“ಮೆಗಾ ಬದುಕು, ಮೈಕ್ರೋ ಖುಷಿಗಳು”

Most read

ಮಹಾನಗರಗಳೆಂದರೆ ಐಡಿಯಾಗಳ ಪ್ರಯೋಗಶಾಲೆಗಳು.

ಐಡಿಯಾಗಳತ್ತ ನೇರವಾಗಿ ಬರುವ ಮುನ್ನ ನಮ್ಮ ಸಿನೆಮಾ ಹುಚ್ಚಿನ ಬಗೆಗಿನ ಹಿನ್ನೆಲೆಯೊಂದಿಗೆ ಚಿಕ್ಕದೊಂದು ಪೀಠಿಕೆ ಹಾಕುವುದು ಸೂಕ್ತ. ಅಂದಾಜು ಹತ್ತು ವರ್ಷಗಳ ಹಿಂದಿನ ಮಾತು. ಆಗ ಟೊರೆಂಟ್ ಮೂಲದಿಂದ ಸಿನೆಮಾಗಳನ್ನು ಡೌನ್ಲೋಡ್ ಮಾಡಿ ವೀಕ್ಷಿಸುವುದು ನಮ್ಮಂತಹ ಸಿನೆಮಾ ಅಭಿಮಾನಿಗಳ ಬಹುದೊಡ್ಡ ಹುಚ್ಚಾಗಿತ್ತು. ಆಗೆಲ್ಲ ಈ ಮಹಾಕಾರ್ಯಕ್ಕೆ ನನಗೆ ಜೊತೆ ನೀಡುತ್ತಿದ್ದಿದ್ದು ಅಂದಾಜು ನನ್ನದೇ ವಯಸ್ಸಿನ ಓರ್ವ ಚಂಡೀಗಢ್ ಮೂಲದ ಮಿತ್ರ.

ಈ ನಡುವೆ ಭೂತಪ್ರೇತ-ಅತಿಮಾನುಷ ಶಕ್ತಿಗಳನ್ನೇ ಮುಖ್ಯ ಥೀಮ್ ಆಗಿ ಇಟ್ಟುಕೊಂಡಿರುವ ಚಿತ್ರಗಳನ್ನು ವೀಕ್ಷಿಸುವ ಹುಚ್ಚೊಂದು ಅದೆಲ್ಲಿಂದಲೋ ನಮ್ಮಿಬ್ಬರಿಗೆ ಅಂಟಿಕೊಂಡಿತ್ತು. ಇನ್ನು ಇಂಟರ್ನೆಟ್ ಕೂಡ ಭಯಂಕರ ವೇಗದಲ್ಲಿ ಓಡುತ್ತಿದ್ದರಿಂದ ಚಿತ್ರದ ರೇಟಿಂಗ್ ಗಳತ್ತ ಒಟ್ಟಾರೆಯಾಗಿ ಕಣ್ಣಾಡಿಸಿ, ಡೌನ್ಲೋಡಿಗೆ ಹಾಕುವ ಅಭ್ಯಾಸವನ್ನೂ ಇಟ್ಟುಕೊಂಡಿದ್ದೆವು. ನಾನು ಚಿತ್ರವೊಂದರ ಹೆಸರನ್ನು ಅನುಮೋದಿಸಿದರೆ, ಇವನು ಅವುಗಳನ್ನು ಹುಡುಕಿ ಡೌನ್ಲೋಡ್ ಮಾಡುತ್ತಿದ್ದ. ನಮ್ಮದೇ ದೇಸಿ ಭೂತಗಳು, ಬಾಲಿವುಡ್ ಭೂತಗಳು, ಹಾಲಿವುಡ್ ಭೂತಗಳು, ಆಫ್ರಿಕನ್ ಭೂತಗಳು, ಫೂಟೇಜ್ ಭೂತಗಳು, ತಲೆಕೆಟ್ಟ ಭೂತಗಳು, ತುಂಟ ಭೂತಗಳು, ಹಂತಕ ಭೂತಗಳು, ಮೈಗಳ್ಳ ಭೂತಗಳು, ಅದ್ಯಾವ ಕೋನದಲ್ಲಿ ನೋಡಿದರೂ ಭೂತಗಳಂತೆ ಕಾಣದ ಪಾಪದ ಭೂತಗಳು, ಟಿವಿ-ಮೊಬೈಲುಗಳ ಗರ್ಭದಲ್ಲಿ ಸಕ್ರಿಯವಾಗಿದ್ದ ತಂತ್ರಜ್ಞಾನ ಸ್ನೇಹಿ ಭೂತಗಳು… ಹೀಗೆ ಒಂದೆರಡು ವರ್ಷಗಳಲ್ಲಿ ನಾವಿಬ್ಬರು ನೋಡಿದ್ದ ಹಾರರ್ ಸಿನೆಮಾಗಳ ಸಂಖ್ಯೆ ಕಮ್ಮಿಯೇನಲ್ಲ.

