ದಾಭೋಲ್ಕರ್ ಹಂತಕರಿಗೆ ಶಿಕ್ಷೆ  ಸಂಚುಕೋರರಿಗೆ ರಕ್ಷೆ

Most read

ಸಂಘಿ ಮನಸ್ಥಿತಿಯ ಇಡೀ ವ್ಯವಸ್ಥೆಯೇ ಸನಾತನಿಗಳ ಪರವಾಗಿರುವಾಗ ನಿಜವಾದ ಸಂಚುಕೋರರಿಗೆ ಶಿಕ್ಷೆ ಆಗಲು ಹೇಗೆ ಸಾಧ್ಯ? ಮಹಾರಾಷ್ಟ್ರ ಸರಕಾರ ಮೇಲ್ಮನವಿ ಸಲ್ಲಿಸಬಹುದಾಗಿದೆ. ಜೀವಾವಧಿ ಶಿಕ್ಷೆಯನ್ನು ಗಲ್ಲು ಶಿಕ್ಷೆಯಾಗಿ ಪರಿವರ್ತಿಸಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಮಾಡಿಕೊಳ್ಳಬೇಕಿದೆ. ಶಿಕ್ಷೆಯಿಂದ ನುಸುಳಿಕೊಂಡ ಸಂಚುಕೋರರ ಮೇಲೆ ಮರುವಿಚಾರಣೆ ಮಾಡಬೇಕೆಂದು ಆಗ್ರಹಿಸಬೇಕಿದೆ. ಆದರೆ ಮಹಾರಾಷ್ಟ್ರದಲ್ಲಿರುವುದು ಆರೆಸ್ಸೆಸ್ ಕೃಪಾ ಪೋಷಿತ ಬಿಜೆಪಿ ನೇತೃತ್ವದ ಸರಕಾರ. ಸನಾತನಿಗಳ ವಿರುದ್ಧ ಮರುತನಿಖೆಗೆ ಆದೇಶಿಸುವ ಪ್ರಯತ್ನವನ್ನು ಅದು ಮಾಡಲಾರದು- ಶಶಿಕಾಂತ ಯಡಹಳ್ಳಿ, ಪತ್ರಕರ್ತರು.

ಕೊನೆಗೂ ಹನ್ನೊಂದು ವರ್ಷಗಳ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯದ ತೀರ್ಪು ಹೊರಗೆ ಬಂದಿದೆ. ಇಬ್ಬರು ಹಂತಕರಿಗೆ ಶಿಕ್ಷೆಯಾಗಿದ್ದು ಅವರ ಹಿಂದಿದ್ದ ಸಂಚುಕೋರರು ಆರೋಪ ಮುಕ್ತರಾಗಿದ್ದಾರೆ.

“ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ” ಯ ಮೂಲಕ ಸನಾತನ ಮೌಢ್ಯಗಳ ವಿರುದ್ಧ ಸಮರ ಸಾರಿದ್ದ ವಿಚಾರವಾದಿ ದಾಭೋಲ್ಕರ್ ರವರನ್ನು ‘ಸನಾತನಾ ಸಂಸ್ಥೆ’ಯ  ಸಂತಾನಗಳು 2023 ಆಗಸ್ಟ್ 20 ರಂದು ಪುಣೆಯಲ್ಲಿ ಹಾಡು ಹಗಲೇ ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಸುದೀರ್ಘ ವಿಚಾರಣೆಯ ನಂತರ ಮೇ 10 ರಂದು ಹೆಚ್ಚುವರಿ ವಿಶೇಷ ನ್ಯಾಯಾಲಯವು ಶೂಟರ್ ಗಳಾದ ಸಚಿನ್ ಅಂದುರೆ ಹಾಗೂ ಶರದ್ ಕಳಸ್ಕರ್ ಎನ್ನುವ ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತು. ಹತ್ಯೆಯ ಪ್ರಧಾನ ಸಂಚುಕೋರರೆಂದು ಆರೋಪಿತರಾಗಿದ್ದ ತಾವ್ಡೆ ಸಂಜೀವ್ ಪುಣಾಳೇಕರ್ ಮತ್ತು ವಿಕ್ರಮ್ ಭಾವೆ ಈ ಇಬ್ಬರನ್ನೂ ಆರೋಪ ಮುಕ್ತರನ್ನಾಗಿಸಿದ್ದು ಮಾನವೀಯತಾವಾದಿಗಳಿಗೆ ಆತಂಕಕ್ಕೆ ಕಾರಣವಾಯ್ತು.

