Sunday, July 14, 2024

ನೆಹರೂ ಅವರು ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡುದು ನಿಜವೇ?

Most read

ಭಾರತದ ಮೊದಲ ಮತ್ತು ದೀರ್ಘಾವಧಿಯ ಪ್ರಧಾನಿಯಾಗಿ, ದೇಶವನ್ನು ಕಡುಕಷ್ಟ ಕಾಲದಲ್ಲಿ ಕೈಹಿಡಿದು ಮುನ್ನಡೆಸಿದ ಪಂಡಿತ್ ಜವಾಹರಲಾಲ್ ನೆಹರೂ ಅವರ ಬಗ್ಗೆ ಸಂಘಪರಿವಾರದ ದ್ವೇಷ ಬಹಳ ಹಳೆಯದು. ಇದರ ಭಾಗವಾಗಿಯೇ, ಅಪ್ಪಟ ಸುಳ್ಳುಗಳನ್ನು ಹರಡುವ ಮೂಲಕ ಅವರ ತೇಜೋವಧೆ ಮಾಡುವ ಯತ್ನ ಕಳೆದ ಸುಮಾರು ಎಪ್ಪತ್ತೈದು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಎಲ್ಲಿವರೆಗೆ ಅಂದರೆ, ‘ಅವರು ಮೂಲತಃ ಹಿಂದೂ ಅಲ್ಲ, ಮುಸ್ಲಿಂ’, ‘ತಾನು ಆಕಸ್ಮಿಕವಾಗಿ ಹಿಂದೂ ಆದೆ ಎಂದು ಅವರೇ ಹೇಳಿದ್ದರು’, ‘ಅವರು ತನ್ನ ಬಟ್ಟೆ ಇಸ್ತ್ರಿ ಮಾಡಿಸಲು ವಾಯುಪಡೆ ವಿಮಾನದಲ್ಲಿ ಅವನ್ನು ಇಂಗ್ಲೆಂಡ್ ಗೆ ಕಳುಹಿಸುತ್ತಿದ್ದರು’, ‘ಅವರು ಸ್ತ್ರೀಲೋಲನಾಗಿದ್ದರು’ ಎಂದೆಲ್ಲ ಅಸಂಖ್ಯ ಸುಳ್ಳುಗಳನ್ನು ಹರಿಬಿಡಲಾಗಿದೆ. ವಾಟ್ಸಪ್ ನಂತಹ ಸಾಮಾಜಿಕ ಮಾಧ್ಯಮದ ಕಾಲದಲ್ಲಿಯಂತೂ ಈ ಸುಳ್ಳುಗಳ ಹರಡುವಿಕೆಯ ವ್ಯಾಪ್ತಿ ಮತ್ತು ವೇಗಕ್ಕೆ ಕೊನೆಯೆಂಬುದೇ ಇಲ್ಲ.

ಇವೆಲ್ಲ ಸುಳ್ಳುಗಳಿಗೆ ಕಲಶವಿಟ್ಟಂತೆ ‘ಅವರು ತಮಗೆ ತಾವೇ ಭಾರತ ರತ್ನ ಪುರಸ್ಕಾರ ಕೊಟ್ಟುಕೊಂಡಿದ್ದರು’ ಎಂಬ ಇನ್ನೊಂದು ಸುಳ್ಳನ್ನೂ ಹರಿಬಿಡಲಾಯಿತು. ಈ ಸುಳ್ಳನ್ನು ಸತ್ಯ ಎಂದುಕೊಂಡ ಅಸಂಖ್ಯ ವಾಟ್ಸಪ್ ವಿವಿ ಪವೀಧರರು ನಮ್ಮಲ್ಲಿದ್ದಾರೆ. ಇದರಲ್ಲಿ ದೇಶದ ಪ್ರಖ್ಯಾತ ನ್ಯೂಸ್ ಆಂಕರ್ ಗಳೂ ಸೇರಿದ್ದಾರೆ.

ಭಾರತ ರತ್ನ ಕೊಟ್ಟುಕೊಂಡುದು ನಿಜವೇ?

ನಿಜವಾಗಿಯೂ ನೆಹರೂ ಅವರು ತಮಗೆ ತಾವೇ ‘ಭಾರತ ರತ್ನ’ ಕೊಟ್ಟುಕೊಂಡರೇ? ಅಂದಿನ ರಾಜಕೀಯ ಬೆಳವಣಿಗೆಗಳು, ಗಜೆಟ್ ನೋಟಿಫಿಕೇಶನ್, ಪತ್ರಿಕಾ ವರದಿ ಇತ್ಯಾದಿ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆಗೆ ಉತ್ತರ ಹುಡುಕೋಣ.

