ವಾಮನ ನಂದಾವರ (1944-2025) ಎಂದರೆ ಸರಳತೆ, ಸಜ್ಜನಿಕೆ, ವಿನಯ, ಸ್ನೇಹಶೀಲತೆ, ಪ್ರಾಮಾಣಿಕತೆ, ಪರೋಪಕಾರಿ ಮನೋಭಾವ, ಮಾನವೀಯತೆ, ಕಠಿಣ ಪರಿಶ್ರಮ, ಛಲ, ಪ್ರಗತಿಪರ ಮನಸು. ಸಮಾಜದ ಒಂದು ದೊಡ್ಡ ಸಾಂಸ್ಕೃತಿಕ, ಸಾಹಿತ್ಯಿಕ ಆಸ್ತಿಯಾಗಿದ್ದ ವಾಮನ ನಂದಾವರ ಅವರು ಮೊನ್ನೆಯಷ್ಟೇ (15.03.2025) ತಮ್ಮ ಇಹಲೋಕ ಯಾತ್ರೆ ಮುಗಿಸಿ ಕರಾವಳಿ ಭಾಗದ ಬೌದ್ಧಿಕ ಲೋಕದಲ್ಲಿ ಬಹು ದೊಡ್ಡದೊಂದು ನಿರ್ವಾತವನ್ನು ಸೃಷ್ಟಿಸಿ ಹೋದರು. ಅವರ ಪ್ರೀತಿಯ ಶ್ರೀನಿವಾಸ ಕಾರ್ಕಳ ಆಪ್ತವಾಗಿ ಬರೆದ ನುಡಿ ನಮನ ಇಲ್ಲಿದೆ.
ಮಿತಭಾಷಿ, ಹಿತಭಾಷಿ, ಮೃದುಭಾಷಿ ಸದಾ ನಗುಮೊಗದ ಡಾ. ವಾಮನ ನಂದಾವರರ ಹೆಸರು ಕೇಳಿದಾಕ್ಷಣ ನೆನಪಾಗುವುದು ಪ್ರಖರ ವಿದ್ವಾಂಸನಾಗಿಯೂ, ಒಂದು ಸಂಸ್ಥೆ ಮಾಡಬಹುದಾದಷ್ಟು ಅಗಾಧ ಕೆಲಸವನ್ನು ಏಕಾಂಗಿಯಾಗಿಯೇ ಮಾಡಿಯೂ, ತಾನೇನೂ ಸಾಧಿಸಿಯೇ ಇಲ್ಲ, ತನಗೇನೂ ಗೊತ್ತಿಲ್ಲ, ತಾನು ಈಗಲೂ ಕಲಿಯುತ್ತಲೇ ಇರುವ ವಿದ್ಯಾರ್ಥಿ ಎಂಬ, ಹಮ್ಮು ಬಿಮ್ಮುಗಳಿಲ್ಲದ ಒಂದು ನಿಗರ್ವಿ ವ್ಯಕ್ತಿತ್ವ. ಅವೆಲ್ಲಕ್ಕಿಂತಲೂ ಹೆಚ್ಚಾಗಿ ಒಂದಿಷ್ಟು ಪ್ರತಿಭೆ ಇರುವ ಯಾರೇ ಎಳೆಯರು ಕಣ್ಣಿಗೆ ಬೀಳಲಿ ಅವರನ್ನು ಹುರಿದುಂಬಿಸಿ, ವೇದಿಕೆ ಏರಿಸಿ, ಬರೆಸಿ, ಅವರನ್ನು ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ ಬೆಳೆಸುವ, ಬಹಳ ಮಂದಿ ತಥಾಕಥಿತ ದೊಡ್ಡವರಲ್ಲಿ ಕಾಣಸಿಗದ ಒಂದು ಅಪರೂಪದ ಮತ್ತು ಮಾದರಿ ಗುಣ.
