ಅಲ್ಲೆಲ್ಲೋ ಕದನ ನಡೆಯುವುದಕ್ಕೂ ಬೆಂಗಳೂರಲ್ಲಿ ಆ ದೇಶ ಭಾಷೆಯ ಸಿನೆಮಾ ಪ್ರದರ್ಶನ ನಿರ್ಬಂಧಿಸುವುದಕ್ಕೂ ಏನು ಸಂಬಂಧ?. ಸೃಜನಾತ್ಮಕ ಕಲಾಮಾಧ್ಯಮದಲ್ಲಿ ರಾಜಕೀಯ ಹಿತಾಸಕ್ತಿ ಬೆರೆಸುವುದು ಹೇಗೆ ಸಮರ್ಥನೀಯ? ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಬ್ಬಾಳಿಕೆಯಲ್ಲವೇ? ಒಕ್ಕೂಟ ವ್ಯವಸ್ಥೆಯೊಂದರಲ್ಲಿ ರಾಜ್ಯ ಸರಕಾರವೊಂದು ತನ್ನ ಹಣದಲ್ಲಿ ಫಿಲಂ ಫೆಸ್ಟಿವಲ್ ಆಯೋಜಿಸಿದಾಗ ತನಗಿಷ್ಟವಾಗದ ಸಿನೆಮಾಗಳನ್ನು ಪ್ರದರ್ಶನ ಮಾಡಕೂಡದು ಎಂದು ಕೇಂದ್ರ ಸರಕಾರ ಒತ್ತಾಯಿಸುವುದೇ ಒಕ್ಕೂಟ ವ್ಯವಸ್ಥೆಗೆ ಮಾಡುವ ಅಪಚಾರ – ಶಶಿಕಾಂತ ಯಡಹಳ್ಳಿ, ರಂಗಕರ್ಮಿ
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 15 ನೇ ಆವೃತ್ತಿ 2024, ಫೆ. 29 ರಂದು ಚಾಲನೆಗೊಂಡಿದ್ದು ಮಾರ್ಚ್ 07 ರ ವರೆಗೂ ನಡೆಯುತ್ತಿದೆ. 60 ದೇಶಗಳ 200 ಸಿನೆಮಾಗಳು 13 ಸ್ಕ್ರೀನ್ ಲ್ಲಿ ಪ್ರದರ್ಶನಗೊಳ್ಳುತ್ತಿವೆ. ಈ ನಮ್ಮ ಬೆಂಗಳೂರು ಇಂಟರ್ ನ್ಯಾಶನಲ್ ಫಿಲಂ ಫೆಸ್ಟಿವಲ್ ವಿಶ್ವದ ಗಮನ ಸೆಳೆದಿದೆ.
ಪ್ರತಿ ವರ್ಷ ನಡೆಯುವ ಈ ಸಿನೆಮಾ ಉತ್ಸವವು ಒಂದು ರೀತಿಯಲ್ಲಿ ದೃಶ್ಯ ಜಾತ್ರೆ ಇದ್ದಂತೆ. ಬೆಂಗಳೂರು ಅಷ್ಟೇ ಯಾಕೆ ಕರ್ನಾಟಕದಾದ್ಯಂತ ಸಿನೆಮಾ ಪ್ರಿಯರು, ಚಲನಚಿತ್ರ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಆಸಕ್ತಿಯಿಂದ ಬಂದು ಸೇರುವ ವಾರ್ಷಿಕ ಜಾತ್ರೆ ಇದು. ಬೆಂಗಳೂರಿನಲ್ಲೇ ಇದ್ದರೂ ವರ್ಷಾನುಗಟ್ಟಲೆ ಮುಖತಃ ಭೇಟಿಯಾಗಲೂ ಸಾಧ್ಯವಾಗದ ಅದೆಷ್ಟೋ ಸಿನೆಮಾಸಕ್ತ, ರಂಗಾಸಕ್ತ, ಸಾಹಿತ್ಯಾಸಕ್ತ ಮಿತ್ರರು ಈ ಉತ್ಸವದಲ್ಲಿ ಭೇಟಿಯಾಗಿ ಖುಷಿ ಪಡುತ್ತಾರೆ. ತಾವು ನೋಡಿದ ಸಿನೆಮಾಗಳ ಕುರಿತು ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಅನೇಕಾನೇಕ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಮುಖಪರಿಚಯವನ್ನು ನವೀಕರಣ ಮಾಡಿಕೊಳ್ಳುತ್ತಾರೆ. ಒಂದು ವಾರದ ಈ ಸಿನೆಮಾ ಜಾತ್ರೆಯ ಅನುಭವವೇ ಅನನ್ಯ. ಅಲ್ಲಿಯ ಸಂಭ್ರಮ ಸರ್ವಮಾನ್ಯ.
