Saturday, July 27, 2024

ರಾಮೇಶ್ವರಂ ಸ್ಫೋಟ: ಅನುಮಾನ ಹುಟ್ಟಿಸುತ್ತಿರುವ ತೇಜಸ್ವಿ ಸೂರ್ಯ ಹೇಳಿಕೆ

Most read

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಕುರಿತು ಪೊಲೀಸ್‌ ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆ ನೀಡುವ ಮುನ್ನವೇ ನಡೆದಿರುವುದು ಬಾಂಬ್‌ ಬ್ಲಾಸ್ಟ್‌ ಎಂದು ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಇಂಥ ಗಂಭೀರ, ಸೂಕ್ಷ್ಮ ಪ್ರಕರಣಗಳು ನಡೆದಾಗ ಸರಿಯಾದ ಮಾಹಿತಿಯನ್ನು ಉನ್ನತ ಮಟ್ಟದ ಪೊಲೀಸ್‌ ಅಧಿಕಾರಿಗಳು ಅಥವಾ ಮುಖ್ಯಮಂತ್ರಿ, ಗೃಹಸಚಿವರು ಹೇಳಿಕೆ ನೀಡಿ ವಿವರಿಸುತ್ತಾರೆ. ಆದರೆ ಇವರ ಹೇಳಿಕೆಗಳು ಬರುವ ಮುನ್ನವೇ ತೇಜಸ್ವಿ ಸೂರ್ಯ ನಡೆದಿರುವುದು ಬಾಂಬ್‌ ಬ್ಲಾಸ್ಟ್‌ ಎಂದು ಹೇಳಿರುವುದು ಆಶ್ಚರ್ಯ ಮೂಡಿಸಿದೆ.

ನಾನು ಈಗಷ್ಟೇ ಕೆಫೆ ಮಾಲೀಕರೊಂದಿಗೆ ಮಾತಾಡಿದೆ. ಸಿಲಿಂಡರ್‌ ಸ್ಫೋಟಿಸಿಲ್ಲ, ಗ್ರಾಹಕನೊಬ್ಬ ಬಿಟ್ಟುಹೋದ ಬ್ಯಾಗ್‌ ಸ್ಫೋಟಿಸಿದೆ. ಇದು ಬಾಂಬ್‌ ಬ್ಲಾಸ್ಟ್‌ ಪ್ರಕರಣವಾಗಿದೆ. ಬೆಂಗಳೂರು ಜನತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಸ್ಪಷ್ಟ ಉತ್ತರ ನಿರೀಕ್ಷಿಸುತ್ತಿದೆ ಎಂದು ಸೂರ್ಯ ಮಧ್ಯಾಹ್ನ 3.35ಕ್ಕೆ ಪೋಸ್ಟ್‌ ಮಾಡಿದ್ದರು. ಈವೇಳೆಗೆ ಸರ್ಕಾರದ ಪ್ರತಿನಿಧಿಗಳು ಯಾರೂ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಮತ್ತೊಂದು ಮಹತ್ವದ ವಿಷಯವೆಂದರೆ ಸಿಲಿಂಡರ್‌ ಸ್ಫೋಟಿಸಿ ಅವಘಡ ನಡೆದಿದೆ ಎಂದು ಯಾವ ಅಧಿಕಾರಿಯೂ ಹೇಳಿಕೆ ನೀಡಿರಲಿಲ್ಲ. ಹಾಗಿದ್ದಾಗ್ಯೂ ಸೂರ್ಯ ಸಿಲಿಂಡರ್‌ ಸ್ಫೋಟದ ಥಿಯರಿಯನ್ನು ಮುಂದಿಟ್ಟಿದ್ಯಾಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಮೈಸೂರಿನಲ್ಲಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ, ವಿಷಯ ಗೊತ್ತಾಗುತ್ತಿದ್ದಂತೆ ಸುಧಾರಿತ ಸ್ಫೋಟಕಗಳನ್ನು ಬಳಸಿ ಬಾಂಬ್ ಬ್ಲಾಸ್ಟ್‌ ನಡೆಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಿಕೆ ನೀಡಿದರು. ಅದರ ಜೊತೆಗೆ ರಾಜ್ಯದ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಸಹ ನಡೆದಿರುವುದು ಬಾಂಬ್‌ ಬ್ಲಾಸ್ಟ್‌ ಪ್ರಕರಣ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಯಾರೂ ಸಹ ಬಾಂಬ್‌ ಬ್ಲಾಸ್ಟ್‌ ಆಗಿರುವುದನ್ನು ಮುಚ್ಚಿಡದೇ ಇದ್ದರೂ ತೇಜಸ್ವಿ ಸೂರ್ಯ ಊಹೆಯ ಮೇಲೆ ಹೇಳಿಕೆ ನೀಡಿದ್ದು ಯಾಕೆ ಎಂಬ ಪ್ರಶ್ನೆ ಮೂಡುತ್ತದೆ.

