Saturday, December 7, 2024

ಕ್ರಾಂತಿಕಾರಿ ಸಾಯಿಬಾಬಾ ಅಮರ್ ರಹೆ..

Most read

ಕ್ರಾಂತಿಕಾರಿ ವಿದ್ವಾಂಸ, ಮಾನವ ಹಕ್ಕುಗಳ ಹೋರಾಟಗಾರ ಪ್ರೊ.ಜಿ.ಎನ್.ಸಾಯಿಬಾಬಾರವರು ಪ್ರಭುತ್ವ ಪ್ರಾಯೋಜಿತ ಪಿತೂರಿಗೊಳಗಾಗಿ ಹುತಾತ್ಮರಾಗಿದ್ದಾರೆ. ಸಾಯಿಬಾಬಾರವರ ಮೇಲೆ ಸುಳ್ಳು ಕೇಸು ದಾಖಲಿಸಿ ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ ಮಹಾರಾಷ್ಟ್ರ ಪೊಲೀಸರು, ಪೊಲೀಸರ ಮೇಲೆ ಒತ್ತಡ ಹೇರಿ ಸಾಯಿಬಾಬಾರವರನ್ನು ಜೈಲಿಗೆ ಕಳುಹಿಸಿದ ಮಹಾರಾಷ್ಟ್ರದ ಬಿಜೆಪಿ ಸರಕಾರ, ಶಾಸಕಾಂಗ, ಕಾರ್ಯಾಂಗದ ಮೇಲೆ ಒತ್ತಾಯ ಹೇರಿದ ಕೇಂದ್ರದ ಮೋದಿ ಸರಕಾರ, ವೈದ್ಯಕೀಯ ಚಿಕಿತ್ಸೆ ಕೊಡಿಸದೇ ಅಮಾನವೀಯತೆ ಮೆರೆದ ಜೈಲಾಧಿಕಾರಿಗಳು ಹಾಗೂ ಅನಾರೋಗ್ಯಪೀಡಿತ ವ್ಯಕ್ತಿಗೆ ಜಾಮೀನು ಕೊಡದೆ ಹತ್ತು ವರ್ಷಗಳ ಕಾಲ ನ್ಯಾಯನಿರ್ಣಯ ಕೊಡುವಲ್ಲಿ ವಿಳಂಬ ಮಾಡಿದ ನ್ಯಾಯಾಂಗ ವ್ಯವಸ್ಥೆ… ಈ ಎಲ್ಲರೂ ಎಲ್ಲವೂ ಸಾಯಿಬಾಬಾ ರವರ ಕೊ*ಲೆಗೆ ಕಾರಣೀಕರ್ತರು ಎಂದು ಹೇಳುವ ಶಶಿಕಾಂತ ಯಡಹಳ್ಳಿಯವರು ನುಡಿನಮನ ಇಲ್ಲಿದೆ. ಅಗಲಿದ ಚೇತನಕ್ಕೆ ಗೌರವದ ಅಂತಿಮ ನಮನಗಳು.

ವಿಚಾರವಾದಿ ಮಾನವಹಕ್ಕು ಹೋರಾಟಗಾರ ಪ್ರೊ.ಜಿ.ಎನ್.ಸಾಯಿಬಾಬಾ ರವರು ಅಕ್ಟೋಬರ್ 12ರಂದು ನಿಧನರಾಗಿದ್ದಾರೆ. 58 ವಯೋಮಾನದ ಅವರದ್ದು ಖಂಡಿತಾ ಸಾಯುವ ವಯಸ್ಸಲ್ಲ. ಈ ಸಾವು ಸಾವಲ್ಲ, ಪ್ರಭುತ್ವ ಪ್ರಾಯೋಜಿತ ಸಂಚಿನ ಕೊ*ಲೆ. 

ಸಾಯಿಬಾಬಾರನ್ನು ಒಂದಲ್ಲಾ ಎರಡಲ್ಲಾ ಹತ್ತು ವರ್ಷಗಳ ಕಾಲ ವಿನಾಕಾರಣ ಜೈಲಿನಲ್ಲಿ ಬಂಧಿಸಿಡಲಾಗಿತ್ತು. ಅವರ ಕುಟುಂಬದವರು ಅನೇಕ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೂ ಬಿಡುಗಡೆ ಮಾಡದೇ ಬಂಧೀಖಾನೆಯಲ್ಲಿ ನರಕದರ್ಶನ ಮಾಡಿಸಲಾಯಿತು. 

