Thursday, December 12, 2024

ಧಾರ್ಮಿಕ ಕ್ಷೇತ್ರಗಳಿಗೆ ಪುರಾಣ ತುರುಕುವುದು ಮೌಢ್ಯವಲ್ಲವೇ?

Most read

ಈಗಿನ ವಿಷಮ ರಾಜಕೀಯ ಪರಿಸ್ಥಿತಿಯ ಕಾಲದಲ್ಲಿ ಗಮನಿಸ ಬೇಕಾದುದೇನೆಂದರೆ, ನಮ್ಮ ಈಗಿನ ಸಮಾಜದಲ್ಲಿ ವಿಶಾಲ ಮನಸ್ಸಿನ ಜಾತ್ಯತೀತರು ಕೇವಲ ಒಂದು ಪಾಲಾದರೆ ಸಂಕುಚಿತ ಬುದ್ಧಿಯ ಜಾತಿವಾದಿಗಳು ಆರು ಪಾಲು ಹೆಚ್ಚು ಇದ್ದಾರೆ ಎಂಬುದಕ್ಕೆ ದ್ಯೋತಕ ಏಳು ದೇವಿಯರ ಸಸಿಹಿತ್ಲು ಕ್ಷೇತ್ರ ಪುರಾಣ. ಹಾಗಾಗಿ ಜಾತಿ ತಾರತಮ್ಯದ ಸಮರ್ಥನೆ ನಿಲ್ಲಿಸಿ ಸಮಾಜದ ಒಳಿತಿಗಾದರೂ ಇನ್ನು ಮುಂದೆ ಇಂತಹಾ ಅಸಂಬದ್ಧ ಕ್ಷೇತ್ರ ಪುರಾಣ ಪ್ರಚುರ ಪಡಿಸುವುದನ್ನು ನಾವು ನಿಲ್ಲಿಸಬೇಕು ಪ್ರವೀಣ್‌ ಎಸ್‌ ಶೆಟ್ಟಿ, ಚಿಂತಕರು.

ನೋಬಲ್ ಪ್ರಶಸ್ತಿ ವಿಜೇತ ಜಾರ್ಜ್ ಬರ್ನಾರ್ಡ್ ಶಾರನ್ನು ಅವರ ಮಿತ್ರನೊಬ್ಬ ಕೇಳಿದನಂತೆ – ಈ ಜಗತ್ತಿನಲ್ಲಿ ಅತಿ ಹೆಚ್ಚು ದುರುಪಯೋಗ ಆಗುತ್ತಿರುವ ಶಬ್ದ ಯಾವುದು? ಎಂದು. ಅದಕ್ಕೆ ಬರ್ನಾರ್ಡ್ ಶಾ ಉತ್ತರಿಸಿದ್ದು “ಗಾಡ್” (ದೇವರು) ಎಂಬುದಾಗಿ!  ಜಗತ್ತಿನ ಎಲ್ಲಾ ಧರ್ಮಗಳಲ್ಲಿ, ಎಲ್ಲಾ ಭಾಷೆಗಳಲ್ಲಿ, ಎಲ್ಲಾ ದೇಶಗಳಲ್ಲಿ ಅತಿ ಹೆಚ್ಚು ದುರುಪಯೋಗ ಆಗಿರುವ ಮತ್ತು ಆಗುತ್ತಿರುವ ಶಬ್ದವೇ ‘ದೇವರು’ ಅಥವಾ ಅದಕ್ಕೆ ಸರಿಸಮನಾದ ಶಬ್ದಗಳು ಎಂಬುದು ಸತ್ಯ. ದೈವ-ಕೇಂದ್ರಿತ ((God-Centric) ಧರ್ಮಗಳಲ್ಲಿ ಮಾತ್ರವಲ್ಲ ಬೌದ್ಧ-ಜೈನದಂತಹಾ ದೇವರ ಕಲ್ಪನೆ ಇಲ್ಲದ ‘ತತ್ವ ಕೇಂದ್ರಿತ’ (Ethics- Centric) ಧರ್ಮಗಳಲ್ಲೂ ಧರ್ಮ ಸಂಸ್ಥಾಪಕರ ಅಥವಾ ಪ್ರವಾದಿಗಳ ಹೆಸರಿನ ದುರುಪಯೋಗ ಆಗುತ್ತಿರುವುದು ನಿಜ. ಭಾರತದಲ್ಲಿಯ ಧಾರ್ಮಿಕ ಕ್ಷೇತ್ರಗಳ ಸ್ಥಳ ಪುರಾಣಗಳು ದೇವರ ಹೆಸರಿನ ದುರುಪಯೋಗಕ್ಕೆ ಒಂದು ಉತ್ತಮ ಸಾಕ್ಷಿ.