ಇಂತಹ ದೊಡ್ಡ ಗುಣಗಳ ಆಗರವೇ ಆಗಿದ್ದ ಮತ್ತು ಸಮಾಜದ ಒಂದು ದೊಡ್ಡ ಸಾಂಸ್ಕೃತಿಕ ಸಾಹಿತ್ಯಿಕ ಆಸ್ತಿಯಾಗಿದ್ದ ವಾಮನ ನಂದಾವರ ಅವರು ಮೊನ್ನೆಯಷ್ಟೇ (15.03.2025) ತಮ್ಮ ಇಹಲೋಕ ಯಾತ್ರೆ ಮುಗಿಸಿ ಈ ಭಾಗದ ಬೌದ್ಧಿಕ ಲೋಕದಲ್ಲಿ ಬಹು ದೊಡ್ಡದೊಂದು ನಿರ್ವಾತವನ್ನು ಸೃಷ್ಟಿಸಿ ಹೋದರು. ಜಾನಪದ ವಿದ್ವಾಂಸ, ಅಮೃತ ಸೋಮೇಶ್ವರ, ಜಾನಪದ ಸಂಶೋಧಕ ಪಾಲ್ತಾಡಿ ರಾಮಕೃಷ್ಣ ಆಚಾರ್. ಕಾದಂಬರಿಕಾರ ಕೆ ಟಿ ಗಟ್ಟಿ, ರಂಗಭೂಮಿಯ ಮೇರು ವ್ಯಕ್ತಿತ್ವ ಸದಾನಂದ ಸುವರ್ಣ ಮೊದಲಾದವರ ನಿರ್ಗಮನದ ಬೆನ್ನಿಗೇ ವಾಮನ ನಂದಾವರರೂ ನಿರ್ಗಮಿಸುವ ಮೂಲಕ ಕರಾವಳಿಯ ಈ ಭಾಗದ ಸಾರಸ್ವತ ಲೋಕ ನಿಜ ಅರ್ಥದಲ್ಲಿ ಬಡವಾಯಿತು.
ಅಸಹಾಯಕರ ಬಗ್ಗೆ ಅಪಾರ ಪ್ರೀತಿ, ಕಾಳಜಿ
ವಾಮನ ನಂದಾವರರದ್ದು ಕಡು ಬಡತನದ ಬಾಲ್ಯ. ಎಲ್ಲಿಯವರೆಗೆ ಎಂದರೆ ತಿಂಗಳ ಶಾಲಾ ಶುಲ್ಕ ಕಟ್ಟಲು ಎರಡು ರುಪಾಯಿ ಇಲ್ಲದ ಕಷ್ಟದ ಪರಿಸ್ಥಿತಿ ಅನುಭವಿಸಿದವರು ಅವರು. ಸಾಲದೆಂಬಂತೆ ಅನೇಕ ಕಾರಣಗಳಿಂದ ವಾಸ ಮತ್ತು ಬಿಡಾರಗಳ ಪದೇ ಪದೇ ಬದಲಾವಣೆ. ಇವೆಲ್ಲದರ ಹೊರತಾಗಿಯೂ ಛಲ ಮತ್ತು ಪರಿಶ್ರಮದಿಂದ, ಬಡತನದ ಹಿನ್ನೆಲೆಯಿಂದ ಬಂದವರಲ್ಲಿ ಹೆಚ್ಚಿನವರು ಶೈಕ್ಷಣಿಕವಾಗಿ ಆ ಕಾಲದಲ್ಲಿ (1950-60 ರ ದಿನಗಳು) ಸಾಧಿಸಲಾಗದ್ದನ್ನು ಸಾಧಿಸಿದವರು ವಾಮನ ನಂದಾವರರು. ಆ ಕಾಲದಲ್ಲಿಯೇ ಬಿ ಎಸ್ ಸಿ, ಬಿ ಎಡ್, ಎಂ ಎಡ್, ಎಂಎ ತನಕ ಓದಿದವರು.
ಈ ಕಡುಕಷ್ಟದ ಬದುಕಿನ ಅನುಭವಗಳ ಕಾರಣವಾಗಿಯೋ ಏನೋ ಬಡವರನ್ನು, ಅಸಹಾಯಕರನ್ನು, ಎಳೆಯರನ್ನು ಕಂಡರೆ ಅವರಲ್ಲಿ ಎಲ್ಲಿಲ್ಲದ ಅಂತಃಕರಣ, ವಿಶೇಷ ಕಾಳಜಿ. ಅಂತಹ ಪ್ರತಿಯೊಬ್ಬರನ್ನೂ ಕಂಡು ಹುಡುಕಿ ಅವರಿಗೆ ಸರ್ವ ರೀತಿಯ ಸಹಾಯ ಮಾಡಿ ಪ್ರೋತ್ಸಾಹಿಸಿ ಅವರನ್ನು ಸಮಾಜಕ್ಕೊಂದು ಆಸ್ತಿಯಾಗಿಸುವ ಮಾನವೀಯ ಮನಸು. ವಾಮನ ನಂದಾವರರ ಸಾಹಿತ್ಯಿಕ ಸಾಧನೆಗಿಂತಲೂ ಪ್ರತಿಭಾವಂತ ಎಳೆಯರನ್ನು ಬೆನ್ನುತಟ್ಟಿ ಬೆಳೆಸುವ, ಹೊಸ ಲೇಖಕರನ್ನು ಸೃಷ್ಟಿಸುವ ಮೂಲಕ ಅವರು ಸಮಾಜಕ್ಕೆ ಮಾಡಿದ ಉಪಕಾರವೇ ದೊಡ್ಡದು ಮತ್ತು ಅನೇಕ ಮಂದಿ ಇಂದು ಮತ್ತು ಮುಂದೆ ಎಂದೆಂದೂ ಅವರನ್ನು ಸ್ಮರಿಸಲಿದ್ದರೆ ಅದಕ್ಕೆ ಅವರ ಈ ವಿಶೇಷ ಗುಣವೇ ಕಾರಣ ಎಂಬುದು ನನ್ನ ಪ್ರಾಮಾಣಿಕ ಅಭಿಪ್ರಾಯ.