ಈ ದೆವ್ವಗಳಿಗೂ ಅಮಲು ಪದಾರ್ಥಗಳಿಗೂ ಹೆಚ್ಚಿನ ವ್ಯತ್ಯಾಸಗಳೇನಿಲ್ಲ. ಅವುಗಳನ್ನು ಹೆಚ್ಚು ಸೇವಿಸಿದಷ್ಟೂ ಅವುಗಳು ನೀಡುವ ಕಿಕ್ ಕ್ರಮೇಣ ಕಮ್ಮಿಯಾಗುತ್ತಾ ಹೋಗುತ್ತದೆ. ಹೀಗಾಗಿ ಒಂದು ಕಾಲದಲ್ಲಿ ವಿಪರೀತ ಭಯಪಡಿಸಿದ್ದ ಭೂತಗಳೆಲ್ಲ ಕ್ರಮೇಣ ಚಿಲ್ಲರೆ ಅನ್ನಿಸತೊಡಗುತ್ತವೆ. ಇನ್ನು ಅಪರೂಪಕ್ಕೊಮ್ಮೆ ಕೊಂಚ ಬಿಡುವಾದರೆ ದಿನವೊಂದಕ್ಕೆ ಮೂರರಿಂದ ಐದು ಸಿನೆಮಾಗಳನ್ನು ನೋಡುವುದೂ ಇರುತ್ತಿತ್ತು. ಒಟ್ಟಾರೆ ಭೂತಗಳ ಹೆಸರು ಕೇಳಿದರೇನೇ ಸುಸ್ತು ಹೊಡೆಯುವಷ್ಟು ಭೂತಗಳನ್ನು ಆವಾಹಿಸಿಕೊಂಡಿದ್ದ ದಿನಗಳವು.

