ಹೀಗೊಂದು ಕ್ವಿಯರ್ ರಾಮಾಯಣ

Most read

ಒಬ್ಬರು ಹೇಳಿದರು “ಅಯ್ಯೋ ಈ ರಾಮನಿಗೇನು? ಮನೇಲಿ ಗಂಡ ಮಕ್ಕಳಿಗೆ ಅಡಿಗೆ ಮಾಡಿ ಹಾಕ್ಬೇಕಾ ಅಥವಾ ಅತ್ತೆಯ ಕೈಲಿ ಬೈಸ್ಕೋ ಬೇಕಾ? ಯುದ್ಧ ಯುದ್ಧ ಅಂದ್ಕೊಂಡು ನಮ್ ಪ್ರಾಣ ತೆಗೀತಾವ್ನೆ”. ಇನ್ನೊಬ್ಬರು ಹೇಳಿದರು-“ಈ ರಾವಣನಿಗಂತೂ ಒಂದ್ ಕೊರತೆಯೂ ಇಲ್ಲ, ಅವನು ರಾಜ, ಅವನೇನು ನಮ್ ತರ ಹಣ ಸಂಪಾದನೆ ಮಾಡಕ್ಕೆ ದಂಧಾಗೆ ಬರ್ಬೇಕಾ? ಹೋಗಿ ಸೀತೆನ ಎಳ್ಕೊಂಡ್ ಬಂದ್ಬಿಟ್ಟ” – ರೂಮಿ ಹರೀಶ್

ಹಿಂದೆ ಸುಮಾರು 2006-07ರ ಹೊತ್ತಿಗೆ ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ  ನಮ್ಮ ಸಮುದಾಯದವರು ಅಂದ್ರೆ ನನ್ನ ತರದ ಟ್ರಾನ್ಸ್ ಮೆನ್ ಮತ್ತು ಅವರ ಸಂಗಾತಿಗಳು, ಮಹಿಳಾ ಸಲಿಂಗ ಪ್ರೇಮಿಗಳು ಮಹಿಳಾ ದ್ವಿಲಿಂಗ ಪ್ರೇಮಿಗಳು, ಲೈಂಗಿಕ ಕೆಲಸದಲ್ಲಿರುವ ಮಹಿಳೆಯರು, ಯಾರಿಗೆ ಸಲಿಂಗ ಪ್ರೇಮದ ಒಲವು ಇದೆಯೋ ಅವರು, ಅಂತರಲಿಂಗದವರು, ಹೀಗೆ ನಾವೆಲ್ಲಾ ಸೇರಿ ಒಂದು ಗುಂಪು ಮಾಡಿದ್ದೆವು. ಅದರ ಹೆಸರು ಲೆಸ್ಬಿಟ್ ಅಂತ. ಅಲ್ಲಿದ್ದ ಹೆಚ್ಚಿನ ಜನರೆಲ್ಲಾ ಬೇರೆ ರಾಜ್ಯಗಳಿಂದ ವಲಸೆ ಬಂದವರು. ಹೀಗಾಗಿ ಯಾವಾಗಲೂ ಭಾಷೆಯ ವಿಷಯದಿಂದಾಗಿ ಜಗಳಗಳು ಮತ್ತು ಮನಸ್ತಾಪಗಳು ಆಗುತ್ತಿದ್ದವು. ಎಲ್ಲರಿಗೂ ಕನ್ನಡ ಕಲಿಸುವ ಒಂದು ಉಪಾಯ ಕಂಡೆ. ನಾಟಕ!. ಲೆಸ್ಬಿಟ್ ನಾಟಕ ತಂಡ. ನಾವು ನಾವೇ ಸೇರಿ ನಮ್ಮ ಕಥೆಗಳನ್ನೇ ಒಂದರೊಳಗೊಂದು ನೇಯ್ದು ಪಾತ್ರಗಳನ್ನು ಹಂಚಿಕೊಂಡು, ನಮ್ಮದೇ ಭಾಷೆಗಳಲ್ಲಿ ನಮ್ಮ ನಮ್ಮ ಡಯಲಾಗುಗಳನ್ನು ಬರೆದು, ಎಲ್ಲರೂ ಸೇರಿ ನಿರ್ದೇಶಿಸುತ್ತಿದ್ದ ನಾಟಕಗಳು. ಸ್ವಲ್ಪ ಸ್ವಲ್ಪ ನಾನು ಹೇಳಿಕೊಡುತ್ತಿದ್ದೆ. ಆ ಕಾಲದಲ್ಲಿ ನಮ್ಮ ಸಮುದಾಯಕ್ಕೆ ರಂಗ ಶಿಬಿರ ಮಾಡಲು ಯಾರೂ ಮುಂದೆ ಬರುತ್ತಿರಲಿಲ್ಲ. ಹಾಗಾಗಿ ಮೊದಲ ಬಾರಿಗೆ ನಮ್ಮ ಸಮುದಾಯಕ್ಕೆ ನಾಟಕ ಶಿಬಿರ ಮಾಡಿದವರು ವೀಣಾ ಅಪ್ಪಯ್ಯ. ನಾವು ಈಗಲೂ ಅವರನ್ನು ತುಂಬು ಹೃದಯದಿಂದ ಸ್ಮರಿಸುತ್ತೇವೆ.

