ಸಂವಿಧಾನದ ಮೇಲೆ ಮನುಸ್ಮೃತಿ ಸೃಷ್ಟಿಸುವ ವಿಸ್ಮೃತಿ

Most read

ಮಂಡ್ಯ ಮೈಸೂರು ಭಾಗದಲ್ಲಿ ವೈಚಾರಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಯುವ ರಂಗನಿರ್ದೇಶಕ ಗಿರೀಶ್ ಮಾಚಳ್ಳಿಯವರು ತಮ್ಮ ಚಾರ್ವಾಕ ಸಂಸ್ಥೆಗೆ “ಮನುಸ್ಮೃತಿ V/s  ಸಂವಿಧಾನ’ ಎನ್ನುವ ನಾಟಕವನ್ನು ನಿರ್ದೆಶಿಸಿ ನಟಿಸಿದ್ದಾರೆ. ಅಂಬೇಡ್ಕರ್‌ ಜಯಂತಿಯ ಈ ದಿನದಂದು,  ಸಂವಿಧಾನದ  ಮೇಲೆ ಮನುಸ್ಮೃತಿಯ ದಾಳಿಯನ್ನು ಅನಾವರಣಗೊಳಿಸುವ ನಾಟಕ ಪ್ರದರ್ಶನದ  ಕುರಿತು ಬರೆದಿದ್ದಾರೆ ರಂಗಕರ್ಮಿ ಶಶಿಕಾಂತ ಯಡಹಳ್ಳಿ.

“ಮನುಸ್ಮೃತಿ V/s  ಸಂವಿಧಾನ’ ನಾಟಕದ ಆಕೃತಿಯ ಬಗ್ಗೆ ವಿಶ್ಲೇಷಿಸುವುದಕ್ಕಿಂತಲೂ ಅದರ ಆಶಯದ ಬಗ್ಗೆ ಚರ್ಚಿಸುವುದು ಇವತ್ತಿನ ತುರ್ತು ಅಗತ್ಯವಾಗಿದೆ. ಸನಾತನ ಪುರೋಹಿತಶಾಹಿ ಸಂಸ್ಕೃತಿಯ ಪ್ರತೀಕವಾದ ಮನುಸ್ಮೃತಿ ಎಂಬುದು ಚಾತುರ್ವರ್ಣ ವ್ಯವಸ್ಥೆಯ ಬ್ರಾಹ್ಮಣ್ಯದ ಶ್ರೇಷ್ಠತೆಯ ಮೌಲ್ಯಗಳನ್ನು ಪ್ರತಿಪಾದಿಸುವ ಗ್ರಂಥವಾಗಿದೆ. ‘ಇಡೀ ಜಗತ್ತು ದೇವರಿಗೆ ಆಧೀನ, ದೇವರು ಮಂತ್ರಗಳಿಗೆ ಆಧೀನ, ಆ ಮಂತ್ರಗಳು ಬ್ರಾಹ್ಮಣರಿಗೆ ಆಧೀನ. ಹೀಗಾಗಿ ಬ್ರಾಹ್ಮಣನೇ ಶ್ರೇಷ್ಠ ‘ ಎನ್ನುವ ಮನುಸ್ಮೃತಿಯ ಶ್ಲೋಕವನ್ನೇ ಆಧಾರವಾಗಿಟ್ಟುಕೊಂಡು ಬ್ರಾಹ್ಮಣ್ಯದ ವರ್ಣಬೇಧ ನೀತಿಯ ದುಷ್ಪರಿಣಾಮಗಳನ್ನು ತೋರಿಸುವಂತೆ ಇಡೀ ನಾಟಕ ಮೂಡಿಬಂದಿದೆ.

