ಕನ್ನಡ ಕಾವ್ಯ: ನುಡಿ, ನಾಡು, ನಡಿಗೆ

Most read

 ಕರ್ನಾಟಕ ರಾಜ್ಯೋತ್ಸವ ವಿಶೇಷ ಲೇಖನಡಾ. ರವಿ ಎಂ. ಸಿದ್ಲಿಪುರ

ಭಾಷೆಯೆಂಬುದು ಕೇವಲ ಸಂವಹನದ ಸಾಧನವಲ್ಲ; ಅದೊಂದು ಜನಾಂಗದ ಸಾಂಸ್ಕೃತಿಕ ಸ್ಮೃತಿ, ಸಾಮೂಹಿಕ ಪ್ರಜ್ಞೆ ಮತ್ತು ಅಸ್ಮಿತೆಯ ಜೀವಂತ ರೂಪ. ಒಂದು ನಾಡಿನ ಚರಿತ್ರೆಯುದ್ದಕ್ಕೂ ಅದರ ಜನರು ತಮ್ಮನ್ನು ತಾವು ಕಂಡುಕೊಂಡ ಬಗೆ, ನಾಡಿನೊಂದಿಗೆ ಸ್ಥಾಪಿಸಿಕೊಂಡ ಸಂಬಂಧ ಮತ್ತು ಭವಿಷ್ಯದ ಕುರಿತು ಕಂಡ ಕನಸುಗಳು ಆಯಾ ಕಾಲದ ಸಾಹಿತ್ಯದಲ್ಲಿ, ವಿಶೇಷವಾಗಿ ಕಾವ್ಯದಲ್ಲಿ, ಸ್ಪಷ್ಟವಾಗಿ ಅರಳಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ, ನಮ್ಮ ಕವಿಗಳು ಕನ್ನಡಿಗರ ಹೃದಯಬಡಿತವನ್ನು ಅಕ್ಷರಕ್ಕಿಳಿಸಿದ್ದಲ್ಲದೆ, ತಮ್ಮ ಕಾವ್ಯದ ಮೂಲಕ ನಾಡಿನ ಪ್ರಜ್ಞೆಯನ್ನೇ ರೂಪಿಸಿ, ಮುನ್ನಡೆಸಿದ್ದಾರೆ. ಕನ್ನಡದ ಅಸ್ಮಿತೆ ಎಂಬುದು ಸ್ಥಿರವಾದ ಶಿಲ್ಪವಲ್ಲ; ಅದು ನಿರಂತರವಾಗಿ ಹರಿಯುವ, ರೂಪಾಂತರಗೊಳ್ಳುವ ಜೀವಂತ ಚೇತನ ಎಂಬುದನ್ನು ಸಾರಿದ್ದಾರೆ.

ಕನ್ನಡ ಪ್ರಜ್ಞೆ ಹುಟ್ಟಿದ್ದು ಹೇಗೆ? ಅದು ಕೇವಲ ರಾಜಕೀಯ ಆಂದೋಲನದ ಫಲವೇ? ಖಂಡಿತ ಇಲ್ಲ. ಹರಿದು ಹಂಚಿಹೋಗಿದ್ದ ಒಂದು ಜನಾಂಗದ ಎದೆಯಲ್ಲಿ ‘ನಾವೆಲ್ಲ ಒಂದು’ ಎಂಬ ಕಿಡಿಯನ್ನು ಹೊತ್ತಿಸಿ, ಅದನ್ನು ಸ್ವಾಭಿಮಾನದ ಜ್ವಾಲೆಯಾಗಿ ರೂಪಿಸಿದ್ದು ನಮ್ಮ ಕವಿಗಳ ಕಾವ್ಯವಾಣಿ. ಈ ಪ್ರಜ್ಞೆಯ ವಿಕಾಸದ ಹೆಜ್ಜೆ ಗುರುತುಗಳು ಗೋವಿಂದ ಪೈಗಳಿಂದ ಹಿಡಿದು ನಿಸಾರ್ ಅಹಮದ್‌ರವರೆಗಿನ ಮಹಾನ್ ಕವಿಗಳ ಕಾವ್ಯಗಳಲ್ಲಿ ಅಚ್ಚಳಿಯದಂತೆ ದಾಖಲಾಗಿವೆ.

ಗೋವಿಂದ ಪೈಗಳು

ಅವುಗಳ ಅಧ್ಯಯನವು ಕೇವಲ ಕವಿಗಳ ಪಟ್ಟಿಯಲ್ಲ ಅಥವಾ ಕವಿತೆಗಳ ವಿಶ್ಲೇಷಣೆಯಲ್ಲ. ಬದಲಿಗೆ, ಕನ್ನಡಿಗರು ತಮ್ಮನ್ನು ತಾವು ಮರುವ್ಯಾಖ್ಯಾನಿಸಿಕೊಂಡ ಬಗೆಗಿನ ಬೌದ್ಧಿಕ ಚರಿತ್ರೆ. ಇಲ್ಲಿ ಕಾವ್ಯವು ಕನ್ನಡ ಪ್ರಜ್ಞೆಯ ಬಹುಧ್ವನಿಗಳ ಸಂಕಥನವಾಗಿ ಅನಾವರಣಗೊಳ್ಳುತ್ತದೆ. ಈ ಮೂಲಕ, ನುಡಿಯ ಸೌಂದರ್ಯಕ್ಕೆ ಮೈಮರೆತ ವೈಯಕ್ತಿಕ ಪ್ರೇಮದಿಂದ ಹಿಡಿದು, ಅದನ್ನು ತಾಯಿಯ ಸ್ಥಾನದಲ್ಲಿಟ್ಟು ಪೂಜಿಸಿದ ಭಕ್ತಿಯವರೆಗೆ; ಹಂಚಿಹೋದ ನಾಡನ್ನು ಒಂದುಗೂಡಿಸಲು ಮೊಳಗಿದ ರಾಜಕೀಯ ಜಾಗೃತಿಯಿಂದ ಹಿಡಿದು, ಏಕೀಕರಣದ ನಂತರದ ವಾಸ್ತವದ ಸಂಘರ್ಷದವರೆಗೆ; ಗತವೈಭವದ ಕೊಂಡಾಟದಿಂದ ಹೊರಬಂದು ಕಠೋರ ಆತ್ಮವಿಮರ್ಶೆಯಲ್ಲಿ ತೊಡಗುವುದರಿಂದ ಹಿಡಿದು, ಸರ್ವರನ್ನೂ ಒಳಗೊಂಡ, ಬಹುತ್ವದ ನೆಲೆಯಲ್ಲಿ ನಿತ್ಯೋತ್ಸವವನ್ನು ಆಚರಿಸುವ ಪ್ರಬುದ್ಧತೆಯವರೆಗೆ- ಸಾಗಿಬಂದ ಸುದೀರ್ಘ ಹಾಗೂ ಸಂಕೀರ್ಣ ಪಯಣವನ್ನು ಐದು ಹಂತಗಳಲ್ಲಿ ಈ ಬರಹವು ಅನಾವರಣಗೊಳಿಸುತ್ತದೆ.