ವಿವಿಧ ದೇಶಗಳ ವಿಭಿನ್ನ ಸಂಸ್ಕೃತಿಗಳನ್ನು ಹಾಗೂ ಅಲ್ಲಿಯ ಜನಜೀವನದ ರೀತಿ ರಿವಾಜುಗಳನ್ನು ಅರಿತುಕೊಳ್ಳಲು ವಿದೇಶಿ ಸಿನೆಮಾಗಳು ಸಿನೆಮಾಸಕ್ತರಿಗೆ ಮಾರ್ಗದರ್ಶಕವಾಗುತ್ತವೆ. ಒಂದೊಂದು ದೇಶದ ಸಿನೆಮಾಗಳು ಆಯಾ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಸಂಕೇತಿಸುವ ಜೊತೆಗೆ ನೋಡುಗರಿಗೆ ವಿಭಿನ್ನ ಅನುಭವವಗಳನ್ನು ಕಟ್ಟಿಕೊಡುತ್ತವೆ. ಸಮಕಾಲೀನ ವಿಶ್ವದ ಸಿನೆಮಾಗಳನ್ನು ಒಂದೇ ಕಡೆ ನೋಡುವುದೇ ಸಂತಸದ ಸಂಗತಿ.
ವಿದೇಶಗಳ ಬೇರೆ ಬೇರೆ ಸಿನೆಮಾ ನಿರ್ಮಾಣದ ಆಧುನಿಕ ತಂತ್ರಗಾರಿಕೆ, ವಿಭಿನ್ನ ವಸ್ತು ವಿಷಯಗಳ ಆಯ್ಕೆ, ಚಿತ್ರಕಥೆ ತಯಾರಿ, ಕಲಾವಿದರ ಅಭಿನಯ, ನಿರ್ದೇಶಕರ ಕಥಾ ನಿರೂಪಣಾ ಕೌಶಲ್ಯ.. ಹೀಗೆ ಅನೇಕ ಸಂಗತಿಗಳನ್ನು ಅರಿತುಕೊಂಡು ಅಪ್ಡೇಟ್ ಆಗಲು ಸಿನೆಮಾ ಮಾಧ್ಯಮದವರಿಗೆ ಈ ಅಂತಾರಾಷ್ಟ್ರೀಯ ಸಿನೆಮೋತ್ಸವ ನಿಜಕ್ಕೂ ಪ್ರಯೋಜನಕಾರಿಯಾಗಿದೆ.
ಚಲನಚಿತ್ರ ನಿರ್ಮಾಣ, ಸಂಕಲನ, ಪ್ರಚಾರದಿಂದ ಹಿಡಿದು ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯ (ಐಎ) ತಂತ್ರಜ್ಞಾನದ ಬಳಕೆಯವರೆಗೂ ಮಾಹಿತಿ ಕೊಡಲು ಸಂಬಂಧಿಸಿದ ವಿಷಯ ತಜ್ಞರಿಂದ ಹಲವಾರು ಸೆಮಿನಾರ್ ಗಳನ್ನೂ ಈ ಚಿತ್ರೋತ್ಸವದಲ್ಲಿ ಆಯೋಜಿಸಲಾಗಿದ್ದು ಫಿಲಂ ಮೇಕಿಂಗ್ ಆಸಕ್ತರಿಗೆ ವರದಾನವಾಗಿದೆ. ದೇಶ ವಿದೇಶಗಳ ಸಿನೆಮಾಗಳನ್ನು ನೋಡಿ ಆನಂದಿಸುವವರಿಗೆ, ಚಲನಚಿತ್ರ, ಕಿರುಚಿತ್ರ, ವೆಬ್ ಸೀರೀಸ್, ಡಾಕ್ಯುಮೆಂಟರಿಗಳನ್ನು ಮಾಡಿ ತೃಪ್ತಿಪಡುವವರಿಗೆ, ಚಿತ್ರೋದ್ಯಮ ಮತ್ತು ಹೊಸ ತಾಂತ್ರಿಕ ಅವಿಷ್ಕಾರಗಳ ಬಗ್ಗೆ ಕಲಿಯುವವರಿಗೆ ಈ ಫಿಲಂ ಫೆಸ್ಟಿವಲ್ ಅತ್ಯಂತ ಅನುಕೂಲಕರವಾಗಿದೆ.
