ಮನುಸ್ಮೃತಿಯ ಬಗೆಗಿನ ಸಮರ್ಥನೆ ಇರಬಹುದು, ಮನೆತನದ ಗೌರವ, ಶೀಲರಕ್ಷಣೆಗಾಗಿ ಹೆಣ್ಣು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪಲ್ಲ ಎಂದು ವಾದಿಸುವುದಿರಬಹುದು, ಮಹಿಳೆಯರೇ ಇಂತಹ ವಾದದಲ್ಲಿ ಮುಂದಿರುವುದು ದೇಶದಲ್ಲಿ ದಶಕ ದಶಕಗಳ ಕಾಲ ನಡೆದ ಸ್ತ್ರೀವಾದಿ ಚಳುವಳಿಗಳು, ಸ್ತ್ರೀ ಸ್ವಾತಂತ್ರಕ್ಕಾಗಿ ಅನೇಕ ಸುಧಾರಣಾವಾದಿಗಳು ನಡೆಸಿದ ಹೋರಾಟಗಳು, ಎಲ್ಲಕ್ಕಿಂತಲೂ ನ್ಯಾಯ, ಸ್ವಾತಂತ್ರ್ಯ, ಸಮಾನತೆಯ ಮಟ್ಟಿಗೆ ಅತ್ಯಂತ ಆದರ್ಶ ಗ್ರಂಥ ಎಂದು ಕೊಂಡಾಡಲ್ಪಟ್ಟ ಸಂವಿಧಾನ ಜಾರಿಗೊಂಡು 76 ವರ್ಷಗಳ ಬಳಿಕವೂ ದೇಶ ಎಲ್ಲಿ ನಿಂತಿದೆ ಎಂಬುದನ್ನು ಗಾಬರಿಯಿಂದ ನಾವು ನೋಡುವಂತೆ ಮಾಡಿದೆ – ಶ್ರೀನಿವಾಸ ಕಾರ್ಕಳ, ಸಮಾಜ ಚಿಂತಕರು.
ಇತ್ತೀಚೆಗೆ ದೇಶದಲ್ಲಿ ಮೂರು ಬಹುಮುಖ್ಯ ವಿದ್ಯಮಾನಗಳು ನಡೆದವು. ದೇಶದ ಸಂವಿಧಾನ, ಸಾಮಾಜಿಕ ನ್ಯಾಯ, ಮಹಿಳಾ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾನತೆ, ಪ್ರಗತಿಪರತೆ, ಇತ್ಯಾದಿ ತತ್ತ್ವಗಳ ಮೇಲೆ ನಂಬಿಕೆ ಇರಿಸಿಕೊಂಡಿರುವ ಯಾರಿಗೇ ಆದರೂ ಅವು ಆಘಾತ ತರುವಂಥವು.
ಆ ಘಟನೆಗಳೆಂದರೆ –
1. ರಾಹುಲ್ ಗಾಂಧಿಯವರು ಪುಣೆಯಲ್ಲಿ ನಡೆದ ʼಛಾತ್ರೋಂಕಿ ಗೂಂಜ್ʼ ಕಾರ್ಯಕ್ರಮದಲ್ಲಿ ಮನುಸ್ಮೃತಿಯ ಬಗ್ಗೆ ಆಡಿದ ಮಾತುಗಳಿಗೆ ಮತ್ತು ʼಪಿತೃಪ್ರಧಾನ್ಯವನ್ನು ಛಿದ್ರಗೊಳಿಸಿʼ ಎಂಬ ಅವರ ಕರೆಗೆ ಬಂದ ಪ್ರತಿಕ್ರಿಯೆಗಳು,
2. ʼಮೀಸಲಾತಿ ಸುಧಾರಿಸಿʼ ಎಂಬ ನೆಪದಲ್ಲಿ, ಪರಿಶಿಷ್ಟ ಜಾತಿ/ ಪಂಗಡ ಮೊದಲಾದ ಶೋಷಿತ ವರ್ಗಗಳಿಗೆ ಈಗ ನೀಡಲಾಗುತ್ತಿರುವ ಮೀಸಲಾತಿಯನ್ನೇ ರದ್ದು ಪಡಿಸುವಂತೆ ಆಗ್ರಹಿಸುವ ಅಜೆಂಡಾದೊಂದಿಗೆ ದಿಲ್ಲಿಯಲ್ಲಿ ನಡೆದ ಪ್ರತಿಭಟನಾ ಪ್ರದರ್ಶನ ಮತ್ತು
3. ಜೌಹರ್ (ಮಧ್ಯಕಾಲೀನ ಭಾರತದಲ್ಲಿ ವಿಶೇಷವಾಗಿ ರಜಪೂತರಲ್ಲಿ ಯುದ್ಧದಲ್ಲಿ ಸೋಲು ಅಥವಾ ಶತ್ರುಗಳ ವಶವಾಗುವುದು ನಿಶ್ಚಿತವಾದಾಗ ಮಾನ ಉಳಿಸಿಕೊಳ್ಳಲು ಮಹಿಳೆಯರು ಸಾಮೂಹಿಕವಾಗಿ ಬೆಂಕಿಗೆ ಹಾರಿ ಪ್ರಾಣತ್ಯಾಗ ಮಾಡುತ್ತಿದ್ದ ಐತಿಹಾಸಿಕ ಆಚರಣೆ) ಅನ್ನು ಆಕ್ಷೇಪಿಸಿ ಪ್ರಸಿದ್ಧ ಅಭಿನೇತ್ರಿ ಮತ್ತು ಮಾನವಹಕ್ಕುಗಳ ಪರ ಹೋರಾಟಗಾರ್ತಿ ಸ್ವರ ಭಾಸ್ಕರ್ ಅವರು ಆಡಿದ ಮಾತುಗಳಿಗೆ ಬಂದ ಪ್ರತಿಕ್ರಿಯೆಗಳು.
