ಲೋಕಸಭಾ ಚುನಾವಣೆ 2024- ಫಲಿತಾಂಶ ಏನಾಗಬಹುದು?

Most read

ಜೂನ್ 4 ರ ಫಲಿತಾಂಶ ಬಿಜೆಪಿಯ ನಿರೀಕ್ಷೆಯಂತೆ ಇರುವುದಿಲ್ಲ. 300, 400 ಬಿಡಿ, ಅನೇಕ ಸಮೀಕ್ಷಕರು ಹೇಳುವಂತೆ ಬಿಜೆಪಿ ತನ್ನ ಹಿಂದಿನ ಸ್ಥಾನಗಳಲ್ಲಿಯೇ ಕನಿಷ್ಠ 50 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಅದರ ಮೈತ್ರಿ ಪಕ್ಷಗಳ ಸೀಟುಗಳನ್ನು ಸೇರಿಸಿದರೂ ಬಹುಮತದ ಗಡಿ ದಾಟುವುದು ಕಷ್ಟವಾಗಬಹುದು- ಶ್ರೀನಿವಾಸ ಕಾರ್ಕಳ.

ಭಾರತದ 18 ನೇ ಲೋಕಸಭೆಯನ್ನು ಆರಿಸಲು ನಡೆಸಲಾದ ಸಾರ್ವತ್ರಿಕ ಚುನಾವಣೆ ಕೊನೆಯ ಘಟ್ಟವನ್ನು ಪ್ರವೇಶಿಸಿದೆ. ಇಂದು (ಜೂನ್ 30) ಬಹಿರಂಗ ಪ್ರಚಾರ ಕೊನೆಗೊಳ್ಳಲಿದ್ದು, ನಾಡಿದ್ದು ಅಂದರೆ ಜೂನ್ 1, 2024 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಅದರಲ್ಲಿ 57 ಸಂಸದರನ್ನು ಆರಿಸಲಾಗುವುದು.

ಈ ಚುನಾವಣೆಯ ಫಲಿತಾಂಶ ಏನಾಗಬಹುದು ಎಂಬುದು ಸ್ಪಷ್ಟವಾಗಿ ತಿಳಿಯುವುದು ಜೂನ್ 4 ರಂದು; ಮತ ಎಣಿಕೆ ನಡೆದ ಬಳಿಕವಷ್ಟೇ. ‘ನಾಳೆ ಏನಾಗಬಹುದು’ ಎಂಬುದು ಯಾರಿಗೂ ತಿಳಿಯದಿದ್ದರೂ ಆ ಬಗ್ಗೆ ಊಹಿಸುವ, ಆ ಊಹೆಯಲ್ಲಿಯೇ ಒಂದು ಬಗೆಯ ಖುಷಿ ಅನುಭವಿಸುವ ಜಾಯಮಾನ ಸಹಜವಾಗಿಯೇ ಎಲ್ಲರದ್ದೂ. ಇದೇ ನಿಟ್ಟಿನಲ್ಲಿ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಚುನಾವಣಾ ಫಲಿತಾಂಶವನ್ನು ಲೆಕ್ಕ ಹಾಕುವ ಯತ್ನಗಳು ಬೇರೆ ಬೇರೆ ಮೂಲೆಗಳಿಂದ ನಡೆಯುತ್ತಲೇ ಇದೆ. ಸೆಫಾಲಜಿಸ್ಟ್ ಗಳು (ಚುನಾವಣಾ ಸಮೀಕ್ಷೆ ನಡೆಸುವವರು) ತಮ್ಮದೇ ಆದ ರೀತಿಯಲ್ಲಿ ಈ ಲೆಕ್ಕ ಹಾಕುತ್ತಿದ್ದರೆ, ಪತ್ರಕರ್ತರು ಮತ್ತು ಇತರ ಆಸಕ್ತರು ಕೂಡಾ ಮತಕ್ಷೇತ್ರಗಳ ಉದ್ದಕ್ಕೂ ಓಡಾಡುತ್ತಾ, ಜನರನ್ನು ಮಾತನಾಡಿಸುತ್ತಾ ಅವರ ಅಭಿಪ್ರಾಯ ಆಧರಿಸಿ ಟ್ರೆಂಡ್ ಗುರುತಿಸಲು ಯತ್ನಿಸುತ್ತಿದ್ದಾರೆ.