ಯಾಕೆಂದರೆ ಕೊಂದವರಷ್ಟೇ ನೀಚರು ಹತ್ಯೆಯ ಹಿಂದಿದ್ದ ಸಂಚುಕೋರರು. ಇದೊಂದು ಸಂಘಟಿತ ಹತ್ಯೆ. ಸನಾತನ ಧರ್ಮದ  ಅಮಲೇರಿಸಿಕೊಂಡ ಕಿರಾತಕರ ಗುಂಪೊಂದು ಪೂರ್ವಭಾವಿ ಸಂಚು ಹೂಡಿ ವಂಚಿಸಿ ಮಾಡಿದ ಕೊಲೆ. ಇದು ಕೇವಲ ಒಬ್ಬ ವ್ಯಕ್ತಿಯ ಹತ್ಯೆ ಮಾತ್ರವಲ್ಲ, ಒಂದಿಡೀ ವೈಚಾರಿಕ ಪ್ರಜ್ಞೆಯ ಮೇಲೆ ಮಾಡಲಾದ ದಮನ. ಇಲ್ಲಿ ದಾಭೋಲ್ಕರ್ ರವರ ಕೊಲೆ ಕೇವಲ ಸಾಂಕೇತಿಕ ಮಾತ್ರ. ಆ ಮೂಲಕ ವೈದಿಕಶಾಹಿ ಸನಾತನ ಧರ್ಮದ ಅನೈತಿಕತೆ ಹಾಗೂ ಅನಾಚಾರವನ್ನು ಪ್ರಶ್ನಿಸುವ ಎಲ್ಲರಿಗೂ ಈ ಸನಾತನಿಗಳು ಕೊಟ್ಟ ಎಚ್ಚರಿಕೆಯಾಗಿದೆ.

ಹೀಗಾಗಿ ಕೇವಲ ಗುಂಡು ಹೊಡೆದ ಕೈಗಳಿಗೆ ಶಿಕ್ಷೆ ಕೊಟ್ಟು ಅದರ ಹಿಂದಿರುವ ಮಲಿನಗೊಂಡ ಮೆದುಳುಗಳನ್ನು ಆರೋಪಮುಕ್ತ ಗೊಳಿಸುವುದು ಈ ಸನಾತನ ಸೈತಾನ ಶಕ್ತಿಗಳಿಗೆ ಬಲ ತುಂಬಿದಂತಾಗಿದೆ.

ಸೈದ್ಧಾಂತಿಕ ವಿರೋಧವನ್ನು ಚರ್ಚೆ ಸಂವಾದಗಳ ಮೂಲಕ ವಿರೋಧಿಸಲಾಗದ ಈ ಮನುವಾದಿ ರೋಗ ಪೀಡಿತ ರಣಹೇಡಿಗಳು ಪ್ರಶ್ನಿಸುವವರನ್ನೇ ಸಾಯಿಸುವ ಮೂಲಕ ವೈಚಾರಿಕತೆಯನ್ನು ನಾಶ ಮಾಡಬಹುದು ಎಂಬ ಭ್ರಮೆಯಲ್ಲಿದೆ. ಒಂದಿಬ್ಬರ ಧ್ವನಿ ಅಡಗಿಸಿ ಹೆದರಿಸಿದರೆ ಪ್ರತಿರೋಧವನ್ನೇ ಪರಿಸಮಾಪ್ತಿ ಮಾಡಬಹುದೆಂಬ ತಪ್ಪು ಕಲ್ಪನೆಯಲ್ಲಿದೆ.

