ರಂಜಿನಿ ರಾಘವನ್ ಎಂದಾಕ್ಷಣ ಎಲ್ಲರಿಗೂ ಥಟ್ ಅಂತ ಕಣ್ಣ ಮುಂದೆ ಬರುವುದು ಗೌರಿ ಹಾಗೂ ಭುವಿ. ಈ ಎರಡು ಪಾತ್ರಗಳ ಮೂಲಕ ಸಾಕಷ್ಟು ಖ್ಯಾತಿಯನ್ನು ಪಡೆದರು. ಬಳಿಕ ಸಿನಿಮಾದತ್ತ ಮುಖ ಮಾಡಿದರು. ಆದರೆ ಸಿನಿಮಾ ಕೈ ಹಿಡಿಯಲಿಲ್ಲ. ಅವರು ಕಿರುತೆರೆಯಲ್ಲೇ ಸಾಕಷ್ಡು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರೆಲ್ಲ ರಂಜಿನಿ ಮತ್ತೆ ಕಿರುತೆರೆಗೆ ಬರಲಿ ಎಂದೇ ಬಯಸುತ್ತಿದ್ದಾರೆ. ಇದಕ್ಕೆ ರಂಜಿನಿ ಉತ್ತರ ನೀಡಿದ್ದು, ಮತ್ತೆ ಅದೇ ಥರದ ಪಾತ್ರ ಸಿಕ್ಕಿದರೆ ಮಾಡುವುದಿಲ್ಲ ಎಂದಿದ್ದಾರೆ.
ಈ ಬಗ್ಗೆ ಇತ್ತಿಚಿನ ಸಂದರ್ಶನದಲ್ಲಿ ಮಾತನಾಡಿರುವ ರಂಜಿನಿ, ನಾನು ಈವರೆಗೂ ಮಾಡಿರದ ಪಾತ್ರಗಳು ಸಿಕ್ಕಿದರೆ ಮಾಡುತ್ತೇನೆ ವಿನಃ ಮತ್ತೆ ಅದೇ ತರಹದ ಪಾತ್ರಗಳು ಬಂದರೆ ಮಾಡುವುದಿಲ್ಲ. ಅದೇ ರೀತಿಯ ಪಾತ್ರಗಳನ್ನು ನಾನೇ ಯಾಕೆ ಮಾಡಬೇಕು. ಬೇರೆಯವರಿಗೂ ಅವಕಾಶಗಳು ಸಿಗಲಿ. ಹೊಸತನದ ಹುಡುಕಾಟ ನನಗೆ ದಿನವೂ ಇರುತ್ತದೆ. ಹೊಸ ರೀತಿಯ ಪಾತ್ರಗಳು ನನಗೆ ಥ್ರಿಲ್ ಕೊಡುತ್ತವೆ, ಖುಷಿ ಕೊಡುತ್ತವೆ ಎಂದಿದ್ದಾರೆ.
ರಂಜಿನಿ ರಾಘವನ್ ಬಹುಮುಖ ಪ್ರತಿಭೆ. ನಟನೆ ಮಾತ್ರ ಅಲ್ಲ ಬರವಣಿಗೆಯಲ್ಲೂ ಮುಂದು. ಈಗಾಗಲೇ ಒಂದು ಪುಸ್ತಕವನ್ನು ಬರೆದಿದ್ದಾರೆ. ಧಾರಾವಾಹಿಯಿಂದ ಸಿನಿಮಾಗಳಿಗೆ ಬಂದು ಆಗಿದೆ. ಧಾರಾವಾಹಿಯಲ್ಲಿ ಒಂದಷ್ಟು ಕಲಿತಿದ್ದಾರೆ. ವಿಭಿನ್ನವಾದ ಪಾತ್ರಗಳಿಗೆ ಹಪಹಪಿಸುವ ರಂಜಿನಿ, ಕನ್ನಡತಿ ಧಾರಾವಾಹಿಯ ಭುವಿ ಪಾತ್ರದಲ್ಲಿ ಸಾಕಷ್ಟು ಕಾಡಿದ್ದರು. ಇದರಲ್ಲಿ ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅದರಲ್ಲೂ ಹರ್ಷ ಮತ್ತು ಭುವಿಯ ಜೋಡಿ ಆಕರ್ಷಣೆಯಲ್ಲಿ ಒಂದಾಗಿತ್ತು. ಫ್ಯಾನ್ ಪೇಜ್ ಗಳು ಕೂಡ ಹುಟ್ಟಿಕೊಂಡಿದ್ದವು. ಅಷ್ಟು ಕ್ರೇಜ್ ಹುಟ್ಟು ಹಾಕಿತ್ತು ಈ ಜೋಡಿ.