ಹಾಸನ ಮಣ್ಣಿನ ‘ಹೆಣ್ಣು ಕಥೆ’ಗಳ ಆಲಿಸುತ್ತಾ… ದಾಖಲಿಸುತ್ತಾ…

“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಹಾಸನ”ವು 2026ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಈ ಬಾರಿ ಹಾಸನದಲ್ಲಿ “ಮಹಿಳಾ ಚೈತನ್ಯ ದಿನ”ವಾಗಿ ಆಚರಿಸುತ್ತಾ, ಮಹಿಳಾ ಜಾಗೃತಿ ಸಮಾವೇಶವನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಹೊರತರಲಾಗಿರುವ ಸಾಂದರ್ಭಿಕ ಗ್ರಂಥ “ಹಾಸನ ಮಣ್ಣಿನ ಹೆಣ್ಣು ದನಿಗಳು” ಕೃತಿಗೆ ಸಾಹಿತಿ ರೂಪ ಹಾಸನ ಅವರು ಸಂಪಾದಕೀಯ ಮಂಡಳಿಯ ಪರವಾಗಿ ಬರೆದ ನುಡಿ ಇಲ್ಲಿದೆ.

   ಹೆಣ್ಣನ್ನಳೆಯುವ ಮಾನದಂಡಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ನಿಗದಿ ಮಾಡಿರುವ ಪುರುಷ ಕೇಂದ್ರಿತ ಈ ಸಮಾಜದಲ್ಲಿ ಹಾಗೂ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳೂ ಇದೇ ನಿಜವೆಂದು ನಂಬಿ ತಮ್ಮಾಳದ ಸ್ವಾಯತ್ತ ಹೆಣ್ಣಿನ ಅಂತಃಸತ್ವ ಮರೆತು ಬದುಕುತ್ತಿರುವ ಸ್ಥಿತಿಯಲ್ಲಿ- ಹೆಣ್ಣು ಸಂಕುಲ ತನ್ನ ನಿಜ ಅಸ್ತಿತ್ವವನ್ನು ಸ್ಥಾಪಿಸುವುದು ಹಾಗೂ ಅಸ್ಮಿತೆಯನ್ನು ಕಂಡುಕೊಳ್ಳುವುದು ಎರಡೂ ಕ್ಲಿಷ್ಟ ಮತ್ತು ಸವಾಲಿನ ಕೆಲಸ. ಇದರ ಮಧ್ಯೆಯೂ ಹೆಣ್ಣು ತನ್ನಷ್ಟಕ್ಕೆ ತಾನೇ ಮೌನವಾಗಿ ತನ್ನ ಪರಿಧಿಯೊಳಗೇ- ಬದುಕುತ್ತಾಳೆ, ಪ್ರೀತಿಸುತ್ತಾಳೆ, ಒಗ್ಗೂಡಿಸುತ್ತಾಳೆ, ಸಲಹುತ್ತಾಳೆ, ಕ್ಷಮಿಸುತ್ತಾಳೆ, ಸಹಿಸುತ್ತಾಳೆ, ಹಾಡುತ್ತಾಳೆ, ನಗುತ್ತಾಳೆ, ಅರಳುತ್ತಾಳೆ… ಅವಳದು ಮುಗಿವಿಲ್ಲದ ಜೀವಂತಿಕೆಯ ಕಥೆಗಳು.

   ಆದರೆ ಪುರುಷ ಸ್ಥಾಪಿತ ಹೆಣ್ಣನ್ನಳೆಯುವ ಮಾನದಂಡದ ಚೌಕಟ್ಟಿಗೆ ಇದವಳ ಸಾಧನೆಯಲ್ಲ! ಸಮಾಜಕ್ಕೆ ನೀಡಿದ ಕೊಡುಗೆಯಲ್ಲ! ಈ ಹಿನ್ನೆಲೆಯಲ್ಲಿ ಮಹಿಳಾ ಪರವಾಗಿ ಯೋಚಿಸುವ ವ್ಯಕ್ತಿಗಳು, ಸಂಸ್ಥೆಗಳು, ಸಂಘಟನೆ… ಯಾರೇ ಆದರೂ ಗಂಡು ಕಟ್ಟಿರುವ, ಕಟ್ಟುವ History

