Saturday, May 18, 2024

ಬದುಕನ್ನೇ ಬರಹವಾಗಿಸಿದ ಕೆ ಟಿ ಗಟ್ಟಿ

Most read

ತನ್ನಪಾಡಿಗೆ ತಣ್ಣಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದ ಖ್ಯಾತ ಕಾದಂಬರಿಕಾರ, ಭಾಷಾ ತಜ್ಞ, ಕೆ ಟಿ ಗಟ್ಟಿಯವರು ಶಾಶ್ವತವಾಗಿ ನೇಪಥ್ಯಕ್ಕೆ ಸರಿದಿದ್ದಾರೆ. ಕನ್ನಡ ಪ್ಲಾನೆಟ್‌ ಅಗಲಿದ ಚೇತನಕ್ಕೆ ಗೌರವದ ನಮನಗಳನ್ನು ಸಲ್ಲಿಸುತ್ತದೆ. ಅವರೊಂದಿಗೆ ಆಪ್ತ ಒಡನಾಟ ಹೊಂದಿದ ಖ್ಯಾತ ಲೇಖಕಿ, ಅನುವಾದಕಿ ಶ್ಯಾಮಲಾ ಮಾಧವ ಅವರ ಅಕ್ಷರ ನಮನ ಇಲ್ಲಿದೆ.

ಸಾಹಿತ್ಯ, ಶಿಕ್ಷಣ, ವೈಚಾರಿಕತೆಯೇ ಜೀವದುಸಿರಾಗಿ , ಪುಸ್ತಕಗಳೇ ನಿಧಿಯಾಗಿ , ಮಾನವೀಯತೆಯೇ ಧರ್ಮವಾಗಿ ಬದುಕಿದವರು, ನಮ್ಮೆಲ್ಲರ ಪ್ರಿಯ ಸಾಹಿತಿ  ಕೆ.ಟಿ.ಗಟ್ಟಿ ಎಂದೇ ಖ್ಯಾತರಾದ ಕೂಡ್ಲು ತಿಮ್ಮಪ್ಪ ಗಟ್ಟಿಯವರು. ಅಸಂಖ್ಯ, ಅನರ್ಘ್ಯ ಕೃತಿಗಳನ್ನು ರಚಿಸಿ ಓದುಗರ ಹೃದಯದಲ್ಲಿ ಶಾಶ್ವತವಾಗಿ ಉಳಿದವರು.ಇವರನ್ನು ಕನ್ನಡನಾಡು ಶಾಶ್ವತವಾಗಿ ಕಳೆದುಕೊಂಡಿತು. ಸಾಹಿತ್ಯ ಕ್ಷೇತ್ರಕ್ಕಾದ ದೊಡ್ಡ ನಷ್ಟವಿದು.

ಅವರ ‘ಶಬ್ದಗಳು’ ಕೃತಿ  ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದಾಗ ಅದರ ನಾಯಕನ ಬುದ್ಧಿ-ಭಾವಗಳ ಸಂಘರ್ಷ ಓದುಗರಲ್ಲಿ ಹುಟ್ಟಿಸಿದ ಸಂಚಲನ ಅಪಾರ. ಮುಂದೆ ನಿರಂತರ ಹರಿದು ಬಂದ ಕರ್ಮಣ್ಯೇ ವಾಧಿಕಾರಸ್ತೇ, ಸಾಫಲ್ಯ, ಅಬ್ರಾಹ್ಮಣದಂತಹ ಕಾದಂಬರಿಗಳು  ಆ ಕೃತಿಗಳ ಕರ್ತೃವಿನ ಬಗ್ಗೆ ಕೌತುಕವನ್ನೇ ಮೂಡಿಸಿದ್ದವು.‌

ಬಳಿಕ ಕಾದಂಬರಿಕಾರ ಇಥಿಯೋಫಿಯಾದಿಂದ ಮರಳಿ ಬಂದು, ‘ಸುಧಾ’ ಕೃತಿಕಾರನ ಪರಿಚಯ ಹಾಗೂ ವಿಳಾಸ ಪ್ರಕಟಿಸಿದಾಗ ನನ್ನಂಥ ಓದುಗರ ಪಾಲಿಗೆ ನಿಧಿಯೇ ಸಿಕ್ಕಂತಾಗಿತ್ತು. 