ಆ ಒಂದು ತರಬೇತಿ ಬಿಟ್ಟರೆ ನಮಗೆ ಬೇರಾವ ತರಬೇತಿ ಇಲ್ಲ. ಅದೇ ತರಬೇತಿಯನ್ನು ಇಟ್ಟುಕೊಂಡು ನಾವು 2006 ರಿಂದ 2010 ರ ವರೆಗೆ ಸುಮಾರು 5 ನಾಟಕಗಳನ್ನು ರಚಿಸಿದ್ದೆವು. ತಮಾಷೆಯೆಂದರೆ ಮೊದಲ ಬಾರಿಗೆ ಆರು ಭಾಷೆಗಳಲ್ಲಿ ನಾಟಕ ರಚನೆಗೊಳ್ಳುತ್ತಿತ್ತು. ಅಪ್ಪನ ಪಾತ್ರದವರು ಕನ್ನಡ ಮಾತನಾಡಿದರೆ, ಮಗ ಮಲಯಾಳಂ, ಅಮ್ಮ ತೆಲುಗು, ಮಗನ ಸ್ನೇಹಿತ ಹಿಂದಿ, ಹೀಗೆ ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ, ಇಂಗ್ಲೀಷು, ಇದು ಸಾಲದೆಂಬಂತೆ  ಮರಾಠಿ ಮತ್ತು ಗುಜರಾತಿ ಮಾತನಾಡುವ ಸಮುದಾಯದವರೂ ಇದ್ದರು. ಹೀಗಾಗಿ ನಮ್ಮ ನಾಟಕಗಳು ಒಂದು ಭಾಷೆಯಲ್ಲಿ ಇರಲು ಸಾಧ್ಯವೇ ಆಗುತ್ತಿರಲಿಲ್ಲ. ಯಾರೋ ಹೇಳಿಕೊಟ್ಟರು, ನಿಮ್ಮದು ಬಹುಭಾಷಾ ನಾಟಕಗಳು ಎಂದು. ನಮ್ಮ ನಾಟಕ ಅಭ್ಯಾಸಗಳ ದಿನಗಳಲ್ಲಿ  ನಾವೆಲ್ಲಾ ಹೊಟ್ಟೆ ಹಿಡಿದು ಹೊರಳಾಡಿ ನಗುತ್ತಿದ್ದ ಸಂದರ್ಭಗಳು ಅದಷ್ಟೋ.

