Saturday, July 27, 2024

ಹುತಾತ್ಮರ ದಿನಾಚರಣೆ | ಅಂಡಮಾನಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು

Most read

ಅಂಡಮಾನಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ ಈ ಕ್ರಾಂತಿಕಾರಿಗಳು ಯಾರೂ ಕ್ಷಮಾ ದಾನದ ಪತ್ರ ಬರೆಯಲಿಲ್ಲ.! ಅಷ್ಟೇಕೆ, ಬಿಡುಗಡೆಯಾದ ಬಳಿಕವೂ ಹೋರಾಟದಿಂದ ವಿಮುಖರಾಗಲಿಲ್ಲ! ಕ್ರಾಂತಿಕಾರಿಗಳನ್ನು ಕೊಂಡಾಡುವ ಆರೆಸ್ಸೆಸ್ ಮತ್ತು ಹಿಂದುತ್ವ ಶಕ್ತಿಗಳು ಈ ಕ್ರಾಂತಿಕಾರಿಗಳು ಪ್ರತಿನಿಧಿಸಿದ, ದುಡಿದ ಸಿದ್ಧಾಂತದ ಬಗ್ಗೆ ಮಾತೇ ಆಡುವುದಿಲ್ಲ.ಹುತಾತ್ಮರ ದಿನಾಚರಣೆ ಯ ಪ್ರಯುಕ್ತ ಹೆಚ್ಚು ಪ್ರಚಾರಕ್ಕೆ ಬರದ ಆರು ಮಂದಿ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರರನ್ನು ಕನ್ನಡ ಪ್ಲಾನೆಟ್‌ ಪರಿಚಯಿಸುತ್ತಿದೆ. ಕೆ ಪಿ ಸುರೇಶ್‌ ಬರೆದಿದ್ದಾರೆ

ಯೋಗೇಂದ್ರ ಶುಕ್ಲಾ 

ಯೋಗೇಂದ್ರ ಶುಕ್ಲಾ ಅವರು 1896 ರಲ್ಲಿ ಅಂದಿನ ಬೆಂಗಾಲ್‌ ಪ್ರೆಸಿಡೆನ್ಸಿಯ ( ಇಂದಿನ ಬಿಹಾರದ ವೈಶಾಲಿ ಜಿಲ್ಲೆಯ ಜಲಾಲ್‌ ಪುರ್‌ ನಲ್ಲಿ ಜನಿಸಿದರು. ಹಿಂದೂಸ್ತಾನ್‌ ಸೋಷಿಯಲಿಸ್ಟ್‌ ರಿಪಬ್ಲಿಕನ್‌ ಅಸೋಸಿಯೇಶನ್‌ (HSRA) ಸ್ಥಾಪಕರಲ್ಲೊಬ್ಬರು.  ಭಗತ್‌ ಸಿಂಗ್‌ ಮತ್ತಿತರ ಕ್ರಾಂತಿಕಾರಿಗಳ ಹಿರಿಯ ಮಾರ್ಗದರ್ಶಿ.

ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಚಂಪಾರಣ ಮತ್ತು ದರ್ಭಾಂಗಾಗಳಲ್ಲಿ ಹಲವಾರು ರಾಜಕೀಯ ಪ್ರೇರಿತ ಡಕಾಯಿತಿಗಳನ್ನು ಮಾಡಿದ್ದಕ್ಕೆ ಬ್ರಿಟಿಶ್ ಸರಕಾರ1931 ರಲ್ಲಿ ಅವರನ್ನು ಬಂಧಿಸಿತು. ತಿರ್ಹಟ್‌ ವಿದ್ರೋಹ ಪ್ರಕರಣ ಎಂದೇ ಈ ಪ್ರಕರಣ ಹೆಸರಾಯಿತು. 

ಯೋಗೇಂದ್ರ ಶುಕ್ಲಾ 

ಶುಕ್ಲಾ ಅವರ ಕ್ರಾಂತಿಕಾರಿ ತಂಡದ ಬೈಕುಂಠ ಶುಕ್ಲಾ( ಯೋಗೇಂದ್ರ ಶುಕ್ಲಾ ಅವರ  ಸೋದರ ಸಂಬಂಧಿ) ಮತ್ತು ಚಂದ್ರಮ ಸಿಂಗ್ ಅವರು  ಲಾಹೋರ್ ಪ್ರಕರಣದಲ್ಲಿ ಭಗತ್ಸಿಂಗ್ ವಿರುದ್ಧ ಅಪ್ರೂವರ್ ಆಗಿ ಸಾಕ್ಷಿ ಹೇಳಿ ದ್ರೋಹ ಬಗೆದಿದ್ದ ಫಣೀಂದ್ರನಾಥ ಘೋಷ್ ಅವರನ್ನು ಹತ್ಯೆ ಮಾಡಿದರು. ಈ ಪ್ರಕರಣದಲ್ಲಿ ಬೈಕುಂಠ ಶುಕ್ಲಾ ಅವರನ್ನು ಗಲ್ಲಿಗೇರಿಸಲಾಯಿತು.  ಆಗ ಬೈಕುಂಠ್ ವಯಸ್ಸು 28.

ಯೋಗೇಂದ್ರ ಶುಕ್ಲಾ ಅವರ ಸಂಘಟನೆಯನ್ನು ಕ್ರಿಮಿನಲ್ ಟ್ರೈಬ್ ಎಂದು ಬ್ರಿಟಿಶ್ ಸರಕಾರ ಘೋಷಿಸಿತ್ತು! ಹತ್ತಾರು ಕ್ರಾಂತಿಕಾರಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಬ್ರಿಟಿಶ್ ಸರಕಾರ ಯೋಗೇಂದ್ರ ಶುಕ್ಲಾ ಅವರನ್ನು ಅಂಡಮಾನಿನ ಜೈಲಿಗೆ ಕಳಿಸಿತು. ಅಂಡಮಾನ್ ಜೈಲಲ್ಲೂ ಶುಕ್ಲಾ ಅವರು ಸಹ ಖೈದಿಗಳ ಪರವಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದರು‌

1938 ರಲ್ಲಿ ಅವರನ್ನು ಹಜಾರಿ ಬಾಗ್ ಜೈಲಿಗೆ ಸ್ಥಳಾಂತರಿಸಲಾಯಿತು. ಅನತಿ ಕಾಲದಲ್ಲಿ ಅವರ ಬಿಡುಗಡೆಯೂ ಆಯಿತು. ಬಿಡುಗಡೆ ಆಗಿದ್ದೇ ಶುಕ್ಲಾ  ಅವರು ಕಾರ್ಮಿಕ ಚಳವಳಿಗೆ ಧುಮುಕಿದರು. ಚಂಪಾರಣ್ ನ ಸಕ್ಕರೆ ಕಾರ್ಖಾನೆ ಕಾರ್ಮಿಕರ ಚಳವಳಿಯ ನೇತೃತ್ವ ವಹಿಸಿದ್ದಕ್ಕಾಗಿ ಅವರನ್ನು ಮತ್ತೆ ಬ್ರಿಟಿಶ್ ಸರಕಾರ ಬಂಧಿಸಿ ಹಜಾರಿ ಬಾಗ್  ಜೈಲಿಗೆ ತಳ್ಳಿತು. ಬಿಡುಗಡೆ ಆದ ತಕ್ಷಣ ಅವರು ಅಖಿಲ ಭಾರತ ಕಿಸಾನ್ ಸಭಾದ ಕೇಂದ್ರ ಸಮಿತಿಯ ಸದಸ್ಯರಾದರು.  ರೈತ ಚಳವಳಿಯ ನೇತೃತ್ವ ವಹಿಸಿದ್ದಕ್ಕೆ ೧೯೪೦ರಲ್ಲಿ ಮತ್ತೆ ಬ್ರಿಟಿಶ್ ಸರಕಾರ ಅವರನ್ನು ಬಂಧಿಸಿತು.