ʼಪಿತೃಪ್ರಧಾನತೆಯನ್ನು ಛಿದ್ರಗೊಳಿಸಿʼ

ಪುಣೆಯ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಯವರು, ಸ್ವಾತಂತ್ರ್ಯ ಸಿಕ್ಕು ಎಂಭತ್ತು ವರ್ಷಗಳಾಗುತ್ತಾ ಬಂದರೂ, ಅತ್ಯಂತ ಆದರ್ಶಯುತವಾದ ಒಂದು ಸಂವಿಧಾನ ಜಾರಿಯಲ್ಲಿದ್ದರೂ, ದೇಶದಲ್ಲಿ ಈಗಲೂ ಮಹಿಳಾ ಶೋಷಣೆ ಹೇಗೆ ಮುಂದುವರಿದಿದೆ, ಅವರಿಗೆ ಹೊರಗಡೆ ಹೋಗಿ ದುಡಿಯುವುದು ಎಷ್ಟು ಕಷ್ಟವಾಗುತ್ತಿದೆ, ಗಂಡುಮಕ್ಕಳಿಗೆ ಹೋಲಿಸಿದರೆ ಹೆಣ್ಣುಮಕ್ಕಳನ್ನು ಹೇಗೆ ಎರಡನೆಯ ದರ್ಜೆಯ ಪ್ರಜೆಯಂತೆ ನೋಡುವ ಮನೋಭಾವ ಈಗಲೂ ಸಮಾಜದಲ್ಲಿ ಮುಂದುವರಿದಿದೆ, ಇತ್ಯಾದಿ ವಿಷಯಗಳನ್ನು ಪ್ರಸ್ತಾವಿಸುತ್ತಾ ಇದಕ್ಕೆ ಮನುಸ್ಮೃತಿಯನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ಹೆಣ್ಣು ಒಂದೋ ತಂದೆಯ ಅಥವಾ ಗಂಡನ ಅಥವಾ ಮಗನ ಅಡಿಯಾಳಾಗಿರಬೇಕು, ಅಂದರೆ ʼಹೆಣ್ಣು ಯಾವತ್ತೂ ಸ್ವಾತಂತ್ರ್ಯಕ್ಕೆ ಅರ್ಹಳಲ್ಲʼ ಎಂದು ಮನುಸ್ಮೃತಿ ಹೇಳುತ್ತದೆ. ಇಂತಹ ಆಲೋಚನೆಯನ್ನು ಧಿಕ್ಕರಿಸಬೇಕು, ʼಹೆಣ್ಣು ಯಾರ ಸೊತ್ತೂ ಅಲ್ಲ, ಆಕೆ ಯಾರಿಗೂ ಸೇರಿದವಳಲ್ಲ, ಆಕೆ ಆಕೆಗೇ ಸೇರಿದವಳು, ಆದ್ದರಿಂದ ಪಿತೃಪ್ರಧಾನತೆಯನ್ನು ಒಡೆದು ಛಿದ್ರಗೊಳಿಸಿʼ (smash the patriarchy) ಎಂದು ರಾಹುಲ್ ಗಾಂಧಿ ಕರೆ ನೀಡಿದರು.
