Saturday, July 27, 2024

ಮಂಡ್ಯವನ್ನು ಕೋಮು‌ ಪ್ರಯೋಗಶಾಲೆ ಮಾಡುವ ಸಂಚನ್ನು ಬಿಜೆಪಿ ಹಾಕಿಕೊಂಡಿದೆ : ದಿನೇಶ್ ಗುಂಡೂರಾವ್

Most read

‘ಮಂಡ್ಯದ ಕೆರಗೋಡು ಧ್ವಜ ತೆರವು ಪ್ರಕರಣದ ಹಿಂದೆ ಜಿಲ್ಲೆಯ ಶಾಂತಿ ಕದಡುವ ದುರುದ್ದೇಶವಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈ ಷಡ್ಯಂತ್ರದ ರೂವಾರಿಗಳು’ ಎಂದು ಸಚಿವ ದಿನೇಶ್ ಗುಂಡೂರಾವ್ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಕೆರೆಗೋಡು ಗ್ರಾಮದ ಸರ್ಕಾರಿ ಜಾಗದಲ್ಲಿ ಹನುಮಧ್ವಜ ಹಾರಿಸಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಸರಣಿ ‘ಎಕ್ಸ್’ ಮಾಡಿರುವ ಸಚಿವರು ‘ ಕೆರಗೋಡು ಗ್ರಾಮದಲ್ಲಿ ನಿರ್ಮಾಣವಾಗಿದ್ದ ಧ್ವಜ ಸ್ತಂಭದಲ್ಲಿ ಕರ್ನಾಟಕದ ಧ್ವಜ ಹಾಗೂ ರಾಷ್ಟ್ರಧ್ವಜ ಹಾರಾಟಕ್ಕೆ ಮಾತ್ರ ಅನುಮತಿಯಿದೆ. ಗ್ರಾಮ ಪಂಚಾಯತಿ ಸಭೆಯಲ್ಲೂ ಇದು ಪ್ರಸ್ತಾಪವಾಗಿದೆ‌‌. ಹೀಗಿದ್ದೂ ಧಾರ್ಮಿಕ ಧ್ವಜ ಹಾರಿಸುವ ಹಿಂದಿನ ಹುನ್ನಾರ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಒಂದು ಷಡ್ಯಂತ್ರವಷ್ಟೆ’ ಎಂದು ಹೇಳಿದ್ದಾರೆ.

ಮುಂದುವರಿದು, ‘ಮಂಡ್ಯ ಜಿಲ್ಲೆ ಅತ್ಯಂತ ರಾಜಕೀಯ ಪ್ರಜ್ಞಾವಂತರ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೀರಾವರಿ, ನೆಲ-ಭಾಷೆಯ ವಿಚಾರದಲ್ಲಿ ಹೋರಾಟದ ನೆಲವಾಗಿದ್ದ ಮಂಡ್ಯ ಜಿಲ್ಲೆಯನ್ನು ಕೋಮು ದಳ್ಳುರಿಯ ನೆಲವನ್ನಾಗಿ ಪರಿವರ್ತಿಸಲು ಕೋಮುವಾದಿ ಪಕ್ಷ BJP ಪ್ರಯತ್ನಿಸುತ್ತಿದೆ. ಇಲ್ಲಿಯವರೆಗೂ ಜಾತ್ಯಾತೀತೆಯ ಲೇಬಲ್ ಅಂಟಿಸಿಕೊಂಡಿದ್ದ JDS ಕೂಡ BJP ಜೊತೆ ಸೇರಿ ಮಂಡ್ಯದ ವಾತಾವರಣ ಹಾಳುಮಾಡುತ್ತಿರುವುದು ವಿಪರ್ಯಾಸ. ಕೋಮು ಸಾಮರಸ್ಯಕ್ಕೆ ಹೆಸರಾಗಿದ್ದ ಮಂಡ್ಯದ ಜನತೆ ಬಿಜೆಪಿ ಮತ್ತು ಜೆಡಿಎಸ್ ಸಂಚನ್ನು ಅರಿಯಬೇಕು ಎಂದು ತಿಳಿಸಿದ್ದಾರೆ.

‘ಮಂಗಳೂರು, ಉಡುಪಿ,ಕಾರವಾರ ಸೇರಿದಂತೆ ಕರಾವಳಿ ಭಾಗಗಳನ್ನು ಈಗಾಗಲೇ ಕೋಮು ಪ್ರಯೋಗ ಶಾಲೆ ಮಾಡಿಕೊಂಡಿರುವ BJP, ಅಲ್ಲಿ ಅನೇಕ ಅಮಾಯಕರ ಹತ್ಯೆಗೆ ಕಾರಣವಾಗಿದೆ. ಇದೇ ರೀತಿ ಹಳೆ ಮೈಸೂರು ಭಾಗದ ಮಂಡ್ಯವನ್ನು ಕೋಮು‌ ಪ್ರಯೋಗಶಾಲೆ ಮಾಡುವ ಸಂಚನ್ನು BJP ಹಾಕಿಕೊಂಡಿದೆ. ರಾಜಕೀಯ ನೆಲೆಗಾಗಿ ಧಾರ್ಮಿಕ ಭಾವನೆ ಕೆರಳಿಸಿ ರಾಜಕೀಯ ಲಾಭ ಪಡೆದುಕೊಳ್ಳುವ BJP ಅದಕ್ಕಾಗಿ ಅಮಾಯಕರನ್ನು ಬಲಿ ಹಾಕುವ ಕೆಲಸವನ್ನು ಅವ್ಯಾಹತವಾಗಿ ಮಾಡಿಕೊಂಡು ಬಂದಿದೆ. BJPಯ ಈ ಸಂಚನ್ನು‌ ಮಂಡ್ಯದ ಪ್ರಜ್ಞಾವಂತ ಜನತೆ ಅರ್ಥಮಾಡಿಕೊಳ್ಳುವರು ಎಂಬ ನಂಬಿಕೆಯಿದೆ ಎಂದು ಸಚಿವರು ಹೇಳಿದ್ದಾರೆ.

More articles

Latest article