ಸೆಫಾಲಜಿಸ್ಟ್ ಯೋಗೇಂದ್ರ ಯಾದವ್, ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ, ರಕ್ಷಣೆ, ರಾಜಕೀಯ, ವಿತ್ತ ಇತ್ಯಾದಿ ಸಮಕಾಲೀನ ವಿಷಯಗಳ ದೊಡ್ಡ ಚಿಂತಕ ಮೋಹನ್ ಗುರುಸ್ವಾಮಿ ಮೊದಲಾದವರ ಅಭಿಪ್ರಾಯಗಳು ಒಂದು ಬಗೆಯದಾದರೆ, ಪ್ರಶಾಂತ್ ಕಿಶೋರ್ ರದು ಬೇರೆಯೇ ಬಗೆಯದು.

ಯೋಗೇಂದ್ರ ಯಾದವ್ ಸಮೀಕ್ಷಾ ವಿಧಾನ

ಪ್ರಶಾಂತ್ ಕಿಶೋರ್ ಮತ್ತು ಯೋಗೇಂದ್ರ ಯಾದವ್

ಇಲ್ಲಿ ಯೋಗೇಂದ್ರ ಯಾದವ್ ಅವರು ನಡೆಸಿದ ಸಮೀಕ್ಷೆಯ ಮಾದರಿ ಕುತೂಹಲಕರವಾದುದು. ಅವರು ಹೀಗೆ ಹೇಳುತ್ತಾರೆ – “ನನ್ನಲ್ಲಿ ದೇಹದ ತಾಪಮಾನ ಅಳೆಯುವ ಥರ್ಮಾ ಮೀಟರ್ ಇಲ್ಲ. ನಾನು ಕೈ ಮುಟ್ಟಿ ದೇಹದ ಉಷ್ಣತೆ ಆಧರಿಸಿ, ಜ್ವರ ಇದೆಯೋ ಇಲ್ಲವೋ ಎಂದು ಹೇಳುವ ಕಾಮನ್ ಸೆನ್ಸ್ ಬಳಸುವವನು. ನಾನು ಯಾವುದಾದರೂ ರಾಜ್ಯದ ಮತದಾರರ ಭಾವನೆ ತಿಳಿಯಲು ಹೋಗುವಾಗ ನಗರಗಳಿಗೆ ಹೋಗುವುದಿಲ್ಲ; ವಿದ್ಯಾವಂತರು, ಪಕ್ಷದ ಕಾರ್ಯಕರ್ತರನ್ನು ಮಾತನಾಡಿಸುವುದಿಲ್ಲ. ಹಳ್ಳಿಗಾಡುಗಳಲ್ಲಿ ತಿರುಗಾಡುತ್ತಾ, ಚಹಾದಂಗಡಿಗಳಲ್ಲಿ, ಬೀದಿಗಳಲ್ಲಿ, ಮಾರುಕಟ್ಟೆಗಳಲ್ಲಿ ಇರುವ ಜನರನ್ನು ಮಾತನಾಡಿಸುತ್ತೇನೆ. ಇದರಿಂದ ಜನರ ಭಾವನೆ ಎತ್ತ ಇದೆ ಎಂಬುದು ತಿಳಿಯುತ್ತದೆ. ನಾನು ಈ ಬಾರಿ ಹಾಗೆ ಹೋದಾಗ, ವಿಶೇಷವಾಗಿ ಉತ್ತರಪ್ರದೇಶದಲ್ಲಿ ಒಂದು ಅಂಶವನ್ನು ಗಮನಿಸಿದೆ. ಹಿಂದೆ ಬಿಜೆಪಿಗೆ ಓಟು ಹಾಕಿದ ನಾಲ್ವರಲ್ಲಿ ಒಬ್ಬರು ‘ಈ ಬಾರಿ ನಾನು ಬಿಜೆಪಿಗೆ ಓಟು ಹಾಕುವುದಿಲ್ಲ’ ಅಂದರು. ಆದರೆ ಈ ಹಿಂದೆ ಸಮಾಜವಾದಿ ಪಕ್ಷ, ಕಾಂಗ್ರೆಸ್ ಗೆ ಓಟು ಹಾಕಿದ ಯಾರೊಬ್ಬರೂ ‘ಈ ಬಾರಿ ಆ ಪಕ್ಷಗಳಿಗೆ ಓಟು ಹಾಕುವುದಿಲ್ಲ’ ಎನ್ನಲಿಲ್ಲ. ಇದು ಈ ಬಾರಿ ಮತದಾರರಲ್ಲಿ ಬಿಜೆಪಿ ಬಗ್ಗೆ ಇರುವ ಅಸಮಾಧಾನವನ್ನು ಸೂಚಿಸುತ್ತದೆ. ಇದು ಮತವಾಗಿ ಪರಿವರ್ತಿತವಾದರೆ ನಾಲ್ಕನೇ ಒಂದರಷ್ಟು ಸೀಟುಗಳನ್ನು ಬಿಜೆಪಿ ಕಳೆದುಕೊಳ್ಳಬಹುದು”.

