ಕಾಗೋಡು ತಿಮ್ಮಪ್ಪ, ಮಲೆನಾಡಿನ ಮಣ್ಣಿನ ಗಟ್ಟಿ ಧ್ವನಿ..

Most read

ಮಾಜಿ ಸಚಿವರು, ಹಿರಿಯ ರಾಜಕೀಯ ಮುತ್ಸದ್ದಿ ಕಾಗೋಡು ತಿಮ್ಮಪ್ಪನವರ ಜನ್ಮ ದಿನ ಇಂದು. ಈ ಹಿನ್ನೆಲೆಯಲ್ಲಿ, ಕಾಗೋಡು ತಿಮ್ಮಪ್ಪನವರು ಕಾಗೋಡು ಚಳುವಳಿಯ ಆಶಯಗಳನ್ನು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಬದ್ಧತೆಯಿಂದ ನೆರವೇರಿಸಲು ಹೆಣಗಿದ ನಿಜ ಮಣ್ಣಿನ ನಾಯಕರಾಗಿ ಕಾಣುತ್ತಾರೆ ಎಂದು ನಲ್ನುಡಿ ಬರೆಯುತ್ತಾರೆ ಶಿವಾನಂದ ಕುಗ್ವೆ, ಹೋರಾಟಗಾರರು.

ಮಲೆನಾಡಿನ ಮೂಲೆಯ ಕಾಗೋಡು ಎಂಬ ಒಂದು ಕುಗ್ರಾಮ ದಲ್ಲಿ ಹುಟ್ಟಿದ ಕಾಗೋಡು ತಿಮ್ಮಪ್ಪನವರು ಬೆಳೆದು ಬಂದ ಬಗೆ ವಿಶಿಷ್ಟವಾದದು. ರಾಜ್ಯ ರಾಜಕಾರಣದ ಮುಖ್ಯ ಪ್ರವಾಹದಲ್ಲಿ ಗುರುತಿಸಿಕೊಂಡ ಇವರು ಶಾಸನ ಸಭೆಯಲ್ಲಿ ಶಾಸಕರಾಗಿ ಆ ನಂತರ ಮಂತ್ರಿಯಾಗಿ, ವಿಧಾನ ಸಭಾಧ್ಯಕ್ಷರೂ ಆಗಿ ಆ ಅವಧಿಯಲ್ಲಿ ಜನಸಾಮಾನ್ಯರ ಗಟ್ಟಿ ಧ್ವನಿಯಾಗಿ ಬಂದವರು.

ಅವರು ಹುಟ್ಟಿದ ಊರು ಕಾಗೋಡು ಹೆಸರಾಗಿದ್ದೇ 1951 ರಲ್ಲಿ ನಡೆದ ಗೇಣಿದಾರರ ಚಳುವಳಿಯಿಂದಾಗಿ. ಅಂದು ಕಾಗೋಡು ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ, ಭೂಒಡೆಯರಲ್ಲಿ ಗೇಣಿಗಾಗಿ ಜಮೀನು ಪಡೆದು ಸಾಗುವಳಿ ಮಾಡಿ, ಬಂದದ್ದರಲ್ಲಿ ಒಡೆಯರಿಗೆ ಒಂದು ಪಾಲು ಕೊಟ್ಟು ಉಳಿದದ್ದರಲ್ಲಿ ಹಾಗೂ ಹೀಗೂ ಬದುಕು ಸಾಗಿಸಿದ್ದ ಬಡ ರೈತರೇ ಹೆಚ್ಚು. ಕಡು ಬಡತನ, ಅನಕ್ಷರತೆ, ಕೀಳರಿಮೆ ಮನೆ ಮಾಡಿದ್ದ ಸಮುದಾಯವಾಗಿದ್ದ ದೀವರಲ್ಲಿ ಮತ್ತು ಹಿಂದುಳಿದ ಸಮುದಾಯಗಳಿಗೆ ರಾಜಕೀಯ ನಾಯಕತ್ವ ಇರಲಿಲ್ಲ.

