Saturday, July 27, 2024

ಇರಾನ್‌ ಗಡಿಯೊಳಗೆ ಪಾಕ್‌ ದಾಳಿ: ಮತ್ತಷ್ಟು ಹದಗೆಟ್ಟ ಸಂಬಂಧ

Most read

ಇರಾನ್ ನಲ್ಲಿನ ಬಲೂಚಿ ಉಗ್ರಗಾಮಿಗಳ ನೆಲೆಗಳ ಮೇಲೆ ಪಾಕಿಸ್ತಾನ ದಾಳಿ ನಡೆಸುವುದರೊಂದಿಗೆ ಮತ್ತು ಇರಾನ್‌ ನಡುವಿನ ಸಂಬಂಧ ಮತ್ತಷ್ಟು ಹದಗೆಡುತ್ತದೆ.

ಪಾಕಿಸ್ತಾನ ಗುರುವಾರ ಬೆಳಿಗ್ಗೆ ಬಿಎಲ್‌ ಎ (ಬಲೂಚಿ ಉಗ್ರಗಾಮಿ ಸಂಘಟನೆ) ಕ್ಯಾಂಪ್‌ ಮೇಲೆ ದಾಳಿ ನಡೆಸಿರುವ ವರದಿಗಳು ಕೆಲವು ಪಾಕಿಸ್ತಾನಿ ಮಾಧ್ಯಮಗಳಲ್ಲಿ ಮತ್ತು ಎಕ್ಸ್‌ ಜಾಲತಾಣಗಳಲ್ಲಿ ವರದಿಯಾಗುತ್ತಿದ್ದು, ಈ ಕುರಿತು ಪಾಕಿಸ್ತಾನ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಇರಾನ್‌ ಮೊನ್ನೆಯಷ್ಟೆ ಪಾಕಿಸ್ತಾನದ ಒಳಗೆ ನೆಲೆ ನಿಂತಿರುವ ಸುನ್ನಿ ಮುಸ್ಲಿಂ ಗುಂಪಾದ ಜೈಶ್‌ ಅಲ್‌ ಅದ್ಲ್‌ ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋಣ್‌ ದಾಳಿ ನಡೆಸಿದ ಬೆನ್ನಲ್ಲೇ ಪಾಕಿಸ್ತಾನ ಇಂದು ಪ್ರತೀಕಾರದ ದಾಳಿ ನಡೆಸಿದೆ. ದಾಳಿಯ ಪೂರ್ಣ ವಿವರಗಳು, ಸಾವು ನೋವಿನ ವರದಿ ಇನ್ನಷ್ಟೇ ಹೊರಬರಬೇಕಿದೆ. ಪಾಕಿಸ್ತಾನದ ಪ್ರಭಾರಿ ವಿದೇಶಾಂಗ ಸಚಿವ ಜಲಿಲ್‌ ಅಬ್ಬಾಸ್ ಜಿಲಾನಿ ನಿನ್ನೆ ಇರಾನ್ ನಡೆಯನ್ನು ಖಂಡಿಸಿ, ಪಾಕಿಸ್ತಾನವು ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವ ಹಕ್ಕನ್ನು ಹೊಂದಿದೆ ಎಂದು ಹೇಳಿದ ಬೆನ್ನಲ್ಲೇ ಇರಾನ್‌ ನಲ್ಲಿ ಪಾಕಿಸ್ತಾನದ ದಾಳಿ ನಡೆದಿದೆ.

ತನ್ನ ಸುತ್ತಮುತ್ತಲ ದೇಶಗಳ ಗಡಿಯಲ್ಲಿ ಆಶ್ರಯ ಪಡೆದ ಉಗ್ರಗಾಮಿ ಸಂಘಟನೆಗಳ ಮೇಲೆ ಇರಾನ್‌ ಆಕ್ರಮಣಕಾರಿ ನಿಲುವು ಪ್ರದರ್ಶಿಸುತ್ತಿದ್ದು, ಒಂದಾದ ಮೇಲೆ ಒಂದು ನೆರೆದೇಶದ ಒಳಗೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸುತ್ತಿದೆ. ಇದರ ಭಾಗವಾಗಿ ಅದು ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಜೈಶ್‌ ಅಲ್‌ ಅದ್ಲ್‌ ಕ್ಯಾಂಪ್‌ ಮೇಲೆ ದಾಳಿ ನಡೆಸಿತ್ತು. ಘಟನೆಯಲ್ಲಿ ಇಬ್ಬರು ಮಕ್ಕಳೂ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಬಲೂಚಿ ಆಡಳಿತ ತಿಳಿಸಿದೆ. ಇರಾನ್‌ ಸೇನೆಯು ಪಾಕಿಸ್ತಾನ ಮಾತ್ರವಲ್ಲದೆ ಇರಾಕ್‌ ಮತ್ತು ಸಿರಿಯಾಗಳಲ್ಲಿರುವ ಉಗ್ರಗಾಮಿಗಳ ಕ್ಯಾಂಪ್‌ ಮೇಲೂ ಇದೇ ರೀತಿಯ ದಾಳಿ ನಡೆಸಿತ್ತು. ತನ್ನ ದೇಶದ ಒಳಗೆ ನಡೆಸಿದ ದಾಳಿಯ ಕುರಿತು ಆಕ್ರೋಶಗೊಂಡಿರುವ ಇರಾಕ್‌ ಈಗಾಗಲೇ ತನ್ನ ರಾಯಭಾರಿಯನ್ನು ಇರಾನ್‌ ನಿಂದ ಹಿಂದಕ್ಕೆ ಕರೆಸಿಕೊಂಡಿದೆ.