ಈಗ ನಾವು ರಾಮಮಂದಿರ ಉದ್ಘಾಟನೆಯ ದಿನಗಳಿಗೆ ಹೋಗೋಣ. ಅದಕ್ಕೆ ಮೊದಲೇ ‘ಈ ಬಾರಿ ಮೋದಿಯವರಿಗೆ ಪ್ರತಿಸ್ಪರ್ಧಿಗಳೇ ಇಲ್ಲ’ ಎಂಬ ಕಥನ ಕಟ್ಟುವ ಕೆಲಸ ಗೋದಿ ಮೀಡಿಯಾಗಳಲ್ಲಿ ಆರಂಭವಾಗಿ ಹೋಗಿತ್ತು. ಅನೇಕ ತಟಸ್ಥ ಪತ್ರಕರ್ತರೂ ಇದೇ ಮಾತನ್ನು ಆಡುತ್ತಿದ್ದರು ಮತ್ತು ‘ಅಬ್ ಕೀ ಬಾರ್ ಚೌ ಸೌ ಪಾರ್’ ಎಂಬುದು ಖಂಡಿತ ಎಂದು ಕೆಲವು ಲಿಬರಲ್ ಗಳೂ ನಂಬಿಕೊಂಡಿದ್ದರು.

ಕೈಕೊಟ್ಟ ರಾಮಮಮಂದಿರ

ರಾಮ ಮಂದಿರ ಉದ್ಘಾಟನೆಯನ್ನು ಸಂಘ ಪರಿವಾರ ಬಿಜೆಪಿಯ ಪರ ನೆರೇಟಿವ್ ಕಟ್ಟಲು ಬಳಸಿಕೊಂಡ ರೀತಿ ಮತ್ತು ವ್ಯಾಪಕತೆಯಿಂದ ವಿಪಕ್ಷಗಳೂ ಕಂಗಾಲಾಗಿದ್ದವು. ಬಿಜೆಪಿಯೇತರ ಮತದಾರರೂ ‘ಈ ಬಾರಿ ನಾವು ಸೋತಂತೆಯೇ’ ಎಂಬ ತೀರ್ಮಾನಕ್ಕೆ ಬಂದಾಗಿತ್ತು. ಆದರೆ ರಾಜಕೀಯದಲ್ಲಿ ವರ್ಷಗಳಲ್ಲ, ಕೆಲವೇ ದಿನಗಳೂ ಎಷ್ಟು ಮುಖ್ಯ ಮತ್ತು ಅದು ಎಂತಹ ಬದಲಾವಣೆಗೆ ಕಾರಣವಾಗಬಹುದು ಎಂಬುದಕ್ಕೆ ಈ ಬಾರಿಯ ಚುನಾವಣೆ ಜೀವಂತ ಉದಾಹರಣೆ. ರಾಮಮಂದಿರ ಬಿಜೆಪಿಗೆ ಯಾವ ಲಾಭವನ್ನೂ ತರಲಿಲ್ಲ.

ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ, ಉತ್ತರಪ್ರದೇಶಗಳಲ್ಲಿ 2019 ರಲ್ಲಿಯೇ ಗರಿಷ್ಠ ಸ್ಥಾನ ಗೆದ್ದ ಬಿಜೆಪಿಗೆ 400 ನ್ನು ತಲಪಬೇಕಾದರೆ 303 ನ್ನು ಮೊದಲು ಹಿಡಿದಿಡಬೇಕು ಎಂಬುದು ಗೊತ್ತಿತ್ತು. ಆದರೆ ಆಡಳಿತ ವಿರೋಧಿ ಅಲೆ, ರಜಪೂತ ಸಿಟ್ಟು, ಹೋರಾಟಗಾರ ರೈತರ ವಿಷಯ, ಅಗ್ನಿವೀರ, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರಕಾರ ಉರುಳಿಸಿದ್ದು, ಕೇಜ್ರಿವಾಲ್ ಮತ್ತು ಹೇಮಂತ ಸೊರೇನ್ ಬಂಧನ ಮೊದಲಾದವುಗಳ ಕಾರಣ ಈ ಭಾಗದಲ್ಲಿ ತಾನು ಅನೇಕ ಸ್ಥಾನಗಳನ್ನು ಕಳೆದುಕೊಳ್ಳ ಬೇಕಾಗಬಹುದು ಎಂಬ ಅರಿವಿತ್ತು. ಇದೇ ಕಾರಣದಿಂದ ಅದು ತನ್ನ ಗಮನವನ್ನು ದಕ್ಷಿಣಕ್ಕೆ ಹರಿಸಿತು. ಮೋದಿಯವರು ಅನೇಕ ಬಾರಿ ಕೇರಳ ಮತ್ತು ತಮಿಳುನಾಡಿಗೆ ಬಂದು ಹೋದರು.

ಕೇರಳ, ತಮಿಳುನಾಡು, ಮಹಾರಾಷ್ಟ್ರ. ರಾಜಸ್ಥಾನ, ಬಿಹಾರ

ಆದರೆ ಚುನಾವಣೆಯ ಒಂದೊಂದೇ ಹಂತ ದಾಟುತ್ತಿದ್ದಂತೆ ಬಿಜೆಪಿಗೆ ತನ್ನ ಮುಂದಿರುವ ಸವಾಲಿನ ಅರಿವಾಗಲಾರಂಭಿಸಿತು (ಇದೇ ಕಾರಣದಿಂದ ಮೋದಿಯವರು ಒಮ್ಮಿಂದೊಮ್ಮೆಗೇ ಕೋಮುವಾದಿ ವಿಚಾರಗಳತ್ತ ತಿರುಗಿದ್ದು ಬೇರೆಯೇ ಚರ್ಚೆಯ ವಿಷಯ). ಆರಂಭದ ಹಂತಗಳಲ್ಲಿ ಕೇರಳ ಮತ್ತು ತಮಿಳುನಾಡುಗಳಲ್ಲಿ ಒಂದೂ ಸ್ಥಾನ ಸಿಗುವುದು ಕಷ್ಟ ಎಂಬ ವರದಿಗಳು ಬಂದವು. ಕರ್ನಾಟಕದಲ್ಲಿ ಈ ಹಿಂದೆ ಬಿಜೆಪಿ ಸ್ವತಃ 25 ಸ್ಥಾನ ಗೆದ್ದಿತ್ತು. ಆದರೆ ಈಗ ಇಲ್ಲಿ ಗ್ಯಾರಂಟಿ ಯೋಜನೆಗಳ ಜನಪ್ರಿಯ ಕಾಂಗ್ರೆಸ್ ಸರಕಾರ ಇರುವುದರಿಂದ ಅದು ಅರ್ಧದಷ್ಟಾದರೂ ಸ್ಥಾನ ಕಳೆದುಕೊಳ್ಳುವುದು ನಿಶ್ಚಿತವಾಗಿತ್ತು. ತೆಲಂಗಾಣದ ಕತೆಯೂ ಇದೇ. 

