ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಗಿರುವ ಪ್ರಮಾದದ ಕುರಿತು ಸಂಪೂರ್ಣ ವರದಿಯನ್ನು ಮೂರು ದಿನಗಳ ಒಳಗೆ ಪ್ರಾಧಿಕಾರಕ್ಕೆ ನೀಡುವಂತೆ ಸೂಚನೆ ನೀಡಿದೆ. ಪ್ರಗತಿಪರ ಚಿಂತಕರು, ಕನ್ನಡ ಪರ ಹೋರಾಟಗಾರರು, ಸಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶಗಳನ್ನು ಹೊರಹಾಕುತ್ತಿದ್ದಾರೆ. ತಕ್ಷಣವೇ ಕರ್ನಾಟಕ ಸರ್ಕಾರವು ಎಚ್ಚೆತ್ತುಕೊಂಡು ಜಡ್ಡುಗಟ್ಟಿದ ಮತ್ತು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿರುವ ಕೆಪಿಎಸ್‌ಸಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ನಾಡಿನ ಲಕ್ಷಾಂತರ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ ಕೊಡಬೇಕು – ಮನೋಜ್ ಆರ್ ಕಂಬಳಿ, ಶಿವಮೊಗ್ಗ
ನಾನು ಕೆಪಿಎಸ್‌ಸಿ ಪರೀಕ್ಷೆಗೆ ತಯಾರಾಗಲೆಂದು ನಾಲ್ಕೈದು ತಿಂಗಳ ಹಿಂದೆ ಕೆಲಸವನ್ನು ತೊರೆದು ವಿದ್ಯಾಕಾಶಿಯಾದ ಧಾರವಾಡ ನಗರದತ್ತ ಮುಖಮಾಡಿದೆ. ಆರ್ಥಿಕ ಒತ್ತಡ, ಮನೆಯಲ್ಲಿನ ಬಡತನ, ಕಷ್ಟ ಯಾವುದನ್ನು ಲೆಕ್ಕಿಸದೆ ಹೇಗೋ ಒಂದು ಗ್ರಂಥಾಲಯವನ್ನು ಹುಡುಕಿಕೊಂಡೆ. ಅಲ್ಲಿ ಸುಮಾರು 200 ಕ್ಕೂ ಹೆಚ್ಚು ಅಭ್ಯರ್ಥಿಗಳು ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಳ್ಳುವ ಹಂಬಲದಲ್ಲಿ ನಿರಂತರವಾಗಿ ಹಗಲು-ರಾತ್ರಿಯೆನ್ನದೆ ಓದುತ್ತಿದ್ದರು. ಕುತೂಹಲದಿಂದ ಕೆಲವರನ್ನು ಪರಿಚಯ ಮಾಡಿಕೊಂಡು ವಿಚಾರಿಸಿದಾಗ ಅಲ್ಲಿರುವ ಶೇ.95ಕ್ಕೂ ಹೆಚ್ಚು ಅಭ್ಯರ್ಥಿಗಳು ಬಂದದ್ದು ಗ್ರಾಮೀಣ ಭಾಗದಿಂದ. ಇನ್ನೂ ಕುತೂಹಲದಿಂದ ಅಭ್ಯರ್ಥಿಗಳ ಕಪಾಟನ್ನು ಗಮನಿಸಿದಾಗ ಕಂಡದ್ದು ಕನ್ನಡದ ಪುಸ್ತಕಗಳು. ಅಂದರೆ ಪರೀಕ್ಷೆಯ ಎಲ್ಲಾ ವಿಷಯವನ್ನು (ಇತಿಹಾಸ, ಸಂವಿಧಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ವಿಜ್ಞಾನ…) ಕನ್ನಡದಲ್ಲಿಯೇ ಓದುತ್ತಿದ್ದರು. ಇದು ಕೇವಲ ಒಂದು ಗ್ರಂಥಾಲಯದ ಕಥೆಯಲ್ಲ, ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿರುವ ನೂರಾರು ಗ್ರಂಥಾಲಯಗಳಲ್ಲಿನ ಲಕ್ಷಾಂತರ ಗ್ರಾಮೀಣ ಅಭ್ಯರ್ಥಿಗಳ ಕತೆಯೂ ಹೌದು.
