ಹೋಟೆಲ್, ರೆಸ್ಟೋರೆಂಟ್, ಕ್ಲಬ್ ಬಳಿಕ ಪಿಜಿಗಳಿಗೂ ಆಹಾರ ಇಲಾಖೆ ದಾಳಿ, ಊಟದ ಮೇಜಿನ ಮೇಲೆ ತಿಗಣೆ ಔಷಧಿ!

ಬೆಂಗಳೂರು ಸೆ. 5: ಹೋಟೆಲ್‌, ರೆಸ್ಟೋರೆಂಟ್‌ಗಳ ಬಳಿಕ ಇದೀಗ ಬೆಂಗಳೂರಿನ ಪಿಜಿಗಳಲ್ಲೂ ಆಹಾರ ಸುರಕ್ಷತಾ ಇಲಾಖೆ ದಾಳಿ ಮುಂದುವರಿಸಿದೆ. ಕಳಪೆ ಗುಣಮಟ್ಟದ ಆಹಾರ, ಸ್ವಚ್ಛತೆಯ ಕೊರತೆ ಹಾಗೂ ಆಹಾರ ಸಂಗ್ರಹಣೆಯಲ್ಲಿ ನಿಯಮ ಉಲ್ಲಂಘನೆ ಕುರಿತು ಬಂದ ದೂರುಗಳ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 64 ಪಿಜಿಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ ಅಡುಗೆ ಮನೆ, ಆಹಾರ ತಯಾರಿಕೆ, ಸಂಗ್ರಹಣೆ, ನೀರು ಪೂರೈಕೆ ಹಾಗೂ ಸ್ವಚ್ಛತಾ ವ್ಯವಸ್ಥೆ ಪರಿಶೀಲಿಸಿದೆ.

ತಪಾಸಣೆ ವೇಳೆ 23 ಪಿಜಿಗಳಲ್ಲಿ ಆಹಾರ ಸುರಕ್ಷತೆ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ಲೋಪಗಳು ಕಂಡುಬಂದಿದ್ದು, ಸಂಬಂಧಪಟ್ಟ ಪಿಜಿಗಳಿಗೆ ನೋಟಿಸ್ ನೀಡಲಾಗಿದೆ. ಜೊತೆಗೆ ಆಹಾರದ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಲು 12 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಅವಧಿ ಮೀರಿದ ಆಹಾರ ವಸ್ತುಗಳು ಪತ್ತೆ

ಕೆಲವು ಪಿಜಿಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಅಧಿಕಾರಿಗಳ ತಪಾಸಣೆಯಲ್ಲಿ ಬಯಲಾಗಿದೆ.

ಅವಧಿ ಮೀರಿದ ಮೊಸರು, ಬಿಸಿಬೇಳೆ ಬಾತ್‌ ಪೌಡರ್‌, ಅಕ್ಕಿ ಹಿಟ್ಟು, ಸಿಂಥೆಟಿಕ್‌ ಆಹಾರ ಬಣ್ಣ, ಕಾಳುಮೆಣಸು ಹಾಗೂ ಸರಿಯಾದ ಲೇಬಲ್‌ ಇಲ್ಲದ ಮಿಶ್ರಣ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ನಿಯಮಾನುಸಾರ ಇವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಊಟದ ಮೇಜಿನ ಮೇಲೆಯೇ ತಿಗಣಿ ಪುಡಿ!

ಪಿಜಿಗಳ ತಪಾಸಣೆಯಲ್ಲಿ ಅತ್ಯಂತ ಆತಂಕಕಾರಿ ಸಂಗತಿ ಬೊಮ್ಮಸಂದ್ರದ ನಂದನ ಎಲೈಟ್ ಪಿಜಿಯಲ್ಲಿ ಬೆಳಕಿಗೆ ಬಂದಿದೆ. ಆಹಾರ ಪದಾರ್ಥಗಳಿದ್ದ ಊಟದ ಮೇಜಿನ ಮೇಲೆಯೇ ತಿಗಣಿ ನಿಯಂತ್ರಣಕ್ಕೆ ಬಳಸುವ ಪುಡಿ ಇಡಲಾಗಿತ್ತು. ಆಹಾರ ಇರುವ ಸ್ಥಳದಲ್ಲಿ ಕೀಟನಾಶಕ/ಪೆಸ್ಟ್‌ ಕಂಟ್ರೋಲ್‌ ವಸ್ತು ಇಟ್ಟಿರುವುದು ಗಂಭೀರ ಆಹಾರ ಸುರಕ್ಷತಾ ಲೋಪ ಎಂದು ಅಧಿಕಾರಿಗಳು ಪರಿಗಣಿಸಿದ್ದಾರೆ.

ಇಷ್ಟೇ ಅಲ್ಲದೆ, ಕುಡಿಯುವ ನೀರಿನ ವ್ಯವಸ್ಥೆ ಇರುವ ಜಾಗದಲ್ಲೇ ಬಳಕೆಯಾಗದ ಮತ್ತು ಆಹಾರಕ್ಕೆ ಸಂಬಂಧಿಸದ ವಸ್ತುಗಳನ್ನು ಸಂಗ್ರಹಿಸಿರುವುದು ಕೂಡ ಪತ್ತೆಯಾಗಿದೆ. ಒಟ್ಟಾರೆ ಅಲ್ಲಿನ ಸ್ವಚ್ಛತಾ ಪರಿಸ್ಥಿತಿಯೂ ಸಮರ್ಪಕವಾಗಿರಲಿಲ್ಲ. ಹೀಗಾಗಿ ನಂದನ ಎಲೈಟ್ ಪಿಜಿಯ ಡೈನಿಂಗ್‌ ಏರಿಯಾವನ್ನು ಅಧಿಕಾರಿಗಳು ಸೀಲ್‌ ಮಾಡಿದ್ದಾರೆ.

ಪಿಜಿ ಮಾಲೀಕರಿಗೆ ಖಡಕ್ ಸೂಚನೆ

ಆಹಾರ ಸುರಕ್ಷತಾ ಇಲಾಖೆ ಎಲ್ಲಾ ಪಿಜಿ ಮಾಲೀಕರು ಹಾಗೂ ಆಹಾರ ನಿರ್ವಹಣೆಯಲ್ಲಿ ತೊಡಗಿರುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬೇಕು, ಗುಣಮಟ್ಟದ ಕಚ್ಚಾ ವಸ್ತುಗಳನ್ನು ಮಾತ್ರ ಬಳಸಬೇಕು, ಅಡುಗೆ ಮನೆ ಮತ್ತು ಆಹಾರ ತಯಾರಿಕಾ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗೂ ಅವಧಿ ಮೀರಿದ ಆಹಾರವನ್ನು ಯಾವುದೇ ಕಾರಣಕ್ಕೂ ಬಳಸಬಾರದು ಅಥವಾ ವಿತರಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ನಿಯಮ ಉಲ್ಲಂಘನೆ ಮುಂದುವರಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ಸಂಬಂಧಿತ ನಿಯಮಗಳ ಅಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಇಲಾಖೆ ತಿಳಿಸಿದೆ.

More articles

Latest article

Most read