ನನ್ನ ಪತ್ರವನ್ನೋದಿ ನಮ್ಮ ಮನೆ ಬಾಗಿಲಲ್ಲಿ ಪ್ರತ್ಯಕ್ಷರಾದ ಗಟ್ಟಿಯವರೊಡನೆ  ಬೆಳೆದು ಬಂದ ನಂಟು ನಮ್ಮ ಸಾಹಿತ್ಯ ಸ್ನೇಹ ಬಂಧವಾಗಿ ನನ್ನನ್ನು ಪೊರೆದಿದೆ.

ಬಡ ಹಿನ್ನೆಲೆಯಿಂದ ಬಂದು ಅಧ್ಯಾಪನವನ್ನೇ ವೃತ್ತಿಯಾಗಿಸಿ ಕೊಂಡಿದ್ದ ಗಟ್ಟಿಯವರು ಸ್ವದೇಶಕ್ಕೆ ಮರಳಿದ ಬಳಿಕ ಬರವಣಿಗೆಯನ್ನೇ ನೆಚ್ಚಿಕೊಂಡವರು. ಸ್ವಾಧ್ಯಾಯ, ವ್ಯಾಪಕವಾದ ಓದು  ಅವರನ್ನು ವಿಚಾರ ಶ್ರೀಮಂತನಾಗಿಸಿತ್ತು‌.‌

ವಿಶ್ವಸಾಹಿತ್ಯ ಕೃತಿಗಳನ್ನು ಅರಗಿಸಿಕೊಂಡು,  ಭಾಷಾಶಾಸ್ತ್ರದಲ್ಲಿ  ಪಾಂಡಿತ್ಯವನ್ನು ಗಳಿಸಿ, ಶಿಕ್ಷಣ ಕ್ಷೇತ್ರದ ಸಾಧ್ಯತೆಗಳ ಬಗ್ಗೆ ಸದಾ ಚಿಂತಿಸುತ್ತಿದ್ದ ಗಟ್ಟಿಯವರು ಎಲ್ಲ ಪ್ರಕಾರಗಳಲ್ಲೂ ಕೃತಿರಚನೆ ಮಾಡಿದವರು. ಆರಂಭದ ಕೃತಿಗಳಲ್ಲದೆ ರಾಗಲಹರಿ, ಸ್ವರ್ಣಮೃಗ, ನಿರಂತರ, ಅವಿಭಕ್ತರು, ಪರುಷ, ಅಂತರಂಗದ ಅತಿಥಿ, ಮಿತಿ, ಕೆಂಪು ಕಳವೆ, ನಿನ್ನೆ ಇಂದು ನಾಳೆ  ಹೀಗೆ ಕೊನೆಯದಾಗಿ ಬಂದ ಮೋಹ ಚುಂಬಿತ ಮಾಯೆ’ ಇವೆಲ್ಲವೂ ಓದುಗರನ್ನು ಹಿಡಿದಿಟ್ಟ. ಪರಿ ಅಪಾರ.

ತುಳುವಿನಲ್ಲೂ  ಕೃತಿಗಳನ್ನು ರಚಿಸಿದ  ಗಟ್ಟಿಯವರ ಇಂಗ್ಲಿಷ್ ಕವನಗಳ ಅನುವಾದವೂ, ಆಕರ್ಷಕ. ಹಲವಾರು ನಾಟಕಗಳು, ರೇಡಿಯೋ ನಾಟಕಗಳು, ಬೈಲಿಂಗ್ವಲ್ ಮಾಸ್ಟಲ್, ವೈಚಾರಿಕ ಪ್ರಬಂಧಗಳ ಸಂಕಲನ ಹೀಗೆ ಸೃಷ್ಟಿಯಾದ ಗಟ್ಟಿ ಸಾಹಿತ್ಯ ಅಮೂಲ್ಯವಾದುದು. ಅವರ ”ಕೆಂಪು ಕಳವೆ’ ‌ಕಾದಂಬರಿ ರೇಡಿಯೋ ಪ್ರಸಾರವಾಗಿ ಅಪಾರ ಜನಪ್ರಿಯತೆ  ಗಳಿಸಿತ್ತು‌. 