1942 ರ ಕ್ವಿಟ್ ಇಂಡಿಯಾ ಚಳವಳಿಯ ಕಾರಣಕ್ಕೆ ಜಯಪ್ರಕಾಶ್ ನಾರಾಯಣ್ ಸಹಿತ ಸಾವಿರಾರು ನಾಯಕರು ಬಂಧನಕ್ಕೊಳಗಾಗಿದ್ದರು. ಜೆಪಿಯವರು ಹಜಾರಿ ಬಾಗ್ ಜೈಲಲ್ಲಿದ್ದರು. 1942 ರ  ನವಂಬರ್ 9. ದೀಪಾವಳಿ ಹಬ್ಬದ ದಿನ  ಯೋಗೇಂದ್ರ ಶುಕ್ಲಾ ಅವರು, ಜೆಪಿ, ರಮಾನಂದನ್ ಮಿಶ್ರಾ, ಸೂರಜ್ ನಾರಾಯಣ್ ಸಿಂಗ್, ಗುಲಾಬ್ ಚಂದ್ ಗುಪ್ತಾ ಹಾಗೂ ಶಾಲಿಗ್ರಾಮ್ ಸಿಂಗ್ ಅವರ ಸಹಿತ ಜೈಲಿನ ಗೋಡೆ ಜಿಗಿದು ತಪ್ಪಿಸಿಕೊಂಡರು.

ಶುಕ್ಲಾ ಕ್ರಾಂತಿಕಾರಿ ಚಳವಳಿಯಲ್ಲಿ ಮಿಂದೆದ್ದ ಜೀವ. ಜೆಪಿಗೆ ಅದು ಹೊಸ ಅನುಭವ. ಗೋಡೆ ಹಾರುವಾಗ  ಕಾಲು ಉಳುಕಿಸಿಕೊಂಡಿದ್ದ ಜೆಪಿಯವರನ್ನು ಶುಕ್ಲಾ ಮತ್ತು ಶಾಲಿಗ್ರಾಮ್ ಮುಂದಿನ 48 ಗಂಟೆ ಕಾಲ ಬೆನ್ನಲ್ಲಿ ಹೊತ್ತು ಸಾಗಿದ್ದರು.124 ಕಿಮೀ ಹೀಗೆ ಪಯಣಿಸಿದ್ದರು! ಭಾರತದ ಸ್ವಾತಂತ್ರ್ಯ ಚಳವಳಿಯ ಮರೆಯಲಾರದ ಘಟನೆ ಇದು. 1942 ರ ಡಿಸೆಂಬರಿನಲ್ಲಿ ಬ್ರಿಟಿಶ್ ಸರಕಾರ ಶುಕ್ಲಾ ಅವರನ್ನು ಬಂಧಿಸಿತು. ಒಟ್ಟಾರೆ 17 ವರ್ಷ ಕಾಲ ಶುಕ್ಲಾ  ಜೈಲಿನಲ್ಲಿದ್ದರು. 1946 ರ ಎಪ್ರಿಲ್‌ ನಲ್ಲಿ ಶುಕ್ಲಾ ಅವರ ಬಿಡುಗಡೆಯಾಯಿತು. ಪ್ರಜಾ ಸೋಷಲಿಸ್ಟ್‌ ಪಕ್ಷದ ಸದಸ್ಯರಾಗಿದ್ದ ಶುಕ್ಲಾ 1958 ರಲ್ಲಿ ಬಿಹಾರದ ವಿಧಾನ ಪರಿಷತ್ತಿಗೂ ಆಯ್ಕೆಯಾದರು. ಸುದೀರ್ಘ ಜೈಲುವಾಸ ಅವರ ಆರೋಗ್ಯವನ್ನು ಘಾಸಿಗೊಳಿಸಿತ್ತು. ಎಂದೂ ರಾಜಿ ಮಾಡಿಕೊಳ್ಳದ ಈ ಕ್ರಾಂತಿಕಾರಿ 1960 ರ ನವಂಬರ್‌19 ರಂದು ಕೊನೆ ಉಸಿರೆಳೆದರು

****

ಗಣೇಶ್ ಘೋಷ್

ಇವರು ಜೂನ್ 22, 1900 ರಂದು ಇಂದಿನ ಬಾಂಗ್ಲಾದೇಶದ ಚಿತ್ತಗಾಂಗ್ ನಲ್ಲಿ ಜನಿಸಿದರು. ಕಲ್ಕತ್ತಾದ ಕಾಲೇಜು ಸೇರಿದ ಬಳಿಕ ಅವರು ಚಿತ್ತಗಾಂಗ್ ನ ಜುಗಾಂತರ್ ಪಕ್ಷದ ಸದಸ್ಯರಾದರು 1930 ರ ಎಪ್ರಿಲ್ 18 ರಂದು ಅವರು ಸೂರ್ಯ ಸೇನ್ ನೇತೃತ್ವದ ಚಿತ್ತಗಾಂಗ್ ಶಸ್ತ್ರಾಸ್ತ್ರ ಕೋಠಿಗೆ ಧಾಳಿ ನಡೆಸಿದರು. ಚಿತ್ತಗಾಂಗ್ ಆರ್ಮರಿ ರೈಡ್ ಪ್ರಕರಣವೆಂದೇ ಇದು ಪ್ರಖ್ಯಾತವಾಯಿತು. 

ಪ್ರಕರಣದ ವಿಚಾರಣೆ ಬಳಿಕ ಗಣೇಶ್‌ ಘೋಷ್‌ ಅವರನ್ನು  ಅಂಡಮಾನಿನ ಜೈಲಿಗೆ ರವಾನಿಸಲಾಯಿತು.  1946 ರಲ್ಲಷ್ಟೇ ಅವರ ಬಿಡುಗಡೆಯಾಯಿತು.

 ಬಿಡುಗಡೆ ಬಳಿಕ ಅವರು ಭಾರತೀಯ ಕಮ್ಯುನಿಸ್ಟ್ ಪಕ್ಷದ ಸದಸ್ಯರಾದರು. 1952 , 1957, 1962 ರಲ್ಲಿ ಅವರು ಬಂಗಾಲದ ವಿಧಾನ ಸಭಾ ಸದಸ್ಯರಾಗಿದ್ದರು. 1967 ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. 1994 ರ ಅಕ್ಟೋಬರ್ 16 ರಂದು ಕೊನೆ ಉಸಿರೆಳೆದರು.

This image has an empty alt attribute; its file name is Revolutionary_Ganesh_Ghosh-jpg.webp
ಗಣೇಶ್ ಘೋಷ್