ಒಂದೊಂದು ದೇವಸ್ಥಾನಕ್ಕೆ ಒಂದೊಂದು ವಿಶಿಷ್ಟ ಕ್ಷೇತ್ರ ಪುರಾಣಗಳಿವೆ. ಈ ಕ್ಷೇತ್ರ ಪುರಾಣಗಳನ್ನು ಕುರುಡಾಗಿ ನಂಬುವ ಬದಲು ಅದರಲ್ಲಿರುವ ಅಸಂಗತಗಳನ್ನು ಈಗಿನ ಸಾಮಾಜಿಕ ಸ್ಥಿತ್ಯಂತರಗಳಿಗೆ ಅನುಗುಣವಾಗಿ ಮತ್ತೆ ವಿಶ್ಲೇಷಣೆ ಮಾಡುವ ಅಗತ್ಯವಿದೆ. ದೇವರ ಹೆಸರಲ್ಲಿ ಕಾಲ್ಪನಿಕ ಕತೆಗಳನ್ನು ಬರೆದು ಅದರಲ್ಲಿ ತಮ್ಮ ನೀಚ ಜಾತಿ ತಾರತಮ್ಯವನ್ನು ಸಮರ್ಥಿಸಿ, ಜಾತಿ ಶೋಷಣೆಯ ವಿರುದ್ಧ ಜನರು ಬಂಡಾಯ ಏಳದಂತೆ ಸಮಾಜದಲ್ಲಿ ಗುಲಾಮೀ ಮಾನಸಿಕತೆ ಬೆಳೆಸುವುದೇ ಸ್ಥಳ ಪುರಾಣಗಳ ಮೂಲ ಉದ್ದೇಶವಾಗಿರಬಹುದು!

ಸಸಿಹಿತ್ಲು ಭಗವತಿ ದೇವಸ್ಥಾನ

ಅದಕ್ಕೆ ಉದಾಹರಣೆ- ಹಳೆಯಂಗಡಿ ಹತ್ತಿರದ ಸಸಿಹಿತ್ಲು ಭಗವತಿ ದೇವಸ್ಥಾನದ ಕ್ಷೇತ್ರ ಪುರಾಣವಿದೆ! ತುಳುನಾಡಿನ ಏಳು ಶಕ್ತಿ ಕೇಂದ್ರಗಳಲ್ಲಿ ಇದೂ ಒಂದು.  ದರಾಸುರ ಎಂಬ ಒಬ್ಬನೇ ರಾಕ್ಷಸನನ್ನು ಸಂಹರಿಸಲು ಶಿವನು ಏಳು ದೇವಿಯರನ್ನು ಸೃಷ್ಟಿಸಿದನಂತೆ. ಅವರು ತಮ್ಮ ಕಾರ್ಯ ಮುಗಿಸಿ ಮರಳಿ ದೇವಲೋಕಕ್ಕೆ ಹೋಗದೆ ಭೂಲೋಕದ ಭ್ರಮಣೆ ಮಾಡುತ್ತಾ ತುಳುನಾಡಿನ ಸಸಿಹಿತ್ಲು ಎಂಬಲ್ಲಿಗೆ ಬಂದಾಗ ಹಿರಿಯಳಾದ ಭಗವತಿ ದೇವಿಗೆ ಬಾಯಾರಿಕೆ ಆಯಿತಂತೆ. ಅವಳು ಅಲ್ಲಿಯೇ ಇದ್ದ ಒಂದು ಮನೆಯವರಿಂದ ನೀರು ಕೇಳಿ ಕುಡಿದಳಂತೆ. ಆ ಮನೆಯವರು ಕೆಳ ಜಾತಿಯವರಾದುದರಿಂದ ಮೈಲಿಗೆ ಭಯದಿಂದ ಉಳಿದ ಆರು ತಂಗಿಯರು ನೀರು ಕುಡಿಯದೆ ಹಿರಿಯ ಅಕ್ಕ ಭಗವತಿಯನ್ನು ಧಿಕ್ಕರಿಸಿ ಅಲ್ಲಿಯೇ ಬಿಟ್ಟು ಮುಂದೆ ಹೋದರಂತೆ. ಅಕ್ಕ ಭಗವತಿ ಅಲ್ಲಿಯೇ ನೆಲೆನಿಂತು ಅದೇ ಮನೆಯ ಕೆಳಜಾತಿಯ ವ್ಯಕ್ತಿಯನ್ನು ತನ್ನ ಕ್ಷೇತ್ರದಲ್ಲಿ ಪುರೋಹಿತ-ಮೊಕ್ತೇಸರನಾಗಿ ನೇಮಿಸಿದಳಂತೆ. ಉಳಿದ ಆರು ತಂಗಿಯರು ಪೊಳಲಿ, ಬಪ್ಪನಾಡು, ಕಟೀಲು, ಮುಂಡಕೂರು, ಚಿತ್ರಾಪುರ, ಕುಂಜಾರುಗಿರಿ ಮುಂತಾದ ಆರು ಶಕ್ತಿ ಕ್ಷೇತ್ರದಲ್ಲಿ ನೆಲೆ ನಿಂತು ಬ್ರಾಹ್ಮಣರನ್ನೇ ಅರ್ಚಕರನ್ನಾಗಿ ನೇಮಿಸಿಕೊಂಡರಂತೆ. ಅಂದರೆ ದೇವರಿಂದಲೂ ಜಾತಿ ತಾರತಮ್ಯ? ಆದರೂ ಈಗ ನವರಾತ್ರಿಯಲ್ಲಿ ಸಸಿಹಿತ್ಲುಗಿಂತ ಹೆಚ್ಚು ಜನದಟ್ಟಣೆ ಈ ಆರು ಕ್ಷೇತ್ರಗಳಲ್ಲಿ ಇರುತ್ತದೆ.

