ಕೊರಗರ ಆಕ್ರೋಶ ರ್‍ಯಾಲಿ : ಇತಿಹಾಸ-ವರ್ತಮಾನ-ಭವಿಷ್ಯ

Most read

ಜಾತಿ ಸಮಸ್ಯೆಯಿಂದ ನಲುಗುತ್ತಿದ್ದ ಕೊರಗರು ವರ್ತಮಾನದಲ್ಲಿ ‘ಧರ್ಮ’ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಈವರೆಗೂ ಕೋಮುಗಲಭೆಗಳಲ್ಲಿ, ಮತೀಯ ಹಿಂಸೆಗಳಲ್ಲಿ ಭಾಗಿಯಾಗದ ಕೊರಗ ಸಮುದಾಯವನ್ನು ಹಿಂದುತ್ವ ಆವರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ಕೊರಗರ ಪ್ರತ್ಯೇಕ ವಿಶಿಷ್ಠ ಸಂಸ್ಕೃತಿಯನ್ನು ನಾಶಪಡಿಸಿ ಏಕ ಸಂಸ್ಕೃತಿಯನ್ನು ಹೇರುವ ಪಿತೂರಿಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲೇ ಮಂಗಳೂರಿನಲ್ಲಿ ಆದಿವಾಸಿ ಆಕ್ರೋಶ ರ್ಯಾಲಿ ನಡೆಯುತ್ತಿದೆ. ಕೊರಗರೆಲ್ಲರೂ ಕರಾವಳಿಯ ಆದಿವಾಸಿ ಸಮುದಾಯಗಳ ಜೊತೆ ಸೇರಿ ತಮ್ಮ ಹಕ್ಕುಗಳ ಬಗೆಗೆ ಧ್ವನಿ ಏರಿಸಲಿದ್ದಾರೆ ನವೀನ್‌ ಸೂರಿಂಜೆ, ಪತ್ರಕರ್ತರು.

ಬರೋಬ್ಬರಿ 32 ವರ್ಷಗಳ ಬಳಿಕ ಕೊರಗ ಸಮುದಾಯವು ಮಂಗಳೂರಿನ ಅಂಬೇಡ್ಕರ್ ವೃತ್ತ (ಹಿಂದಿನ ಬಾವುಟಗುಡ್ಡೆ)ದಿಂದ ಹಂಪನಕಟ್ಟೆಯವರೆಗೆ ಪಾದಯಾತ್ರೆ ನಡೆಸಿ, ತನ್ನ ಹಕ್ಕುಗಳಿಗಾಗಿ ಧ್ವನಿ ಎತ್ತರಿಸಲಿದೆ. 1993 ಆಗಸ್ಟ್ 18 ರಂದು ಅದೇ ನೆಲದಲ್ಲಿ ಅಂದಿನ ಕೊರಗ ಪೀಳಿಗೆ ಹೆಜ್ಜೆ ಹಾಕಿತ್ತು. ಅಂದು ಪಲ್ಲಿ ಗೋಕುಲದಾಸ್ ರವರ ನಾಯಕತ್ವದಲ್ಲಿ ಹೆಜ್ಜೆ ಹಾಕಿದ್ದ ಕೊರಗರ ಪುಟ್ಟ ಪುಟ್ಟ ಬಾಲಕ ಬಾಲಕಿಯರು ಇಂದು ಕೊರಗ ಸಮುದಾಯದ ಪ್ರಜ್ಞಾವಂತ ನಾಯಕರಾಗಿ ಸಮುದಾಯದ ನೇತೃತ್ವ ವಹಿಸಿಕೊಂಡಿದ್ದಾರೆ. ಪಲ್ಲಿ ಗೋಕುಲದಾಸರು 90 ರ ದಶಕದಲ್ಲಿ ಮಂಗಳೂರು ನಗರದಲ್ಲಿ ಸೃಷ್ಟಿಸಿದ್ದ ಸಂಚಲನ 2025 ಜನವರಿ 23 ರಂದು ಇನ್ನಷ್ಟೂ ಆಕ್ರೋಶದ ಧ್ವನಿಯೊಂದಿಗೆ ಅನುರಣಿಸಲಿದೆ.

