ಕರುಣೆ ಇಲ್ಲದ ಕಾಲವೇ! ; ಕೆಂಗನಾಳ ಸಾವು ನ್ಯಾಯವೇ?

Most read

ʼಜನಪದರುʼ ಎನ್ನುವ ಸಾಂಸ್ಕೃತಿಕ ತಂಡದ ಹುಟ್ಟಿಗೆ ಕಾರಣರಾದ, ಗ್ರಾಮೀಣ ರಂಗಭೂಮಿಗೆ ಅನನ್ಯ ಕೊಡುಗೆ ನೀಡಿದ ನಾಟಕ ಅಕಾಡೆಮಿ ರಂಗಪ್ರಶಸ್ತಿ ಪುರಸ್ಕೃತ ಜಗದೀಶ್‌ ಕೆಂಗನಾಳ ರಂಗದಿಂದ ನೇಪಥ್ಯಕ್ಕೆ ಸರಿದಿದ್ದಾರೆ. ಅಗಲಿದ ತಮ್ಮ ಆಪ್ತ ಗೆಳೆಯನ ಜತೆಗಿನ ಒಡನಾಟಗಳನ್ನು ಸ್ಮರಿಸುತ್ತಾ ನುಡಿನಮನ ಸಲ್ಲಿಸಿದ್ದಾರೆ ರಂಗಕರ್ಮಿ ಶಶಿಕಾಂತ ಯಡಹಳ್ಳಿ.

“ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ” ಎನ್ನುವ ಕುವೆಂಪುರವರ ಸಾರ್ವಕಾಲಿಕ ಸಂದೇಶವನ್ನು ಆತ್ಮೀಯ ರಂಗಮಿತ್ರ ರಾತ್ರಿ 11 ಗಂಟೆಗೆ ವಾಟ್ಸಾಪಲ್ಲಿ  ಕಳುಹಿಸಿದ್ದ. ರಾತ್ರಿ ಕಳೆದು ಇನ್ನೂ ಬೆಳಿಗ್ಗೆ ಆಗಿತ್ತಷ್ಟೇ ಈ ಜನ್ಮಕ್ಕಾಗುವಷ್ಟು ಕ್ರಿಯಾಶೀಲ ಕೆಲಸ ಮಾಡಿ ಯಾವ ಟೀಕೆಗೂ ಒಳಗಾಗದೇ ಬದುಕಿದ ಗೆಳೆಯ ಜಗದೀಶ್ ಕೆಂಗನಾಳ ಫೆ.18 ರಂದು ಜಗಕ್ಕೇ ವಿದಾಯ ಹೇಳಿ ಮರಳಿ ಬಾರದೂರಿಗೆ ಹೊರಟೇ ಹೋದ.  ಜಗದೀಶ್ ಕೆಂಗನಾಳ ಎನ್ನುವ ಸ್ಪೂರ್ತಿಯ ಚಿಲುಮೆ ಇನ್ನಿಲ್ಲ. ನೆನಪುಗಳಿಗೆ ಕೊನೆಮೊದಲಿಲ್ಲ.  ಪುರಸ್ಕೃತ

ಹತ್ತು ವರ್ಷಗಳ ಹಿಂದೆ ನಾನು ದೊಮ್ಮಲೂರಿನಲ್ಲಿರುವ ನನ್ನ ಮನೆಯ ಮೇಲೆ ಸೃಷ್ಟಿ ಎನ್ನುವ ಹೆಸರಲ್ಲಿ ಆಪ್ತ ರಂಗಮಂದಿರವನ್ನು ಕಟ್ಟಿಸಿ ಅಭಿನಯ ತರಬೇತಿ ಹಾಗೂ ನಾಟಕ ನಿರ್ಮಾಣ ಕಾರ್ಯವನ್ನು ಮುಂದುವರೆಸಿದ್ದೆ. ಅದೊಂದು ದಿನ ʼಜನಪದರುʼ ತಂಡದ ‘ಉರುಳು’ ನಾಟಕವನ್ನು ನಮ್ಮ ಆಪ್ತ ರಂಗಮಂದಿರದಲ್ಲಿ ಪ್ರದರ್ಶಿಸಲು ಬಂದ ಕೆಂಗನಾಳನಿಗೆ ರಂಗಮಂದಿರ ಹೆಚ್ಚು ಆಕರ್ಷಿಸಿತ್ತು. ಹೊಸಕೋಟೆಯಲ್ಲಿ ಇಂತಹುದೊಂದು ರಂಗಮಂದಿರ ಕಟ್ಟಬೇಕೆಂಬ ಆಸೆಯ ಬೀಜ ಆತನೆದೆಯಲ್ಲಿ ಮೊಳೆತು ಬೆಳೆಯುತ್ತಲೇ ಹೋಯ್ತು. ತನ್ನೆದೆಯ ಬೀಜವನ್ನು ರಂಗಪೋಷಕ ಪಾಪಣ್ಣ,  ಕಲಾವಿದ ಸಿದ್ದೇಶ, ರಂಗನಿರ್ದೇಶಕ ವರ್ತೂರು ಸುರೇಶ ಹಾಗೂ ಪ್ರಸಾದನ ತಜ್ಞ ರಾಮಕೃಷ್ಣ ಬೆಳ್ತೂರರ ತಲೆಯಲ್ಲಿ ಬಿತ್ತಿ ಸಮಯ ಸಿಕ್ಕಾಗಲೆಲ್ಲಾ ನೆನಪಿಸಿ ನೀರೆರೆದ. ಅವರೆಲ್ಲಾ ಸೇರಿ ಅವರಿವರ ಮನೆಯ ಛಾವಣಿಯ ಮೇಲೆ ಆಪ್ತ ರಂಗಮಂದಿರ ಕಟ್ಟಲು ಹುಡುಕಾಟ ಶುರುಮಾಡಿದರು.