ಅಸಹಾಯಕರ ಬಗ್ಗೆ ಕಾಳಜಿ ಮತ್ತು ಪ್ರತಿಭಾವಂತ ಎಳೆಯರನ್ನು ಹುರಿದುಂಬಿಸುವ ಅವರ ಗುಣದ ಬಗ್ಗೆ ನನ್ನದೇ ಆದ ಕೆಲವು ಅನುಭವಗಳನ್ನು ಈ ಸಂದರ್ಭದಲ್ಲಿ ಹೇಳಿಕೊಳ್ಳುವುದು ನನಗೆ ಅತ್ಯಂತ ಖುಷಿಯ ವಿಷಯ.
ಎಳೆಯರನ್ನು ಬೆಳೆಸಿದವರು ನಂದಾವರರು
ನಾನು ಉದ್ಯೋಗಕ್ಕಾಗಿ ಮೊದಲ ಬಾರಿ ಮಂಗಳೂರಿಗೆ ಬಂದ 1984 ರ ದಿನಗಳಿಂದಲೂ ನನಗೆ ನಂದಾವರರು ಪರಿಚಿತರು. ನಾನು ಆಗ ರಂಗಭೂಮಿಯಲ್ಲಿ ತೊಡಗಿಸಿಕೊಂಡದ್ದರಿಂದ ಬಲುಬೇಗ ಅವರ ಕಣ್ಣಿಗೆ ಬಿದ್ದೆ. ಸಾಹಿತ್ಯ, ಸಾಂಸ್ಕೃತಿಕ ಸಮಾರಂಭಗಳಲ್ಲಿ ನಾವು ಆಗಾಗ ಭೇಟಿಯಾಗುತ್ತಿದ್ದೆವು. ನಾನು ಅವರ ವಿದ್ಯಾರ್ಥಿಯಲ್ಲ, ಯಾವುದೇ ರೀತಿಯಲ್ಲೂ ಅವರ ಆಪ್ತ ವಲಯದವನಲ್ಲ. ಆದರೂ ತಮ್ಮ ಕುಟುಂಬ ಸಂಬಂಧಿಯೋ ಏನೋ ಎಂಬಷ್ಟು ಅಕ್ಕರೆಯಿಂದ ಅವರು ಮಾತನಾಡಿಸುತ್ತಿದ್ದರು, ನಡೆಸಿಕೊಳ್ಳುತ್ತಿದ್ದರು.
ಸಾಹಿತ್ಯ ದೃಷ್ಟಿಯಿಂದ ನಾನು ಹೇಳಿಕೊಳ್ಳುವಂತಹ ಪ್ರತಿಭಾವಂತನಾಗಿರಲಿಲ್ಲ (ಈಗಲೂ ಅಲ್ಲ). ಆದರೂ ವಾಮನ ನಂದಾವರರು ಹಠ ಹಿಡಿದು ನನ್ನನ್ನು ವೇದಿಕೆ ಏರಿಸುತ್ತಿದ್ದರು. ಬರೆಯಲು ಒತ್ತಾಯಿಸುತ್ತಿದ್ದರು. ಹೀಗೆ ಒಮ್ಮೆ ಮಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಸಾಹಿತಿ ಜಾನಕಿ ಬ್ರಹ್ಮಾವರ ಅವರ ಪ್ರವಾಸ ಕಥನವೊಂದರ ಬಿಡುಗಡೆಯ ಸಂದರ್ಭದಲ್ಲಿ ಅದನ್ನು ತುಳುವಿನಲ್ಲಿ ಪರಿಚಯಿಸಲು ನನ್ನನ್ನು ಒತ್ತಾಯದಿಂದ ವೇದಿಕೆ ಹತ್ತಿಸಿದರು. ಸಭೆಯನ್ನು ಎದುರಿಸುವಾಗಿನ ಭಯದಿಂದ ಪೂರ್ತಿ ಮುಕ್ತನಾಗಿರದಿದ್ದ ನಾನು ಅಲ್ಲಿ ಏನು ಮಾತಾಡಿದೆನೋ ಗೊತ್ತಿಲ್ಲ, ಆದರೆ ನನ್ನನ್ನು ಆವತ್ತು ಬಾಯಿತುಂಬ ಹೊಗಳಿ ಮುಂದೆ ಅಂತಹ ಅವಕಾಶ ಸಿಕ್ಕರೆ ಅದನ್ನು ಬಳಸಿಕೊಳ್ಳುವಂತೆ ಉತ್ತೇಜಿಸಿದ್ದರು.