ಇಲ್ಲಿರುವ ಎಲ್ಲಾ ಅಭ್ಯರ್ಥಿಗಳು ಕಂಡ ಕನಸು ಯಾವುದಾದರೊಂದು ʼಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಳ್ಳುವುದುʼ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಮಾತನ್ನು ಹಲವಾರು ಕನ್ನಡ ಪರ ಹೋರಾಟಗಾರರು ಘೋಷಣೆ ಕೂಗಿರುವುದನ್ನು ಕೇಳಿರುತ್ತೇವೆ ಮತ್ತು ನಾವು ಸಹ ಕೆಲವೊಮ್ಮೆ ಉದ್ಘರಿಸಿರುತ್ತೇವೆ. ಅದೇ ರೀತಿ ಕರ್ನಾಟಕದಲ್ಲಿ ದೊರೆಯುವ ಎಲ್ಲಾ ಉದ್ಯೋಗಳಲ್ಲಿಯೂ ಸಹ ಕನ್ನಡಿಗರಿಗೆ ಹೆಚ್ಚಿನ ಪಾಲನ್ನು ನೀಡಬೇಕು, ಅಂಗಡಿ-ಮುಂಗಟ್ಟುಗಳಲ್ಲಿನ ನಾಮಫಲಕಗಳು ಶೇ.60 ಕ್ಕೂ ಹೆಚ್ಚು ಕನ್ನಡದಲ್ಲಿರಬೇಕು, ಮತ್ತು ಕರ್ನಾಟಕದಲ್ಲಿ ನಡೆಯುವ ಎಲ್ಲಾ ಪರೀಕ್ಷೆಗಳು ಕನ್ನಡದಲ್ಲಿ ನಡೆಯಬೇಕು ಎಂದು ಹತ್ತಾರು ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವಾರು ಸಂಘಟನೆಗಳು, ಕನ್ನಡ ಪರ ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ದೆಹಲಿಯ ತನಕ ಹೋಗಿ ಹೋರಾಟ ಮಾಡಿ, ಇದರ ಪ್ರತಿಫಲವಾಗಿ ಬ್ಯಾಂಕಿಂಗ್ ಹುದ್ದೆಗೆ ನಡೆಸುವ ಐಬಿಪಿಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಿದ್ದು, ರೈಲ್ವೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಶಾಸ್ತ್ಯ ನೀಡಿದ್ದನ್ನು ಇಲ್ಲಿ ನೆನೆಯಬಹುದು.