ಹಂತ ೧: ಪ್ರೇಮದಿಂದ ಪೂಜೆಗೆ – ಅಸ್ಮಿತೆಯ ಭಾವನಾತ್ಮಕ ಅಡಿಪಾಯ

ಕನ್ನಡ ಪ್ರಜ್ಞೆಯ ಜಾಗೃತಿಯ ಮೊದಲ ಹಂತವು ನುಡಿಯ ಮೇಲಿನ ಸಹಜ ಪ್ರೇಮ ಮತ್ತು ಅದರ ಸೌಂದರ್ಯದ ಆರಾಧನೆಯಿಂದ ಆರಂಭವಾಗುತ್ತದೆ. ಆನಂದಕಂದರು ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು!’ ಎಂದು ಹಾಡಿದಾಗ, ಇಲ್ಲಿ ಕನ್ನಡವು ವೀಣೆಯ ನಾದ, ಕೃಷ್ಣನ ಮುರಲಿಯ ಗಾನ, ಗಿಳಿಯ ಮೆಲುಮಾತಿನಂತಹ ನಿರ್ಮಲ ಸೌಂದರ್ಯಾನುಭೂತಿಯಾಗಿ ಮೈದಳೆಯುತ್ತದೆ. ಇದು ಭಾಷೆಯ ಮಾಧುರ್ಯಕ್ಕೆ ಮನಸೋತ ಕವಿಪ್ರೇಮಿಯ ಉದ್ಗಾರವಾಗುತ್ತದೆ. 20ನೇ ಶತಮಾನದ ಆರಂಭದಲ್ಲಿ ಹಂಚಿಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸಲು, ಕೇವಲ ಈ ಭಾಷೆಯ ಸೌಂದರ್ಯ ಪ್ರೇಮವು ಸಾಕಾಗಲಿಲ್ಲ. ಆಗ ಕನ್ನಡ ಪ್ರಜ್ಞೆಯು ವಿಕಾಸಗೊಂಡು ಮುಂದಿನ ಹಂತವನ್ನು ತಲುಪಿತು; ರಾಷ್ಟ್ರಕವಿ ಗೋವಿಂದ ಪೈಗಳು ಮತ್ತು ಹುಯಿಲಗೋಳ ನಾರಾಯಣರಾಯರು ಈ ಪ್ರೇಮವನ್ನು ‘ಪೂಜೆ’ಯ ಸ್ಥಾಯಿಗೆ ಏರಿಸಿದರು. ಪೈಗಳು ತಮ್ಮ ‘ಕನ್ನಡಿಗರ ತಾಯಿ’ ಕವಿತೆಯಲ್ಲಿ ನಾಡನ್ನು ‘ಜನ್ಮದಾತೆ’ಯಾಗಿಯೂ, ನುಡಿಯನ್ನು ‘ತಾಯಿ’ಯಾಗಿಯೂ ದೈವೀಕರಿಸಿದರು. ಹೀಗೆ ಜನ್ಮದಾತೆ, ಮಾತೆ, ಜನನಿ, ತನುಜಾತೆ, ತಾಯಿ ಎಂದು ಕರೆದುಕೊಳ್ಳುವ ಮೂಲಕ ನಾಡು-ನುಡಿಯೊಂದಿಗಿರುವ ಕರುಳುಬಳ್ಳಿಯ ಸಂಬಂಧವನ್ನು ಪ್ರತಿಪಾದಿಸಿದರು.

ಹುಯಿಲಗೋಳ ನಾರಾಯಣರಾಯರು

ಆನಂದಕಂದರ ಗಿಳಿ-ಕೋಗಿಲೆಗಳ ಜಾಗದಲ್ಲಿ, ಗೋವಿಂದ ಪೈಗಳು ಮತ್ತು ಹುಯಿಲಗೋಳ ನಾರಾಯಣರಾಯರು ಶಾತವಾಹನ, ಚಾಲುಕ್ಯ, ಹೊಯ್ಸಳರಂತಹ ರಾಜವಂಶಗಳನ್ನು; ಪಂಪ, ರನ್ನ, ಜಕ್ಕಣರಂತಹ ಕಲಾಶಿಲ್ಪಿಗಳನ್ನು; ರಾಮ, ಹನುಮರಂತಹ ಪೌರಾಣಿಕ ವ್ಯಕ್ತಿತ್ವಗಳನ್ನು ತಂದು ನಿಲ್ಲಿಸಿದರು. ‘ರಾಜನ್ಯರಿಪು ಪರಶುರಾಮನಮ್ಮನ ನಾಡು’ (ಹುಯಿಲಗೋಳ) ಮತ್ತು ‘ತಾಯೆ ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ’ (ಪೈ) ಎಂಬಂತಹ ಸಾಲುಗಳು ನಾಡಿಗೊಂದು ಅಖಂಡ ಮತ್ತು ವೈಭವಪೂರ್ಣ ಚಾರಿತ್ರಿಕ ಪರಂಪರೆಯೊಂದನ್ನು ಕಟ್ಟಿಕೊಟ್ಟವು. ಈ ವೈಭವೀಕರಣವು ಆ ಕಾಲದ ಐತಿಹಾಸಿಕ ಅಗತ್ಯವಾಗಿತ್ತು. ಅದು ಕನ್ನಡಿಗರಲ್ಲಿ ‘ನಮಗೊಂದು ಶ್ರೇಷ್ಠ ಇತಿಹಾಸವಿದೆ, ನಾವೆಲ್ಲರೂ ಒಂದು’ ಎಂಬ ಸ್ವಾಭಿಮಾನವನ್ನು ಜಾಗೃತಗೊಳಿಸಿ, ಸಾಮೂಹಿಕ ಅಸ್ಮಿತೆಯನ್ನು ರೂಪಿಸಲು ಭದ್ರ ಬುನಾದಿ ಹಾಕಿತು.

