Saturday, September 14, 2024

ಕಿತ್ತೂರು ಕಥನ | ಭಾಗ 4

Most read

ಈಗೇಕೆ ಚೆನ್ನಮ್ಮ?

ದಿಟ್ಟ ಹೆಣ್ಣು ಚೆನ್ನಮ್ಮ ತನ್ನ ನಾಯಕತ್ವದ ಗುಣ ಮೆರೆದು ಮೊದಲ ಗೆಲುವು ಸಾಧಿಸಿ200 ವರ್ಷಗಳು ಕಳೆದ ಈ ಹೊತ್ತಿನಲ್ಲಿ, ನಾವು, ಈ ನೆಲದ ಮಹಿಳೆಯರು, ದೇಶಕ್ಕಾಗಿ ನೆಲಕ್ಕಾಗಿ ಸಮರ್ಥವಾಗಿ ಯೋಚಿಸಿ ಮುಂದಡಿಯಿಡಬಲ್ಲೆವೆಂದು ತೋರಿಸಬೇಕಾಗಿದೆ. ಚೆನ್ನಮ್ಮನ ನೆಲದ ನಾವು ಅವಳ ಹೆಸರು, ಕ್ರಿಯೆಗಳಿಂದ ಸ್ಫೂರ್ತಿ ಪಡೆದು ಕಾರ್ಯೋನುಖರಾಗುತ್ತೇವೆ ಎಂದು ಸಾರುವ ವೇದಿಕೆಯಾಗಿ  ʼನಾನೂ ರಾಣಿ ಚೆನ್ನಮ್ಮʼ ರಾಷ್ಟ್ರೀಯ ಆಂದೋಲನವು ಇಂದು ಫೆಬ್ರವರಿ 21 ರಂದು ಕಿತ್ತೂರಿನಲ್ಲಿ  ಚಾಲನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಡಾ. ಎಚ್‌ ಎಸ್‌ ಅನುಪಮಾ ಈ ಲೇಖನವನ್ನು ವಿಶೇಷವಾಗಿ ಸಿದ್ಧಪಡಿಸಿದ್ದಾರೆ. ಲೇಖನದ  ನಾಲ್ಕನೆಯ ಹಾಗೂ ಕೊನೆಯ ಭಾಗ ಇಲ್ಲಿದೆ. 

ಕಿತ್ತೂರು ಭಾರೀ ದೊಡ್ಡ ರಾಜ್ಯವಲ್ಲ. ಈಗಿನ ಬೆಳಗಾವಿ, ಧಾರವಾಡ, ಉತ್ತರಕನ್ನಡ ಜಿಲ್ಲೆಗಳ ಒಂದಷ್ಟು ಭಾಗ ಸೇರಿ, ಅಜಮಾಸು ಒಂದು ಜಿಲ್ಲೆಯಷ್ಟಿರಬಹುದಾದ ಸಂಸ್ಥಾನ ಅದು. ಕಿತ್ತೂರಿನವರು ತಾವೇ ಒಂದು ರಾಜ್ಯವಾಗಿ ಬದುಕುವ ಸಾಧ್ಯತೆ ಇರಲಿಲ್ಲ. ಅವರ ಸುತ್ತ ಮರಾಠರು, ಸವಣೂರು ನವಾಬರು, ಮೈಸೂರಿನ ಹೈದರಾಲಿ-ಟಿಪ್ಪು, ಹೈದರಾಬಾದಿನ ನಿಜಾಮರು, ಬ್ರಿಟಿಷರೇ ಮೊದಲಾಗಿ ಸಾಮ್ರಾಜ್ಯದಾಹದ ಆಳ್ವಿಕರೇ ಇದ್ದರು. ಅವರ ನಡುವೆ ತಮ್ಮ ಸ್ವಾತಂತ್ರö್ಯ-ಸ್ವಾಯತ್ತತೆಗಾಗಿ ಸ್ನೇಹ, ಸಂಬಂಧ, ಹಗೆತನ ಇಟ್ಟುಕೊಳ್ಳುವುದು; ಸಮಯ ಸಂದರ್ಭ ನೋಡಿ ಒಬ್ಬರನ್ನು ಮಣಿಸಲು ಇನ್ನೊಬ್ಬರ ಸಹಾಯ/ಗೆಳೆತನ ಬಯಸುವುದು ಸಾಮಾನ್ಯವಾಗಿತ್ತು. ಕಿತ್ತೂರಷ್ಟೇ ಅಲ್ಲ, ಬಹುತೇಕ ರಾಜಮನೆತನಗಳ ಇತಿಹಾಸದಲ್ಲಿ ಇವತ್ತಿಗೆ ಸ್ನೇಹಿತರಾಗಿರುವವರು ನಾಳೆ ವೈರಿಗಳಾಗಿದ್ದಾರೆ. ಅದರ ನಡುವೆ ವಿಶ್ವದ ಎಲ್ಲೆಡೆ ಆಳುವ ಸ್ವರೂಪದಲ್ಲಿ ಬದಲಾವಣೆಯಾಗಬೇಕು ಎಂಬ ಕೂಗೆದ್ದು ಅರಸೊತ್ತಿಗೆಗಳು ಕೊನೆಗೊಂಡು ಪ್ರಜಾಪ್ರಭುತ್ವದ, ಸಮಾಜವಾದದ ಮಾದರಿ ಜಾರಿಗೆ ಬಂದಿದ್ದನ್ನು ಚರಿತ್ರೆಯಲ್ಲಿ ಓದಿ ತಿಳಿದಿದ್ದೇವೆ.