ಈ ಯೋಜನೆ ರೂಪಾಂತರಗೊಳ್ಳುತ್ತಾ ಬಂದು ನಿಂತಿದ್ದು ಹೊಸಕೋಟೆಯ ಹೆದ್ದಾರಿಯ ಪಕ್ಕದಲ್ಲಿರುವ ನಿಂಬೆಕಾಯಿಪುರದ ಶ್ರೀ ಆಂಜನೇಯ ದೇವಸ್ಥಾನಕ್ಕೆ. ಈ ಮಂದಿರದ ಪಕ್ಕದಲ್ಲಿ ಹಾಳುಬಿದ್ದ ಬೀಳು ನೆಲವೊಂದಿತ್ತು. ಅದರ ಉದರದಲ್ಲಿ ಬರೀ ಕಲ್ಲುಬಂಡೆಗಳೇ ತುಂಬಿದ್ದವು. ಅಲ್ಲಿ ಬಯಲು ರಂಗಮಂದಿರ ಕಟ್ಟುವುದೆಂದು ಫೈನಲ್ ಆಯ್ತು. ಆದರೆ ಕಲ್ಲು ಬಂಡೆ ಒಡೆದು ಭೂಮಿ ಸಮ ಮಾಡುವುದೇ ಸವಾಲಿನ ಕೆಲಸವಾಗಿತ್ತು. ಕೆಂಗನಾಳ ಸುಮ್ಮನಿರಲಿಲ್ಲ. ಎಲ್ಲರನ್ನೂ ಹುರಿದುಂಬಿಸುವುದು ಬಿಡಲಿಲ್ಲ. ಪಾಪಣ್ಣನವರು ಲೋಕಲ್ ಲೀಡರ್ ಆಗಿದ್ದರಿಂದ ಯಾರೋ ಜೆಸಿಬಿ ಉಚಿತವಾಗಿ ಕೊಟ್ಟರು. ಎರಡು ತಿಂಗಳ ಕಾಲ ನಿರಂತರವಾಗಿ ಜೆಸಿಬಿ ಬಂಡೆಗಳನ್ನು ತೆಗೆದು ಹಾಕಿತು. ಯಾರೋ ಕಲ್ಲು, ಇನ್ಯಾರೋ ಸಿಮೆಂಟು, ಮತ್ಯಾರೋ ಕಬ್ಬಿಣ ಹೀಗೆ ಬೇಕಾದ ವಸ್ತುಗಳನ್ನು ದಾನ ಕೊಟ್ಟರು. ಒಂದು ವರ್ಷದ ಪರಿಶ್ರಮದ ಫಲವಾಗಿ ದೊಡ್ಡದಾದ ರಂಗವೇದಿಕೆ ನಿರ್ಮಾಣವಾಯಿತು. ಪಾಪಣ್ಣನವರನ್ನು ಹೊರತು ಪಡಿಸಿ ಜೊತೆ ಇರುವವರೆಲ್ಲಾ ಆರ್ಥಿಕವಾಗಿ ಸ್ಥಿತಿವಂತರೇನಲ್ಲ. ಆದರೆ ಅವರೆಲ್ಲರ  ಮಹತ್ವಾಂಕಾಂಕ್ಷೆ ದೊಡ್ಡದಾಗಿತ್ತು. ಪಾಪಣ್ಣನವರ ಶ್ರಮ, ವರ್ತೂರು ಸುರೇಶರ ಯೋಜನೆ, ಸಿದ್ದೇಶರವರ ಹಠ ಹಾಗೂ ಜಗದೀಶನ ನಿರಂತರ ಒತ್ತಾಯ ಮತ್ತು ಪ್ರೋತ್ಸಾಹದಿಂದ ಜನಪದರು ಹೆಸರಲ್ಲಿ ಬಯಲು ರಂಗಮಂದಿರ ನಿರ್ಮಾಣವಾಯ್ತು. 