ಇದರ ಮುಂದರಿಕೆಯಂತೆ ಮುಂದೆ ಒಮ್ಮೆ, 1994 ರ ದಿನಗಳಲ್ಲಿ ಇರಬೇಕು, ಉಡುಪಿಯ ಎಂ ಜಿ ಎಂ ಕಾಲೇಜಿನ ಸಭಾಂಗಣದಲ್ಲಿ ನಡೆದ ತುಳು ಸಾಹಿತ್ಯ ಸಮಾರಂಭಕ್ಕೂ ಕರೆದುಕೊಂಡು ಹೋದರು. ಅಲ್ಲೂ ನನ್ನ ಕೆಲಸ ತುಳು ಕಾದಂಬರಿಯೊಂದರ ಬಗ್ಗೆ ತುಳುವಿನಲ್ಲಿ ಮಾತನಾಡುವುದಾಗಿತ್ತು. ನನ್ನನ್ನು ಹೀಗೆ ಕಾರಿನಲ್ಲಿ ಕರೆದೊಯ್ಯುವಾಗ ಅದೇ ಕಾರಿನಲ್ಲಿ ನನ್ನನ್ನು ಸರಿಯಾಗಿ ಗೊತ್ತಿದ್ದ ಇತರ ಮೂವರು ವಿದ್ವಾಂಸರು ಇದ್ದರು. ಆದರೆ ಮಂಗಳೂರಿನಿಂದ ಉಡುಪಿಗೆ ಒಂದೇ ಕಾರಿನಲ್ಲಿ ಹೋಗಿ ಮರಳಿ ಬರುವವರೆಗೂ ಅವರು ಸೌಜನ್ಯಕ್ಕಾದರೂ ನನ್ನಲ್ಲಿ ಒಂದು ಮಾತು ಆಡಲಿಲ್ಲ. ಆದರೆ ಆ ಕೊರತೆಯೆಲ್ಲವನ್ನೂ ಹಮ್ಮು ಬಿಮ್ಮುಗಳೆಂದರೆ ಏನೆಂದೇ ಅರಿಯದ ವಾಮನರ ನಿಷ್ಕಲ್ಮಶ ಪ್ರೀತಿ ತುಂಬಿ ಕೊಟ್ಟಿತು. ಅತ್ಯಂತ ಆತ್ಮೀಯವಾಗಿ ಪ್ರೀತಿಯಿಂದ ಅವರು ನನ್ನನ್ನು ನಡೆಸಿಕೊಂಡರು. ಅದಕ್ಕೆ ಕಾರಣ ನಂದಾವರರಲ್ಲಿದ್ದ ಸ್ನೇಹಶೀಲತೆ, ಅಹಂಕಾರ ಎಂದರೆ ಏನೆಂದೇ ಅರಿಯದ ಮತ್ತು ಕಿರಿಯರನ್ನೂ ತನ್ನ ಸಮಾನರನ್ನಾಗಿ ನೋಡುವ ದೊಡ್ಡ ಗುಣ.