ಐವತ್ತರ ದಶಕದಲ್ಲಿ ಕಾಗೋಡು ಚಳುವಳಿ ನಡೆದು ರಾಷ್ಟ್ರೀಯ ಮಟ್ಟದ ಸಮಾಜವಾದಿ ನಾಯಕರುಗಳು ಇಲ್ಲಿಗೆ ಬಂದು ರೈತರನ್ನು ಬೆಂಬಲಿಸಿ ನೈತಿಕ ಧೈರ್ಯ ತುಂಬಿದ್ದು, ಒಂದು ಮಹತ್ವದ ಘಟನೆಯಾಗಿತ್ತು. ಅದನ್ನು ಹತ್ತಿರದಿಂದ ನೋಡಿದ್ದ ಅಂದಿನ ಬಾಲಕನಾಗಿದ್ದ ಕಾಗೋಡು ತಿಮ್ಮಪ್ಪನವರನ್ನು ಅದು ಬಹಳಷ್ಟು ಪ್ರಭಾವಿಸಿದ ಘಟನೆಯಾಗಿತ್ತು. ಆ ನಂತರ ಸಾಗರ ಕ್ಷೇತ್ರದಿಂದ ಶಾಸಕರಾಗಿದ್ದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲ ಗೌಡರು ಕಾಲೇಜು ಶಿಕ್ಷಣಕ್ಕೆ ಅವರನ್ನು ಬೆಂಗಳೂರಿಗೆ ಕರೆದೊಯ್ದು ಅಲ್ಲಿ ಈಡಿಗರ ಹಾಸ್ಟೆಲ್‌ನಲ್ಲಿ ಸೇರಿಸಿದ್ದು ತಿಮ್ಮಪ್ಪನವರ ಬದುಕಲ್ಲಿ ಒಂದು ತಿರುವು ನೀಡಿದ ಸಂಗತಿ. ಗೋಪಾಲ ಗೌಡರು ʼನಮ್ಮೂರಿಗೆ ಬಾರದೆ ಇದ್ದಿದ್ದರೆ, ಅವರು ನನ್ನನ್ನು ಕಾಲೇಜು ಸೇರಿಸದೇ ಇದ್ದಿದ್ದರೆ ಈ ತಿಮ್ಮಪ್ಪ ಊರಲ್ಲಿ ಎಲ್ಲರಂತೆ ದನ ಕಾಯುತ್ತಾ ಅಲ್ಲೆ ಇರಬೇಕಾಗಿತ್ತುʼ ಎಂದು ಅವರು ಅನೇಕ ಬಾರಿ ನೆನಪಿಸಿಕೊಂಡದ್ದಿದೆ.

ಕಾಗೋಡು ಚಳುವಳಿಯ ಆ ನಂತರದ ದಿನಗಳಲ್ಲಿ ಮಲೆನಾಡಿನ ಭಾಗದಲ್ಲಿ ಗೇಣಿ ರೈತರಿಗೆ ಶಾಸನ ಸಭೆಯಲ್ಲಿ ಮೊದಲು ಗಟ್ಟಿ ದನಿಯಾಗಿ ಘರ್ಜಿಸಿದವರು ಗೋಪಾಲ ಗೌಡರಾದರೆ, ಬಳಿಕ ಗೇಣಿ ರೈತರ ಭೂಮಿಯ ಹಕ್ಕಿಗಾಗಿ ಕರ್ನಾಟಕ ಭೂ ಸುಧಾರಣೆ ಕಾಯ್ದೆಯನ್ನು 1974 ರಲ್ಲಿ ದೇವರಾಜ ಅರಸು ಜಾರಿಗೆ ತರುವಲ್ಲಿ ತಿಮ್ಮಪ್ಪನವರ ಪಾತ್ರ ಹಿರಿದಾದದ್ದು. ಅದೊಂದು ಜನಪರ ಕಾಯ್ದೆಯಾಗಿ ರಚನೆಯಾಗಲು, ಗೇಣಿದಾರರ ಹೋರಾಟದ ಮೂಸೆಯಿಂದ ಬಂದಿದ್ದ ಕಾಗೋಡು ತಿಮ್ಮಪ್ಪ ಅಂದು ಸಮಾಜವಾದಿ ಪಕ್ಷದ ಶಾಸಕರಾಗಿದ್ದರು. ಅವರನ್ನು ಅರಸುರವರು ಸೆಲೆಕ್ಟ್ ಸಮಿತಿಯ ಸದಸ್ಯರನ್ನಾಗಿಸಿದ್ದು ಬಹು ಮುಖ್ಯ ಕಾರಣವಾಯ್ತು. ಬಹುತೇಕ ಗೇಣಿದಾರರು ದಾಖಲೆಗಳೇ ಇಲ್ಲದೆ, ಭೂಮಾಲಿಕರ ಮರ್ಜಿಯಲ್ಲಿ ಜಮೀನು ಸಾಗುವಳಿ ಮಾಡುತ್ತಿದ್ದುದರಿಂದ ಕಾನೂನು ಇದ್ದರೂ ಖಾತೆದಾರರಾಗುವುದು ಸುಲಭವಿರಲಿಲ್ಲ. ಜನಪ್ರತಿನಿಧಿಗಳನ್ನೊಳಗೊಂಡ ಭೂ ನ್ಯಾಯಮಂಡಳಿಯ ಕಲ್ಪನೆ, ಮತ್ತು ಗೇಣಿ ರೈತನ ಸಾಗುವಳಿ ಅನುಭವವನ್ನೆ ಆಧಾರವಾಗಿ ಭೂಮಿಹಕ್ಕು ನೀಡಬೇಕೆಂಬುದನ್ನು ಕಾಯ್ದೆಬದ್ಧ ಮಾಡಿದ ಕೆಲಸ ಕಾಗೋಡರ ಅನುಭವದಿಂದ ಬಂದುದಾಗಿತ್ತು. ಅದರಿಂದಾಗಿ ಲಕ್ಷಾಂತರ ಗೇಣಿದಾರ ಕುಟುಂಬಗಳು ಭೂಮಿ ಒಡೆತನ ಪಡೆಯುವಂತಾಗಿದ್ದಷ್ಟೇ ಅಲ್ಲದೆ ಭೂ ಒಡೆಯರ ತಕರಾರು ವ್ಯಾಜ್ಯಗಳಿಗೆ ವಕೀಲರ ಪ್ರವೇಶಕ್ಕೆ ಅವಕಾಶ ತಪ್ಪಿಸುವಂತಾಗಿತ್ತು. ಅಂತಿಮ ತೀರ್ಪು ಭೂ ನ್ಯಾಯಮಂಡಳಿಯದೇ ಆಗಿತ್ತು. ಕೆಳಕೋರ್ಟ್‌, ಹೈ ಕೋರ್ಟ್ ಗಳಿಗೆ ಸಾಮಾನ್ಯ, ಬಡರೈತರು ಅಲೆದಾಡುವುದನ್ನು ತಪ್ಪಿಸಲಾಗಿದ್ದು ಈ ಕಾಯ್ದೆಯ ವಿಶೇಷವೂ ಆಗಿತ್ತು.