ಕೊರಗರ ಹೋರಾಟದಲ್ಲಿ ಕರ್ನಾಟಕ ಆದಿವಾಸಿ ಸಮನ್ವಯ ಸಮಿತಿ ಸಕ್ರಿಯವಾಗಿ ತೊಡಗಿಸಿಕೊಂಡ ಬಳಿಕ ಕೊರಗ ಹೋರಾಟ ಮತ್ತೊಂದು ಹೊರಳನ್ನು ಕಂಡಿದೆ. ಅಂದು ಪಳ್ಳಿ ಗೋಕುಲದಾಸರು ತನ್ನ ಸಮುದಾಯದೊಂದಿಗೆ ಹೆಜ್ಜೆ ಹಾಕಿದ ಮಾರ್ಗದಲ್ಲೇ ಇಂದಿನ ಕೊರಗರು 2025 ಜನವರಿ 23 ರಂದು ಹೆಜ್ಜೆ ಹಾಕಲಿದ್ದಾರೆ. ಅಂದಿಗೂ ಇಂದಿಗೂ ವ್ಯತ್ಯಾಸವೇನೆಂದರೆ, ಈ ಬಾರಿಯ ಹೋರಾಟದ ಘೋಷ ವಾಕ್ಯವೇ ‘ದೈನ್ಯತೆಯ ಕಾಲ ಮುಗಿದಿದೆ, ಸ್ವಾಭಿಮಾನದ ಹೊಸ ಯುಗ ಮುಂದಿದೆ’ ಎನ್ನುವುದು. ಈ ಘೋಷಣೆಯೇ ಕೊರಗರ ಇತಿಹಾಸ, ವರ್ತಮಾನ ಮತ್ತು ಭವಿಷ್ಯವನ್ನು ವಿವರಿಸುತ್ತದೆ.

ಸೊಲ್ಮೆ ಉಲ್ಲಾಯ ಪಂಡುದು ಪಾಡ್ದಿನ

ಮೊರಂಪು ತರೆಯಿನ ಯ್ಯಾರು

ಬಗ್ಗು ದೀನ ಬೆರಿ ಸರ್ತ ಮಲ್ತು ತೂಲ

ಎಂದು ಅಂದು ಅಮೃತ ಸೋಮೇಶ್ವರರು ಬರೆದ ಹಾಡು ಇಂದು ಆಕ್ರೋಶ ರ್ಯಾಲಿಯ ಮೂಲಕ ಕಾರ್ಯರೂಪಕ್ಕೆ ಬರುತ್ತದೆ. ‘ಭೂಮಾಲಕರು ಮತ್ತು ಸರ್ಕಾರಕ್ಕೆ ಕೊರಗರು ಮೊಣಕಾಲೂರಿ ಕೈಮುಗಿದು ಮೊಣಕಾಲು ಸವೆಸಿದ್ದು ಸಾಕು, ಬಗ್ಗಿಸಿ ನಿಂತ ಬೆನ್ನನ್ನು ಒಮ್ಮೆ ನೇರ ಮಾಡಿಕೊಂಡು ನಿಂತು ನೋಡು’ ಎಂದು ಕರ್ನಾಟಕ ಆದಿವಾಸಿ ಸಮನ್ವಯ ಸಮಿತಿಯು ಕೊರಗರನ್ನು ಒಟ್ಟುಗೂಡಿಸಿ ಡಾ ಮಹಮ್ಮದ್ ಪೀರ್ ವರದಿ ಜಾರಿ ಮತ್ತು ಇತರ ಬೇಡಿಕೆಗಳಿಗಾಗಿ ಆದಿವಾಸಿ ಆಕ್ರೋಶ ರ್ಯಾಲಿ ನಡೆಸುತ್ತಿದೆ.