ಮಹಾರಾಷ್ಟ್ರದಲ್ಲಿ ಜನಪ್ರಿಯ ಉದ್ಧವ್ ಠಾಕ್ರೆ ಸರಕಾರವನ್ನು ಮೋಸದಿಂದ ಉರುಳಿಸಿದ ಕಾರಣ ಅಲ್ಲಿ ಬಿಜೆಪಿ ಹಿಂದೆಂದೂ ಇಲ್ಲದ ವಿರೋಧ ಅನುಭವಿಸುತ್ತಿತ್ತು. ಅಲ್ಲದೆ ಮರಾಠಾ ಮೀಸಲಾತಿ ಹೋರಾಟಗಾರರೂ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದರು. ಈರುಳ್ಳಿ ಬೆಳೆಗಾರರೂ ಮೋದಿ ಸರಕಾರದ ನಿರ್ಯಾತ ನಿಷೇಧದಿಂದ ಸಿಟ್ಟಿಗೆದ್ದರು. ಹಾಗಾಗಿ ಮಹಾರಾಷ್ಟ್ರಕ್ಕೆ ಮೋದಿಯವರು 18 ಬಾರಿ ಪ್ರಚಾರಕ್ಕೆ ಬಂದು ಹೋದರು. ಆದರೆ ವರದಿಗಳು ಹೇಳುವ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಲಿದೆ. 48 ಸ್ಥಾನಗಳಲ್ಲಿ ಅಲ್ಲಿ 30-35 ಸ್ಥಾನಗಳನ್ನು ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ ಎಂದು ವರದಿಗಳು ಹೇಳುತ್ತಿವೆ.

ಗುಜರಾತಿನಲ್ಲೂ ಬಿಜೆಪಿ ಈಗ ಜನಪ್ರಿಯವಾಗಿಲ್ಲ. ರಜಪೂತ ಸಿಟ್ಟು ಬಿಜೆಪಿಗೆ ಮಾರಕವಾಗಲಿದೆ. ಹಾಗಾಗಿ ಒಂದೆರಡು ಸ್ಥಾನಗಳನ್ನಾದರೂ ಅಲ್ಲಿ ಬಿಜೆಪಿ ಕಳೆದುಕೊಂಡರೆ ಅಚ್ಚರಿಯಿಲ್ಲ. ರಾಜಸ್ಥಾನದಲ್ಲಿಯೂ ರಜಪೂತರು ಬಿಜೆಪಿ ವಿರುದ್ಧ ನಿಂತಿದ್ದಾರೆ. ಅಲ್ಲಿ ಕಾಂಗ್ರೆಸ್ ಅತ್ಯುತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಮತ್ತು ಸಚಿನ್ ಪೈಲಟ್ ನೇತೃತ್ವದಲ್ಲಿ ಪರಿಣಾಮಕಾರಿ ಪ್ರಚಾರಾಭಿಯಾನ ನಡೆಸಿದ್ದರಿಂದ ಅಲ್ಲಿ ಅರ್ಧದಷ್ಟು ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ. ಬಿಹಾರದಲ್ಲಿ ಬಿಜೆಪಿಯ ಪಾಲಿಗೆ ನಿತೀಶರ ಜೆಡಿಯು ಒಂದು ಹೊರೆಯಾಗಿದೆ. ಅಲ್ಲಿ ತೇಜಸ್ವಿ ಯಾದವ್ ಜನಪ್ರಿಯರಾಗಿರುವುದರಿಂದ ಈ ಹಿಂದೆ ಗೆದ್ದ ಎಲ್ಲ ಸೀಟುಗಳನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಅಸಾಧ್ಯ.

ಜಾರ್ಖಂಡ, ಕಾಶ್ಮೀರ

ಹೇಮಂತ ಸೊರೇನ್ ಬಂಧನ ಜಾರ್ಖಂಡದಲ್ಲಿ ಬಿಜೆಪಿಗೆ ತಿರುಗುಬಾಣವಾಗಲಿದೆ. ಪಂಜಾಬ್, ಹರ್ಯಾಣದಲ್ಲಿ ರೈತ ಹೋರಾಟದ ಕಾರಣ ಮತ್ತು ಅಗ್ನಿವೀರ ಯೋಜನೆಯಿಂದ ಬಿಜೆಪಿಗೆ ದೊಡ್ಡ ಹೊಡೆತ ಸಿಗಲಿದೆ. ಕಾಶ್ಮೀರದ ಮೂರು ಸ್ಥಾನಗಳಿಗೆ ಬಿಜೆಪಿ ತನ್ನ ಉಮೇದುವಾರರನ್ನೇ ಕಣಕ್ಕಿಳಿಸಿಲ್ಲ.

ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚಿನ ಹಾನಿಯಾಗಲಾರದು. ಬಂಗಾಳ (ಇಂಡಿಯಾ ಪಕ್ಷಗಳೊಂದಿಗೆ ಟಿ ಎಂ ಸಿ ಮೈತ್ರಿ ಮಾಡದ ಕಾರಣ), ಆಂಧ‍್ರಪ್ರದೇಶ (ಟಿಡಿಪಿಯೊಂದಿಗೆ ಮೈತ್ರಿ). ಒಡಿಶಾದಲ್ಲಿ ಬಿಜೆಪಿಗೆ ಒಂದಷ್ಟು ಲಾಭವಾಗಲಿದೆ. ಆದರೆ ಈ ಲಾಭ ಇತರೆಡೆಗಳ ನಷ್ಟವನ್ನು ಸರಿದೂಗಿಸಲಾರದು.

ಹಣೆಬರಹ ನಿರ್ಧರಿಸಲಿರುವ ಉತ್ತರಪ್ರದೇಶ

ತುಂಬಾ ಆಸಕ್ತಿಕರವಾಗಿರುವುದು ಮತ್ತು ಈ ಬಾರಿಯ ಚುನಾವಣೆಯ ಹಣೆಬರಹ ನಿರ್ಧರಿಸಲಿರುವುದು 80 ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶ. ಉತ್ತರಪ್ರದೇಶದಲ್ಲಿ ಯೋಗೇಂದ್ರ ಯಾದವ್, ಅಜಿತ್ ಅಂಜುಂ, ಆರ್ಫಾ ಖಾನುಮ್ ಶೇರ್ವಾನಿ, ಸಂಕರ್ಶಣ್ ಥಾಕೂರ್ ಮೊದಲಾದವರು ವ್ಯಾಪಕವಾಗಿ ತಿರುಗಾಡಿ ಜನರ ನಾಡಿಮಿಡಿತ ಅರಿಯಲು ಯತ್ನಿಸಿದ್ದಾರೆ.

ಅವರೆಲ್ಲ ಹೇಳುವ ಪ್ರಕಾರ, ಜನರಲ್ಲಿ ಬಿಜೆಪಿ ಬಗ್ಗೆ ಭ್ರಮ ನಿರಸನ ಉಂಟಾಗಿದೆ. ಅನೇಕರು ಭಯದಿಂದ ಬಹಿರಂಗವಾಗಿ ಹೇಳಲು ಸಿದ್ಧರಿಲ್ಲ. ನಿರುದ್ಯೋಗ ಸಮಸ್ಯೆ ಭೀಕರವಾಗಿ ಕಾಡುತ್ತಿರುವುದು, ಇದರಿಂದಾಗಿ ಹೊಟ್ಟೆ ಹೊರೆಯುವುದು ಕಷ್ಟವಾಗಿರುವುದನ್ನು ಮತದಾರರು ಮನಬಿಚ್ಚಿ ಹೇಳಿಕೊಳ್ಳುತ್ತಿದ್ದಾರೆ. ‘ಮೋದಿಯವರು ಏನೋ ದೊಡ್ಡದನ್ನು ಸಾಧಿಸುತ್ತಾರೆ, ಅಚ್ಚೇದಿನ ತರುತ್ತಾರೆಂದು ಓಟು ಹಾಕಿದೆವು. 15 ಲಕ್ಷ ಹೋಗಲಿ, ಅದು ಜುಮ್ಲಾ ಎಂದು ಗೊತ್ತು, ಆದರೆ ಅಚ್ಚೇದಿನ ಎಲ್ಲಿದೆ?’ ಎಂದು ಅವರು ಕೇಳುತ್ತಿದ್ದಾರೆ.