ಈಗ ಭೂತಕಾಲವನ್ನು ಬಿಟ್ಟು ವರ್ತಮಾನಕ್ಕೆ ಬರೋಣ. ಬಹುಷಃ ನಮ್ಮಂತಹ ಸಿನೆಮಾ ಪ್ರೇಮಿಗಳನ್ನು ಸೆಳೆಯಲೆಂದೇ ಕೆಲ ಸಂಸ್ಥೆಗಳು ವಿಶೇಷ ಖಾಸಗಿ ಥಿಯೇಟರ್ ಗಳನ್ನು ತೆರೆಯುತ್ತಿರುವ ಬಗ್ಗೆ ಆನ್ಲೈನ್ ಜಾಹೀರಾತೊಂದರಿಂದ ನನಗೆ ಇತ್ತೀಚೆಗೆ ತಿಳಿದುಬಂದಿತ್ತು. ಮಾರುಕಟ್ಟೆಯ ನಿಟ್ಟಿನಲ್ಲಿ ನಿಜಕ್ಕೂ ಇದೊಂದು ಹೊಸ ಪ್ರಯೋಗ. ವಿಶೇಷವೆಂದರೆ ಈ ಖಾಸಗಿ ಥಿಯೇಟರುಗಳಲ್ಲಿ ಹೆಚ್ಚಿನವುಗಳನ್ನು ಪುಟ್ಟದೊಂದು ಪ್ರೇಮಲೋಕದಂತೆ ಸೃಷ್ಟಿಸಲಾಗಿದೆ. ಚಿಕ್ಕದಾದರೂ ಚಂದದ ಒಳಾಂಗಣ, ಸಿನೆಮಾ ಶೈಲಿಯ ಬೆಳಕಿನ ವಿನ್ಯಾಸ, ಸುಂದರ ಕೇಕು, ಪವಡಿಸಿ ಸಿನೆಮಾ ವೀಕ್ಷಿಸಲು ಆರಾಮದಾಯಕ ಸೋಫಾದಂತಹ ಆಸನ ವ್ಯವಸ್ಥೆ, ಹಳೆಯ ಸಿನೆಮಾಗಳಲ್ಲಿ ಕಾಣಸಿಗುತ್ತಿದ್ದ ಸ್ವರ್ಗದ ಮಾದರಿಯಲ್ಲಿ ನೆಲವನ್ನು ಮೋಡದಂತೆ ಸಂಪೂರ್ಣವಾಗಿ ಹಬ್ಬಿಕೊಂಡಿರುವ ಬಿಳಿಯ ಹೊಗೆ… ಅಂತೂ ಸಿನೆಮಾ ನೋಡಲು ಬಂದವರು ಅಂತಃಪುರದಂತಿದ್ದ ಆ ಖಾಸಗಿ ಕೋಣೆಯ ಸೌಂದರ್ಯವನ್ನು ನೋಡಿಯೇ ಮೈಮರೆಯಬೇಕು. ಇವುಗಳಲ್ಲದೆ ಹಲವು ಗೆಳೆಯರು ಜೊತೆಯಾಗಿ ಸಿನೆಮಾವನ್ನು ವೀಕ್ಷಿಸಿ ಎಂಜಾಯ್ ಮಾಡಬಲ್ಲ ಸ್ವಲ್ಪ ದೊಡ್ಡ ಮಟ್ಟಿನ ಇತರ ಆಯ್ಕೆಗಳೂ ಇಲ್ಲಿವೆಯಂತೆ.

ಇವುಗಳನ್ನೆಲ್ಲ ನೋಡುವಾಗ ಥಟ್ಟನೆ ನಮ್ಮ ಹಳೆಯ ದಿನಗಳು ನೆನಪಿಗೆ ಬಂದು ನನ್ನ “ಭೂತ”ಕಾಲದ ಮಿತ್ರನಿಗೊಂದು ಕರೆ ಮಾಡಿದೆ. ಅವನೋ ದೊಡ್ಡದಾಗಿ ನಕ್ಕುಬಿಟ್ಟ. ಐಡಿಯಾ ಒಂದಕ್ಕೆ ಮಾರುಕಟ್ಟೆಯ ಮೌಲ್ಯವನ್ನು ತರಲು ಈ ಬಗೆಯ ಚಮಕ್-ಧಮಕ್ ತಂತ್ರಗಳನ್ನು ಬಳಸುವುದು ಸಹಜವೇ ಆಗಿರಬಹುದು. ಅದು ಸರಿಯೋ ತಪ್ಪೋ ಎಂಬುದು ಇಲ್ಲಿ ಪ್ರಶ್ನೆಯಲ್ಲ. ಸಿನೆಮಾ ನೋಡುವ ಅನುಭವದಂತೆ ಅದು ತೀರಾ ವೈಯಕ್ತಿಕವೂ ಹೌದು. ಆದರೆ ಸಿನೆಮಾ ಒಂದನ್ನು ಸವಿಯಲು ಇಂಥವೆಲ್ಲ ಬೇಕೇಬೇಕು ಎಂಬ ಹೊಸದೊಂದು ಟ್ರೆಂಡ್ ಅನ್ನು ನಿಧಾನವಾಗಿ ಸೃಷ್ಟಿಸಲಾಗುತ್ತಿದೆಯಾ? ಪರವಾಗಿಲ್ಲ ಎಂಬಷ್ಟಿನ ಸಿನೆಮಾ ಟಿಕೆಟ್ ದರ, ಆದರೆ ಅದಕ್ಕಿಂತ ಮೂರು ಪಟ್ಟು ದುಬಾರಿಯ ಪಾಪ್-ಕಾರ್ನ್ ಬಕೆಟ್ಟುಗಳನ್ನು ಪ್ಯಾಕೇಜ್-ಕಾಂಬೋಗಳ ರೂಪದಲ್ಲಿ ಮಾರುವುದು ಹಳತಾಯಿತು ಎಂಬುದಕ್ಕೆ ಇಂತಹ ಪ್ರಯೋಗಗಳೇ?  ಹೀಗೆ ಪ್ರಶ್ನೆಗಳು ಹುಟ್ಟುತ್ತಾ ಹೋದವು.