 ಗಣೇಶ್ ಘೋಷ್  ಅವರ ಕ್ರಾಂತಿಕಾರಿ ಜೀವನವನ್ನು ಈ  ಚಿತ್ತಗಾಂಗ್ ಶಸ್ತ್ರಾಸ್ತ್ರ ಕೋಠಿಯ ಮೇಲಿನ ಧಾಳಿಯ ನೇತೃತ್ವ ವಹಿಸಿದ ಸೂರ್ಯ ಸೆನ್  ಅವರ ಜೀವನದಿಂದ ಬೇರ್ಪಡಿಸಿ ನೋಡಲಾಗದು. ಶಾಲಾ ಮಾಸ್ತರರಾಗಿದ್ದ ಸೂರ್ಯ ಸೆನ್  ಚಿತ್ತಗಾಂಗ್ ನಲ್ಲಿ ಕ್ರಾಂತಿಕಾರಿಗಳ ಪಡೆ ಕಟ್ಟಿದರು. ಶಸ್ತ್ರಾಸ್ತ್ರ  ಹೊಂಚಲು ಬ್ರಿಟಿಶ್ ಶಸ್ತ್ರಾಸ್ತ್ರ ಕೋಠಿಗೇ ಧಾಳಿ ಮಾಡುವ ನಿರ್ಭೀತಿಯ ಕಾರ್ಯವನ್ನೂ ಮಾಡಿದರು. ದುರದೃಷ್ಟವಶಾತ್ ಈ ತಂಡಕ್ಕೆ ಶಸ್ತ್ರಾಸ್ತ್ರ ದೊರಕಲಿಲ್ಲ. ತರುವಾಯ ಬ್ರಿಟಿಶ್ ಪಡೆ ಜೊತೆ ನಡೆದ ಗುಂಡಿನ ಕಾಳಗದಲ್ಲಿ 80 ಬ್ರಿಟಿಶ್ ಸೈನಿಕರು ಸತ್ತರು. 20 ಕ್ರಾಂತಿಕಾರಿಗಳೂ ಅಸು ನೀಗಿದರು. ಕಾಡೊಳಗೆ ಚದುರಿ ಹೋದ ಕ್ರಾಂತಿಕಾರಿಗಳನ್ನು ಬ್ರಿಟಿಶ್ ಸರಕಾರ ವ್ಯವಸ್ಥಿತವಾಗಿ ಬೇಟೆ ಮಾಡಿತು. ಗಣೇಶ್ ಘೋಷ್ ಸೆರೆ ಸಿಕ್ಕರೆ ಉಳಿದ ಕೆಲವರು ಹುತಾತ್ಮರಾದರು. ಸೂರ್ಯ ಸೆನ್ ಅವರ ತಂಡದ ಇನ್ನೊಬ್ಬ ಧೀರೋದಾತ್ತ ಕ್ರಾಂತಿಕಾರಿ ಕಲ್ಪನಾ ದತ್.   ತನ್ನ 17ನೇ ವಯಸ್ಸಿನಲ್ಲಿ ಈಕೆ ಚಿತ್ಗಾಂಗ್ ರೈಡ್ ನಲ್ಲಿ ಭಾಗವಹಿಸಿದ್ದರು. ಕಲ್ಪನಾ ದತ್ ವರ್ಷ ಕಾಲ ಬ್ರಿಟಿಶರ ಕೈಗೆ ಸಿಗದೇ ತಲೆ  ಮರೆಸಿಕೊಂಡರೂ ಕೊನೆಗೆ ಸೆರೆ ಸಿಕ್ಕರು. ಕಲ್ಪನಾ ದತ್  ಹಲವು ವರುಷಗಳ ಕಾಲ ಸೆರೆಮನೆ ವಾಸ ಅನುಭವಿಸಿ 1940 ರಲ್ಲಿ ಬಿಡುಗಡೆ ಹೊಂದಿದರು. ಬಳಿಕ ಅವರು ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಪಿ.ಸಿ ಜೋಷಿ ಅವರನ್ನು ವಿವಾಹವಾದರು. ಕಲ್ಪನಾ ದತ್ ಅವರು 1995 ರಲ್ಲಿ ತೀರಿಕೊಂಡರು.

ಕ್ರಾಂತಿಕಾರಿಗಳ ನಾಯಕ  ಸೂರ್ಯ ಸೇನ್ ಅವರ ಅಡುಗುದಾಣದ ಬಗ್ಗೆ ಬ್ರಿಟಿಶರ ಬಹುಮಾನದ ಆಸೆಗೆ ನೇತ್ರ ಸೆನ್ ಎಂಬಾತ ಬ್ರಿಟಿಶರಿಗೆ ಸುಳಿವು ಕೊಟ್ಟು ಸೂರ್ಯ ಸೆನ್ ಬಂಧನಕ್ಕೊಳಗಾದರು. ಈ ದ್ರೋಹಿ ನೇತ್ರ ಸೆನ್ ಬಹುಮಾನದ ಹಣ ಪಡೆಯುವ ಮೊದಲೇ ಇನ್ನೊಬ್ಬ ಕ್ರಾಂತಿಕಾರಿ ಕಿರಣ್ಮೊಯ್ ಸೆನ್  ಈ ನೇತ್ರ ಸೆನ್ ಮನೆಗೆ ನುಗ್ಗಿ ಆತನ ತಲೆ ಕತ್ತರಿಸಿ ಹಾಕಿದ್ದನು. ಈ ದ್ರೋಹಿ ನೇತ್ರ ಸೆನ್ ಪತ್ನಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಉತ್ಕಟ ಅಭಿಮಾನ ಹೊಂದಿದ್ದವಳು. ತನ್ನೆದುರೇ ತನ್ನ ಗಂಡನ ತಲೆ ತರಿದರೂ ಆಕೆ ಬ್ರಿಟಿಶರಿಗೆ ಈ ಹತ್ಯೆ ಮಾಡಿದ ಕ್ರಾಂತಿಕಾರಿಯ ಹೆಸರು ತಿಳಿಸಲಿಲ್ಲ. ಬಂಧನಕ್ಕೊಳಗಾದ ಸೂರ್ಯ ಸೆನ್ ಅವರನ್ನು  ಅವರ ಸಹ ಕ್ರಾಂತಿಕಾರಿ ತಾರಕೇಶ್ವರ ದಸ್ತಿದಾರ ಜೊತೆಗೆ ಜನವರಿ12,1934 ರಂದು ಗಲ್ಲಿಗೇರಿಸಲಾಯಿತು.

ತಮ್ಮ ಕೊನೆಯ ಪತ್ರದಲ್ಲಿ ಸೂರ್ಯ ಸೆನ್‌ ತನ್ನ ಕಾಮ್ರೇಡರಿಗೆ ಹೀಗೆ ಬರೆದರು, “ ಸಾವು ಕದ ಬಡಿಯುತ್ತಿತ್ತು. ನನ್ನ ಮನಸು ಅನಂತದೆಡೆಗೆ ಹಾರುತ್ತಿದೆ.ಇಂಥಾ ಶುಭ ಗಳಿಗೆಯಲ್ಲಿ ನಾನೇನು ನಿಮಗೆ ಬಿಟ್ಟು ಹೋಗಲು ಸಾಧ್ಯ? ಸ್ವತಂತ್ರ ಭಾರತ.. ಆ ಒಂದು ಕನಸನ್ನುಳಿದು ಇನ್ನೇನನ್ನೂ ಬಿಟ್ಟು ಹೋಗಲಾರೆ.ಎಪ್ರಿಲ್‌ 18, 1930 ನ್ನು ಎಂದಿಗೂ ಮರೆಯದಿರಿ. ಚಿತ್ತಗಾಂಗಿನ ಬಂಡಾಯವನ್ನು ಮರೆಯದಿರಿ. ಭಾರತದ ಸ್ವಾತಂತ್ರ್ಯದ ಬಲಿಗಂಬದಲ್ಲಿ ಪ್ರಾಣ ತೆತ್ತ ಕ್ರಾಂತಿಕಾರಿಗಳ ಹೆಸರನ್ನು ನೆತ್ತರ ಬಣ್ಣದಲ್ಲಿ,  ನಿಮ್ಮ ಹೃದಯದಲ್ಲಿ ಬರೆಯಿರಿ”

ನೆನಪಿಡಿ: ಈ ಕ್ರಾಂತಿಕಾರಿಗಳು ತಮ್ಮ  ಧೀರೋದಾತ್ತ ಚಟುವಟಿಕೆ ನಡೆಸಿ ಹುತಾತ್ಮರಾಗುತ್ತಿದ್ದಾಗ ಸಾವರ್ಕರ್‌  ಇದ್ದರು!! ಈ ದಿವ್ಯ ಚೇತನಗಳ ಬಗ್ಗೆ ಸಾವರ್ಕರ್‌ ಒಂದೂ ಮಾತಾಡಿದ ಪುರಾವೆಯೂ ಇಲ್ಲ ..ಅವರಾಗಲೇ ಪಿಂಚಣಿ ಪಡೆದು ಕೂತಿದ್ದರು

******

ಬಟುಕೇಶ್ವರ ದತ್

ಇವರು ಅಂಡಮಾನಿನ ಜೈಲು ಯಾತನೆ ಅನುಭವಿಸಿದ ಭಗತ್ ಸಿಂಗ್  ಜೊತೆಗಾರ. ಇವರು ಯಾರೂ ಕ್ಷಮಾದಾನ ಬೇಡಿ ಪತ್ರ ಬರೆಯಲಿಲ್ಲ. ಅಷ್ಟೇಕೆ ಬಿಡುಗಡೆಯ ಬಳಿಕ ಹೋರಾಟದಿಂದ ವಿಮುಖರಾಗಲಿಲ್ಲ .