(ಅವನ ಕಥೆ)ಗೆ ಪರ್ಯಾಯವಾಗಿ ಹೆಣ್ಣು ಕಟ್ಟಿಕೊಡುವ Her story (ಅವಳ ಕಥೆ) ರೂಪಿಸಬೇಕೆಂಬ ಕನಸನ್ನು ಆಳದಲ್ಲಿ ಹೊಂದಿರುತ್ತಾರೆ. ಇದು ಹೆಣ್ಣು ಮಾದರಿ, ಹೆಣ್ಣು ದಾರಿ, ಹೆಣ್ಣು ದನಿಯನ್ನು ಹುಡುಕಿಕೊಳ್ಳುವ ಮಹತ್ವದ ಕೆಲಸ. ಹೀಗಾಗಿ ಹೆಣ್ಣುಮಕ್ಕಳ ಕೆಲಸ, ಕೊಡುಗೆ, ಸಾಧನೆಯನ್ನು ಅಳೆಯುವ ಮಾನದಂಡವೇ ನಿಜವಾಗಿಯೂ ಬೇರೆಯಾದುದು. ಅದು ಢಾಳಾಗಿ ಗೋಚರಿಸುವ ಪುರುಷ ಮಾದರಿಗಳಂತಲ್ಲ. ಹೀಗಾಗಿ ನಾವದನ್ನು ಅವಲಂಬಿಸಬಾರದು. ಹೆಣ್ಣುಸಂಕುಲ- ಸಮಾಜದ ಮಣ್ಣನ್ನು ಹದಗೊಳಿಸಲು ಸದ್ದಿಲ್ಲದೇ, ಮೌನವಾಗಿ ದುಡಿಯುವ, ಮಿಡಿಯುವ, ವಿಭಿನ್ನ, ಅನನ್ಯ ಜೀವಗಳನ್ನೊಳಗೊಂಡ ಸತ್ವಶಾಲಿ, ಕ್ರಿಯಾಶಾಲಿ ಸಮುದಾಯ. ಹೀಗಾಗಿ ಹೆಣ್ಣುಸಂಕುಲವನ್ನು ಇಡಿಯಾಗಿ ಒಳಗೊಂಡು ಸೂಕ್ಷ್ಮವಾಗಿ, ಬಹು ಎಚ್ಚರಿಕೆಯಿಂದ ಅರಿಯಬೇಕು, ದಾಖಲಿಸಬೇಕು. ಆ ಕನಸಿನ ಭಾಗವಾಗಿ ಈ ಸಾಂದರ್ಭಿಕ ಸಂಚಿಕೆಯನ್ನು ಹೊರತರಲು ಪ್ರಯತ್ನಿಸಲಾಯ್ತು. ಇದೊಂದು ಬಹು ದೊಡ್ಡ ಕನಸು. ನಮ್ಮದು ಇದು ಅವಸರದ ಪುಟ್ಟ ಪ್ರಯತ್ನ!

