ಭರತಖಂಡದ ತರತಮಕೆ ನೊಂದು ಸರ್ವರಿಗೂ
ಅರಿವುಣಿಸಲು ಅಕ್ಷರದಕ್ಷಯ ಪಾತ್ರೆಯನು ನೀಡಿ
ಇರುಳಗಲೆನ್ನದೆ ದುಡಿದು ಮಡಿದ ತ್ಯಾಗ ಜೀವವೇ
ವರವಾಗಿ ಬಂದೆಮಗೆ ಕಲಿಸಿದ ನೀ ನಿಜ ಸರಸ್ವತಿ!
ತತ್ತಿ ಸಗಣಿಯನೆಸೆದವಮಾನಿಸಿದವರೆದುರಂದು
ಚಿತ್ತವ ಗಟ್ಟಿಯಮಾಡಿ ಪತಿಯ ಹೆಗಲಿಗೆಗಲಾಗಿ
ಗುತ್ತಿಗೆ ಪಡೆದಿದ್ದವರಿಂದ ಸೆರೆಬಿಡಿಸಿ ಅಕ್ಷರಗಳ
ಮುತ್ತಿನ ಮಾಲೆಯನೆಲ್ಲರಿಗೂ ತೊಡಿಸಿದ ಮಾತೆ
ಹೊತ್ತು ಹೆತ್ತು ಪೊರೆದು ಧರೆಗೆ ತಂದವಳೊಬ್ಬಳು
ಉತ್ತೆದೆಯ ಭೂಮಿಯಲಕ್ಷರಗಳ ಬೀಜವನು
ಬಿತ್ತಿ ಸುಜ್ಞಾನದ ಫಸಲನು ಬೆಳೆದು, ಬದುಕಿನ
ಕತ್ತಲ ಕಳೆದು, ಬೆಳಗಿದವಳು ನೀನೆನ್ನಕ್ಷರದವ್ವ!
ಮಾತೆ ಸಾವಿತ್ರಿ ಸಹನೆಯ ಧಾತ್ರಿ ಅಕ್ಷರವುಣಿಸಿದ
ದಾತೆ ಭರತಖಂಡದ ಸ್ತ್ರೀಕುಲದ ಕೀಳರಿಮೆಯ
ಸೂತಕ ಕಳೆದು ತಲೆಯೆತ್ತಲು ಕಲಿಸಿದ ಧೀರೋ
ದ್ದಾತೆ ನೂರು ವ್ರತಗಳೇಕೆ ನಿನ್ನನರಿತ ಸ್ತ್ರೀಕುಲಕೆ?
ಭರತಖಂಡದ ಬಹುಜನರ ಮನೆಮನದಲಿ
ಅರಿವಿನ ಜ್ಯೋತಿಯನು ಹೊತ್ತಿಸಿದ ವಿದ್ಯಾ
ಗುರುವೇ ನಿಮ್ಮ ತ್ಯಾಗ ಶ್ರಮದ ಫಲವನು
ಮರೆತು ಮಲಗುವುದುಂಟೇ ಈ ಜನಮನ!
ಉರಿಯುತಿದೆ ಜ್ಯೋತಿ; ಎಲ್ಲೆಡೆ ಚೆಲ್ಲಿ ಕಾಂತಿ
ಅರಿವಿನೊಡತಿ ಧರಣಿ ಹಡೆದ ಕರುಣಿ ನೀನು
ವರವಾಗಿ ಅಕ್ಷರವುಣಿಸಿದ ಸಮತೆಯ ಮಾತೆ
ಉರಿವೆವು ಸಾವಿರ ಲಕ್ಷ ಕೋಟಿ ದೀಪಗಳಾಗಿ
ಕರಗದೆ ಮೆರೆವೆವು ಅಕ್ಷರಕ್ರಾಂತಿ ಕಿಡಿಯಾಗಿ
ಶರಣೆನುವೆವು ಸದಾ ಕರಮುಗಿದು ಶಿರಬಾಗಿ
ದೇವರಾಜು. ಕೆ. ಮಲಾರ
ಕನ್ನಡ ಸಹಾಯಕ ಪ್ರಾಧ್ಯಾಪಕ
ಇದನ್ನೂ ಓದಿ-ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ; ಯಾರು ಏನು ಸಂದೇಶ ನೀಡಿದರು?