ರಾಹುಲ್ ಗಾಂಧಿಯವರು ಹೇಳಿದ ಈ ವಿಚಾರಗಳಲ್ಲಿ ವಿಶೇಷವೂ ಇಲ್ಲ, ಹೊಸದೂ ಇಲ್ಲ. ಈ ವಿಚಾರಗಳ ಬಗ್ಗೆ ಸ್ತ್ರೀವಾದಿಗಳು, ಪ್ರಗತಿಪರ ಚಿಂತಕರು ದಶಕ ದಶಕಗಳಿಂದಲೂ ಹೇಳುತ್ತಲೇ ಬಂದಿದ್ದಾರೆ. ಆದರೆ. ಇಲ್ಲಿ ʼಏನು ಹೇಳಿದ್ದಾರೆʼ ಎಂಬುದಕ್ಕಿಂತ ʼಯಾರು ಹೇಳಿದ್ದುʼ ಎಂಬುದೇ ಮುಖ್ಯವಾಯಿತು. ರಾಹುಲ್ ಗಾಂಧಿಯವರ ಮೇಲೆ ಬಲಪಂಥೀಯರಿಗೆ ಮೊದಲೇ ಇದ್ದ ಪೂರ್ವಗ್ರಹ, ದ್ವೇಷ, ಭಯಂಕರ ಮತ್ತು ತರ್ಕಹೀನ ಟೀಕೆಗಳ ರೂಪದಲ್ಲಿ ವ್ಯಕ್ತವಾಯಿತು. ನಿರೀಕ್ಷಿತವಾಗಿಯೇ ಅದಕ್ಕೆ ಕೋಮು ಬಣ್ಣ ಕೊಡುವ ಯತ್ನವೂ ನಡೆಯಿತು.
ಒಕ್ಕೂಟ ಸರಕಾರದ ಹಿರಿಯ ಸಚಿವರಲ್ಲಿ ಒಬ್ಬರಾದ ಕಿರಣ್ ರಿಜುಜು ಅವರೇ ʼರಾಹುಲ್ ಗಾಂಧಿಗೆ ಯಾಕೆ ಹಿಂದೂ ಧರ್ಮದ ಬಗ್ಗೆ ಇಷ್ಟು ದ್ವೇಷʼ ಎಂದು ಪ್ರಶ್ನಿಸಿದರು. ಎಂದಿನಂತೆ, ʼರಾಹುಲ್ ಗಾಂಧಿ ಯಾಕೆ ಮುಸ್ಲಿಮರ ಬಗ್ಗೆ ಮಾತನಾಡುವುದಿಲ್ಲʼ ಎಂಬ ಪ್ರಶ್ನೆಯನ್ನು ತಪ್ಪದೆ ಕೇಳಲಾಯಿತು. ಇಲ್ಲಿನ ಟೀಕೆಗಳಲ್ಲಿ ತರ್ಕಗಳಿರಲಿಲ್ಲ, ಇದ್ದುದು ಕೇವಲ ಪೂರ್ವಗ್ರಹ. ಯಾಕೆಂದರೆ ʼಪ್ಯಾಟ್ರಿಯಾರ್ಕಿʼ ಎನ್ನುವುದು ಹಿಂದೂ ಧರ್ಮಕ್ಕೆ ಸೀಮಿತವಲ್ಲ, ಅದು ಎಲ್ಲ ಧರ್ಮಗಳಲ್ಲೂ ಇದೆ. ಆದ್ದರಿಂದಲೇ, ರಾಹುಲ್ ಗಾಂಧಿ ʼಸ್ಮಾಶ್ ದ ಪ್ಯಾಟ್ರಿಯಾರ್ಕಿʼ ಎಂದರೇ ಹೊರತು, ಹಿಂದೂ ಧರ್ಮದಲ್ಲಿನ ಪ್ಯಾಟ್ರಿಯಾರ್ಕಿ ಎನ್ನಲಿಲ್ಲ.
ರಾಹುಲ್ ಗಾಂಧಿಯವರ ಮೇಲೆ ಮುಗಿಬಿದ್ದವರಲ್ಲಿ ಬಿಜೆಪಿ ಆರ್ ಎಸ್ ಎಸ್ ನಲ್ಲಿನ ಮನುವಾದಿ ಮನಸಿನ ಮೇಲ್ಜಾತಿಯವರೇ ಅಧಿಕ. ಇದಕ್ಕಿಂತಲೂ ವಿಷಾದದ ಸಂಗತಿಯೊಂದಿದೆ. ಮನುಸ್ಮೃತಿಯ ಪ್ರಕಾರ ಅತ್ಯಂತ ನೀಚರೆಂದರೆ ದಲಿತರು ಮಾತ್ರವಲ್ಲ, ಮಹಿಳೆಯರು ಕೂಡಾ. ಇಂದು ನಾವು ಸ್ತ್ರೀ ಸಮಾನತೆ ಮತ್ತು ಸ್ತ್ರೀ ಸಬಲೀಕರಣದ ಬಗ್ಗೆ ಯಾವ ಆಧುನಿಕ ಆಲೋಚನೆಗಳನ್ನು ಹೊಂದಿದ್ದೇವೆಯೋ ಅದಕ್ಕೆ ಸಂಪೂರ್ಣ ವಿರುದ್ಧವಾದ ಆಲೋಚನೆಗಳು ಅಲ್ಲಿವೆ. ಸ್ತ್ರೀಯರನ್ನು ಮನುಷ್ಯರೇ ಅಲ್ಲವೆಂಬಂತೆ ಅಲ್ಲಿ ನೋಡಲಾಗಿದೆ. ವಾಸ್ತವ ಹೀಗಿದ್ದೂ ರಾಹುಲ್ ಗಾಂಧಿಯವರ ಮೇಲೆ ಮುಗಿಬಿದ್ದವರಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದರು. ಮಾತ್ರವಲ್ಲ, ರಾಹುಲ್ ಗಾಂಧಿಯವರ ಮೇಲೆ ಧಾಳಿ ಮಾಡುವ ಭರದಲ್ಲಿ ಅವರು ಮನುಸ್ಮೃತಿಯನ್ನೇ ಸಮರ್ಥಿಸುವ ಮಟ್ಟಕ್ಕೂ ಇಳಿದರು! ಇದನ್ನು ಕಂಡು ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರು, ʼಮಹಿಳೆಯರು ಮನುಸ್ಮೃತಿಯನ್ನು ಸಮರ್ಥಿಸುವುದೂ ಒಂದೇ, ಕೋಳಿಯು KFC ಯನ್ನು ಸಮರ್ಥಿಸುವುದೂ ಒಂದೇʼ ಎಂದು ಬರೆದುಬಿಟ್ಟರು!