ಪವಡಿಸಿ ಸಿನೆಮಾ ವೀಕ್ಷಣೆ ( ಚಿತ್ರ- ಗೂಗಲ್)

ಹಾಗೆ ನೋಡಿದರೆ ಜಗತ್ತಿನ ಎಲ್ಲಾ ಬದಲಾವಣೆಗಳಂತೆ ಇದೂ ಕೂಡ ಒಂದು ಸಾಮಾನ್ಯ ಬದಲಾವಣೆಯಷ್ಟೇ. ಟಿವಿ, ಥಿಯೇಟರುಗಳಲ್ಲಿ ಮೆರೆಯುತ್ತಿದ್ದ ಮುಖ್ಯವಾಹಿನಿಯ ಚಿತ್ರಗಳನ್ನೂ ಮೀರಿ, ಜಗತ್ತಿನ ಅತ್ಯುತ್ತಮ ಸಿನೆಮಾಗಳು ಇಂದು ಒಟಿಟಿ ವೇದಿಕೆಗಳಲ್ಲಿ ಸಿಗುವಂತೆ! ಅಂತೂ ಈ ರೂಪಾಂತರವು ನಮಗೆ ಅದೇಕೆ ಮುಖ್ಯವಾಯಿತೆಂದರೆ ಸಿನೆಮಾ ನೋಡುವ ಅನುಭವವನ್ನು ನಾವೆಂದೂ ಒಂದು ಲಕ್ಷುರಿ ಎಂಬಂತೆ ಕಂಡವರಲ್ಲ. ಬದುಕಿನಲ್ಲಿ ಬಹಳ ತಡವಾಗಿ ಚಿತ್ರಗಳನ್ನು ನೋಡಲು ಆರಂಭಿಸಿದ ನಾನು, ಅದರ ಪ್ರಾಯಶ್ಚಿತ್ತವೇನೋ ಎಂಬಂತೆ ಹಟಕ್ಕೆ ಬಿದ್ದವನಂತೆ ಸಿನೆಮಾಗಳ ಬೆನ್ನುಬಿದ್ದಿದ್ದು ಇದೆ. ಗೆಳೆಯರೆಲ್ಲ ಒಂದಾಗಿ ಅತ್ಯುತ್ತಮ ಎಂದೆನಿಸಿದ ಸಿನೆಮಾಗಳ ಬಗ್ಗೆ ತಾಸುಗಟ್ಟಲೆ ಚರ್ಚಿಸಿದ್ದೂ ಇದೆ. ಆಗೆಲ್ಲ ನಮಗೆ ಸಿನೆಮಾ ನೋಡುವುದು ಮುಖ್ಯವಾಗಿತ್ತೇ ಹೊರತು ಐಷಾರಾಮಿ ಮಲ್ಟಿಪ್ಲೆಕ್ಸುಗಳು ಅಥವಾ ದುಬಾರಿ ಪಾಪ್-ಕಾರ್ನ್‍ಗಳ ಗೊಡವೆಯಿರುತ್ತಿರಲಿಲ್ಲ. ಹಾಗೆ ನೋಡಿದರೆ ಕಾಲೇಜು ದಿನಗಳಲ್ಲಿ ನಾವು ಸಿನೆಮಾಗಳನ್ನು ಥಿಯೇಟರುಗಳಿಗೆ ಹೋಗಿ ನೋಡಿದ್ದಕ್ಕಿಂತ ಗೆಳೆಯರ ಬಳಗದಲ್ಲಿ ಪರಸ್ಪರ ಎರವಲು ಪಡೆದುಕೊಂಡು ನೋಡಿದ್ದೇ ಹೆಚ್ಚು. ಜನಪ್ರಿಯ ಪತ್ತೇದಾರಿ ಕಾದಂಬರಿಯೊಂದು ಹಲವು ಕೈಗಳಿಗೆ ಸಾಗುತ್ತಾ ಹೋದಂತೆ ನಮ್ಮಲ್ಲಿ ಸಿನೆಮಾಗಳು ವಿನಿಮಯವಾಗುತ್ತಿದ್ದವು.

