ಬೆಂಗಳೂರು: ಲಿಂಗಾಯತರು ವೀರಶೈವರಲ್ಲ. ವೀರಶೈವ ಎನ್ನುವುದು ಧರ್ಮ ಅಲ್ಲ, ಬದಲಾಗಿ ಲಿಂಗಾಯತ ಧರ್ಮದ ಒಳಪಂಗಡ ಮಾತ್ರ. ಆದರೂ ಮುಂಬರುವ ಜನಗಣತಿಯಲ್ಲಿ ವೀರಶೈವ ಎಂದು ಬರೆಯಿಸಿ ಎಂದು ಕರೆ ನೀಡಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕರೆಗೆ ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಅಧ್ಯಕ್ಷ ಓಂಕಾರ ಚೋಂಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ರಾಜ್ಯಾದ್ಯಂತ ಸೆ.22ರಿಂದ ಆರಂಭವಾಗಲಿರುವ ಜಾತಿಗಣತಿಯಲ್ಲಿ ವೀರಶೈವ-ಲಿಂಗಾಯತ ಎಂದು ಬರೆಸುವಂತೆ, ಸಮಾಜದ ಬಾಂಧವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷ ಹಾಗೂ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಮನವಿ ಮಾಡಿದ್ದರು.
ಮಹಾಸಭಾ ವೀರಶೈವ ಲಿಂಗಾಯತ ಧರ್ಮದ ಪ್ರತಿಪಾದನೆ ಮಾಡುತ್ತಾ ಬಂದಿದೆ. ಹೀಗಾಗಿ ಧರ್ಮದ ಕಾಲಂನ ಇತರೆ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು. ಜಾತಿಯ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದು ಬರೆಸುವಂತೆ ಹಾಗೂ ಉಪ ಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಉಪಜಾತಿ ಹೆಸರು ಬರೆಸುವಂತೆ ಅವರು ಕರೆ ನೀಡಿದ್ದರು.
ಸಚಿವರ ಹೇಳಿಕೆಗೆ ಓಂಕಾರ ಚೋಂಡಿ ತಿರುಗೇಟು ನೀಡಿದ್ದು, ಬಸವ ಧರ್ಮ, ಲಿಂಗಾಯತ ಧರ್ಮ ಅರ್ಥ ಆಗದೆ ಇರುವ ರಾಜಕಾರಣಿಗಳು ತಮ್ಮ ಅಧಿಕಾರಕ್ಕಾಗಿ ಬಸವಾದಿ ಶರಣರು ಕಟ್ಟಿದ ಲಿಂಗಾಯತ ಧರ್ಮ ಕುರಿತು ಬಾಯಿಗೆ ಬಂದಂತೆ ತಮ್ಮ ನಾಲಿಗೆ ಹರಿಬಿಡುತ್ತಿದ್ದಾರೆ ಎಂದರು.
ನಿಮ್ಮ ಜನನ ಪ್ರಮಾಣ ಪತ್ರದಲ್ಲಿ ಮತ್ತು ನಿಮ್ಮ ತಂದೆ ಅವರ ಜನನ ಪ್ರಮಾಣ ಪತ್ರದಲ್ಲಿ ಏನೆಂದು ಬರೆದಿದೆ ಎಂದು ನಿಮಗೆ ತಿಳಿದಿದೆಯೇ? ಲಿಂಗಾಯತ ಎಂದೇ ಬರೆಸಿದಿದ್ದಾರೆಯೇ ಹೊರತು, ವೀರಶೈವ ಎಂದು ಬರೆದಿಲ್ಲ. ವೀರಶೈವ ಎನ್ನುವುದು ಧರ್ಮ ಅಲ್ಲ, ಬದಲಾಗಿ ಲಿಂಗಾಯತ ಧರ್ಮದ ಒಳಪಂಗಡ ಮಾತ್ರ. ಆದರೂ ಮುಂಬರುವ ಜನಗಣತಿಯಲ್ಲಿ ವೀರಶೈವ ಎಂದು ಬರೆಯಿಸಿ ಎಂದು ಕರೆ ನೀಡಲು ಲಿಂಗಾಯತ ಧರ್ಮಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.