ಬಟುಕೇಶ್ವರ್‌ ದತ್ – ಬಿ.ಕೆ.ದತ್,  ನವಂಬರ್ 10, 1910 ರಂದು ಪಶ್ಚಿಮ ಬಂಗಾಲದ ಪೂರ್ಬ ಬರ್ಧಮಾನ್‌ ಜಿಲ್ಲೆಯ ಖಂದಘೋಷ್‌ ಗ್ರಾಮದಲ್ಲಿ ಜನಿಸಿದರು. ಕಾನ್ಪುರ್‌ ಹೈಸ್ಕೂಲಿನಲ್ಲಿ ಮೆಟ್ರಿಕ್‌ ಪೂರೈಸುವ ವೇಳೆಗೆ ಅವರಿಗೆ ಚಂದ್ರಶೇಖರ್‌ ಆಜಾದ್‌  ಅವರ ಪರಿಚಯವಾಗಿತ್ತು. ಅನತಿ ಕಾಲದಲ್ಲಿ ಅವರು ಭಗತ್‌ಸಿಂಗ್‌ ನ ಆತ್ಮೀಯ ಕಾಮ್ರೇಡ್‌ ಆದರು. ಹಿಂದುಸ್ತಾನ್‌ ಸೋಷಿಯಲಿಸ್ಟ್‌ ರಿಪಬ್ಲಿಕನ್‌ ಅಸೋಸಿಯೇಶನ್‌  (HSRA) ನ ಸಕ್ರಿಯ ಸದಸ್ಯರಾದ ದತ್‌ ಬಾಂಬು ತಯಾರಿಕೆಯಲ್ಲಿ ಪರಿಣಿತಿ ಹೊಂದಿದ್ದರು. 1929 ರ ಅಸೆಂಬ್ಲಿ ಬಾಂಬು ಎಸೆತ ಪ್ರಕರಣದಲ್ಲಿ ಭಗತ್ ಸಿಂಗ್‌, ಸುಖ್‌ ದೇವ ಮತ್ತು ದತ್‌ ಅಸೆಂಬ್ಲಿಯಲ್ಲಿ ಹುಸಿ ಬಾಂಬು ಎಸೆದು ಇಂಕ್ವಿಲಾಬ್‌ ಜಿಂದಾಬಾದ್‌ ಘೋಷಣೆ ಕೂಗಿ ಕರಪತ್ರ ಎಸೆದು ಬ್ರಿಟಿಶ್‌ ಸರಕಾರವನ್ನು ಬೆಚ್ಚಿ ಬೀಳಿಸಿದರಷ್ಟೇ. 

ಭಗತ್ ಸಿಂಗ್  ಬಟುಕೇಶ್ವರ ದತ್

ಈ ಪ್ರಕರಣದಲ್ಲಿ  ಭಗತ್‌ ಸಿಂಗ್‌, ಸುಖ್‌ ದೇವ ಮತ್ತು ರಾಜಗುರು ನೇಣುಗಂಬಕ್ಕೇರಿದರೆ, ದತ್‌ ಅವರಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಅಂತೆಯೇ ಅವರನ್ನು ಅಂಡಮಾನ್ ಜೈಲಿಗೆ ಕಳಿಸಲಾಯಿತು. ವಿಚಾರಣಾಧೀನ ಖೈದಿಗಳಾಗಿದ್ದಾಗ ರಾಜಕೀಯ ಕೈದಿಗಳ ಸ್ಥಿತಿಗತಿ ಸುಧಾರಿಸಬೇಕೆಂದು ಭಗತ್‌ ಸಿಂಗ್‌ ಮತ್ತು ಬಿ.ಕೆ. ದತ್ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. 1937ರಲ್ಲಿ ಅಂಡಮಾನಿನಿಂದ ದೆಹಲಿ ಜೈಲಿಗೆ ದತ್‌ ಅವರನ್ನು ಸ್ಥಳಾಂತರಿಸಲಾಯಿತು. ಅವರ ಆರೋಗ್ಯ ತೀವ್ರ ಹದಗೆಟ್ಟ ಕಾರಣ 1938 ರಲ್ಲಿ ದತ್‌ ಅವರನ್ನು ಬ್ರಿಟಿಶ್‌ ಸರಕಾರ ಬಿಡುಗಡೆ ಮಾಡಿತು.

ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂಬ ಎಚ್ಚರಿಕೆಯನ್ನೂ ಅದು ನೀಡಿತ್ತು. ಆಗಲೇ ದತ್‌ ಕ್ಷಯರೋಗದಿಂದ ಬಳಲುತ್ತಿದ್ದರು.  ಆದರೂ ಬಿ.ಕೆ. ದತ್‌  ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು. ಈ ಕಾರಣಕ್ಕೆ ಮತ್ತೆ ಬ್ರಿಟಿಶ್‌ ಸರಕಾರ ದತ್‌ ಅವರನ್ನು ನಾಲ್ಕು ವರ್ಷ ಕಾಲ ಜೈಲಿಗೆ ತಳ್ಳಿತು. 1947 ರಲ್ಲಿ ದತ್‌ ಜೈಲಿನಿಂದ ಬಿಡುಗಡೆ ಹೊಂದಿದರು.

 ಸ್ವಾತಂತ್ರ್ಯಾನಂತರ ದತ್‌ ಜೀವನೋಪಾಯಕ್ಕೆ ಸಾರಿಗೆ ಏಜೆನ್ಸಿ ಇತ್ಯಾದಿ ಶುರು ಮಾಡಿದರೂ ಯಾವುದೂ ಕೈಗೆ ಹತ್ತಲಿಲ್ಲ. ಅವರ ಆರೋಗ್ಯ ಮತ್ತೆ ಮತ್ತೆ ಕೈಕೊಡುತ್ತಿತ್ತು. 1965 ರಲ್ಲಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಬಿ.ಕೆ. ದತ್‌ ಕೊನೆ ಉಸಿರೆಳೆದರು.

ಅವರ ಕೊನೆದಿನಗಳ ಅನಾರೋಗ್ಯದ ಅವಧಿಯಲ್ಲಿ ಭಗತ್‌ ಸಿಂಗ್‌ ಅವರ ತಾಯಿ ಬಿ.ಕೆ. ದತ್ ಅವರ ಬಳಿ ಇರುತ್ತಿದ್ದರು.

ತಾನು ಸತ್ತಾಗ ತನ್ನನ್ನು ಭಗತ್‌ ಸಿಂಗ್‌ ಸಮಾಧಿಯ ಬಳಿ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ದತ್‌ ಕೋರಿಕೆಯಂತೆ ದತ್‌ ಮರಣಾನಂತರ  ಭಗತ್‌ ಸಿಂಗ್‌ ಸಮಾಧಿಯ ಬಳಿಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ದೆಹಲಿಯಿಂದ ಪಂಜಾಬಿನ ವರೆಗಿನ  ದತ್‌ ಅವರ ಪಾರ್ಥಿವ ಶರೀರದ ಮೆರವಣಿಗೆ ಆ ಕಾಲದಲ್ಲಿ ಅತ್ಯಂತ ಹೆಚ್ಚು ಜನ ಭಾಗವಹಿಸಿದ್ದ ಮೆರವಣಿಗೆಯೆಂದೇ ಪರಿಗಣಿತವಾಗಿದೆ. 

 ಆಸ್ಪತ್ರೆಯಲ್ಲಿ ತನ್ನನ್ನು ಭೇಟಿ ಮಾಡಲು ಬಂದಿದ್ದ ಅಂದಿನ ರಾಷ್ಟ್ರಪತಿ ಮತ್ತು ಪ್ರಧಾನಿಯವರಲ್ಲಿ ಬಿ.ಕೆ.ದತ್‌, “ನೀವು ಕ್ರಾಂತಿಕಾರಿಗಳೆಂದರೆ ಬಂದೂಕು ಹಿಡಿದವರೆಂದಷ್ಟೇ ಯೋಚಿಸುತ್ತೀರಿ.  ಅವರು ಕನಸು ಕಂಡಿದ್ದ ಸಮಾಜದ ಚಿತ್ರವನ್ನೇ ಮರೆಯುತ್ತೀರಿ” ಎಂದಿದ್ದರು.