ಅಸಮಾನತೆಯನ್ನು ಸಾರುವ ಜೀವವಿರೋಧಿ ಮನುಸ್ಮೃತಿಗೆ ಪ್ರತಿರೋಧವಾಗಿ ಸೃಷ್ಟಿಯಾಗಿದ್ದೇ ಬಾಬಾಸಾಹೇಬರು ರಚಿಸಿದ ಭಾರತದ ಸಂವಿಧಾನ. ಸಂವಿಧಾನವು ಈ ದೇಶದ ಪ್ರತಿಯೊಬ್ಬರೂ ಸಮಾನರು ಎಂದು ಹೇಳುತ್ತದೆ ಹಾಗೂ ಪ್ರತಿ ಪ್ರಜೆಗೂ ಹಲವಾರು ಹಕ್ಕು ಬಾಧ್ಯತೆಗಳನ್ನೂ ನಿಗದಿ ಪಡಿಸುತ್ತದೆ. ಸಂವಿಧಾನದ ಪೀಠಿಕೆಯನ್ನು ಕಲಾವಿದರೆಲ್ಲಾ ಕೋರಸ್ ನಲ್ಲಿ ಓದುವುದರ ಮೂಲಕವೇ ಇಡೀ ನಾಟಕ ಶುರುವಾಗಿ ಆರಂಭದಲ್ಲಿಯೇ ಅಂಬೇಡ್ಕರ್ ಪಾತ್ರದ ಮೂಲಕ ತನ್ನ ಆಶಯವನ್ನು ವ್ಯಕ್ತಪಡಿಸುತ್ತದೆ. ಸಂವಿಧಾನ ಭಾರತದ ಜನರಿಗೆ ನೀಡಿದ ಮೂಲಭೂತ ಹಕ್ಕುಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಯಾವುದೇ ಧರ್ಮ ಜಾತಿ ಲಿಂಗ ಹಾಗೂ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ತೋರದೇ ಎಲ್ಲರೂ ಕಾನೂನಿನ ದೃಷ್ಟಿಯಲ್ಲಿ ಸರಿಸಮಾನರು ಎನ್ನುವ ಸಮಾನತೆಯ ಹಕ್ಕನ್ನು ಸಂವಿಧಾನವು ನೀಡಿದೆ. ಈ ದೇಶವಾಸಿಗಳಿಗೆಲ್ಲರಿಗೂ ಶಾಂತಿಯುತವಾಗಿ ಶಸ್ತ್ರರಹಿತವಾಗಿ ಸಭೆ ಸೇರುವ, ಭಾರತದಾದ್ಯಂತ ಸಂಚರಿಸುವ, ಸಂಘ ಸಂಸ್ಥೆಗಳನ್ನು ಸ್ಥಾಪಿಸುವ, ಎಲ್ಲಿ ಬೇಕಾದರೂ ವಾಸಿಸುವ, ಉದ್ಯೋಗ ವ್ಯಾಪಾರವನ್ನು ನಿರ್ವಹಿಸುವಂತಹ ವಾಕ್ ಹಾಗೂ ಅಭಿವ್ಯಕ್ತಿ  ಸ್ವಾತಂತ್ರ್ಯದ ಹಕ್ಕು ದೊರಕಿದೆ. ಮಾನವ ಕಳ್ಳಸಾಗಾಣಿಕೆಯನ್ನು ನಿರಾಕರಿಸುವ,  ಸರಕಾರದ ಸಾರ್ವಜನಿಕ ಸೇವೆಯಲ್ಲಿ ಜಾತಿ ಧರ್ಮ ಲಿಂಗ ಅಸಮಾನತೆಯನ್ನು ಪರಿಗಣಿಸದೇ ಇರುವ, ವಂಶ ಹಾಗೂ ವರ್ಗಗಳ ಆಧಾರದ ಮೇಲೆ ತಾರತಮ್ಯವನ್ನು ತೋರುವುದನ್ನು ನಿಷೇಧಿಸುವ, ಬಾಲಕಾರ್ಮಿಕ ಪದ್ಧತಿಯನ್ನು ವಿರೋಧಿಸುವಂತಹ ಶೋಷಣೆ ವಿರುದ್ಧದ ಹಕ್ಕನ್ನು ಸಂವಿಧಾನ ನೀಡಿದೆ. ಭಾರತದ ಯಾವುದೇ ಪ್ರಜೆಯು ತನ್ನ ಆತ್ಮಸಾಕ್ಷಿಯಂತೆ ಯಾವುದೇ ಧರ್ಮವನ್ನು ಅನುಸರಿಸಿ ಆಚರಿಸಿ ಪ್ರಚಾರ ಮಾಡುವ ಸ್ವಾತಂತ್ರ್ಯದ ಧಾರ್ಮಿಕ ಹಕ್ಕನ್ನು ಸಂವಿಧಾನ ಕೊಟ್ಟಿದೆ. ಯಾವುದೇ ಜನ ಅಥವಾ ಜನಾಂಗವು ತಮ್ಮದೇ ಆದ ಭಾಷೆ ಲಿಪಿ ಸಂಸ್ಕೃತಿಯನ್ನು ಅನುಸರಿಸುವುದು ಹಾಗೂ ಸಂರಕ್ಷಿಸುವುದನ್ನು ಮಾಡುವಂತಹ, ಸರಕಾರ ನಿರ್ವಹಿಸುವ ಅಥವಾ ಸರಕಾರದ ಸಹಾಯದ ಮೂಲಕ ನಿರ್ವಹಿಸುವ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಲಿಂಗ, ಭಾಷೆ ಆಧಾರದ ಮೇಲೆ ಪ್ರವೇಶ ಅವಕಾಶವನ್ನು ನಿರಾಕರಿಸದೇ ಒದಗಿಸುವ  ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಹಕ್ಕನ್ನು ಸಂವಿಧಾನವು ದೊರಕಿಸಿಕೊಟ್ಟಿದೆ. ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯಗಳಲ್ಲಿ ನ್ಯಾಯ ಪಡೆಯುವಂತಹ ಹಾಗೂ ನ್ಯಾಯಾಲಯಗಳ ಮೂಲಕ ಜನರು ತಮ್ಮ ಮೂಲ ಭೂತ ಹಕ್ಕುಗಳನ್ನು ರಕ್ಷಿಸಿ ಕೊಳ್ಳುವಂತಹ ಸಂವಿಧಾನಾತ್ಮಕ ಪರಿಹಾರದ ಹಕ್ಕನ್ನೂ ಸಂವಿಧಾನ ನೀಡಿದೆ. ಹೀಗೆ “ಸಮಾನತೆ,  ಸ್ವಾತಂತ್ರ್ಯ, ಶೋಷಣೆಯ ವಿರೋಧ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ  ಮತ್ತು  ಸಂವಿಧಾನಾತ್ಮಕ ಪರಿಹಾರ” ಎನ್ನುವ ಆರು ಮೂಲಭೂತ ಹಕ್ಕುಗಳನ್ನು ಸಂವಿಧಾನವು ಭಾರತದ ಪ್ರಜೆಗಳಿಗೆ ನೀಡಿದ್ದನ್ನು ಈ ನಾಟಕದ ಪಾತ್ರಧಾರಿಗಳು ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ.

