Friday, December 6, 2024

11.38ಕ್ಕೆ ರವೆ ಇಡ್ಲಿ, 12.56ಕ್ಕೆ ಬಾಂಬ್‌ ಬ್ಲಾಸ್ಟ್:‌ ಇಲ್ಲಿದೆ ರಾಮೇಶ್ವರಂ ಸ್ಫೋಟದ ಟೈಮ್‌ ಲೈನ್

Most read

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಪೋಟದ ನಂತರ ಸಿಸಿ ಟಿವಿ ದೃಶ್ಯಾವಳಿಗಳು ಬ್ಲಾಸ್ಟ್ ಘಟನೆಯ ಎಲ್ಲ ವಿವರಗಳನ್ನು ಬಿಚ್ಚಿಟ್ಟಿವೆ.

ಶುಕ್ರವಾರ ಮಧ್ಯಾಹ್ನ ಒಟ್ಟು 86 ನಿಮಿಷಗಳಲ್ಲಿ ಇಡೀ ಪ್ರಕರಣ ನಡೆದಿದ್ದು, ಆರೋಪಿ ಚಾಲಾಕಿತನದಿಂದ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಇಡೀ ಪ್ರಕರಣದ ಘಟನಾವಳಿಗಳು ಆರಂಭವಾಗುವುದು ಮಧ್ಯಾಹ್ನ 11.30ಕ್ಕೆ. ಆ ಸಮಯಕ್ಕೆ ಸುಮಾರು ಮೂವತ್ತು ವರ್ಷ ವಯಸ್ಸಿನ ವ್ಯಕ್ತಯೋರ್ವ ಬಸ್‌ ಒಂದರಿಂದ ಇಳಿದು ನಡೆದು ಬಂದು ರಾಮೇಶ್ವರಂ ಕೆಫೆ ಪ್ರವೇಶಿಸುತ್ತಾನೆ.
11.38ಕ್ಕೆ ಆತ ರವೆ ಇಡ್ಲಿ ಆರ್ಡರ್‌ ಮಾಡಿ ಟೋಕನ್‌ ಪಡೆಯುತ್ತಾನೆ. ಇದಾದ ಆರು ನಿಮಿಷಗಳ ನಂತರ 11.44ಕ್ಕೆ ಆತ ಕೈ ತೊಳೆಯಲೆಂದು ವಾಶ್‌ ಏರಿಯಾಗೆ ಸಾಗುತ್ತಾನೆ. ಅಲ್ಲಿ ಕೈ ತೊಳೆಯುವ ಮುನ್ನ ತನ್ನ ಕೈಯಲ್ಲಿದ್ದ ಬ್ಯಾಗನ್ನು ಕೆಳಗೆ ಇಡುತ್ತಾನೆ.
ಕೈ ತೊಳೆದಾದ ನಂತರ ಆತ ಬ್ಯಾಗನ್ನು ಮರೆತು ಹೋದಂತೆ ಅಲ್ಲಿಂದ ಹಾಗೇ ತೆರಳುತ್ತಾನೆ. 11.45 ರ ಹೊತ್ತಿಗೆ ಆತ ಕೆಫೆ ಬಿಟ್ಟು ಹೋಗಿರುತ್ತಾನೆ. ಇದಾಗಿ ಒಂದು ಗಂಟೆ ಹನ್ನೊಂದು ನಿಮಿಷಗಳ ತರುವಾಯ ಅಲ್ಲಿ ಬಾಂಬ್‌ ಸ್ಫೋಟಿಸುತ್ತದೆ. ಪ್ರಾಥಮಿಕ ತನಿಖೆಯ ಪ್ರಕಾರ ವಾಶ್‌ ಏರಿಯಾದಲ್ಲಿದ್ದ ಬ್ಯಾಗ್‌ ಸ್ಫೋಟಿಸಿದೆ. ಬ್ಯಾಗ್‌ ನಲ್ಲಿ ಸುಧಾರಿತ ಸ್ಪೋಟಕ (IED) ಇಟ್ಟು ಸ್ಫೋಟಿಸಲಾಗಿದೆ.

11.15ಕ್ಕೆ ರಾಮೇಶ್ವರಂ ಕೆಫೆ ಬಿಟ್ಟು ಹೊರಡುವ ಆಗಂತುಕ, ಫುಟ್‌ ಪಾತ್‌ ನಲ್ಲಿ ನಡೆಯುವ ಬದಲು ರಸ್ತೆಯಲ್ಲೇ ನಡೆಯುತ್ತಾನೆ. ಮುಖಕ್ಕೆ ಮಾಸ್ಕ್‌, ತಲೆಗೆ ಕ್ಯಾಪ್‌ ಧರಿಸಿದ ಈ ವ್ಯಕ್ತಿ ತನ್ನ ಚಹರೆ ಮರೆಮಾಚಿಕೊಳ್ಳುವ ಸಲುವಾಗಿಯೇ ಫುಟ್‌ ಪಾತ್‌ ಬದಲಿಗೆ ರಸ್ತೆಗೆ ಇಳಿದಿದ್ದಾನೆ.
12.56 ಗಂಟೆಗೆ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದೆ. ಬಾಂಬ್‌ ಅನ್ನು ಟೈಮರ್‌ ಇಟ್ಟು ಸ್ಫೋಟಿಸಲಾಗಿದೆಯೇ ಅಥವಾ ರಿಮೋಟ್ ಮೂಲಕ ಸ್ಫೋಟಿಸಲಾಗಿದೆಯೇ ಎಂಬುದು ತನಿಖೆಯಿಂದ ಬಯಲಾಗಬೇಕಾಗಿದೆ.

ಬಾಂಬ್‌ ಇಟ್ಟ ಸಮಯಕ್ಕೂ, ಸ್ಫೋಟಿಸಿದ ಸಮಯಕ್ಕೂ ಸುಮಾರು ಒಂದು ಗಂಟೆ ಹನ್ನೊಂದು ನಿಮಿಷಗಳ ಅಂತರವಿದೆ. ಬಾಂಬಿಟ್ಟ ವ್ಯಕ್ತಿ ಸುರಕ್ಷಿತ ಸ್ಥಳ ತಲುಪಿಕೊಳ್ಳುವ ಉದ್ದೇಶದಿಂದ ಹೀಗೆ ದೊಡ್ಡ ಅಂತರದ ನಂತರ ಸ್ಪೋಟ ನಡೆಸಿರಬಹುದು.
ಪ್ರಧಾನ ಆರೋಪಿ ಮೊಬೈಲ್‌ ನಲ್ಲಿ ಮಾತನಾಡುತ್ತಿರುವ ರೀತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ವೇಳೆ ಆತ ಮೊಬೈಲ್‌ ಬಳಸಿರುವುದು ನಿಜವೇ ಆಗಿದ್ದಲ್ಲಿ ಪೊಲೀಸರ ತನಿಖೆಗೆ ಹೆಚ್ಚು ಸಹಾಯವಾಗಲಿದೆ.

More articles

Latest article