Saturday, July 27, 2024

ಕೊಲೆ ಬೆದರಿಕೆ ಹಾಕಿದಾತನನ್ನು ಕ್ಷಮಿಸಿ ದೂರು ಹಿಂದಕ್ಕೆ ಪಡೆದ ಜುಬೇರ್

Most read

ಬೆಂಗಳೂರು. ತಮಗೆ ಬಂದ ಕೊಲೆ ಬೆದರಿಕೆ ಸಂದೇಶನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಸೋಮವಾರ ತಮ್ಮ “X” ಖಾತೆಯಲ್ಲಿ ಹಂಚಿಕೊಂಡಿದ್ದ ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮೊಹಮ್ಮದ ಜುಬೇರ್,  ಆರೋಪಿ ಅರುಣ ಪೊರ್ವಾಲ ಜೈನ್ ಇ-ಮೇಲ್ ಸಂದೇಶದ ಮೂಲಕ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ಪೋಸ್ಟ್ ಅಳಿಸುತ್ತಿದ್ದೇನೆ ಎಂದು ಸೋಮವಾರ ಬರೆದುಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧ ಸಮರವನ್ನೇ ಸಾರಿರುವ ಜುಬೇರ್ ರನ್ನು ಬಲಪಂಥೀಯ ಟ್ರಾಲ್ ಪಡೆ ಸದಾ ಟಾರ್ಗೆಟ್ ಮಾಡಿ ನಿಂದನೆ, ಬೆದರಿಕೆ ಒಡ್ಡುತ್ತಿದ್ದು, ಈ ಪೈಕಿ ಅರುಣ್ ಎಂಬಾತನ ಟ್ವೀಟ್ ಗಂಭೀರವಾಗಿ ಪರಿಗಣಿಸಿದ್ದ ಜುಬೇರ್ ಬೆಂಗಳೂರು ಪೊಲೀಸ್ ಕಮಿಷನರ್ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದರು.

ಈ ನಡುವೆ ಪ್ರಕರಣ ದಾಖಲಾಗುವ ಭೀತಿಯಿಂದ ಅರುಣ್ ಕ್ಷಮಾ ಯಾಚನೆಯ ಪತ್ರ ಬರೆದು, ಇನ್ನೆಂದೂ ಈ ರೀತಿಯ ಮಾಡುವುದಿಲ್ಲ, ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚಿದ್ದ.

ಜುಬೇರ್ ದೂರು ನೀಡಿದ್ದನ್ನು ಹಂಚಿಕೊಂಡಿದ್ದ ಬಿಜೆಪಿ ವಕ್ತಾರ ಸಿನ್ಹಾ, ಕೊಲೆ “ಬೆದರಿಕೆಯ ಸುಳ್ಳು ಆರೋಪದಿಂದಾಗಿ ಅರುಣ ಬಂಧನವಾಗುವ ಸಾಧ್ಯತೆ ಇದೆ. ಆದರೆ ಹಲವು ಹಿಂದೂಗಳ ಸಾವಿಗೆ ಕಾರಣವಾಗಿರುವ ನೀವು ನಿರಾಯಾಸವಾಗಿ ತಿರುಗಾಡುತ್ತಾ ಇರಿ. ಇದು ಮುಸ್ಲಿಮರ ವಿಶೇಷ ಸೌಕರ್ಯ” ಎಂದು ಪ್ರಚೋದನಾತ್ಮಕ ಹೇಳಿಕೆಯನ್ನು ಪೋಸ್ಟ್ ಮಾಡಿದ್ದರು‌.