ಈ ಐತಿಹಾಸಿಕ ಪರಂಪರೆಯನ್ನು ಪೂಜಿಸುವ, ನಾಡಿನ ಸಾಂಸ್ಕೃತಿಕ ಮತ್ತು ತಾತ್ವಿಕ ಶ್ರೇಷ್ಠತೆಯನ್ನು ಸಂಭ್ರಮಿಸುವ ಪ್ರಜ್ಞೆಯು ಮತ್ತಷ್ಟು ವಿಸ್ತಾರಗೊಂಡು, ಹಲವು ಕವಿಗಳಲ್ಲಿ ಸಮಗ್ರ ರೂಪವನ್ನು ಪಡೆಯಿತು. ಈ ನಿಟ್ಟಿನಲ್ಲಿ, ಚೆನ್ನವೀರ ಕಣವಿಯವರ ‘ವಿಶ್ವಭಾರತಿಗೆ ಕನ್ನಡದಾರತಿ’ ಕವಿತೆಯು, ಗೋವಿಂದ ಪೈ ಮತ್ತು ಹುಯಿಲಗೋಳರು ಆರಂಭಿಸಿದ ನಾಡಿನ ವೈಭವೀಕರಣದ ಪರಂಪರೆಯನ್ನು ವ್ಯವಸ್ಥಿತವಾಗಿ ಮುಂದುವರಿಸುತ್ತದೆ. ರಾಜಮನೆತನಗಳು, ಮತ-ಧರ್ಮ ಸ್ಥಾಪಕರು, ಶರಣ-ದಾಸರು, ಚಾರಿತ್ರಿಕ ಮತ್ತು ಸಾಹಿತ್ಯಕ ಮಹಿಳೆಯರು(ಈ ವೈಶಿಷ್ಟ್ಯವು ಈ ಬರಹದಲ್ಲಿ ವಿಶ್ಲೇಷಿಸಲಾದ ಉಳಿದ ಪದ್ಯಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವುದಿಲ್ಲ) ಮತ್ತು ಕವಿಶ್ರೇಷ್ಠರವರೆಗಿನ ನಾಡಿನ ಸಮಗ್ರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪಟ್ಟಿಮಾಡುವ ಮೂಲಕ, ಈ ಕವಿತೆಯು ಕನ್ನಡ ಪ್ರಜ್ಞೆಯ ಬೇರುಗಳನ್ನು ಪೂಜಿಸುವ ಭಾವವನ್ನು ಪರಾಕಾಷ್ಠೆಗೆ ಕೊಂಡೊಯ್ಯುತ್ತದೆ. ಆದರೆ ಇದರ ನಿಜವಾದ ಮಹತ್ವವಿರುವುದು, ‘ವಿಶ್ವಭಾರತಿಗೆ ಕನ್ನಡದಾರತಿ’ ಎಂಬ ಶೀರ್ಷಿಕೆ ಮತ್ತು ಅಂತಿಮ ಸಾಲುಗಳಲ್ಲಿ ವ್ಯಕ್ತವಾಗುವ ಸಮನ್ವಯ ದೃಷ್ಟಿಯಲ್ಲಿ. ಇದು ಕನ್ನಡದ ಅಸ್ಮಿತೆಯು ಸಂಕುಚಿತ ಪ್ರಾದೇಶಿಕವಾದವಲ್ಲ, ಬದಲಿಗೆ ಅದು ವಿಶಾಲ ರಾಷ್ಟ್ರೀಯ ಪ್ರಜ್ಞೆಗೆ ಸಲ್ಲಿಸುವ ಒಂದು ಗೌರವಯುತ ಕೊಡುಗೆ ಎಂಬುದನ್ನು ಸಾರುತ್ತದೆ.