ಮೀಸಲಾತಿಯ ವಿರುದ್ಧ ಹೋರಾಟ
ಶತಮಾನಗಳಿಂದ ಜಾತಿ ಕಾರಣಕ್ಕೆ ಶೋಷಿತರಾದ, ಪಶುಗಳಿಗಿಂತಲೂ ಹೀನಾಯವಾಗಿ ನಡೆಸಿಕೊಳ್ಳಲ್ಪಟ್ಟ, ಅವಕಾಶವಂಚಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡುವುದಕ್ಕಾಗಿ ಜಾರಿಗೆ ಬಂದ ಮೀಸಲಾತಿಯ ಬಗ್ಗೆ ತಥಾಕಥಿತ ಮೇಲ್ಜಾತಿಯ ಮಂದಿಗೆ ಹಿಂದಿನಿಂದಲೂ ಅಸಹನೆಯಿದೆ. ಮೀಸಲಾತಿ ಎನ್ನುವುದು ಬಡತನ ನಿರ್ಮೂಲ ಕಾರ್ಯಕ್ರಮವಲ್ಲ, ಬದಲಿಗೆ ಶತಮಾನಗಳಿಂದ ಜಾತಿ ಕಾರಣಕ್ಕೆ ಅನ್ಯಾಯಕ್ಕೆ ಒಳಗಾದವರಿಗೆ ಪರಿಹಾರ ರೂಪದ ಮತ್ತು ಸಮಾನ ಪ್ರಾತಿನಿಧ್ಯ ನೀಡಿಕೆಯ ಒಂದು ಕಾರ್ಯಕ್ರಮ ಎನ್ನುವುದನ್ನು ಅರ್ಥಮಾಡಿಕೊಳ್ಳದೆ ಮೆರಿಟ್ ನ ವಾದಗಳ ಮೂಲಕ ಅವರು ಮೀಸಲಾತಿಯ ವಿರುದ್ಧ ಧಾಳಿ ನಡೆಸುತ್ತಲೇ ಇರುತ್ತಾರೆ.
ಸರಕಾರ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಿಸುತ್ತಾ, ಸರಕಾರಿ ಹುದ್ದೆಗಳನ್ನು ಭರ್ತಿಮಾಡದೆ ಖಾಲಿಬಿಡುತ್ತಾ, ಪರಿಶಿಷ್ಟರಿಗೆ ಮೀಸಲಾದ ಸೀಟುಗಳು/ಹುದ್ದೆಗಳೂ ಮೇಲ್ಜಾತಿಯವರಿಗೇ ಸಿಗುವಂತೆ ಮಾಡಲು ನೂರಾರು ಕುತಂತ್ರ ಹೆಣೆಯುತ್ತಾ ಈಗಾಗಲೇ ಮೀಸಲಾತಿಯನ್ನು ಒಂದು ಮಟ್ಟಿಗೆ ಅಪ್ರಸ್ತುತಗೊಳಿಸಿದೆ. ಆರ್ಥಿಕ ನೆಲೆಯ ಮೀಸಲಾತಿ (ಇ ಡಬ್ಲ್ಯೂ ಎಸ್), ಜಾತಿ ಆಧಾರಿತ ಮೀಸಲಾತಿ ಪರಿಕಲ್ಪನೆಯನ್ನು ಇನ್ನಷ್ಟು ದುರ್ಬಲಗೊಳಿಸುವ ಹುನ್ನಾರ ಎನ್ನುವುದು ದುರ್ಬಲವರ್ಗಗಳಿಗೇ ಅರ್ಥವಾಗಲಿಲ್ಲ!