ಮಹಿಳೆಯರ ರಕ್ಷಣೆಗಾಗಿ ಕೆಲವಾರು ಅನುಚ್ಛೇದಗಳನ್ನೂ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಪ್ರತಿಯೊಬ್ಬ ಮಹಿಳೆ ಮತ್ತು ಪುರುಷರಿಗೆ ಕಾನೂನಿನಲ್ಲಿ ಸಮಾನ ರಕ್ಷಣೆ ಕೊಡಲಾಗಿದೆ. ಲಿಂಗಬೇಧದ ಆಧಾರದಲ್ಲಿ ತಾರತಮ್ಯ ತೋರುವುದನ್ನು ನಿಷೇಧಿಸಲಾಗಿದೆ. ಸರಕಾರಿ ಉದ್ಯೋಗ ಹಾಗೂ ವಿದ್ಯೆಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರು ಘನತೆಯಿಂದ ಬದುಕುವ ಹಕ್ಕನ್ನು ಒದಗಿಸಿ ಕೊಡಲಾಗಿದೆ. ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ರೂಪಿಸುವ ಅಧಿಕಾರವನ್ನು ಸರಕಾರಗಳಿಗೆ ನೀಡಲಾಗಿದೆ. ಮಹಿಳಾ ವಿರೋಧಿ ಆಚರಣೆಗಳನ್ನು ನಿರ್ಬಂಧಿಸಲಾಗಿದೆ. ಸರಕಾರಿ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಮೀಸಲಾತಿಯನ್ನು ಮಹಿಳೆಯರಿಗೆ ಒದಗಿಸಲಾಗಿದೆ. ಧರ್ಮ ಜಾತಿ ಜನಾಂಗದ ಆಧಾರದ ಮೇಲೆ ಯಾವುದೇ ವ್ಯಕ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಂದಿಸುವಂತಿಲ್ಲ.  ದುರ್ಬಲ ವರ್ಗಗಳ ಅಭಿವೃದ್ಧಿಗಾಗಿ ಮೀಸಲಾತಿಯನ್ನು ಕಲ್ಪಿಸಬೇಕು. ಅಸ್ಪೃಶ್ಯತೆಯು ಶಿಕ್ಷಾರ್ಹ ಅಪರಾಧ, ಪರಿಶಿಷ್ಟ ಜಾತಿ ಪಂಗಡಗಳಿಗೆ ಶಿಕ್ಷಣ ಉದ್ಯೋಗ ಒದಗಿಸಲು ವಿಶೇಷ ಕ್ರಮಗಳನ್ನು ಸರಕಾರಗಳು ಕೈಗೊಳ್ಳಬೇಕು ಎನ್ನುವ ಕಾನೂನುಗಳನ್ನು ವಿಧಿಸುವ ಮೂಲಕ ಶೋಷಿತ ಅಸ್ಪೃಶ್ಯ ವರ್ಗದ ಹಿತಾಸಕ್ತಿಗಾಗಿಯೂ ಸಂವಿಧಾನವು ಕಟಿಬದ್ಧವಾಗಿದೆ.