ಕುವೆಂಪು

ಈ ಹಂತದ ಪರಿಪೂರ್ಣ ಅಭಿವ್ಯಕ್ತಿಯೇ ಕುವೆಂಪು ಅವರ ನಾಡಗೀತೆ. ಇಲ್ಲಿ ಕರ್ನಾಟಕವು ಕೇವಲ ಸುಂದರ ನಾಡಲ್ಲ, ಅದು ‘ಜಯ ಭಾರತ ಜನನಿಯ ತನುಜಾತೆ’. ಈ ಒಂದೇ ಸಾಲು ಕನ್ನಡ ಅಸ್ಮಿತೆಯನ್ನು ರಾಷ್ಟ್ರೀಯ ಪ್ರಜ್ಞೆಯೊಂದಿಗೆ ಬೆಸೆದು ಅದಕ್ಕೊಂದು ಉದಾತ್ತತೆಯನ್ನು ನೀಡುತ್ತದೆ. ಗೋವಿಂದ ಪೈಗಳು ನಾಡನ್ನು ‘ವಿದ್ಯಾರಣ್ಯರ ಹೊನ್ನಗನಿ’ ಎಂದರೆ, ಕುವೆಂಪು ಅದನ್ನು ‘ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ’ ಎಂದು ಕರೆದು, ಪ್ರಕೃತಿ ಮತ್ತು ಸಂಪತ್ತಿನ ದೈವೀಕರಣ ಮಾಡುತ್ತಾರೆ. ‘ಕಪಿಲ ಪತಂಜಲ ಗೌತಮ ಜಿನನುತ’ ಹಾಗೂ ‘ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರ ಮಧ್ವರ ದಿವ್ಯಾರಣ್ಯ’ ಎಂಬ ಸಾಲುಗಳ ಮೂಲಕ, ನಾಡಿನ ತಾತ್ವಿಕ ಮತ್ತು ಧಾರ್ಮಿಕ ಪರಂಪರೆಯ ಶ್ರೇಷ್ಠತೆಯನ್ನು ಎತ್ತಿ ಹಿಡಿದು, ಕನ್ನಡ ಪ್ರಜ್ಞೆಗೆ ಒಂದು ಬೌದ್ಧಿಕ ಮತ್ತು ಆಧ್ಯಾತ್ಮಿಕ ಬುನಾದಿಯನ್ನು ಹಾಕಿಕೊಡುತ್ತಾರೆ.

ಹಂತ ೨: ಜಾಗೃತಿಯ ಕಹಳೆ – ಏಕೀಕರಣದ ರಾಜಕೀಯ ಹೋರಾಟ

ಭಾವನಾತ್ಮಕ ನೆಲೆಗಟ್ಟು ಗಟ್ಟಿಯಾದ ಬಳಿಕ, ಕನ್ನಡ ಚೇತನವು ಏಕೀಕರಣದ ರಾಜಕೀಯ ಗುರಿಯತ್ತ ಸಾಗಿತು. ಹುಯಿಲಗೋಳರ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಗೀತೆಯು ಕೇವಲ ಹೊಗಳಿಕೆಯ ಹಾಡಾಗಿ ಉಳಿಯದೆ, ಕರ್ನಾಟಕ ಏಕೀಕರಣ ಚಳವಳಿಯ ಪ್ರೇರಕ ಶಕ್ತಿಯಾಯಿತು. ಇದರಲ್ಲಿ ಬರುವ ‘ಬದುಕು ಬಲುವಿನ ನಿಧಿಯು ಸದಭಿಮಾನದ ಗೂಡು’ ಎಂಬ ಸಾಲು, ಏಕೀಕರಣದಿಂದಾಗುವ ಪ್ರಯೋಜನಗಳನ್ನು ಸಾರುವ ಸ್ಪಷ್ಟ ರಾಜಕೀಯ ಘೋಷಣೆಯಾಗಿತ್ತು.

ಆದರೆ, ಈ ಹೋರಾಟದ ಬಹುಮುಖಿ ಭಾವನೆಗಳು ಬೇರೆ ಬೇರೆ ಕವಿಗಳಲ್ಲಿ ವಿಭಿನ್ನವಾಗಿ ವ್ಯಕ್ತಗೊಂಡವು. ಹುಯಿಲಗೋಳರದ್ದು ಭವಿಷ್ಯದ ಕನಸಿಗೆ ನೀಡಿದ ಆಹ್ವಾನವಾದರೆ, ಮಾಸ್ತಿಯವರ ‘ಕನ್ನಡನಾಡಿನ ಸ್ಥಿತಿಯನ್ನು ನೆನೆದು’ ಕವಿತೆಯು ವರ್ತಮಾನದ ನೋವಿನ ಆರ್ತನಾದವಾಗಿತ್ತು. ‘ಹರಿದು ತುಂಡಾಗಿಹುದು ಇಂದು ಕನ್ನಡನಾಡು’ ಎಂದು ಮರುಗುತ್ತಾ, ‘ಸ್ವಾಮಿ ನನ್ನೂರು ಧಾರವಾಡ, ನನ್ನೂರು ಮೈಸೂರು’ ಎನ್ನುವ ಪ್ರತ್ಯೇಕತಾವಾದವೇ ಕನ್ನಡಿಗರ ನಡುವಿನ ನಿಜವಾದ ಸವಾಲೆಂಬುದನ್ನು ಅವರು ಮನಗಾಣಿಸಿದರು.

ಬೇಂದ್ರೆ

ಈ ಜಾಗೃತಿಗೆ ರೊಚ್ಚಿನ ಹಾಗೂ ಆಧ್ಯಾತ್ಮಿಕ ಆಯಾಮವನ್ನು ನೀಡಿದವರು ಬೇಂದ್ರೆ ಮತ್ತು ಕುವೆಂಪು. ದ.ರಾ. ಬೇಂದ್ರೆಯವರು ‘ಏಳು ಶೂರರ ಖಣೀ, ಏಳು ಶೂರರ ರಾಣಿ’ ಎಂದು ನಾಡನ್ನು ನಿದ್ದೆಯಿಂದ ಏಳಬೇಕಾದ ರಾಣಿಯಾಗಿ ಚಿತ್ರಿಸಿದರು. ‘ಸತ್ತಿರುವುದೆದೆಸೇರು, ಸುತ್ತಿರುವ ವಿಷ ಹೀರು’ ಎಂದು ಜಡತ್ವವನ್ನು ಕಿತ್ತೊಗೆಯಲು ಕರೆನೀಡಿದರು.