ಹೀಗಿರುತ್ತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ, ಸಾಮ್ರಾಜ್ಯಶಾಹಿ ಯುದ್ಧ ಹಿಂಸೆ ವಿರೋಧಿಸುವ ನಮಗಿಂದು ಚೆನ್ನಮ್ಮ ಮುಖ್ಯವಾಗುವುದು ಏಕೆ?

ಕಿತ್ತೂರು ರಾಜ್ಯ ಮುಂದುವರೆಯದೇ ಕೊನೆಗೊಂಡಿತು ಎನ್ನುವುದಕ್ಕಿಂತ ಅದರ ಆಳ್ವಿಕರ ಸ್ವಾತಂತ್ರ್ಯಾಭಿಮಾನದಿಂದ ಅದು ಗಮನ ಸೆಳೆಯುತ್ತದೆ. ಅಲ್ಲಿನ ರಾಣಿಯರೂ ಧೈರ್ಯ ಮೆರೆದಿದ್ದಾರೆ. ಅವರಲ್ಲಿ ಕಾಕತಿಯ ಚೆನ್ನಮ್ಮ ನಾಯಕರಿಲ್ಲದ, ಉತ್ತರಾಧಿಕಾರಿಯಿಲ್ಲದ ಸಂಸ್ಥಾನವನ್ನು ದಿಟ್ಟವಾಗಿ ಮುನ್ನಡೆಸಿದಳು. ಯುದ್ಧದಾಹಿಯೂ ಆಗದೇ, ಅಡಿಯಾಳಾಗಿ ಇರಲೊಪ್ಪುವ ಹೇಡಿಯೂ ಆಗದೇ ಸ್ವಾಭಿಮಾನದಿಂದ ಹೋರಾಡಿದಳು. ದತ್ತು ಪಡೆಯುವ ರಾಜಮನೆತನದ ಹಕ್ಕನ್ನು ಎತ್ತಿ ಹಿಡಿದಳು. `ಗಂಡುದಿಕ್ಕಿಲ್ಲದವರು’ ಎಂದಾಗ ದಿಕ್ಕೇಡಿಗಳು ತಾವಲ್ಲ ಎಂದು ಬ್ರಿಟಿಷರಿಗೆ ತಿರುಗೇಟು ನೀಡಿ ರಾಜ್ಯವನ್ನು ಮುನ್ನಡೆಸಿದಳು.