ಆದರೆ ಸಂವಿಧಾನವು ಜನರಿಗೆ ಕೊಟ್ಟ ಈ ಎಲ್ಲಾ ಹಕ್ಕು ಬಾಧ್ಯತೆ ಸಮಾನತೆಗಳು ಮನುವಾದಿ ಸಿದ್ಧಾಂತಕ್ಕೆ ವಿರುದ್ಧವಾಗಿವೆ. ಶೂದ್ರ ಹಾಗೂ ಅಸ್ಪೃಶ್ಯ ವರ್ಗದವರ ಶೋಷಣೆ, ಮಹಿಳೆಯರ ಸ್ವಾತಂತ್ರ್ಯ ಹರಣ, ಅಭಿವ್ಯಕ್ತಿ ಸ್ವಾತಂತ್ರ್ಯದ ನಿರ್ಬಂಧ, ವಿದ್ಯೆಯ ಹಕ್ಕುಗಳ ನಿರಾಕರಣೆಯಂತಹ ಅಸಮಾನತೆಯನ್ನೇ ಮೈಗೂಡಿಸಿಕೊಂಡ ಮನುಸ್ಮೃತಿಯು ಸಂವಿಧಾನದ ಆಶಯಗಳಿಗೆ ತದ್ವಿರುದ್ದವಾಗಿದೆ. ಸಂವಿಧಾನವನ್ನು ಒಪ್ಪದೇ ಇರುವ ಸನಾತನಿಗಳು ಸಂಘಟನಾತ್ಮಕವಾಗಿ ಮನುವಾದಿ ಹಿಂದುತ್ವವನ್ನು ಜಾರಿಗೆ ತರಲು ಶತಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಪ್ರಜಾಪ್ರಭುತ್ವದ ಮುಖವಾಡವನ್ನು ಹಾಕಿಕೊಂಡೇ ಫ್ಯಾಸಿಸ್ಟ್ ಪ್ರಭುತ್ವವನ್ನು ಜಾರಿಗೆ ತರುವ ಹುನ್ನಾರಗಳು ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ತೀವ್ರವಾಗಿದೆ. ಟಿವಿ ಮೊಬೈಲ್ ನಂತಹ ಸಂವಹನ ಮಾಧ್ಯಮಗಳ ಮೂಲಕ ಜನರ ಗಮನವನ್ನು ಸಂವಿಧಾನದ ಆಶಯಗಳಿಂದ ದೂರಮಾಡುವ ವ್ಯಾಪಕ ಪ್ರಯತ್ನಗಳೂ ಮುಂದುವರೆದಿವೆ. ಭಾವನಾತ್ಮಕ ಪ್ರಚೋದನೆಯ ಮೂಲಕ ಜನರನ್ನು ಹಿಂದುತ್ವದತ್ತ ಆಕರ್ಷಿಸುವ ಶಡ್ಯಂತ್ರಗಳು ಹೆಚ್ಚುತ್ತಲೇ ಇವೆ. ಸಂವಿಧಾನದ ಮೇಲೆ ಮನುಸ್ಮೃತಿ ತನ್ನ ಕರಾಳ ಕದಂಬ ಬಾಹುವನ್ನು ಚಾಚಿ ಆಕ್ರಮಿಸಿಕೊಳ್ಳುತ್ತಿರುವ ಆತಂಕಗಳನ್ನು ಈ ನಾಟಕ ತೋರಿಸುತ್ತದೆ.

