ನನ್ನಂತಹ ವಸ್ತುನಿಷ್ಠವಾಗಿ ಬರೆಯುವವರ ಲೇಖನಗಳನ್ನು ಬಹುತೇಕ ಪತ್ರಿಕೆಗಳು ಪ್ರಕಟಿಸುವುದಿಲ್ಲ. ಆದರೆ ಕನ್ನಡ ಪ್ಲಾನೆಟ್ ನಲ್ಲಿ ಅದಕ್ಕೆ ಬೇಕಾದಷ್ಟು ಅವಕಾಶಗಳಿವೆ. ಕಳೆದ ಒಂದು ವರ್ಷದಿಂದ ನಾನು ಬರೆದ ಇನ್ನೂರಕ್ಕೂ ಹೆಚ್ಚು ಲೇಖನಗಳನ್ನು ಕನ್ನಡ ಪ್ಲಾನೆಟ್ ಪ್ರಕಟಿಸಿದೆ. ವಿಮರ್ಶಾತ್ಮಕವಾಗಿ ಬರೆಯುವವರಿಗೆ, ಹೊಸಬರಿಗೆ ವೇದಿಕೆಯನ್ನು ಕಲ್ಪಿಸಿದೆ. ವೈಚಾರಿಕತೆಗೆ ಪ್ರಾಧಾನ್ಯತೆಯನ್ನು ಕೊಡಲಾಗಿದೆ. ಹೀಗಾಗಿ ನನ್ನ ಮೊದಲ ಆಯ್ಕೆ “ಕನ್ನಡ ಪ್ಲಾನೆಟ್” ಆಗಿದೆ – ಶಶಿಕಾಂತ ಯಡಹಳ್ಳಿ, ರಂಗಕರ್ಮಿ.
ಈ ದೇಶದಲ್ಲಿ ಮಾರಿಕೊಂಡ ಮಾಧ್ಯಮಗಳು ಅರ್ಥಾತ್ ಮಡಿಲ ಮಾಧ್ಯಮಗಳು ಅರ್ಥಾತ್ ಸಂಘಿ ಮೀಡಿಯಾಂಗಗಳು ಮೋದಿ ಭಜನೆ ಹಾಗೂ ಸಂಘಿ ಸೇವೆಯಲ್ಲಿ ತಮ್ಮ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿವೆ. ಸುದ್ದಿಗಳನ್ನು ತಿರುಚುವುದು, ಭಾವನೆಗಳನ್ನು ಕೆರಳಿಸುವುದು, ದ್ವೇಷವನ್ನು ಬಿತ್ತುವುದು ಹಾಗೂ ಮನುವಾದಿ ಸಿದ್ಧಾಂತದ ಪರವಾಗಿ ಸಂಕಥನಗಳನ್ನು ನಿರೂಪಿಸುವುದರಲ್ಲೇ ಗೋದಿ ಮಾಧ್ಯಮಗಳು ಹಗಲು ರಾತ್ರಿ ನಿರತವಾಗಿವೆ. ಯಾರೋ ಕಿಡಿಗೇಡಿಗಳು ಹಸುವಿನ ಕೆಚ್ಚಲು ಗಾಯಗೊಳಿಸಿದ್ದನ್ನು ನಿರಂತರವಾಗಿ ಬಿತ್ತರಿಸಿ ಭಾವಪ್ರಚೋದನೆಯನ್ನು ಮಾಡುವ ಈ ಮಾಧ್ಯಮಗಳು, ದಲಿತರ ಮೇಲೆ ನಡೆವ ಹಲ್ಲೆಗಳ ಸುದ್ದಿಗೇ ಹೋಗುವುದಿಲ್ಲ. ಹಿಂದುತ್ವಕ್ಕೆ ಪೂರಕವಾದ ಸುದ್ದಿಗಳನ್ನು ಮಾತ್ರ ರೋಚಕವಾಗಿ ತೋರಿಸುವ ಮೂಲಕ ತಮ್ಮ ನಿಷ್ಟೆ ಯಾರ ಪರವಾಗಿದೆ ಎಂಬುದನ್ನು ಸಾಬೀತು ಪಡಿಸುತ್ತಲೇ ಇವೆ. ಸುಳ್ಳು ಸುದ್ದಿಗಳು, ಊಹಾ ವರದಿಗಳು, ಏಕಪಕ್ಷೀಯ ಸಂವಾದಗಳು ಅತಿಯಾಗಿರುವ ಈ ದುರಿತ ಕಾಲದಲ್ಲಿ ಸತ್ಯ ಸಂಗತಿಗಳನ್ನು ಅರಿತುಕೊಳ್ಳುವುದೇ ಕಷ್ಟಕರವಾಗಿದೆ.