ಈಗ ಅಲ್ಲಿ ನಾಟಕ ಪ್ರದರ್ಶನ ಶುರುಮಾಡಬೇಕಿತ್ತು. ಕೋಟಗಾನಹಳ್ಳಿ ರಾಮಯ್ಯನವರು ಕೋಲಾರದ ಶಿವಗಂಗೆ ಬೆಟ್ಟದಲ್ಲಿ ಆರಂಭಿಸಿದ್ದ ‘ಆದಿಮ’ ದಲ್ಲಿ ಪ್ರತಿ ತಿಂಗಳೂ ಹುಣ್ಣಿಮೆಯ ದಿನ ಹುಣ್ಣಿಮೆಯ ಹಾಡು ಹೆಸರಲ್ಲಿ ನಾಟಕ ಪ್ರದರ್ಶನ ಮಾಡಿಸುತ್ತಿದ್ದರು. ಅದೇ ರೀತಿ ತಿಂಗಳಿಗೊಂದು ದಿನ ನಾವೂ ನಾಟಕ ಮಾಡಿಸೋಣ ಎಂದು ಜಗದೀಶ್ ಸಲಹೆ ಕೊಟ್ಟರು. ಅದರಂತೆ ಪ್ರತಿ ತಿಂಗಳೂ ಎರಡನೇ ಶನಿವಾರ ಯಾವುದಾದರೊಂದು ನಾಟಕ ಪ್ರದರ್ಶನ ಮಾಡುವುದೆಂದು ನಿರ್ಧರಿಸಲಾಯ್ತು. ಜನಪದರು ತಂಡದ ಕಲಾವಿದರು ಸೇರಿಕೊಂಡು ‘ಬುಡ್ಗನಾದ’ ಎನ್ನುವ ಅಲೆಮಾರಿಗಳ ಕುರಿತ ನಾಟಕವನ್ನು ನಿರ್ಮಿಸಿ ಈ ರಂಗವೇದಿಕೆಯಲ್ಲಿ ಪ್ರದರ್ಶಿಸಲು ಸಿದ್ಧಗೊಳಿಸಿದರು. ರಂಗಮಂದಿರ ಸಿದ್ಧವಿದೆ, ನಾಟಕವೂ ನಿರ್ಮಾಣಗೊಂಡಿದೆ ಆದರೆ ಪ್ರೇಕ್ಷಕರು? ಯಾಕೆಂದರೆ ನಾಟಕದ ಗಂಧ ಗಾಳಿ ಗೊತ್ತಿಲ್ಲದಂತಹ ಜನರಿಲ್ಲದ ಜಾಗ ಅದು. ಊಟದ ವ್ಯವಸ್ಥೆ ಮಾಡಿದರೆ ನಾಟಕ ನೋಡಲು ಪ್ರೇಕ್ಷಕರು ಬರುತ್ತಾರೆ ಎಂಬುದು ಜಗದೀಶ್ ನ ಐಡಿಯಾ? ಅದಕ್ಕೆ ಪೂರಕವಾಗಿ ಸಹಾಯಕ್ಕೆ ಬಂದಿದ್ದು ಆಂಜನೇಯ. ಪಕ್ಕದ ಆಂಜನೇಯ ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬ ಭಕ್ತಾದಿಗಳಿಗೆ ನಾಟಕ ಹಾಗೂ ಊಟದ ಬಗ್ಗೆ ಪ್ರಚಾರ ಮಾಡಲಾಯ್ತು. ಮೊದಲು ಊಟಕ್ಕಾಗಿ ನಾಟಕ ನೋಡಲು ಬರುತ್ತಿದ್ದವರು ಬರುಬರುತ್ತಾ ನಾಟಕಕ್ಕಾಗಿಯೇ ಪ್ರತಿ ತಿಂಗಳು ಎರಡನೇ ಶನಿವಾರ ತಪ್ಪದೇ ಬರತೊಡಗಿದರು. ಈ ರಂಗಮಿತ್ರರ ಶ್ರಮ ಸಾರ್ಥಕವಾಯ್ತು. ಎಲ್ಲರಲ್ಲೂ ರಂಗಮಂದಿರ ನಿರ್ಮಾಣದ ಬೀಜ ಬಿತ್ತಿ ಆಶಾವಾದದ ನೀರೆರೆದ ಕೆಂಗನಾಳನ ಹರ್ಷಕ್ಕೆ ಪಾರವೇ ಇರಲಿಲ್ಲ. 