ಕರ್ನಾಟಕದಲ್ಲಿನ ಎ ದರ್ಜೆಯ ಹುದ್ದೆಯಿಂದ ಹಿಡಿದು ಡಿ ದರ್ಜೆಯ ಹುದ್ದೆಯವರೆಗೂ ಕೆಪಿಎಸ್ಸಿ (ಕರ್ನಾಟಕ ಲೋಕಸೇವಾ ಆಯೋಗ), ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ), ಕೆಎಸ್‌ಪಿ (ಕರ್ನಾಟಕ ರಾಜ್ಯ ಪೊಲೀಸ್) ಪೋಲಿಸ್ ಇಲಾಖೆಯು ಪರೀಕ್ಷೆಗಳನ್ನು ನಡೆಸುತ್ತದೆ ಮತ್ತು ಎಲ್ಲಾ ಪರೀಕ್ಷೆಗಳಿಗೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಶ್ನೆಪತ್ರಿಕೆಯನ್ನು ತಯಾರಿಸುವುದು ರೂಢಿ. ಇಂಗ್ಲೀಷ್ ಬಾರದ ಲಕ್ಷಾಂತರ ಅಭ್ಯರ್ಥಿಗಳು ಕನ್ನಡದಲ್ಲಿ ಪರೀಕ್ಷೆಗಳನ್ನು ಎದುರಿಸಿ ದೇಶದ ಅತ್ಯುನ್ನತ ಹುದ್ದೆಗೇರಿದ್ದಾರೆ. ಹುದ್ದೆಯ ನಿರೀಕ್ಷೆಯಲ್ಲಿರುವವರು ಲಕ್ಷಾಂತರ ಮಂದಿ ಇದ್ದಾರೆ. ಇವರೆಲ್ಲರಿಗೂ ಇಂಗ್ಲೀಷ್ ಬರುವುದೇ ಇಲ್ಲವೆಂದಲ್ಲ, ಬಂದರೂ ಅರ್ಥ ಮಾಡಿಕೊಳ್ಳುವ ಶಕ್ತಿ ತಾಯಿ ಭಾಷೆಗಿದ್ದಷ್ಟು ಪರಕೀಯ ಭಾಷೆಗಿರುವುದಿಲ್ಲ. ದೇಶದಲ್ಲಿ ಸಾವಿರಾರು ತಾಯಿ ಭಾಷೆಗಳಿವೆ. ಕರ್ನಾಟಕದಲ್ಲೂ ನೂರಾರೂ ತಾಯಿ ಭಾಷೆಗಳಿವೆ. ಹುಟ್ಟಿದ ಯಾವುದೇ ಮಗು ಮೊದಲು ತೊದಲ್ನುಡಿಯುವುದು ತನ್ನ ತಾಯಿ ಭಾಷೆಯಲ್ಲಿಯೇ.
25 ಆಗಸ್ಟ್ 2024 ರಂದು ನಿಗದಿಯಾಗಿದ್ದ ಕೆಪಿಎಸ್‌ಸಿ ನಡೆಸುವ ಗೆಜೆಟೆಡ್ ಪ್ರೊಬೇಷನರಿ ಹುದ್ದೆಯ ಪರೀಕ್ಷೆ ಇದೇ ಆಗಸ್ಟ್ 27 ರಂದು ನಡೆಯಿತು. ಇದಕ್ಕೆ ಕಾರಣ, ಮೊದಲ ಬಾರಿಗೆ ಕನ್ನಡದಲ್ಲಿ ಐಬಿಪಿಎಸ್ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡಿರುವುದು ಮತ್ತು ಅದೇ ದಿನ ಕೆಪಿಎಸ್‌ಸಿ ಪರೀಕ್ಷೆ ನಡೆದರೆ, ಐಬಿಪಿಎಸ್ ಮತ್ತು ಕೆಎಎಸ್ ಎರಡೂ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಮೋಸ ಆಗುತ್ತದೆ ಎಂದು. ಈಗ ಕೆಪಿಎಸ್‌ಸಿ ಇನ್ನೊಂದು ಮಹಾ ಎಡವಟ್ಟು ಮತ್ತು ಬೇಕಂತಲೇ ಕನ್ನಡಿಗರಿಗೆ ಅದರಲ್ಲೂ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಮೋಸ ಮಾಡಿದೆ. ಪ್ರಶ್ನೆಪತ್ರಿಕೆಯನ್ನು ಮೊದಲು ಇಂಗ್ಲೀಷ್ ನಲ್ಲಿ ಸಿದ್ಧಪಡಿಸಿ ನಂತರ ಕನ್ನಡಕ್ಕೆ ಸರಿಯಾಗಿ ಅನುವಾದ ಮಾಡದೇ ತಪ್ಪು ತಪ್ಪು ಪದಗಳನ್ನು ಮತ್ತು ಪ್ರಶ್ನೆಯನ್ನೇ ತಪ್ಪಾಗಿ ಕೊಟ್ಟು ಅಭ್ಯರ್ಥಿಗಳಿಗೆ ಅನ್ಯಾಯ ಎಸಗಿದೆ. ಉದಾಹರಣಿಗೆ,
• ಇಂಗ್ಲಿಷ್ ಪ್ರಶ್ನೆಪತ್ರಿಕೆಯಲ್ಲಿ Lok Adalat Act 2002 ಎಂದಿದ್ದರೆ ಕನ್ನಡದಲ್ಲಿ ʼಲೋಕ ಅದಾಲತ್ ಅಧಿನಿಯಮ 2022ʼ ಎಂದಿದೆ.
