ಬೆಂಗಳೂರು ಆ 26: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನೋಂದಾಯಿತ ಸಂಸ್ಥೆಯಲ್ಲ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಅಸ್ತಿತ್ವದಲ್ಲೇ ಇಲ್ಲದವರ ಬಗ್ಗೆ ಪ್ರಶ್ನೆ ಕೇಳಿದರೆ ‘ಇಲ್ಲ’ ಎನ್ನುವುದೇ ಉತ್ತರವಾಗುತ್ತದೆ ಎಂದು ವ್ಯಂಗ್ಯವಾಡಿರುವ ಪ್ರಿಯಾಂಕ್ ಖರ್ಗೆ, ಮೂರ್ಖತನಕ್ಕೆ ಮೂರ್ತರೂಪ ತೋರಿಸಬೇಕೆಂದರೆ ಬಿಜೆಪಿ ಕರ್ನಾಟಕವನ್ನು ತೋರಿಸಬಹುದು ಎಂದು ಟೀಕಿಸಿದ್ದಾರೆ.
ನೋಂದಾವಣೆ ಇಲ್ಲದಿದ್ದರೆ ಕಾನೂನುಬದ್ಧ ಅಸ್ತಿತ್ವ ಇರುವುದಿಲ್ಲ. ಅಸ್ತಿತ್ವವೇ ಇಲ್ಲದಿದ್ದರೆ ಅದರ ಬಗ್ಗೆ ಉತ್ತರ ನೀಡಲು ಸಾಧ್ಯವೂ ಇಲ್ಲ. ಇದು ಸಾಮಾನ್ಯ ಜ್ಞಾನ ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಹೇಳಿದ್ದಾರೆ.
RSS ವಿರುದ್ಧ ಯಾವುದೇ ಪ್ರಕರಣಗಳಿಲ್ಲದಿರುವುದಕ್ಕೆ ಕಾರಣ ಅದು ನೋಂದಾಯಿತ ಸಂಸ್ಥೆಯಲ್ಲ ಎಂಬುದು ಎಂದು ಪ್ರಿಯಾಂಕ್ ಖರ್ಗೆ ಪ್ರತಿಪಾದಿಸಿದ್ದಾರೆ. RSS ತನ್ನ ಸದಸ್ಯರಿಗೆ ಸದಸ್ಯತ್ವದ ಕಾರ್ಡ್ ಕೂಡ ನೀಡುವುದಿಲ್ಲ. ಹೀಗಾಗಿ ಸಂಘದ ಸದಸ್ಯರು ನಡೆಸುವ ಯಾವುದೇ ಕೃತ್ಯಗಳಿಗೆ ಸಂಸ್ಥೆಯ ವಿರುದ್ಧವಲ್ಲ, ವ್ಯಕ್ತಿಗತವಾಗಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಕೇಶವ ಕೃಪಾ ಮತ್ತು ದೆಹಲಿಯ ಕೇಶವಕುಂಜ ಕಟ್ಟಡಗಳು RSS ಹೆಸರಿನಲ್ಲಿ ನೋಂದಣಿಯಾಗಿವೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ. ಆಸ್ತಿಗಳು, ಅಪರಾಧಗಳು ಹಾಗೂ ಹೊಣೆಗಾರಿಕೆಗಳನ್ನು ತನ್ನ ಹೆಸರಿಗೆ ತೆಗೆದುಕೊಳ್ಳದೆ ನುಣುಚಿಕೊಳ್ಳುವ ತಂತ್ರವನ್ನು ಬಿಟ್ಟು RSS ನೋಂದಣಿ ಮಾಡಿಕೊಂಡು ಲೆಕ್ಕ ನೀಡಬೇಕು ಎಂಬುದು ತಮ್ಮ ಪ್ರಶ್ನೆಯ ಉದ್ದೇಶ ಎಂದು ಅವರು ತಿಳಿಸಿದ್ದಾರೆ.
ಸಮಾಜದ ಮೇಲೆ ಪ್ರಭಾವ ಬೀರಲು ಬಯಸುವ RSS ಅಸ್ತಿತ್ವದಲ್ಲಿದ್ದರೂ ನೋಂದಣಿ ಮಾಡಿಕೊಳ್ಳಲು ಏಕೆ ಹಿಂಜರಿಯುತ್ತದೆ? ಕಾನೂನು ವ್ಯಾಪ್ತಿಗೆ ಬಂದು ತೆರಿಗೆ ಪಾವತಿಸಲು ಏಕೆ ಭಯಪಡುತ್ತದೆ? ತನ್ನ ನಿಧಿಯ ಮೂಲಗಳ ಬಗ್ಗೆ ಏಕೆ ರಹಸ್ಯ ಕಾಪಾಡಿಕೊಳ್ಳುತ್ತದೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಇದೇ ವೇಳೆ, ಪೋಕ್ಸೋ (POCSO) ಸೇರಿದಂತೆ RSS ಸದಸ್ಯರ ವಿರುದ್ಧ ಹಲವು ಪ್ರಕರಣಗಳಿವೆ ಎಂದು ಆರೋಪಿಸಿರುವ ಅವರು, ‘RSS ಅಥವಾ ಅದರ ಅಂಗಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿರುವ ಎಷ್ಟು ಜನರ ವಿರುದ್ಧ ಪ್ರಕರಣಗಳಿವೆ?’ ಎಂದು ಪ್ರಶ್ನಿಸಿದರೆ ಆ ಪಟ್ಟಿ ದೊಡ್ಡದಾಗಿರುವುದರಿಂದ ಉತ್ತರಿಸಲು ಸಮಯ ಬೇಕಾಗುತ್ತದೆ. ಆದರೆ ಖಂಡಿತವಾಗಿಯೂ ಆ ಮಾಹಿತಿಯನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.
RSS ನೋಂದಣಿ, ಅದರ ಆಸ್ತಿ-ಪಾಸ್ತಿ, ನಿಧಿಯ ಮೂಲಗಳು ಮತ್ತು ಸದಸ್ಯರ ವಿರುದ್ಧದ ಪ್ರಕರಣಗಳ ಕುರಿತು ಪ್ರಿಯಾಂಕ್ ಖರ್ಗೆ ಎತ್ತಿರುವ ಪ್ರಶ್ನೆಗಳು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