ಅವರ ಅಮಿತ ಪ್ರೋತ್ಸಾಹದ ಕಾರಣವಾಗಿಯೇ ತುಳು ಅಕಾಡೆಮಿ ಹೊರತರುತ್ತಿದ್ದ ಮದಿಪು ತ್ರೈಮಾಸಿಕದಲ್ಲಿ ನಾನು ಆಗಾಗ ಬರೆಯುತ್ತಿದ್ದೆ. ಆಮೇಲೆಯೂ ಒಂದೆರಡು ಸಂಪಾದಿತ ಗ್ರಂಥಗಳಲ್ಲಿಯೂ ಬರೆದ ನೆನಪು. ಕೆಲವರ ಪುಸ್ತಕಗಳ ಬೆನ್ನುಡಿ ಬರೆಯುವ ಸಂದರ್ಭ ಬಂದಾಗ ಅಥವಾ ಕವನ ಸಂಗ್ರಹ ಸ್ಪರ್ಧೆಗೆ ತೀರ್ಪುಗಾರರನ್ನು ಹುಡುಕುವ ಸಂದರ್ಭ ಬಂದಾಗ ಅವರು ನನ್ನ ಹೆಸರನ್ನು ಹೇಳಿಬಿಡುತ್ತಿದ್ದರು.
ಅಪಘಾತವೊಂದರ ಕಾರಣ 1998 ರಲ್ಲಿ ನಾನು ಗಾಲಿಕುರ್ಚಿ ಅವಲಂಬಿಸುವ ಅನಿವಾರ್ಯತೆ ಉಂಟಾದ ಮೇಲಂತೂ ಅವರ ಕಾಳಜಿ ಮತ್ತು ಪ್ರೀತಿ ದುಪ್ಪಟ್ಟಾಯಿತು. ಮಂಗಳೂರು ಬಿಜೈಯ ನಮ್ಮ ಮನೆಗೆ ಅವರು ಆಗಾಗ ಭೇಟಿ ನೀಡಿ ಸಾಹಿತ್ಯ ಸಹಿತ ಅನೇಕ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಹರಟುತ್ತಿದ್ದರು. ಓದಲು ಹೊಸ ಪುಸ್ತಕಗಳನ್ನು ಕೊಟ್ಟು ಹೋಗುತ್ತಿದ್ದರು.
ಮುಂದೆ ಅವರು ಪಿಲಿಕುಳ ನಿಸರ್ಗದಾಮದ ಯೋಜನಾಧಿಕಾರಿಯಾದಾಗಲಂತೂ ಅವರ ನನ್ನ ಒಡನಾಟ ಇನ್ನೂ ಹೆಚ್ಚಾಯಿತು. ಹೆಚ್ಚಿನವರು ನಿವೃತ್ತಿಯ ನಂತರ ಕಾರು ಚಲಾಯಿಸುವುದನ್ನು ಕಡಿಮೆ ಮಾಡುವುದು ಅಥವಾ ನಿಲ್ಲಿಸುವುದು ಸಾಮಾನ್ಯ. ಆದರೆ ಛಲಕ್ಕೆ ಇನ್ನೊಂದು ಹೆಸರಿನಂತಿದ್ದ ವಾಮನ ನಂದಾವರರು ನಿವೃತ್ತಿಯ ನಂತರವೇ ಕಾರು ಚಲಾಯಿಸಲಾರಂಭಿಸಿದರು. ಅವರ ಬಳಿ ವ್ಯಾಗನಾರ್ ಕಾರು ಇತ್ತು. ಅವರಲ್ಲಿ ಕಾರು ಇದ್ದುದು ನನಗೂ ಉಪಕಾರಕ್ಕೆ ಬಂತು. ನಾನು ಹೊರಗಡೆ ಹೋಗಲು ಅವಕಾಶವೇ ಇಲ್ಲದ ದಿನಗಳಲ್ಲಿ ನನ್ನನ್ನು ಅವರು ಹೊರಗೆಳೆದು ಕಾರಿನಲ್ಲಿ ಕೂರಿಸಿ ಪೇಟೆ ಸುತ್ತಿಸುತ್ತಿದ್ದರು.
ನಂದಾವರರಿಂದಾಗಿ ನಾನೂ ಪಿಲಿಕುಳಕ್ಕೆ ಹೋದೆ
2009 ರ ದಿನಗಳವು. ಡಾ. ನಂದಾವರರು ಪಿಲಿಕುಳ ನಿಸರ್ಗಧಾಮದ ಯೋಜನಾಧಿಕಾರಿಯಾಗಿದ್ದರು. ತುಳುನಾಡಿನ ಪಾರಂಪರಿಕ ಬದುಕಿನ ಬಗೆಗಿನ ಸಂಸ್ಕೃತಿ ಗ್ರಾಮವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಅವರದ್ದಾಗಿತ್ತು. ಹಾಗಾಗಿ ಪಿಲಿಕುಳದಲ್ಲಿ ಯಾವುದೇ ಅನುಮತಿ ಇಲ್ಲದೆ ತಿರುಗಾಡುವ ಅಧಿಕಾರವೂ, ಅವಕಾಶವೂ ಅವರಿಗಿತ್ತು.