ಕ್ರಾಂತಿಕಾರಿಗಳನ್ನು ಕೊಂಡಾಡುವ ಆರೆಸ್ಸೆಸ್ ಮತ್ತು ಹಿಂದುತ್ವ ಶಕ್ತಿಗಳು ಈ ಕ್ರಾಂತಿಕಾರಿಗಳು ಪ್ರತಿನಿಧಿಸಿದ, ದುಡಿದ ಸಿದ್ಧಾಂತದ ಬಗ್ಗೆ ಮಾತೇ ಆಡುವುದಿಲ್ಲ.

 ಶಿವಾಜೀಕೀ ಜೈ ಎನ್ನುವ ಸೂಲಿಬೆಲೆ ಮರು ಕ್ಷಣ ಇಂಕ್ವಿಲಾಬ್‌ ಜಿಂದಾಬಾದ್‌ ಎಂದು ಪುಂಗಬಲ್ಲ! ಈ ಘೋಷಣೆಗೊಂದು ಚಾರಿತ್ರಿಕ ಹಿನ್ನೆಲೆ ಇದೆ. ಸಮ ಸಮಾಜದ ಕನಸು ಕಂಡಿದ್ದ ಕಮ್ಯುನಿಸ್ಟ್‌ ಕ್ರಾಂತಿಕಾರಿಗಳಾಗಿದ್ದ ಭಗತ್‌ ಸಿಂಗ್‌, ಬಿ.ಕೆ. ದತ್‌ ಮುಂತಾದ ಕ್ರಾಂತಿಕಾರಿಗಳು ಈ ಘೋಷಣೆಯನ್ನು ಜನಪ್ರಿಯಗೊಳಿಸಿದ್ದರು. ಅಂಥಾ ಪವಿತ್ರ ಘೋಷಣೆಯನ್ನೂ ಹಿಂದುತ್ವ ಶಕ್ತಿಗಳು ಕುಲಗೆಡಿಸಬಲ್ಲರು!!

**************

ಸೋಹನ್ ಸಿಂಗ್ ಬಾಖ್ನಾ

ಸೋಹನ್ ಸಿಂಗ್ ಬಾಖ್ನಾ ಜನವರಿ 22, 1870 ರಂದು ಅಮೃತಸರದ ಬಳಿಯ ಹಳ್ಳಿಯಲ್ಲಿ ಜನಿಸಿದರು.  ಪಂಜಾಬಿನಲ್ಲೇ ಓದಿ ಸ್ಥಳೀಯವಾಗಿ ರೈತರು ನಡೆಸುತ್ತಿದ್ದ ಬಿಡಿಬಿಡಿ ಪ್ರತಿಭಟನೆಗಳಲ್ಲಿ ಅಷ್ಟಿಷ್ಟು ಭಾಗವಹಿಸಿದರೂ  ಪಂಜಾಬಿನಲ್ಲಿ ರೈತರ ಸ್ಥಿತಿ ದಿನೇ ದಿನೇ ದಾರುಣವಾಗುತ್ತಿದ್ದಂತೆ, ಬಾಖ್ನಾ   ಅಮೆರಿಕಾಕ್ಕೆ ತೆರಳಿ, ಅಲ್ಲಿನ ಟಿಂಬರ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ದುಡಿಯತೊಡಗಿದರು. ನೂರಾರು ಭಾರತೀಯರು ಅಮೆರಿಕಾದಲ್ಲಿ ಉದ್ಯೋಗ ಅರಸಿ ಹೋದರೂ ಅಲ್ಲಿ ಅವರ ಬಗ್ಗೆ  ಸರಕಾರ ಉದಾಸೀನ ತೋರುತ್ತಿತ್ತು. ಅದೇ ವೇಳೆಗೆ ಭಾರತದ ಬ್ರಿಟಿಶ್ ದಬ್ಬಾಳಿಕೆ ವಿರುದ್ಧ ಈ ಭಾರತೀಯರು ಕ್ರಿಯಾಶೀಲರಾದರು. ಹೀಗೆ ಹುಟ್ಟಿದ್ದು ಗದ್ದಾರ್ ಸಂಘಟನೆ

ಸೋಹನ್ ಸಿಂಗ್ ಬಾಖ್ನಾ

ಸಶಸ್ತ್ರ ಕ್ರಾಂತಿ ಮೂಲಕ ಬ್ರಿಟಿಶ್ ಆಡಳಿತವನ್ನು ಕಿತ್ತೊಗೆಯುವುದು ಗದ್ದಾರ್ ಸಂಘಟನೆಯ ಗುರಿಯಾಗಿತ್ತು. ಬಾಖ್ನಾ ಗದ್ದಾರ್ ಸಂಘಟನೆಯ ನಾಯಕರಾದರು. ಕೊಮಗತಮರು ಹಡಗಿನಲ್ಲಿ  ಭಾರತದ ಕ್ರಾಂತಿಕಾರಿಗಳಿಗೆ ಶಸ್ತ್ರಾಸ್ತ್ರ ಸಾಗಿಸಿದ್ದೂ ಈ ಸಾಹಸದ ಭಾಗ.‌

ಈ ಉದ್ದೇಶಿತ ಕ್ರಾಂತಿಯಲ್ಲಿ ಭಾಗವಹಿಸಲು ಭಾಕ್ನಾ ಭಾರತ ತಲುಪಿದರು. ಆದರೆ ಆಗಲೇ ಬ್ರಿಟಿಶರು ಈ ಸಂಚಿನ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಕಾರಣ ಇದು ವಿಫಲವಾಯಿತು. ಅಕ್ಟೋಬರ್13, 1914 ರಂದು ಬ್ರಿಟಿಶರು ಬಾಖ್ನಾ ಅವರನ್ನು ಕೊಲ್ಕತ್ತಾದಲ್ಲಿ ಬಂಧಿಸಿದರು. ವಿಚಾರಣೆಯ ಬಳಿಕ ಶಿಕ್ಷೆಗೊಳಗಾದ ಬಾಖ್ನಾ ಅವರನ್ನು ಮೊದಲು ಮುಲ್ತಾನ್ ನ ಜೈಲಿನಲ್ಲಿ ಇರಿಸಲಾಯಿತು. ಬಳಿಕ ಕೊಯಂಬುತೂರ್  ಜೈಲಿಗೆ, ಅಲ್ಲಿಂದ ಯರವಾಡಾ ಜೈಲಿಗೆ ಸ್ಥಳಾಂತರಿಸಲಾಯಿತು. ಸಿಖ್ ಖೈದಿಗಳಿಗೆ ಪೇಟ ಹಕ್ಕಿನ ಬಗ್ಗೆ ಬಾಖ್ನಾ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಹೂಡಿದರು. ಮತ್ತೆ ಬ್ರಿಟಿಶ್ ಸರಕಾರ ಅವರನ್ನು ಲಾಹೋರ್ ಜೈಲಿಗೆ ಎತ್ತಂಗಡಿ ಮಾಡಿತು. ಅಲ್ಲಿ ಕೆಳ ಜಾತಿ ಸಿಖ್ಖರು ಮತ್ತು ಮೇಲ್ಜಾತಿ ಸಿಕ್ಖರ ನಡುವೆ ಪಂಕ್ತಿ ಬೇಧ ವಿರೋಧಿಸಿ ಬಾಖ್ನಾ ಮತ್ತೆ ಉಪವಾಸ ಸತ್ಯಾಗ್ರಹ ಹೂಡಿದರು! 1929 ರಲ್ಲಿ ಮತ್ತೆ ಭಗತ್ ಸಿಂಗ್ ಪರವಾಗಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾದರು. ಹದಿನಾರು ವರ್ಷಗಳ ಸುದೀರ್ಘ ಜೈಲುವಾಸದ ಬಳಿಕ 1930ರಲ್ಲಿ ಬಾಖ್ನಾ ಅವರ ಬಿಡುಗಡೆಯಾಯಿತು.