ಚಿಕ್ಕ ವಯಸ್ಸಿನಿಂದಲೂ ಪೋಲಿಯೋ ಪೀಡಿತರಾಗಿದ್ದ ಸಾಯಿಬಾಬರವರ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ಗಾಲಿಖುರ್ಚಿಯೇ ಚಲನೆಯ ಸಂಗಾತಿಯಾಗಿತ್ತು. ಇಂತಹ ಅಂಗವೈಕಲ್ಯ ಇರುವ ವ್ಯಕ್ತಿಗೆ ಹೆದರಿದ ಮೋದಿ ಸರಕಾರವು ಅವರನ್ನು ಜೈಲಿಗೆ ದೂಡಿ ವೈದ್ಯಕೀಯ ಚಿಕಿತ್ಸೆಯನ್ನೂ ಕೊಡಿಸದೆ ಮಾನವತಾವಾದಿಯನ್ನು ಅಮಾನವೀಯವಾಗಿ ಹಿಂಸಿಸಿತು. 

ಪ್ರೊ. ಸಾಯಿಬಾಬಾ

ಇಷ್ಟಕ್ಕೂ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಸಾಯಿಬಾಬಾರವರು ಭಯೋತ್ಪಾದಕರಾಗಿರಲಿಲ್ಲ, ಸಂಚು ವಂಚನೆ ಕೊಲೆ ಸುಲಿಗೆ ಮಾಡಿರಲಿಲ್ಲ. ಅಪ್ಪಟ ದೇಶಪ್ರೇಮಿಯಾಗಿದ್ದ ಅವರು ದೇಶದ್ರೋಹ ಮಾಡಲೂ ಸಾಧ್ಯವಿರಲಿಲ್ಲ. ಆದರೂ ಕ್ರೂರ ಪ್ರಭುತ್ವ ನೆಟ್ಟಗೆ ನಡೆಯಲೂ ಬಾರದ ವ್ಯಕ್ತಿಯನ್ನು ಬಂಧಿಖಾನೆಯಲ್ಲಿ ಬಂಧಿಸಿಟ್ಟಿತು? ಯಾಕೆ?

ಯಾಕೆಂದರೆ.. ಸಾಯಿಬಾಬಾ ಮಹಾನ್ ಮಾನವತಾವಾದಿಯಾಗಿದ್ದರು, ಮಾನವ ಹಕ್ಕುಗಳ ಮೇಲಿನ ದಮನದ ವಿರುದ್ಧ ಧ್ವನಿ ಎತ್ತುತ್ತಿದ್ದರು. ದಮನಿತ ಜನರ ಪರವಾಗಿ ಲೇಖನ ಬರೆದು ಸರಕಾರಿ ಯಂತ್ರಾಂಗದ ದೌರ್ಜನ್ಯವನ್ನು ಖಂಡಿಸುತ್ತಿದ್ದರು. ಮೋದಿ ಸರಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸುತ್ತಿದ್ದರು. ಇದೇ ಆಳುವ ವ್ಯವಸ್ಥೆಗೆ ನುಂಗಲಾರದ ತುತ್ತಾಯಿತು. ಹೇಗಾದರೂ ಮಾಡಿ ಜನರನ್ನು ಎಚ್ಚರಿಸುವ ಧ್ವನಿಯನ್ನೇ ದಮನಿಸಲು ಸುಳ್ಳು ಆರೋಪ ಹೊರಿಸಲಾಯ್ತು. ‘ನಕ್ಸಲ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ’ ಎಂದು ಕೇಸ್ ದಾಖಲಿಸಿದ ಮಹಾರಾಷ್ಟ್ರದ ಪೊಲೀಸರು 2014 ರಲ್ಲಿ ಬಂಧಿಸಿದರು. ದೆಹಲಿ ವಿಶ್ವವಿದ್ಯಾಲಯದ ರಾಮ್ ಲಾಲ್ ಆನಂದ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಸಾಯಿಬಾಬರವರನ್ನು ವೃತ್ತಿಯಿಂದ ಅಮಾನತ್ತು ಗೊಳಿಸಲಾಯ್ತು. ಹತ್ತು ವರ್ಷಗಳ ಕಾಲ ಅನಾರೋಗ್ಯಪೀಡಿತ ವ್ಯಕ್ತಿಯನ್ನು ಪ್ರಭುತ್ವ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿತು. ಕನಿಷ್ಟ ಅಗತ್ಯ ಚಿಕಿತ್ಸೆಯನ್ನೂ ಕೊಡಿಸದೆ ಹಿಂಸಿಸಿತು.