“ಈ ಚಲನ ಚಿತ್ರೋತ್ಸವದಲ್ಲಿ ಕನ್ನಡ ಅಷ್ಟೇ ಅಲ್ಲ, ಅನೇಕ ದೇಶಗಳ ಬದುಕು, ಜನಜೀವನ, ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವನ್ನೂ ತಿಳಿದುಕೊಳ್ಳುವ ಅವಕಾಶವಿದೆ. ಇಂತಹ ಸುವರ್ಣ ಅವಕಾಶವನ್ನು ಬಳಸಿಕೊಳ್ಳುವ ಕೆಲಸ ಆಗಬೇಕಿದೆ. ಜನರಲ್ಲಿ ದ್ವೇಷ ಭಾವನೆ ಹೋಗಬೇಕು, ಮನುಷ್ಯ ಮನುಷ್ಯರನ್ನು ಪ್ರೀತಿಸುವ, ಗೌರವಿಸುವ, ಸಮಾನತೆ ಬೆಳೆಸುವ ಕೆಲಸ ಆಗಬೇಕು. ಜನ ವಿಶ್ವಮಾನವರಾಗಬೇಕೇ ಹೊರತು ಅಲ್ಪ ಮಾನವರಾಗಬಾರದು” ಎಂದು ಈ ಫಿಲಂ ಫೆಸ್ಟಿವಲ್ ಉದ್ಘಾಟನೆ ಮಾಡಿದ ನಂತರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ ಮಾತುಗಳು ಗಮನಾರ್ಹ.
ಹಿಂದಿನ ಚಿತ್ರೋತ್ಸವಕ್ಕೆ ಹೋಲಿಸಿದರೆ ಈ ಬಾರಿ ಎಲ್ಲವನ್ನೂ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಪ್ರವೇಶಪತ್ರಗಳಲ್ಲಿ ಕ್ಯು ಆರ್ ಕೋಡ್ ಬಳಸಿ ತಾಂತ್ರಿಕವಾಗಿ ಅಪ್‌ಡೇಟ್ ಮಾಡಲಾಗಿದೆ. ಸಿನೆಮಾಗಳ ಕುರಿತ ಮಾಹಿತಿ ಪುಸ್ತಕವನ್ನು ಮೊದಲ ಸಲ ಮೊದಲ ದಿನ ಎಲ್ಲರಿಗೂ ಹಂಚಲಾಗಿದೆ. ಹಳೆಯ ವೈಲಂಟ್ ವಾಲೆಂಟಿಯರ್ಸ್ ಗಳನ್ನು ಬದಲಾಯಿಸಿ ಹೊಸ ಯುವ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ. ತಾಂತ್ರಿಕ ವ್ಯತ್ಯಯದಿಂದಾಗಿ ಪ್ರದರ್ಶನಗಳು ರದ್ದಾಗದಂತೆ ನೋಡಿಕೊಳ್ಳಲಾಗಿದೆ. ಆದರೆ ಅದ್ಯಾಕೋ ಈ ಸಲ ಪ್ರೇಕ್ಷಕರದ್ದೇ ಕೊರತೆಯಾಗಿದೆ. ಹಿಂದೆಲ್ಲಾ ಫಿಲಂ ಫೆಸ್ಟಿವಲ್ ನಲ್ಲಿ ಪ್ರೇಕ್ಷಕರು ಮುಗಿಬೀಳುತ್ತಿದ್ದರು. ಓರಿಯನ್ ಮಾಲ್ ನಲ್ಲಿರುವ ಎಲ್ಲಾ ಹನ್ನೊಂದು ಸಿನೆಮಾ ಹಾಲ್ ಗಳಲ್ಲೂ ಸಿನೆಮಾಸಕ್ತರು ತುಂಬಿ ತುಳುಕುತ್ತಿದ್ದರು. ಥಿಯೇಟರ್ ಒಳಗೆ ಪ್ರವೇಶ ಸಿಗದೆ ಗಲಾಟೆಗಳು ಸರ್ವೇ ಸಾಮಾನ್ಯವಾಗಿದ್ದವು. ಇರಾನಿಯನ್ ಹಾಗೂ ಕೊರಿಯನ್ ಸಿನೆಮಾಗಳಿಗೆ ಬರುವ ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಿತ್ತು.
