ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಬದುಕನ್ನು, ಭವಿಷ್ಯವನ್ನು ನಿರ್ಧರಿಸುವ ದೊಡ್ಡ ಪಾತ್ರವನ್ನು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳು ವಹಿಸುತ್ತವೆ. ಅದರಲ್ಲೂ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆ ಎಂದರೆ ವರ್ಷಗಟ್ಟಲೆ ಆಕಾಂಕ್ಷಿಗಳು ನಿದ್ದೆಗೆಟ್ಟು ಅಧ್ಯಯನ ನಡೆಸಿರುತ್ತಾರೆ. ಅವರ ಕಣ್ಣುಗಳಲ್ಲಿ ಸುಂದರ ಕನಸುಗಳಿರುತ್ತವೆ. ಉನ್ನತ ಹಂತದಲ್ಲಿ ಉತ್ತಮ ನೌಕರಿ ಪಡೆದು ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಕುಟುಂಬಕ್ಕೆ ಆಸರೆಯಾಗಬೇಕು ಎಂಬ ನಿರೀಕ್ಷೆಗಳಿರುತ್ತವೆ. ಆದರೆ ಅಂತಹ ಭವಿಷ್ಯ ನಿರ್ಧರಿಸುವ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ನೋಡಿದೊಡನೆಯೇ ಅವರಿಗೆ ಆಘಾತವಾಗಿಬಿಟ್ಟರೆ? ಅಲ್ಲಿ ಕಾಣುವ ಪ್ರಶ್ನೆಗಳೇ ಅರ್ಥವಾಗದಂತಾಗಿ ತಪ್ಪು ತಪ್ಪಾದ ಪ್ರಶ್ನೆಗಳೇ ತುಂಬಿಕೊಂಡಿದ್ದರೆ ಪರೀಕ್ಷೆ ಬರೆಯಲು ಕುಳಿತ ಅಭ್ಯರ್ಥಿಗಳಿಗೆ ಹೇಗಾಗಬಹುದು?
ನೆನ್ನೆ (ಆಗಸ್ಟ್ 27) ನಡೆದ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯಲ್ಲಿ ಆಗಿದ್ದೂ ಇದೇ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕುಳಿತವರ ಹಾಗೂ ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿರುವವರ ಹೊಣೆಗೇಡಿತನ ಮಾತ್ರವಲ್ಲ ಪಿತೂರಿಯೂ ಇಲ್ಲಿದೆ. ನೆನ್ನೆ ಸಾಮಾನ್ಯ ಪ್ರಶ್ನೆ ಪತ್ರಿಕೆಯ ಕನ್ನಡ ಅವತರಣಿಕೆಯ ಪ್ರಶ್ನೆ ಪತ್ರಿಕೆ ತುಂಬಾ ಕಾಣಿಸಿಕೊಂಡ ಯಡವಟ್ಟುಗಳು ಇಂತಹ ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ.
ನೆನ್ನೆ ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಕೆಲವು ಉದಾಹರಣೆಗಳನ್ನು ನೋಡಿ:
- ಇಂಗ್ಲಿಷ್ ಪ್ರಶ್ನೆಪತ್ರಿಕೆಯಲ್ಲಿ Lok Adalat Act 2002 ಎಂದಿದ್ದರೆ ಕನ್ನಡದಲ್ಲಿ ʼಲೋಕ ಅದಾಲತ್ ಅಧಿನಿಯಮ 2022ʼ ಎಂದಿದೆ.
- ಇಂಗ್ಲಿಷ್ ಪತ್ರಿಕೆಯಲ್ಲಿ Which of the statements are incorrect about finance Commission? ಎಂದಿದ್ದರೆ ಕನ್ನಡದಲ್ಲಿ ʼ ಹಣಕಾಸು ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ/ ಹೇಳಿಕೆಗಳು ಸರಿಯಾಗಿದೆ/ವೆ?ʼ ಎಂದಿದೆ. ಮೂಲದಲ್ಲಿ ಇರುವುದು ಯಾವ ಹೇಳಿಕೆ ತಪ್ಪಾಗಿದೆ (incorrect ) ಎಂದು ಕೇಳಿದ್ದನ್ನು ʼಸರಿಯಾಗಿದೆʼ ಎಂದು ಬದಲಿಸಿ ಇಡೀ ಪ್ರಶ್ನೆಯನ್ನೇ ತಲೆಕೆಳಗು ಮಾಡಲಾಗಿದೆ.