   ಈ ಬಾರಿ ಹಾಸನದಲ್ಲಿ ಮಹಿಳಾ ಸಮಾವೇಶ ನಡೆಸುವ ಹಿನ್ನೆಲೆಯಲ್ಲಿ ಕಳೆದ 7-8 ತಿಂಗಳಿನಿಂದ ಮಹಿಳೆ ಮತ್ತು ಮಕ್ಕಳ ಸಂಬಂಧಿತ ಹಲವು ರೀತಿಯ ಚಟುವಟಿಕೆಗಳು ನಡೆಯುತ್ತಾ ಬಂದಿವೆ. ಆದರೆ ಇಂತಹದೊಂದು ಸಾಂದರ್ಭಿಕ ಗ್ರಂಥವನ್ನು ಹೊರತರುವ ಯಾವ ಚರ್ಚೆ, ಸಿದ್ಧತೆ, ಮಾತುಕತೆಯೂ ಆಗ ನಮ್ಮಲ್ಲೇನೂ ಆಗಿರಲಿಲ್ಲ. ಸಮಾವೇಶದ ಸಿದ್ಧತೆಗಾಗಿ ಮಾಡಿದ್ದ ವಾಟ್ಸ್ ಆಪ್  ಗುಂಪು, ಚಟುವಟಿಕೆಯಿಂದ ಇರಬೇಕೆಂಬ ಉದ್ದೇಶದಿಂದ- ಈಗಾಗಲೇ ಬರೆದು ಪ್ರಕಟವಾಗಿದ್ದ ಹಾಸನದ ಮಹಿಳಾ ಸಾಧಕರ ಕುರಿತ ಕೆಲ ಬರಹಗಳನ್ನು ಅಲ್ಲಿ ಪ್ರಕಟಿಸಲು ಪ್ರಾರಂಭಿಸಲಾಯ್ತು. ಮುಂದೆ ಅವುಗಳನ್ನೇ ಸರಣಿ ರೂಪದಲ್ಲಿ ಪತ್ರಿಕೆಗಳಲ್ಲಿ ಪ್ರಕಟಿಸುವ ಬಗ್ಗೆಯೂ ಯೋಚಿಸಲಾಗಿತ್ತು. ಗುಂಪಿನಲ್ಲಿ ಇದ್ದ ಆಸಕ್ತರಿಗೆ ಈ ಮಾದರಿಗಳನ್ನು ಅನುಸರಿಸಿ ತಾವೂ ಲೇಖನಗಳನ್ನು ಬರೆಯಬಹುದೆಂದು ಪ್ರೇರಣೆ ನೀಡಿದಾಗ, ಹಲವಾರು ಮಂದಿ ಈಗಾಗಲೇ ಬರಹಗಾರ್ತಿಯರಾಗಿ ರೂಪುಗೊಂಡಿದ್ದ ಮತ್ತು ಉದಯೋನ್ಮುಖ ಬರಹಗಾರ್ತಿಯರು ತಾವೇ ಕೆಲ- ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರು, ಪ್ರತಿಭಾವಂತೆಯರು, ಸರಳ, ವಿರಕ್ತ, ವಿಭಿನ್ನ, ಅಪರೂಪದ ವ್ಯಕ್ತಿತ್ವ… ಮುಂತಾದವರ ಕುರಿತು ಬರೆಯುವುದಾಗಿ ಘೋಷಿಸುತ್ತಾ ಹೋದರು. ಈ ಆಯ್ಕೆಗಳು ಅವರವರ ವೈಯಕ್ತಿಕ ನೆಲೆಯವು. 