ಕುಟುಂಬದಲ್ಲಿ ಹರಿದು ಬರುವ, ರಟ್ಟೆಬಲದ ಮೇಲೆ ನಿರ್ಧಾರವಾಗುತ್ತಿದ್ದ ಅರಸೊತ್ತಿಗೆಯ ಬದಲಾಗಿ ಈಗ ಪ್ರಜೆಗಳೇ ತಮಗೆ ಬೇಕಿರುವವರನ್ನು ಐದು ವರ್ಷಗಳಿಗೊಮ್ಮೆ ಆರಿಸಿ ಕಳಿಸುವ ವ್ಯವಸ್ಥೆ ಬಂದಿದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಅಧಿಕಾರದ ಸ್ಥಳಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿಲ್ಲ. ಅಧಿಕಾರವನ್ನು ವ್ಯಾಖ್ಯಾನಿಸುವ, ಬಳಸಿಕೊಳ್ಳುವ ಹೆಣ್ಣು ಆಶಯಗಳನ್ನು ರಾಜಕಾರಣದಲ್ಲಿ ಮಂಡಿಸಲಾಗಿಲ್ಲ. ಮಹಿಳೆಯರು ಭಾವುಕರೆಂದು, ಭೋಳೆ ಮನದವರೆಂದು, ನಿರ್ಧಾರಕ ಕ್ಷಣಗಳಲ್ಲಿ ತುರ್ತು ನಡೆಗಳ ಹೆಜ್ಜೆಯಿಡಲು ಅಸಮರ್ಥರೆಂದು, ತಂತ್ರವ್ಯೂಹದ ರಾಜಕಾರಣದ ಮಸಲತ್ತುಗಳ ಪ್ರಯೋಗಿಸಲಾಗದವರೆಂದು ಇಂದಿಗೂ ಭಾವಿಸಲಾಗಿದೆ. ಅತ್ಯಂತ ಪ್ರಮುಖ, ನಿರ್ಧಾರಕ ಸ್ಥಾನಗಳಲ್ಲಿ ಗೌರವಯುತ ಮಹಿಳಾ ಪ್ರಾತಿನಿಧ್ಯ ಇಲ್ಲದಿರಲು ಈ ಧೋರಣೆ ಕಾರಣವಾಗಿದೆ.

ಕಿತ್ತೂರಲ್ಲಿ ಇಂದು…

ಎಂದೇ ಕತ್ತಿ ಹಿರಿದು ತಲೆ ತರಿದಳೆಂದಲ್ಲ, ತನ್ನ ಬೌದ್ಧಿಕತೆ ಮತ್ತು ಮುನ್ನಡೆಸುವ ಗುಣದಲ್ಲಿ ಇಟ್ಟ ನಂಬಿಕೆಯಿಂದಾಗಿ ಚೆನ್ನಮ್ಮ ನಮಗೆ ಮುಖ್ಯವಾಗುತ್ತಾಳೆ. ಮಲ್ಲಸರ್ಜನು ಮೊದಲು ಟಿಪ್ಪುವಿನ ಸೆರೆಯಲ್ಲಿ, ಬಳಿಕ ಪೇಶ್ವೆಗಳ ಸೆರೆಯಲ್ಲಿ, ತದನಂತರ ಬಿಡುಗಡೆಗೊಂಡು ಮರಣಿಸಿದ ಹೊತ್ತಿನಲ್ಲಿ ಪತಿಯ ಮರಣಕ್ಕೆ ದುಃಖಿಸುತ್ತ ಕೂರದೇ ಸಂಸ್ಥಾನದ ಸುರಕ್ಷತೆಗಾಗಿ ಯೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಂಡವಳು ಅವಳು. ಗೆಲುವು, ಸೋಲು, ಅವಮಾನಗಳಿಗೆ ಅಂಜದೆ ಸ್ವಾಭಿಮಾನ ಮತ್ತು ಸ್ವಾಯತ್ತತೆಯನ್ನು ಮೆರೆದಳು. ಮನೆವಾಳ್ತೆ, ಮನೆಯವರ ಕಾಳಜಿ, ಸುರಕ್ಷೆಗಳಂತೆಯೇ ನಾಡಿನ ಜನರ ಕಾಳಜಿಯನ್ನೂ ಜತನದಿಂದ ಮಾಡಿದಳು. ಬಂಧಿತರ ಬಳಿ ತೆರಳಿ ಅವರ ಪ್ರಾಣಹರಣ ತನ್ನ ಉದ್ದೇಶವಲ್ಲ, ಸುರಕ್ಷೆಯ ಬಗೆಗೆ ನಿರ್ಭಯವಾಗಿರಿ ಎಂದು ತಾಯ್ತನದಿಂದ ತಿಳಿಸಿ ಹೇಳಿದಳು. ಯುದ್ಧ ಭಾಷೆಯಲ್ಲಿ ಅವಳು ಸೋತಿರಬಹುದು, ಆದರೆ ಜನರೆದೆಯ ಪ್ರೀತಿಯ ಭಾಷೆಯಲ್ಲಿ ಅವಳು ಸಾವೇ ಇಲ್ಲದ ಅಮರ ವಿಜಯಿಯಾಗಿದ್ದಾಳೆ. ಎಷ್ಟೆಂದರೆ ಕಿತ್ತೂರಿನ ಹೆಸರು `ಚೆನ್ನಮ್ಮನ ಕಿತ್ತೂರು’ ಎಂದು ಬದಲಾಗಿದೆ.

