೆ ಬರೆದು

ನಗುತ್ತಾ

ಮಾಯವಾಗಿ ಬಿಟ್ಟರೆ

ಲೈಲಾ……

ರೂಮಿ ಹರೀಶ್

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ. ಇವರು ಬರೆಯುವ ‘ರೂಮಿ ಕಾಲಂ’ ಪ್ರತಿ ಮಂಗಳವಾರ ಪ್ರಕಟವಾಗಲಿದೆ.

More articles

Latest article