   ಆದರೆ ನಾವು ಮುಖ್ಯವಾಗಿ ಹುಡುಕಬೇಕಾದ್ದು, ದಾಖಲಿಸಬೇಕಾದ್ದು- ಮೇಲ್ಗಡೆಯೇ ಕಣ್ಣಿಗೆ ಕಾಣುವ ಕಾಂಡ, ಕೊಂಬೆರೆಂಬೆ, ಚಿಗುರುಗಳ ಬಗೆಗೆ ಮಾತ್ರವೆ? ಕಣ್ಣಿಗೆ ಕಾಣದೇ ಒಳಗೇ ಮಣ್ಣನ್ನು ಫಲವತ್ತುಗೊಳಿಸುತ್ತಾ ಮೇಲಿನ ಮರವು ನಳನಳಿಸಲು ಕಾರಣವಾದ ಆಳದಲ್ಲಿ ಹುದುಗಿರುವ ಬೇರುಗಳೂ ದಾಖಲಾಗಬೇಕಲ್ಲವೇ? ಆ ಸಂದರ್ಭದಲ್ಲೇ ಸಾಮುದಾಯಿಕ, ಸಾಂಸ್ಥಿಕ, ಸಂಘಟನಾತ್ಮಕ, ತಾಯಿ ಬೇರುಗಳ ವ್ಯಕ್ತಿ ಚಿತ್ರಣವೂ ಒಳಗೊಂಡ ಇಡಿಯಾದ ಸಮಷ್ಟಿ ಪ್ರಜ್ಞೆಯ ಮಹಿಳಾ ಸಮಾವೇಶದ ಸಾಂದರ್ಭಿಕ ಸಂಚಿಕೆಯೊಂದನ್ನೂ ತರಬೇಕೆಂದು ನಿರ್ಧರಿಸಿದ್ದು. ಹೆಚ್ಚು ಸಮಯವೂ ಇರಲಿಲ್ಲ. ಸ್ಥೂಲವಾಗಿ ಒಂದಿಷ್ಟು ಅಳತೆಗೋಲುಗಳನ್ನು ಮಾಡಿಕೊಂಡೆವು. ಕಡಿಮೆ ಸಮಯದಲ್ಲಿ ತಮ್ಮದೇ ಕ್ಷೇತ್ರದ ಬಗ್ಗೆ ಅಥವಾ ಕ್ಷೇತ್ರ ಕಾರ್ಯವನ್ನು ಮಾಡಿ, ಯಾವುದೇ ಪೂರ್ವಗ್ರಹಗಳಿಲ್ಲದೇ ಸಮಚಿತ್ತದಿಂದ, ಸಮತೋಲಿತವಾಗಿ, ಸಮರ್ಪಕವಾಗಿ ಬರೆಯಬಲ್ಲ ಮಹಿಳಾ ಬರಹಗಾರ್ತಿಯರು ಮತ್ತು ಕೆಲವು ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದು ಮಹಿಳಾ ಕೇಂದ್ರಿತವಾಗಿ ಬರೆಯಬಲ್ಲವರಾಗಿದ್ದ ಪುರುಷ ಬರಹಗಾರರನ್ನೂ ಲೇಖನ ಬರೆದುಕೊಡಲು ಮನವಿ ಮಾಡಲಾಯ್ತು. ಇವೆಲ್ಲವೂ ತಿಂಗಳೊಳಗೆ ನಡೆದ ಪ್ರಕ್ರಿಯೆಗಳು. ವಾರದಿಂದ ಒಂದು ತಿಂಗಳೊಳಗೇ ಲೇಖನಗಳು ನಮ್ಮನ್ನು ತಲುಪಿದವು. ಅದರಲ್ಲಿ ಈ ಗ್ರಂಥದ ಚೌಕಟ್ಟಿಗೆ ತೀರಾ ಹೊಂದಿಕೆಯಾಗದ ಕೆಲ ಬರಹಗಳನ್ನು ತೆಗೆದು ಹಾಕಿ, ಮಿಕ್ಕದ್ದರಲ್ಲಿ ಸಾಧ್ಯವಾದಷ್ಟೂ ಸಮರ್ಪಕಗೊಳಿಸಿ, ಹದಗೊಳಿಸಿ, ಸಾಂದರ್ಭಿಕ ಗ್ರಂಥದ ಚೌಕಟ್ಟಿಗೆ ಸಮತೋಲಿತವಾಗಿ ಅಳವಡಿಸುವ ಕೆಲಸ ರಾತ್ರಿ ಹಗಲೂ ಇಡೀ ತಿಂಗಳು ನಡೆದ ನಂತರ ಅದಕ್ಕೊಂದು ಪುಸ್ತಕ ರೂಪ ಬಂತು. 