ಇಲ್ಲಿಗೇ ಈ ರಂಗಗೆಳೆಯರ ಸಾಹಸ ನಿಲ್ಲಲಿಲ್ಲ. ಪೋಷಕರು, ದಾನಿಗಳು, ರಂಗಾಸಕ್ತರಿಂದ ದಾನ ಪಡೆದು ರಂಗಮಂದಿರದ ನಿರ್ಮಿತಿಯನ್ನು ಮುಂದುವರೆಸಿದರು. ಒಂದು ಸರಕಾರ ಮಾಡಬಹುದಾದ ಕೆಲಸವನ್ನು ಇವರೆಲ್ಲಾ ಸೇರಿ ಮಾಡಿ ಸಕಲ ಸವಲತ್ತುಗಳಿದ್ದ ಪರಿಪೂರ್ಣ ರಂಗಮಂದಿರವನ್ನು ಐದೂವರೆ ಕೋಟಿ ವೆಚ್ಚದಲ್ಲಿ ಕಟ್ಟಿಸಿಯೇ ಬಿಟ್ಟರು. ಸರಕಾರದ ಯೋಜನೆ ಆಗಿದ್ದರೆ ಕನಿಷ್ಟ 25 ಕೋಟಿಯಷ್ಟಾದರೂ ಖರ್ಚಾಗುತ್ತಿತ್ತು. ಆದರೆ ಅವರಿವರ ಆರ್ಥಿಕ ಸಹಾಯದಿಂದ ಸಂಪೂರ್ಣ ಹವಾನಿಯಂತ್ರಿತ ರಂಗಮಂದಿರ ಎದ್ದು ನಿಂತಿತು. 30-06-2021 ರಂದು ಮುಖ್ಯ ಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಈ ಅತ್ಯಾಧುನಿಕ ರಂಗಮಂದಿರವನ್ನು ಉದ್ಘಾಟಿಸಿದ್ದರು. 

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹೊರತು ಪಡಿಸಿ ಇಂತಹ ಆಧುನಿಕ ರಂಗಮಂದಿರ ಇಡೀ ಕರ್ನಾಟಕದಲ್ಲಿ ಎಲ್ಲಿಯೂ ಇಲ್ಲ. ಐವತ್ತು ಲಕ್ಷ ಖರ್ಚು ಮಾಡಿ ಅತ್ಯಾಧುನಿಕವಾದ ಲೈಟ್ಸ್ ಕಂಟ್ರೋಲ್ ಮಾಡುವ ಅತ್ಯಾಧುನಿಕ ಪರಿಕರಗಳನ್ನು ವಿದೇಶದಿಂದ ತರಿಸಲಾಗಿದೆ. ಇವು ರವೀಂದ್ರ ಕಲಾಕ್ಷೇತ್ರದಲ್ಲೂ ಇಲ್ಲ. ರಂಗವೇದಿಕೆಯ ನಡುವೆ ಎರಡು ರೊಟೇಟಿಂಗ್ ರಿಂಗ್ ವ್ಯವಸ್ಥೆ ಇದೆ. ಪಿವಿಆರ್ ಚಿತ್ರಮಂದಿರವನ್ನು ನೆನಪಿಸುವ 550 ಸೀಟಿಂಗ್ ವ್ಯವಸ್ಥೆ ಇದೆ. ಅತ್ಯಂತ ವಿಶಿಷ್ಟವಾದ ವಿನ್ಯಾಸ ಹೊಂದಿರುವ ಜನಪದರು ರಂಗಮಂದಿರದ ವಿನ್ಯಾಸವನ್ನು ಯಾವ ಆರ್ಕಿಟೆಕ್ಟ್ ಮಾಡಿರಬಹುದು ಎಂದು ಕೇಳಿದರೆ ಸುರೇಶ್ ವರ್ತೂರ್ ಹೆಸರು ಕೇಳಿ ಬರುತ್ತದೆ. ಇವರು ರಂಗನಿರ್ದೇಶಕರೇ ಹೊರತು ಯಾವ ವಿನ್ಯಾಸಕಾರರೂ ಅಲ್ಲ. ತಮ್ಮ ರಂಗಾನುಭವದ ಮೂಲಕವೇ ಇಂತಹ ಗಮನಾರ್ಹ ವಿನ್ಯಾಸ ಮಾಡಿದ್ದು ಮಾದರಿಯದ್ದಾಗಿದೆ. ಈಗ ನಡೆಯುತ್ತಿರುವುದು 78 ನೇ ತಿಂಗಳ ಮಾಲಿಕೆ. ಕೋವಿಡ್ ಕಾಲವನ್ನು ಹೊರತು ಪಡಿಸಿ ನಿರಂತರವಾಗಿ ಪ್ರತಿ ತಿಂಗಳೂ ಇಲ್ಲಿ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಈಗಲೂ ಪ್ರದರ್ಶನದ ನಂತರ ದಾನಿಗಳಿಂದ ಅನ್ನಸಂತರ್ಪಣೆ ಇದ್ದೇ ಇರುತ್ತದೆ. ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಗೌರವಧನವನ್ನೂ ಕೊಟ್ಟು ನಾಡಿನಾದ್ಯಂತ ನಿರ್ಮಿಸಲಾದ ನಾಟಕಗಳನ್ನು ಆಹ್ವಾನಿಸಿ ಪ್ರದರ್ಶಿಸಲು ಅವಕಾಶ ಮಾಡಿಕೊಡಲಾಗುತ್ತದೆ. ವಿಶೇಷವೆಂದರೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಈ ಥಿಯೇಟರ್ ಮೀಸಲಾಗಿದೆ.