ಈ ಕಥೆಯ ಪ್ರಕಾರ ಏಳು ಜನ ಅಕ್ಕ ತಂಗಿ ದೇವಿಯರಲ್ಲಿ ಕೇವಲ ಒಬ್ಬಳು ಮಾತ್ರ ಕೆಳಜಾತಿಗೆ ಗೌರವ ಕೊಟ್ಟರೆ ಉಳಿದ ಆರು ದೇವಿಯರು ಕೆಳಜಾತಿಗೆ ಗೌರವ ಕೊಡಲಿಲ್ಲ. ಜಾತಿ ತಾರತಮ್ಯ ಯಾರೇ ಮಾಡಲಿ ಅವರು ಪೂಜೆಗೆ ಅರ್ಹರಲ್ಲ! ಹಾಗಿರುವಾಗ ಕೆಳಜಾತಿಯ ಹಿಂದೂಗಳು ಆ ‘ಸಂಕುಚಿತ ಜಾತಿವಾದಿ’ ಬುದ್ಧಿಯ ಆರು ದೇವಿಯರ ದೇವಾಲಯಕ್ಕೆ ಯಾಕೆ ಹೋಗಬೇಕು?  ಸಸಿಹಿತ್ಲು ಸಹಿತ ಕೆಳ ಜಾತಿಯವರು ಪುರೋಹಿತರಾಗಿರುವ ದೇವಾಲಯಕ್ಕೆ ಬ್ರಾಹ್ಮಣ ಭಕ್ತರು ಹೋಗುವುದು ಕಡಿಮೆ ಎಂಬುದನ್ನೂ ನಾವು ಗಮನಿಸಬೇಕು. (ಬಿಲ್ಲವರ ಆಡಳಿತದಲ್ಲಿ ಇರುವ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಳಕ್ಕೂ ತುಳುವ ಬ್ರಾಹ್ಮಣ ಭಕ್ತರು ಬರುವುದು ಅಪರೂಪ! ಆದರೆ ದೊಡ್ಡ ಸಂಖ್ಯೆಯಲ್ಲಿ ಗುಜರಾತಿಗಳು ಮತ್ತು ಕೊಂಕಣಿ ಸಾರಸ್ವತರು ಬರುತ್ತಾರೆ). ಕೇವಲ ಎರಡು ಸಾವಿರ ವರ್ಷ ಹಳೆಯ ಸಂಸ್ಕೃತ ಭಾಷೆ ಮಾತ್ರ ದೇವರಿಗೆ ಅರ್ಥವಾಗುವುದೇ? ಅದಕ್ಕಿಂತ ನೂರಾರು ವರ್ಷ ಹಳೆಯದಾದ ಮೂಲ ಭಾರತೀಯ ಭಾಷೆಗಳು ದೇವರಿಗೆ ಅರ್ಥ ಆಗುವುದಿಲ್ಲವೇ?  ಮಾನವ ನಿರ್ಮಿತ ನೀಚ ಜಾತಿ ವ್ಯವಸ್ಥೆಯನ್ನು ದೇವರು ಸಹಾ ಅನುಸರಿಸುತ್ತಾರೆಯೇ? ದೇವರು ಕೂಡಾ ಮೇಲು ಕೀಳೆಂಬ ಹೀನ ಜಾತಿ ಬೇಧಭಾವ ಅನುಸರಿಸುತ್ತಾರೆಯೇ?  ಹೌದು ಅನ್ನುತ್ತಾರೆ ಬುದ್ಧಿವಂತರ ಜಿಲ್ಲೆಯ ಅತಿ ಬುದ್ಧಿವಂತ  ತುಳುನಾಡಿಗರು. 