- ಇಂಗ್ಲಿಷ್ ಪತ್ರಿಕೆಯಲ್ಲಿ State Assembly ಎಂದಿದ್ದರೆ ಕನ್ನಡದಲ್ಲಿ ʼರಾಜ್ಯಸಭೆಯ ಸಾರ್ವತ್ರಿಕ ಚುನಾವಣೆಯ ವರ್ಷʼ ಎಂದಿದೆ. ಇದು ʼರಾಜ್ಯ ವಿಧಾನಸಭೆಯʼ ಎಂದಾಗಬೇಕಿತ್ತು.
- ಇಂಗ್ಲಿಷ್ ನಲ್ಲಿ ʼE is A’s sisterʼ ಎಂದಿದ್ದರೆ ಕನ್ನಡದಲ್ಲಿ Eಯು Aನ ಸಹೋದರ ಎಂದಿದೆ. sister ಎಂದರೆ ಸಹೋದರ ಎಂದು ಅನುವಾದಿಸಿದ ಮಹಾಮೇಧಾವಿ ಯಾರಿರಬಹುದು? ಅದನ್ನು ಅನುಮೋದಿಸಿದ ಅಧಿಕಾರಿಯ ತಲೆಯಲ್ಲಿ ಏನಿದ್ದಿರಬಹುದು?
- ಇಂಗ್ಲಿಷ್ ಪತ್ರಿಕೆಯಲ್ಲಿ In Karnataka 30% of men and women (between 15-49 years of age) are overweight or obese ಎಂದುಇರುವ ವಾಕ್ಯವನ್ನು ಕನ್ನಡದಲ್ಲಿ ಕೊಡುವಾಗ ʼಕರ್ನಾಟಕದಲ್ಲಿ ಸರಿಸುಮಾರು ಪುರುಷ ಮತ್ತು ಮಹಿಳೆಯರು (15-49 ವರ್ಷಗಳ ವಯಸ್ಸಿನ ನಡುವೆ ಇರುವ) ಶೇ. 30 ರಷ್ಟಿದ್ದಾರೆʼ ಎಂದು ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಸರಿಸುಮಾರು ಶೇ 30 ರಷ್ಟು ಪುರುಷ ಮತ್ತು ಮಹಿಳೆಯರು (15-49 ವಯೋಮಾನದ ನಡುವಿನವರು) ಬೊಜ್ಜು ಹೊಂದಿದ್ದಾರೆ ಅಥವಾ ಅತಿಕಾಯದವರಾಗಿದ್ದಾರೆ ಎಂದಾಗಬೇಕಿತ್ತು. ಇಲ್ಲಿ ಬೊಜ್ಜು ಎಂಬ ಗುಣವಾಚಕವನ್ನೇ ಹಾರಿಸಿಬಿಟ್ಟಿದ್ದಾರೆ.
- ಇಂಗ್ಲಿಷ್ ಪತ್ರಿಕೆಯಲ್ಲಿ ‘It is one of the heaviest flying birds’ ಎಂದಿದ್ದರೆ ಕನ್ನಡದಲ್ಲಿ ಇದಕ್ಕೆ ʼಇದು ಅತ್ಯಂತ ವೇಗವಾಗಿ ಹಾರಾಡುವ ಪಕ್ಷಿಗಳಲ್ಲಿ ಒಂದಾಗಿದೆʼ ಎಂದು ಕೊಟ್ಟಿದ್ದಾರೆ. ಅತಿಹೆಚ್ಚು ತೂಕದ ಎಂದಿರಬೇಕಿರುವ ಕಡೆ ಅತಿ ವೇಗದಿಂದ ಎಂದು ಕೊಟ್ಟಿದ್ದಾರೆ ಎಂದರೆ ಇವು ಕೇವಲ ತಾಂತ್ರಿಕ ದೋಷವೇ?