ಇಷ್ಟೆಲ್ಲಾ ದೌರ್ಜನ್ಯಕ್ಕೆ ಒಳಗಾದರೂ ಸಾಯಿಬಾಬಾರವರು ಸರಕಾರದ ಕ್ಷಮಾಪಣೆ ಕೇಳಲಿಲ್ಲ. ತಪ್ಪಾಯಿತು ಎಂದು ಒಪ್ಪಿಕೊಳ್ಳಲಿಲ್ಲ. ಪ್ರಭುತ್ವದ ಪರ ಬಹುಪರಾಕ್ ಹೇಳಲಿಲ್ಲ. ಜನರ ಪರವಾದ ನಿಲುವಿನಿಂದ ವಿಮುಖರಾಗಲಿಲ್ಲ. ಪ್ರಭುತ್ವದ ಬೆದರಿಕೆಗೆ ಬಗ್ಗಲಿಲ್ಲ. ಅವರ ದೇಹದ 90% ಭಾಗ ಅಂಗವೈಕಲ್ಯಕ್ಕೆ ಒಳಗಾಗಿ ತೀವ್ರ ಸ್ವರೂಪದ ಅನಾರೋಗ್ಯ ಕಾಡುತ್ತಿದ್ದರೂ ಕಾನೂನು ಹೋರಾಟ ಮಾಡುವುದನ್ನು ನಿಲ್ಲಿಸಲಿಲ್ಲ.

ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿತು. ಕಾನೂನು ಹೋರಾಟದಲ್ಲಿ ನ್ಯಾಯ ಸಾಯಿಬಾಬಾರ ಪರವಾಗಿತ್ತು. ಸಾಯಿಬಾಬಾರವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ತೀರ್ಪಿತ್ತ ಬಾಂಬೇ ಹೈಕೋರ್ಟ್ 2024 ರಲ್ಲಿ ಜೈಲಿನಿಂದ ಬಿಡುಗಡೆ ಮಾಡಿತು. ಅಷ್ಟರಲ್ಲಿ ಸಾಯಿಬಾಬಾರವರ ಆರೋಗ್ಯ ತುಂಬಾ ಹದಗೆಟ್ಟಿತ್ತು. ರಕ್ತನಾಳದ ಊತ, ನರಮಂಡಲ ಸಂಬಂಧಿತ ಖಾಯಿಲೆ, ತೀವ್ರ ರಕ್ತದೊತ್ತಡಗಳಿಂದ ಬಾಧೆಗೊಳಗಾಗಿ ಬಳಲುತ್ತಿದ್ದರು. ಬಂಧಿಖಾನೆಯಿಂದ ಬಿಡುಗಡೆಯಾದ ಏಳು ತಿಂಗಳ ನಂತರ ಜನರಿಗಾಗಿ ಮಿಡಿದ ಹೃದಯವಂತನ ಜೀವ ತಣ್ಣಗಾಯಿತು. ಪ್ರಭುತ್ವದ ಕ್ರೌರ್ಯಕ್ಕೆ ಇನ್ನೊಬ್ಬ ಹೋರಾಟಗಾರನ ಜೀವ ಬಲಿಯಾಯಿತು. ಜನಹೋರಾಟದ ದಾರಿಯಲ್ಲಿ ಸಾಯಿಬಾಬಾರವರ ಹೆಸರು ದಾಖಲಾಯಿತು.