ಉಡುಪಿಯಲ್ಲಿ ಕೆಲ ವರ್ಷಗಳಿದ್ದ ಬಳಿಕ‌ ಉಜಿರೆಯ ವನಶ್ರೀಯಲ್ಲಿ ಮನೆ ಮಾಡಿ ಸಾಹಿತ್ಯ, ತೋಟದ ಕೃಷಿಯಲ್ಲಿ ಸಮಾನವಾಗಿ ತೊಡಗಿ ಕೊಂಡವರು. ಇಳಿವಯಸಿನ ಸಂಕಷ್ಟಗಳು ಅವರನ್ನು ಉಜಿರೆಯಿಂದ ಮಂಗಳೂರಿಗೆ ಕರೆತಂದರೂ,‌‌ ಅವರ ಶಕ್ತಿ ಕುಂದುತ್ತಾ ಬಂದಿತು.‌ 

ಕೊನೆಯವರೆಗೂ ಗಟ್ಟಿಯವರ ಲೇಖನಿ ನಿಲ್ಲದಿರಲಿ ಎಂಬುದೇ ನನ್ನಾಶಯವಾಗಿತ್ತು.‌ಆದರೆ  ಎಲ್ಲ ಬರೆದು ಮುಗಿದಿದೆ. ಇನ್ನೇನೂ ಉಳಿದಿಲ್ಲ ಎಂದು ಅವರನ್ನುವಾಗ ಬಹಳ ನೋವೆನಿಸುತ್ತಿತ್ತು.

ಫ್ಯಾಂಟಸಿ ತನಗಿಷ್ಟ ಎಂದು ಅಂಥ ಕೃತಿಯನ್ನೂ ರಚಿಸಿದ ಅವರಿಗೆ ಭಾಷಣ ಮಾಡುವುದಕ್ಕಿಂತ ಶ್ರೋತೃಗಳ ಒಡನೆ ಸಂವಾದವೇ ತುಂಬಾ ಖುಶಿ ನೀಡುತ್ತಿತ್ತು.

1957ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಗಟ್ಟಿಯವರು ನಿರಂತರವಾಗಿ ಕಥೆ, ಕಾದಂಬರಿ, ಕವನ, ಪ್ರಬಂಧ ಸಂಕಲನ, ನಾಟಕಗಳನ್ನು ಬರೆಯುತ್ತಲೇ ಬಂದವರು.  ಇವರ ಮೊದಲ ಕಾದಂಬರಿ ‘ಶಬ್ದಗಳು’ 1973ರಲ್ಲಿ ಪ್ರಕಟವಾಯಿತು. ಈವರೆಗೆ 48 ಕಾದಂಬರಿಗಳು 5 ಕಥಾಸಂಕಲನಗಳು, 6 ಪ್ರಬಂಧ ಸಂಕಲನಗಳು, 22 ರಂಗ ನಾಟಕಗಳು, 17 ಬಾನುಲಿ ನಾಟಕಗಳು, 2 ಕವನ ಸಂಕಲನಗಳಲ್ಲದೆ ಆತ್ಮಕಥೆ- ತೀರ, ವ್ಯಕ್ತಿಚಿತ್ರ ಹಾಗೂ ಪ್ರವಾಸ ಕಥನಗಳನ್ನೂ ಬರೆದು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ಇವರದು. ತುಳು ಭಾಷೆಯಲ್ಲೂ ಒಂದು ಕವನ ಸಂಕಲನ ಹಾಗೂ ಕಾದಂಬರಿ ಪ್ರಕಟಿಸಿದ್ದಾರೆ. ಕೆ.ಟಿ.ಗಟ್ಟಿಯವರು ರಚಿಸಿದ 30 ಮಕ್ಕಳ ನಾಟಕಗಳು ಕನ್ನಡ ಅಂತರ್ಜಾಲ ಮ್ಯಾಗಜಿನ್ ನಲ್ಲಿ ಪ್ರಕಟಗೊಂಡಿವೆ. ಇತರ 10 ಮಕ್ಕಳ ನಾಟಕಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ.ಮಂಗಳೂರು ಆಕಾಶವಾಣಿಯಲ್ಲಿ ಹಲವು ಭಾಷಣಗಳು, 50 ಚಿಂತನಗಳು, ಕಥೆಗಳು ಪ್ರಸಾರವಾಗಿವೆ. ಹೆಸರಿಗೆ ತಕ್ಕಂತೆ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿ ಕುಳ ಎನಿಸಿರುವ ಕೆ.ಟಿ.ಗಟ್ಟಿ ಅವರ ಒಟ್ಟು 16 ಕಾದಂಬರಿಗಳು ಸುಧಾ ವಾರಪತ್ರಿಕೆ ಒಂದರಲ್ಲೇ ಪ್ರಕಟವಾಗಿವೆ. 