- ಇನ್ನು ಕೆಲವು ವಾಕ್ಯಗಳನ್ನು ನೋಡಿ:-
- ನೀರಿನ ಸಾಗಣೆಯ ಒಟ್ಟಾರೆ ಪ್ರಕ್ರಿಯೆಯಲ್ಲಿ ರೂಟ್ ಒತ್ತಡವು ಮಧ್ಯಮ ತಳ್ಳುವಿಕೆಯನ್ನು ಒದಗಿಸುತ್ತದೆʼ,
- ಹೆಚ್ಚಿನ ಸಸ್ಯಗಳು ತಮ್ಮ ನೀರಿನ ಅಗತ್ಯವನ್ನು ಟ್ರಾನ್ಸ್ ಪಿರೇಷನ್ ಪುಲ್ ಮೂಲಕ ಪೂರೈಸುತ್ತವೆ.
- ಗುಟೇಶನ್ ಟ್ರಾನ್ಸ್ ಪಿರೇಶನ್ ಪುಲ್ಗೆ ಕಾರಣವಾಗಿದೆ.
ಕೆಪಿಎಸ್ಸಿಯವರು ಕನ್ನಡವನ್ನು ಹೀಗೆ ಕುಲಗೆಡಿಸಬಹುದೆ?
ಇನ್ನು ಪ್ಯಾಸೇಜ್ ಓದಿಕೊಂಡು ಪ್ರಶ್ನೆಗಳಿಗೆ ಉತ್ತರಿಸಬೇಕಾದ ಭಾಗದಲ್ಲಿ ಹೀಗೊಂದು ವಾಕ್ಯವಿದೆ ನೋಡಿ:
ʼಅಂತಹ ಸಂದರ್ಭಗಳಲ್ಲಿ ಒಂದು ತಪ್ಪು ಹೇಗೆ ಬದುಕಬೇಕೆಂಬುದರ ಬಗೆಗಿನ ಒಂದು ತಪ್ಪು ಸಿದ್ಧಾಂತಕ್ಕೆ ಹೊಣೆಯಾಗಿದ್ದಿದ್ದರೆ ಹೇಗೋ ಹಾಗೆ ಅದು ತಪ್ಪೆಂದು ತೋರುತ್ತದೆʼ
ನಿಮಗೆ ಏನಾದರೂ ಅರ್ಥವಾಯ್ತೆ?
ಒಂದು ಪ್ರಶ್ನೆ ಪತ್ರಿಕೆಯಲ್ಲಿರುವ ಈ ಮೇಲಿನ ಅಪಸವ್ಯಗಳನ್ನು ನೋಡಿ ನಮಗೆ ನಗು ಬರಬಹುದು. ಅಥವಾ ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ನಡೆಸುವಲ್ಲಿ ಆಗಿರುವ ತಪ್ಪನ್ನು ಬೊಟ್ಟು ಮಾಡಿ ತೋರಿಸಬಹುದು. ಹಾಗೆ ಅನುವಾದಿಸಿದವರ ಮೇಲೆ ಕ್ರಮ ತೆಗೆದುಕೊಂಡರೂ ತೆಗೆದುಕೊಳ್ಳಬಹುದು ಸಧ್ಯದಲ್ಲಿ. ಯಾಕೆಂದರೆ ಮಾಧ್ಯಮಗಳಲ್ಲಿ ಇದು ವರದಿಯಾಗಿದೆ ಎಂಬ ಕಾರಣಕ್ಕೆ. ಆದರೆ ಇದು ಕೇವಲ ತಾಂತ್ರಿಕ ದೋಷವಲ್ಲ. ಇದು ನಮ್ಮ ರಾಜ್ಯದಲ್ಲಿ ಇರುವ ಒಂದು ಪ್ರಮುಖವಾದ ಸಂಸ್ಥೆ- ಪ್ರತಿವರ್ಷವೂ ಲಕ್ಷಾಂತರ ಯುವಜನರ ಭವಿಷ್ಯ ನಿರ್ಧರಿಸುವ ಸರ್ಕಾರಿ ಸಂಸ್ಥೆಯೊಂದರ ಕಾರ್ಯವೈಖರಿ ಹೇಗಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ. ನಾಡು, ನುಡಿಯ ಭವಿಷ್ಯದ ಬಗ್ಗೆ ಗಂಭೀರವಾಗಿರುವ ಎಲ್ಲರು ಚಿಂತಿಸಬೇಕಿರುವ ಸಮಸ್ಯೆ ಇದು.