ಇದಕ್ಕೆ ಪ್ರತಿಯಾಗಿ, ಕುವೆಂಪು ಅವರ ‘ಕನ್ನಡ ಡಿಂಡಿಮ’ ಈ ಜಾಗೃತಿಯನ್ನು ಒಂದು ಸಾಮೂಹಿಕ ಕರೆಯ ಹಂತಕ್ಕೆ ಕೊಂಡೊಯ್ಯುತ್ತದೆ. ‘ಬಾರಿಸು ಕನ್ನಡ ಡಿಂಡಿಮವ’ ಎಂಬುದು ಬೇಂದ್ರೆಯವರ ‘ಏಳು’ ಎಂಬ ಕೋರಿಕೆಗಿಂತ ಹೆಚ್ಚು ಆದೇಶಾತ್ಮಕವಾಗಿದೆ. ಅವರ ದೃಷ್ಟಿಯಲ್ಲಿ ಕರ್ನಾಟಕವು ಕೇವಲ ರಾಣಿಯಲ್ಲ, ಅದು ‘ಹೃದಯಶಿವ’. ಶಿವನಂತೆ ತಾಯ್ನಾಡು ಕೂಡ ‘ಶಿವೇತರ’ವಾದುದನ್ನು (ಅಮಂಗಳಕರವಾದುದನ್ನು) ನಾಶಮಾಡಿ, ‘ಸರ್ವೋದಯ’ದ ಮಂಗಳವನ್ನು ಸ್ಥಾಪಿಸಬೇಕು. ಈ ಮೂಲಕ ಕುವೆಂಪು ಅವರು ಚಳವಳಿಗೆ ಕೇವಲ ರಾಜಕೀಯ ಆಯಾಮವಷ್ಟೇ ಅಲ್ಲದೆ, ಒಂದು ನೈತಿಕ ಮತ್ತು ತಾತ್ವಿಕ ಬಲವನ್ನು ತುಂಬಿದರು. ನಮ್ಮ ‘ನಾಡಗೀತೆ’ಯು ಈ ಜಾಗೃತಿಯನ್ನು ತನ್ನ ಆಶಯದಲ್ಲಿ ಸ್ಥಾಯಿಗೊಳಿಸುತ್ತದೆ. ‘ತೈಲಪ ಹೊಯ್ಸಳರಾಳಿದ ನಾಡೇ, ಡಂಕಣ ಜಕಣರ ನಚ್ಚಿನ ಬೀಡೆ’ ಎಂದು ಹಾಡುವ ಮೂಲಕ, ಅದು ಹರಿದು ಹಂಚಿಹೋದ ಪ್ರದೇಶಗಳ ಐತಿಹಾಸಿಕ ಏಕತೆಯನ್ನು ನೆನಪಿಸುತ್ತದೆ. ‘ಕೃಷ್ಣ ಶರಾವತಿ ತುಂಗ, ಕಾವೇರಿಯ ವರ ರಂಗ’ ಎಂದು ನದಿಗಳನ್ನು ಹೆಸರಿಸುವ ಮೂಲಕ, ನಾಡಿನ ಭೌಗೋಳಿಕ ಸಮಗ್ರತೆಯ ಕಲ್ಪನೆಯನ್ನು ಜನಮಾನಸದಲ್ಲಿ ಸ್ಥಾಪಿಸುತ್ತದೆ. ಇದು ಕೇವಲ ಹೊಗಳಿಕೆಯಲ್ಲ, ಬದಲಾಗಿ ಏಕೀಕರಣ ಚಳವಳಿಗೆ ಬೇಕಾದ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಭೂಮಿಕೆಯನ್ನು ಸಿದ್ಧಪಡಿಸುವ ಕಾರ್ಯತಂತ್ರವೂ ಹೌದು.

ಹಂತ ೩: ನವನಿರ್ಮಾಣದ ಕನಸು ಮತ್ತು ವಾಸ್ತವದ ಸಂಘರ್ಷ

ಏಕೀಕರಣದ ನಂತರ ‘ಹೆಸರಾಯಿತು ಕರ್ನಾಟಕ, ಮುಂದೇನು?’ ಎಂಬ ಪ್ರಶ್ನೆ ಎದುರಾದಾಗ, ನಾಡು ಕಟ್ಟುವ ಬಗೆಗೆ ವಿಭಿನ್ನ ದೃಷ್ಟಿಕೋನಗಳು ಮೂಡಿದವು. ಚೆನ್ನವೀರ ಕಣವಿಯವರು ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂದು ಸೌಮ್ಯ, ರಚನಾತ್ಮಕ ಮಾರ್ಗವನ್ನು ಸೂಚಿಸಿದರು. ಆದರೆ, ಎಂ. ಗೋಪಾಲಕೃಷ್ಣ ಅಡಿಗರು ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಗೋಪಾಲಕೃಷ್ಣ ಅಡಿಗರು

ಅಡಿಗರು ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನೇ ಕೆಡವಿ ‘ಹೊಸ ನಾಡೊಂದನ್ನು’ ಕಟ್ಟಲು ಸಂಕಲ್ಪ ತೊಡುತ್ತಾರೆ. ಅವರ ದೃಷ್ಟಿಯಲ್ಲಿ, ನಿಜವಾದ ಶತ್ರುಗಳು ಹೊರಗಿಲ್ಲ; ಬದಲಾಗಿ ‘ಜಾತಿ ಮತ ಭೇದಗಳ ಕಂದಕ’, ‘ರೂಢಿರಾಕ್ಷಸ’ ಮತ್ತು ‘ಅನ್ನದ ಅನ್ಯಾಯದ ದಾವಾಗ್ನಿ’ಯ ರೂಪದಲ್ಲಿ ನಮ್ಮೊಳಗೇ ಇದ್ದಾರೆ. ‘ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು’ ಎಂಬ ಅವರ ಸಾಲುಗಳು, ನಾಡಿನ ವೈಭವದ ಕಥನಗಳಿಗೆ ಪ್ರತಿಯಾಗಿ, ಸಾಮಾಜಿಕ ನ್ಯಾಯವಿಲ್ಲದ ಸ್ವಾಭಿಮಾನಕ್ಕೆ ಅರ್ಥವಿಲ್ಲವೆಂದು ನೇರವಾಗಿ ಸಾರುತ್ತವೆ. ಇದು ಕನ್ನಡ ಪ್ರಜ್ಞೆಯು ತನ್ನದೇ ಕಠೋರ ವಾಸ್ತವಕ್ಕೆ ಮುಖಾಮುಖಿಯಾದ ಆತ್ಮಾವಲೋಕನದ ಕ್ಷಣವಾಗಿತ್ತು.