ಆದರೆ ಈ ಬಾರಿ ಅಂತಹ ವಾತಾವರಣವಿಲ್ಲ ಯಾಕೆಂದರೆ ಜನಸಂದಣಿಯೇ ಹೆಚ್ಚಾಗಿಲ್ಲ. ಎಲ್ಲಾ ಕೂಲ್ ಕೂಲ್. ಈ ಸಲ ಯಾಕೆ ಪ್ರೇಕ್ಷಕರ ಬರ ಎದುರಾಯಿತು ಎಂಬುದಕ್ಕೆ ಕಾರಣವನ್ನು ಆಯೋಜಕರು ಕಂಡುಕೊಳ್ಳಬೇಕಿದೆ. ಒಟ್ಟು ಹತ್ತು ಸಾವಿರದಷ್ಟು ಪ್ರವೇಶಪತ್ರದ ಪಾಸ್ ಗಳನ್ನು ಮುದ್ರಿಸಲಾಗಿದೆಯಂತೆ. ಅದರಲ್ಲಿ ಮೂರುಸಾವಿರದಷ್ಟು ತಲಾ 800ರೂ. ಹಣ ಪಡೆದದ್ದಾಗಿದ್ದರೆ ಬಾಕಿ ಎಲ್ಲವೂ ಕಾಂಪ್ಲಿಮೆಂಟರಿ ಹಾಗೂ ಪ್ರೆಸ್ ಪಾಸ್‌ಗಳು. ಆದರೆ ಪ್ರತಿ ದಿನ ಸಿನೆಮಾ ನೋಡಲು ಬರುತ್ತಿರುವುದು ಸರಾಸರಿ 2000 ದಷ್ಟು ಸಿನೆಮಾಸಕ್ತರು. ಹಣ ಕೊಟ್ಟು ಆನ್ ಲೈನ್ ನ ಲ್ಲಿ ನೋಂದಣಿ ಮಾಡಿಕೊಂಡವರಲ್ಲಿ 600 ಕ್ಕೂ ಹೆಚ್ಚು ಜನ ಸಿನೆಮಾ ನೋಡಲು ಬರದೇ ಅವರ ಹೆಸರಲ್ಲಿ ಮುದ್ರಣಗೊಂಡ ಪಾಸ್ ಗಳು ಬಾಕಿಯಾಗಿವೆ. ನೋಂದಾಯಿಸಿಕೊಂಡೂ ಬರದೇ ಇರುವ ಮುನ್ನೂರಕ್ಕೂ ಹೆಚ್ಚು ಪತ್ರಕರ್ತರ ಪಾಸ್‌ಗಳು ಪ್ರೆಸ್ ನವರಿಗಾಗಿ ಕಾಯುತ್ತಲೇ ಇವೆ. ಯಾಕೆ ಹೀಗೆ ಎಂದು ಆಯೋಜಕರನ್ನು ಕೇಳಿದರೆ “ಬರಬಹುದು ಇನ್ನೂ ಮೂರು ದಿನ ಬಾಕಿ ಇದೆಯಲ್ಲಾ” ಎಂದು ಉತ್ತರಿಸುತ್ತಾರೆ. ಮುದ್ರಣಗೊಂಡ ಪ್ರವೇಶಪತ್ರಗಳ ಅರ್ಧದಷ್ಟು ಜನರಾದರೂ ಬಂದಿದ್ದರೆ ಉತ್ಸವದ ಕಳೆ ಬರುತ್ತಿತ್ತು. ಆದರೆ ಯಾಕೆ ಹೆಚ್ಚು ಪ್ರೇಕ್ಷಕರು ಸಿನೆಮಾ ವೀಕ್ಷಣೆಗೆ ಬರಲಿಲ್ಲ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಪ್ರಚಾರದ ಕೊರತೆಯಾ? ಚಲನಚಿತ್ರ ಅಕಾಡೆಮಿಗೆ ಸಾಧು ಕೋಕಿಲರವರನ್ನು ಕೊನೆಯ ಕ್ಷಣದಲ್ಲಿ ನೇಮಕ ಮಾಡಿದ್ದರಿಂದಾಗಿ ಅವರೂ ಏನೂ ಮಾಡಲಾಗದ್ದು ಕಾರಣವಾ? ಹತ್ತು ಸಾವಿರ ಪಾಸ್ ಮುದ್ರಿಸಲಾಗಿದೆಯಾದ್ದರಿಂದ ಜನ ಬಂದೇ ಬರುತ್ತಾರೆ ಎನ್ನುವ ಓವರ್ ಕಾನ್ಪಿಡೆನ್ಸ್ ಆಯೋಜಕರದ್ದಾ? ಗೊತ್ತಿಲ್ಲ. ಸರಕಾರ ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಈ ಫಿಲಂ ಫೆಸ್ಟಿವಲ್ ಗೆ ಖರ್ಚು ಮಾಡುವುದೇ ಹೆಚ್ಚು ಜನರು ಪ್ರಯೋಜನ ಪಡೆಯಲಿ ಎಂದು. ಅದು ಸಮರ್ಪಕವಾಗಿ ಆಗಿದ್ದರೆ ಚೆನ್ನಾಗಿತ್ತು. ಮುಂದಿನ ವರ್ಷದಲ್ಲಾದರೂ ಈ ಸಲ ಆದ ನ್ಯೂನತೆಯನ್ನು ಸರಿಪಡಿಸಿಕೊಳ್ಳಬಹುದಾಗಿದೆ..
ಈ ಫಿಲಂ ಫೆಸ್ಟಿವಲ್ ನಲ್ಲಿ ಸಾಕ್ಷಚಿತ್ರವೊಂದನ್ನು ಆಯ್ಕೆಮಾಡಿ, ಆಹ್ವಾನಿಸಿ ನಂತರ ನಿರಾಕರಿಸಿದ ವಿದ್ಯಮಾನ ನಿಜಕ್ಕೂ ಖಂಡನೀಯ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಕೇಸರಿ ಹರವುರವರು ಆರೇಳು ತಿಂಗಳು ದಿಲ್ಲಿ ಗಡಿಯಲ್ಲಿ ಓಡಾಡಿ ರೈತರ ಐತಿಹಾಸಿಕ ರಾಜಿರಹಿತ ಹೋರಾಟದ ಕುರಿತು “ಕಿಸಾನ್ ಸತ್ಯಾಗ್ರಹ” ಎನ್ನುವ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದರು. ಈ ಹಿಂದೆ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದಾಗ ಈ ಚಿತ್ರವನ್ನು ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶಿಸಲು ಅವಕಾಶ ಕೊಡಲಿಲ್ಲ. ಈ ಸಲ ಅವಕಾಶ ಕೊಡಲಾಯಿತು ಹಾಗೂ ಮಾಹಿತಿ ಪುಸ್ತಕ ಹಾಗೂ BIFFS ನ ವೆಬ್ ಸೈಟಲ್ಲೂ ಈ ಸಾಕ್ಷ್ಯಚಿತ್ರದ ವಿವರಗಳನ್ನೂ ಮುದ್ರಿಸಲಾಗಿತ್ತು. ಕೊನೆಯ ಕ್ಷಣದಲ್ಲಿ ಪ್ರಮಾಣ ಪತ್ರದ ನೆಪ ಹೇಳಿ ಪ್ರದರ್ಶನವನ್ನೇ ನಿರಾಕರಿಸಲಾಯ್ತು. ಭಾರತದಲ್ಲಿ ನಿರ್ಮಾಣವಾಗುವ ಬಹುತೇಕ ಸಾಕ್ಷ್ಯಚಿತ್ರಗಳು ಪ್ರಮಾಣ ಪತ್ರ ಪಡೆಯುವುದಿಲ್ಲ. ಇಂತಹ ಅನೇಕ ಡಾಕ್ಯುಮೆಂಟರಿಗಳು ಹಲವಾರು ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತಲೇ ಇವೆ. ಆದರೆ ಅನ್ನದಾತರ ಹೋರಾಟದ ಕುರಿತ ಚಿತ್ರಕ್ಕೆ ಕೊಟ್ಟ ಅನುಮತಿ ಹಾಗೂ ಅವಕಾಶವನ್ನು ಹಿಂಪಡೆದದ್ದು ಅಕ್ಷಮ್ಯ.