• ಇಂಗ್ಲಿಷ್ ಪತ್ರಿಕೆಯಲ್ಲಿ Which of the statements are incorrect about finance Commission? ಎಂದಿದ್ದರೆ ಕನ್ನಡದಲ್ಲಿ ʼ ಹಣಕಾಸು ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ/ ಹೇಳಿಕೆಗಳು ಸರಿಯಾಗಿದೆ/ವೆ?ʼ ಎಂದಿದೆ. ಮೂಲದಲ್ಲಿ ಇರುವುದು ಯಾವ ಹೇಳಿಕೆ ತಪ್ಪಾಗಿದೆ (incorrect ) ಎಂದು ಕೇಳಿದ್ದನ್ನು ʼಸರಿಯಾಗಿದೆʼ ಎಂದು ಬದಲಿಸಿ ಇಡೀ ಪ್ರಶ್ನೆಯನ್ನೇ ತಲೆಕೆಳಗು ಮಾಡಲಾಗಿದೆ.
ಕೆಪಿಎಸ್‌ಸಿ ಯು ಅಭ್ಯರ್ಥಿಗಳಿಗೆ ಮಾಡಿದ ಮೋಸವನ್ನು ಕನ್ನಡ ಪ್ಲಾನೆಟ್ ಸಂಪಾದಕೀಯ (KPSC ಅಧಿಕಾರಿಗಳ ಹೊಣೆಗೇಡಿತನಕ್ಕೆ ಕನ್ನಡಿ ಹಿಡಿದ ಪ್ರಶ್ನೆ ಪತ್ರಿಕೆ! ಇದು ಅಸಡ್ಡೆಯೋ? ಬಡವರ ಮಕ್ಕಳ ವಿರುದ್ಧದ ಪಿತೂರಿಯೋ?) ದಲ್ಲಿ ಹರ್ಷಕುಮಾರ್ ಕುಗ್ವೆ ಅವರು ವಿವರವಾಗಿ ಹೇಳಿದ್ದಾರೆ.
ಕೆಪಿಎಸ್‌ಸಿ ಮಾಡಿದ ಮೋಸದ ಜೊತೆಗೆ ಪರೀಕ್ಷೆ ನಡೆಯುವ ದಿನದವರೆಗೂ ಸಾಕಷ್ಟು ಎಡವಟ್ಟುಗಳನ್ನು ಮಾಡಿ ಕನ್ನಡಿಗರನ್ನು ಅದರಲ್ಲೂ ಐದಾರು ವರ್ಷಗಳಿಂದ ನೂರಾರು ಕನಸುಗಳ ಜೊತೆ ಕೆಎಎಸ್ ಅಧಿಕಾರಿ ಆಗುವ ಉತ್ಸಾಹದಲ್ಲಿದ್ದವರಿಗೆ ದ್ರೋಹ ಮಾಡಿದೆ.