ಈಗ ʼಮೀಸಲಾತಿ ಸುಧಾರಣೆ ಮಾಡಿʼ ಎಂಬ ಕರೆಯ ಅಡಿಯಲ್ಲಿ ಮೀಸಲಾತಿಯನ್ನು ತೆಗೆದುಹಾಕಲು ಇನ್ನೊಂದು ಹಂತದ ಹೋರಾಟ ಶುರುವಾಗಿದೆ. ಮೇಲ್ಜಾತಿಯ ಮಂದಿ ಅಕ್ಷರಸ್ಥರು, ಪರಿಣಾಮಕಾರಿ ವಾದ ಮಂಡಿಸುವ ತಾಕತ್ತಿರುವವರು. ಆದರೆ, ಸಾಮಾಜಿಕ ಏಣಿಶ್ರೇಣಿಯಲ್ಲಿ ಕೆಳಗಿರುವವರಲ್ಲಿ ಅನೇಕರು ಅನಕ್ಷರಸ್ಥರು, ಧ್ವನಿಯಿಲ್ಲದವರು.

ಮಾರಿಕೊಂಡ ಮಾಧ್ಯಮಗಳ ಬೆಂಬಲವೂ ದೊರೆತು ತಥಾಕಥಿತ ಮೇಲ್ಜಾತಿಯ ಮಂದಿ ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಮೀಸಲಾತಿ ವಿರುದ್ಧದ ವಾದಗಳಲ್ಲಿ ವಿಜೃಂಭಿಸುತ್ತಿದ್ದಾರೆ. ಸಂವಿಧಾನದ ಪರ ಮಾತನಾಡಬೇಕಾದ ನ್ಯಾಯಾಧೀಶರುಗಳೇ ಈಗ ಮೀಸಲಾತಿಯ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ನ್ಯಾಯಾಂಗ, ಸರಕಾರ, ಮಾಧ್ಯಮ ಎಲ್ಲೆಲ್ಲೂ ಮೇಲ್ಜಾತಿಯ ಮಂದಿಗಳೇ ತುಂಬಿಕೊಂಡಿದ್ದು ಈ ಮನುವಾದಿ ಮನಸುಗಳು ಅವಕಾಶ ಸಿಕ್ಕರೆ ನಾಳೆಯೇ ಮೀಸಲಾತಿಯನ್ನು ಇಲ್ಲವಾಗಿಸುವವರು. ಚುನಾವಣಾ ಸೋಲಿನ ಭೀತಿಯಿಂದಷ್ಟೇ ಸರಕಾರ ಈ ವಿಚಾರದಲ್ಲಿ ನೇರವಾಗಿ ಮುಂದುವರಿಯದೆ ಉಳಿದಿದೆ. ಆದರೆ, ನೇರ ದಾರಿಯ ಬದಲು ಇವರು ಅಡ್ಡದಾರಿಯಲ್ಲಿ ಮೀಸಲಾತಿಯನ್ನು ಒಂದಲ್ಲ ಒಂದು ದಿನ ಪೂರ್ತಿಯಾಗಿ ಅಪ್ರಸ್ತುತಗೊಳಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.
ʼಜೌಹರ್ʼ ಬಗ್ಗೆ ಸ್ವರಭಾಸ್ಕರ್ ಆಡಿದ ಮಾತಿನಲ್ಲಿ ತಪ್ಪೇನಿದೆ?!
ಮೇಲಿನ ಎರಡು ವಿಚಾರಗಳಿಗಿಂತಲೂ ಹೆಚ್ಚು ಸದ್ದು ಮಾಡಿದ್ದು ಅಭಿನೇತ್ರಿ, ಸ್ವರ ಭಾಸ್ಕರ್ ಅವರು ವ್ಯಕ್ತಪಡಿಸಿದ ಒಂದು ಸಣ್ಣ ಅಭಿಪ್ರಾಯ. ಹಿಂದೆ ನಮ್ಮಲ್ಲಿ, ಗಂಡ ಸತ್ತಾಗ ಹೆಂಡತಿಯೂ ಅದೇ ಚಿತೆಗೆ ಹಾರಿ ಸಾಯುವ ʼಸತಿ ಸಹಗಮನʼ ಪದ್ಧತಿ ಜಾರಿಯಲ್ಲಿತ್ತು. ಅನೇಕ ಬಾರಿ ಇದು ಆಕೆ ಸ್ವ ಇಚ್ಛೆಯಿಂದ ಮಾಡುವುದಲ್ಲ, ಆಕೆಯನ್ನು ಬಲವಂತವಾಗಿ ದೂಡಿ ಒತ್ತಿಟ್ಟು ಆಕೆ ಬೆಂಕಿಯಲ್ಲಿ ಜೀವಂತ ಸುಟ್ಟು ಸಾಯುವಂತೆ ಮಾಡಲಾಗುತ್ತಿತ್ತು ಎಂಬ ಒಂದು ವಾದವೂ ಇದೆ.