    ಈ ಸಂಚಿಕೆಯಲ್ಲಿ ಎರಡು ವಿಭಾಗವಿದೆ. ಮೊದಲ ಭಾಗದಲ್ಲಿ ಇಂದು ನಮ್ಮೊಂದಿಗೆ ಇಲ್ಲದ ಹತ್ತು ಮುಖ್ಯ ಮಹಿಳೆಯರ ವ್ಯಕ್ತಿ ಚಿತ್ರಣವಿದೆ. ನಂತರದಲ್ಲಿ ಹಾಸನದಲ್ಲಿ ಸಾಮುದಾಯಿಕವಾಗಿ ಮಹಿಳೆಯರು 20 ಕ್ಷೇತ್ರಗಳಲ್ಲಿ ತೊಡಗಿಕೊಂಡ ಸ್ಥೂಲ ದಾಖಲೀಕರಣವಿದೆ. ನಂತರದಲ್ಲಿ ಸೇವಾ/ಸಂಘಟನಾತ್ಮಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹೆಣ್ಮಕ್ಕಳ ಚಿತ್ರಣವಿದೆ. ಹಾಗೇ ಮುಂದೆ ಕೆಲ ಮಹಿಳಾ ಸಾಂಸ್ಥಿಕ ಕ್ಷೇತ್ರದ ಚಿತ್ರಣಗಳಿವೆ. ಎರಡನೆಯ ಭಾಗದಲ್ಲಿ ವಯಸ್ಸಿನ ಆಧಾರದಲ್ಲಿ ಅವರೋಹಣಗೊಳ್ಳುವ ಮೂರು ವಿಭಾಗಗಳನ್ನು ಮಾಡಿ ಮಹಿಳಾ ವ್ಯಕ್ತಿಚಿತ್ರಗಳು ದಾಖಲಾಗಿವೆ. ಇದು ಸ್ಥೂಲವಾಗಿಯಾದರೂ ಸಾಧ್ಯವಾದಷ್ಟೂ ಪ್ರಾಮಾಣಿಕವಾಗಿ ಸಮಗ್ರವಾಗಿ ಹಾಸನ ಮಣ್ಣಿನ ಹೆಣ್ಣುಸಂಕುಲದ ಕಥೆಗಳನ್ನು ರೂಪಿಸುವ ಅತ್ಯಂತ ಕಿರು ಪ್ರಯತ್ನವೆಂದು ವಿನಮ್ರವಾಗಿ ನಿಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತಿದ್ದೇವೆ. ಎಲ್ಲ ಲೇಖನಗಳೂ ನಾವು ಸೂಚಿಸಿ ಬರೆಸಿದ್ದು ಅಲ್ಲವಾದ್ದರಿಂದ ಮತ್ತು ಎಲ್ಲರೂ ಬರವಣಿಗೆಯಲ್ಲಿ ಪಳಗಿದವರೂ ಅಲ್ಲವಾದ್ದರಿಂದ ಎಲ್ಲ ಲೇಖನಗಳೂ ಒಂದೇ ಗುಣಮಟ್ಟದವು, ಸಮತೋಲನದವು ಆಗಿಲ್ಲದಿರಬಹುದು. ತುರ್ತಿನ ಕಾರಣದಿಂದ ಕೆಲ ಮುಖ್ಯ ಸಾಧಕರನ್ನು ಮರೆತಿರುವ ಸಾಧ್ಯತೆಯೂ ಇದೆ. ಕಡಿಮೆ ಸಮಯದಲ್ಲಿ ಸಿಕ್ಕ ಮಾಹಿತಿಯನ್ನು ಒಳಗೊಂಡು, ಸಾಧ್ಯವಾದಷ್ಟೂ ಕಡೆಯಿಂದ ವಿವರಗಳನ್ನು ಪಡೆದು, ಸಮಯ ಮಿತಿಯ ಒಳಗೇ ಸಂಚಿಕೆಯನ್ನು ತಿಂಗಳೊಳಗೆ ರೂಪಿಸಲಾಗಿದೆ.