ಇಂತಹ ಸಂದರ್ಭಗಳಲ್ಲಿ ಸತ್ಯ ಸಂಗತಿಗಳನ್ನು ತಿಳಿಸುವ, ವಸ್ತುನಿಷ್ಠ ವರದಿಗಳನ್ನು ಪ್ರಚಾರಪಡಿಸುವ, ಮಡಿಲ ಮಾಧ್ಯಮಗಳು ಹಬ್ಬಿಸುವ ಏಕಪಕ್ಷೀಯ ಕಥನಗಳನ್ನು ವಿಶ್ಲೇಷಿಸುವ ಕೆಲಸವನ್ನು ಪರ್ಯಾಯ ಡಿಜಿಟಲ್ ಮಾಧ್ಯಮಗಳು ಮಾಡುತ್ತಾ, ಸತ್ಯ ಸಂಗತಿಗಳ ಮೇಲೆ ವೈಚಾರಿಕ ಬೆಳಕನ್ನು ಚೆಲ್ಲುತ್ತಿವೆ.
ಅಂತಹ ಬದ್ಧತೆಯ ಕಾಯಕವನ್ನು ಕನ್ನಡದಲ್ಲಿ ಮಾಡುತ್ತಾ ಬಂದಿರುವ “ಕನ್ನಡ ಪ್ಲಾನೆಟ್.ಕಾಮ್” ಎನ್ನುವ ಡಿಜಿಟಲ್ ಸುದ್ದಿ ಮಾಧ್ಯಮಕ್ಕೆ ಈಗ ಒಂದು ವರ್ಷ ತುಂಬಿದೆ. ನನ್ನಂತಹ ವಸ್ತುನಿಷ್ಠವಾಗಿ ಬರೆಯುವವರ ಲೇಖನಗಳನ್ನು ಬಹುತೇಕ ಪತ್ರಿಕೆಗಳು ಪ್ರಕಟಿಸುವುದಿಲ್ಲ. ಆದರೆ ಕನ್ನಡ ಪ್ಲಾನೆಟ್ ನಲ್ಲಿ ಅದಕ್ಕೆ ಬೇಕಾದಷ್ಟು ಅವಕಾಶಗಳಿವೆ. ಕಳೆದ ಒಂದು ವರ್ಷದಿಂದ ನಾನು ಬರೆದ ಇನ್ನೂರಕ್ಕೂ ಹೆಚ್ಚು ಲೇಖನಗಳನ್ನು ಕನ್ನಡ ಪ್ಲಾನೆಟ್ ಪ್ರಕಟಿಸಿದೆ. ಅವಸರದಲ್ಲಿ ಬರೆದ ಹಲವಾರು ಲೇಖನಗಳನ್ನು ಮ್ಯಾಗಸಿನ್ ಎಡಿಟರ್ ಗುಲಾಬಿ ಬಿಳಿಮಲೆಯವರು ತಿದ್ದಿ ತೀಡಿ ಅಕ್ಷರ ತಪ್ಪು ಸರಿಪಡಿಸಿ, ಚೆಂದದ ಥಂಬ್ ವಿನ್ಯಾಸ ಮಾಡಿಸಿ ಪ್ರಕಟಿಸುತ್ತಲೇ ಬಂದಿದ್ದಾರೆ. ವಿಮರ್ಶಾತ್ಮಕವಾಗಿ ಬರೆಯುವವರಿಗೆ ಪ್ಲಾನೆಟ್ ವೇದಿಕೆಯನ್ನು ಕಲ್ಪಿಸಿದೆ. ವೈಚಾರಿಕತೆಗೆ ಪ್ರಾಧಾನ್ಯತೆಯನ್ನು ಕೊಡಲಾಗಿದೆ. ಹೀಗಾಗಿ ನನ್ನ ಮೊದಲ ಆಯ್ಕೆ “ಕನ್ನಡ ಪ್ಲಾನೆಟ್” ಆಗಿದೆ.