ಅಂಥ ಸ್ವಾಭಿಮಾನಿ, ಸಮರ್ಥ, ದಿಟ್ಟ ಹೆಣ್ಣು ಚೆನ್ನಮ್ಮ ತನ್ನ ನಾಯಕತ್ವದ ಗುಣ ಮೆರೆದು ಮೊದಲ ಗೆಲುವು ಸಾಧಿಸಿ200 ವರ್ಷಗಳು ಕಳೆದ ಈ ಹೊತ್ತಿನಲ್ಲಿ, ನಾವು, ಈ ನೆಲದ ಮಹಿಳೆಯರು, ದೇಶಕ್ಕಾಗಿ ನೆಲಕ್ಕಾಗಿ ಸಮರ್ಥವಾಗಿ ಯೋಚಿಸಿ ಮುಂದಡಿಯಿಡಬಲ್ಲೆವೆಂದು ತೋರಿಸಬೇಕಾಗಿದೆ. ಚುನಾವಣೆಗಳ ಬಳಿಕ ಚುನಾವಣೆಗಳು ಬಂದರೂ ಮಹಿಳಾ ಮೀಸಲಾತಿ ಬಂದಿಲ್ಲವೆಂಬ ಕುಂಟುನೆಪ ಹೇಳಿ ಮಹಿಳೆಯರಿಗೆ ಕುರ್ಚಿ ಬಿಡಲೊಪ್ಪದ ನಾಯಕ ಗಣಕ್ಕೆ ಚೆನ್ನಮ್ಮನಂತೆ ಮಹಿಳೆಯರೂ ದಿಟ್ಟವಾಗಿ ಮುನ್ನಡೆಯಬಲ್ಲರು ಎಂದು ತಿಳಿಸಿ ಹೇಳಬೇಕಿದೆ.

ನಾವು ಹೇಳಬೇಕಿದೆ, ನಾನೂ ಚೆನ್ನಮ್ಮ ಎಂದು.

ನಾವು, ಸ್ವತಂತ್ರ, ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ ಸಮಭಾವದ, ಗಣರಾಜ್ಯ ಭಾರತದ ಮಹಿಳೆಯರು. ದಬ್ಬಾಳಿಕೆ, ದೌರ್ಜನ್ಯಗಳು ಮೇಲೆರಗಿದಾಗೆಲ್ಲ ಎದ್ದು ಬಂದ ಧೀರ ಮಹಿಳೆಯರು. ಜಾಗೃತಿ, ಪ್ರತಿರೋಧ, ಸ್ವಾತಂತ್ರ್ಯಾಭಿಮಾನ, ಸ್ವಾಭಿಮಾನ, ಸ್ವಾಯತ್ತತೆ, ಘನತೆಯ ಬದುಕನ್ನು ಪಡೆಯಲು ಹೋರಾಡಿದ ನಿರ್ಭೀತೆ ಕಿತ್ತೂರು ಚೆನ್ನಮ್ಮನ ಸಂತತಿಗಳು. ಘನತೆಯ ಬದುಕಿಗಾಗಿ ಹೋರಾಟ ನಡೆಸುವ, ಬಂಧಿಸುವ ಸಂಕಲೆಯನ್ನೇ ಸ್ಫೋಟಿಸಬಲ್ಲಂತಹ ವ್ಯಕ್ತಿತ್ವ ಪಡೆದ ನಮ್ಮನ್ನಾರೂ ಬಂಧಿಸಲಾರರು. ಏನನ್ನೇ ಮಾಡಿದರೂ ಪ್ರೀತಿಯಿಂದಲೇ ಮಾಡುವ ನಮಗೆ ಪ್ರೀತಿಯೇ ರಾಜಕಾರಣ. ಮನುಷ್ಯ ಸಮಾಜದ ಮೇಲಿನ ಪ್ರೀತಿಯಿಂದಲೇ ಹೋರಾಟ ನಡೆಸುವವರು ನಾವು.