ಇಷ್ಟೇ ಅಲ್ಲದೆ, ಸಂಜೆ 7 ಗಂಟೆ ಸುಮಾರಿಗೆ ಎಕ್ಸ್‌ ನಲ್ಲಿ ಮತ್ತೊಂದು ಪೋಸ್ಟ್‌ ಮಾಡಿದ ತೇಜಸ್ವಿ ಸೂರ್ಯ, ಮೊದಲು ಸಿಲಿಂಡರ್‌ ಸ್ಫೋಟ ಎಂದರು, ಈಗ ವೃತ್ತಿ ವೈಷಮ್ಯಕ್ಕಾಗಿ ಘಟನೆ ನಡೆದಿದೆ ಎನ್ನುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ತನಿಖಾ ಸಂಸ್ಥೆಗಳಿಗೆ ಯಾಕೆ ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರಾದಿಯಾಗಿ ಸಚಿವ ಸಂಪುಟದ ಹಲವರು ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದರೂ ಯಾರೂ ಸಹ ವೃತ್ತಿವೈಷಮ್ಯದ ಕಾರಣಕ್ಕೆ ಘಟನೆ ನಡೆದಿದೆ ಎಂದು ಹೇಳಿಲ್ಲ. ಹೀಗಿದ್ದರೂ ತೇಜಸ್ವಿ ಸೂರ್ಯ ಹೀಗೆ ವೃತ್ತಿ ವೈಷಮ್ಯದ ಕೋನವನ್ನು ತಂದಿದ್ದು ಯಾಕೆ ಎಂಬ ಪ್ರಶ್ನೆಯೂ ಮೂಡಿದೆ.

ಬಾಂಬ್‌ ಬ್ಲಾಸ್ಟ್‌ ಪ್ರಕರಣಗಳು ದೇಶದಲ್ಲಿ ಹೊಸದೇನೂ ಅಲ್ಲ. ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಯಾವ ಪಕ್ಷ ಅಧಿಕಾರದಲ್ಲಿ ಇದ್ದರೂ ಇಂಥ ಘಟನೆಗಳು ನಡೆದಿವೆ. ಆದರೆ ಇಂಥ ಘಟನೆಗಳು ನಡೆದ ಕೂಡಲೇ ದೇಶದ ಹಿತಾಸಕ್ತಿಯಿಂದ ಒಂದಾಗಿ ನಿಲ್ಲುವ ಬದಲು, ರಾಜಕೀಯ ಕೆಸರೆರಚಾಟ ಮಾಡುವುದು ಮಾಮೂಲಿಯಾಗಿ ಹೋಗಿದೆ. ರಾಜ್ಯ ಬಿಜೆಪಿ ಘಟಕ ಅತಿ ಉತ್ಸಾಹದಲ್ಲಿ ಬಾಂಬ್‌ ಬ್ಲಾಸ್ಟ್‌ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

More articles

Latest article