    ಇಡಿಯಾಗಿ ಹಾಸನದ ಮಣ್ಣಿಗೆ ಯಾವುದಾದರೂ ರೀತಿಯಲ್ಲಿ ಸಂಬಂಧಿಸಿದ ಹೆಣ್ಣುಜೀವಗಳು- ಜೀವಂತಿಕೆಯಿಂದ ಮಿಡಿದ, ತುಡಿದ ಬಗೆಗಳನ್ನು ಹಾಸನದ ಮಹಿಳಾ ಸಂಕುಲವನ್ನು ಎದೆಗಾನಿಸಿಕೊಂಡು, ಅದರ ಕರುಳ ಮಿಡಿತಕ್ಕಷ್ಟೇ ದನಿಯಾಗಿ ದಾಖಲಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಅಳೆದು, ತೂಗಿ, ಹಿಂಜಿ, ನಿರ್ಧರಿಸಲು- ಪೂರ್ವಸ್ಥಾಪಿತ ತಕ್ಕಡಿ, ಪೂರ್ವ ನಿರ್ಧಾರಿತ ಅಳತೆಗೋಲುಗಳನ್ನು ಇಲ್ಲಿ ಬಳಸಲಾಗಿಲ್ಲ. ಇಲ್ಲಿ ಎಲ್ಲರನ್ನೂ ವಿಶಾಲ ಹೃದಯದಿಂದ ನಮ್ಮವರೆಂದು ಒಳಗೊಳ್ಳುವ ಕೇವಲ… ಪ್ರೀತಿ ಮತ್ತು ಮೈತ್ರಿ ಮಾತ್ರ ಕೆಲಸ ಮಾಡಿದೆ. ಮತ್ತೆ ಮತ್ತೆ ನಾವು ಎಲ್ಲ ಬಗೆಯ ಅಡೆತಡೆಗಳ, ಆಕ್ಷೇಪಗಳ ನಡುವೆಯೂ ಈ ವಿಷಯದಲ್ಲಿ ಖಚಿತವಾಗಿ ದೃಢಪಡಿಸಿಕೊಳ್ಳುತ್ತಾ ಮುನ್ನಡೆದಿದ್ದೇವೆ.

    ನಾವು ಈ ಮೊದಲು ಸಂಚಿಕೆಗೆ ಹಲವು ಹಿರಿಯರು, ಪ್ರಾಜ್ಞರೊಂದಿಗೆ ಚರ್ಚಿಸಿ ತೀರ್ಮಾನಿಸಿದ್ದ ರೂಪಕಾತ್ಮಕವಾದ ಶೀರ್ಷಿಕೆ- ‘ಹಾಸನ ಮಣ್ಣಿನ ಹೆಣ್ಣು ಬೇರುಗಳು’. ಈ ಶೀರ್ಷಿಕೆಯಡಿಯಲ್ಲೇ ಸ್ಥಳೀಯ ಹಾಗೂ ಅಂತರ್ಜಾಲ ಪತ್ರಿಕೆಗಳಲ್ಲಿ ಈ ಸಂಚಿಕೆಯ ಲೇಖನಗಳು ಸರಣಿ ರೂಪದಲ್ಲಿ ಪ್ರಕಟವಾಗುತ್ತಾ ಬಂದಿದ್ದವು. ಪುಸ್ತಕ ರೂಪದಲ್ಲಿ ಹೊರಬರುವ ಕೊನೆಯ ಗಳಿಗೆಯಲ್ಲಿ ಶೀರ್ಷಿಕೆ ಬಗ್ಗೆ ಕೆಲವು ಆಕ್ಷೇಪಣೆ ಕೇಳಿಬಂದಿದ್ದರಿಂದ ಎಲ್ಲರಿಗೂ ತಕ್ಷಣಕ್ಕೆ ನೇರವಾಗಿ ಅರ್ಥವಾಗುವ ಶೀರ್ಷಿಕೆಯೊಂದನ್ನು ಪುಸ್ತಕಕ್ಕೆ ಇಡಬೇಕೆಂದು ಮರು ತೀರ್ಮಾನಿಸಲಾಯ್ತು. ಅದರಂತೆ ಮಹಿಳಾ ಸಮಾವೇಶದ ಕೇಂದ್ರ ಒಕ್ಕೂಟದ ಸದಸ್ಯರನ್ನೂ ಒಳಗೊಂಡ, ಸಮಾವೇಶದ ಆಂತರಿಕ ಸಮಿತಿಯ ಸಭೆಯಲ್ಲಿ ಈ ಸಾಂದರ್ಭಿಕ ಗ್ರಂಥದ ಶೀರ್ಷಿಕೆಯನ್ನು “ಹಾಸನ ಮಣ್ಣಿನ ಹೆಣ್ಣು ದನಿಗಳು” ಎಂದು ನಿರ್ಧರಿಸಲಾಯ್ತು.