ಪಾಕಿಸ್ತಾನ ಸಹ ಇರಾನ್‌ ನಿಂದ ತನ್ನ ರಾಯಬಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದ್ದು ಪಾಕಿಸ್ತಾನದ ಸಾರ್ವಭೌಮತೆಗೆ ಇರಾನ್‌ ಧಕ್ಕೆ ತರಲು ಯತ್ನಿಸುತ್ತಿದೆ ಎಂದು ಆರೋಪಿಸಿತ್ತು.

ಸುನ್ನಿ ಮುಸ್ಲಿಂ ಗುಂಪಾದ ಜೈಶ್‌ ಅಲ್‌ ಅದ್ಲ್‌ ಒಂದು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕ ಘೋಷಿಸಿದ್ದು, ಇರಾನ್‌ ನಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇರಾನ್‌ ಸೇನೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿತ್ತು. ಈಗ ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನವೂ ಕೂಡ ಇರಾನ್‌ ಗಡಿಯಲ್ಲಿರುವ ಬಲೂಚಿ ಕ್ಯಾಂಪ್‌ ಮೇಲೆ ದಾಳಿ ನಡೆಸಿದೆ.

ಇರಾನ್‌ ಗೆ ಭಾರತದ ಬೆಂಬಲ : ಪಾಕಿಸ್ತಾನದ ಉಗ್ರಗಾಮಿಗಳ ಕ್ಯಾಂಪ್‌ ಮೇಲೆ ಇರಾನ್‌ ನಡೆಸಿರುವ ದಾಳಿಯನ್ನು ಭಾರತ ಬುಧವಾರ ತಡರಾತ್ರಿಯ ಪ್ರತಿಕ್ರಿಯೆಯೊಂದರಲ್ಲಿ ಬೆಂಬಲಿಸಿತ್ತು. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಒಂದು ದೇಶವು ತನ್ನ ಭದ್ರತೆಯನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಂಡರೆ ಅದು ಅರ್ಥವಾಗುವಂತಹದ್ದಾಗಿದೆ ಎಂದು ಹೇಳಿದ್ದಾರೆ.

“ಇದು ಇರಾನ್ ಮತ್ತು ಪಾಕಿಸ್ತಾನದ ನಡುವಿನ ವಿಷಯವಾಗಿದೆ. ಭಾರತಕ್ಕೆ ಸಂಬಂಧಿಸಿದಂತೆ, ನಾವು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆ ZERO TOLERENCE ಹೊಂದಿದ್ದೇವೆ. ದೇಶಗಳು ತಮ್ಮ ಆತ್ಮರಕ್ಷಣೆಗಾಗಿ ತೆಗೆದುಕೊಳ್ಳುವ ಕ್ರಮಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಭಾರತವೂ ಸಹ ಕಳೆದ ಹತ್ತು ವರ್ಷಗಳಲ್ಲಿ ಎರಡು ಬಾರಿ ಪಾಕಿಸ್ತಾನದ ಗಡಿ ದಾಟಿ ಕಾರ್ಯಾಚರಣೆ ನಡೆಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. 2016ರಲ್ಲಿ ಭಾರತ ಸೇನೆಯು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಕ್ಷಿಪಣಿ ದಾಳಿ ನಡೆಸಿತ್ತು. 2019ರಲ್ಲಿ ಕೂಡ ಪಾಕಿಸ್ತಾನದ ಒಳಗಿನ ಉಗ್ರಗಾಮಿಗಳ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿತ್ತು.

More articles

Latest article