ದಾಭೋಲ್ಕರ್‌ ಹತ್ಯೆಯ ಹಂತಕರು ಮತ್ತು ಸಂಚುಕೋರರು

ಇದೇ ಸನಾತನಿಗಳ ಪೂರ್ವಜರು 12 ನೇ ಶತಮಾನದಲ್ಲಿ ಮಾನವೀಯತಾವಾದಿ ಬಸವಾದಿ ಶರಣರನ್ನು ಕೊಂದು ವೈಚಾರಿಕತೆಯನ್ನು ನಾಶ ಮಾಡಿದೆವು ಎಂದು ವಿಜೃಂಭಿಸಿದ್ದರು. ಆದರೆ ಬಸವಾನುಯಾಯಿಗಳ ಸಂಖ್ಯೆ ಹೆಚ್ಚುತ್ತಲೇ ಹೋಯ್ತು. ಶರಣರ  ವಚನಗಳು ಈ ಪುರೋಹಿತಶಾಹಿಗಳ ಜೀವವಿರೋಧಿ ಸಿದ್ಧಾಂತವನ್ನು ಪ್ರತಿ ನಿತ್ಯ ಇರಿಯುವ ಕತ್ತಿಯಾಗಿ ಕಾಲಯಾನ ಸಂಚಾರಿಯಾಯ್ತು. ಮನುವಾದಿಗಳಿಂದ ದಬ್ಬಾಳಿಕೆಗೆ ಒಳಗಾಗಿ ದೇಶಾಂತರವಾದಷ್ಟೂ ಬೌದ್ಧ ಧರ್ಮ ಜಗದಗಲ ಟೊಂಗೆ ಟಿಸಿಲು ಚಾಚಿ ಹಬ್ಬಿ ನಿಂತಿತು. ಸನಾತನವಾದಿ ಸಂತತಿಯು ಅಂಬೇಡ್ಕರ್ ರವರನ್ನು ಅಪಮಾನಿಸಿ ತುಳಿದಷ್ಟೂ ಅಂಬೇಡ್ಕರ್ ವಾದ ತನ್ನ ಪ್ರಖರತೆಯನ್ನು ಹೆಚ್ಚಿಸಿ ಕೊಂಡಿತು.

ಈ ಎಲ್ಲಾ ಚಾರಿತ್ರಿಕ ಪಲ್ಲಟಗಳನ್ನು ಮರೆತ ವೈದಿಕಶಾಹಿ ಸನಾತನವಾದಿಗಳು ಮಾತ್ರ ಅವೈಚಾರಿಕ ಸಂಘಗಳನ್ನು ಕಟ್ಟಿಕೊಂಡು ಹಿಂದೂ ಯುವಕರ ಮನಸ್ಸಲ್ಲಿ ಮನುವಾದಿ ಮಾಲಿನ್ಯವನ್ನು ತುಂಬಿ ವೈಚಾರಿಕತೆಯ ಹತ್ಯೆ ಮಾಡುವ ಹುನ್ನಾರವನ್ನು ಮಾಡುತ್ತಲೇ ಇದ್ದಾರೆ. ದಮನಿಸಿದಷ್ಟೂ ವೈಚಾರಿಕತೆ ಬೆಳೆಯುತ್ತಲೇ ಇರುತ್ತದೆ, ಮೌಢ್ಯಾಚಾರಗಳನ್ನು ಪ್ರಶ್ನಿಸಿ ಜನರಲ್ಲಿ ಜಾಗೃತಿ ಮೂಡಿಸುವ ವಿಚಾರವಂತರ ಸಂತತಿ ಹೆಚ್ಚುತ್ತಲೇ ಇರುತ್ತದೆ.