ಸೃಷ್ಟಿ ಆಪ್ತರಂಗದಲ್ಲಿ ಹುಟ್ಟಿದ ಮಹತ್ವಾಕಾಂಕ್ಷೆಯ ಬೀಜವೊಂದು ಹೀಗೆ ಗ್ರಾಮೀಣ ಪ್ರದೇಶದಲ್ಲಿ ಟೊಂಗೆ ಟಿಸಿಳೊಡೆದು ಹೆಮ್ಮರವಾಗಿ ಅನೇಕ ರಂಗಪ್ರದರ್ಶನಗಳಿಗೆ ಆಶ್ರಯವಾಗಿದ್ದು ವಿಸ್ಮಯದ ಸಂಗತಿ. ಇಂತಹ ಅದ್ಭುತ ರಂಗಮಂದಿರದ ಕಲ್ಪನೆಗೆ ಮೂಲ ಕಾರಣೀಕರ್ತನಾದ ಕೆಂಗನಾಳರ ಪಾರ್ಥಿವ ಶರೀರವನ್ನು ಈ ರಂಗಮಂದಿರಕ್ಕೆ ತರಲೇ ಬೇಕು ಅಂತಾ ನಾನು ಹಠಕ್ಕೆ ಬಿದ್ದೆ. ಜನಪದರು ತಂಡದ ಎಲ್ಲರನ್ನೂ ಒತ್ತಾಯಿಸಿದೆ‌. ಈ ರಂಗಮಂದಿರದ ನಿರ್ಮಾಣಕ್ಕೆ ಮೂಲ ಪ್ರೇರಕನಾದವನಿಗೆ ರಂಗ ಮಂದಿರದ ಆವರಣದಲ್ಲಿ ಗೌರವ ಸಲ್ಲಿಸಿ ಅಂತಿಮ ವಿದಾಯ ಹೇಳಲೇಬೇಕು ಎಂದು ಆಗ್ರಹಿಸಿದೆ. ಮೊದಮೊದಲು ಬೇಡಾ, ಆಗೋದಿಲ್ಲಾ, ನೋಡೋಣ ಎಂದವರು ಆ ನಂತರ ನನ್ನ ಒತ್ತಾಯಕ್ಕೆ ಕಟ್ಟು ಬಿದ್ದು ಆಗಲಿ ಎಂದರು. ಆಸ್ಪತ್ರೆಯಿಂದ ಮನೆಗೆ, ಮನೆಯಿಂದ ರಂಗಮಂದಿರಕ್ಕೆ ಕೆಂಗನಾಳರ ಪಾರ್ಥಿವ ಶರೀರವನ್ನು ಸ್ಥಳಾಂತರಿಸಲಾಯ್ತು. ರಂಗಗೀತೆಗಳ ಮೂಲಕ ರಂಗನಮನ ಸಲ್ಲಿಸಿ ಆತನ ಊರಾದ ಬಿಜಾಪುರಕ್ಕೆ ಭಾರವಾದ ಹೃದಯದಿಂದ ಬೀಳ್ಕೊಡಲಾಯ್ತು. 