ಪ್ರಜ್ಞಾವಂತರು ಹೇಳುವಂತೆ ಮೊದಲನೆಯದಾಗಿ ಮಾನವನು ರಚಿಸಿರುವ ಅವೈಜ್ಞಾನಿಕ ಜಾತಿ ವ್ಯವಸ್ಥೆಯನ್ನು ದೇವರು ಮಾನ್ಯ ಮಾಡುವುದಿಲ್ಲ. ಹಾಗಾಗಿ ದೇವರು ಎಂದೂ ಜಾತಿ ಆಧಾರದಲ್ಲಿ ತಾರತಮ್ಯ ಮಾಡುವ ಪ್ರಮೇಯವೇ ಬರುವುದಿಲ್ಲ. ಎರಡನೆಯದಾಗಿ ದೇವರಿಗೆ ಎಂದೂ ಹಸಿವು ಬಾಯಾರಿಕೆ ಆಗುವುದೇ ಇಲ್ಲ. ಮೂರನೆಯದಾಗಿ ದೇವರು ಕಾಲುನಡಿಗೆಯಲ್ಲಿ ನಡೆದುಕೊಂಡು ಹೋಗುವ ಅವಶ್ಯಕತೆಯೂ ಇಲ್ಲ. ಒಂದೇ ಕ್ಷಣದಲ್ಲಿ ವಿಶ್ವದ ಯಾವುದೇ ಮೂಲೆಗಾದರೂ ದೇವರು ಹೋಗಬಹುದು, (ದೇವರಲ್ಲಿ ಗಂಡು-ದೇವರು ಹೆಣ್ಣು-ದೇವರು ಎಂಬ ಬೇಧವೂ ಇಲ್ಲ) ಎಂದು ಅನ್ನುತ್ತಾರೆ ಜ್ಞಾನಿಗಳು.

ಈಗಿನ ವಿಷಮ ರಾಜಕೀಯ ಪರಿಸ್ಥಿತಿಯ ಕಾಲದಲ್ಲಿ ಗಮನಿಸ ಬೇಕಾದುದೇನೆಂದರೆ, ನಮ್ಮ ಈಗಿನ ಸಮಾಜದಲ್ಲಿ ವಿಶಾಲ ಮನಸ್ಸಿನ ಜಾತ್ಯತೀತರು ಕೇವಲ ಒಂದು ಪಾಲಾದರೆ ಸಂಕುಚಿತ ಬುದ್ಧಿಯ ಜಾತಿವಾದಿಗಳು ಆರು ಪಾಲು ಹೆಚ್ಚು ಇದ್ದಾರೆ ಎಂಬುದಕ್ಕೆ ದ್ಯೋತಕ ಈ ಏಳು ದೇವಿಯರ ಸಸಿಹಿತ್ಲು ಕ್ಷೇತ್ರ ಪುರಾಣ. ಹಾಗಾಗಿ ಜಾತಿ ತಾರತಮ್ಯದ ಸಮರ್ಥನೆ ನಿಲ್ಲಿಸಿ ಸಮಾಜದ ಒಳಿತಿಗಾದರೂ ಇನ್ನು ಮುಂದೆ ಇಂತಹಾ ಅಸಂಬದ್ಧ ಕ್ಷೇತ್ರ ಪುರಾಣ ಪ್ರಚುರ ಪಡಿಸುವುದನ್ನು ನಾವು ನಿಲ್ಲಿಸಬೇಕು.

ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ

ಒಂದು ವಿಚಿತ್ರವೇನೆಂದರೆ ಕೊಲ್ಲೂರು, ಬಪ್ಪನಾಡು, ಕಟೀಲು, ಚಿತ್ರಾಪುರ ಸಹಿತ ಹೆಚ್ಚಿನ ಎಲ್ಲಾ ದುರ್ಗಾಪರಮೇಶ್ವರಿ ಮತ್ತು ಭಗವತಿ ದೇವಸ್ಥಾನಗಳಲ್ಲಿ ದೇವಿಯನ್ನು ಮನುಷ್ಯರೂಪದಲ್ಲಿ ಪೂಜಿಸದೇ ‘ಶಕ್ತಿಲಿಂಗ’ ರೂಪದಲ್ಲಿ ಪೂಜಿಸುತ್ತಾರೆ ಎಂಬುದು ಇಲ್ಲಿಗೆ ದರ್ಶನಕ್ಕೆ ಬರುವ ಹೆಚ್ಚಿನ ಭಕ್ತರಿಗೆ ಗೊತ್ತೇ ಇಲ್ಲ. ಇಲ್ಲೆಲ್ಲಾ ಮನುಷ್ಯ ರೂಪದಲ್ಲಿ ಇರುವುದು ಉತ್ಸವ ಮೂರ್ತಿ! ಆದರೆ ಮೂಲ ಉದ್ಭವ ಮೂರ್ತಿ ಇರುವುದು “ದೋಣಿಯ ಆಕಾರದ ಲಿಂಗ ರೂಪದಲ್ಲಿ”. ಇದು ನಮ್ಮ ಪ್ರಕೃತಿಯಲ್ಲಿ ಅಡಕವಾಗಿರುವ ಹೆಣ್ಣುತನ ಮತ್ತು ಪುನರ್ ಸೃಷ್ಟಿಯ ಸಂಕೇತ. ಆದರೂ ಈ ಲಿಂಗವನ್ನು ಅಲ್ಲಿಯ ಪುರೋಹಿತರು ಹೂವಿನ ಅಲಂಕಾರದಿಂದ ಮುಚ್ಚಿಟ್ಟು ಭಕ್ತರಿಗೆ ತೋರಿಸುವುದೇ ಇಲ್ಲ. ಹಾಗಾಗಿ ಭಕ್ತರೆಲ್ಲಾ ಮುಗ್ಧತನದಿಂದ ಕೇವಲ ಮನುಷ್ಯ ರೂಪದ ಉತ್ಸವ ಮೂರ್ತಿಯ ದರ್ಶನ ಪಡೆದು ಕೃತಾರ್ಥರಾದೆವು ಎಂಬ ಹುಸಿ ಧನ್ಯತಾ ಭಾವನೆಯೊಂದಿಗೆ ತೆರಳುತ್ತಾರೆ!

ದೇವರೆಂಬ ದಿವ್ಯ ಶಕ್ತಿಯನ್ನು ಮನುಷ್ಯರೂಪಕ್ಕೆ ಇಳಿಸುವುದು ದೊಡ್ಡ ತಪ್ಪು. ಅವತಾರ ಎಂಬುದು ಅರ್ಥವಿಹೀನ. ಒಬ್ಬ ರಾಕ್ಷಸನನ್ನು ಕೊಲ್ಲಲು ದೇವರು ಮನುಷ್ಯ ರೂಪದಲ್ಲಿ ಅಥವಾ ಪ್ರಾಣಿ ರೂಪದಲ್ಲಿ ಬರುವುದು, ಗಂಡು ದೇವರು ಹೆಣ್ಣು  ಮೋಹಿನಿ ರೂಪದಲ್ಲಿ ಬರುವುದು, ಹಲವಾರು ಕೈಗಳಲ್ಲಿ ಚಿತ್ರವಿಚಿತ್ರ ಆಯುಧ ಹಿಡಿದಿರುವುದು, ವರ್ಷಗಟ್ಟಲೆ ಯುದ್ಧ ಮಾಡುವುದು, ಬೇರೆ ದೇವರುಗಳೆಲ್ಲಾ ಯುದ್ಧ ನೋಡುತ್ತಾ ಆಕಾಶದಲ್ಲಿ ನಿಂತಿರುವುದು, ಇವೆಲ್ಲಾ ಮಕ್ಕಳ ಮನರಂಜಿಸುವ ಕಥೆಗಳಂತೆ ಇವೆ.  ಯಾಕೆಂದರೆ ಒಂದು ವೇಳೆ ಎಷ್ಟೇ ದೊಡ್ಡ ದುಷ್ಟ ಶಕ್ತಿಯನ್ನೇ ಆಗಲಿ ನಾಶ ಮಾಡಬೇಕು ಎಂದು ದೇವರಿಗೆ ಅನಿಸಿದರೆ,  ಕ್ಷಣ ಮಾತ್ರದಲ್ಲಿ ಸಿಡಿಲು ಬಡಿಸಿ, ರೋಗರುಜಿನ ಬರಿಸಿ, ಪ್ರಾಕೃತಿಕ ವಿಪತ್ತು ತಂದೊಡ್ಡಿ, ಆ ದುಷ್ಟ ಶಕ್ತಿಯನ್ನು ತಕ್ಷಣ ನಾಶ ಮಾಡಲು ದೇವರಿಗೆ ಸಾಧ್ಯ. ಇಡೀ ಬ್ರಹ್ಮಾಂಡವನ್ನು ಆವರಿಸಿರುವ ಆ ದಿವ್ಯಶಕ್ತಿಯು ಕೇವಲ ಒಬ್ಬ ಆರಡಿ ಎತ್ತರದ ರಾಕ್ಷಸನನ್ನು (ಆದಿವಾಸಿ ರಾಜನನ್ನು) ಕೊಲ್ಲಲು ತಾನೇ ಮನುಷ್ಯ ರೂಪದಲ್ಲಿ ಅಥವಾ ಅರೆಪ್ರಾಣಿ ರೂಪದಲ್ಲಿ ಬರುತ್ತಾಳೆ/ತ್ತಾನೆ ಹಾಗೂ ದೇವರು ಎಲ್ಲಾ ಸೃಷ್ಟಿ ಕಾರ್ಯ ಬದಿಗಿಟ್ಟು, ಖಡ್ಗ ಹಿಡಿದು ವರ್ಷಗಟ್ಟಲೆ ಯುದ್ಧ ಮಾಡುತ್ತಾನೆ/ತ್ತಾಳೆ ಎಂದು ಹೇಳುವುದು ಆ ಸರ್ವಶಕ್ತ ದೈವಿ ಶಕ್ತಿಗೆನೇ ಘೋರ ಅವಮಾನ ಮಾಡಿದಂತೆ ಅಲ್ಲವೇ! ಆಗಿನ ಪುರಾಣದ ದೇವರು “ತ್ರಿಕಾಲ ಜ್ಞಾನಿ” ಆಗಿದ್ದರೆ ಅವನಿಗೆ ಆಧುನಿಕ ಬಂದೂಕು-ಮಿಸೈಲ್ ನಂತಹಾ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ರಾಕ್ಷಸರೊಂದಿಗೆ ಹೊಡೆದಾಡಲು ಯಾಕೆ ಬರಲಿಲ್ಲ? ಎಂಬುದು ಈಗಿನ ಮಕ್ಕಳು ಕೇಳುವ ತರಲೆ ಪ್ರಶ್ನೆಗಳು. 

