ತಮ್ಮ ಇಡೀ ಬದುಕನ್ನೇ ಕಾರ್ಮಿಕ ಸಮುದಾಯದ ಪರ ಹೋರಾಟಕ್ಕೆ ಮುಡಿಪಾಗಿಟ್ಟಿದ್ದ ದಣಿವರಿಯದ ಹೋರಾಟಗಾರ ಹಿರಿಯ ಚೇತನ ಕಾಂ. ಅನಂತ ಸುಬ್ಬರಾವ್ ತಮ್ಮ ಹೋರಾಟವನ್ನು ಶಾಶ್ವತವಾಗಿ ನಿಲ್ಲಿಸಿದ್ದಾರೆ. ಸುಬ್ಬರಾವ್ ರವರ ಅಕಾಲಿಕ ಅಗಲಿಕೆಯಿಂದಾಗಿ ಸಾರಿಗೆ ಸಂಸ್ಥೆಗಳ ನೌಕರರು ಅನಾಥರಾಗಿದ್ದಾರೆ. ಮುಂದೆ ಇನ್ನೊಬ್ಬ ಕಾರ್ಮಿಕ ನಾಯಕ ಮುಂಚೂಣಿಗೆ ಬರಬಹುದು. ಆದರೆ ಅನಂತಸುಬ್ಬರಾವ್ ರಂತಹ ಕಮಿಟೆಡ್ ಕಾಮ್ರೇಡ್, ಕಾರ್ಮಿಕ ನಿಷ್ಟ ಹೋರಾಟಗಾರ ನಾಯಕ ಮತ್ತೆ ಬರುವುದು ಅಸಾಧ್ಯದ ಸಂಗತಿಯಾಗಿದೆ. ಹಿರಿಯ ನಾಯಕ ಕಾಂ.ಅನಂತ ಸುಬ್ಬರಾವ್ ರವರು ಕಾರ್ಮಿಕ ಹೋರಾಟದ ದಂತಕಥೆಯಾಗಿ ಉಳಿಯುತ್ತಾರೆ. ಕಾರ್ಮಿಕರ ನೆನಪಿನ ಅಂತರಂಗದಲ್ಲಿ ಅನಂತಕಾಲ ಉಳಿಯುವ ಕಾಮ್ರೇಡ್ ಅನಂತ ಸುಬ್ಬರಾವ್ ರವರಿಗೆ ಅನಂತಾನಂತ ನಮನಗಳು. ಅಂತಿಮ ಕೆಂಪು ವಂದನೆಗಳು- ಶಶಿಕಾಂತ ಯಡಹಳ್ಳಿ.
ಇಂದು ಬೆಳಿಗ್ಗೆ ಸುದ್ದಿ ವಾಹಿನಿಯಲ್ಲಿ ಸಾರಿಗೆ ಸಂಸ್ಥೆಗಳ ನಾಲ್ಕೂ ವಲಯದ ಕಾರ್ಮಿಕರಿಂದ ಮುಷ್ಕರಕ್ಕೆ ಕರೆಕೊಟ್ಟಿದ್ದ ಕಾರ್ಮಿಕ ನಾಯಕರಾದ ಕಾಮ್ರೇಡ್ ಅನಂತ ಸುಬ್ಬರಾವ್ ರವರು ಸಂಜೆಗೆ ಜೀವಂತವಾಗಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ.