ನಾವು ಇಲ್ಲಿ ಕೇಳಬೇಕಿರುವ ಮೊದಲ ಹಾಗೂ ಮುಖ್ಯ ಪ್ರಶ್ನೆ ಏನೆಂದರೆ, ಕರ್ನಾಟಕ ರಾಜ್ಯದ ಲೋಕಸೇವಾ ಆಯೋಗವು ಕೆ ಎ ಎಸ್ ನಂತಹ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಗಳನ್ನು ಸಿದ್ಧಪಡಿಸುವಾಗ ಮೊದಲು ಇಂಗ್ಲಿಷ್ ಭಾಷೆಯಲ್ಲಿ ಯಾಕೆ ಪ್ರಶ್ನೆಗಳನ್ನು ಸಿದ್ಧಪಡಿಸುತ್ತದೆ? ಇಂಗ್ಲಿಷ್ನಲ್ಲಿ ಮಾಡಿ ತದನಂತರದಲ್ಲಿ ಯಾಕಾಗಿ ಕನ್ನಡಕ್ಕೆ ಅನುವಾದಿಸುವ ಕೆಲಸ ಮಾಡುತ್ತದೆ? ಮೊದಲು ಕನ್ನಡದಲ್ಲೇ ಸಾಮಾನ್ಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಸಾಮರ್ಥ್ಯ ನಮ್ಮಲ್ಲಿಲ್ಲವೆ? ಕೇಂದ್ರ ಲೋಕಸೇವಾ ಆಯೋಗ ಸಿದ್ಧಪಡಿಸುವ ಗುಣಮಟ್ಟದಲ್ಲಿ ಕನ್ನಡದಲ್ಲೇ ಪ್ರಶ್ನೆಪತ್ರಿಕೆಯನ್ನು ಮೊದಲು ತಯಾರಿಸಿ ನಂತರದಲ್ಲಿ ಅದನ್ನು ಇಂಗ್ಲಿಷಿಗೆ ಅನುವಾದಿಸುವ ಕೆಲಸ ಯಾಕೆ ನಡೆಯುತ್ತಿಲ್ಲ? ಅತ್ತ ಯುಪಿಎಸ್ಸಿ ಪರೀಕ್ಷೆಗಳಲಂತೂ ಇಂಗ್ಲಿಷ್-ಹಿಂದಿಗಳದೇ ದರ್ಬಾರು. ಅಲ್ಲಿ ಕನ್ನಡದಲ್ಲೂ ಪ್ರಿಲಿಮ್ಸ್ ಪರೀಕ್ಷೆ ನಡೆಸಿ ಎಂಬ ಕನ್ನಡಿಗರ ಕೋರಿಕೆಗೆ ಕವಡೆ ಕಾಸಿನ ಬೆಲೆ ಇಲ್ಲವಾಗಿದೆ. ಇತ್ತ ಕೆಪಿಎಸ್ಸಿ ಪರೀಕ್ಷೆಗಳಲ್ಲೂ ಇಂಗ್ಲಿಷ್ನದೇ ಕಾರುಬಾರು ನಡೆಯಬೇಕೇ? ಇಂತಹ ವ್ಯವಸ್ಥೆ ಹುಟ್ಟುಹಾಕಿ ಅದನ್ನು ಚಾಲ್ತಿಯಲ್ಲಿಟ್ಟಿರುವ ಕನ್ನಡ ದ್ರೋಹಿ ಅಧಿಕಾರಿಗಳು ಯಾರು? ಅಂತವರನ್ನು ಕರ್ನಾಟಕದಲ್ಲಿ ಯಾಕೆ ಇಟ್ಟುಕೊಳ್ಳಬೇಕು? ಈ ಪ್ರಶ್ನೆಗಳನ್ನು ಕನ್ನಡಿಗರು ಮತ್ತು ಕನ್ನಡದ ಅಭಿವೃದ್ಧಿಯ ಹೊಣೆ ಇರುವ ಸಂಸ್ಥೆಗಳು ಕೇಳಬೇಕು. ಕನ್ನಡ ಭಾಷೆಯ ನೀತಿ ನಿರೂಪಣೆಗಳು ಹೇಗಿರಬೇಕು ಎಂದು ನಿರ್ಧರಿಸಲು ಇರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಪ್ರಕರಣವನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಎಂದು ನೋಡೋಣ. (ಇಂದು ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರು ಈ ಕುರಿತು ಮೂರು ದಿನಗಳ ಒಳಗಾಗಿ ವರದಿ ನೀಡಲು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳಿಗೆ ಪತ್ರ ಕಳಿಸಿದ್ದಾರೆ)
ಇಂತಹ ಒಂದು ಅತ್ಯಂತ ಕನ್ನಡ ದ್ರೋಹಿ ವ್ಯವಸ್ಥೆ ಕೆಪಿಎಸ್ಸಿಯಲ್ಲಿ ಜಾರಿಯಲ್ಲಿರುವುದರಿಂದ ಯಾರಿಗೆ ನಷ್ಟ ಮತ್ತು ಯಾರಿಗೆ ಲಾಭ ಯೋಚಿಸಿ. ನೆನ್ನೆ ಇಂತಹ ಅನುವಾದ ದೋಷಗಳಿರುವ ಪ್ರಶ್ನೆ ಪತ್ರಿಕೆ ನೋಡಿ ಇಂಗ್ಲಿಷ್ ಬಾರದ ಆದರೆ ಕನ್ನಡದ ಮೇಲೆ ಹಿಡಿತ ಇರುವ ಪ್ರತಿಯೊಬ್ಬ ಪ್ರತಿಭಾನ್ವಿತ ಅಭ್ಯರ್ಥಿ ಆಘಾತ ಅನುಭವಿಸುರುತ್ತಾನೆ/ಳೆ. ಅನುವಾದದ ಸಮಸ್ಯೆಗಳು ಇಡೀ ಪ್ರಶ್ನೆಯನ್ನೇ ಉಲ್ಟಾಪಲ್ಟಾ ಮಾಡಿರುವಾಗ ಪ್ರಶ್ನೆಗಳನ್ನು ಗ್ರಹಿಸುವುದರಲ್ಲೇ ಅಭ್ಯರ್ಥಿಗಳು ಎಡವಿರುತ್ತಾರೆ. ಸ್ವಲ್ಪ ಇಂಗ್ಲಿಷ್ ಓದಿ ಅರ್ಥಮಾಡಿಕೊಳ್ಳುವ ಅಭ್ಯರ್ಥಿಗಳು ಹೆಚ್ಚುವರಿ ಸಮಯವನ್ನು ಕಳೆದು, ಹೆಚ್ಚುವರಿ ತ್ರಾಸ ಪಡಬೇಕಾಗಿ ಬಂದಿದೆ. ಇದರಿಂದ ಅವರ ಒಟ್ಟಾರೆ ಪರೀಕ್ಷೆ ತೀವ್ರ ಒತ್ತಡದಲ್ಲೇ ನಡೆದಿರುತ್ತದೆ.