ಪ್ರಕೃತಿಯಲ್ಲಿ ಇರುವ ಪಂಚಭೂತ ತತ್ವಗಳಾದ ನೀರು, ವಾಯು, ಬೆಂಕಿ, ಭೂಮಿ ಮತ್ತು ಆಕಾಶ ಇವುಗಳು ಗಂಡೂ ಅಲ್ಲ ಹೆಣ್ಣೂ ಅಲ್ಲ. ಹಾಗಾಗಿ ಕೇವಲ ನಮ್ಮ ಸೂರ್ಯಮಂಡಲ ಮಾತ್ರವಲ್ಲ ಸೀಮೆಯೇ ಇಲ್ಲದ ನಭೋಮಂಡಲದಲ್ಲಿ ಇರುವ ಸಾವಿರಾರು ಗ್ಯಾಲೆಕ್ಸಿ ಗಳು ಹಾಗೂ ಅವುಗಳಲ್ಲಿ ಸುತ್ತುತ್ತಾ ಇರುವ ಲಕ್ಷಾಂತರ ಸೂರ್ಯಗಳು (ನಕ್ಷತ್ರಗಳು) ಮತ್ತು ಆ ಲಕ್ಷಾಂತರ ಸೂರ್ಯಗಳನ್ನು ಸುತ್ತುತ್ತಿರುವ ಕೋಟ್ಯಂತರ ಗ್ರಹಗಳು ಇವೆಲ್ಲವೂ ಯಾವುದೇ ಮನುಷ್ಯ ರೂಪಿ ದೇವರಿಂದ ನಿರ್ಮಿತವಲ್ಲ. ವಿಜ್ಞಾನಿಗಳು ಹೇಳುವಂತೆ ನಮ್ಮ ಪೃಥ್ವಿ ಗ್ರಹ 460 ಕೋಟಿ ವರ್ಷ ಹಳೆಯದಾದರೂ, ಮನುಷ್ಯನ ಮೊತ್ತಮೊದಲ ಪೂರ್ವಜ ‘ನೆಂಡಂಥ್ರಲ್’ ಎಂಬ ಆದಿಮಾನವ ಇಲ್ಲಿ ಹುಟ್ಟಿದ್ದು ಕೇವಲ 60 ಲಕ್ಷ ವರ್ಷಗಳ ಹಿಂದೆ. ನಮ್ಮ ನೇರ ಪೂರ್ವಜ ಹೊಮೊ-ಸೇಪಿಯನ್ ಕೇವಲ ಮೂರು ಲಕ್ಷ ವರ್ಷಗಳ ಹಿಂದೆ ವಿಕಸನ ಹೊಂದಿದ್ದು. ಒಂದು ವೇಳೆ ಮನುಷ್ಯರೂಪಿ ದೇವರೇ ಈ ಪೃಥ್ವಿಯನ್ನು 460 ಕೋಟಿ ವರ್ಷಗಳ ಹಿಂದೆ ಸೃಷ್ಟಿಸಿದ್ದರೆ  ಅವನು ತನ್ನದೇ ರೂಪದ ಮನುಷ್ಯನನ್ನು ಸೃಷ್ಟಿಸಲು 459 ಕೋಟಿ ವರ್ಷ ಯಾಕೆ ತಡ ಮಾಡಿದ್ದು? ಎಂಬ ಮುಗ್ಧ ಪ್ರಶ್ನೆ ಮಕ್ಕಳ ಮನದಲ್ಲಿ ಮೂಡುವುದು ಸಹಜ. 15 ಕೋಟಿ ವರ್ಷಗಳ ಹಿಂದಿನ ಡೈನೊಸರ್ ಗಳ ಕಾಲದಲ್ಲಿ ತನ್ನಂತೆಯೇ ಇರುವ ಮನುಷ್ಯರನ್ನು ಯಾಕೆ ಸೃಷ್ಟಿಸಲಿಲ್ಲ ಆ ಮಾನವರೂಪಿ ದೇವರು? ಎಂಬುದು ಹಳೆಯ ಪ್ರಶ್ನೆಯಾದರೂ ಅದು ಇಂದಿಗೂ ಪ್ರಸ್ತುತ.