ಯಾಕೆ ದಾಭೋಲ್ಕರ್ ಹತ್ಯೆಯ ಹಿಂದಿರುವ ಸಂಚುಕೋರರಿಗೆ ಶಿಕ್ಷೆ ಕೊಡಿಸಲು ಸಾಧ್ಯವಾಗಲಿಲ್ಲ? ತನಿಖಾ ಸಂಸ್ಥೆಗಳ ವೈಫಲ್ಯವೋ? ಇಲ್ಲಾ ವಿಚಾರಣಾ ಪ್ರಕ್ರಿಯೆಯಲ್ಲಿ ಭಾಗಿದಾರರಾದ ಕೆಲವರ ಮನದೊಳಗಿರುವ ಹಿಂದುತ್ವವಾದಿ ಪರ ಮನಸ್ಥಿತಿಯೋ? ಕೊಂದವರು ಸಿಕ್ಕ ಮೇಲೆ ಕೊಲ್ಲಿಸಿದವರೂ ಸಿಗಲೇಬೇಕಲ್ಲವೇ? ಸಿಕ್ಕವರು ಅಪರಾಧಿಗಳು ಅಲ್ಲವೆಂದ ಮೇಲೆ ನಿಜವಾದ ಅಪರಾಧಿಗಳು ಯಾರು? ಹತ್ಯಾ ಸಂಚಿನ ಹಿಂದಿನ ಸೂತ್ರದಾರರನ್ನು ಕಂಡು ಹಿಡಿಯಲಾಗದಷ್ಟು ನಮ್ಮ ತನಿಖಾ ಸಂಸ್ಥೆಗಳು ದುರ್ಬಲವಾಗಿವೆಯಾ? ಕಂಡು ಹಿಡಿದರೂ ಸಾಕ್ಷ್ಯಾಧಾರಗಳ ಸಮೇತ ಅಪರಾಧವನ್ನು ಸಾಬೀತು ಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆಯಾ? ಒಂದಿಬ್ಬರಿಗೆ ಶಿಕ್ಷೆ ಕೊಡಿಸಿ ಅವರ ಹಿಂದಿರುವ ಬೃಹತ್ ಸನಾತನ ಜಾಲವನ್ನು ರಕ್ಷಿಸುವ ಹುನ್ನಾರವೂ  ಅಡಗಿದೆಯಾ?

ಈ ಅನುಮಾನ ವ್ಯಕ್ತವಾಗಲೂ ಕಾರಣ ಇದೆ. ಅದನ್ನು ನ್ಯಾಯಾಲಯವೂ ಗುರುತಿಸಿದೆ. “ಈ ಪ್ರಕರಣದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಹಾಗೂ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಕೆಲವು ಸೆಕ್ಷನ್ ಗಳಡಿ ಆರೋಪಗಳನ್ನು ಹೊರಿಸಲಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ ಈ ಆರೋಪಗಳನ್ನು ರುಜುವಾತುಪಡಿಸಲು ಆಗಿಲ್ಲ” ಎಂದು ನ್ಯಾಯಾಧೀಶರೇ ತೀರ್ಪಿನಲ್ಲಿ ಹೇಳಿದ್ದಾರೆ. ಅಂದರೆ ತನಿಖಾಧಿಕಾರಿ ಸರಕಾರ ಇಲ್ಲವೇ ಸಂಘ ಪರಿವಾರದ ಒತ್ತಡಕ್ಕೊಳಗಾಗಿ ಉದ್ದೇಶ ಪೂರ್ವಕವಾಗಿ ತನಿಖೆಯ ದಿಕ್ಕು ತಪ್ಪಿಸಿದರಾ? ಎನ್ನುವ ಪ್ರಶ್ನೆ ಎದುರಾಗುತ್ತದೆ.