ನೆಹರೂ ಅವರು ವೈಜ್ಞಾನಿಕ ತರ್ಕದಲ್ಲಿ ಅಚಲ ನಂಬಿಕೆ ಇರಿಸಿದ್ದವರು. “ನೀವು ಪ್ರಶ್ನಿಸುವ, ವಾದಿಸುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು” ಎಂದು ಅವರು ಜನರಿಗೆ ಪದೇ ಪದೇ ಹೇಳುತ್ತಿದ್ದರು. ಭಾರತದ ಸಂವಿಧಾನದಲ್ಲಿ ‘ವೈಜ್ಞಾನಿಕ ಮನೋಭಾವ’ ಎಂಬ ಪದ ಸೇರಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದು ಅವರೇ. ಉನ್ನತ ಸೆಕೆಂಡರಿ ಶಿಕ್ಷಣದ ಮೂಲಕ, ಸಾಕ್ಷ್ಯಾಧಾರ ಮತ್ತು ಸತ್ಯಾಂಶ ಆಧರಿಸಿದ ವಿಮರ್ಶಾತ್ಮಕ ಆಲೋಚನೆಯನ್ನು ಮುಂದಕ್ಕೊತ್ತಲು ಅವರು ಮಾಡಿದ ಯತ್ನಗಳು ಅವರ ಈ ವೈಜ್ಞಾನಿಕ ಮನೋಭಾವದ ತುಡಿತಕ್ಕೆ ಪುರಾವೆ. ಇಂತಹ ನೆಹರೂ ಅವರು ತನಗೆ ತಾನೇ ಪುರಸ್ಕಾರ ಕೊಟ್ಟುಕೊಳ್ಳುವ ಮಟ್ಟಕ್ಕೆ ಇಳಿಯುವುದನ್ನು ಕನಸು ಮನಸಿನಲ್ಲಾದರೂ ಯೋಚಿಸುವುದು ಸಾಧ್ಯವೇ?

‘ಭಾರತ ರತ್ನ’ ಪುರಸ್ಕಾರಕ್ಕೆ ಸಂಬಂಧಿಸಿದಂತೆ ಎಲ್ಲ ಸಮಸ್ಯೆಗಳ ಮೂಲ ಇರುವುದು ಈ ಪುರಸ್ಕಾರಕ್ಕೆ ನಾಮಕರಣದ ಪ್ರಕ್ರಿಯೆಯಲ್ಲಿ. ಸಾಮಾನ್ಯವಾಗಿ ಪ್ರಧಾನಿಗಳು ಹೆಸರನ್ನು ಶಿಫಾರಸು ಮಾಡುತ್ತಾರೆ ಮತ್ತು ರಾಷ್ಟ್ರಪತಿಗಳು ಅದನ್ನು ಅನುಮೋದಿಸುತ್ತಾರೆ ಎಂದು ನಾವು ಅಂದುಕೊಂಡಿದ್ದೇವೆ. ಆದರೆ ಜನವರಿ 2, 1954 ರ ಗಜೆಟ್ ನೋಟಿಫಿಕೇಶನ್ ನಲ್ಲಿ ಈ ಪ್ರಕ್ರಿಯೆಯ ಉಲ್ಲೇಖವೇ ಕಾಣಿಸುವುದಿಲ್ಲ. ‘ಭಾರತ ರತ್ನ’ ಪುರಸ್ಕಾರ ಘೋಷಣೆ ಶುರುವಾದುದು ಅದೇ ವರ್ಷದಲ್ಲಿ. ಈ ಪುರಸ್ಕಾರವನ್ನು ಮರಣೋತ್ತರವಾಗಿಯೂ ನೀಡಬಹುದು ಎಂಬ ಬಗ್ಗೆ ಹೆಚ್ಚುವರಿ ನೋಟಿಫಿಕೇಶನ್ ಹೊರಡಿಸಲಾದುದು ಜನವರಿ 15, 1955 ರಲ್ಲಿ. ಅದರಲ್ಲೂ ಇದು ಕಾಣಿಸುವುದಿಲ್ಲ. ಅಂದರೆ, ಈ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕಾಗಿ ಪ್ರಧಾನಿ ಅಥವಾ ಕ್ಯಾಬಿನೆಟ್ ಹೆಸರನ್ನು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುವುದು ಒಂದು ಸಂಪ್ರದಾಯವೇ ಹೊರತು, ಅದು ನೆಲದ ಕಾನೂನಲ್ಲ.