ಹೀಗಿರುವಾಗ ಒಂದು ಎನ್ ಜಿ ಓ ಸಮಿಟ್ ನಡೆದಾಗ, ಹಿಂದಿನ ದಿವಸ ನಮಗೆ ಹೇಳಿದರು, ನಿಮಗೆ 20 ನಿಮಿಷಗಳ ಸಮಯ ಕೊಡಲಾಗುವುದು. ಶಾಂತಿಯ ಬಗ್ಗೆ ಒಂದು ನಾಟಕ ಮಾಡಿ ಅಂತ. ಸರಿ, ನಮ್ಮ ಹುರುಪಿಗೇನೂ ಕಡಿಮೆ ಇರಲಿಲ್ಲ. ನಮ್ಮ ಗುಂಪು ಮಾತ್ರ ಸಾಲದಾಗಿತ್ತು. ಅದಕ್ಕೆ ನಮ್ಮ ಅಕ್ಕೈ, ಚಾಂದಿನಿ, ತನು, ನಮ್ಮ ಗುಂಪಿನವರು, ಕೆಲವು ಲೈಂಗಿಕ ಕಾರ್ಮಿಕರು, ಕೋಥಿ ಸಮುದಾಯದವರು (ಶಸ್ತ್ರ ಚಿಕಿತ್ಸೆಯಾಗದ ಹುಟ್ಟಿನಲ್ಲಿ ಗಂಡು ಎಂದು ವಿಧಿಸಿ, ಅವರು ತಮ್ಮನ್ನು ತಾವು ಮಹಿಳೆ ಎಂದು ಗುರುತಿಸಿಕೊಳ್ಳುವವರು) ಸೇರಿದಂತೆ ಎಲ್ಲರೂ ಸಭೆ ಸೇರಿ ಚರ್ಚಿಸಿ ಕೊನೆಗೂ ನಾಟಕ ರೆಡಿಯಾಯಿತು.

ನಾಟಕ ಏನೆಂದರೆ – ಸೀತೆ ಮತ್ತು ಮಂಡೋದರಿ ಅಶೋಕವನದಲ್ಲಿ ಸೇರಿ, ಯುದ್ಧದ ವಿನಾಶಕಾರಿ ಪ್ರವೃತ್ತಿಗಳ ಬಗ್ಗೆ ಮಾತನಾಡಿ ಯುದ್ಧ ಭೂಮಿಗೆ ಹೋಗಿ, ರಾಮ ಮತ್ತು ರಾವಣರನ್ನು ಕನ್ವಿನ್ಸ್ ಮಾಡಲು ಪ್ರಯತ್ನಿಸುತ್ತಾರೆ. ಸೈನಿಕರೂ ತಮ್ಮ ಕಷ್ಟ ನಷ್ಟಗಳ ಬಗ್ಗೆ ಮಾತನಾಡುತ್ತಾರೆ. ಕಡೆಗೆ ಯುದ್ಧ ಬೇಡ ಎನ್ನುವವರೆಲ್ಲಾ ಸೀತಾ, ಮಂಡೋದರಿಯ ಜೊತೆ ಸೇರಿ ಶಾಂತಿಯ ನಾಡಿಗೆ ತೆರಳುತ್ತಾರೆ.