ನಮ್ಮಲ್ಲಿ ಧರ್ಮ, ಸಂಸ್ಕೃತಿ, ಸಂಪ್ರದಾಯ ಎಲ್ಲವುದರ ರಕ್ಷಣೆಯ ಹೊಣೆಯನ್ನೂ ಬಡಪಾಯಿ ಹೆಣ್ಣಿನ ಮೇಲೆ ಹೊರಿಸಲಾಗಿದೆ. ಧರ್ಮ ರಕ್ಷಣೆಗಾಗಿ, ತನ್ನ ಶೀಲ ರಕ್ಷಣೆಗಾಗಿ, ಮನೆತನದ ಮಾನ ಕಾಪಾಡುವುದಕ್ಕಾಗಿ ಆಕೆ ತನ್ನ ಬಲಿದಾನ ಮಾಡುವ ಪ್ರಸಂಗಗಳನ್ನು ನಮ್ಮ ಚರಿತ್ರೆ ಮತ್ತು ಸಾಹಿತ್ಯಗಳಲ್ಲಿ ವೈಭವೀಕರಿಸಿ ಚಿತ್ರಿಸಲಾಗಿದೆ. ಆಕೆ ಏನಿದ್ದರೂ ಕೇವಲ ತನ್ನ ಗಂಡನ ಮಾತ್ರ ಸೊತ್ತು ಎಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳಲಾಗಿದೆ. ಹಾಗಾಗಿಯೇ ಹಿಂದೆ ರಾಜರುಗಳು ಯುದ್ಧದಲ್ಲಿ ಸೋತಾಗ ಅಥವಾ ಸತ್ತಾಗ ಅವರ ರಾಣಿಯಂದಿರು ಶತ್ರು ರಾಜನ ಕೈಗೆ ಸಿಗದಂತೆ ಜೌಹರ್ (ಸಾಮೂಹಿಕ ಸ್ವಯಂದಹನ-ಅಗ್ನಿಪ್ರವೇಶ) ಮಾಡಿಕೊಂಡುಬಿಡುತ್ತಿದ್ದರಂತೆ.
ಹಾಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದುದು ಆ ಹೆಣ್ಣುಮಕ್ಕಳ ಆಯ್ಕೆಯೇ? ಅಥವಾ ನಮ್ಮ ಧರ್ಮ ಸಂಸ್ಕೃತಿಗಳು ಪಾವಿತ್ರ್ಯವನ್ನೆಲ್ಲ ಹೆಣ್ಣಿನ ದೇಹದಲ್ಲಿರಿಸಿ, ಆಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿರುವುದು ತೀರಾ ಸಹಜ ಪ್ರಕ್ರಿಯೆ ಎಂಬಂತೆ ಆಕೆಯ ಮನಸನ್ನು ತಿದ್ದಿತೀಡಿ ಸಿದ್ಧಪಡಿಸಿದ್ದುವೇ? ಇಂಥ ಆತ್ಮಹತ್ಯೆಯನ್ನು ಕತೆಗಳಲ್ಲಿ ಸಿನಿಮಾಗಳಲ್ಲಿ ವೈಭವೀಕರಿಸುವುದು ಎಷ್ಟರಮಟ್ಟಿಗೆ ಸರಿ? ಅದು ಸಮಾಜಕ್ಕೆ ಯಾವ ಸಂದೇಶವನ್ನು ರವಾನಿಸುತ್ತದೆ? ಲೈಂಗಿಕ ಅತ್ಯಾಚಾರಕ್ಕೆ ಒಳಗಾದ ಒಂದು ಹೆಣ್ಣಿಗೂ ಬದುಕುವ ಹಕ್ಕಿಲ್ಲವೇ? ಆಕೆ ಶೀಲಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ಸರಿ ಎಂದು ನಾವು ವೈಭವೀಕರಿಸಬೇಕೇ? ಹಾಗೆ ವೈಭವೀಕರಿಸುವುದೆಂದರೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೋತ್ಸಾಹಿಸಿದಂತೆಯೇ ಅಲ್ಲವೇ? ಗಂಡಿಗಿಲ್ಲದ ಶೀಲವನ್ನು ಹೆಣ್ಣಿಗೆ ಮಾತ್ರ ನಿಗದಿಪಡಿಸಿ, ಮನೆತನದ ಮರ್ಯಾದೆಯ ರಕ್ಷಣೆಯ ಜವಾಬ್ದಾರಿಯನ್ನು ಆ ಬಡಪಾಯಿಯ ಮೇಲೆ ಹೊರಿಸಿದ ಕಾರಣದಿಂದಲೇ ಇಂದು ʼಮರ್ಯಾದಾ ಹತ್ಯೆʼಯ ಹೆಸರಿನಲ್ಲಿ ಹೆಣ್ಣನ್ನು ಕೊಲ್ಲುತ್ತಿರುವುದಲ್ಲವೇ?