ಹಂತ ೪: ಆತ್ಮವಿಮರ್ಶೆ ಮತ್ತು ಅಸ್ಮಿತೆಯ ಮರುವ್ಯಾಖ್ಯಾನ

ಅಡಿಗರು ತೆರೆದಿಟ್ಟ ಆತ್ಮವಿಮರ್ಶೆಯ ಹಾದಿಯಲ್ಲಿ ಸಾಗಿದ ಕನ್ನಡ ಪ್ರಜ್ಞೆಯು ಇನ್ನಷ್ಟು ಪ್ರಬುದ್ಧವಾಯಿತು. ಈ ಹಂತದಲ್ಲಿ, ಕನ್ನಡದ ದೈವೀಕರಣ ಮತ್ತು ಶಿಷ್ಟ ಪರಂಪರೆಯ ಪರಿಕಲ್ಪನೆಗಳು ಪ್ರಶ್ನೆಗೊಳಗಾದವು.

ಜಿ.ಪಿ. ರಾಜರತ್ನಂ ಅವರ ‘ಕನ್ನಡ್ ಪದಗೊಳ್’ ಈ ನಿಟ್ಟಿನಲ್ಲಿ ಒಂದು ಮಹತ್ವದ ತಿರುವನ್ನು ನೀಡಿತು. ಇಲ್ಲಿ ಕನ್ನಡ ಪ್ರೇಮವು ಕೇವಲ ಪಂಡಿತರ ಗಂಭೀರ ಸ್ವತ್ತಾಗಿ ಉಳಿಯದೆ, ಹೆಂಡ-ಹೆಂಡತಿಯನ್ನೂ ಬಿಟ್ಟುಕೊಡಲು ಸಿದ್ಧನಿರುವ ಸಾಮಾನ್ಯ ಕುಡುಕನೊಬ್ಬನ ಸ್ವಾಭಿಮಾನದ ದನಿಯಾಗಿ ಮಾರ್ಪಟ್ಟಿತು. ‘ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ… ಮೂಗ್ನಲ್ ಕನ್ನಡ್ ಪದವಾಡ್ತೀನಿ!’ ಎನ್ನುವ ಅವನ ಹಠ, ಕನ್ನಡವನ್ನು ಪಾಂಡಿತ್ಯದ ಪೀಠದಿಂದ ಕೆಳಗಿಳಿಸಿ, ಜನಸಾಮಾನ್ಯರ ಜೀವಂತ ಅನುಭವವಾಗಿಸಿತು.

ಜಿ.ಪಿ. ರಾಜರತ್ನಂ

ಈ ಮರುವ್ಯಾಖ್ಯಾನಕ್ಕೆ ಅಡಿಗರು ತಮ್ಮ ‘ಕನ್ನಡವೆಂದರೆ’ ಕವಿತೆಯಲ್ಲಿ ತಾತ್ವಿಕ ಚೌಕಟ್ಟನ್ನು ಒದಗಿಸಿದರು. ‘ಕನ್ನಡವೆಂದರೆ ತಾಯಿಯೆ, ದೇವಿಯೆ?’ ಎಂದು ಕೇಳುವ ಮೂಲಕ, ಅವರು ಗೋವಿಂದ ಪೈಗಳ ದೈವೀಕರಣದ ಕಲ್ಪನೆಯನ್ನು ನೇರವಾಗಿ ಪ್ರಶ್ನಿಸಿದರು. ಕನ್ನಡವೆಂದರೆ ಕೇವಲ ‘ಪಂಪ ಕುಮಾರವ್ಯಾಸರ’ ಭಾಷೆಯಲ್ಲ, ಅದು ‘ತಿಮ್ಮನ, ಬೋರನ, ಈರಗಮಾರರ ಹೃದಯದ ಸಹಜ ತರಂಗ’ ಹಾಗೂ ‘ಜನಮನದೊಳಗೂಡಿ ತುಡಿತ ಕಡಿತಗಳ ಪ್ರತಿಕೃತಿ’ ಎಂದು ಪ್ರತಿಪಾದಿಸಿದರು. ಈ ಮೂಲಕ, ಕುವೆಂಪು ಅವರ ನಾಡಗೀತೆಯಲ್ಲಿ ವರ್ಣಿತವಾದ ಶಿಷ್ಟ, ಪೌರಾಣಿಕ, ಚಾರಿತ್ರಿಕ ಪರಂಪರೆಗೆ ಪ್ರತಿಯಾಗಿ, ಜನಪದರ ಮತ್ತು ಅಂಚಿನ ಸಮುದಾಯಗಳ ಜೀವಂತ ಭಾಷೆಯಾಗಿ ಕನ್ನಡವನ್ನು ಪುನರ್‌ ಸ್ಥಾಪಿಸುವ ಪ್ರಯತ್ನ ನಡೆಯಿತು.

ಹೀಗೆ, ಈ ಹಂತದಲ್ಲಿ ಕನ್ನಡ ಪ್ರಜ್ಞೆಯು ಕೇವಲ ಗತವೈಭವವನ್ನು ಕೊಂಡಾಡುವುದನ್ನು ನಿಲ್ಲಿಸಿ, ತನ್ನ ಆತ್ಮವಿಸ್ಮೃತಿಯ ಕಟು ವಾಸ್ತವವನ್ನು ಎದುರಿಸಿತು. ‘ಪರರ ನುಡಿಗೆ ಮಿಡುಕುವ'(ಕನ್ನಡಿಗರ ತಾಯಿ, ಪೈ) ಮತ್ತು ‘ಹೊರಮನೆಯ ಬಾಣಸಿಗರು’ (ನಾಡಿನ ಹಾಡು, ಗೋಕಾಕ್) ಆಗಿ ಬದುಕುತ್ತಿರುವ ತನ್ನ ದ್ವಂದ್ವ ಸ್ಥಿತಿಯನ್ನು ಇದು ಮುಖಾಮುಖಿಯಾಗಿಸಿತು.