ಅದೇ ರೀತಿ ಭಾರತ ಸರಕಾರದ Ministry of Information & Broadcasting ಸಚಿವಾಲಯವು BIFF ನಲ್ಲಿ ಪ್ರದರ್ಶನಗೊಳ್ಳಬಹುದಾಗಿದ್ದ ಉಕ್ರೇನ್ ಮತ್ತು ಇಸ್ರೇಲ್ ನ ಎರಡು ಚಲನಚಿತ್ರಗಳಿಗೆ ಅನುಮತಿ ನಿರಾಕರಿಸಿದೆ. ಈ ಎರಡೂ ದೇಶಗಳಲ್ಲಿ ಯುದ್ಧ ನಡೆಯುತ್ತಿರುವುದನ್ನೇ ನಿರಾಕರಣೆಗೆ ನೆಪವಾಗಿಸಿದೆ. ಅಲ್ಲೆಲ್ಲೊ ಕದನ ನಡೆಯುವುದಕ್ಕೂ ಬೆಂಗಳೂರಲ್ಲಿ ಆ ದೇಶ ಭಾಷೆಯ ಸಿನೆಮಾ ಪ್ರದರ್ಶನ ನಿರ್ಬಂಧಿಸುವುದಕ್ಕೂ ಏನು ಸಂಬಂಧ?. ಸೃಜನಾತ್ಮಕ ಕಲಾಮಾಧ್ಯಮದಲ್ಲಿ ರಾಜಕೀಯ ಹಿತಾಸಕ್ತಿ ಬೆರೆಸುವುದು ಹೇಗೆ ಸಮರ್ಥನೀಯ? ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಬ್ಬಾಳಿಕೆಯಲ್ಲವೇ? ಒಕ್ಕೂಟ ವ್ಯವಸ್ಥೆಯೊಂದರಲ್ಲಿ ರಾಜ್ಯ ಸರಕಾರವೊಂದು ತನ್ನ ಹಣದಲ್ಲಿ ಫಿಲಂ ಫೆಸ್ಟಿವಲ್ ಆಯೋಜಿಸಿದಾಗ ತನಗಿಷ್ಟವಾಗದ ಸಿನೆಮಾಗಳನ್ನು ಪ್ರದರ್ಶನ ಮಾಡಕೂಡದು ಎಂದು ಕೇಂದ್ರ ಸರಕಾರ ಒತ್ತಾಯಿಸುವುದೇ ಒಕ್ಕೂಟ ವ್ಯವಸ್ಥೆಗೆ ಮಾಡುವ ಅಪಚಾರ. ಈ ಅಪಸವ್ಯವನ್ನು ಖಂಡಿಸುತ್ತಲೇ ದೇಶ ವಿದೇಶಗಳ ಸಿನೆಮಾಗಳ ಪ್ರದರ್ಶನಕ್ಕೆ ಸಿನೆಮಾಸಕ್ತರು ಸಾಕ್ಷಿಯಾಗಬೇಕಿದೆ. ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ಯಶಸ್ವಿಗೊಳಿಸಬೇಕಿದೆ.
ಶಶಿಕಾಂತ ಯಡಹಳ್ಳಿ, ರಂಗ ಕರ್ಮಿ