Saturday, December 7, 2024

ಶ್ರೀರಂಗಪಟ್ಟಣ ಜುಮ್ಮಾ ಮಸೀದಿಯಲ್ಲಿ ಮದರಸಾ ಪ್ರಕರಣ : ಹೈಕೋರ್ಟ್ ನಿಂದ ರಾಜ್ಯ, ಕೇಂದ್ರಕ್ಕೆ ನೋಟಿಸ್

Most read

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜುಮ್ಮಾ ಮಸೀದಿ ಆವರಣದಲ್ಲಿ ನಡೆಯುತ್ತಿದ್ದ ವಸತಿ ಮದರಸಾ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) (public interest litigation) ದಾಖಲಾಗಿದ್ದು, ಈ ಸಂಬಂಧ ಹೈಕೋರ್ಟ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) (Archaeological Survey of India) ಗೆ ಬುಧವಾರ ನೋಟಿಸ್ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಮಂಡ್ಯ ಜಿಲ್ಲಾಧಿಕಾರಿಗೂ ನೋಟಿಸ್ ಜಾರಿಗೊಳಿಸಿದೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹೊಸ ಕಬ್ಬಾಳು ಗ್ರಾಮದ ನಿವಾಸಿ ಅಭಿಷೇಕ್ ಗೌಡ ಎಂಬುವರು ಅರ್ಜಿ ಸಲ್ಲಿಸಿದ್ದಾರೆ. ಜುಮ್ಮಾ ಮಸೀದಿಯನ್ನು (Jama Masjid) ಟಿಪ್ಪು ಸುಲ್ತಾನ್ (Tippu Sulthan) ಕಾಲದಲ್ಲಿ ನಿರ್ಮಿಸಲಾಗಿದ್ದು, ಇದನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ಪ್ರತಿಪಾದಿಸಿದ್ದಾರೆ.

ಅರ್ಜಿದಾರರ ಪ್ರಕಾರ, ಜುಮ್ಮಾ ಮಸೀದಿಯಲ್ಲಿ ಶೌಚಾಲಯಗಳು, ಸ್ನಾನಗೃಹಗಳು, ವಿಶ್ರಾಂತಿ ಕೊಠಡಿಗಳು, ಅಡುಗೆಮನೆ ನಿರ್ಮಿಸಲಾಗಿದೆ. ಕೆಲವು ತಾತ್ಕಾಲಿಕ ಕಟ್ಟಡ ಕೂಡ ನಿರ್ಮಿಸಲಾಗಿದೆ. ಅಲ್ಲಿಯೇ ಬಟ್ಟೆ ಒಗೆಯುವುದು ಮತ್ತು ಒಣಗಿಸುವುದು, ದೈನಂದಿನ ಅಡುಗೆ ಮತ್ತು ಆಹಾರದ ಬಳಕೆ ಮಾಡಲಾಗುತ್ತಿದೆ. ಇದು ಪ್ರಾಚೀನ ಸ್ಮಾರಕದ ಸಂಕೀರ್ಣ ಕೆತ್ತನೆಗಳಿಗೆ ಹಾನಿಯನ್ನುಂಟುಮಾಡುತ್ತಿದೆ. ಈ ಕುರಿತು  ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಜುಮ್ಮಾ ಮಸೀದಿಯೊಳಗೆ ಮದರಸಾ ನಡೆಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು ಎಂದು ಅರ್ಜಿದಾರರು ಹೇಳಿದ್ದಾರೆ.

ವಸತಿ ಮದರಸಾವನ್ನು ನಡೆಸುವುದು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಕಾಯಿದೆ, ಉಳಿಕೆಗಳ ಕಾಯ್ದೆ-1958ರ ಸೆಕ್ಷನ್‌ 7, 8 ಮತ್ತು 16ರ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಕೂಡಲೇ ಜುಮ್ಮ ಮಸೀದಿಯಲ್ಲಿ ಮದರಸ ನಡೆಸುತ್ತಿರುವುದನ್ನು ತಡೆಹಿಡಿಯಬೇಕು. ಮಸೀದಿಯನ್ನು ಪ್ರಾಚೀನ ಸ್ಮಾರಕವಾಗಿ ಸಂರಕ್ಷಣೆ ಮಾಡಬೇಕು. ಮಸೀದಿಯಲ್ಲಿ ನಿರ್ಮಿಸಲಾಗಿರುವ ಎಲ್ಲಾ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.


More articles

Latest article