ಡಿಜಿಟಲ್ ಮಾಧ್ಯಮವೊಂದನ್ನು ಆರಂಭಿಸಿ ನಿರಂತರವಾಗಿ ಮುನ್ನಡೆಸುವುದು ಅಂದುಕೊಂಡಷ್ಟು ಸರಳವೂ ಅಲ್ಲ, ಸುಲಭವಂತೂ ಮೊದಲೇ ಅಲ್ಲಾ. ಅದಕ್ಕೆ ಬೇಕಾದಷ್ಟು ಕ್ರಿಯಾಶೀಲ ವ್ಯಕ್ತಿಗಳ ತಂಡ ಬೇಕಾಗುತ್ತದೆ. ಆರ್ಥಿಕ ಸಂಪನ್ಮೂಲಗಳ ಅಗತ್ಯವಿರುತ್ತದೆ. ವ್ಯವಸ್ಥೆಯ ವಿರುದ್ಧ ನಿಂತಿರುವುದರಿಂದ ಅನೇಕ ಥ್ರೆಟ್ ಗಳನ್ನು ಎದುರಿಸಬೇಕಾಗುತ್ತದೆ. ಲೇಖಕರ ತಂಡವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಇವೆಲ್ಲವನ್ನೂ ನಿಭಾಯಿಸಿ ಪ್ರತಿ ದಿನ ಸುದ್ದಿ, ಲೇಖನ, ವಿಡಿಯೋಗಳನ್ನು ಅಪ್ಲೋಡ್ ಮಾಡುವುದಷ್ಟೇ ಅಲ್ಲಾ, ಅವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪುವಂತೆ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿದೆ.
ಕನ್ನಡ ಪ್ಲಾನೆಟ್ ತಂಡದಲ್ಲಿರುವವರು ಯಾರೂ ಆರ್ಥಿಕವಾಗಿ ಸಬಲರಲ್ಲ. ರಾಜಕೀಯವಾಗಿ ಪ್ರಭಾವಿಗಳೂ ಅಲ್ಲ. ಏನಾದರೂ ಮಾಡಬೇಕು ಎನ್ನುವ ಉತ್ಸಾಹ ಹಾಗೂ ಸಾಮಾಜಿಕ ಬದ್ಧತೆಯನ್ನಷ್ಟೇ ಇಟ್ಟುಕೊಂಡವರು ಅವರು. ಈ ರೀತಿಯ ಪರ್ಯಾಯ ಮಾಧ್ಯಮಗಳು ಆರ್ಥಿಕವಾಗಿ ಲಾಭದಾಯಕವಂತೂ ಮೊದಲೇ ಅಲ್ಲ. ಏನೇ ಆದರೂ ಪ್ಲಾನೆಟ್ ತಂಡದ ಹರ್ಷ, ದಿನೇಶ್ ಕುಮಾರ್ ರವರಂತಹ ಕ್ರಿಯಾಶೀಲ ಮನಸುಗಳು, ಬದ್ಧತೆಯಿಂದ ಕೆಲಸ ಮಾಡುವ ತಂಡ ಕನ್ನಡ ಪ್ಲಾನೆಟ್ ಹಿಂದಿನ ಶಕ್ತಿಗಳಾಗಿವೆ; ಪ್ರವಾಹದ ವಿರುದ್ಧ ಈಜಿ ಗೆಲ್ಲುವ ಸಾಹಸ ಮಾಡುತ್ತಲೇ ಇವೆ.