ಬಿಡುಗಡೆಯ ಬಳಿಕ ಅವರು ಕಾರ್ಮಿಕ ಮತ್ತು ರೈತ ಚಳವಳಿಯಲ್ಲಿ ತೀವ್ರವಾಗಿ ತೊಡಗಿಸಿ ಕೊಂಡರು. ಜೊತೆಗೆ ಕಮ್ಯುನಿಸ್ಟ್ ಪಕ್ಷದ ಜೊತೆಗೂ ಗುರುತಿಸಿಕೊಂಡರು. ಜೈಲಿನಲ್ಲಿದ್ದ ಇತರ ಗದ್ದರ್ ಸಂಘಟನೆಯ ಸದಸ್ಯರ ಬಿಡುಗಡೆಗೂ ಶ್ರಮಿಸಿದರು. ಎರಡನೇ ಮಹಾಯುದ್ಧದ ವೇಳೆಗೆ ಮತ್ತೆ ಬ್ರಿಟಿಶ್ ಸರಕಾರ ಅವರನ್ನು ಜೈಲಿಗೆ ತಳ್ಳಿತು. ಸ್ವಾತಂತ್ರ್ಯ ಸಿಕ್ಕ ಮೇಲೆಯೇ ಅವರಿಗೆ ಬಿಡುಗಡೆ ದೊರಕಿದ್ದು. ಆಗಲೇ 80 ರ  ಹತ್ತಿರ ವಯಸ್ಸಾಗಿದ್ದ ಈ ಧೀರೋದಾತ್ತ ವೃದ್ಧ ಕ್ರಾಂತಿಕಾರಿಯನ್ನು ಮಾರ್ಚ್31, 1948  ರಂದು ಸ್ವತಂತ್ರ ಭಾರತ ಬಂಧಿಸಿ, ಮೇ 8 ರಂದು ಬಿಡುಗಡೆ ಮಾಡಿತು. 

ಮತ್ತೆ ಪೋಲೀಸರು ಅವರನ್ನು ಬಂಧಿಸ ಹೊರಟಾಗ ನೆಹರೂ ಅವರಿಗೆ ಗೊತ್ತಾಗಿ, ಅವರ  ಬಂಧನಕ್ಕೆ ಬ್ರೇಕ್ ಬಿದ್ದಿತು. ತನ್ನ ಇಳಿಗಾಲದ ವರೆಗೂ ರೈತ- ಕಾರ್ಮಿಕರ ಪರವಾಗಿ ಚಳವಳಿ ಹೂಡುತ್ತಿದ್ದ ಈ ಕ್ರಾಂತಿಕಾರಿ ಭೀಷ್ಮ  ಡಿಸೆಂಬರ್ 21, 1968 ರಲ್ಲಿ ನಿಧನ ಹೊಂದಿದರು.

 ದೇಶದ ಮೊದಲ ಕ್ರಾಂತಿಕಾರಿ ಸಂಘಟನೆ ಗದ್ದಾರ್ ನ ನೇತಾರರಾಗಿ ಸುದೀರ್ಘ ಜೈಲುವಾಸ ಅನುಭವಿಸಿದರೂ,  ಸ್ವಾತಂತ್ರ್ಯ ಸಿಕ್ಕ ಬಳಿಕವೂ  ತಾನು ನಂಬಿದ ಸಮಸಮಾಜದ ಕನಸು ನನಸಾಗಲು ಈ ಜೀವ ಕೊನೆಯ ವರೆಗೂ ಹೋರಾಡಿತ್ತು. ಜೈಲಿನಲ್ಲಿರುವಾಗಲೂ  ತನ್ನದೇ ಧರ್ಮದ ಒಳ ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ್ದ ಇನ್‌ ಸೈಡರ್‌ ಕ್ರಿಟಿಕ್‌ ಬಾಖ್ನಾ ಹೊರ ಬಂದ ಮೇಲೂ ತನ್ನ ಅನುಯಾಯಿಗಳ ಬಿಡುಗಡೆಗೆ ಸತತ ಪ್ರಯತ್ನ ಮಾಡಿದ್ದ ಜೀವ.

*****

ತ್ರೈಲೋಕ್ಯನಾಥ್ ಚಕ್ರವರ್ತಿ

 ಅಂಡಮಾನಿನ ಜೈಲಿನ ಶಿಕ್ಷೆ ಸಹಿತ ತ್ರೈಲೋಕ್ಯನಾಥ್ ಚಕ್ರವರ್ತಿ ೩೦ ವರ್ಷ ಜೈಲಿನಲ್ಲಿದ್ದರು. ಸಾವರ್ಕರ್  ಅವರ ಸಹಖೈದಿಗಳಾಗಿದ್ದ ಚಕ್ರವರ್ತಿ ಕ್ಷಮೆ ಕೋರಿ ಪತ್ರ ಬರೆಯಲಿಲ್ಲ; ಅಷ್ಟೇಕೆ ಬಿಡುಗಡೆಯಾದ ಅನತಿ ಕಾಲದಲ್ಲಿ ಮತ್ತೆ ಹೋರಾಟಕ್ಕೆ ಧುಮುಕಿದ್ದರು! 

ತ್ರೈಲೋಕ್ಯನಾಥ್ ಚಕ್ರವರ್ತಿ

 ತ್ರೈಲೋಕ್ಯನಾಥ್ ಚಕ್ರವರ್ತಿ ಆಗಸ್ಟ್ 2, 1889 ರಂದು ಜನಿಸಿದರು. ಚಕ್ರವರ್ತಿಯವರು ಕ್ರಾಂತಿಕಾರಿ ಸಂಘಟನೆಯಾಗಿದ್ದ ಅನುಶೀಲನ್ ಸಮಿತಿಗೆ 1906 ರಲ್ಲಿ ಸೇರ್ಪಡೆಯಾದರು. 1908 ರಲ್ಲಿ ಬಂಧನಕ್ಕೊಳಗಾದ ಅವರು ಮತ್ತೆ 1912 ರಲ್ಲಿ ಕೊಲೆ ಮೊಕದ್ದಮೆಯಲ್ಲಿ ಬಂಧನಕ್ಕೊಳಗಾದರು. 1914 ರಲ್ಲಿ  ಬಾರಿಸಾಲ್ ಬಂಡಾಯ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚಕ್ರವರ್ತಿಯವರನ್ನು ಸೀದಾ ಅಂಡಮಾನ ಜೈಲಿಗೆ ಕಳಿಸಲಾಯಿತು. ಸಾವರ್ಕರ್ ಸಹೋದರರು ಆಗ ಚಕ್ರವರ್ತಿಯವರೊಂದಿಗೇ ಜೈಲು ಶಿಕ್ಷೆ ಅನುಭವಿಸುತ್ತಿದ್ದರು.

ಅಂಡಮಾನಿನ ಜೈಲು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಲು ಖೈದಿಗಳು ನಿರ್ಧರಿಸಿದಾಗ ಚಕ್ರವರ್ತಿ ಈ ಹೋರಾಟದಲ್ಲಿ ಭಾಗಿಯಾದರು.  ಈ ಬಗ್ಗೆ ತಮ್ಮ ಆತ್ಮ ಚರಿತ್ರೆಯಲ್ಲಿ ಹೀಗೆ ಬರೆಯುತ್ತಾರೆ- 

“ಅಂಡಮಾನಿನ ಜೈಲು ಖೈದಿಗಳಲ್ಲಿ ಮಂದಗಾಮಿ ಮತ್ತು ತೀವ್ರಗಾಮಿ ಎಂದು ಎರಡು ಗುಂಪುಗಳಿದ್ದವು. ಮಂದಗಾಮಿ ಗುಂಪಿನಲ್ಲಿ ಸಾವರ್ಕರ್‌ ಸಹೋದರರು ಮತ್ತು ಪುಲಿನ್‌ ಬಾಬು ಇದ್ದರು. ಅವರಿಗೆ ಜೈಲಿನಲ್ಲಿ ಒಂದಷ್ಟು ಸೌಲಭ್ಯಗಳು ದೊರಕಿದ್ದವು. ಅವರು ಜೈಲರ್‌ ಮತ್ತು ಸುಪರಿಂಟೆಂಡೆಂಟ್‌ ಅವರಿಗೆ ಹತ್ತಿರವಾಗಿದ್ದರು. ತಮಗೆ ದಕ್ಕಿರುವ ಸವಲತ್ತು ಕಳೆದುಕೊಳ್ಳಲು ಅವರಿಗೆ ಮನಸ್ಸಿರಲಿಲ್ಲ”