ನಾವು ನಮ್ಮ ಮೇಲಾಗುವ ಎಲ್ಲ ತರಹದ ದೌರ್ಜನ್ಯವನ್ನು ನಿಗ್ರಹಿಸಿ ಸಮಸಮಾಜದ ಕನಸು ಕಾಣುತ್ತೇವೆ. ಸಾಮಾಜಿಕ ಆರೋಗ್ಯದ ಬಗೆಗೂ ಕಾಳಜಿ ಹೊಂದಿದವರಾಗಿ ಎಲ್ಲ ಸ್ತರಗಳಲ್ಲೂ, ಕ್ಷೇತ್ರಗಳಲ್ಲೂ ಸಮಾನ ಅವಕಾಶ ಮತ್ತು ಪ್ರಾತಿನಿಧ್ಯ ಪಡೆಯಲು ಹೋರಾಡುತ್ತೇವೆ. ಹಂತಹಂತವಾಗಿ ಸ್ವಾತಂತ್ರ್ಯ ಸ್ವಾಯತ್ತ ಬದುಕಿನ ಕಡೆಗೆ ಬೆಳೆಯುತ್ತಲೇ ಹೋಗುತ್ತೇವೆ. ವ್ಯಕ್ತಿಗೌರವ, ಘನತೆಯ ಬದುಕಿಗಾಗಿ ಪ್ರೀತಿ, ಕರುಣೆ, ಜಾಗೃತಿ, ಮೈತ್ರಿ ಭಾವದೊಂದಿಗೆ ಮುನ್ನಡೆಯುತ್ತೇವೆ. ದಣಿವರಿಯದೇ ದುಡಿಯುತ್ತಿರುವ ಎಲ್ಲ ಒಡನಾಡಿಗಳ ಜೊತೆ ಸಮತೆಗಾಗಿ ಕೈಜೋಡಿಸಿ ಹೆಜ್ಜೆ ಹಾಕುತ್ತೇವೆ. ನಮಗಾಗಿ, ಬರಲಿರುವ ಪೀಳಿಗೆಗಾಗಿ ಭಾರತೀಯ ಸಮಾಜದ ಬಹುತ್ವ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಹೋರಾಡಿ ಉಳಿಸಿಕೊಳ್ಳುತ್ತೇವೆ.

ಈ ದೇಶ ನಮ್ಮ ದೇಶ. ಈ ಸಂವಿಧಾನ ನಮ್ಮ ಸಂವಿಧಾನ. ಈ ಸಮಾಜ ನಮ್ಮ ಸಮಾಜ. ನಮ್ಮ ಹಕ್ಕುಗಳಿಗಾಗಿ ಹೇಗೋ ಹಾಗೆ ಈ ನೆಲದ ದಮನಿತರೆಲ್ಲರ ಹಕ್ಕುಗಳಿಗಾಗಿ ಹೋರಾಡುತ್ತೇವೆ. ಹೆಣ್ಣುಮನದ ಸಂಗಾತಿಗಳೆಲ್ಲರೂ ನೆಲ, ಜನ, ಸಮಾಜ, ಸಂವಿಧಾನದ ಒಳಿತಿಗೆ, ಉಳಿವಿಗೆ ಕೈ ಜೋಡಿಸುತ್ತೇವೆ. ದಿಟ್ಟ, ಸ್ವಾತಂತ್ರ್ಯಾಭಿಮಾನಿ, ಸ್ವಾಭಿಮಾನಿ ಚೆನ್ನಮ್ಮನ ಪರಂಪರೆಯವರಾಗಿ ಕಗ್ಗತ್ತಲಿನಲ್ಲೂ ಸಮತೆಯ ಹಾಡು ಹಾಡುತ್ತೇವೆ. ನಮ್ಮ ನೆಲ, ಜನ, ಸಂವಿಧಾನಗಳು ಅಪಾಯದಂಚಿನಲ್ಲಿ ನಿಂತಿರುವಾಗ ಸಮಾಜ ಬದಲಾವಣೆಗಾಗಿ ಧೃಢ ಹೆಜ್ಜೆಯಿಡುತ್ತ ಒಗ್ಗೂಡಿ ಹೋರಾಡುತ್ತೇವೆ.

ಚೆನ್ನಮ್ಮನ ನೆಲದ ನಾವು ಅವಳ ಹೆಸರು, ಕ್ರಿಯೆಗಳಿಂದ ಸ್ಫೂರ್ತಿ ಪಡೆದು ಕಾರ್ಯೋನುಖರಾಗುತ್ತೇವೆ ಎಂದು ಚೆನ್ನಮ್ಮ, ಇದೋ ನಿನಗೆ ಮಾತುಕೊಡುತ್ತ ಕೈ ಜೋಡಿಸಿದ್ದೇವೆ.

ಡಾ. ಎಚ್. ಎಸ್. ಅನುಪಮಾ

ವೈದ್ಯರು, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಲ್ಲಿ ಸಕ್ರಿಯರು.

ಇವುಗಳನ್ನೂ ಓದಿ

ಕಿತ್ತೂರು ಕಥನ | ಭಾಗ 1

ಕಿತ್ತೂರು ಕಥನ | ಭಾಗ 2

ಕಿತ್ತೂರು ಕಥನ | ಭಾಗ 3

More articles

Latest article