ನಗರಗಳ, ಮೇಲ್ಮಧ್ಯಮ ವರ್ಗದ, ಇಂಗ್ಲಿಷ್ ಬಲ್ಲ, ಇಲ್ಲವೇ ಹಳ್ಳಿಗಾಡಿನ ಬೆರಳೆಣಿಕೆಯ ಅಭ್ಯರ್ಥಿಗಳಿಗೆ ಈ ಸಮಸ್ಯೆ ಬಾಧಿಸದೇ ಹೋಗಬಹುದು. ಆದರೆ ಬಹುಪಾಲು ಅಭ್ಯರ್ಥಿಗಳು ಕನ್ನಡ ಭಾಷೆಯಲ್ಲೇ ಎಲ್ಲಾ ಅಧ್ಯಯನ ಸಾಮಗ್ರಿಗಳನ್ನು ಅಧ್ಯಯನ ನಡೆಸಿ ಪರೀಕ್ಷೆಗೆ ಬಂದವರು. ಇವರಲ್ಲಿ ಹೆಚ್ಚಿನವರ ಬಡತನದ ಹಿನ್ನೆಲೆಯವರು. ಕೆಪಿಎಸ್ಸಿಯ ಹೊಣೆಗೇಡಿತನದಿಂದ ನಿಜಕ್ಕೂ ನಷ್ಟ ಅನುಭವಿಸಿರುವವರು ಇವರೇ. ಇಂತಹ ಸಮಸ್ಯೆಯ ಒಟ್ಟಾರೆ ಪರಿಣಾಮದ ದೃಷ್ಟಿಯಿಂದ ನೋಡಿದಾಗ ಇದು ಕೇವಲ ಕಣ್ತಪ್ಪು ಎಂದಾಗಲೀ, ಅನುವಾದದಲ್ಲಿನ ತಾಂತ್ರಿಕ ದೋಷ ಎಂದಾಗಲೀ, ಬೇಜವಾಬ್ದಾರಿತನ ಎಂದಾಗಲೀ ನೋಡಲು ಬರುವುದಿಲ್ಲ. ಇದು ಮೇಲ್ವರ್ಗ ಮತ್ತು ಮೇಲ್ಜಾತಿ ಶ್ರೀಮಂತರ ಹಿತ ಕಾಯಲು ಬದ್ಧವಾಗಿರುವ ಸಂಸ್ಥೆಯೊಂದು ಕನ್ನಡಿಗರ ಅದರಲ್ಲೂ ಬಡ ಕನ್ನಡಿಗರ ವಿರುದ್ಧ ನಡೆಸಿರುವ ಚಿತಾವಣೆ, ಪಿತೂರಿ ಎಂದೇ ತೋರುತ್ತದೆ.
ಈ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು, ಶಿಕ್ಷಣ ಮಂತ್ರಿಗಳು ಮತ್ತು ಸಂಬಂಧಪಟ್ಟ ಮೇಲಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇವರು ಕೈಗೊಳ್ಳಬೇಕಾದ ಕ್ರಮಗಳೆಂದರೆ:
- ನೆನ್ನೆ ನಡೆದಿರುವ ಪ್ರಶ್ನೆಪತ್ರಿಕೆಯ ದೋಷಗಳನ್ನು ಒಂದು ಅಕ್ರಮ ಮತ್ತು ಹಗರಣ ಎಂದು ಪರಿಗಣಿಸಿ ಈ ಬಗ್ಗೆ ಕೂಡಲೇ ತನಿಖೆಗೆ ಆದೇಶಿಸಿ ತಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು
- ನೆನ್ನೆ ನಡೆದಿರುವ ಪರೀಕ್ಷೆಯನ್ನು ಅಸಿಂಧು ಎಂದು ಪರಿಗಣಿಸಿ, ಕನ್ನಡ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಮರು ಪರೀಕ್ಷೆಗೆ ಆದೇಶಿಸಬೇಕು
- ಕೆಪಿಎಸ್ಸಿ ನಡೆಸುವ ಯಾವುದೇ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮೊದಲು ಕನ್ನಡದಲ್ಲಿ ತಯಾರಾಗಬೇಕು, ನಂತರದಲ್ಲಿ ಅದನ್ನು ಇಂಗ್ಲಿಷ್ ಗೆ ತರ್ಜುಮೆಗೊಳಿಸಬೇಕು ಎಂದು ಆದೇಶ ಹೊರಡಿಸಬೇಕು.
ಕನ್ನಡಿಗರ ಹಿತದೃಷ್ಟಿಯಿಂದ ಇಷ್ಟನ್ನಾದರೂ ನಿರೀಕ್ಷಿಸಿ ಸರ್ಕಾರಕ್ಕೆ ಆಗ್ರಹಿಸಬೇಕೇ, ಇಲ್ಲವೇ ವ್ಯವಸ್ಥೆ ಹೀಗೇ ಮುಂದುವರೆಯಲಿ, ಬಡವರು, ಕನ್ನಡದವರು ಸಾಯಲಿ ಎಂದು ಬಿಡಬೇಕೇ? ಯೋಚಿಸಿ.