   ಅನೇಕ ವೈಯಕ್ತಿಕ ಒತ್ತಡ, ದೈನಂದಿನ ವೃತ್ತಿ ಬದುಕು, ಜಂಜಡಗಳ ಮಧ್ಯೆಯೂ ನಿಗದಿತ ಸಮಯಕ್ಕೆ ಲೇಖನಗಳನ್ನು ಬರೆದುಕೊಡುವ ಸವಾಲನ್ನೂ ಸ್ವೀಕರಿಸಿ ಜೊತೆಯಾದ ಎಲ್ಲಾ ಬರಹಗಾರ ಸೋದರಿಯರಿಗೂ ನಮ್ಮ ಹೃದಯಪೂರ್ವಕ ಧನ್ಯವಾದಗಳು. ಮಹಿಳೆಯರ ಪುಸ್ತಕಕ್ಕೆ ನಮ್ಮ ಲೇಖನವೇಕೆ? ಎಂದು ದೂರ ನಿಲ್ಲದೇ ಕೇಳಿದೊಡನೆ ಒಪ್ಪಿ ಲೇಖನ ಬರೆದುಕೊಟ್ಟ ಬರಹಗಾರ ಸಹೋದರರಿಗೂ ನಮ್ಮ ಮನಃಪೂರ್ವಕ ನಮನಗಳು. ಈ ಸಂಚಿಕೆಗಾಗಿ ಅವಶ್ಯಕವಿದ್ದ ಮಾಹಿತಿ, ಅಂಕಿಸಂಖ್ಯೆ, ವಿವರ, ಕ್ಷೇತ್ರ ಮಾಹಿತಿಯನ್ನು ಒದಗಿಸಿದ ಎಲ್ಲ ಸಹೃದಯರಿಗೆ ಮನದುಂಬಿ ವಂದನೆಗಳು. ಪುಸ್ತಕ ಸಕಾಲಕ್ಕೆ ಹೊರಬರಲು ಕಾರಣಕರ್ತರಾದ ಸಮಾವೇಶದ ಬಳಗದ ಎಲ್ಲರಿಗೂ, ಜೊತೆಯಾದ ಆಪ್ತರಿಗೂ ಪ್ರೀತಿಯ ನಮನಗಳು. ಹಾಗೆ ಇಲ್ಲಿನ ಲೇಖನಗಳನ್ನು ದಿನವೂ ಸರಣಿಯಲ್ಲಿ ಪ್ರಕಟಿಸಿದ ಜೇನುಗಿರಿ, ಹಾಸನವಾಣಿ, ಹಾಸನ ಮಾಧ್ಯಮ, ಜನತಾ ಮಾಧ್ಯಮ… ಮುಂತಾದ ಸ್ಥಳೀಯ ದಿನಪತ್ರಿಕೆ ಹಾಗೂ ಈ ದಿನ.ಕಾಂ ಮತ್ತು ಕನ್ನಡ ಪ್ಲಾನೆಟ್ ಅಂತರ್ಜಾಲ ಪತ್ರಿಕೆಗಳ ಸಂಪಾದಕ ಬಳಗಕ್ಕೆ ಗೌರವದ ನಮನಗಳು. ನಿತ್ಯವೂ ತಪ್ಪದೇ ಎಲ್ಲಾ ಪತ್ರಿಕೆಗಳಿಗೂ ಲೇಖನಗಳನ್ನು ಮೈಲ್ ಮಾಡುತ್ತಿದ್ದ ಯುವ ಗೆಳತಿ ಗಿರಿಜಾ ಎಸ್.ಜಿ., ಪುಸ್ತಕದ ಲೇಔಟ್‍ನ್ನು ಅತ್ಯಂತ ಕಡಿಮೆ ಸಮಯದಲ್ಲಿ ಅಚ್ಚುಕಟ್ಟಾಗಿ ರೂಪಿಸಿ ಕೊಟ್ಟ ಪ್ರೀತಿಯ ಎಸ್.ಎಸ್.ಕಾವೇರಿ ಮತ್ತು ಎಚ್.ಕೆ.ಶರತ್ ದಂಪತಿಗಳಿಗೆ, ಚೆಂದದ ಮುಖಪುಟ ರೂಪಿಸಿಕೊಟ್ಟ ಗೆಳತಿ ಐರಿನ್ ಆರತಿ ಅವರಿಗೆ ಅಕ್ಕರೆಯ ವಂದನೆಗಳು. ಪುಸ್ತಕದ ಕರಡನ್ನು ಕಣ್ಣಲ್ಲಿ ಕಣ್ಣಿಟ್ಟು ಎರಡು ಮೂರು ಬಾರಿ ಓದಿ ತಿದ್ದಿ ಕೊಟ್ಟ ಯುವ ಗೆಳತಿ ರೇಖಾ ಹೊಸಹಳ್ಳಿಗೆ ನನ್ನಿ. ಪುಸ್ತಕವನ್ನು ಕಡಿಮೆ ಖರ್ಚಿನಲ್ಲಿ ಚೆಂದವಾಗಿ ಮುದ್ರಿಸಬೇಕೆಂದು ಹಲವು ಕಡೆಗಳಲ್ಲಿ ವಿಚಾರಿಸಿ, ಮುದ್ರಣ ಮಾಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡ ಮಿತ್ರ ಅರಕಲಗೂಡು ಜಯಕುಮಾರ್ ಅವರಿಗೆ ಸ್ನೇಹದ ನಮನಗಳು. ಹೀಗೆ ಒಗ್ಗೂಡಿ ಕೆಲಸ ಮಾಡುವುದೇ ಅಲ್ಲವೇ ನಾವು ಕೂಡಿ ಕಟ್ಟಲಿರುವ ಸಮಾಜದ ನಿಜ ಆಶಯ?