ಕೆಂಗನಾಳ ಇದ್ದದ್ದೇ ಹೀಗೆ. ಎಲ್ಲೆಲ್ಲೋ ಇದ್ದವರನ್ನು ನಾಟಕದ ನೆಪದಲ್ಲಿ ಒಂದುಗೂಡಿಸಿದ. ಜನಪದರು ಎನ್ನುವ ಸಾಂಸ್ಕೃತಿಕ ತಂಡದ ಹುಟ್ಟಿಗೆ ಕಾರಣನಾದ. ತಮ್ಮ ತಂಡದ ನಾಟಕದ ಎಲ್ಲಾ ನಾಟಕಗಳಲ್ಲೂ ಅಭಿನಯಿಸಿದ. ರಂಗಸಂಘಟನೆಯಲ್ಲಿ ಯಾವಾಗಲೂ ಮುಂದಿರುತ್ತಿದ್ದ. ಗ್ರಾಮೀಣ ರಂಗಭೂಮಿಗೆ ಕೆಂಗನಾಳ ಕೊಡುಗೆ ಅನನ್ಯವಾದದ್ದು. ಯಾವ ಅನುಕೂಲಗಳೇ ಇಲ್ಲದ ಕಡೆ ರಂಗಭೂಮಿ ಕಟ್ಟುವುದು ಸುಲಭ ಸಾಧ್ಯವಲ್ಲ. ಆದನ್ನು ಮಾಡಿ ತೋರಿಸಿದ ಕೆಂಗನಾಳ ಬದುಕು ನಿಜಕ್ಕೂ ಸಾರ್ಥಕ. 

ಇನ್ನೇನು ವೃತ್ತಿಯಿಂದ ನಿವೃತ್ತಿಯಾಗಲು ಒಂದೂವರೆ ವರ್ಷವಿತ್ತು. ಮನೆ ಕಟ್ಟಿದ ಸಾಲದ ಕಂತುಗಳು ಮುಗಿದಿದ್ದವು. ಇರುವ ಒಬ್ಬ ಮಗನ ಮದುವೆಯನ್ನೂ ಮಾಡಿಯಾಗಿತ್ತು. ಕೌಟುಂಬಿಕ ಜವಾಬ್ದಾರಿಗಳನ್ನು ಮುಗಿಸಿಯಾಗಿತ್ತು. ನಿವೃತ್ತನಾದ ನಂತರ ಪೂರ್ಣಪ್ರಮಾಣದಲ್ಲಿ ರಂಗ ವೃತ್ತಿ ಮಾಡುವೆ ಎಂದು ಹೇಳುತ್ತಿದ್ದ. ಜನಪದರು ಥಿಯೇಟರ್ ನಲ್ಲಿ ರಂಗಶಿಕ್ಷಣ ಕೇಂದ್ರವನ್ನು ಆರಂಭಿಸಬೇಕು ಎಂದು ಕನಸು ಕಂಡಿದ್ದ. “ಕೆಂಗನಾಳ ನೇತೃತ್ವದಲ್ಲಿ  ಶಿಕ್ಷಣ ಕೇಂದ್ರ ಆರಂಭಿಸಲು ಯೋಜನೆ ರೂಪಿಸಿದ್ದೆವು, ಆದರೆ ಆತನ ಜೊತೆಯೇ ಆ ಕನಸೂ ಅಸುನೀಗಿತು” ಎಂದು ವರ್ತೂರ್ ಸುರೇಶ್ ಕಣ್ಣೀರಾದರು. ಕೆಂಗನಾಳ ಅಗಲಿಕೆ ರಂಗಭೂಮಿಗಾದ ನಷ್ಟ. ಆತ ಇದ್ದಿದ್ದರೆ ಇನ್ನೂ ಎಷ್ಟೊಂದು ರಂಗಯೋಜನೆಗಳು ಜಾರಿಯಾಗುತ್ತಿದ್ದವು. 

