ಮುಡಾ ಪ್ರಕರಣ: ಸಿಎಂ ನಾಳೆ ವಿಚಾರಣೆಗೆ ಹಾಜರಾಗುವರೇ?

Most read

ಬೆಂಗಳೂರು: ಮೈಸೂರು ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ನಾಳೆ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ನೋಟಿಸ್ ನೀಡಿದೆ. ಆದರೆ ಮುಖ್ಯಮಂತ್ರಿಗಳು ನಾಳೆ ಬುಧವಾರ ದಿನವಿಡೀ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುತ್ತಾರೆ. ಯಾವ ಸಂದರ್ಭದಲ್ಲಿ ಹೋಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.


ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಮುಖ್ಯಮಂತ್ರಿಗಳು ಚನ್ನಪಟ್ಟಣಕ್ಕೆ ತೆರಳಲಿದ್ದಾರೆ. ಲೋಕಾಯುಕ್ತ ವಿಚಾರಣೆಗೆ ಹಾಜರಾಗುವುದಾಗಿ ಸಿಎಂ ಸಿದ್ದರಾಮಯ್ಯ ನಿನ್ನೆಯೇ ಶಿಗ್ಗಾಂವಿಯಲ್ಲಿ ತಿಳಿಸಿದ್ದರು.

ಲೋಕಾಯುಕ್ತ ನೋಟಿಸ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಸಚಿವರ ಜೊತೆ ಸಿಎಂ ಚರ್ಚೆ ನಡೆಸಿರುವುದಾಗಿ ತಿಳಿದು ಬಂದಿದೆ. ಕಾನೂನು ಸಚಿವ ಹೆಚ್. ಕೆ. ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕ ಸಚಿವರು ಭಾಗಿಯಾಗಿದ್ದರು. ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ನೋಟಿಸ್ ಕೊಟ್ಟಾಗ ಹೋಗಲೇಬೇಕು. ಲೋಕಾಯುಕ್ತ ಎಲ್ಲರಿಗಿಂತ ದೊಡ್ಡದು ಎಂದು ಹೇಳಿದ್ದಾರೆ.

ಈ ಮಧ್ಯೆ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಮುಖ್ಯಮಂತ್ರಿಗಳು ವಿಚಾರಣೆಗೆ ಹಾಜರಾಗುವುದು ರಾಜ್ಯಕ್ಕೆ ಅವಮಾನವಾಗಿದೆ. ಆದ್ದರಿಂದ ಅವರು ರಾಜೀನಾಮೆ ಕೊಟ್ಟು ವಿಚಾರಣೆ ಎದುರಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದೆ. ನಾಳೆ ಮೈಸೂರಿನಲ್ಲಿ ಕಪ್ಪು ಬಾವುಟ ಪ್ರದರ್ಶನ ಮತ್ತು ಘೇರಾವ್ ನಡೆಸಲು ಬಿಜೆಪಿ ನಿರ್ಧರಿಸಿದೆ.

ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ನಾಪತ್ತೆಯಾಗಿದ್ದು ಇದುವರೆಗೂ ಪತ್ತೆಯಾಗಿಲ್ಲ. ಇವರಿಗೆ ವಿಚಾರಣೆಗೆ ಬರುವಂತೆ ಸಮನ್ಸ್ ಕೊಟ್ಟಿದ್ದ ED ಇದೀಗ ಮತ್ತೊಮ್ಮೆ ಸಮನ್ಸ್ ಕೊಟ್ಟಿದೆ. ಇತ್ತ ಆಯುಕ್ತರ ನಿವಾಸದಲ್ಲಿದ್ದ CCTV ನಾಪತ್ತೆಯಾಗಿದ್ದು, ಅಧಿಕಾರಿಗಳ ದೂರು ಮೈಸೂರಿನ ಕುವೆಂಪುನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಮುಡಾ ಆಯುಕ್ತ ನಿವಾಸದಲ್ಲಿದ್ದ 5 ಸಿಸಿವಿಟಿ, DVR, 3 ಸಿಸಿ ಕ್ಯಾಮರಾ, ಡಿವಿಆರ್ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

More articles

Latest article