” ಈ ಪ್ರಕರಣದಲ್ಲಿ ತಾವ್ಡೆ ಪ್ರಮುಖ ಸಂಚುಕೋರ ಎಂದು ಆರೋಪಿಸಲಾಗಿತ್ತು, ಅವರ ಮೇಲೆ ಸಂಶಯ ಪಡಲಿಕ್ಕೆ ಬೇಕಾದಷ್ಟು ಅವಕಾಶವೂ ಇತ್ತು. ಆದರೆ ಸಂಶಯವನ್ನು ಸಾಕ್ಷ್ಯವನ್ನಾಗಿ ಪರಿವರ್ತಿಸುವಲ್ಲಿ ಪ್ರಾಸಿಕ್ಯೂಶ ನ್ ವಿಫಲವಾಯ್ತು.  ಭಾವೆ ಮತ್ತು ಪುಣಾಳೇಕರರನ್ನು ಸಾಕ್ಷ್ಯಗಳ ಕೊರತೆಯ ಕಾರಣದಿಂದ ಆರೋಪ ಮುಕ್ತ ಗೊಳಿಸಬೇಕಾಯ್ತು” ಎಂದು ನ್ಯಾಯಾಲಯ ಹೇಳಿದೆ. ಅಂದರೆ ನ್ಯಾಯಾಧೀಶರಿಗೂ ಗೊತ್ತಿದೆ ದಾಭೋಲ್ಕರ್ ಹತ್ಯೆಯ ಹಿಂದಿರುವ ಸಂಚುಕೋರ ಯಾರು ಎಂದು. ಆದರೆ ಸರಿಯಾದ ಕ್ರಮದಲ್ಲಿ ವಾದ ಮಂಡಿಸದೇ ಇದ್ದರಿಂದ ನ್ಯಾಯಾಲಯವೂ ಆರೋಪಿಯನ್ನು ಬಿಡುಗಡೆ ಮಾಡುವ ಅಸಹಾಯಕತೆಗೆ ಒಳಗಾಗಬೇಕಾಯ್ತು. ಅಂದರೆ ಕೋರ್ಟ್ ಹೇಳಿದ ಹಾಗೆ ತನಿಖಾಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಾದ ಮಂಡಿಸಿದ ವಕೀಲರುಗಳ ವೈಫಲ್ಯದಿಂದಾಗಿ ಹತ್ಯೆಯ ಹಿಂದಿನ ಸಂಚುಕೋರರು ಬಿಡುಗಡೆ ಹೊಂದಿದರು.

ದಾಭೋಲ್ಕರ್‌ ಹತ್ಯೆಯಾದ ಸ್ಥಳ

ಸನಾತನಿ ಕೊಲೆಪಾತಕರ ಪರವಾಗಿ ಸರಕಾರಿ ವಕೀಲರೂ ಇದ್ದಾರಾ ಎಂಬ ಸಂದೇಹವನ್ನೂ ಅಲ್ಲಗಳೆಯುವಂತಿಲ್ಲ. ಯಾಕೆಂದರೆ ” ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ನೀಡುವುದಕ್ಕೆ ಅವಕಾಶವಿದೆ” ಎಂದು ನ್ಯಾಯಾಧೀಶರೇ ಹೇಳಿದರಾದರೂ “ಅಪರಾಧಿಗಳಿಗೆ ಮರಣದಂಡನೆ ವಿಧಿಸುವಂತೆ ಕೋರುವುದಿಲ್ಲ” ಎಂದು ಸರಕಾರಿ ವಕೀಲ ಪ್ರಕಾಶ್ ಸೂರ್ಯವಂಶಿ ಸ್ಪಷ್ಟಪಡಿಸಿದರು. ಅಂದರೆ ಸಂಚುಕೋರರಿಗೆ ಶಿಕ್ಷೆಯಾಗದಂತೆ ನೋಡಿಕೊಂಡ ಸಂಘಿ ಪರ ವ್ಯವಸ್ಥೆಯು ಕೊಲೆಪಾತಕರೂ ಮರಣದಂಡನೆ ಶಿಕ್ಷೆಗೆ ಗುರಿಯಾಗದಂತೆ ಕಾಪಾಡಿದೆ. ಈಗಾಗಲೇ ಹತ್ತು ವರ್ಷ ಶಿಕ್ಷೆ ಅನುಭವಿಸಿದ ಕೊಲೆಗಾರರು ಇನ್ನು ಕೆಲವೇ ವರ್ಷದಲ್ಲಿ ಬಾಕಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗುತ್ತಾರೆ. ಮತ್ತೆ ಈ ಸನಾತನಿ ಸಂತತಿಗಳು ಕಾನೂನಿನ ಭಯವೂ ಇಲ್ಲದೆ ಸೈದ್ಧಾಂತಿಕ ವಿರೋಧಿಗಳ ಹತ್ಯೆಯ ಸಂಚು ರೂಪಿಸಿ ವಿಚಾರವಂತರಲ್ಲಿ ಭಯವನ್ನು ಹುಟ್ಟಿಸುವ ಕೆಲಸ ಮಾಡುತ್ತಾರೆ.