ನನ್ನ ಮಗ ತುಷಾರ್ ಸಾಯನ್ಸ್ ಸ್ಟ್ರೀಮ್ ತೆಗೆದು ಕೊಳ್ಳುವ ಎಂಥಾ ಒತ್ತಾಯಕ್ಕೂ ಮಣಿಯದೆ ಆರ್ಟ್ಸ್ ತೆಗೆದುಕೊಂಡಾಗ, ” The Medical or Engineering field may lose a professional, but the nation will get a true citizen”, ಎಂದು ಬರೆದವರವರು.

ಗಟ್ಟಿಯವರು ಮತ್ತವರ ಪತ್ನಿ ಯಶೋದಾ ಬರೆದ ಅಸಂಖ್ಯ ಪತ್ರಗಳು ನನ್ನ ಪತ್ರ ಭಂಡಾರದಲ್ಲಿ  ಅನರ್ಘ್ಯ ನಿಧಿಯಾಗಿ ಉಳಿದಿವೆ. ಮಕ್ಕಳು ಚಿತ್‌ಪ್ರಭಾ, ಸತ್ಯಜಿತ್, ಪ್ರಿಯಾ  ನನ್ನ ಮಕ್ಕಳಂತೆ ಪ್ರಿಯರಾಗಿ  ಉಳಿದಿದ್ದಾರೆ.

ನನ್ನ ಆರಂಭದ ಕೃತಿಗಳು ಬೆಳಕು ಕಾಣಲು ಕಾರಣರಾದವರು, ಸಾವಿರದ ಹನ್ನೆರಡು ಪುಟಗಳ ನನ್ನ ‘ಗಾನ್ ವಿತ್ ದ ವಿಂಡ್’ನ  ಮಹಾಗಾತ್ರದ ಹಸ್ತಪ್ರತಿಯನ್ನು ಹೊತ್ತೊಯ್ದು ಬೆಂಗಳೂರ ಪ್ರಕಾಶಕರ ಕೈಯಲ್ಲಿಟ್ಟು ಅದು ಬೆಳಕಿಗೆ ಬರಲು ಕಾರಣರಾದವರು,ನನ್ನ ವಿಶ್ವಸಾಹಿತ್ಯ  ಕೃತಿಗಳಿಗೆ ಮುನ್ನುಡಿ ಬರೆದವರು ನಮ್ಮ ಕೆ.ಟಿ.ಗಟ್ಟಿಯವರು.

ಅಪಾರ ಬುದ್ಧಿಮತ್ತೆ, ಪಾಂಡಿತ್ಯ, ಜೀವನಾದರ್ಶ, ವಿಚಾರ ದೀಪ್ತಿ, ಮಾನವೀಯತೆಯ  ಭವ್ಯ ಬಾಳೊಂದು ಎರಡು ವರ್ಷಗಳ ನಿಷ್ಕ್ರಿಯತೆಯ ಬಳಿಕ ಇದೀಗ ಚಿರಶಾಂತಿ ಗೆ ಸಂದಿದೆ.  

ತುಂಬಲಾರದ ನಷ್ಟ ಕನ್ನಡ ಸಾಹಿತ್ಯ ಲೋಕಕ್ಕೂ, ನನಗೂ .

 ‌ಶ್ಯಾಮಲಾ ಮಾಧವ, ಮುಂಬೈ

ಲೇಖಕಿ, ಅನುವಾದಕಿ

ಇದನ್ನೂ ಓದಿ-ಕರುಣೆ ಇಲ್ಲದ ಕಾಲವೇ! ; ಕೆಂಗನಾಳ ಸಾವು ನ್ಯಾಯವೇ?

More articles

Latest article