ನಾನು ನಾಟಕ ಅಕಾಡೆಮಿಯ ಸದಸ್ಯನಾಗಿದ್ದಾಗ “ಜಗ್ಗಿ ನಿನಗೆ ಅಕಾಡೆಮಿ ಪ್ರಶಸ್ತಿ ಕೊಡಿಸಬೇಕೆಂದಿದ್ದೇನೆ” ಎಂದೆ. ಬೇರೆಯವರಾಗಿದ್ದರೆ ಕೊಡಿಸು ಅಂತಾ ದುಂಬಾಲು ಬೀಳುತ್ತಿದ್ದರು. “ನನಗೆ ಯಾಕೋ.. ರಂಗಮಂದಿರ ಕಟ್ಟಿಸಲು ಪಾಪಣ್ಣ ತುಂಬಾ ಕಷ್ಟ ಪಟ್ಟಿದ್ದಾರೆ ಅವರಿಗೆ ಮೊದಲು ಪ್ರಶಸ್ತಿ ಬರಲಿ” ಎಂದ. “ಪಾಪಣ್ಣ ಒಂದು ಪಕ್ಷದಲ್ಲಿ ಗುರುತಿಸಿಕೊಂಡವರು, ಅವರಿಗೆ ಕೊಡಿಸಲು ಆಗದು” ಎಂದಾಗ.  “ಆಯ್ತು ವರ್ತೂರ್ ಸುರೇಶ್ ಇದ್ದಾರೆ, ಸಿದ್ದೇಶ್ವರ್ ಇದ್ದಾರೆ. ಅವರಿಗೆ ಪ್ರಶಸ್ತಿ ಕೊಡಿಸಿದರೆ ಅವರ ಪರಿಶ್ರಮಕ್ಕೆ ಫಲ ಸಿಕ್ಕಂತಾಗುತ್ತದೆ” ಎಂದು ಆಗ್ರಹಿಸಿದ. “ಅವರೆಲ್ಲಾ ಪ್ರಶಸ್ತಿಗೆ ಅರ್ಹರಾಗಿದ್ದರೂ ಮೊದಲು ನಿನಗೆ ಪ್ರಶಸ್ತಿ ಕೊಡಿಸುವೆ” ಎಂದಾಗ ಮತ್ತೊಂದು ತಕರಾರು ತೆಗೆದ. ” ನೋಡು ಶಶಿ, ನಾವಿಬ್ಬರೂ ಆತ್ಮೀಯ ಗೆಳೆಯರು ಎಂದು ರಂಗಭೂಮಿಯವರಿಗೆಲ್ಲಾ ಗೊತ್ತು. ಅಧಿಕಾರ ದುರುಪಯೋಗ ಮಾಡಿಕೊಂಡು ತನ್ನ ಗೆಳೆಯನಿಗೆ ಪ್ರಶಸ್ತಿ ಕೊಡಿಸಿದ ಕಳಂಕ ನಿನ್ನ ಮೇಲೆ ಬರಬಹುದು” ಎಂದು ನನ್ನ ಬಗ್ಗೆ ಕಾಳಜಿ ತೋರಿಸಿದ. ಸುಲಭಕ್ಕೆ ಈತ ಒಪ್ಪುವುದಿಲ್ಲವೆಂದು ಅರ್ಥವಾಯ್ತು. ನನ್ನ ಜೊತೆಗೆ ಅಕಾಡೆಮಿ ಸದಸ್ಯರಾಗಿದ್ದ ರಾಮಕೃಷ್ಣ ಬೆಳ್ತೂರರ ಜೊತೆ ಮಾತಾಡಿದೆ. ಅವರಿಗೂ ಜೆಕೆಗೆ ಪ್ರಶಸ್ತಿ ಕೊಡಿಸುವ ಮನಸಿತ್ತು. ಬೆಳ್ತೂರ ಕೋಟಾದಲ್ಲಿ ಕೆಂಗನಾಳನಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಘೋಷಿಸಲಾಯ್ತು. 

ಜೆಕೆ ಮಾಸ್ತರನ ರಂಗಬದ್ಧತೆ ಬಗ್ಗೆ ಹೇಳಲೇಬೇಕಿದೆ. ಪ್ರತಿ ದಿನ ಶಿಕ್ಷಕ ವೃತ್ತಿಗಾಗಿ ಹೊಸಕೋಟೆಯಿಂದ ಸರಿಸುಮಾರು 150 ಕಿಮಿ ದೂರ ಬಸ್ ನಲ್ಲಿ ಹೋಗಿ ಬರುತ್ತಿದ್ದರೂ ಪ್ರಯಾಣದ ಆಯಾಸ ಹಾಗೂ ವೃತ್ತಿಯ ಒತ್ತಡಗಳನ್ನು ಮರೆತು ನಾಟಕದ ರಿಹರ್ಸಲ್ ಸಮಯಕ್ಕೆ ಸರಿಯಾಗಿ ರಂಗಮಂದಿರಕ್ಕೆ ಹಾಜರಾಗುತ್ತಿದ್ದ. ಬೆಳಿಗ್ಗೆ ಏಳಕ್ಕೆ ಮನೆ ಬಿಟ್ಟರೆ ಮತ್ತೆ ಮನೆ ತಲುಪುತ್ತಿದ್ದದ್ದೇ ರಾತ್ರಿ ಹತ್ತು ಗಂಟೆಗೆ. ಈ ರೀತಿಯ ವಿಪರೀತ ಕಾರ್ಯಪ್ರವೃತ್ತಿ ಹಾಗೂ ರಂಗಬದ್ಧತೆಯೇ ಕೆಂಗನಾಳರ ಅಕಾಲಿಕ ಸಾವಿಗೆ ಕಾರಣ ಎನ್ನುವುದೂ ಸುಳ್ಳಲ್ಲ. ನೂರಾರು ವರ್ಷ ಭೂಮಿಗೆ ಭಾರವಾಗಿ ಕೂಳಿಗೆ ದಂಡವಾಗಿ ಹೋಗೋ ಸ್ವಾರ್ಥ ಸಾಧನೆಗಾಗಿ ಬದುಕು ಸವೆಸುವುದಕ್ಕಿಂತಲೂ ಇದ್ದಷ್ಟು ಕಾಲ ಏನಾದರೂ ಸಾಧನೆ ಮಾಡಿ ಮಡಿಯುವುದೇ ಮನುಷ್ಯ ಬದುಕಿನ ಸಾರ್ಥಕತೆಯಾಗಿದೆ. ಈ ವಿಷಯದಲ್ಲಿ ಜೆಕೆ ಬದುಕು ಸಾಗಿ ಮುಗಿದಿದೆ. 