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ನ ರಾಜ್ಯಾಧ್ಯಕ್ಷರಾಗಿ KSRTC ಸಿಬ್ಬಂದಿ ಮತ್ತು ಕಾರ್ಮಿಕರ ಫೆಡರೇಶನ್ ಅಧ್ಯಕ್ಷರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದರು. ಆರು ದಶಕಗಳ ಕಾಲ ಕಾರ್ಮಿಕರ ಹಕ್ಕುಗಳಿಗಾಗಿ ಅವಿರತವಾಗಿ ಹೋರಾಟ ಮಾಡಿದವರು. ಸಾರಿಗೆ ಸಂಸ್ಥೆಗಳಾದ KSRTC, BMTC ಕಾರ್ಮಿಕರ ಹಕ್ಕುಗಳ ಪರವಾಗಿ ಅನೇಕ ಮುಷ್ಕರ ಹಾಗೂ ಹೋರಾಟಗಳನ್ನು ರೂಪಿಸಿ ಮುನ್ನಡೆಸಿದ್ದರು. ತಮ್ಮ 85 ನೇ ವಯಸ್ಸಿನಲ್ಲೂ ದಣಿವರಿಯದೇ ಕಾರ್ಮಿಕರ ಹಿತರಕ್ಷಣೆಗಾಗಿ ಹೋರಾಟ ಮಾಡುತ್ತಲೇ ಬಂದ ಈ ಹೃದಯವಂತ ಹಿರಿಯ ನಾಯಕರ ಹೃದಯ 2026 ರ ಜನವರಿ 28 ರಂದು ಸ್ಥಗಿತಗೊಂಡಿತು. ಕಾಮ್ರೇಡರ ಅಗಲಿಗೆ ಅಕ್ಷರಶಃ ಕರ್ನಾಟಕದ ಕಾರ್ಮಿಕ ಸಮುದಾಯಕ್ಕೆ ತುಂಬಲಾರದ ನಷ್ಟ ಎಂಬುದಂತೂ ಸತ್ಯ.

ಕಾಂ. ಅನಂತ ಸುಬ್ಬರಾವ್ ರವರು ಸಾರಿಗೆ ಕಾರ್ಮಿಕರ ವೇತನ ಹೆಚ್ಚಳ, ಕಾರ್ಮಿಕರ ಹಕ್ಕು ಮತ್ತು ಸೌಲಭ್ಯಗಳಿಗಾಗಿ ಅವಿರತವಾಗಿ ಮಾಡಿದ ಹೋರಾಟಗಳಿಂದಾಗಿ ಆಳುವ ಸರಕಾರಗಳೂ ಮಣಿಯಬೇಕಾಯ್ತು. ಅದರಿಂದಾಗಿ ಸಾರಿಗೆ ನೌಕರರು ಅನೇಕ ಪ್ರಯೋಜನಗಳನ್ನು ಹೊಂದುವಂತಾಯ್ತು. ಹೃದಯ ಬಡಿತ ನಿಲ್ಲುವ ಕೆಲವೇ ಗಂಟೆಗಳ ಮುಂಚೆ ಸಾರಿಗೆ ನೌಕರರಿಗೆ ಸಿಗಬೇಕಾದ ಸವಲತ್ತುಗಳಿಗಾಗಿ ಆಗ್ರಹಿಸಿ ಜನವರಿ 29 ರಂದು ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ಕೊಟ್ಟಿದ್ದರು. ಅಧಿವೇಶನದಲ್ಲಿ ಆರೋಪ ಪ್ರತ್ಯಾರೋಪಗಳಲ್ಲಿ ನಿರತವಾಗಿರುವ ಸರಕಾರಕ್ಕೆ ಬಿಸಿ ಮುಟ್ಟಿಸಿ ಸಾರಿಗೆ ನೌಕರರಿಗೆ ಈ ಹಿಂದೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಕರೆ ಕೊಟ್ಟಿದ್ದರು. ನಾಳೆಯಿಂದ ಸಾರಿಗೆ ವ್ಯವಸ್ಥೆಯೇ ಸ್ಥಗಿತಗೊಂಡು ಸರಕಾರ ಕಾರ್ಮಿಕ ನಾಯಕರ ಜೊತೆ ಸಂಧಾನಕ್ಕೆ ಬರಲೇಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿದ್ದರು. ಆದರೆ ಆ ನಾಳೆ ಸುಬ್ಬರಾವ್ ರವರ ಪಾಲಿಗೆ ಬರಲೇ ಇಲ್ಲ. ಮುಷ್ಕರಕ್ಕೆ ಕರೆ ಕೊಟ್ಟ ದಿನವೇ ಕಾಲನ ಕರೆಗೆ ಓಗೊಟ್ಟು ಹೊರಟೇ ಹೋದರು.
