ಮಂಡ್ಯ ತಾಲೂಕಿನ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಪ್ರಕರಣವನ್ನು ಮುಂದಿಟ್ಟುಕೊಂಡು ಮಂಡ್ಯ ಜಿಲ್ಲೆಯ ಜನರ ನೆಮ್ಮದಿ ಹಾಳು ಮಾಡಲು ಹೆಚ್ ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಸಿಎಂ ಆಗುವುದಕ್ಕೆ ಮಂಡ್ಯ ಜನರ ಆಶೀರ್ವಾದ ಕಾರಣ ಎಂಬುದನ್ನು ಮರೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕರಾಗಿ ನೀವು ನಮ್ಮನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳಬೇಕೇ ವಿನಃ ಶಾಂತಿ ಕದಡುವ ಕೆಲಸ ಮಾಡಬಾರದು. ಮಂಡ್ಯ ಜನರು ನಿಮ್ಮನ್ನು ಈ ಹಿಂದೆ ಆಶೀರ್ವದಿಸಿದ್ದಾರೆ. ಅಂತವರ ನೆಮ್ಮದಿ ಹಾಳು ಮಾಡಲು ಮುಂದಾಗಿರುವುದು ನನಗೆ ನೋವು ತಂದಿದೆ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳಿಗೆ ಪ್ರಚೋದನೆ ನೀಡಬೇಡಿ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಂದುವರೆದು, ರೈತರ ಹಸಿರು ಶಾಲು ಬಿಟ್ಟಾಯ್ತು. ಜೆಡಿಎಸ್ ನ ಜಾತ್ಯತೀತತೆಯನ್ನೂ ಬಿಟ್ಟಾಯ್ತು. ಕೇಸರಿ ಶಾಲು ಹಾಕುವ ಬದಲು ನೇರವಾಗಿ ಬಿಜೆಪಿಗೆ ಸೇರ್ಪಡೆಯಾಗಿ. ಎಲ್ಲವನ್ನೂ ಜನ ತೀರ್ಮಾನಿಸಲಿ ಎಂದು ಹೇಳಿದ್ದಾರೆ.