ಖ್ಯಾತ ಕವಿ, ಲೇಖಕ ಜೆರ್ರಿ ಪಿಂಟೋ ಸಂಪಾದಿಸಿರುವ ಕೃತಿಯೊಂದರಲ್ಲಿ ಒಂದೊಳ್ಳೆಯ ಮಾತು ಬರುತ್ತದೆ. ಅದೇಕೆ ಬಹಳ ಬೃಹತ್ತಾಗಿರುವ ಅಥವಾ ಕಣ್ಣುಕುಕ್ಕುವ ಸಂಗತಿಗಳೇ ನಮ್ಮನ್ನು ಆಕರ್ಷಿಸುತ್ತವೆ? ಅಥವಾ ಅವುಗಳಿದ್ದರೆ ಮಾತ್ರ ಬದುಕು ಸಾರ್ಥಕ ಎಂಬಂತೆ ನಮ್ಮ ನಡುವಿನ ಕೆಲ ಕಾಣದ ಶಕ್ತಿಗಳು ಬಿಂಬಿಸುತ್ತವೆ? ನಮಗೇ ಅರಿವಿಲ್ಲದಂತೆ ನಮ್ಮ ಚಿಂತನಾಕ್ರಮಗಳನ್ನು ಅವುಗಳು ಹೇಗೆ ಬದಲಿಸುತ್ತವೆ?… ಹೀಗೆ ಸಂತಸವನ್ನು ಅಪ್ಪಿಕೊಳ್ಳಲು ಮಾರುಕಟ್ಟೆಯ ಕಣ್ಣುಕುಕ್ಕುವ ಉತ್ಪನ್ನಗಳತ್ತ ಅವಲಂಬಿಸುವ ನಮ್ಮ ನಿತ್ಯದ ಹಂಬಲಗಳನ್ನು ವಿಶ್ಲೇಷಿಸುತ್ತಾ ಹೋಗುತ್ತದೆ ಒಂದು ಪುಟ್ಟ ನೋಟ್. 

ಹಾಗಿದ್ದರೆ ಸದ್ದಿಲ್ಲದೆ ಬಂದುಹೋಗುವ ಬದುಕಿನ ಪುಟ್ಟ, ಸುಂದರ ಅನುಭವಗಳಿಗೆ ಅರ್ಥವೇ ಇಲ್ಲವಾ? ಸಂತಸದ ವಿಜೃಂಭಣೆಯು ಪಬ್ಬುಗಳ ದುಬಾರಿ ಮದ್ಯದಲ್ಲೇ ಆಗಬೇಕಾ? ಮದುವೆ ಸಂಭ್ರಮ ಎಂದ ಮೇಲೆ ಫೋಟೋಶೂಟ್ ಇರಲೇಬೇಕು ಎಂದು ನಿಯಮ ತಂದ ದೊಣ್ಣೆನಾಯಕ ಯಾರು? ಮಾಸ್ ಚಿತ್ರದ ನಾಯಕನ ಎಂಟ್ರಿ ಗ್ರ್ಯಾಂಡ್ ಆಗಿಯೇ ಇರಬೇಕು ಎಂದು ಷರಾ ಬರೆದವರಾರು? ಡೆಸ್ಟಿನೇಷನ್ ವೆಡ್ಡಿಂಗ್ ಗಳಿಗೆ ಸಿಗುವ ಪ್ರಾಮುಖ್ಯತೆ ಒಂದು ಚಂದದ ಸೋಲೋ ಟ್ರಿಪ್ಪಿಗೆ ಯಾಕೆ ಸಿಗುವುದಿಲ್ಲ? ಕಾರಿನಲ್ಲಿ ಹೋಗುವವನು ಬಸ್ಸಿನಲ್ಲಿ ಪ್ರಯಾಣಿಸುವವನನ್ನು ಏಕೆ ಕೀಳಾಗಿ ಕಾಣಬೇಕು? ಅದ್ಭುತಗಳು ಅಡಗಿರುವುದು ಅದ್ದೂರಿ ಸಂಗತಿಗಳಲ್ಲಿ ಮಾತ್ರವೇ?

