Saturday, May 18, 2024

ಭಾರತ್‌ ಜೋಡೋ ನ್ಯಾಯ ಯಾತ್ರೆ | 39ನೆಯ ದಿನ

Most read

ಈ ಯಾತ್ರೆಯ ಗುರಿ ಜನರಿಗೆ ನ್ಯಾಯ ಕೊಡಿಸುವುದು. ದ್ವೇಷದ ಬಾಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆಯುವುದು. ಇದು ಭಾರತ ಜೋಡೋ ಯಾತ್ರೆಯ ಘೋಷಣೆಯಾಗಿತ್ತು. ಯಾಕೆಂದರೆ ದೇಶವು ದ್ವೇಷ ಮತ್ತು ಹಿಂಸೆಯದ್ದಲ್ಲ. ಬದಲಿಗೆ ಪ್ರೀತಿ ಮತ್ತು ಸಹೋದರತ್ವದ್ದುರಾಹುಲ್‌ ಗಾಂಧಿ

ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆಯು ಇಂದೂ ಉತ್ತರಪ್ರದೇಶದಲ್ಲಿ ಮುಂದುವರಿದಿದೆ. ಇಂದು ಯಾತ್ರೆಯು ಗಂಗಾ ನದಿಯನ್ನು ಮತ್ತೊಮ್ಮೆ ದಾಟಿತು. ಉನ್ನಾವೋದಿಂದ ಕಾನ್ಪುರ ಸಿಟಿಯನ್ನು ಪ್ರವೇಶಿಸಿತು. ಕಾನ್ಪುರದಲ್ಲಿ ಜನಸ್ಪಂದನ ಅಭೂತಪೂರ್ವವಾಗಿತ್ತು. ರಾಹುಲ್ ಗಾಂಧಿಯವರು ಈ ಬೆಳಗ್ಗೆ ಘಂಟಾಘರ್ ನಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಇಂದಿನ (21.02.2024) ಕಾರ್ಯಕ್ರಮ ವಿವರ ಹೀಗಿತ್ತು. ಬೆಳಿಗ್ಗೆ 9.00 ಕ್ಕೆ ಉನ್ನಾವೋ ಶಾಸ್ತ್ರಿ ಪಾರ್ಕ್ ನಿಂದ ನಿರ್ಗಮನ. 9.45 ಕ್ಕೆ ಯಾತ್ರೆ ಮರು ಆರಂಭ. ಉನ್ನಾವೋ ಶಾಸ್ತ್ರಿ ಪಾರ್ಕ್ ನಿಂದ. 11.00 ಕ್ಕೆ ಸಾರ್ವಜನಿಕ ಭಾಷಣ ಮತ್ತು ವಿರಾಮ, ಕಾನ್ ಪುರದ ಘಂಟಾಘರ್ ಚೌರಾಹದಲ್ಲಿ. ಯಾತ್ರೆ ಮರು ಆರಂಭ. ಬಡಾ ಚೌರಾಹ – ಚೋಟೋ ಚೌರಾಹ – ಗಾಂಧಿನಗರ ತಿರಾಹ –  ಶುಕ್ಲಗಂಜ್ – ಗಂಗಾ ಘಾಟ್ – ಕಾನ್ ಪುರ ಸಿಟಿ – ಫೂಲ್ ಬಾಘ್ – ಮಾಲ್ ರೋಡ್ ಚೌರಾಹ – ಸಿಟಿ ಸೆಂಟರ್ ಕಾಂಪ್ಲೆಕ್ಸ್ – ಘಂಟಾ ಘರ್ ಚೌರಾಹ ಮಾರ್ಗವಾಗಿ. ಮಧ‍್ಯಾಹ್ನ 12.00 ಕ್ಕೆ ಯಾತ್ರೆ ಅಂತ್ಯ.

ಘಂಟಾಘರ್ ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಈ ಯಾತ್ರೆಯ ಗುರಿ ಜನರಿಗೆ ನ್ಯಾಯ ಕೊಡಿಸುವುದು. ದ್ವೇಷದ ಬಾಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆಯುವುದು. ಇದು ಭಾರತ ಜೋಡೋ ಯಾತ್ರೆಯ ಘೋಷಣೆಯಾಗಿತ್ತು. ಯಾಕೆಂದರೆ ದೇಶವು ದ್ವೇಷ ಮತ್ತು ಹಿಂಸೆಯದ್ದಲ್ಲ. ಬದಲಿಗೆ ಪ್ರೀತಿ ಮತ್ತು ಸಹೋದರತ್ವದ್ದು. ದೇಶದಲ್ಲಿ ದ್ವೇಷ ಹರಡಲು ಕಾರಣ ಏನು ಎಂದು ಈ ಹಿಂದಿನ ಯಾತ್ರೆಯಲ್ಲಿ ನಾನು ಜನರನ್ನು ಕೇಳಿದೆ. ನನಗೆ ಸಿಕ್ಕ ಉತ್ತರ ಹೀಗಿತ್ತು – ಈ ದೇಶದಲ್ಲಿ ಹಿಂದುಳಿದವರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರಿಗೆ ನ್ಯಾಯ ಸಿಗುತ್ತಿಲ್ಲ. ನಮ್ಮ ದೇಶದಲ್ಲಿ ದ್ವೇಷ ಮತ್ತು ಸಿಟ್ಟಿಗೆ ಇದುವೇ ಕಾರಣ. ಮೋದಿ ಸರಕಾರವು ಅಗ್ನಿವೀರ ಯೋಜನೆಯ ಮೂಲಕ ಎಸ್ ಸಿ, ಎಸ್ ಟಿ, ಒಬಿಸಿ ಯುವಜನತೆಗೆ ಸೇನೆಯಲ್ಲಿ ಕೆಲಸ ಮಾಡುವ ಅವಕಾಶ ಬಂದ್ ಮಾಡಿತು. ದೇಶದ ಹಿಂದುಳಿದವರು, ದಲಿತರು, ಆದಿವಾಸಿಗಳು ಮತ್ತು ಸಾಮಾನ್ಯ ವರ್ಗದವರಿಗೆ ಉದ್ಯೋಗ ಸಿಗುವುದು ಮೋದಿಯವರಿಗೆ ಇಷ್ಟವಿಲ್ಲ. ಭಾರತ ಜೋಡೋ ನ್ಯಾಯ ಯಾತ್ರೆಯಲ್ಲಿ ನೀವು ಎಲ್ಲರೂ ಪ್ರೀತಿಯ ಅಂಗಡಿಯನ್ನು ತೆರೆದಿರಿ, ನಿಮಗೆಲ್ಲ ಹೃದಯಾಂತರಾಳದಿಂದ ಧನ್ಯವಾದಗಳು” ಎಂದರು.

ಇಂದು ಮಧ್ಯಾಹ್ನ 2 ಗಂಟೆಗೆ ಭಾರತ ಜೋಡೋ ನ್ಯಾಯ ಯಾತ್ರೆ ಕಾನ್ಪುರದಲ್ಲಿ ಸಮಾಪ್ತವಾಗಿದೆ. ಫೆಬ್ರವರಿ 22 ಮತ್ತು 23 ವಿಶ್ರಾಂತಿಯ ದಿನ. ಫೆಬ್ರವರಿ 24 ರಂದು ಯಾತ್ರೆಯು ಮೊರದಾಬಾದ್ ನಿಂದ ಆರಂಭವಾಗುತ್ತದೆ. ಆನಂತರ ಸಂಭಾಲ್, ಆಲಿಗಢ, ಹಾತರಸ್ ಮತ್ತು ಆಗ್ರಾ ಜಿಲ್ಲೆಗಳನ್ನು ದಾಟಿ ರಾಜಸ್ತಾನದ ಧೋಲ್ ಪುರದಲ್ಲಿ ಕೊನೆಗೊಳ್ಳುತ್ತದೆ.

ರಾಹುಲ್ ಗಾಂಧಿಯವರು ಕೇಂಬ್ರಿಜ್ ಯುನಿವರ್ಸಿಟಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿರುವುದರಿಂದ ಫೆಬ್ರವರಿ 26 ರಿಂದ ಮಾರ್ಚ್ 1 ರ ತನಕ ಯಾತ್ರೆಗೆ ರಜಾ ಇರುತ್ತದೆ. ಮಾರ್ಚ್ 2 ರಂದು ರಾಜಸ್ತಾನದ ದೋಲ್ ಪುರದಿಂದ ಯಾತ್ರೆ ಮತ್ತೆ ಆರಂಭವಾಗಿ ಮಧ್ಯಪ್ರದೇಶದ ಮೊರೆನಾ, ಗ್ವಾಲಿಯರ್, ಶಿವಪುರಿ, ಗುನಾ, ಶಾಜಪುರ ಮತ್ತು ಉಜ್ಜೈನಿ ಜಿಲ್ಲೆಗಳನ್ನು ದಾಟುತ್ತದೆ. ಮಾರ್ಚ್ 5 ರಂದು ರಾಹುಲ್ ಗಾಂಧಿಯವರು ಉಜ್ಜೈನಿಯ ಮಹಾಕಾಲೇಶ್ವರ ಮಂದಿರದಲ್ಲಿ ದೇವರ ದರ್ಶನ ಪಡೆಯುತ್ತಾರೆ ಎಂದು ಕಾಂಗ್ರೆಸ್ ನಾಯಕ ಜಯರಾಮ ರಮೇಶ್ ತಿಳಿಸಿದ್ದಾರೆ.

ಶ್ರೀನಿವಾಸ ಕಾರ್ಕಳ, ಮಂಗಳೂರು

ಇದನ್ನೂ ಓದಿ- ಭಾರತ್ ಜೋಡೋ ನ್ಯಾಯ ಯಾತ್ರೆ | 38ನೆಯ ದಿನ

More articles

Latest article