ಇದಕ್ಕೆ ಉತ್ತರ ನೀಡಿರುವ ಜುಬೇರ್, ಅರುಣ ಪೊರ್ವಾಲ ಜೈನ್ ತಮಗೆ ವೈಯಕ್ತಿಕವಾಗಿ ಇ-ಮೇಲ್ ಸಂದೇಶ ಕಳುಹಿಸಿ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ನಾನು ನನ್ನ ಪೋಸ್ಟ್ ಡಿಲೀಟ್ ಮಾಡಿದ್ದೇನೆ. ಅರುಣ ತನ್ನ ಈ ಕ್ಷಮಾಪತ್ರದಲ್ಲಿ, ಸಾಮಾಜಿಕ ಜಾಲತಾಣದ ನಿಮ್ಮಂತಹ ವಿಷಕಾರಿ ಪ್ರಭಾವಶಾಲಿಗಳನ್ನು ಮತ್ತು ವಿಷಬೀಜ ಬಿತ್ತುವ ಮಾಧ್ಯಮಗಳನ್ನು ತನ್ನ ತಪ್ಪಿಗೆ ಹೊಣೆಗಾರರನ್ನಾಗಿ ಮಾಡಿದ್ದಾನೆ ಎಂದು ಉಲ್ಲೇಖಿಸಿದ್ದಾರೆ.

ಮೊಹಮ್ಮದ್ ಜುಬೇರ್ ಹಿನ್ನೆಲೆ: ಮೂಲತಃ ಬೆಂಗಳೂರಿನವರಾದ ಮೊಹಮ್ಮದ್ ಜುಬೇರ್ ದೇಶದ ಹೆಸರಾಂತ ಪತ್ರಕರ್ತರ. ದೇಶದ ಯುವಜನತೆಯ ಭವಿಷ್ಯವನ್ನು ವಿನಾಶದತ್ತ ತಳ್ಳುತ್ತಿರುವ ಸುಳ್ಳುಸುದ್ದಿಗಳನ್ನು ಜಗತ್ತಿಗೆ ತಿಳಿಸಿ ಸತ್ಯದ ಅನ್ವೇಷಣೆಯಲ್ಲಿ ತೊಡಗಿಕೊಂಡಿರುವ ಪ್ರತಿಷ್ಠಿತ ಜಾಲತಾಣ ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕರೂ ಆಗಿದ್ದಾರೆ ಜುಬೇರ್.

ಸತ್ಯಾನ್ವೇಷಣೆಯಲ್ಲಿ ತೊಡಗಿರುವ ಜುಬೇರ್ ಅವರ ಧೈರ್ಯವನ್ನು ಕುಗ್ಗಿಸಲು ಬಲಪಂಥೀಯ ಶಕ್ತಿಗಳು ಸದಾ ಅವರ ಬಗ್ಗೆ ಅಪಪ್ರಚಾರ ಮಾಡುತ್ತಲೇ ಬರುತ್ತಿವೆ. ಅವರ ವಿರುದ್ಧ ನಿರಂತರವಾಗಿ ನಿಂದನೆ, ಬೆದರಿಕೆಗಳನ್ನು ಒಡ್ಡುತ್ತಿವೆ. ಜುಬೇರ್ 2018ರಲ್ಲಿ ಮಾಡಿದ ಟ್ವೀಟ್ ಒಂದು ಹಿಂದೂ ಧರ್ಮಕ್ಕೆ ಅಪಚಾರ ಮಾಡಿದೆ ಎಂದು ಆರೋಪಿಸಿ ಹಿಂದೂ ಮತಾಂಧರ ದೂರಿನ ಹಿನ್ನೆಲೆಯಲ್ಲಿ 2022ರಲ್ಲಿ ಒಂದು ತಿಂಗಳ ಕಾಲ ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಇವರ ಬಂಧನದ ವಿರುದ್ಧ ನರೇಂದ್ರ ಮೋದಿಯವರ ನಿರಂಕುಶ ಆಡಳಿತ ಟೀಕೆಗೆ ಗುರಿಯಾಯಿತು. ಜುಬೇರ್ ಅವರ ವಿರುದ್ಧದ ಈ ಕ್ರಮ ಆಲ್ಟ್ ನ್ಯೂಸ್ ಮಾಡಿದ ಸತ್ಯಾನ್ವೇಷಣೆಯ ವಿರುದ್ಧ ಸೇಡು ಎಂದು ಭಾರತದ ಪತ್ರಕರ್ತರ ವಲಯ, ಮಾನವ ಹಕ್ಕುಗಳ ಸಂಘಟನೆ ಹಾಗೂ ವಿರೋಧ ಪಕ್ಷಗಳ ರಾಜಕೀಯ ವಲಯದಲ್ಲಿ ಕಡು ಟೀಕೆಗಳು ಕೇಳಿಬಂದವು.

More articles

Latest article