ಸ್ವರ ಭಾಸ್ಕರ್ ʼಪದ್ಮಾವತ್ʼ ಸಿನಿಮಾದಲ್ಲಿ ನಾಯಕಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿರ್ದಿಷ್ಟವಾಗಿ ಎತ್ತಿಕೊಂಡು ಸಮಾಜಕ್ಕೆ ಅಂತಹ ಸಂದೇಶ ರವಾನಿಸುವುದು ತನಗೆ ಸಮ್ಮತವಲ್ಲ ಎಂದು ಹೇಳಿರಬಹುದು. ಆದರೆ ಆಕೆ ಎತ್ತಿರುವುದು ಮೇಲೆ ಹೇಳಿದ ಪ್ರಶ್ನೆಗಳನ್ನೇ.
ಆಕೆ ಹೇಳಿದ್ದರಲ್ಲಿ ತಪ್ಪಾದರೂ ಏನಿದೆ? ಅತ್ಯಾಚಾರಕ್ಕೆ ಒಳಗಾದ ಹೆಣ್ಣಿಗೆ ನಮ್ಮ ಸ್ತ್ರೀವಾದಿ ಪ್ರಗತಿಪರರು ದಶಕ ದಶಕಗಳಿಂದ ಹೇಳಿಕೊಂಡು ಬಂದಿರುವುದು ಏನು? ʼತಲೆತಗ್ಗಿಸಬೇಕಾದುದು ನಿನ್ನ ಮೇಲೆ ಅತ್ಯಾಚಾರದ ಅಪರಾಧ ಎಸಗಿದವರೇ ಹೊರತು ಏನೂ ತಪ್ಪು ಮಾಡದ ನೀನಲ್ಲ, ಸಮಾಜದಲ್ಲಿ ನೀನು ತಲೆ ಎತ್ತಿ ತಿರುಗಾಡಬೇಕು, ಸವಾಲುಗಳನ್ನು ದಿಟ್ಟವಾಗಿ ಎದುರಿಸಬೇಕು, ನಿನ್ನ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಹೋರಾಡಿ ಅವರು ಶಿಕ್ಷೆ ಅನುಭವಿಸುವಂತೆ ಮಾಡಬೇಕು ಎಂದೇ ಅಲ್ಲವೇ?

ಸಾಕ್ಷ್ಯ ಚಿತ್ರಗಳಲ್ಲಿ, ಇದ್ದುದನ್ನು ಇದ್ದಂತೆ ತೋರಿಸುವ ಕ್ರಮ ಇದೆ. ಆದರೆ ಕಲ್ಪನೆಗಳಿಗೆ ಅವಕಾಶ ಇರುವ ನಾಟಕ. ಸಿನಿಮಾ, ಕತೆ, ಕಾದಂಬರಿಗಳಲ್ಲಿ ಜನರ ಧೈರ್ಯಗೆಡಿಸುವ ಸಂದೇಶವಿರಕೂಡದು, ಅನ್ಯಾಯದ ವಿರುದ್ಧ ಹೋರಾಡುವ, ಹೋರಾಡಿ ಗೆಲ್ಲುವ ಸಾಧಿಸುವ ಸಕಾರಾತ್ಮಕ ಸಂದೇಶ ಇರಬೇಕು ಎನ್ನುವುದು ಇದೇ ಕಾರಣಕ್ಕಲ್ಲವೇ?