ನೀವು ವೀರಶೈವರಾದರೆ, ವೀರಶೈವರು ಎಂದು ಬರೆಸಿಕೊಳ್ಳಿ! ನಮಗೆ ಯಾವ ಅಭ್ಯಂತರವೂ ಇಲ್ಲ, ಆದರೆ ಲಿಂಗಾಯತ ಎನ್ನುವ ಶಬ್ದಕ್ಕೆ ಮತ್ತು ಲಿಂಗಾಯತ ಶರಣ ತತ್ವದ ವಿಚಾರಗಳ ಬಗ್ಗೆ ಚಕಾರ ಎತ್ತಬೇಡಿ. ಏಕೆಂದರೆ ಲಿಂಗಾಯತರು ವೀರಶೈವರಲ್ಲ. ಲಿಂಗಾಯತರು ಹಿಂದೂಗಳು ಬೇರೆ ಬೇರೆ ಎನ್ನುವುದು ಸತ್ಯ. ವೀರಶೈವರಿಗೆ ಧರ್ಮ, ಧರ್ಮದ ಗುರು, ಧರ್ಮ ಗ್ರಂಥ, ಧರ್ಮದ ಆಚರಣೆ ಯಾವುದೂ ಇರುವುದಿಲ್ಲ ವೀರಶೈವರು ಮನುವಾದಿಗಳ ಗುಲಾಮರಾಗಿ ಬದುಕುತ್ತಿದ್ದಾರೆ. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.
ಲಿಂಗಾಯತರಿಗೆ ಧರ್ಮ ಗುರು ಬಸವಣ್ಣ, ಧರ್ಮ ಗ್ರಂಥ ವಚನ ಸಾಹಿತ್ಯ, ಧರ್ಮದ ಆಚರಣೆ ಏಕಲಿಂಗ ನಿಷ್ಠೆ , ಧರ್ಮದ ಕುರುಹು ಇಷ್ಟಲಿಂಗ, ಅಷ್ಟಾವರ್ಣ, ಪಂಚಚಾರ, ಷಟಸ್ಥಲಗಳನ್ನು ಬಸವಣ್ಣನವರು ನಮಗೆ ಕೊಟ್ಟಿದ್ದಾರೆ, ಇದನ್ನು ಒಪ್ಪಿಕೊಂಡವರು ಮಾತ್ರ ಲಿಂಗಾಯತರು! ವಿಶ್ವಗುರು ಬಸವಣ್ಣನವರನ್ನು ಒಪ್ಪದೇ ಇರುವವರು ಸನಾತನಿಗಳ ಗುಲಾಮನಾಗಿ ಬದುಕುತ್ತಾರೆ ಹೊರತು ಲಿಂಗಾಯತ ಆಗಲು ಯೋಗ್ಯರಾಗುವುದಿಲ್ಲ. ನೀವು ಬಸವಣ್ಣನನ್ನು ಒಪ್ಪುವುದಿಲ್ಲ, ಬಸವ ತತ್ವವನ್ನು ಆಚರಣೆ ಮಾಡುವುದಿಲ್ಲ, ಆದರೂ ಕೂಡ ದುರದೃಷ್ಟ ಕಲ್ಯಾಣ ಎನ್ನುವ ನಾಡಿನಲ್ಲಿ ಹುಟ್ಟಿ ಇಂತಹ ಬಸವ ತತ್ವ ಶರಣರ ಬಗ್ಗೆ ತಿಳಿಯದೆ ಲಿಂಗಾಯತ ಧರ್ಮಕ್ಕೆ ವಿರುದ್ಧವಾದ ಹೇಳಿಕೆ ಕೊಡಬೇಡಿ ಎಂದು ತಿರುಗೇಟು ನೀಡಿದ್ದಾರೆ.