Studio/Sept.49, A22a(I) The Hon’ble Pandit Jawaharlal Nehru, Prime Minister of India, addresses a mammoth public meeting at Ludhiana on Sept. 18, 1949, during his tour of the East Punjab.

ಜುಲೈ 1955 ರಲ್ಲಿ ನೆಹರೂ ಅವರಿಗೆ ‘ಭಾರತ ರತ್ನ’ ಪ್ರದಾನ ಮಾಡಲಾಯಿತು. ಇದಕ್ಕೆ ಮೊದಲು ಎರಡು ಬಾರಿ ಈ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು; 1954 ರ ಸ್ವಾತಂತ್ರ್ಯ ದಿನೋತ್ಸವದಂದು ಸಿ ರಾಜಗೋಪಾಲಾಚಾರಿ (ರಾಜಾಜಿ ಎಂದು ಜನಪ್ರಿಯರಾದವರು; ಭಾರತದ ಕೊನೆಯ ಗವರ್ನರ್ ಜನರಲ್), ಎಸ್ ರಾಧಾಕೃಷ್ಣನ್ (ಭಾರತೀಯ ತತ್ವಶಾಸ್ತ್ರದ ಬಹುದೊಡ್ಡ ವಿದ್ವಾಂಸ, ಭಾರತದ ಎರಡನೆ ರಾಷ್ಟ್ರಪತಿ) ಮತ್ತು ಸಿವಿ ರಾಮನ್ (ನೋಬೆಲ್ ಪುರಸ್ಕೃತ ಭೌತ ವಿಜ್ಞಾನಿ) ಅವರಿಗೆ. 1955 ರ ಗಣರಾಜ್ಯ ದಿನದಂದು ಭಗವಾನ್ ದಾಸ್ (ಪ್ರಭಾವೀ ಸ್ವಾತಂತ್ರ್ಯ ಹೋರಾಟಗಾರ, ಬನಾರಸ್ ಹಿಂದೂ ವಿವಿ ಸ್ಥಾಪಿಸಲು ನೆರವಾದವರು) ಮತ್ತು ಸರ್ ಎಂ ವಿಶ್ವೇಶ್ವರಯ್ಯ (ಪ್ರಸಿದ್ಧ ಇಂಜೀನಿಯರ್) ‘ಭಾರತ ರತ್ನ’ಕ್ಕೆ ಭಾಜನರಾದರು.

ಯಶಸ್ವೀ ವಿದೇಶ ಪ್ರವಾಸದಿಂದ ಮರಳಿದ ನೆಹರೂ

ಯುರೋಪ್ ಮತ್ತು ಸೋವಿಯತ್ ಯೂನಿಯನ್ ನ ಯಶಸ್ವೀ ಪ್ರವಾಸದ ಬಳಿಕ ನೆಹರೂ ಅವರು ಜುಲೈ 13, 1955 ರಂದು ದೆಹಲಿಗೆ ಮರಳಿದ್ದರು. ಶೀತಲ ಯುದ್ಧ ಜಗತ್ತಿನಾದ್ಯಂತ ಪಸರಿಸುತ್ತಿದ್ದ ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವುದು ಅವರ ಈ ಪ್ರವಾಸದ ಉದ್ದೇಶವಾಗಿತ್ತು. ಜಾಗತಿಕ ವ್ಯವಹಾರಗಳಲ್ಲಿ ಭಾರತವನ್ನು ಪ್ರಮುಖ ಪಾತ್ರಧಾರಿಯನ್ನಾಗಿಸುವ ನೆಹರೂ ಅವರ ಈ ಯತ್ನವು ಭಾರತದ ಹೊರಗೆ ಭಾರೀ ಬೆಂಬಲ ಪಡೆದಿತ್ತು.

ನೆಹರೂ ಭಾರತಕ್ಕೆ ಮರಳಿದಾಗ ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಶಿಷ್ಟಾಚಾರ ಬದಿಗಿರಿಸಿ ನೆಹರೂ ಅವರನ್ನು ಎದುರ್ಗೊಳ್ಳಲು ಸ್ವತಃ ವಿಮಾನ ನಿಲ್ದಾಣಕ್ಕೆ ಧಾವಿಸಿದ್ದರು. ನೆಹರೂ ಬಂದಿಳಿದಾಗ ಅವರನ್ನು ಅಭಿನಂದಿಸಲು ವಿಮಾನ ನಿಲ್ದಾಣದಲ್ಲಿ ಭಾರೀ ಜನಸಂದಣಿ ಸೇರಿತ್ತು. ಜನರ ಉತ್ಸಾಹ ಹೇಗಿತ್ತೆಂದರೆ, ಅವರನ್ನು ಕಂಡು ನೆಹರೂ ಅವರು ದಿಲ್ಲಿ ವಿಮಾನ ನಿಲ್ದಾಣದ ಟರ್ಮಾಕ್ ನಲ್ಲಿಯೇ ಸಣ್ಣದೊಂದು ಭಾಷಣವನ್ನು ಮಾಡಿಯೇ ಬಿಟ್ಟರು.

ಪುರಸ್ಕಾರ ಘೋಷಣೆ

Nehru and Rajendra prasad

ಆ ದಿನ, ಅಂದರೆ ಜುಲೈ 15, 1955 ರಂದು ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನೆಹರೂಗಾಗಿ  ರಾಷ್ಟ್ರಪತಿ ಪ್ರಸಾದ್ ಅವರು ವಿಶೇಷ ಸರಕಾರಿ ಔತಣಕೂಟವನ್ನು ಆಯೋಜಿಸಿದ್ದರು. ರಾಜೇಂದ್ರ ಪ್ರಸಾದ್ ಅವರು ನೆಹರೂ ಅವರಿಗೆ ‘ಭಾರತ ರತ್ನ’ ಕೊಡುವ ಘೋಷಣೆ ಮಾಡಿದ್ದು ಇದೇ ಸಮಾರಂಭದಲ್ಲಿ. ಈ ವಿಷಯದ ಸುಳಿವೂ ಇರಲಿಲ್ಲ ನೆಹರೂ ಅವರಿಗೆ. ರಾಷ್ಟ್ರಪತಿಗಳ ಈ ಸುಮೊಟೋ ನಿರ್ಧಾರವನ್ನು ಅತ್ಯಂತ ಗೋಪ್ಯವಾಗಿಡಲಾಗಿತ್ತು ಎಂದು ಜುಲೈ 16, 1955 ರ ‘ಟೈಂಸ್ ಆಫ್ ಇಂಡಿಯಾ’ ಪತ್ರಿಕೆ ವರದಿ ಮಾಡಿದೆ.

Times of India report dated July 16, 1955 

ಆ ಔತಣ ಕೂಟದಲ್ಲಿ ನೆಹರೂ ಅವರನ್ನು, ‘ನಮ್ಮ ಕಾಲದ ಶ್ರೇಷ್ಠ ಶಾಂತಿದೂತ’ ಎಂದು ಪ್ರಸಾದ್ ಬಣ್ಣಿಸಿದರು. “ನಿಜ ಹೇಳಬೇಕೆಂದರೆ, ನಾನು ಪ್ರಧಾನಿ ಅಥವಾ ಕ್ಯಾಬಿನೆಟ್ ಶಿಫಾರಸು ಅಥವಾ ಸಲಹೆ ಇಲ್ಲದೆಯೇ ಈ ಗೌರವ ಸಲ್ಲಿಸಲು ನಿರ್ಧರಿಸಿದೆ ಮತ್ತು ಇದೊಂದು ಅಸಾಂವಿಧಾನಿಕ ನಿರ್ಧಾರ ಎಂಬುದು ನನಗೆ ಗೊತ್ತು” ಎಂದು ಬಾಬೂ ರಾಜೇಂದ್ರ ಪ್ರಸಾದ್ ಹೇಳಿಕೊಂಡಿದ್ದರು ಎಂದು ಅಂದಿನ ಟೈಂಸ್ ಆಫ್ ಇಂಡಿಯಾ ವರದಿ ಮಾಡಿದೆ.

Said by RAjendra prasad

ಇದು ನಿಜವಾಗಲೂ ನೆಹರೂ ಅವರ ‘ಭಾರತ ರತ್ನ’ ಪುರಸ್ಕಾರದ ಬಗೆಗಿನ ಎಲ್ಲ  ತೆರನ ಊಹಾಪೋಹಗಳು ಮತ್ತು ಅವಹೇಳನಕಾರಿ ಸುಳ್ಳುಗಳಿಗೆ ಶಾಶ್ವತವಾಗಿ ತೆರೆಯೆಳೆಯಬೇಕು.