ನನಗೆ ಈಗಲೂ ಸರಿಯಾಗಿ ನೆನಪಿದೆ. ಅದು 2009 ರ ಮಾರ್ಚ್ ತಿಂಗಳ 7 ನೇ ತಾರೀಕು. ಫೋನ್ ಮಾಡಿದ ನಂದಾವರರು “ಹಲೋ ಶ್ರೀನಿವಾಸೆರೇ, ಯಾನ್ ನಂದಾವರ ಪಾತೆರುನ, ಎಲ್ಲೆ ನಮ ಪಿಲಿಕುಳಗ್ ಪೋಯಿ, ರೆಡಿ ಉಪ್ಪುಲೆ (ನಾಳೆ ನಾವು ಪಿಲಿಕುಳಕ್ಕೆ ಹೋಗುವ, ತಯಾರಾಗಿರಿ)”. ಎಂದರು. ಹಾಗೆಯೇ ಮಾರನೇ ದಿನ ಸರಿಯಾದ ಸಮಯಕ್ಕೆ ಅವರು ನಮ್ಮ ಮನೆಗೆ ಬಂದು ನನ್ನನ್ನು ಗಾಲಿಕುರ್ಚಿಯಿಂದ ಎತ್ತಿ ಕಾರಿಗೆ ವರ್ಗಾಯಿಸಿ ಬಿಜೈ, ಯೆಯ್ಯಾಡಿ, ಪಚ್ಚನಾಡಿಯ ಮೂಲಕ ಪಿಲಿಕುಳಕ್ಕೆ ಒಯ್ದರು. ಅವರು ಅಲ್ಲಿನ ಅಧಿಕಾರಿಯಾಗಿದ್ದುದರಿಂದ ನನಗೂ ವಿಶೇಷ ಗೌರವ ದೊರೆಯಿತು. ಕುಂಬಾರಿಕೆ, ಎಣ್ಣೆ ತೆಗೆಯುವ ಗಾಣ, ಸಹಿತ ಅನೇಕ ವೃತ್ತಿಗಳನ್ನು ಹಾಗೆಯೇ ಗುತ್ತಿನ ಮನೆಯನ್ನು ಅಲ್ಲಿ ನೋಡುವ ವಿಶೇಷ ಅವಕಾಶ ನನಗೆ ದೊರೆಯಿತು. ಪ್ರತಿಯೊಂದನ್ನೂ ಅವರು ವಿವರಿಸಿ ಹೇಳುತ್ತಿದ್ದರು.
ಮರಳಿ ಬರುವಾಗ ವುಡ್ ಲ್ಯಾಂಡ್ಸ್ ಹೊಟೇಲಿಗೆ ಕರೆದುಕೊಂಡು ಹೋಗಿ ಕಾರು ಇದ್ದಲ್ಲಿಗೇ ತಿಂಡಿ ತರಿಸಿ, ತಿನಿಸಿ ಸುರಕ್ಷಿತವಾಗಿ ನನ್ನನ್ನು ಮನೆಗೆ ತಲಪಿಸಿ ಹೋದರು. ಆನಂತರವೂ ಒಂದು ಬಾರಿ ನನ್ನನ್ನು ಪಿಲಿಕುಳಕ್ಕೆ ಒಯ್ದು ಈ ಹಿಂದೆ ನೋಡಿರದ ಸಂಗತಿಗಳನ್ನೂ ತೋರಿಸಿದರು. ಇದು ವಾಮನ ನಂದಾವರರ ಪ್ರೀತಿ ಮತ್ತು ಕಾಳಜಿಯ ಕೆಲ ಸಣ್ಣ ಉದಾಹರಣೆಗಳು. ಇಂತಹ ಕೆಲಸಗಳನ್ನು ಅವರು ಎಷ್ಟೊಂದು ಮಂದಿಗೆ ಮಾಡಿರಬಹುದು?!