ಭೂಸುಧಾರಣೆ ಕಾಯ್ದೆ ಜಾರಿಯಾದ ಕೂಡಲೆ ಗೇಣಿದಾರರೆಲ್ಲರಿಗೂ ಹಾಗೇ ಭೂಮಿ ಸಿಕ್ಕಲಿಲ್ಲ. ಕಾಗೋಡು ತಿಮ್ಮಪ್ಪ ವಕೀಲರಾಗಿ, ಸಾಕಷ್ಟು ರೈತರಿಗೆ ಫೀಜು ಪಡೆಯದೆ ಸಹಾಯ ಮಾಡಿ ಭೂ ಒಡೆಯರಿಂದ ರಕ್ಷಣೆ ನೀಡಿದ ಘಟನೆಗಳು ಸಾವಿರಾರು ಇವೆ.

ಅದೇ ಮೀಸಲಾತಿಯ ವ್ಯವಸ್ಥೆಯಲ್ಲಿ ಹಿಂದುಳಿದವರಲ್ಲಿನ ಬಲಾಢ್ಯರೇ ಮೀಸಲಾತಿಯ ಲಾಭ ಪಡೆಯುವ ಪರಿಸ್ಥಿತಿ ಏರ್ಪಟ್ಟಿತ್ತು. ಆಗ ಹಿಂದುಳಿದ ವರ್ಗಗಳಲ್ಲೇ ಹೆಚ್ಚು ಹಿಂದುಳಿದ ಸಮುದಾಯಗಳಿಗೆ ಒಳಮೀಸಲಾತಿ ನೀಡಬೇಕು, ಸಾಮಾಜಿಕ ನ್ಯಾಯ ಸರಿಯಾಗಿ ಪಾಲನೆಯಾಗಬೇಕು ಎಂದು ವಿಧಾನಸಭೆಯಲ್ಲಿ ಮೊದಲು ಧ್ವನಿ ಎತ್ತಿದವರೂ ಕಾಗೋಡು ತಿಮ್ಮಪ್ಪನವರೇ ಆಗಿದ್ದರು. ಅದರ ಪರಿಣಾಮವಾಗಿಯೇ ಮುಂದೆ ಒಬಿಸಿ ಮೀಸಲಾತಿಯಲ್ಲಿ ಸಮರ್ಪಕ ವರ್ಗೀಕರಣಕ್ಕೆ ಚಾಲನೆಯಾಗಿದ್ದು ಎಂಬುದು ಬಹಳ ಜನರಿಗೆ ತಿಳಿದಿಲ್ಲ.

ಕಾಗೋಡು ಚಳುವಳಿಯ ಆಶಯಗಳನ್ನು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಬದ್ಧತೆಯಿಂದ ನೆರವೇರಿಸಲು ಹೆಣಗಿದ ನಿಜ ಮಣ್ಣಿನ ನಾಯಕರಾಗಿ ಕಾಣುತ್ತಾರೆ ಕಾಗೋಡು ತಿಮ್ಮಪ್ಪನವರು. ಅವರಿಗೆ ಜನ್ಮ ದಿನದ ಶುಭಾಶಯಗಳು.

ಶಿವಾನಂದ ಕುಗ್ವೆ

ಸಾಮಾಜಿಕ ಹೋರಾಟಗಾರರು, ಸಾಗರ

More articles

Latest article