ಕೆಪಿಎಸ್ಸಿ ಮಾಡಿದ ಮಹಾ ಎಡವಟ್ಟು
• ಒಂದು ತಿಂಗಳ ಮೊದಲು ಪ್ರಶ್ನೆಪತ್ರಿಕೆ ತಯಾರಿಸಿದ್ದು – ಯಾವುದೇ ಪರೀಕ್ಷೆಯಾಗಲಿ ಪರೀಕ್ಷೆ ನಡೆಯುವ ಒಂದು ವಾರ ಮೊದಲು ಪ್ರಶ್ನೆಪತ್ರಿಕೆ ತಯಾರಿ ಮಾಡಬೇಕು. ಒಂದು ತಿಂಗಳ ಮೊದಲೆ ಪ್ರಶ್ನೆಪತ್ರಿಕೆ ತಯಾರಿಯಾದರೆ ಸೋರಿಕೆಯಾಗುವ / ಅಧಿಕಾರಿಗಳೇ ದುಡ್ಡಿಗೆ ಮಾರಾಟ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಮೂರು ವರ್ಷದ ಹಿಂದೆ ನಡೆದ ಪಿಎಸ್‌ಐ ಪ್ರಶ್ನೆಪತ್ರಿಕೆಯಲ್ಲಿ ನಡೆದ ಅಕ್ರಮವನ್ನು ಗಮನಿಸಬಹುದು.
• ಐಬಿಪಿಎಸ್ ಪರೀಕ್ಷೆ ಇರುವ ದಿನ ಕೆಎಎಸ್ ಪರೀಕ್ಷಾ ದಿನಾಂಕವನ್ನು ನಿಗದಿ ಮಾಡಿದ್ದು – ಬ್ಯಾಂಕಿಗ್ ಹುದ್ದೆಗಳಿಗಾಗಿ ನಡೆಸುವ ಐಬಿಪಿಎಸ್ ಹುದ್ದೆಯಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಪರೀಕ್ಷೆಯನ್ನು ಬರೆಯುವ ಅವಕಾಶವನ್ನು ಕೊಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಷಯ ಮತ್ತು ಒಂದು ತಿಂಗಳ ಹಿಂದೆಯೇ ಐಬಿಪಿಎಸ್ ಪರೀಕ್ಷೆಯ ದಿನಾಂಕ ನಿಗದಿಯಾಗಿರುವುದು ತಿಳಿದಿದ್ದರೂ ಕೆಪಿಎಸ್‌ಸಿ ಅಧಿಕಾರಿಗಳು ಕೆಎಎಸ್ ಪರೀಕ್ಷೆಯನ್ನು ಅದೇ ದಿನ ಅಂದರೇ ಆಗಸ್ಟ್ 25 ರಂದು ನಿಗದಿ ಮಾಡಿದ್ದು.
• ಯುಜಿಸಿ – ನೆಟ್(NET) ಪರೀಕ್ಷೆ – ಸ್ನಾತಕೋತ್ತರ ಪದವಿ ಪಡೆದ ಎಲ್ಲಾ ಅಭ್ಯರ್ಥಿಗಳು ಯುಜಿಸಿ ನಡೆಸುವ NET ಪರೀಕ್ಷೆಯನ್ನು ತಮ್ಮ ಮುಂದಿನ ಭವಿಷ್ಯಕ್ಕಾಗಿ ತೆಗೆದುಕೊಳ್ಳುತ್ತಾರೆ. ಸ್ನಾತಕೋತ್ತರ ಪದವಿ ಪಡೆದ ಲಕ್ಷಾಂತರ ಅಭ್ಯರ್ಥಿಗಳ ಕನಸು NET ಯಲ್ಲಿ ತೇರ್ಗಡೆ ಹೊಂದುವುದಾಗಿರುತ್ತದೆ. ಆಗಸ್ಟ್ 25 ಮತ್ತು 27 ರಂದು NET ಪರೀಕ್ಷೆ ಇರುವುದು ತಿಳಿದಿದ್ದರು ಅದೇ ದಿನ ಪರೀಕ್ಷೆಯನ್ನು ನಿಗದಿ ಮಾಡಿದ್ದು.