ಬಿಜೆಪಿಗೆ ಎಲ್ಲ ಸ್ಥಾನಗಳು ಎಂಬ ಭರವಸೆಯನ್ನು ಆರಂಭದಲ್ಲಿ ಮೂಡಿಸಿದ್ದ ಉತ್ತರಪ್ರದೇಶದಲ್ಲಿ ಇನ್ನೂ ಎರಡು ಸಂಗತಿಗಳು ಆಟ ಆಡುತ್ತಿವೆ. ಅಲ್ಲಿ ಅಖಿಲೇಶ್ ಯಾದವ್ ಜನಪ್ರಿಯರಾಗುತ್ತಿದ್ದಾರೆ. ಅಲ್ಲಿನ ಬಿಎಸ್ ಪಿ ಮತದಾರರಿಗೆ ಸಮಾಜವಾದಿ ಪಕ್ಷ (ಸಪಾ) ಕಂಡರೆ ಆಗುವುದಿಲ್ಲ. ಆದರೆ ಸಪಾ ಜತೆಯಲ್ಲಿ ಈ ಬಾರಿ ಕಾಂಗ್ರೆಸ್ ಇರುವುದರಿಂದ ಬಿ ಎಸ್ ಪಿಯ ಅನೇಕ ಮತದಾರರು ಇಂಡಿಯಾ ಮೈತ್ರಿಕೂಟದತ್ತ ಸರಿದಿದ್ದಾರೆ.‌

ದೂರ ಸರಿದ ದಲಿತರು; ಕಾರಣ ಏನು?

ದಲಿತ ಮತಗಳು ಬಿಜೆಪಿಯಿಂದ ದೂರ ಸರಿಯಲು ಇನ್ನೂ ಒಂದು ಕಾರಣವಿದೆ. ಅದು ಬಿಜೆಪಿ ಮಾಡಿದ ಸ್ವಯಂಕೃತ ಅಪರಾಧ. ಯಾವತ್ತು ಈ ಬಾರಿ ನಮಗೆ 400 ಸೀಟು ಬೇಕು ಎಂದು ಮೋದಿ ಸಹಿತ ಬಿಜೆಪಿಗರು ಮತ್ತು ಗೋದಿ ಮಾಧ್ಯಮ ಹೇಳ ತೊಡಗಿತೋ, ಬಿಜೆಪಿಯ ಅನೇಕ ನಾಯಕರು ‘ಸಂವಿಧಾನ ಬದಲಿಸಲು 400 ಸ್ಥಾನ ಬೇಕು’ ಎಂದು ಬಹಿರಂಗವಾಗಿ ಹೇಳಲಾರಂಭಿಸಿದರೋ, ಇದು ಬಿಜೆಪಿಗೆ ತಿರುಗುಬಾಣವಾಯಿತು. ‘ಬಿಜೆಪಿ ಸಂವಿಧಾನವನ್ನು ಬದಲಿಸಲಿದೆ ಮತ್ತು ಬಾಬಾ ಸಾಹೇಬರ ನೆನಪನ್ನು ಅಳಿಸಿಹಾಕಲಿದೆ’ ಎಂದು ಯಾವತ್ತು ಅನುಮಾನ ಮೂಡಿತೋ ಮತ್ತು ರಾಹುಲ್ ಗಾಂಧಿ ಆದಿಯಾಗಿ ಇಂಡಿಯಾ ಕೂಟದ ನಾಯಕರು ಅದನ್ನೇ ಹೇಳ ತೊಡಗಿದರೋ, ದಲಿತರಲ್ಲಿ ಬಿಜೆಪಿ ಬಗ್ಗೆ ಆತಂಕ ಬಲಗೊಳ್ಳಲಾರಂಭಿಸಿತು. ‘ನಾವು ಬಿಎಸ್ ಪಿ ಯವರು, ಆದರೂ ಈ ಬಾರಿ ಕಾಂಗ್ರೆಸ್ ಗೆ ಓಟು ಹಾಕಿದ್ದೇವೆ’ ಎಂದು ಅವರು ಬಹಿರಂಗವಾಗಿಯೇ ಹೇಳಲಾರಂಭಿಸಿದರು. ಇದನ್ನು CSDS ನ (ಸಮೀಕ್ಷಾ ಸಂಸ್ಥೆ) ಸಂಜಯ್ ಕುಮಾರ್ ಸ್ವತಃ ದೃಢಪಡಿಸಿದ್ದಾರೆ.