ರಂಗದ ಮೇಲೆ ಈ ಕಥೆ ಹೀಗೆ ಇದ್ದಂತೆ ಬಂತಾ??? ಹಾ..ರಂಗದ ಮೇಲೆ ಬಂತು. ಆದ್ರೆ ಹೀಗಲ್ಲ! ಆದು ಕಡೆಗೆ ಕ್ವಿಯರ್ ರಾಮಾಯಣವಾಯಿತು. ನಡೆದದ್ದು ಇಷ್ಟೆ. ಸೀತೆ ಮತ್ತು ಮಂಡೋದರಿ ಡಾ| ರಾಜ್‌ ಕುಮಾರ್ ಅವರ ಒಂದು ಪ್ರೇಮ ಗೀತೆಯಿಂದ ಮೊದಲ ಸೀನ್‌ ಆರಂಭವಾಯಿತು. ಅಕ್ಕೈ ಮತ್ತು ಚಾಂದಿನಿ ಅಣ್ಣಾವ್ರ  ಆರಾಧಕರು. ಆ ಹಾಡಿಗೆ ಇಬ್ಬರೂ ಹಾಡಿ ಕುಪ್ಪಳಿಸಿ ಚೆನ್ನಾಗಿ ಅಣ್ಣವ್ರು ರೋಮ್ಯಾನ್ಸ್ ಮಾಡುವ ಹಾಗೆ ಮಾಡುತ್ತಿದ್ದರು. ಅದು ನೋಡಲು ಹೇಗಿತ್ತೆಂದರೆ ಸೀತಾ ಮತ್ತು ಮಂಡೋದರಿ ಪ್ರೇಮದಲ್ಲಿರುವ ಹಾಗೆ ಭಾಸವಾಗುತ್ತಿತ್ತು . ಹಿಂದಿನಿಂದ ನಾನು ಪ್ರಾಮ್ಟ್ ಮಾಡ್ತಾ ಯುದ್ಧದ ಬಗ್ಗೆ ಮಾತನಾಡಿ ಅಂತ ಹೇಳಿದ ಮೇಲೆ ಅಕ್ಕೈ ಹೇಳಿದರು “ಹೇ ಪ್ರಾಣೇಶ್ವರಿ, ಈ ರಾಮ ರಾವಣರಿಗೆ ಬುದ್ಧಿ ಇಲ್ಲ. ಯುದ್ಧ ಯುದ್ಧ ಅಂತ ಸಾಯ್ತಾರೆ. ಬಾರೇ ಸೀತಾ ನಾವು ಶಾಂತಿಯ ನಾಡಿಗೆ ಓಡಿ ಹೋಗೋಣ”. ಅದಕ್ಕೆ ಸರಿಯಾಗಿ ಚಾಂದಿನಿ “ಹೌದು ಕಣೆ ಮಂಡೋದರಿ, ಈ ರಾಮ ರಾವಣರಿಗೆ ಪ್ರೇಮಿಸಕ್ಕೇ ಬರಲ್ಲ. ಅವರಿಗೆ ಹಿಂಸೆ ಕೊಲೆ ಮಾತ್ರ ಗೊತ್ತು, ನಾವು ಹೋಗೋಣ” ಎನ್ನುವಲ್ಲಿಗೆ  ಆ ಸೀನು ಮುಗಿಯುತ್ತೆ. ಪ್ರೇಕ್ಷಕರ ನಗು ಜೋರಾಗಿತ್ತು.

ನಂತರ ಯುದ್ಧ ಭೂಮಿ – ಅಲ್ಲಿ ಸೈನಿಕರು ಯುದ್ಧದ ದುಷ್ಪರಿಣಾಮಗಳ ಬಗ್ಗೆ ಮಾತನಾಡ ಬೇಕು. ಸೈನಿಕರಲ್ಲಿ ಹೆಚ್ಚು ಜನ ಕೋಥಿ ಸಮುದಾಯದವರು ಮತ್ತು ಕೆಲ ಲೈಂಗಿಕ ಕಾರ್ಮಿಕರಿದ್ದರು. ಇವರೆಲ್ಲಾ ಸೇರಿ ಹೊಡೆದ ಡೈಲಾಗುಗಳಿಂದ ಪ್ರೇಕ್ಷಕರಿಗೆ ಒಂದು ಹೊಸಾ ಮಾಹಿತಿ ಸಿಕ್ಕಿತು- ರಾಮ, ರಾವಣರ ಸೈನಿಕರೆಲ್ಲಾ ಸ್ತ್ರೀಯರು ಅಂತ! ಒಬ್ಬರು ಹೇಳಿದರು “ಅಯ್ಯೋ ಈ ರಾಮನಿಗೇನು? ಮನೇಲಿ ಗಂಡ ಮಕ್ಕಳಿಗೆ ಅಡಿಗೆ ಮಾಡಿ ಹಾಕ್ಬೇಕಾ ಅಥವಾ ಅತ್ತೆಯ ಕೈಲಿ ಬೈಸ್ಕೋ ಬೇಕಾ? ಯುದ್ಧ ಯುದ್ಧ ಅಂದ್ಕೊಂಡು ನಮ್ ಪ್ರಾಣ ತೆಗೀತಾವ್ನೆ”. ಇನ್ನೊಬ್ಬರು ಹೇಳಿದರು-“ಈ ರಾವಣನಿಗಂತೂ ಒಂದ್ ಕೊರತೆಯೂ ಇಲ್ಲ, ಅವನು ರಾಜ, ಅವನೇನು ನಮ್ ತರ ಹಣ ಸಂಪಾದನೆ ಮಾಡಕ್ಕೆ ದಂಧಾಗೆ ಬರ್ಬೇಕಾ? ಹೋಗಿ ಸೀತೆನ ಎಳ್ಕೊಂಡ್ ಬಂದ್ಬಿಟ್ಟ”..