ಅಸ್ಪೃಶ್ಯರಿಗೇ ಅಸ್ಪೃಶ್ಯರಾಗಿದ್ದ ಕೊರಗರು ಅನುಭವಿಸಿದಷ್ಟು ದೌರ್ಜನ್ಯ, ಹಿಂಸೆ, ಅವಮಾನಗಳನ್ನು ಈ ದೇಶದ ಯಾವ ಸಮುದಾಯಗಳೂ ಅನುಭವಿಸಿಲ್ಲವೇನೋ ! ಮುಟ್ಟಿಸಿಕೊಳ್ಳುವುದು ಬಿಡಿ, ಕನಿಷ್ಠ ಅವರ ಪಾಡಿಗೆ ಅವರನ್ನು ಬದುಕಲೂ ಈ ಸಮಾಜ ಬಿಡಲಿಲ್ಲ. ಸಂಪ್ರದಾಯ, ಆಚರಣೆಗಳ ನೆಪದಲ್ಲಿ ಕೊರಗರ ಮೇಲೆ ಅಜಲು ಶೋಷಣೆ ನಿರಂತರವಾಗಿ ನಡೆಯಿತು. ಪನಿಕುಲ್ಲುನು, ಭೂಮಾಲಕರ ಕೋಣಗಳ ಕಾಲಿಗೆ ಗಾಜು ತಾಗದಿರಲೆಂದು ಕೊರಗರನ್ನೇ ಕೋಣಗಳಾಗಿ ಓಡಿಸುವುದು, ಬಂಟರ ಮನೆಯ ಗರ್ಭಿಣಿಗೆ ಕೇಡು ಉಂಟಾಗದಿರಲಿ ಎಂದು ಗರ್ಭಿಣಿಯ ಎಂಜಲನ್ನಕ್ಕೆ ಉಗುರು ಕೂದಲು ಬೆರೆಸಿ ಉಣ್ಣುವ ಸಂಪ್ರದಾಯ, ಜಾತ್ರೆಗಳಲ್ಲಿ ಎಂಜಲನ್ನ ಆಯುವ ಅಜಲು, ಡೋಲಿನ ಅಜಲುಗಳ ಮೂಲಕ ಅಮಾನವೀಯ ಶೋಷಣೆ ನಡೆಯಿತು. ಶತಶತಮಾನಗಳಿಂದ ನಡೆದ ಈ ಶೋಷಣೆಗೆ ಒಮ್ಮೆಯಾದರೂ ಕೊರಗರು ತಿರುಗಿ ಬಿದ್ದಿದ್ದರೆ, ಕರಾವಳಿಯ ರಕ್ತಚರಿತ್ರೆಯನ್ನು ಎಂದೋ ಬರೆಯಬೇಕಿತ್ತು. ಕೊರಗರ ಆಕ್ರೋಶದ ಹಿಂದೆ ಅಷ್ಟೊಂದು ನೋವುಗಳು ಮಡುಗಟ್ಟಿದ್ದವು. ಆದರೂ ಕೊರಗರು ಈವರೆಗೂ ನೇರವಾಗಿ ಭೂಮಾಲಕರ ವಿರುದ್ಧ ಆಕ್ರೋಶ ತೋರಿಸಲೇ ಇಲ್ಲ.

1993 ರ ಪಾದಯಾತ್ರೆಯ ಬಳಿಕ ಪಳ್ಳಿ ಗೋಕುಲದಾಸರು ಉಡುಪಿಯಾದ್ಯಂತ ಕೊರಗರ ಪಾದಯಾತ್ರೆ ಮಾಡಿ ಭೂ ಆಕ್ರಮಣ ಚಳವಳಿ ನಡೆಸಿದರು. ಆ ಬಳಿಕ ಅಲ್ಲಲ್ಲಿ ಭೂ ಅತಿಕ್ರಮಣ ಚಳವಳಿ ನಡೆಯಿತು. ಒಂದಷ್ಟು ಕೊರಗರಿಗೆ ಮನೆ ನಿವೇಶನಗಳು ಇದರಿಂದ ದೊರಕಿದವು. ಇದೊಂದು ಕೊರಗರ ಐತಿಹಾಸಿಕ ಭೂಮಿ ಹೋರಾಟ. ಆ ಬಳಿಕ ರಾಜ್ಯ ಸರ್ಕಾರವನ್ನು ಸಂಘರ್ಷದ ಮೂಲಕ ಎದುರಿಸಿದ್ದು ನಂತೂರು ಭೂಸ್ವಾಧೀನದ ವಿರುದ್ಧದ ಕೊರಗರ ಸಂಘಟಿತ ಹೋರಾಟ. ಹಕ್ಕುಪತ್ರ, ಭೂ ದಾಖಲೆಗಳು ಇಲ್ಲದ ಕೊರಗರನ್ನು ನಂತೂರಿನ ರಸ್ತೆ ಅಗಲೀಕರಣ ನೆಪದಲ್ಲಿ ನಿರ್ವಸಿತರನ್ನಾಗಿ ಮಾಡಲಾಗಿತ್ತು. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಹೋರಾಟದ ಫಲವಾಗಿ ಎಲ್ಲಾ ಕೊರಗರಿಗೆ ಮನೆ ನಿವೇಶನ, ಉತ್ತಮ ಗುಣಮಟ್ಟದ ಮನೆ ಮತ್ತು ಪರಿಹಾರ ಧನ ಲಭಿಸಿತ್ತು. 90 ರ ದಶಕದಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆದಿದ್ದ ಕೊರಗರ ಭೂ ಹೋರಾಟವನ್ನು ಮಂಗಳೂರಿನಲ್ಲಿ ಮುನ್ನಡೆಸಿದ್ದು ಆದಿವಾಸಿ ಸಮನ್ವಯ ಸಮಿತಿ. ವಾಮಂಜೂರು ಸೇರಿದಂತೆ ಹಲವೆಡೆ ಮಂಜೂರಾಗಿರುವ ನಿವೇಶನಗಳನ್ನು ಕೊರಗರಿಗೆ ನೀಡಬೇಕು ಎಂದು ಮಂಗಳೂರು ಮನಪಾ, ಐಟಿಡಿಪಿ ಎದುರು ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಮಂಗಳೂರಿನಲ್ಲಿ ಡಾ ಕೃಷ್ಣಪ್ಪ ಕೊಂಚಾಡಿಯವರು ಕೊರಗರ ಭೂ ಹೋರಾಟವನ್ನು ಮುನ್ನಡೆಸುತ್ತಿದ್ದರೆ, ಉಡುಪಿಯಲ್ಲಿ ಶ್ರೀಧರ ನಾಡ ಅವರು ಭೂ ಹೋರಾಟವನ್ನು ನಡೆಸುತ್ತಿದ್ದಾರೆ.