1922 ರಲ್ಲಿ ಬಿಡುಗಡೆಯಾಗಿದ್ದೇ ಮತ್ತೆ ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ ಆರೋಪದ ಮೇಲೆ 1924 ರಲ್ಲಿ ಬಂಧಿತರಾಗಿ ಮಾಂಡಲೇ ಜೈಲು ಸೇರಿದರು.  ಅಲ್ಲಿ ಅವರಿಗೆ ನೇತಾಜಿ ಅವರ ಪರಿಚಯವಾಯಿತು. 1928ರಲ್ಲಿ ಬಿಡುಗಡೆಯಾಗಿದ್ದೇ ಮತ್ತೆ ಅವರು ಹಿಂದುಸ್ತಾನ್ ರಿಪಬ್ಲಿಕನ್  ಆರ್ಮಿಯನ್ನು ಸೇರಿದರು. ಮತ್ತೆ 1930 ರಲ್ಲಿ ಜೈಲು ಸೇರಿದ ಅವರು 1938 ರಲ್ಲಿ ಬಿಡುಗಡೆ ಹೊಂದಿದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಹೋರಾಟ ಮಾಡಿದ್ದಕ್ಕಾಗಿ ಮತ್ತೆ ಬಂಧಿತರಾದ ಚಕ್ರವರ್ತಿ 1947 ರಲ್ಲಿ ಬಿಡುಗಡೆ ಹೊಂದಿದರು. ಆ ಬಳಿಕ ಅವರು ನೌಖಾಲಿಯಲ್ಲಿ ಪುನರ್ವಸತಿ ಕಾರ್ಯದಲ್ಲಿ ತೊಡಗಿದರು.

ದೇಶ ವಿಭಜನೆಯ ಬಳಿಕ ಅಂದಿನ ಪೂರ್ವ ಪಾಕಿಸ್ತಾನದಲ್ಲಿ  (ಇಂದಿನ ಬಾಂಗ್ಲಾ ದೇಶ) ನೆಲೆಸಿದ ಚಕ್ರವರ್ತಿ ಪಾಕಿಸ್ತಾನ್ ಸೋಷಿಯಲಿಸ್ಟ್ ಪಕ್ಷ ಸ್ಥಾಪಿಸಿದರು. ಪಾಕಿಸ್ತಾನದ ಅಸೆಂಬ್ಲಿ ಸದಸ್ಯರಾಗಿಯೂ ಆಯ್ಕೆಯಾದರು. 1958 ರಲ್ಲಿ ಸೇನಾಡಳಿತ ಅವರ ಎಲ್ಲಾ ಚಟುವಟಿಕೆಗಳಿಗೆ ನಿಷೇಧ ಹೇರಿತು. ಅನಾರೋಗ್ಯ ಬಾಧಿಸುತ್ತಿದ್ದ ಕಾರಣ ಅವರು ತಮ್ಮ ಕೊನೆಯ ವರುಷಗಳನ್ನು ತಮ್ಮ ಹುಟ್ಟೂರಿನಲ್ಲಿ ಕಳೆದರು. ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದ ಅವರನ್ನು ಹೆಚ್ಚಿನ ವೈದ್ಯಕೀಯ ಶುಶ್ರೂಷೆಗಾಗಿ 1970 ರಲ್ಲಿ ದೆಹಲಿಗೆ ಕರೆತರಲಾಯಿತು. ಅವರು ತಮ್ಮ ಹಿಂದಿನ ಕ್ರಾಂತಿಕಾರಿ ಸಹಯೋಗಿ ಸುರೇಂದ್ರ ಮೋಹನ್ ಘೋಷ್ ಅವರ ನಿವಾಸದಲ್ಲಿ  ಆಗಸ್ಟ್ 9. 1970 ರಂದು ಕೊನೆ ಉಸಿರೆಳೆದರು. ಪ್ರಧಾನಿ ಇಂದಿರಾ ಗಾಂಧಿ ಸಹಿತ ದೇಶವೇ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿತು.

ತ್ರೈಲೋಕ್ಯನಾಥ ಚಕ್ರವರ್ತಿ ಮತ್ತು ಸಾವರ್ಕರ್ ಒಂದೇ ಸಮಯದಲ್ಲಿ ಅಂಡಮಾನ್ ಜೈಲಿನಲ್ಲಿದ್ದರು. ಗಣೇಶ್ ಸಾವರ್ಕರ್ ಅವರಿಗೆ ಬೆಂಗಾಲಿ ಕಲಿಸಿ  ಅವರಿಂದ ತಾನು ಮರಾಠಿ ಕಲಿತಿದ್ದರು. ಗಣೇಶ್ ಸಾವರ್ಕರ್ ಅವರನ್ನು  ಗಣೇಶ್ ದಾ (ಅಣ್ಣ) ಎಂದು ಚಕ್ರವರ್ತಿ ಕರೆಯುತ್ತಿದ್ದರು. ಆದರೆ ಚಕ್ರವರ್ತಿ ಕ್ಷಮೆ ಕೋರಿ ಪತ್ರ ಬರೆಯಲಿಲ್ಲ. ಅಷ್ಟೇಕೆ ಪ್ರತೀ ಬಾರಿ ಬಿಡುಗಡೆಯಾದಾಗಲೂ ಮತ್ತೆ ಮತ್ತೆ ಸ್ವಾತಂತ್ರ್ಯ ಚಳವಳಿಗೆ ಧುಮುಕುತ್ತಿದ್ದರು.

ಎರಡನೇ ಮಹಾಯುದ್ಧದ ವೇಳೆಗೆ ದೊಡ್ಡ ಸಶಸ್ತ್ರ ಹೋರಾಟ ನಡೆಸಲು ನೇತಾಜಿಗೆ ಸಹಾಯ ಮಾಡುವ ಉದ್ದೇಶದಿಂದ ಚಕ್ರವರ್ತಿಯವರು ಹೆಡಗೇವಾರ್ ಮತ್ತು ಸಾವರ್ಕರ್ ಅವರನ್ನು ಸಂಪರ್ಕಿಸಿದ್ದರು. ಇಬ್ಬರಿಂದಲೂ ನಕಾರಾತ್ಮಕ ಉತ್ತರ ಬಂದ ಕಾರಣ ನಿರಾಸೆಗೊಳಗಾಗಿದ್ದರು.

***********

ಮಾತಾಂಗಿನಿ ಹಜ್ರಾ 

ಗಾಂಧಿಯಾಗಲೀ ಭಗತ್ ಆಗಲೀ ಅನಾಮಿಕರಲ್ಲೂ ದೇಶ ಭಕ್ತಿ, ಹೋರಾಟ ಮತ್ತು ಬಲಿದಾನದ ಸ್ಪೂರ್ತಿ ತುಂಬಿದ್ದರು. ಅನಾಮಿಕ ವಿಧವೆಯಾಗಿ  ಸವೆದು ಹೋಗಬಹುದಾಗಿದ್ದ ಮಾತಾಂಗಿನಿ ತನ್ನ 60 ರ ವಯಸ್ಸಿನಲ್ಲಿ ದಿಢೀರನೆ  ಚಳವಳಿಗೆ ಧುಮುಕಿದ್ದು ಆ ಕಾಲದ ಪವಾಡಗಳಲ್ಲೊಂದು.