• 2017-18 ಬ್ಯಾಚ್ ನ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟು, ತಯಾರಿಗೆ ಸಮಯ ಕೊಡದೆ ಇರುವುದು – ಜುಲೈ 21 ರಂದು ನಿಗದಿಯಾಗಿದ್ದ ಕೆಪಿಎಸ್‌ಸಿ ಪರೀಕ್ಷೆಯನ್ನು 2017-18 ಬ್ಯಾಚ್ ನ ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ಸಡಿಲಿಕೆ ಕೊಟ್ಟು ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿರುತ್ತದೆ. ಆದರೆ ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಪರೀಕ್ಷೆಯ ದಿನಾಂಕವನ್ನು ನಿಗದಿ ಮಾಡಿದ್ದು.
• ವಾರದ ದಿನ ಪರೀಕ್ಷೆ – ಇಡೀ ಕೆಪಿಎಸ್‌ಸಿಯ ಇತಿಹಾಸದಲ್ಲಿ ಸರ್ಕಾರಿ ರಜೆಯ ದಿನ ಮತ್ತು ಭಾನುವಾರ ಪರೀಕ್ಷೆ ನಡೆಸುವುದು ವಾಡಿಕೆ. ಆದರೆ ಈ ಬಾರಿ ಆ ನಿಯಮವನ್ನೇ ಮುರಿದು ವಾರದ ದಿನ ಅಂದರೆ ಮಂಗಳವಾರ ಪರೀಕ್ಷೆ ನಡೆಸಿದ್ದು. ಈ ಎಡವಟ್ಟಿನಿಂದ ಖಾಸಗಿ ಕಂಪನಿಯ ಉದ್ಯೋಗಿಗಳಿಗೆ, ಸರ್ಕಾರಿ ಉದ್ಯೋಗಿಗಳಿಗೆ ಮೋಸ ಆಗಿದೆ. ಜೊತೆಗೆ ವಿಕಲಚೇತನರಿಗೆ ಬಹಳ ದೊಡ್ಡ ಅನ್ಯಾಯ ಆಗಿದೆ.
ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಹ, ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳ ಕನ್ನಡ ಅನುವಾದದಲ್ಲಿ ಉಂಟಾದ ಪ್ರಮಾದದ ಕುರಿತು ಹಾಗೂ ಇದಕ್ಕೆ ಕೆಪಿಎಸ್‌ಸಿ ಕೈಗೊಂಡ ಕ್ರಮದ ಸಂಪೂರ್ಣ ವರದಿಯನ್ನು ಮೂರು ದಿನಗಳ ಒಳಗೆ ಪ್ರಾಧಿಕಾರಕ್ಕೆ ನೀಡುವಂತೆ ಸೂಚನೆ ನೀಡಿದೆ. ಹಾಗೂ ಸಾಕಷ್ಟು ಪ್ರಗತಿಪರ ಚಿಂತಕರು, ಕನ್ನಡ ಪರ ಹೋರಾಟಗಾರರು, ಸಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶಗಳನ್ನು ಹೊರಹಾಕುತ್ತಿದ್ದಾರೆ. ತಕ್ಷಣವೇ ಕರ್ನಾಟಕ ಸರ್ಕಾರವು ಎಚ್ಚೆತ್ತುಕೊಂಡು ಜಡ್ಡುಗಟ್ಟಿದ ಮತ್ತು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿರುವ ಕೆಪಿಎಸ್‌ಸಿಯ ವಿರುದ್ಧ ಕ್ರಮಕೈಗೊಳ್ಳಬೇಕು. ನಾಡಿನ ಲಕ್ಷಾಂತರ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ ಕೊಡಬೇಕು.
ಮನೋಜ್ ಆರ್ ಕಂಬಳಿ, ಶಿವಮೊಗ್ಗ
ಇದನ್ನೂ ಓದಿ- KPSC ಅಧಿಕಾರಿಗಳ ಹೊಣೆಗೇಡಿತನಕ್ಕೆ ಕನ್ನಡಿ ಹಿಡಿದ ಪ್ರಶ್ನೆ ಪತ್ರಿಕೆ! ಇದು ಅಸಡ್ಡೆಯೋ? ಬಡವರ ಮಕ್ಕಳ ವಿರುದ್ಧದ ಪಿತೂರಿಯೋ?