ಕಡೆಗೆ ರಾಮ ರಾವಣರು  ತಮ್ಮ ಬಗ್ಗೆ ಕೊಚ್ಚಿಕೊಳ್ಳೋ ಭರದಲ್ಲಿ ರಾಮನ ಬಾಯಿಂದ ಡಯಲಾಗ್‌ ಬಿತ್ತು- “ ನೋಡೋ ರಾವಣ, ನೀನ್ ಯಾವ್ ಸೀಮೆ ಗಂಡ್ಸು, ನನಗೆ ಮೀಸೆ ಇದೆ ದಾಡಿ ಇದೆ ನಾನು ರಿಯಲ್ ಗಂಡ್ಸು”. ರಾವಣನ ಪಾತ್ರ ಮಾಡಿದ್ದು ಒಬ್ಬ ಟ್ರಾನ್ಸ್ ಮ್ಯಾನ್. ಆಗಿನ್ನು ಸರ್ಜರಿ, ಹಾರ್ಮೋನ್ ಎಲ್ಲಾ ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಹೀಗಾಗಿ ನಾವು ಟ್ರಾನ್ಸ್ ಮೆನ್ ಗಂಡಸರಾಗಿ ಬದುಕುತ್ತಿದ್ದರೂ ಮೀಸೆ ದಾಡಿ ಇರುತ್ತಿರಲಿಲ್ಲ. ರಾಮನ ಪಾತ್ರದವನ ಮಾತಿಗೆ ಒಂದು ಕ್ಷಣವೂ ತಡಮಾಡದೆ ನಮ್ಮ ರಾವಣ ಸೂಪರ್ ಆಗಿ ಉತ್ತರ ಕೊಟ್ಟ. “ನಮ್ ಮಂಡೋದರಿಗೆ ಕ್ಲೀನ್ ಶೇವ್ ಇಷ್ಟ ಕಣೋ. ನೀನ್ ಯಾವತ್ತಾದ್ರು ಸೀತಾಗೆ ನಿನಗೇನು ಇಷ್ಟ ಅಂತ ಕೇಳಿದ್ಯ?” ಅಂದುಬಿಟ್ಟ. ಆಡಿಯನ್ಸ್ ಜೋರಾಗಿ  ಚಪ್ಪಾಳೆ ತಟ್ಟಿದರು. ಆಗಲೇ ತಿರ್ಗಾ ನಮ್ ಅಕ್ಕೈ ಬಂದು “ಬಾರೇ ಏ ಲೇಪಾಕ್ಷಿ, ಮೀನಾಕ್ಷಿ, ಕಾಮಾಕ್ಷಿ ನಾವು ಶಾಂತಿಯ ನಾಡಿಗೆ ಹೋಗೋಣ” ಅಂತ ಹೇಳಿದಾಗ ಎಲ್ಲರೂ ಸೊಂಟ ಅಲ್ಲಾಡಿಸ್ಕೊತಾ ಹೊರಟರು. ಸಭಾಂಗಣವಿಡೀ ಪ್ರೇಕ್ಷಕರ ನಗು ಹಾಗೂ  ಚಪ್ಪಾಳೆಯಿಂದ ಮುಳುಗಿತ್ತು.

ಇದನ್ನೂ ಓದಿ- ಬೀದಿ ಜೀವಗಳ ಕಥೆಗಳು

ನಾನು ಒಂದು ಮೂಲೆಯಲ್ಲಿ ಶಾಂತಿಯ ನಾಡಿಗೆ ಏನಾಯ್ತು ಅಂತ ಬೆರಗಾಗಿ ನಿಂತಿದ್ದೆ. ಎಲ್ಲರೂ ಸಂಭ್ರಮದಿಂದ ಬಂದು ಚೆನ್ನಾಗಿತ್ತು ಎಂದಾಗೆಲ್ಲಾ ನನಗೆ ಖಾಲಿ ಕಣ್ಣುಗಳು. ಅಂತೂ ನಮ್ಮದೂ ಒಂದು  ರಾಮಾಯಣ ಹೀಗಿತ್ತು.

 ರೂಮಿ ಹರೀಶ್

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

More articles

Latest article