ಬಹುಶ ಇಡೀ ಜಗತ್ತಿನಲ್ಲಿ ತಾವು ನಿರ್ದಿಷ್ಟವಾಗಿ ಯಾವ ಸ್ವರೂಪದ ದೇವರಿಗೆ ಪೂಜೆ ಮಾಡುತ್ತಿದ್ದೇವೆ ಎಂದು ಗೊತ್ತಿರದ  ಭಕ್ತರು ಇರುವುದು ನಮ್ಮ ತುಳುನಾಡಿನಲ್ಲಿ ಮಾತ್ರವೇನೋ! ಈ ಕುರಿತು ಈಗಿನ ಹಬ್ಬದ ಸಮಯದಲ್ಲಿ ತುಳುನಾಡಿಗರು ಆತ್ಮಮಂಥನ ಮಾಡಿಕೊಳ್ಳಲಿ!  ಬಹು ಮುಖ್ಯವಾಗಿ ರಾಕ್ಷಸರು/ದಾನವರು/ದೈತ್ಯರು ಎಂಬ ಜೀವಿಗಳು ಈ ಜಗತ್ತಿನಲ್ಲಿ ಎಂದೂ ಇರಲಿಲ್ಲ. ಒಂದು ವೇಳೆ ರಾಕ್ಷಸರು ನಿಜವಾಗಿ ಇದ್ದಿದ್ದರೆ ಅವರ ಒಂದಾದರೂ ಆಸ್ಥಿಪಂಜರದ ಪಳೆಯುಳಿಕೆ ವಿಜ್ಞಾನಿಗಳಿಗೆ ಅಗತ್ಯವಾಗಿ ಸಿಕ್ಕಿರುತ್ತಿತ್ತು.  ಹದಿನೈದು ಕೋಟಿ ವರ್ಷಗಳ ಹಿಂದೆ ಪೃಥ್ವಿಯ ಮೇಲೆ ಜೀವಿಸಿದ್ದ ಡೈನಸೋರ್ ಗಳ ನೂರಾರು ಪಳೆಯುಳಿಕೆಗಳು ಸಿಕ್ಕಿರುವಾಗ ಕೇವಲ ಮೂರು ಸಾವಿರ ವರ್ಷಗಳ ಹಿಂದೆ ಕೋಟ್ಯಂತರ ಸಂಖ್ಯೆಯಲ್ಲಿ ಜೀವಿಸಿದ್ದರು ಎನ್ನಲಾದ ರಾಕ್ಷಸರ ಒಂದೇ ಒಂದು ಪಳೆಯುಳಿಕೆ ಈ ವರೆಗೆ ವಿಜ್ಞಾನಿಗಳಿಗೆ ಯಾಕೆ ಸಿಕ್ಕಿಲ್ಲ? ರಾಕ್ಷಸರು ಇದ್ದರೆ ತಾನೇ ಪಳೆಯುಳಿಕೆ ಸಿಗುವುದು!  ಹಾಗಾಗಿ ರಾಕ್ಷಸರ ಹೆಸರಿನಲ್ಲಿರುವ ಎಲ್ಲಾ ಅಜ್ಜಿ ಕಥೆಗಳು ಹಾಗೂ ಜಾತಿ ತಾರತಮ್ಯ ಸಮರ್ಥಿಸುವ ಎಲ್ಲಾ ಕ್ಷೇತ್ರ ಪುರಾಣಗಳೂ ಶುದ್ಧ ಕಾಲ್ಪನಿಕ ಎನ್ನದೆ ವಿಧಿಯಿಲ್ಲ! ಹಾಗಾಗಿ ಅವು ಕೇವಲ ಯಕ್ಷಗಾನ ಪ್ರಸಂಗಗಳಿಗೆ ಮತ್ತು ಮನೋರಂಜಕ ಸಿನೆಮಾ-ನಾಟಕಗಳಿಗೆ ಮಾತ್ರ ಸೀಮಿತವಾದರೆ ಒಳ್ಳೆಯದು.