ಸೈದ್ಧಾಂತಿಕ ಸಂಘರ್ಷ

ಇಲ್ಲಿ ಗಮನಿಸತಕ್ಕ ಇನ್ನೊಂದು ಮುಖ್ಯ ವಿಷಯವೆಂದರೆ, ರಾಜಕೀಯದಲ್ಲಿ ಧರ್ಮ, ಮತ್ತಿತರ ಅನೇಕ ವಿಷಯಗಳಲ್ಲಿ ನೆಹರೂ ಮತ್ತ ಪ್ರಸಾದ್ ನಡುವೆ ತೀವ್ರ ಭಿನ್ನಾಭಿಪ್ರಾಯ ಇತ್ತು. ಪ್ರಸಾದ್ ರ ಸಾಮಾಜಿಕ ಸಂಪ್ರದಾಯವಾದಿತನದ ಬಗ್ಗೆ ನೆಹರೂ ಅವರಲ್ಲೂ ಅಸಮಾಧಾನವಿತ್ತು. ಹಿಂದೂ ಸಮಾಜದಲ್ಲಿ ಸುಧಾರಣೆ ತರಲು ಅಂಬೇಡ್ಕರ್ ಪ್ರಸ್ತಾವಿಸಿದ ಹಿಂದೂ ಕೋಡ್ ಬಿಲ್ ಬಗ್ಗೆ ರಾಜೇಂದ್ರ ಪ್ರಸಾದ್ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು.

1951 ರಲ್ಲಿ ಗುಜರಾತ್ ನ ಸೋಮನಾಥ ದೇಗುಲ ವಿಷಯದಲ್ಲಿ ನೆಹರೂ ಮತ್ತು ಪ್ರಸಾದ್ ನಡುವೆ ತಿಕ್ಕಾಟ ನಡೆದಿತ್ತು. ನವೀಕೃತ ದೇಗುಲದ ಉದ್ಘಾಟನೆಯಲ್ಲಿ ಭಾಗವಹಿಸಲು ಪ್ರಸಾದ್ ಒಪ್ಪಿಕೊಂಡಿದ್ದರು. ಆದರೆ, ಸಾಂವಿಧಾನಿಕ ಪದವಿಗಳಲ್ಲಿ ಇರುವವರು ಇಂಥ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು, ಪ್ರಭುತ್ವವು ಇದರಿಂದ ಸೂಕ್ತ ಅಂತರ ಕಾಯ್ದುಕೊಳ್ಳಬೇಕು ಎನ್ನುವುದು ನೆಹರೂ ಅವರ ನಿಲುವಾಗಿತ್ತು.

ಹೀಗೆ ನೆಹರೂ ಮತ್ತು ರಾಜೇಂದ್ರ ಪ್ರಸಾದ್ ನಡುವೆ ಅನೇಕ ಸೈದ್ಧಾಂತಿಕ ಸಂಘರ್ಷಗಳು ಇದ್ದುವಾದರೂ, ಅವರಲ್ಲಿ ಪರಸ್ಪರ ಅಗೌರವ ಇರಲಿಲ್ಲ. ರಾಜಕೀಯ ವಿರೋಧವು ಎಂದೂ ವೈಯಕ್ತಿಕ ಶತ್ರುತ್ವವಾಗಿ ಬದಲಾಗಿರಲಿಲ್ಲ. ರಾಷ್ಟ್ರೀಯ ಹಿತಾಸಕ್ತಿಯ ಪ್ರಶ್ನೆ ಬಂದಾಗಲಂತೂ ಅವರ ನಡುವೆ ಸಂಘರ್ಷ ಇರಲೇ ಇಲ್ಲ. ಬಾಬೂ ರಾಜೇಂದ್ರ ಪ್ರಸಾದ್ ಅವರು ನೆಹರೂ ಅವರನ್ನು ‘ಭಾರತ ರತ್ನ’ ಪುರಸ್ಕಾರದಿಂದ ಸನ್ಮಾನಿಸಿದ್ದು ಇದಕ್ಕೆ ಅತ್ಯುತ್ತಮ ಉದಾಹರಣೆ.

(ಈ ಲೇಖನಕ್ಕೆ ಕೆಲ ಮಾಹಿತಿಗಳನ್ನು ‘ದಿ ವೈರ್’ ವೆಬ್ ಪತ್ರಿಕೆಯ ಲೇಖನದಿಂದ ಪಡೆದುಕೊಳ್ಳಲಾಗಿದೆ)

ಶ್ರೀನಿವಾಸ ಕಾರ್ಕಳ, ಚಿಂತಕರು

More articles

Latest article