ಹಂತ ೫: ಸಮನ್ವಯ ಮತ್ತು ನಿತ್ಯೋತ್ಸವದ ದೃಷ್ಟಿ

ಪ್ರೇಮ, ಪೂಜೆ, ಹೋರಾಟ ಮತ್ತು ಆತ್ಮವಿಮರ್ಶೆಯ ಹಂತಗಳನ್ನು ದಾಟಿ ಬಂದ ಕನ್ನಡ ಪ್ರಜ್ಞೆಯು, ಅಂತಿಮವಾಗಿ ಒಂದು ಪ್ರಬುದ್ಧ ಸಮನ್ವಯದ ನೆಲೆಯನ್ನು ತಲುಪುತ್ತದೆ. ಕೆ.ಎಸ್. ನಿಸಾರ್ ಅಹಮದ್ ಅವರ ‘ನಿತ್ಯೋತ್ಸವ’ ಕವಿತೆಯು ಈ ಸಮನ್ವಯದ ಶ್ರೇಷ್ಠ ಅಭಿವ್ಯಕ್ತಿಯಾಗಿದೆ. ಇದರಲ್ಲಿ ಅವರು ನಾಡಿನ ಪ್ರಕೃತಿ ಸೌಂದರ್ಯ(‘ಜೋಗದ ಸಿರಿ’), ಇತಿಹಾಸದ ಹೆಗ್ಗುರುತು (‘ಶಾಸನಗಳ ಸಾಲು’), ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಒಂದೆಡೆ ಸೇರಿಸುತ್ತಾರೆ. ಆದರೆ, ಅವನ್ನು ಕೇವಲ ಸ್ಮರಣೀಯ ಸಂಗತಿಗಳಾಗಿಸದೆ, ನಿರಂತರವಾಗಿ ಆಚರಿಸಬೇಕಾದ ‘ನಿತ್ಯೋತ್ಸವ’ವನ್ನಾಗಿ ಪರಿವರ್ತಿಸುತ್ತಾರೆ. ‘ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ’ ಎಂಬ ಸಾಲುಗಳು, ಭೇದಗಳನ್ನು ಮೀರಿದ ಆಧುನಿಕ, ಜಾತ್ಯತೀತ ಕರ್ನಾಟಕದ ಆದರ್ಶವನ್ನು ಬಿಂಬಿಸುತ್ತವೆ.

ಕೆ.ಎಸ್. ನಿಸಾರ್ ಅಹಮದ್

ಅಚ್ಚರಿಯ ಸಂಗತಿಯೆಂದರೆ, ಈ ಆಧುನಿಕ ಆದರ್ಶದ ಬೀಜವು ದಶಕಗಳ ಹಿಂದೆಯೇ ಕುವೆಂಪು ಅವರ ನಾಡಗೀತೆಯಲ್ಲಿ ಬಿತ್ತಲ್ಪಟ್ಟಿತ್ತು. ಕುವೆಂಪು ಅವರು ನಾಡನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಕರೆದಾಗಲೇ ಈ ಸಮನ್ವಯದ ದೃಷ್ಟಿಗೆ ಅಡಿಪಾಯ ಹಾಕಿದ್ದರು. ‘ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ’ ಎಂದು ಸ್ಪಷ್ಟವಾಗಿ ನಮೂದಿಸುವ ಮೂಲಕ, ಅವರು ಎಲ್ಲ ಧರ್ಮೀಯರನ್ನೂ ಒಳಗೊಳ್ಳುವ ಬಹುತ್ವದ ಕರ್ನಾಟಕದ ಕನಸನ್ನು ಕಂಡಿದ್ದರು. ‘ನಾನಕ ರಾಮಾನಂದ ಕಬೀರರ’ ಹೆಸರನ್ನು ಸ್ಮರಿಸುವ ಮೂಲಕ, ಕನ್ನಡ ಪ್ರಜ್ಞೆಯು ಕೇವಲ ಪ್ರಾದೇಶಿಕವಲ್ಲ, ಅದೊಂದು ರಾಷ್ಟ್ರೀಯ, ಸೌಹಾರ್ದಯುತ ಪ್ರಜ್ಞೆ ಎಂಬುದನ್ನು ಸಾರಿದ್ದರು. ಹೀಗಾಗಿ, ನಿಸಾರ್ ಅಹಮದರ ‘ನಿತ್ಯೋತ್ಸವ’ವು ಕುವೆಂಪು ಅವರ ‘ವಿಶ್ವಮಾನವ’ ಸಂದೇಶದ ಮತ್ತು ‘ಸರ್ವಜನಾಂಗದ ಶಾಂತಿಯ ತೋಟ’ದ ಸಹಜ, ಆಧುನಿಕ ವಿಸ್ತರಣೆಯಾಗಿದೆ.

