Saturday, July 27, 2024

ರಾಮೇಶ್ವರಂ ಸ್ಫೋಟ, ಎಲ್ಲ ಗಾಯಾಳುಗಳೂ ಪ್ರಾಣಾಪಾಯದಿಂದ ಪಾರು: ಡಾ.ಜಿ. ಪರಮೇಶ್ವರ್

Most read

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಗಾಯಾಳುಗಳಾಗಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ.

ಗಾಯಾಳುಗಳನ್ನು ದಾಖಲಿಸಲಾಗಿರುವ ಬ್ರೂಕ್‌ ಫೀಲ್ಡ್‌ ಆಸ್ಪತ್ರೆಗೆ ಭೇಟಿ ನೀಡಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಗಾಯಾಳುಗಳ ಪೈಕಿ ಮೂವರನ್ನು ಬ್ರೂಕ್‌ ಫೀಲ್ಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಕಿವಿಗೆ ಗಾಯವಾಗಿದೆ, ಒಬ್ಬರಿಗೆ ಹೆಚ್ಚಿನ ಗಾಯಗಳಾಗಿವೆ. ಎಂದು ಹೇಳಿದರು.

ಈ ನಡುವೆ, ಸ್ಫೋಟ ಸ್ಥಳಕ್ಕೂ ಭೇಟಿ ನೀಡಿದ ಗೃಹಸಚಿವರು, ಸ್ಥಳದಲ್ಲಿದ್ದ ಉನ್ನತ ಮಟ್ಟದ ಪೊಲೀಸ್‌ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿಗಳನ್ನು ಪಡೆದರು.

ರಾಜಕೀಯ ಕೆಸರೆರಚಾರ ಆರಂಭ:

ಸ್ಫೋಟ ಪ್ರಕರಣದ ಬೆನ್ನಲ್ಲೇ ರಾಜಕೀಯ ಕೆಸರೆರಚಾಟ ಆರಂಭವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್‌ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ರಾಜ್ಯದಲ್ಲಿ ಕಳೆದ 9 ತಿಂಗಳಲ್ಲಿ ಒಂದು ಮನಸ್ಥಿತಿ ನಿರ್ಮಾಣವಾಗಿದೆ. ಬೀದರ್ ನಿಂದ ವಿಧಾನಸೌಧದ ವರೆಗೆ ಇಂತಹ ಮನಸ್ಥಿತಿ ನಿರ್ಮಾಣ. ನಾವೆಲ್ಲ ತಲೆತಗ್ಗಿಸುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಕರ್ನಾಟಕ ರಾಜ್ಯ ಶಾಂತಿಯ ತೋಟ. ಈ ಶಾಂತಿಯ ತೋಟವನ್ನು ಕದಡುವ ಕೆಲಸ ನಡೆದಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಆಡಳಿತ ಪಕ್ಷದವರು ತಮ್ಮ ಮನಸ್ಥಿತಿ ಬದಲಿಸಿಕೊಳ್ಳಬೇಕು. ನೀವು ಏನಾದ್ರೂ ಮಾಡಿ, ನಾವು ರಕ್ಷಿಸುತ್ತೇವೆಂಬ ಮನಸ್ಥಿತಿ ಸರ್ಕಾರದ್ದಾಗಿದೆ. ನೀವು ಬ್ರಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ. ಆದರೆ ಬಾಂಬ್ ಬೆಂಗಳೂರು ಮಾಡಬೇಡಿ. ಸಿದ್ದರಾಮಯ್ಯ ಸಿಎಂ ಆದಾಗಲೆಲ್ಲ ಪೋಕರಿಗಳಿಗೆ ರೆಕ್ಕೆಪುಕ್ಕ ಬರುತ್ತದೆ. ರಾಜ್ಯದಲ್ಲಿ ಸಮಾಜಘಾತಕ ಶಕ್ತಿಗಳಿಗೆ ರೆಕ್ಕೆ ಪುಕ್ಕ ಬಂದಿದೆ. ಶರ್ಟ್ ಗುಂಡಿ ಬಿಚ್ಚಿಕೊಂಡು ಎದೆ ಹುಬ್ಬಿಸಿಕೊಂಡು ಓಡಾಡುತ್ತಿದ್ದಾರೆ. ಬಾಂಬ್ ಬೆಂಗಳೂರು ಕಳಂಕ ತರಬೇಡಿ ಎಂದು ಅವರುಗಳು ಹೇಳಿದ್ದಾರೆ.

ಕೆಫೆ ಬಳಿ ಇರೋದು ಅಂತರಾಷ್ಟ್ರೀಯ ಮಟ್ಟದ ಕಂಪನಿಗಳು. ಬೆಂಗಳೂರಿಗೆ ಬರೋ ಬಂಡವಾಳ ಕಡಿಮೆಯಾಗಬೇಕು. ಇಲ್ಲಿನ ಕಂಪನಿಗಳಿಗೆ ಭದ್ರತೆ ಇಲ್ಲ ಅನ್ನೋದು ಗೊತ್ತಾಗಬೇಕು. ಇದಕ್ಕಾಗಿ ಕೆಫೆಯಲ್ಲಿ ಸ್ಫೋಟ ಎಸಗಲಾಗಿದೆ ಎಂದು ಆರ್.ಅಶೋಕ್‌ ವಿಶ್ಲೇಷಣೆ ಮಾಡಿದರು.

ಈ ನಡುವೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಸಹ ಬಾಂಬ್‌ ಸ್ಫೋಟದಿಂದ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿರುವ ಬ್ರೂಕ್‌ ಫೀಲ್ಡ್‌ ಆಸ್ಪತ್ರೆಗೆ ತೆರಳಿದ್ದಾರೆ.

ಹತ್ತು ಸೆಕೆಂಡ್‌ ಅವಧಿಯಲ್ಲಿ ಎರಡು ಸ್ಫೋಟ:
ಈ ನಡುವೆ ರಾಮೇಶ್ವರಂ ಕೆಫೆ ಮಾಲೀಕರಲ್ಲಿ ಒಬ್ಬರಾದ ದಿವ್ಯ ರಾವ್‌ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮಧ್ಯಾಹ್ನ ಹತ್ತು ಸೆಕೆಂಡ್‌ ಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದೆ ಎಂದು ಹೇಳಿದ್ದಾರೆ.

More articles

Latest article