   ಹಾಸನ ಮಣ್ಣಿನ ಹೆಣ್ಣು ದನಿಗಳನ್ನು ಹುಡುಕಲು ಇದು ಮೊದಲ ಹೆಜ್ಜೆಯಷ್ಟೇ. ಸಾಗಬೇಕಾದ ದಾರಿ ಇನ್ನೂ ಬಹಳಾ ದೂರವಿದೆ. ನಾವು ಬಿಡಿಬಿಡಿಯಾಗಿ ನಮ್ಮನ್ನು ನೋಡಿಕೊಳ್ಳದೇ, ಚದುರಿ ಛಿದ್ರಗೊಳ್ಳದೇ, ಇಡಿಯಾಗಿ ಹಾಸನದ ಹೆಣ್ಣುಸಂಕುಲದ ತಲೆಮಾರುಗಳ ಜೀವ ಚಲನೆಯನ್ನು ಅರಿಯುತ್ತಾ, ಬೆರಗಾಗುತ್ತಾ, ನಮಿಸುತ್ತಾ, ಧನಾತ್ಮಕ ಮಾದರಿಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾ, ದಾಖಲಿಸುತ್ತ್ತಾ ಸಾಗಬೇಕು… ಇಷ್ಟಕ್ಕೆ ಮುಗಿಯುವುದಲ್ಲ ಈ ‘ಇವಳ ಕಥೆಗಳ’ ದಾಖಲೀಕರಣದ ಪ್ರಕ್ರಿಯೆ. ಮತ್ತೊಂದು, ಮಗದೊಂದು ಇನ್ನೊಂದು ಗುಣಾತ್ಮಕವಾದ ದಾಖಲೆಗಳು ಹೊರಬರಲಿ. ಮುಂದಿನವರು ಇದನ್ನು ಮಾಡುತ್ತಾ ಹೋಗಲಿ ಎಂಬ ಆಶಯದೊಂದಿಗೆ, ಒಗ್ಗೂಡಿ ಸಮಾಜ ಕಟ್ಟುವ ಪ್ರೀತಿ ಎಲ್ಲರಲಿ ಬರಲಿ ಎಂಬುದಷ್ಟೇ ಹೃದಯದಾಳದ ಹಾರೈಕೆ.

 ರೂಪ ಹಾಸನ

ಸಂಪಾದಕ ಮಂಡಳಿಯ ಪರವಾಗಿ

More articles

Latest article

Most read