ಜೀವಂತ ಚೇತನದ ನಿರಂತರ ಪಯಣ

ಕನ್ನಡ ನಾಡು-ನುಡಿಯ ಕಾವ್ಯ ಪರಂಪರೆಯು ಒಂದೇ ದಿಕ್ಕಿನಲ್ಲಿ ಹರಿಯುವ ಪ್ರವಾಹವಲ್ಲ; ಅದು ತನ್ನ ಕಾಲದ ಅಗತ್ಯಗಳಿಗೆ ತಕ್ಕಂತೆ ನಿರಂತರವಾಗಿ ರೂಪಾಂತರಗೊಳ್ಳುತ್ತಾ, ವಿಕಾಸ ಹೊಂದುತ್ತಾ ಬಂದಿರುವ ಒಂದು ಜೀವಂತ ಚೇತನದ ಪಯಣ. ಆನಂದಕಂದರ ವೈಯಕ್ತಿಕ ಪ್ರೇಮವು ಗೋವಿಂದ ಪೈಗಳಲ್ಲಿ ಐತಿಹಾಸಿಕ ಅಸ್ಮಿತೆಯಾಗಿ ರೂಪುಗೊಂಡರೆ; ಹುಯಿಲಗೋಳರ ರಾಜಕೀಯ ಘೋಷಣೆಯು ಮಾಸ್ತಿಯವರಲ್ಲಿ ಆರ್ತ ನೋವಿನ ಅಭಿವ್ಯಕ್ತಿಯಾಯಿತು; ಬೇಂದ್ರೆಯವರ ಜಾಗೃತಿಯ ಕರೆಯು ಕುವೆಂಪು ಅವರಲ್ಲಿ ಆಧ್ಯಾತ್ಮಿಕ ಆಜ್ಞೆಯಾಗಿ ಮೊಳಗಿತು; ಕಣವಿಯವರ ರಚನಾತ್ಮಕ ಚಿಂತನೆಗೆ ಅಡಿಗರ ಕ್ರಾಂತಿಕಾರಿ ಆಕ್ರೋಶವು ಪ್ರತಿವಾದವಾಗಿ ನಿಂತಿತು. ‘ಜಯ ಹೇ ಕರ್ನಾಟಕ ಮಾತೆ’ಯು ಈ ಪಯಣದಲ್ಲಿ ಕೇವಲ ಒಂದು ಮೈಲಿಗಲ್ಲಲ್ಲ; ಅದೊಂದು ಆಧಾರಸ್ತಂಭ ಮತ್ತು ಮಾರ್ಗದರ್ಶಿ ನಕ್ಷತ್ರ. ಅದು ನಾಡಿನ ವೈಭವವನ್ನು ಪೂಜಿಸುವ, ಏಕೀಕರಣಕ್ಕೆ ಜಾಗೃತಿ ಮೂಡಿಸುವ ಮತ್ತು ಸರ್ವರನ್ನೂ ಒಳಗೊಳ್ಳುವ ಸಮನ್ವಯದ ಆದರ್ಶವನ್ನು ಬಿತ್ತುವ ಬಹುಮುಖಿ ಕಾರ್ಯವನ್ನು ಏಕಕಾಲಕ್ಕೆ ನಿರ್ವಹಿಸುತ್ತದೆ.

ಕಣವಿಯವರು

ಕೆಲವು ಮಿತಿಗಳಾಚೆಗೆ, ಈ ಮಹಾನ್ ಪರಂಪರೆಯು ನಮಗೆ ನೀಡುವ ನಿಜವಾದ ಸ್ಫೂರ್ತಿಯೆಂದರೆ, ಕವಿಗಳು ತಮ್ಮ ಕಾಲದ ಬಿಕ್ಕಟ್ಟುಗಳಿಗೆ ಸ್ಪಂದಿಸಿದಂತೆ, ನಾವೂ ನಮ್ಮ ಕಾಲದ ಸವಾಲುಗಳಿಗೆ ಸೃಜನಶೀಲವಾಗಿ ಮತ್ತು ವಿಮರ್ಶಾತ್ಮಕವಾಗಿ ಮುಖಾಮುಖಿಯಾಗಬೇಕು. ಏಕೆಂದರೆ, ಜಾಗತೀಕರಣ, ತಂತ್ರಜ್ಞಾನ, ಪ್ರಾದೇಶಿಕ ಅಸಮತೋಲನ, ವಲಸೆ ಮತ್ತು ಸಾಮಾಜಿಕ ನ್ಯಾಯದಂತಹ ಇಂದಿನ ಸಂಕೀರ್ಣ ಪ್ರಶ್ನೆಗಳಿಗೆ, ಕೇವಲ ಹಳೆಯ ವೈಭವದ ಹಾಡುಗಳು ಉತ್ತರವಾಗಲಾರವು.

ತಾಳಿಕೋಟೆಯ ಸೋಲು ನಮ್ಮ ಇತಿಹಾಸದ ಕೊನೆಯಲ್ಲ; ‘ಸೋತು ನೀನೆ ಗೆದ್ದೆಯಲ್ಲ’(ಪೈ) ಎಂಬ ಛಲ ನಮ್ಮ ಚೈತನ್ಯ. ಈ ಮಹಾನ್ ಪರಂಪರೆಯು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ನಾವು ಕಟ್ಟಬೇಕಾದದ್ದು ಕೇವಲ ಭಾವನಾತ್ಮಕ ಘೋಷಣೆಗಳ ನಾಡನ್ನಲ್ಲ. ಬದಲಿಗೆ, ಜ್ಞಾನ, ವಿಜ್ಞಾನ ಮತ್ತು ಎಲ್ಲರನ್ನೂ ಒಳಗೊಳ್ಳುವ ಮಾನವೀಯತೆಯ ತಳಹದಿಯ ಮೇಲೆ ‘ಉಸಿರಾಗಲಿ ಕನ್ನಡ’ ಎಂಬ ಕನಸನ್ನು ನನಸು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕವಿವಾಣಿಗಳೇ ಆ ದಿಟ್ಟ ಹೆಜ್ಜೆಗೆ ಬೇಕಾದ ಅನನ್ಯ ಸ್ಫೂರ್ತಿಯ ಸೆಲೆಯಾಗಿ ಸದಾ ನಮ್ಮನ್ನು ಮುನ್ನಡೆಸಲಿ.

ಡಾ. ರವಿ ಎಂ. ಸಿದ್ಲಿಪುರ‌

ಸಹಾಯಕ ಪ್ರಾಧ್ಯಾಪಕರು

ಇದನ್ನೂ ಓದಿ- ಕರ್ನಾಟಕ ರಾಜ್ಯೋತ್ಸವ ವಿಶೇಷ- ಕನ್ನಡ ಕಲಿಸುವ ಪೋಷಕತ್ವ

More articles

Latest article