ರಾಜ್ಯಸಭೆ ಚುನಾವಣೆ: ಸೋಮಶೇಖರ್‌, ಹೆಬ್ಬಾರ್‌ ಗೆ ಬಿಜೆಪಿ ನೋಟಿಸ್

Most read

ಬೆಂಗಳೂರು: ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿದ ಇಬ್ಬರು ಶಾಸಕರಿಗೆ ಭಾರತೀಯ ಜನತಾ ಪಕ್ಷ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದೆ.

ಶಾಸಕರಾದ ಎಸ್.ಟಿ.ಸೋಮಶೇಖರ್‌ ಮತ್ತು ಶಿವರಾಮ್‌ ಹೆಬ್ಬಾರ್‌ ಅವರುಗಳಿಗೆ ನೋಟಿಸ್‌ ಜಾರಿಯಾಗಿದ್ದು, ಐದು ದಿನಗಳಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ.

ವಿಧಾನಸಭೆ ವಿರೋಧಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್‌ ಇಬ್ಬರೂ ಶಾಸಕರಿಗೆ ಇ-ಮೇಲ್‌ ಮೂಲಕ ನೋಟಿಸ್‌ ಜಾರಿ ಮಾಡಿದ್ದು, ಪಕ್ಷದ ವಿಪ್‌ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇಬ್ಬರಿಂದಲೂ ಸಮಜಾಯಿಷಿ ಕೇಳಲಾಗಿದೆ.

ರಾಜ್ಯಸಭೆ ಚುನಾವಣೆ ಮತದಾನ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸಬೇಕಿದ್ದ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್‌ ಆತ್ಮಸಾಕ್ಷಿಯ ಮತ ನೀಡಿರುವುದಾಗಿ ಹೇಳಿ ಬಿಜೆಪಿ ಆದೇಶವನ್ನು ಧಿಕ್ಕರಿಸಿದ್ದರು.

ಮತ್ತೊಂದೆಡೆ ಉತ್ತರ ಕನ್ನಡ ರಾಜಕಾರಣದಲ್ಲಿ ತಮ್ಮನ್ನು ನಿರ್ಲಕ್ಷಿಸಿರುವ ಕುರಿತಂತೆ ಅಸಮಾಧಾನ ಹೊಂದಿರುವ ಶಿವರಾಮ್‌ ಹೆಬ್ಬಾರ್‌ ಮತದಾನದಲ್ಲಿ ಪಾಲ್ಗೊಂಡಿರಲಿಲ್ಲ.

ಅಗತ್ಯ ಮತಗಳು ಲಭಿಸದ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋಲನ್ನಪ್ಪಿದ್ದು ಭಾರತೀಯ ಜನತಾ ಪಕ್ಷಕ್ಕೆ ಭಾರೀ ಮುಖಭಂಗ ತಂದಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಆದೇಶ ಧಿಕ್ಕರಿಸಿದ ಶಾಸಕರಿಗೆ ಶೋ ಕಾಸ್‌ ನೋಟೀಸ್‌ ಜಾರಿ ಮಾಡಲಾಗಿದೆ.

More articles

Latest article