ಬಿಜೆಪಿಗೆ ಬಹುಮತ ಅಸಂಭವ

ಒಟ್ಟಿನಲ್ಲಿ ಜೂನ್ 4 ರ ಫಲಿತಾಂಶ ಬಿಜೆಪಿಯ ನಿರೀಕ್ಷೆಯಂತೆ ಇರುವುದಿಲ್ಲ. 300, 400 ಬಿಡಿ, ಅನೇಕ ಸಮೀಕ್ಷಕರು ಹೇಳುವಂತೆ ಬಿಜೆಪಿ ತನ್ನ ಹಿಂದಿನ ಸ್ಥಾನಗಳಲ್ಲಿಯೇ ಕನಿಷ್ಠ 50 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಅದರ ಮೈತ್ರಿ ಪಕ್ಷಗಳ ಸೀಟುಗಳನ್ನು ಸೇರಿಸಿದರೂ ಬಹುಮತದ ಗಡಿ ದಾಟುವುದು ಕಷ್ಟವಾಗಬಹುದು (ಬಿಜೆಪಿಗೆ ಸ್ವಂತ ಬಲದಿಂದ ಸರಕಾರ ರಚಿಸುವುದು ಸಾಧ್ಯವಾಗದಿದ್ದರೆ ಮೋದಿಯವರು ಮತ್ತೆ ಪ್ರಧಾನಿಯಾಗುವುದಿಲ್ಲ, ಅವರನ್ನು ಮಾರ್ಗದರ್ಶಕ ಮಂಡಳಕ್ಕೆ ಕಳುಹಿಸಲು ಆರೆಸೆಸ್ ಸಿದ್ಧತೆ ನಡೆಸಿದೆ ಎಂಬ ಗುಸು ಗುಸು ಕೂಡಾ ಇದೆ).

‘ದಿ ಟೆಲಿಗ್ರಾಫ್’ ಗಾಗಿ ಸಂಕರ್ಶಣ್ ಥಾಕೂರ್ ನಡೆಸಿದ ವರದಿ ಹೇಳುವ ಪ್ರಕಾರ, ಉತ್ತರಪ್ರದೇಶದ ಮತದಾರನೊಬ್ಬ ಹೀಗೆ ಹೇಳುತ್ತಾನೆ- “ಲಗೇಗಾ ಝಟ್ಕಾ, ಟೈಮ್ ಆಗಯಾ ಓಟ್ ಕಾ ತಮಾಚಾ ಲಗಾನೇ ಕಾ, ಭಾಷಣ್ ಭಾಷಣ್ ಭಾಷಣ್, ಯಹಾಂ ಆದ್ಮಿ ಬಿನಾ ಕಾಮ್, ಬಿನಾ ಖಾನೇ ಮರ್ ರಹೇ ಹೆ (ಬರೇ ಭಾಷಣ ಭಾಷಣ ಭಾಷಣ, ಇಲ್ಲಿ ಜನ ಉದ್ಯೋಗ ಇಲ್ಲದೆ ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆ, ಓಟಿನ ಮೂಲಕ ತಪರಾಕಿ ನೀಡುವ ಸಮಯ ಬಂದಿದೆ)”. ಈ ಅಂಡರ್ ಕರೆಂಟ್ ಕೆಲಸ ಮಾಡಿದರೆ ಈ ಬಾರಿ ಬಿಜೆಪಿ ಧೂಳೀಪಟ ಆದರೂ ಅಚ್ಚರಿಯಿಲ್ಲ.

ಶ್ರೀನಿವಾಸ ಕಾರ್ಕಳ

ಸಾಮಾಜಿಕ ಚಿಂತಕರು

ಇದನ್ನೂ ಓದಿ- ಹುಚ್ಚು ದೊರೆಯ ಹತಾಶ ಮುಖಗಳು

More articles

Latest article