ಯೂರೋಪಿಯನ್ ದೇಶಗಳಲ್ಲಿ ಹೈಸ್ಕೂಲು ಮಟ್ಟದಿಂದಲೇ ಲಾಜಿಕ್ (ತರ್ಕ ಶಾಸ್ತ್ರ) ಎಂಬ ವಿಷಯ ಕಲಿಸಲಾಗುತ್ತದೆ. ತರ್ಕಶಾಸ್ತ್ರ ಇದ್ದಲ್ಲಿ ಮೌಢ್ಯ ಹಾಗೂ ಅಜ್ಜಿ ಪುರಾಣಗಳು ನಿಲ್ಲುವುದಿಲ್ಲ! ಹಾಗಾಗಿ ಈಗ ಯೂರೋಪಿಯನ್ ದೇಶಗಳಲ್ಲಿ ಅತ್ಯಂತ ವೇಗವಾಗಿ ಹಬ್ಬುತ್ತಿರುವ ಧರ್ಮ ಅಂದರೆ ‘ನಾಸ್ತಿಕತೆ ಹಾಗೂ ಧರ್ಮ-ತಟಸ್ಥತೆ’ ((Atheism &Non-Religious). ಯುರೋಪ್ ನಲ್ಲಿ ಅರ್ಥೋಡಾಕ್ಸ್ ಕ್ರೈಸ್ತ ಚರ್ಚುಗಳೆಲ್ಲಾ ಬಂದ್ ಆಗಿ ಲೈಬ್ರರಿ, ಮ್ಯೂಸಿಯಂ ಅಥವಾ ಸಾರ್ವಜನಿಕ ಸಭಾಭವನಗಳಾಗಿ ಪರಿವರ್ತಿತ ವಾಗುತ್ತಿವೆ. ಯುರೋಪ್ ನಲ್ಲಿ ಈಗ ಕ್ರೈಸ್ತ ಧರ್ಮವು ಅತ್ಯಂತ ವೇಗವಾಗಿ ನಶಿಸುತ್ತಿರುವ ಧರ್ಮ! ನಾನೇ ಇದನ್ನು ನೋಡಿರುವೆ. ನಾನು ಎರಡು ತಿಂಗಳು ನೆದರ್ ಲ್ಯಾಂಡ್ ನಲ್ಲಿ ಮಗಳ ಮನೆಯಲ್ಲಿ ಇದ್ದು ಇತ್ತೀಚೆಗೆ ಊರಿಗೆ ಮರಳಿ ಬಂದಿರುವುದು. ದೇವರ ವಿಷಯದಲ್ಲಿ ತಟಸ್ಥ ವಾಗಿರುವ ಜಗತ್ತಿನ ಅತ್ಯಂತ ಹಳೆಯ ಧರ್ಮವೆಂದರೆ ಭಾರತದ್ದೇ ಆದ ಚಾರ್ವಾಕ ಧರ್ಮ ಮತ್ತು ಆಜೀವಿಕಾ ಧರ್ಮ. ಇವುಗಳಿಂದಲೇ ಬೌದ್ಧ ಮತ್ತು ಜೈನ ಧರ್ಮ ಹುಟ್ಟಿರುವುದು!

ಆದರೆ ದುರಾದೃಷ್ಟಕ್ಕೆ ಬೌದ್ಧ ಮತ್ತು ಜೈನ ಧರ್ಮಗಳೂ ಈಗ ಮೌಢ್ಯದ ರಾಯಭಾರಿಗಳಾಗಿವೆ !

ಪ್ರವೀಣ್ ಎಸ್  ಶೆಟ್ಟಿ

ಚಿಂತಕರು

ಇದನ್ನೂ ಓದಿ- ಮಹಾಲಯ, ನವರಾತ್ರಿ, ದುರ್ಗಾ ಪೂಜೆ ಮತ್ತು ಬಂಗಾಳಿ ಮುಸ್ಲಿಮರು

More articles

Latest article