ಮಾತಾಂಗಿನಿ ಹಜ್ರಾ 

ಮಾತಾಂಗಿನಿ ಹಜ್ರಾ  ಅಕ್ಟೋಬರ್ 19, 1870 ರಂದು ಜನಿಸಿದರು. ಹನ್ನೆರಡನೇ ವಯಸ್ಸಿಗೇ ಮಧ್ಯ ವಯಸ್ಸು ದಾಟಿದ್ದ ವಿಧುರನೊಬ್ಬನ ಜೊತೆ ಅವರ ವಿವಾಹವಾಯಿತು. 18 ನೇ  ವಯಸ್ಸಿಗೆ ವಿಧವೆಯಾದರು. ಇವರ ಬಾಲ್ಯ, ತಾರುಣ್ಯದ ಬಗ್ಗೆ  ಯಾವ ಮಾಹಿತಿಯೂ ಇಲ್ಲ. ತವರು ಮನೆಯಲ್ಲಿ ವಿಧವೆಯಾಗಿ ಅವರಿವರ ಲಾಲನೆ ಪಾಲನೆ ಮಾಡುತ್ತಾ ಈಕೆ ಜೀವನ ಸಾಗಿಸಿದರು. ನಿರಕ್ಷರ ಕುಕ್ಷಿ ಬೇರೆ. ಆದರೆ ಸ್ವಾತಂತ್ರ್ಯ ಚಳವಳಿ ಬಗ್ಗೆ ಅಪಾರ ಕುತೂಹಲ ಮತ್ತು  ಬೆಂಬಲದ ತುಡಿತ ಈಕೆಗೆ ಇತ್ತು. ತಾನು ಮುಂದೊಂದು ದಿನ ಹುತಾತ್ಮರ ಪಟ್ಟಿಗೆ ಸೇರುತ್ತೇನೆ ಎಂಬ ಕಲ್ಪನೆಯೂ ಈಕೆಗೆ ಇದ್ದಿರಲಾರದು. ಆದರೆ ಒಳ ತುಡಿತ ಹೇಗಿತ್ತೆಂದರೆ 1930 ರ ಅಸಹಕಾರ ಚಳವಳಿಯ ಸಂದರ್ಭದಲ್ಲಿ ತನ್ನೂರಿನ ಕಾಂಗ್ರೆಸ್ಸಿಗರು ಜಾಥಾ ನಡೆಸುತ್ತಿದ್ದಾಗ   ನೋಡಲೆಂದು ಮನೆಯ ಹೊಸ್ತಿಲು ದಾಟಿ ಬಂದ ಮಾತಾಂಗಿನಿ ನೇರ  ಅವರೊಂದಿಗೆ ನಡೆದರು!! ಅಲ್ಲಿಂದಾಚೆಗೆ ಹಜ್ರಾ ಎಲ್ಲಾ ಚಳವಳಿಯಲ್ಲೂ ಸಕ್ರಿಯವಾಗಿ ಭಾಗವಹಿಸಿದರು.  ಮನೆಯಿಂದ ಹೊರಗೆ ಬಂದು  ಚಳವಳಿಗೆ ಕಾಲಿಟ್ಟಾಗ ಆಕೆಗೆ 60 ವರ್ಷ!! ಉಪ್ಪಿನ ಸತ್ಯಾಗ್ರಹದಲ್ಲಿ ತನ್ನ ಪತಿಯ ಊರಿನಲ್ಲಿ ಉಪ್ಪು ತಯಾರಿಸಿ ಬಂಧನಕ್ಕೊಳಗಾದರು. ತದನಂತರ ಸರಕಾರದ ಜನ ವಿರೋಧಿ ಕಾನೂನು ವಿರುದ್ಧ ಚಳವಳಿಯಲ್ಲಿ ಭಾಗವಹಿಸಿ ಆರು ತಿಂಗಳು ಜೈಲು ವಾಸ ಅನುಭವಿಸಿದರು.

ಜೈಲಿನಿಂದ ಬಿಡುಗಡೆಯಾಗಿದ್ದೇ ಅಸ್ಪೃಶ್ಯರ ಜೊತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿದರು. ಗಾಂಧಿವಾದಿಯಾಗಿದ್ದ ಮಾತಾಂಗಿನಿ ತಾನೇ ನೂತ ನೂಲಿನ  ಬಟ್ಟೆ ತೊಡುತ್ತಿದ್ದರು. ಆಕೆಯ ವಯಸ್ಸಿನ ಹಿರಿತನದ ಕಾರಣಕ್ಕೆ ಆಕೆಯನ್ನು ಅಜ್ಜಿ ಗಾಂಧಿ ಎಂದೇ ಜನ ಕರೆಯುತ್ತಿದ್ದರು.

ಕ್ವಿಟ್ ಇಂಡಿಯಾ ಚಳವಳಿಯ ಅವಧಿಯಲ್ಲಿ ಮಿಡ್ನಾಪುರ್ ಜಿಲ್ಲೆಯ ಸರಕಾರಿ ಕಛೇರಿಗಳಿಗೆ ಮುತ್ತಿಗೆ ಹಾಕುವ ಚಳವಳಿ ಹಮ್ಮಿಕೊಳ್ಳಲಾಗಿತ್ತು. ತಮ್ಲೂಕ್ ಪೊಲೀಸ್ ಠಾಣೆಯ ಎದುರು ಮಾತಾಂಗಿನಿ ಹಜ್ರಾ ಅವರ ನೇತೃತ್ವದಲ್ಲಿ ಆರು ಸಾವಿರ  ಮಹಿಳೆಯರು ಜಮಾಯಿಸಿದ್ದರು.  144 ನೇ ಸೆಕ್ಷನ್ ಕಾರಣಕ್ಕೆ ಎಲ್ಲರೂ ಚದುರಬೇಕು ಎಂಬ ಪೊಲೀಸ್ ಆಜ್ಞೆಯನ್ನು ಚಳವಳಿಗಾರರು ಧಿಕ್ಕರಿಸಿದರು.  ಪೊಲೀಸರು ಬಂದೂಕು ಎತ್ತಿದಾಗ ಹಜ್ರಾ ಮುಂದೆ ಬಂದು ಗುಂಡು ಹಾರಿಸದಂತೆ ವಿನಂತಿಸುತ್ತಿರುವಾಗಲೇ ಪೊಲೀಸ್ ಗುಂಡು ಹಜ್ರಾ ಅವರನ್ನು ಘಾಸಿಗೊಳಿಸಿತು. ಹಜ್ರಾ ಶಾಂತವಾಗಿ  ವಂದೇ ಮಾತರಂ ಘೋಷಣೆ ಕೂಗುತ್ತಾ ಮುನ್ನಡೆಯುತ್ತಿದ್ದಂತೆ ಮತ್ತೆರಡು ಗುಂಡುಗಳು ಆಕೆಯ ಭುಜ ಮತ್ತು ಹಣೆ ಹೊಕ್ಕವು. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದಿದ್ದ ಹಜ್ರಾ ನೆಲಕ್ಕುರುಳಿದರು. ಆಗಲೂ ಧ್ವಜ ಮುಕ್ಕಾಗಿರಲಿಲ್ಲ. ಮಾತಾಂಗಿನಿ ಹಜ್ರಾ ಹುತಾತ್ಮರಾದಾಗ ಆಕೆಯ ವಯಸ್ಸು 72.

ಸ್ವಾತಂತ್ರ್ಯ ಸಿಕ್ಕಬಳಿಕ ಹತ್ತಾರು ಶಾಲೆಗಳು, ಬೀದಿಗಳಿಗೆ ಆಕೆಯ ಹೆಸರು ಇಟ್ಟು ಗೌರವಿಸಲಾಯಿತು. ಕೊಲ್ಕತ್ತಾದ ಮುಖ್ಯ ಮೈದಾನದಲ್ಲಿ ಮಾತಾಂಗಿನಿ ಹಜ್ರಾ ಅವರ ಬೃಹತ್ ಪ್ರತಿಮೆಯನ್ನೂ ಸ್ಥಾಪಿಸಿ ಗೌರವಿಸಲಾಯಿತು  2002ರಲ್ಲಿ ಆಕೆಯ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಲಾಯಿತು.

ಕೆ ಪಿ ಸುರೇಶ್‌

ಚಿಂತಕರು

More articles

Latest article