ಜಾತಿ ಸಮಸ್ಯೆಯಿಂದ ನಲುಗುತ್ತಿದ್ದ ಕೊರಗರು ವರ್ತಮಾನದಲ್ಲಿ ‘ಧರ್ಮ’ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಈವರೆಗೂ ಕೋಮುಗಲಭೆಗಳಲ್ಲಿ, ಮತೀಯ ಹಿಂಸೆಗಳಲ್ಲಿ ಭಾಗಿಯಾಗದ ಕೊರಗ ಸಮುದಾಯವನ್ನು ಹಿಂದುತ್ವ ಆವರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ಕೊರಗರ ಪ್ರತ್ಯೇಕ ವಿಶಿಷ್ಠ ಸಂಸ್ಕೃತಿಯನ್ನು ನಾಶಪಡಿಸಿ ಏಕ ಸಂಸ್ಕೃತಿಯನ್ನು ಹೇರುವ ಪಿತೂರಿಗಳು ನಡೆಯುತ್ತಿವೆ. ಅದರ ಭಾಗವಾಗಿ ಕೊರಗರ ಕಾಲನಿಗಳಲ್ಲಿ ಸತ್ಯನಾರಾಯಣ ಪೂಜೆಯಂತಹ ಕೃತ್ಯಗಳನ್ನು ನಡೆಸಲಾಗುತ್ತಿದೆ. ಇದು ಕೊರಗರ ಅಸ್ಮಿತೆಯನ್ನು ನಾಶ ಮಾಡಿ, ಸಂಸ್ಕೃತಿ ಪಲ್ಲಟಗೊಳಿಸುವ ಹುನ್ನಾರವಲ್ಲದೇ ಇನ್ನೇನೂ ಅಲ್ಲ. ಕೊರಗರು ಇಂದು ಅನುಭವಿಸುತ್ತಿರುವ ಭೂಮಿ ಸಮಸ್ಯೆ, ಹಕ್ಕುಪತ್ರ, ಕಾಡುತ್ಪತ್ತಿ ಸಂಗ್ರಹಕ್ಕೆ ಅಡ್ಡಿ, ಅಸ್ಪೃಶ್ಯತೆ ಘಟನೆಯ ಬದುಕಿಗೆ ಅಡ್ಡಿ, ಉದ್ಯೋಗ, ಶಿಕ್ಷಣದ ಸಮಸ್ಯೆಗಳನ್ನು ಕರಾವಳಿಯ ‘ಹಿಂದುತ್ವ’ ಮರೆ ಮಾಚುತ್ತಿದೆ. ಇಂತಹ ಸಂದರ್ಭದಲ್ಲೇ ಮಂಗಳೂರಿನಲ್ಲಿ ಆದಿವಾಸಿ ಆಕ್ರೋಶ ರ್ಯಾಲಿ ನಡೆಯುತ್ತಿದೆ. ಕೊರಗರೆಲ್ಲರೂ ಕರಾವಳಿಯ ಆದಿವಾಸ ಸಮುದಾಯಗಳ ಜೊತೆ ಸೇರಿ ತಮ್ಮ ಹಕ್ಕುಗಳ ಬಗೆಗೆ ಧ್ವನಿ ಏರಿಸಲಿದ್ದಾರೆ. ಈವರೆಗೂ ದೈನ್ಯತೆಯಿಂದ ಆಗ್ರಹಿಸಿದ್ದ ಸಮುದಾಯ ಆಕ್ರೋಶದ ರ್ಯಾಲಿಯೊಂದಿಗೆ ಹೊಸ ಧ್ವನಿ ಪಡೆದುಕೊಂಡಿದೆ.

ನವೀನ್‌ ಸೂರಿಂಜೆ

ಪತ್ರಕರ್ತರು

ಇದನ್ನೂ ಓದಿ- ಮೂಕ ಜೀವಗಳು ರಾಜಕೀಯ ಸರಕುಗಳಾದಾಗ !!!

More articles

Latest article