ಹೇಗೆ ಮನುವಾದಿಗಳು ವೇಷ ಬದಲಿಸಿ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎನ್ನುವುದನ್ನು ಮನದಟ್ಟು ಮಾಡುವ ಕೆಲಸವನ್ನು ಈ ನಾಟಕ ದಿಟ್ಟವಾಗಿ ಮಾಡಿದೆ. ನಾಟಕ ಸ್ವಲ್ಪ ಹೆಚ್ಚೇ ವಾಚ್ಯವಾದರೂ ಮನುವ್ಯಾಧಿಯ ವಿವಿಧ ವಿಕ್ಷಿಪ್ತತೆ ಹಾಗೂ ಮುಂದೊದಗ ಬಹುದಾದ ಸರ್ವಾಧಿಕಾರಿ ದುರಂತವನ್ನು ಸೂಚ್ಯವಾಗಿ ಹೇಳುತ್ತದೆ.

ಎಲ್ಲಾ ಜಾತಿ ಧರ್ಮ ಜನಾಂಗದವರು ನೆಲೆಸಿರುವ ಭಾರತವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಹೊಂದಿರುವ ಸಂವಿಧಾನ ಒಂದು ಕಡೆಯಾದರೆ, ಜಾತಿಯಾಧಾರಿತ ಅಸಮಾನ ವ್ಯವಸ್ಥೆಯನ್ನು ಮತ್ತೆ ಜಾರಿ ಗೊಳಿಸಬೇಕು, ಹಿಂದುತ್ವರಾಷ್ಟ್ರ ಕಟ್ಟಬೇಕು ಎನ್ನುವುದು ಮನುವಾದಿಗಳ ಸತತ ಪ್ರಯತ್ನವಾಗಿದೆ. ಈ ಎರಡೂ ಸಿದ್ಧಾಂತಗಳ ನಡುವಿನ ಸಂಘರ್ಷ ಮತ್ತು ಹೋರಾಟವನ್ನು ‘ಮನುಸ್ಮೃತಿ V/s  ಸಂವಿಧಾನ’ ರಂಗಪ್ರಯೋಗವು ಪ್ರಸ್ತುತ ಪಡಿಸುತ್ತದೆ.