ಸಿಟಿಯ ಬದುಕಿನಿಂದ ರೋಸಿ ಹೋಗಿ ಹಳ್ಳಿಯೊಂದಕ್ಕೆ ಪ್ರವಾಸ ಎಂದು ಹೊರಡುತ್ತೇವೆ. ಅಲ್ಲಿ ಹಳ್ಳಿಯ ಓಣಿಗಳಲ್ಲಿ ನಡೆದಾಡುತ್ತೇವೆ. ಸುಸ್ತಾದಾಗ ಎಳನೀರು ಕುಡಿಯುತ್ತೇವೆ. ಊರಿನಲ್ಲಿರುವ ಚಿಕ್ಕಪುಟ್ಟ ಗುಡ್ಡ, ದಿಬ್ಬಗಳನ್ನು ಹತ್ತಿಳಿಯುತ್ತೇವೆ. ಪ್ರವಾಸ ಚೆನ್ನಾಗಿಯೇ ಸಾಗುತ್ತಿರುತ್ತದೆ. ಆದರೆ ಮನದಲ್ಲೆಲ್ಲೋ ವಿಚಿತ್ರ ಖಾಲಿತನ. ಏಕೆಂದರೆ ಪ್ರವಾಸದಲ್ಲಿ ಸೆರೆಹಿಡಿದ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಇನ್ನೂ ಶೇರ್ ಮಾಡಿಲ್ಲ. ತನ್ನ ಬದುಕು ಎಷ್ಟು ಸೂಪರ್ ಆಗಿದೆ ಎಂಬುದನ್ನು ಜಗತ್ತಿಗಿನ್ನೂ ತೋರಿಸಿಲ್ಲ. ಇನ್ನು ಚಿತ್ರವನ್ನು ಶೇರ್ ಮಾಡಿದ ನಂತರವಂತೂ ಹರಿದು ಬರುವ ಪ್ರತಿಕ್ರಿಯೆಗಳನ್ನು ಎದುರು ನೋಡುವುದೇ ಒಂದು ಹೊಸ ಕೆಲಸ.

ಅಷ್ಟರಲ್ಲಿ ಒಬ್ಬ ಲೈಕ್ ಒತ್ತುತ್ತಾನೆ. ಮತ್ತೊಬ್ಬ ನಿಮ್ಮ ಚಿತ್ರವನ್ನು ರೀ-ಟ್ವೀಟ್ ಮಾಡುತ್ತಾನೆ. ನಾಲ್ಕಾರು ಮಂದಿ ಬಂದು ಎಂದಿನಂತೆ ಸವಕಲು ಕಮೆಂಟ್ ಹಾಕಿ ತಮ್ಮ ಪಾಡಿಗೆ ಮುನ್ನಡೆಯುತ್ತಾರೆ. ಈ ನಡುವೆ ಪುಣ್ಯಾತ್ಮನೊಬ್ಬ ಮಿಲಿಯನ್ ಡಾಲರ್ ಪ್ರಶ್ನೆಯೊಂದನ್ನು ನಗುಮುಖದ ಇಮೋಜಿಯ ಸಹಿತವಾಗಿ ನಿಮ್ಮ ಇನ್-ಬಾಕ್ಸಿನಲ್ಲಿ ಹಾಕುತ್ತಾನೆ”: “ಒಂದು ಯೂರೋಪ್ ಟ್ರಿಪ್ ಪ್ಲಾನ್ ಮಾಡಿ ಸಾರ್. ಇದಕ್ಕಿಂತಲೂ ಚೆನ್ನಾಗಿರುತ್ತೆ” ಅಂತ. ಅಷ್ಟೇ! ಅಲ್ಲಿಗೆ ನಿಮ್ಮ ಉತ್ಸಾಹವೆಲ್ಲಾ ಜರ್ರನೆ ಇಳಿದಿರುತ್ತದೆ. ಪ್ರವಾಸ ಅಂದರೆ ಅಮೆರಿಕಾಗೋ, ದುಬೈಗೋ ಎದ್ದು ಹೋಗಬೇಕು; ಇಲ್ಲೇನಿದೆ ಮಣ್ಣಾಂಗಟ್ಟಿ ಅಂತನ್ನಿಸುತ್ತದೆ.