ಪ್ರತಿಭೆಗಳನ್ನು ಗುರುತಿಸಿ ಅವರನ್ನು ದೊಡ್ಡ ಸಾಧಕರನ್ನಾಗಿ ಮಾಡಿದವರು ವಾಮನ ನಂದಾವರರು. ಅವರು ಮತ್ತು ಅವರ ಬಾಳ ಸಂಗಾತಿ ಸಾಹಿತಿ ಚಂದ್ರಕಲಾ ನಂದಾವರರ ಹೇಮಾಂಶು ಪ್ರಕಾಶನ (ಮಗಳು ಹೇಮಶ್ರೀ, ಮಗ ಸುಧಾಂಶು. ಪ್ರಕಾಶನ ಹೇಮಾಂಶು) ಅನೇಕ ಹೊಸಬರ ಕೃತಿಗಳನ್ನು ಬೆಳಕಿಗೆ ತಂದು ಅವರ ಬರೆವಣಿಗೆಯನ್ನು ಪ್ರೋತ್ಸಾಹಿಸಿತು. ಅವರೆಲ್ಲ ಇಂದು ದೊಡ್ಡ ದೊಡ್ಡ ಲೇಖಕರಾಗಿದ್ದಾರೆ. ಈ ಅರ್ಥದಲ್ಲಿ ವಾಮನ ನಂದಾವರ ಮತ್ತು ಚಂದ್ರಕಲಾ ನಂದಾವರ ವ್ಯಕ್ತಿಗಳಾಗಿ ಅಲ್ಲ ಒಂದು ಸಂಸ್ಥೆಯಂತೆ ಕೆಲಸ ಮಾಡಿದರು. ಲೇಖ ಲೋಕಕ್ಕೆ ಅಸಾಧಾರಣ ಕೊಡುಗೆ ನೀಡಿದರು. ಅವರ ಮನೆಯಲ್ಲೇ ಸಾಹಿತಿಗಳ ಸ್ನೇಹಕೂಟವೂ ನಡೆಯುತ್ತಿತ್ತು.
ಸಮಾಜ/ ಸರಕಾರ ತಕ್ಕ ರೀತಿಯಲ್ಲಿ ಗುರುತಿಸಲಿಲ್ಲ
ಇಷ್ಟಾದರೂ ಡಾ. ವಾಮನ ನಂದಾವರರನ್ನು ಸಮಾಜ/ ಸರಕಾರ ತಕ್ಕ ರೀತಿಯಲ್ಲಿ ಗುರುತಿಸಲಿಲ್ಲವೆಂದೇ ಹೇಳಬೇಕು. ಅನೇಕ ಅನರ್ಹರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನೂ ‘ಹೊಡಕೊಂಡರು’. ಸನ್ಮಾನ ಮಾಡಿಸಿ ಭಾರೀ ತೂಕದ ಸ್ಮರಣ ಗ್ರಂಥಗಳನ್ನೂ ಹೊರತರಿಸಿಕೊಂಡರು. ಆದರೆ ನಿಜ ಅರ್ಥದ ಬಹುದೊಡ್ಡ ವಿದ್ವಾಂಸ, ಬಹುದೊಡ್ಡ ಸಾಧಕ ವಾಮನ ನಂದಾವರರಿಗೆ ಆ ಯಾವ ಮಾನ ಸನ್ಮಾನಗಳೂ ಸಕಾಲದಲ್ಲಿ ದಕ್ಕಲಿಲ್ಲ. “ಎಂಚಾಂಡಲಾ ಜಿಲ್ಲಾ ಕನ್ನಡ ರಾಜ್ಯೊತ್ಸವ ಪ್ರಶಸ್ತಿ ತಿಕ್ಂಡ್, ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ ಜನ ಬುಡ್ತೆ (ಅಂತೂ ಇಂತೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿಯಾಯಿತು, ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ ಜನ ಬಿಟ್ಟಿದ್ದೇನೆ)” ಎಂದು ಒಬ್ಬರು ಕಲಾವಿದರು ಹೇಳುತ್ತಿದ್ದರು. ಇದೇ ದಾರಿ ಅನುಸರಿಸುತ್ತಿದ್ದರೆ ನಂದಾವರರಿಗೆ ರಾಜ್ಯೋತ್ಸವ ಮಾತ್ರವಲ್ಲ ಪದ್ಮ ಪುರಸ್ಕಾರವೂ ಲಭಿಸುತ್ತಿತ್ತೋ ಏನೋ. ಆದರೆ ಹಾಗೆ ವಶೀಲಿಬಾಜಿ ಮಾಡುವ ಜಾಯಮಾನ ನಂದಾವರರದ್ದಲ್ಲ.