ಕನ್ನಡ ಪ್ಲಾನೆಟ್ ಗೆ ಒಂದು ವರ್ಷ ತುಂಬಿದ ಸಂದರ್ಭವನ್ನು ” ಭಾರತದ ಸಂವಿಧಾನ ಸಂಭ್ರಮ-75″ ಹೆಸರಲ್ಲಿ ಜನವರಿ 11 ರಂದು ಸಮ್ಮೇಳನವನ್ನು ಹಮ್ಮಿಕೊಂಡಿದ್ದು ಅರ್ಥಪೂರ್ಣವಾಗಿದೆ. ಮನುವಾದಿ ಶಕ್ತಿಗಳು ಬಾಬಾಸಾಹೇಬರ ಸಂವಿಧಾನವನ್ನೇ ಬದಲಾಯಿಸುವ ಹುನ್ನಾರದಲ್ಲಿರುವಾಗ, ಸರ್ವರಿಗೂ ಸಮಾನತೆಯನ್ನು ಸಾರುವ ಸಂವಿಧಾನವನ್ನು ಕಾಪಾಡಿಕೊಳ್ಳುವುದು ಈಗಿನ ತುರ್ತು ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಕನ್ನಡ ಪ್ಲಾನೆಟ್ ಬಳಗ ಸಮ್ಮೇಳನ ಹಮ್ಮಿಕೊಂಡಿರುವುದು, ಅಲ್ಲಿ ಅರ್ಥಪೂರ್ಣ ವಿಷಯಗಳನ್ನು ಮಂಡಿಸಿರುವುದು, ಸಂವಿಧಾನದ ಪರವಾಗಿ ಚರ್ಚೆ ಸಂವಾದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಈಗಿನ ದುರಿತ ಕಾಲದ ಅಗತ್ಯವಾಗಿದೆ. ಕಗ್ಗತ್ತಲೆಯಲ್ಲಿ ಬೆಳಕಿನ ಕಿರಣಗಳು ಮೂಡಿದಂತಿದೆ. ಮಡಿಲ ಮಾಧ್ಯಮಗಳ ಸುಳ್ಳು ಸೃಷ್ಟಿಗಳ ವಿರುದ್ಧ ವಸ್ತುನಿಷ್ಠವಾಗಿ ಸತ್ಯವನ್ನು ಪ್ರಚಾರ ಮಾಡುತ್ತಿರುವ ಕನ್ನಡ ಪ್ಲಾನೆಟ್ ನಂತಹ ಪರ್ಯಾಯ ಮಾಧ್ಯಮಗಳ ಅಗತ್ಯ ತುಂಬಾ ಇದೆ.
ಒಂದು ವರ್ಷದ ಗಡಿಯನ್ನು ತಲುಪಿದ ಕನ್ನಡ ಪ್ಲಾನೆಟ್ ಮಾಧ್ಯಮಕ್ಕೆ ಅಭಿನಂದನೆಗಳು. ಜನಪರ ಹಾಗೂ ಜೀವಪರ ಆಶಯಗಳನ್ನು ಇಟ್ಟುಕೊಂಡು ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಪ್ಲಾನೆಟ್ ಬಳಗಕ್ಕೆ ಧನ್ಯವಾದಗಳು.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ರಂಗಕರ್ಮಿಗಳು
ಇದನ್ನೂ ಓದಿ- ಉದ್ರೇಕಗೊಳಿಸದೆ ವಿವೇಕ ಮೂಡಿಸುತ್ತಿರುವ ಕನ್ನಡ ಪ್ಲಾನೆಟ್ ಸುದ್ದಿ ಮಾಧ್ಯಮಕ್ಕೆ ಬರಗೂರು ರಾಮಚಂದ್ರಪ್ಪ ಮೆಚ್ಚುಗೆ