ಸಂವಿಧಾನವನ್ನು ಬದಲಾಯಿಸಲೆಂದೇ ಬಂದಿದ್ದೇವೆ ಎಂದು ಸಾರ್ವಜನಿಕವಾಗಿ ಹೇಳುವಂತಹ ಕೋಮುವಾದಿ ಪಕ್ಷದ ಹತ್ತು ವರ್ಷದ ನಡೆಯನ್ನು ಗಮನಿಸಿದರೆ ಮತ್ತೆ ಮನು ಮರುಜನ್ಮತಾಳಿ ಬಂದಂತಿದೆ. ಉಗ್ರ ರಾಷ್ಟ್ರೀಯವಾದ ಹಾಗೂ ಹಿಂದುತ್ವವಾದವನ್ನು ಪ್ರತಿಪಾದಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಡೆ ನುಡಿಗಳನ್ನು ಗಮನಿಸಿದರೆ ಬಹುತ್ವದ ಭಾರತ ಎಲ್ಲಿ ಹಿಂದುತ್ವದ ಕೈವಶವಾಗುತ್ತದೋ ಎನ್ನುವ ಆತಂಕ ಕಾಡುತ್ತದೆ. ಮನುವಾದಿಗಳ ಹುನ್ನಾರವನ್ನು ಅರಿತುಕೊಂಡು ಈ ಜನರು ಎಚ್ಚರ ವಹಿಸಿದರೆ ಸಂವಿಧಾನವನ್ನು ಉಳಿಸಿ ಕೊಳ್ಳಬಹುದಾಗಿದೆ. ಈಗ ಬಂದಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕೋಮುವಾದಿ ಪಡೆಗೆ ಬಹುಮತ ಇತ್ತಿದ್ದೇ ಆದರೆ ಹಿಂದುತ್ವವಾದಿ ಸರ್ವಾಧಿಕಾರಿ ಪ್ರಭುತ್ವ ಘೋಷಣೆಯಾಗುವುದು ಖಚಿತ. ಸಮಾನತೆ ಸಾರುವ ನಮ್ಮ ಸಂವಿಧಾನ  ಬದಲಾಗುವುದು ಇಲ್ಲವೇ ಅಮಾನ್ಯವಾಗುವುದು ನಿಶ್ಚಿತ. ಮತ್ತೆ ಮನುಸ್ಮೃತಿಯಾಧಾರಿತ ಸನಾತನ ಅಸಮಾನ ವ್ಯವಸ್ಥೆ  ಈ ದೇಶವನ್ನು ಆಳುವುದು ಖಂಡಿತ.

ಇಂತಹ ಅಪಾಯವನ್ನು ಗ್ರಹಿಸಿದ ಗಿರೀಶ್ ಮಾಚಳ್ಳಿಯಂತಹ ಯುವರಂಗಕರ್ಮಿ ಸಂವಿಧಾನದ ಅಗತ್ಯ ಹಾಗೂ ಮನುಸ್ಮೃತಿಯ ದಬ್ಬಾಳಿಕೆ ಕುರಿತು “ಮನುಸ್ಮೃತಿ V/s  ಸಂವಿಧಾನ” ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ. ಈ ನಾಟಕವು ಇನ್ನಷ್ಟು ಪರಿಷ್ಕರಣೆಗೆ ಒಳಗಾಗಿ ಹೆಚ್ಚು ಜನರನ್ನು ತಲುಪುವ ಅಗತ್ಯವಿದೆ. ಕೋಮುವ್ಯಾಧಿ ಹಿಂದುತ್ವವಾದಿಗಳ ಬಣ್ಣವನ್ನು ಬಯಲು ಗೊಳಿಸಬೇಕಿದೆ. ಅದಕ್ಕಾಗಿ ಈ ನಾಡಿನ ಹಲವಾರು ರಂಗತಂಡಗಳು ಹಾಗೂ ಸಾಮಾಜಿಕ ಬದ್ಧತೆಯ ಸಂಘಟನೆಗಳು ವೇದಿಕೆಯನ್ನು ಒದಗಿಸಿ  ಕೊಡಬೇಕಿದೆ. ಸಂವಿಧಾನದ ವಿರುದ್ಧ ಸಮರ ಸಾರಿರುವ ಮನುವಾದಿಗಳ ಶಡ್ಯಂತ್ರವನ್ನು ಹುಸಿಗೊಳಿಸಲೇ ಬೇಕಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

More articles

Latest article