ವಾಮನ ನಂದಾವರರ ಬಗ್ಗೆ ಒಂದಿಡೀ ದಿನದ ಕಾರ್ಯಕ್ರಮ ಮಾಡಬೇಕು, ಅದರಲ್ಲಿ ಅವರ ಕೃತಿಗಳ ಬಗ್ಗೆ ಚರ್ಚೆಯಾಗಬೇಕು, ಅವರೊಂದಿಗೆ ಸಂವಾದ ನಡೆಸಬೇಕು, ಅದೇ ಸಂದರ್ಭದಲ್ಲಿ ಅವರ ಬದುಕು ಮತ್ತು ಸಾಧನೆಯ ಸ್ಮರಣ ಗ್ರಂಥವೊಂದು ಹೊರಬರಬೇಕು ಎಂದು ನಾನು ಅನೇಕರ ಬಳಿ ಹೇಳಿಕೊಂಡಿದ್ದೆ. ಆದರೆ ಅವಾವೂ ಸಕಾಲದಲ್ಲಿ ಆಗಲಿಲ್ಲ. ನಿಧಾನಕ್ಕೆ ಅವರು ನೆನಪಿನ ಶಕ್ತಿಯನ್ನೂ ಕಳೆದುಕೊಳ್ಳಲಾರಂಭಿಸಿದರು, ಇದೀಗ ದಿವಂಗತರೂ ಆದರು.
ಈಗಾಗಲೇ ಹೇಳಿದ ಹಾಗೆ, ಡಾ. ವಾಮನ ನಂದಾವರರು ಎಂದೂ ಪ್ರಚಾರಕ್ಕಾಗಿ, ಪ್ರಸಿದ್ಧಿಗಾಗಿ ಕೆಲಸ ಮಾಡಿದವರಲ್ಲ. ಸಾಧನೆಗೆ ಮಾನ್ಯತೆ, ಸಾಧನೆಗೆ ತಕ್ಕ ಪುರಸ್ಕಾರಗಳು ಲಭಿಸದ್ದಕ್ಕೆ ಅವರು ಬೇಸರಿಸಿದವರೂ ಅಲ್ಲ, ಮಾನಸಿಕವಾಗಿ ಕುಗ್ಗಿದವರೂ ಅಲ್ಲ. ಅವರಿಂದ ಪಾಠ ಹೇಳಿಸಿಕೊಂಡ ಅಸಂಖ್ಯ ವಿದ್ಯಾರ್ಥಿಗಳು, ಅವರ ಪ್ರೋತ್ಸಾಹದಿಂದ ಬೆಳೆದ ಲೇಖಕರು, ಕಲಾವಿದರು, ಅವರ ಕೃತಿಗಳ ದೊಡ್ಡ ಸಂಖ್ಯೆಯ ಓದುಗರ ಪ್ರೀತಿಯ ಮುಂದೆ ಈ ಮಾನ ಸನ್ಮಾನಗಳೆಲ್ಲ ಯಾವ ಲೆಕ್ಕ?
ಈ ಅರ್ಥದಲ್ಲಿ ಕರಾವಳಿ ಭಾಗದ ಸಾಹಿತ್ಯ, ಸಂಸ್ಕೃತಿ, ವಿಶೇಷವಾಗಿ ತುಳು ಜಾನಪದ ಲೋಕದ ಉಲ್ಲೇಖವಾದಾಗಲೆಲ್ಲ ಎಂದೆಂದೂ ನೆನಪಾಗಲಿರುವ ಕೆಲವೇ ಮಂದಿಯಲ್ಲಿ ಓರ್ವರು ನಮ್ಮ ಪ್ರೀತಿಯ ಡಾ. ವಾಮನ ನಂದಾವರ ಅವರು. ಅಳಿವುದು ಕಾಯ, ಉಳಿವುದು ಕೀರ್ತಿ. ಅಂತಹ ಕೀರ್ತಿವಂತ, ದೀರ್ಘಕಾಲದ ನನ್ನ ಹಿರಿಯ ಸ್ನೇಹಿತ, ಹಿತೈಷಿ ನಂದಾವರರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು.
ಶ್ರೀನಿವಾಸ ಕಾರ್ಕಳ
ಸಾಮಾಜಿಕ ಚಿಂತಕರು
ಇದನ್ನೂ ಓದಿ- http://“ದಿ ಗರ್ಲ್ ವಿಥ್ ದಿ ನೀಡಲ್” ಶಿಶು ಹಂತಕಿಯ ಕಾರ್ಯ; ಬೆಚ್ಚಿ ಬೀಳಿಸುವ ಕ್ರೌರ್ಯ https://kannadaplanet.com/the-girl-with-the-needle-film-review/