ಬೆಂಗಳೂರು ಸೆ. 5: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ನಿಯಮ ಪಾಲಿಸುತ್ತಿದ್ದ ಜೈಲು ವೀಕ್ಷಕನ ಮೇಲೆಯೇ ಕೈದಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳೆನ್ನಲಾದ ಐವರು ಕೈದಿಗಳು ವಾಚರ್ ಮಂಜುನಾಥ್ ಹವೇಲಿ ಅವರನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ.
ಸೆಪ್ಟೆಂಬರ್ 2ರಂದು ಬೆಳಗ್ಗೆ ಸುಮಾರು 11.30ರ ವೇಳೆಗೆ ಪರಪ್ಪನ ಅಗ್ರಹಾರ ಜೈಲಿನ ಶಿಕ್ಷಾ ಬಂಧಿ ವಿಭಾಗದಲ್ಲಿ ಘಟನೆ ನಡೆದಿದೆ. ಮಂಜುನಾಥ್ ಅವರು ಕೈದಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಂಬಂಧ ವಿಭಾಗಕ್ಕೆ ತೆರಳಿದ್ದರು. ಈ ವೇಳೆ ಮೊಹಮ್ಮದ್ ಮುಜಾಮಿಲ್, ಅಬ್ದುಲ್ ಶಫಾನ್, ಮೊಹಮ್ಮದ್ ರಿಜ್ವಾನ್, ನಯಾಜ್ ಹಾಗೂ ಕಲಂದರ್ ಶಫಿ ಎಂಬ ಐವರು ಕೈದಿಗಳು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳಿಂದ ಏಕಾಏಕಿ ಮೂಗಿಗೆ ಗುದ್ದಿಸಿಕೊಂಡ ಮಂಜುನಾಥ್ ಅವರನ್ನು ಬಳಿಕ ಕೊಠಡಿ ಸಂಖ್ಯೆ 4ಕ್ಕೆ ಎಳೆದೊಯ್ದು ಹಲ್ಲೆ ನಡೆಸಲಾಗಿದೆ. ಅಷ್ಟೇ ಅಲ್ಲದೆ, ಅವರ ಕುತ್ತಿಗೆಯನ್ನು ಬಲವಾಗಿ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಕರ್ತವ್ಯದಲ್ಲಿದ್ದ ಇತರ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿ ಮಂಜುನಾಥ್ ಅವರನ್ನು ರಕ್ಷಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಕ್ರಮ ಚಟುವಟಿಕೆ ತಡೆಯುತ್ತಿದ್ದುದೇ ಕಾರಣ?
ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ಬಗ್ಗೆ ಮಂಜುನಾಥ್ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕೆ ಆರೋಪಿಗಳು ಅವರ ಮೇಲೆ ಹಳೆಯ ದ್ವೇಷ ಹೊಂದಿದ್ದರು ಎಂಬ ಆರೋಪವೂ ಕೇಳಿಬಂದಿದೆ. ತಿಂಗಳ ಹಿಂದೆ ಕೆಲವು ಕೈದಿಗಳನ್ನು ಭದ್ರತಾ ವಿಭಾಗದಿಂದ ಅನೆಕ್ಸ್-1 ಕಾರಾಗೃಹಕ್ಕೆ ಸ್ಥಳಾಂತರಿಸುವ ಸಂದರ್ಭದಲ್ಲಿ ಹೆಚ್ಚುವರಿ ವಸ್ತುಗಳನ್ನು ತೆಗೆದುಕೊಂಡು ಹೋಗಲು ಮಂಜುನಾಥ್ ಅವಕಾಶ ನೀಡಿರಲಿಲ್ಲ. ಕೈದಿಗಳ ವಸ್ತುಗಳ ತಪಾಸಣೆ ವಿಚಾರದಲ್ಲೂ ಅವರ ಹಾಗೂ ಆರೋಪಿಗಳ ನಡುವೆ ಹಿಂದೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ.
ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಪ್ರಕರಣದಲ್ಲಿ ಆರೋಪಿಸಲಾಗಿರುವ ಐವರು ಕೈದಿಗಳ ಪಾತ್ರ, ಹಲ್ಲೆಗೆ ನಿಖರ ಕಾರಣ ಹಾಗೂ ಜೈಲಿನೊಳಗಿನ ಅಕ್ರಮ ಚಟುವಟಿಕೆಗಳ ಕುರಿತು ಅವರು ನೀಡಿದ್ದ ಮಾಹಿತಿಗಳ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆಯಿದೆ.