“ದಾಭೋಲ್ಕರ್ ರವರ ಹತ್ಯೆಯ ಪ್ರಮುಖ ಸಂಚುಕೋರರನ್ನು ಶಿಕ್ಷೆಗೆ ಗುರಿಪಡಿಸದೇ ಇದ್ದರೆ ಮುಂದೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ” ಎಂದು ದಾಭೋಲ್ಕರ್ ರವರ ಪುತ್ರ ಹಾಮೀದ್ ಸರಿಯಾಗಿಯೇ ಹೇಳಿದ್ದಾರೆ. ಆದರೆ ಸಂಘಿ ಮನಸ್ಥಿತಿಯ ಇಡೀ ವ್ಯವಸ್ಥೆಯೇ ಸನಾತನಿಗಳ ಪರವಾಗಿರುವಾಗ ನಿಜವಾದ ಸಂಚುಕೋರರಿಗೆ ಶಿಕ್ಷೆ ಆಗಲು ಹೇಗೆ ಸಾಧ್ಯ? ಮಹಾರಾಷ್ಟ್ರ ಸರಕಾರ ಮೇಲ್ಮನವಿ ಸಲ್ಲಿಸಬಹುದಾಗಿದೆ. ಜೀವಾವಧಿ ಶಿಕ್ಷೆಯನ್ನು ಗಲ್ಲು ಶಿಕ್ಷೆಯಾಗಿ ಪರಿವರ್ತಿಸಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಮಾಡಿಕೊಳ್ಳಬೇಕಿದೆ. ಶಿಕ್ಷೆಯಿಂದ ನುಸುಳಿಕೊಂಡ ಸಂಚುಕೋರರ ಮೇಲೆ ಮರುವಿಚಾರಣೆ ಮಾಡಬೇಕೆಂದು ಆಗ್ರಹಿಸಬೇಕಿದೆ. ಆದರೆ ಆ ಸಾಧ್ಯತೆ ಕ್ಷೀಣವಾಗಿದೆ. ಯಾಕೆಂದರೆ ಮಹಾರಾಷ್ಟ್ರದಲ್ಲಿರುವುದು ಆರೆಸ್ಸೆಸ್ ಕೃಪಾ ಪೋಷಿತ ಬಿಜೆಪಿ ನೇತೃತ್ವದ ಸರಕಾರ. ಸನಾತನಿಗಳ ವಿರುದ್ಧ ಮರುತನಿಖೆಗೆ ಆದೇಶಿಸುವ ಪ್ರಯತ್ನವನ್ನು ಅದು ಮಾಡಲಾರದು.

ಇನ್ನು ವಿಚಾರವಾದಿಗಳಾದ ಪನ್ಸಾರೆ, ಡಾ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶರವರ ಹತ್ಯೆಯ ಕುರಿತು ವಿಚಾರಣೆ ಪೂರ್ಣಗೊಂಡು ತೀರ್ಪು ಬರಬೇಕಿದೆ. ಈ ಹತ್ಯೆಗಳ ಹಿಂದೆಯೂ ಇದೇ ಸನಾತನ ಸಂಘಟನೆಯವರ ಕೈವಾಡವಿದೆ. ಈ ಹತ್ಯೆಗಳ ಹಿಂದಿರುವ ಎಲ್ಲಾ ಸಂಚುಕೋರರಿಗೂ ಕಠಿಣಾತಿ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕಿದೆ. ತನಿಖೆ ಹಾಗೂ ಪ್ರಾಸಿಕ್ಯೂಶನ್ ದಾರಿ ತಪ್ಪದೇ ಇದ್ದರೆ ಈ ಸನಾತನಿ ಸಂಚುಕೋರರಿಗೆ ಶಿಕ್ಷೆ ಗ್ಯಾರಂಟಿ. ಆ ಒಂದು ಆದೇಶಕ್ಕಾಗಿ ಕಾಯಲಾಗುತ್ತಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಸೋಲಿನ ಹಾದಿಯಲ್ಲಿ ಮೋದಿ?

More articles

Latest article