ಕಾಂ.ಅನಂತ ಸುಬ್ಬರಾವ್ ರವರ ಕುಟುಂಬ ಪರಿವಾರವೇ ಎಡಪಂಥೀಯ ವಿಚಾರಧಾರೆಯನ್ನು ಒಪ್ಪಿಕೊಂಡು ಜನಪರ ಹೋರಾಟಗಳಲ್ಲಿ ಪೂರ್ಣಾವಧಿಯಾಗಿ ತೊಡಗಿಸಿಕೊಂಡಿದೆ. ಮಗಳು ಜ್ಯೋತಿಯವರು ಮಹಿಳೆಯರ ಹಕ್ಕುಗಳಿಗಾಗಿ ಅವಿರತವಾಗಿ ಶ್ರಮಿಸುತ್ತಾ ಶೋಷಿತ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಧರ್ಮಸ್ಥಳದಲ್ಲಿ ಹೆಣ್ಣುಮಕ್ಕಳ ಮೇಲಾದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಹೋರಾಟಕ್ಕಿಳಿದು ಆಗ್ರಹಿಸಿದವರಲ್ಲಿ ಜ್ಯೋತಿಯವರೂ ಪ್ರಮುಖರು. ಜ್ಯೋತಿಯವರ ಪತಿ, ಅನಂತ ಸುಬ್ಬರಾವ್ ರವರ ಅಳಿಯ ಸಾತಿ ಸುಂದರೇಶ್ ರವರು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ( CPI) ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ಶೋಷಿತ ಸಮುದಾಯಗಳ ಪರ, ಶೋಷಕರ ವಿರುದ್ಧ ಹೋರಾಟಗಳನ್ನು ಮಾಡುತ್ತಲೇ ಬಂದಿದ್ದಾರೆ. ಕಾಂ. ಜ್ಯೋತಿ ಹಾಗೂ ಕಾಂ.ಸಾತಿಯವರ ಮಗ ಸೂರ್ಯ ಸಹ ಬಡಜನರ ಒಡಲ ಧ್ವನಿಯಾಗಿ ಹಾಡುಗಳನ್ನು ಹಾಡುತ್ತಾ, ನಾಟಕಗಳನ್ನು ಮಾಡುತ್ತಾ ಜನ ಜಾಗೃತಿಯಲ್ಲಿ ತೊಡಗಿದ್ದಾನೆ. ಹೀಗಾಗಿ ಕಾಂ.ಅನಂತ ಸುಬ್ಬರಾವ್ ರವರ ಕುಟುಂಬದಲ್ಲಿ ಜನಪರ ಹೋರಾಟಗಾರರೇ ತುಂಬಿದ್ದಾರೆ. ಅವರುಗಳು ಸುಬ್ಬರಾವ್ ರವರ ಸಮಸಮಾಜದ ಆಶಯಗಳನ್ನು ಮುನ್ನಡೆಸುತ್ತಿದ್ದಾರೆ.
ಕಾ.ಅನಂತ ಸುಬ್ಬರಾವ್ ರವರು ಹಾಕಿಕೊಟ್ಟ ಹೋರಾಟದ ಹಾದಿ ಕಾರ್ಮಿಕ ಚಳುವಳಿಗಳಿಗೆ ಮಾದರಿಯಾಗಿದೆ. ಹೋರಾಟ ಮುಷ್ಕರಗಳ ಮೂಲಕ ಆಳುವ ಸರಕಾರಗಳನ್ನೇ ನಡುಗಿಸುವ ಶಕ್ತಿ ಹಾಗೂ ಅಸಾಧಾರಣ ಸಾಮರ್ಥ್ಯ ಇದ್ದ ಸುಬ್ಬರಾವ್ ರವರು ಬದುಕಿನ ಕೊನೆಯ ಉಸಿರಿರುವವರೆಗೂ ಕಾರ್ಮಿಕರ ಹಿತರಕ್ಷಣೆಗಾಗಿ ಶ್ರಮಿಸಿದರು. ಸಾವು ಬರುವ ಕೆಲವೇ ಗಂಟೆಗಳ ಮುಂಚೆಯೂ ಸಹ ಸಾರಿಗೆ ಕಾರ್ಮಿಕರ ಪರವಾಗಿ ಮಾತು ತಪ್ಪಿದ ಸರಕಾರದ ವಿರುದ್ಧವಾಗಿ ಮುಷ್ಕರವನ್ನು ಘೋಷಿಸಿ ಹೋರಾಟಕ್ಕೆ ನಾಲ್ಕೂ ಸಾರಿಗೆ ವಲಯದ ನೌಕರರನ್ನು ಸಂಘಟಿಸಿದ್ದರು.