ಪ್ರೊ.ಸಾಯಿಬಾಬಾರವರ ಸಾವನ್ನು ಸಾವು ಎಂದು ಹೇಳಲು ಸಾಧ್ಯವೇ ಇಲ್ಲ. ಇದೊಂದು ಪ್ರಭುತ್ವ ಪ್ರಾಯೋಜಿತ ಪಿತೂರಿ. ಎಚ್ಚೆತ್ತ ಧ್ವನಿಯನ್ನು ಮೌನವಾಗಿಸುವ ಸರಕಾರಿ ಶಡ್ಯಂತ್ರ. ಸಾಯಿಬಾಬಾರವರ ಮೇಲೆ ಸುಳ್ಳು ಕೇಸು ದಾಖಲಿಸಿ ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ ಮಹಾರಾಷ್ಟ್ರ ಪೊಲೀಸರು, ಪೊಲೀಸರ ಮೇಲೆ ಒತ್ತಡ ಹೇರಿ ಸಾಯಿಬಾಬಾರವರನ್ನು ಜೈಲಿಗೆ ಕಳುಹಿಸಿದ ಮಹಾರಾಷ್ಟ್ರದ ಬಿಜೆಪಿ ಸರಕಾರ, ಶಾಸಕಾಂಗ, ಕಾರ್ಯಾಂಗದ ಮೇಲೆ ಒತ್ತಾಯ ಹೇರಿದ ಕೇಂದ್ರದ ಮೋದಿ ಸರಕಾರ, ವೈದ್ಯಕೀಯ ಚಿಕಿತ್ಸೆ ಕೊಡಿಸದೇ ಅಮಾನವೀಯತೆ ಮೆರೆದ ಜೈಲಾಧಿಕಾರಿಗಳು ಹಾಗೂ ಅನಾರೋಗ್ಯಪೀಡಿತ ವ್ಯಕ್ತಿಗೆ ಜಾಮೀನು ಕೊಡದೆ ಹತ್ತು ವರ್ಷಗಳ ಕಾಲ ನ್ಯಾಯನಿರ್ಣಯ ಕೊಡುವಲ್ಲಿ ವಿಳಂಬ ಮಾಡಿದ ನ್ಯಾಯಾಂಗ ವ್ಯವಸ್ಥೆ… ಈ ಎಲ್ಲರೂ ಎಲ್ಲವೂ ಸಾಯಿಬಾಬಾರವರ ಕೊಲೆಗೆ ಕಾರಣೀಕರ್ತರು. ಜನಪರ ಹೋರಾಟಗಾರನ ವಿರುದ್ಧ ಹೀಗೆ ಇಡೀ ವ್ಯವಸ್ಥೆಯೇ ತಿರುಗಿಬಿದ್ದು  ಹತ್ತು ವರ್ಷಗಳ ಕಾಲ ಅವರನ್ನು ಹಿಂಸಿಸಿ ಅವರ ಸಾವಿಗೆ ಕಾರಣವಾಗಿದ್ದು ಅತ್ಯಂತ ಅಮಾನವೀಯ. 

ಜನಪರ ಹೋರಾಟದ ಹಾದಿಯಲಿ ಸಾಗಿ, ಪ್ರಭುತ್ವದ ದಮನಕ್ಕೊಳಗಾಗಿ ಹುತಾತ್ಮರಾದ ಸಾಯಿಬಾಬಾರವರಿಗೆ ಲಾಲ್ ಸಲಾಂ. ಕ್ರಾಂತಿಕಾರಿ ಸಾಯಿಬಾಬಾ ಅಮರ್ ರಹೆ..

ಸೆರೆಮನೆ ಕುರಿತು  ಪ್ರೊ. ಸಾಯಿಬಾಬಾರವರು ಬರೆದ “Why Do You Fear My Way So Much”  ಕವನ ಸಂಕಲನದ ಈ ಒಂದು ಕವನವನ್ನು ಶಿವಸುಂದರ್ ರವರು ಅನುವಾದ ಮಾಡಿದ್ದಾರೆ. 

ನಿಜವಾದ ಸೆರೆಮನೆ ಇರುವುದು ಎಲ್ಲಿ?

ಗೆಳೆಯಾ,

ನಿಜವಾದ ಸೆರೆಮನೆ

ಇರುವುದು..