ಇಂತಹ ರಂಗನಿಷ್ಟೆ ಹಾಗೂ ಕಾಯಕ ಬದ್ಧತೆ ಇರುವ ರಂಗಗೆಳೆಯನನ್ನು ಅಕಾಲಿಕವಾಗಿ ಕಳೆದುಕೊಂಡಿದ್ದು ಅತ್ಯಂತ ಬೇಸರದ ಸಂಗತಿ. ಸದಾ ಯಾವುದಾದರೂ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದ ಕೆಂಗನಾಳ ತನ್ನ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದ್ದರೆ ಇನ್ನೂ ಹಲವಾರು ವರ್ಷ ಬದುಕಿರುತ್ತಿದ್ದ. ವೃತ್ತಿ ಪ್ರವೃತ್ತಿಗಳ ಒತ್ತಡಗಳನ್ನೆಲ್ಲಾ ಮೈಮೇಲೆ ಎಳೆದುಕೊಂಡು ಬಿಪಿ ಶುಗರ್ ಗಳನ್ನು ಆಹ್ವಾನಿಸಿಕೊಂಡಿದ್ದ. ದೇಹದ ತೂಕವನ್ನು ಅಗತ್ಯಕ್ಕಿಂತಲೂ ಅತಿಯಾಗಿ ಹೆಚ್ಚಿಸಿಕೊಂಡಿದ್ದ. ಮೊದಲೇ ಮಾಸ್ತರ. ಬೇರೆಯವರಿಗೆ ಬುದ್ಧಿ ಹೇಳುವುದರಲ್ಲಿರುವ ಆಸಕ್ತಿ, ಬೇರೆಯವರು ಹೇಳಿದ ಬುದ್ಧಿ ಮಾತನ್ನು ಕೇಳುವುದರಲ್ಲಿರಲಿಲ್ಲ. ದೇಹ ಹಲವಾರು ಸಲ ಮುನ್ಸೂಚನೆ ಕೊಟ್ಟರೂ ಎಚ್ಚರಗೊಳ್ಳದೇ, ಸರಿಯಾದ ಸಮಯಕ್ಕೆ ಊಟ ನಿದ್ರೆ ಮಾಡದೇ ಸಾರ್ವಜನಿಕ ಕೆಲಸಗಳಿಗಾಗಿ ವಿಶ್ರಾಂತಿ ರಹಿತ ಓಡಾಟ ಮುಂದುವರಿಸಿದ್ದರ ಪರಿಣಾಮವೇ ಮ್ಯಾಸಿವ್ ಕಾರ್ಡಿಯಾಕ್ ಹಾರ್ಟ್ ಅಟ್ಯಾಕ್, ಕೇವಲ ಅರವತ್ತೇ ಸೆಕೆಂಡುಗಳಲ್ಲಿ ಉಸಿರನ್ನೇ ನಿಲ್ಲಿಸಿತ್ತು. ಆಗಬಾರದು ಆಗಿಹೋಯ್ತು. ಹೀಗೇ ಭಾವುಕತೆಯಿಂದ ಗೆಳೆಯನ ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳುತ್ತಾ ಹೋದರೆ ಮುಕ್ತಾಯವೆಂಬುದಿಲ್ಲ. 

ಗ್ರಾಮೀಣ ರಂಗಭೂಮಿಯಲ್ಲಿ ಅಜಾತಶತ್ರುವಾಗಿದ್ದ ಜೆಕೆ ಮಾಸ್ತರ್ ಇನ್ನು ಕೇವಲ ನೆನಪು ಮಾತ್ರ. ಚಂಪಾರವರ ಪದ್ಯ ನೆನಪಿಗೆ ಬರುತ್ತಿದೆ.

” ಸತ್ತವರು ಎಲ್ಲಿಗೆ ಹೋಗುತ್ತಾರೆ. 

ಎಲ್ಲಿಗೂ ಹೋಗುವುದಿಲ್ಲ.

ಜೊತೆಯಿರುವವರ ನೆನಪಿನಲ್ಲಿ

ಸದಾ ಜೀವಂತವಾಗಿರುತ್ತಾರೆ”

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ-

More articles

Latest article