ಈಗ ಮುಂಚೂಣಿ ನಾಯಕನನ್ನೇ ಕಳೆದುಕೊಂಡ ಕಾರ್ಮಿಕ ಸಂಘಟನೆಗಳು ಕಳವಳಗೊಂಡಿವೆ. ಸುಬ್ಬರಾವ್ ರವರ ಅಕಾಲಿಕ ಅಗಲಿಕೆಯಿಂದಾಗಿ ಸಾರಿಗೆ ಸಂಸ್ಥೆಗಳ ನೌಕರರು ಅನಾಥರಾಗಿದ್ದಾರೆ. ಮುಂದೆ ಇನ್ನೊಬ್ಬ ಕಾರ್ಮಿಕ ನಾಯಕ ಮುಂಚೂಣಿಗೆ ಬರಬಹುದು. ಆದರೆ ಅನಂತಸುಬ್ಬರಾವ್ ರಂತಹ ಕಮಿಟೆಡ್ ಕಾಮ್ರೇಡ್, ಕಾರ್ಮಿಕ ನಿಷ್ಟ ಹೋರಾಟಗಾರ ನಾಯಕ ಮತ್ತೆ ಬರುವುದು ಅಸಾಧ್ಯದ ಸಂಗತಿಯಾಗಿದೆ. ಅನೇಕ ಅಡತಡೆಗಳ ನಡುವೆಯೂ, ಕಾರ್ಮಿಕ ಸಂಘಟನೆಗಳ ಆಂತರಿಕ ಭಿನ್ನಾಭಿಪ್ರಾಯಗಳ ಮಧ್ಯೆಯೂ ಕಾರ್ಮಿಕರ ಪರ ಹೋರಾಟಗಳನ್ನು ಸಂಘಟಿಸುತ್ತಾ ಬಂದ ಹಿರಿಯ ನಾಯಕ ಕಾಂ.ಅನಂತ ಸುಬ್ಬರಾವ್ ರವರು ಕಾರ್ಮಿಕ ಹೋರಾಟದ ದಂತಕಥೆಯಾಗಿ ಉಳಿಯುತ್ತಾರೆ.
ಬದುಕಿರುವವರೆಗೂ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡ ಕಾಂ.ಅನಂತ ಸುಬ್ಬರಾವ್ ರವರು, ತೀರಿಕೊಂಡ ಮೇಲೂ ತಮ್ಮ ಕಣ್ಣು ಮೆದುಳು ಅಷ್ಟೇ ಯಾಕೆ ಇಡೀ ಪಾರ್ಥೀವ ಶರೀರವನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾನ ಮಾಡಿದ್ದು ಅವರ ಮಾನವೀಯತೆ ಹಾಗೂ ಮನುಕುಲದ ಬಗ್ಗೆ ಇರುವ ಕಳಕಳಿಗೆ ಸಾಕ್ಷಿಯಾಗಿದೆ.
ಇಂತಹ ಧೀಮಂತ ನಾಯಕನ ಅಗಲಿಕೆ ಅತ್ಯಂತ ನೋವಿನ ಸಂಗತಿ. ಕಾರ್ಮಿಕರ ನೆನಪಿನ ಅಂತರಂಗದಲ್ಲಿ ಅನಂತಕಾಲ ಉಳಿಯುವ ಕಾಮ್ರೇಡ್ ಅನಂತ ಸುಬ್ಬರಾವ್ ರವರಿಗೆ ಅನಂತಾನಂತ ನಮನಗಳು. ಅಂತಿಮ ಕೆಂಪು ವಂದನೆಗಳು.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಬಿಡುಗಡೆಯ ಹಂಬಲ ಮತ್ತು ವಾಸ್ತವದ ಮುಖಾಮುಖಿ