ಆದರೆ ಸ್ವರ ಭಾಸ್ಕರ್ ವಿಷಯದಲ್ಲಿಯೂ ನಡೆದುದು ಗೋದಿ ಮಾಧ್ಯಮಗಳಿಂದ ತಿರುಚುವ ಕೆಲಸ. ಏನು ಹೇಳಿದರು, ಏಕೆ ಹೇಳಿದರು, ಎನ್ನುವುದಕ್ಕಿಂತಲೂ ಯಾರು ಹೇಳಿದರು ಎನ್ನುವುದು ಸಹಜವಾಗಿಯೇ ಮುಖ್ಯವಾಯಿತು. ಅಲ್ಲಿಂದ ಸೋಶಿಯಲ್ ಮೀಡಿಯಾದ ಝೂಂಬಿಗಳು ವಿಷಯವನ್ನು ಎತ್ತಿಕೊಂಡು ಟ್ರೋಲಿಂಗ್ ಆರಂಭಿಸಿದರು. ಸಂಘಪರಿವಾರದ ವಿರುದ್ಧದ ಆಕೆಯ ನಿಲುವು, ಸಿಎಎ ವಿರೋಧಿ ಸಹಿತ ಸಾಮಾಜಿಕ ಹೋರಾಟಗಳಲ್ಲಿ ಆಕೆಯ ಸಕ್ರಿಯ ಪಾಲ್ಗೊಳುವಿಕೆ, ಎಲ್ಲಕ್ಕಿಂತಲೂ ಮುಖ್ಯವಾಗಿ ಆಕೆ ಒಬ್ಬ ಮುಸ್ಲಿಮನನ್ನು ಮದುವೆಯಾಗಿರುವುದು ಇತ್ಯಾದಿಗಳ ಹಿನ್ನೆಲೆಯಲ್ಲಿ ಆಕೆಯ ಮೇಲೆ ರಣಹದ್ದುಗಳಂತೆ ಮುಗಿಬಿದ್ದರು. ತಮ್ಮ ಸಂಸ್ಕೃತಿಯ ಎಲ್ಲ ಪದಗಳನ್ನೂ ಅಲ್ಲಿ ಆಕೆಯ ವೈಯಕ್ತಿಕ ನಿಂದನೆಗೆ ಬಳಸಿಕೊಂಡರು. ಆಕೆ ಮೂಲತಃ ಹೇಳಿದ್ದು ಏನು, ಆಕೆ ತದನಂತರ ನೀಡಿದ ವಿವರಣೆ ಯಾವುದನ್ನೂ ಆಲಿಸುವ ಸ್ಥಿತಿಯಲ್ಲಿ ಅವರಿರಲಿಲ್ಲ.
ಇಲ್ಲೂ ಅತ್ಯಂತ ಆಘಾತದ ಸಂಗತಿಯೆಂದರೆ, ತಾವು ಲಿಬರಲ್ ಗಳು ಎಂದು ಹೇಳಿಕೊಳ್ಳುವ ಪ್ರಿಯಾಂಕಾ ಚತುರ್ವೇದಿಯಂತಹ ಕೆಲ ಸುಶಿಕ್ಷಿತ ಮಹಿಳೆಯರೇ, ಶೀಲ ರಕ್ಷಣೆಗಾಗಿ ಹೆಣ್ಣಿನ ಆತ್ಮಹತ್ಯೆಯನ್ನು ಪರೋಕ್ಷವಾಗಿ ಸಮರ್ಥಿಸಿದ್ದು, ವೈಭವೀಕರಿಸಿದ್ದು.
ಅದು ಮನುಸ್ಮೃತಿಯ ಬಗೆಗಿನ ಸಮರ್ಥನೆ ಇರಬಹುದು, ಮನೆತನದ ಗೌರವ, ಶೀಲರಕ್ಷಣೆಗಾಗಿ ಹೆಣ್ಣು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪಲ್ಲ ಎಂದು ವಾದಿಸುವುದಿರಬಹುದು, ಮಹಿಳೆಯರೇ ಇಂತಹ ವಾದದಲ್ಲಿ ಮುಂದಿರುವುದು ದೇಶದಲ್ಲಿ ದಶಕ ದಶಕಗಳ ಕಾಲ ನಡೆದ ಸ್ತ್ರೀವಾದಿ ಚಳುವಳಿಗಳು, ಸ್ತ್ರೀ ಸ್ವಾತಂತ್ರಕ್ಕಾಗಿ ಅನೇಕ ಸುಧಾರಣಾವಾದಿಗಳು ನಡೆಸಿದ ಹೋರಾಟಗಳು, ಎಲ್ಲಕ್ಕಿಂತಲೂ ನ್ಯಾಯ, ಸ್ವಾತಂತ್ರ್ಯ, ಸಮಾನತೆಯ ಮಟ್ಟಿಗೆ ಅತ್ಯಂತ ಆದರ್ಶ ಗ್ರಂಥ ಎಂದು ಕೊಂಡಾಡಲ್ಪಟ್ಟ ಸಂವಿಧಾನ ಜಾರಿಗೊಂಡು 76 ವರ್ಷಗಳ ಬಳಿಕವೂ ದೇಶ ಎಲ್ಲಿ ನಿಂತಿದೆ ಎಂಬುದನ್ನು ಗಾಬರಿಯಿಂದ ನಾವು ನೋಡುವಂತೆ ಮಾಡಿದೆ.
ಶ್ರೀನಿವಾಸ ಕಾರ್ಕಳ
ಸಮಾಜ ಚಿಂತಕರು
ಇದನ್ನೂ ಓದಿ- ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ – 29 |ಬಿ ಎಡ್ ದಿನಗಳು ಮತ್ತು ವೀರೇಂದ್ರನ ಸಾಹಸಗಳು


