Saturday, December 7, 2024

ಮೈಸೂರು ಸ್ಯಾಂಡಲ್ ನಕಲಿ​ ಸೋಪ್ ತಯಾರಿಕೆ ಪ್ರಕರಣದಲ್ಲಿ ಬಿಜೆಪಿ ನಾಯಕರಿದ್ದಾರೆ : ಪ್ರಿಯಾಂಕ್ ಖರ್ಗೆ

Most read

ಹೈದರಾಬಾದ್​ನಲ್ಲಿ ಮೈಸೂರು ಸ್ಯಾಂಡಲ್ (Mysore Sandal Soap) ನಕಲಿ​ ಸೋಪ್ ತಯಾರಿಕೆ ಘಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಇಬ್ಬರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಇವರಿಬ್ಬರೂ ಕೂಡ ಬಿಜೆಪಿ ನಾಯಕರು ಎಂಬುದು ಬೆಳಕಿಗೆ ಬಂದಿದ್ದು ಈಗ ಚರ್ಚೆಗೆ ಕಾರಣವಾಗಿದೆ.

 ಕಾರ್ಖಾನೆ ನಡೆಸುತ್ತಿದ್ದ ರಾಕೇಶ್ ಜೈನ್, ಮಹಾವೀರ್ ಜೈನ್ ಎಂಬುವವರ ಮೇಲೆ ಎಫ್ಐಆರ್ ದಾಖಲಾಗಿದೆ. ಆರೋಪಿತ ಜೈನ್​ಗಳಿಬ್ಬರೂ ಕೂಡ ಬಿಜೆಪಿಯ ಸಕ್ರಿಯ ನಾಯಕರು, ಕಾರ್ಯಕರ್ತರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿಯ ರಾಜಾ ಸಿಂಗ್ ಜೊತೆಗೆ ನಿಕಟ ಸಂಪರ್ಕದಲ್ಲಿ ಇದ್ದಾರೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆರೋಪ ಮಾಡಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಎಂಬಿ ಪಾಟೀಲ್ ಅವರಿಗೆ ಅನಾಮಿಕನೊಬ್ಬ ಕರೆ ಮಾಡುತ್ತಾನೆ. ಮೈಸೂರು ಸ್ಯಾಂಡಲ್ ನಕಲಿ​ ಸೋಪ್ ಮಾರಾಟದ ಬಗ್ಗೆ ಮಾಹಿತಿ ನೀಡುತ್ತಾನೆ. ಎಂ.ಬಿ ಪಾಟೀಲ್​ ಅವರು ಇಲ್ಲಿನ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟದ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ನೀಡುತ್ತಾರೆ. ನಂತರ ನಮ್ಮ ಅಧಿಕಾರಿಗಳು ನಕಲಿ ಸೋಪ್ ತಯಾರಿಕೆ ಮತ್ತು ಮಾರಾಟ ಜಾಲ ಪತ್ತೆ ಹಚ್ಚಲು ಮುಂದಾದರು ಎಂದು ತಿಳಿಸಿದರು.

ನಂತರ ಈ ಜಾಲದ ಹುಡುಕಾಟ ನಡೆದಿದ್ದು, ಇದು ಹೈದರಾಬಾದ್ ನಲ್ಲಿದೆ ಎಂದು ತಿಳಿಯುತ್ತದೆ. ಇದನ್ನು ಪರಿಶೀಲಿಸಲು ಕೆಲವು ಅಧಿಕಾರಿಗಳು ಹೈದರಾಬಾದ್ ತೆರಳಿ 25 ಲಕ್ಷ ರೂ. ಆರ್ಡರ್ ಇದೆ ಅಂತ ಹೇಳುತ್ತಾರೆ. ಅವರು ಇದನ್ನು ಪೂರೈಸುವುದಾಗಿ ಒಪ್ಪಿಕೊಳ್ಳುತ್ತಾರೆ. ಇದು ದೊಡ್ಡ ಮಟ್ಟದ ಆರ್ಡರ್ ಆಗಿರುವುದರಿಂದ ನಿಮ್ಮ ಕಾರ್ಖಾನೆಗೆ ಬಂದು ತೆಗೆದುಕೊಂಡು ಹೋಗುತ್ತೇವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಅದಕ್ಕೆ ಅವರೂ ಒಪ್ಪುತ್ತಾರೆ. ಈ ನಕಲಿ ಉತ್ಪಾದನಾ ಕಾರ್ಖಾನೆ ವಿಳಾಸ ತಿಳಿದ ತಕ್ಷಣ ದಾಳಿ ಮಾಡಿ ವಸ್ತುಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್, ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರ ಪುತ್ರ ವಿಠಲ್ ನಾಯಕ್ ಜತೆ ಒಡನಾಟ ಇಟ್ಟುಕೊಂಡಿದ್ದಾರೆ. ಈ ಕಾರ್ಯಾಚರಣೆ ಮಾಡಿದ್ದು ರಾಜ್ಯದ ಆಸ್ತಿ ಉಳಿಸಿಕೊಳ್ಳಲು. ಕೃಷ್ಣರಾಜ ಒಡೆಯರ್ ಅವರು 1916ರಲ್ಲಿ ಸ್ಥಾಪಿಸಿದ ಸಂಸ್ಥೆ ಇದಾಗಿದ್ದು, ಕರ್ನಾಟಕದ ಹೆಮ್ಮೆಯ ಉತ್ಪನ್ನ. ಪ್ರಧಾನಮಂತ್ರಿಗಳ ಮೇಕ್ ಇನ್ ಇಡಿಯಾ, ವೋಕಲ್ ಫಾರ್ ಲೋಕಲ್ ಯೋಜನೆಗೂ ಮುನ್ನ  ಪ್ರಾರಂಭವಾಗಿರುವ ಸಂಸ್ಥೆಗಳು. 

ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ ಪ್ಯಾರೀಸ್ ಹೋಗುವ ಅವಕಾಶ ಸಿಕ್ಕಿತ್ತು. ಅಲ್ಲಿ ಪ್ರತಿ ದೇಶ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ಅವಕಾಶವಿರುತ್ತದೆ. ಅಲ್ಲಿನ ಜನ ಮೈಸೂರ್ ಸ್ಯಾಂಡಲ್ ಸೋಪನ್ನು ಪ್ಯಾರೀಸ್ ನಲ್ಲಿ ಮಾರಾಟ ಮಾಡುವುದಿಲ್ಲ ಯಾಕೆ ಎಂದು ಕೇಳಿದ್ದರು. ನಮ್ಮ ರಾಜ್ಯದ ಉತ್ಪನ್ನ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಇಂತಹ ಉತ್ಪನ್ನಗಳನ್ನು ಬಿಜೆಪಿ ನಾಯಕರು ನಕಲಿ ಉತ್ಪನ್ನಗಳ ಮಾರಾಟಕ್ಕೆ ಶಾಮೀಲಾಗಿದ್ದಾರೆ. ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದ್ದರು. ಈಗ ಕರ್ನಾಟಕದ ಆಸ್ತಿ ಮಾರಲು ತಯಾರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

More articles

Latest article