ಶ್ರೀರಂಗಪಟ್ಟಣ 3 ನೇ ಅಪರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನವರಿ ೧೦ ರಂದು ವಿಚಾರಣೆ ನಡೆಸಿ ಆದೇಶವನ್ನು ೧೭ಕ್ಕೆ ಕಾಯ್ದಿಸಿತ್ತು. ಈಗ ಆದೇಶ ಹೊರಬಿದಿದ್ದು RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ಗೆ ಶ್ರೀರಂಗಪಟ್ಟಣ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
“ಸುಪ್ರಿಂ ಕೋರ್ಟ್ ಮತ್ತು ಹಲವು ಹೈಕೋರ್ಟ್ ಗಳ ತೀರ್ಪುಗಳ ಪ್ರಕಾರ ಆರೋಪಿ ಕಲ್ಲಡ್ಕ ಪ್ರಭಾಕರ್ ಭಟ್ ನಿರೀಕ್ಷಣಾ ಜಾಮೀನಿಗೆ ಅನರ್ಹನಾಗಿದ್ದಾನೆ. ದೇಶದ ಭದ್ರತೆ, ಸೌಹಾರ್ದತೆಗೆ ಈ ಆರೋಪಿ ಕಂಟಕವಾಗಿದ್ದಾನೆ. ಈ ಹಿಂದಿನ ಐಪಿಸಿ ಮಾತ್ರವಲ್ಲ, ಈಗಿನ ನ್ಯಾಯ ಸಂಹಿತಾ ಮತ್ತು ಸಾಕ್ಷ್ಯ ಅಧಿನಿಯಮದ ಪ್ರಕಾರವೂ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನಿಗೆ ಅನರ್ಹನಾಗಿದ್ದಾನೆ” ಎಂದು ಕಾನೂನು, ಕಾಯ್ದೆಗಳನ್ನು ಉಲ್ಲೇಖಿಸಿ ಹಿರಿಯ ವಕೀಲರಾದ ಎಸ್ ಬಾಲನ್ ಜನವರಿ ೧೦ ರಂದು ವಾದ ಮಂಡಿಸಿದ್ದರು.
ನಿರೀಕ್ಷಣಾ ಜಾಮೀನಿನ ಅರ್ಜಿಯ ಬಗೆಗಿನ ವಾದ ಮುಕ್ತಾಯಗೊಂಡಿದ್ದು ಆದೇಶವನ್ನು ಜನವರಿ 17 ಕ್ಕೆ ಕಾಯ್ದಿರಿಸಿತ್ತು. ಈಗ RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ಗೆ ಕೋರ್ಟ್ ನಿಂದ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಮಂಡ್ಯದಲ್ಲಿ ನಡೆದ ಹನುಮ ಶೋಭಾಯಾತ್ರೆಯಲ್ಲಿ ಮಾತನಾಡಿದ್ದ ಪ್ರಭಾಕರ್ ಭಟ್, “ಹಿಂದೆ ತಲಾಕ್ ತಲಾಕ್ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದರು. ದಿನಕ್ಕೊಬ್ಬ ಗಂಡ ಬದಲಾಗ್ತಿದ್ದ. ನಿಮಗೆ ಪರ್ಮನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ. ತಲಾಕ್ ರದ್ದು ಮಾಡಿ ನಿಮಗೆ ಗೌರವ ಕೊಟ್ಟಿದ್ದು ಇದೇ ಹಿಂದೂ ಧರ್ಮ” ಎಂದು ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇನ್ನೂ ಅನೇಕ ಪ್ರಚೋದನಕಾರಿ ಮಾತುಗಳನ್ನು ಅದೇ ಭಾಷಣದಲ್ಲಿ ಪ್ರಭಾಕರ್ ಭಟ್ ಹೇಳಿದ್ದ. ಈ ಬಗ್ಗೆ ರಾಜ್ಯಾದ್ಯಂತ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಹಿಳಾ ಹೋರಾಟಗಾರ್ತಿ ನಜ್ಮಾ ನಝೀರ್ ಚಿಕ್ಕನೇರಳೆ ಎಂಬುವರು ದೂರನ್ನು ಆಧರಿಸಿ ಐಪಿಸಿ ಸೆಕ್ಷನ್ 294, 295, 298, 354, 506, 509 ಮತ್ತು 153 ಎ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
‘ಮುಸ್ಲಿಂ ಮಹಿಳೆಯರ ಬಗ್ಗೆ ಪ್ರಭಾಕರ ಭಟ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಧರ್ಮಗಳ ನಡುವೆ ಗಲಭೆ, ಅಶಾಂತಿ ಸೃಷ್ಟಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯನ್ನೂ ಅಣಕಿಸಿದ್ದಾರೆ. ಪ್ರಭಾಕರ ಭಟ್ ವಿರುದ್ಧ ಈ ಹಿಂದೆಯೂ ರಾಜ್ಯದ ಹಲವು ಠಾಣೆಗಳಲ್ಲೂ ಈ ರೀತಿಯ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಅವರ ವಿರುದ್ಧ ರೌಡಿಶೀಟ್ ತೆರೆಯಬೇಕು’ ಎಂದು ನಜ್ಮಾ ದೂರಿನಲ್ಲಿ ಒತ್ತಾಯಿಸಿದ್ದರು.