ಆದರೆ ಬದುಕಿನ ಅಸಲಿ ಖುಷಿ, ಯಶಸ್ಸು, ಸಾರ್ಥಕತೆಗಳು ಇರುವುದು ಈ ಮೆಗಾ ಸಂಗತಿಗಳಲ್ಲಲ್ಲ. ಬದಲಾಗಿ ಮಿಣುಕುಹುಳಗಳಂತೆ ಮೂಡಿ ಮರೆಯಾಗುವ ಚಿಕ್ಕಪುಟ್ಟ ಸಂಗತಿಗಳಲ್ಲಿ ಎಂದು ನಮಗೆ ಅರಿವಾಗುವ ದೃಷ್ಟಾಂತಗಳೂ ಅಪರೂಪಕ್ಕೊಮ್ಮೆ ಆಗುವುದುಂಟು. ಮೆಟ್ರೋಸಿಟಿಗಳಲ್ಲಿರುವ ಒಬ್ಬಂಟಿತನದ ಮಧ್ಯೆ ಯಾರೋ ಹಿರಿಯರೊಬ್ಬರು ಬಂದು ಮನೆಯವರಂತೆ ಪ್ರೀತಿಯಿಂದ ಮಾತನಾಡಿಸಿದಾಗ ಮನಸ್ಸು ಪ್ರಫುಲ್ಲವಾಗುತ್ತದೆ. ಅನಿರೀಕ್ಷಿತವಾಗಿ ಒದಗಿಬರುವ ಒಂದು ಸಣ್ಣ ನೆರವೂ ಕೂಡ ಪುನರ್ಜನ್ಮ ಎಂಬಷ್ಟು ಗಾಢವಾಗಿ ಮನಸ್ಸನ್ನು ತಟ್ಟುತ್ತದೆ. ಅಚ್ಚರಿಯೆಂದರೆ ಇವುಗಳ್ಯಾವುವೂ ಬ್ರೇಕಿಂಗ್ ನ್ಯೂಸ್ ಆಗುವುದಿಲ್ಲ. ಟಿ.ಆರ್.ಪಿ ಹುಟ್ಟಿಸುವುದಿಲ್ಲ. ವ್ಯವಹಾರವಲ್ಲದಿರುವ ಕಾರಣ ಇವುಗಳಿಗೆ ಮಾರುಕಟ್ಟೆಯೂ ಇಲ್ಲ. ಬೆಲೆ ಕಟ್ಟಲೂ ಸಾಧ್ಯವಿಲ್ಲ.

ಬದಲಾವಣೆ ಜಗದ ನಿಯಮ. ಲಾಭನಷ್ಟಗಳ ಮಾರುಕಟ್ಟೆಯಲ್ಲಿ ಐಡಿಯಾಗಳ ಹುಟ್ಟು-ಸಾವುಗಳು ಬದಲಾವಣೆಯ ಹಿಂದಿರುವ ಶಕ್ತಿಗಳು. ಆದರೆ ಸಂತೃಪ್ತಿ ಮತ್ತು ಬದುಕು ಅವೆಲ್ಲದಕ್ಕಿಂತ ದೊಡ್ಡದಲ್ಲವೇ!

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

ಇದನ್ನೂ ಓದಿ-http://“ಅರ್ಬನ್ ಕತೆಗಳ ಬೆನ್ನು ಹತ್ತಿ” https://kannadaplanet.com/tracing-the-urban-tales/

More articles

Latest article