ಆಳೆತ್ತರದ ಗೋಡೆಗಳ ಹಿಂದೆಯೂ ಅಲ್ಲ…

ಏಕಾಂತ ಶಿಕ್ಷೆಯಲ್ಲೂ  ಅಲ್ಲ…

ಪಹರೆಯ ಗಸ್ತಿನ 

ನಡುಗಿಸುವ  ಗುಡುಗಿನಲ್ಲೂ ಅಲ್ಲ..

ಕೂಡಿಹಾಕುವ ಲಾಕಪ್ಪಿನಲ್ಲೂ ಅಲ್ಲ

ಬಣಗುಟ್ಟುವ ಹಗಲುಗಳೂ ಅಲ್ಲ

ಬರಿದಾದ ಇರುಳುಗಳೂ

ಅಲ್ಲ..

ಗೆಳೆಯನೇ…

ನಿಜವಾದ ಸೆರೆಮನೆಯಿರುವುದು..

ನ್ಯಾಯಾಧೀಶರ ಮೇಜಿನ ಮೇಲೆ 

ಮೆರೆಯುತ್ತಿರುವ ಸುಳ್ಳುಗಳ

ನೆರಳಲ್ಲಿ…

ಗೆಳೆಯ,

ನಿಜವಾದ ಸೆರೆಮನೆಯಿರುವುದು…

ಜನರ ಶತ್ರುಗಳು 

ನನ್ನ ಬಗ್ಗೆ ಹರಡಿದ ಕಟ್ಟುಕತೆಗಳಲ್ಲಲ್ಲ  ..

ಅಥವಾ

ನ್ಯಾಯವಿಚಾರಣೆಯೆಂಬ  

ತಂತ್ರ-ಕುತಂತ್ರಗಳಲ್ಲೂ  ಅಲ್ಲ..

ನಿಜವಾದ ಸೆರೆಮನೆಯಿರುವುದು…

ಕೋಟಿಕೋಟಿ ಜನಗಳು 

ಅನ್ಯಾಯದುರಿಯಲ್ಲಿ  ಬೇಯುತ್ತಿದ್ದರೂ 

ಬೀಗ ಒಡೆಯದ ಮೌನದಲ್ಲಿ .. 

ಕೆಲವು ಮೌನಗಳು ಹೇರಲ್ಪಟ್ಟವು..

ಉಳಿದವು

ನಮಗೆ ನಾವೇ ಹೇರಿಕೊಂಡವು!

ಕೆಲವು ನಿಷೇಧಗಳಿಗೆ 

ಆದೇಶವಿದ್ದರೆ..

ಉಳಿದವೆಲ್ಲ 

ವಿಧೇಯರಾಗಿ ನಾವೇ 

ವಿಧಿಸಿಕೊಂಡವು…!

ನಿಜ ಸೆರೆಯ

ಈ ಜಾಲ 

ಬೇಧಿಸುವುದು ಹೇಗೆ ಗೆಳೆಯ ? 

ನಿಜವಾದ ಸೆರೆ 

ಲಾಠಿ ಹುಟ್ಟಿಸುವ ಭೀತಿಯಲ್ಲಿಲ್ಲ .. 

ಬದಲಿಗೆ .. 

ಮಾತಿಲ್ಲದವರಿಗೆ ಮಾತುಕೊಟ್ಟವರೊಳಗೆ 

ಇಣುಕುವ  ಭೀತಿಯಲ್ಲಿದೆ .. 

ಜರ್ಜರವಾಗಿ ಜೀರ್ಣಾವಸ್ಥೆಯಲ್ಲಿರುವ 

ನೈತಿಕತೆಯಲ್ಲಿದೆ ..

ಬಿಡುಗಡೆಗಾಗಿ ಮಾಡಿದ 

ಕೂಡು ಹೋರಾಟಗಳ ವಿಸ್ಮೃತಿಯಲ್ಲಿದೆ..

ಗೆಳೆಯ ,

ನಮ್ಮ ಸುಂದರ ಲೋಕವನ್ನು 

ನಿಜವಾದ  ಸೆರೆಮನೆಯಾಗಿಸುವುದು 

ಇವು.. 

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಧಾರ್ಮಿಕ ಕ್ಷೇತ್ರಗಳಿಗೆ ಪುರಾಣ ತುರುಕುವುದು ಮೌಢ್ಯವಲ್ಲವೇ?

More articles

Latest article