ಅಂಬೇಡ್ಕರ್ ಹೆಸರು ಶೋಕಿನಾ? ದೇವರ ಸ್ಮರಣೆಯಿಂದ ಸ್ವರ್ಗ ಪ್ರಾಪ್ತಿನಾ?

Most read

ಯಾವ ದೇವರೂ ಮಾಡದ ಮಾನವೀಯ ಕೆಲಸವನ್ನು ಅಂಬೇಡ್ಕರ್ ರವರು ಮಾಡಿ ಬ್ರಾಹ್ಮಣ್ಯಶಾಹಿಯಿಂದ ವಿಮೋಚನೆ ಕೊಡಿಸಿದ್ದರಿಂದಲೇ ಬಾಬಾಸಾಹೇಬರ ಹೆಸರು ಜನರ ಎದೆಬಡಿತವಾಗಿದೆ. ಯಾವ ಧರ್ಮವೂ ಕೊಡದ ಸಮಾನತೆಯನ್ನು ಸಂವಿಧಾನದ ಮೂಲಕ ಕೊಟ್ಟಿದ್ದರಿಂದಲೇ ಅಂಬೇಡ್ಕರ್ ರವರು ನಿತ್ಯಸ್ಮರಣೀಯರಾಗಿದ್ದಾರೆ. ದಮನಿತರಿಗೆ ಬಾಬಾಸಾಹೇಬರು ದೇವರಿಗಿಂತಾ ದೊಡ್ಡವರು ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಅಂಬೇಡ್ಕರ್ ರವರ ಕುರಿತು ತಮ್ಮ ಮನದಾಳದ ಮಾತುಗಳನ್ನೇ ಹೇಳಿದ್ದಾರೆ. ಸಂಘದ ಮನುವಾದಿ ಸಂಸ್ಕೃತಿಯನ್ನೇ ಪ್ರತಿಪಾದಿಸಿದ್ದಾರೆ.

ಆರಂಭದಿಂದಲೂ ಅಂಬೇಡ್ಕರ್ ರವರು ರಚಿಸಿದ ಸಂವಿಧಾನವನ್ನೇ ಒಪ್ಪದ ಆರೆಸ್ಸೆಸ್, ಅಂಬೇಡ್ಕರ್ ರವರನ್ನು ಒಪ್ಪಲು ಸಾಧ್ಯವೇ? ಮನುಸ್ಮೃತಿಯನ್ನೇ ಸಂವಿಧಾನವಾಗಿಸಬೇಕೆಂಬ ಅಂತರ್ಗತ ಕಾರ್ಯಸೂಚಿ ಇಟ್ಟುಕೊಂಡು ಕಳೆದ ನೂರು ವರ್ಷಗಳಿಂದ ಶತಾಯ ಗತಾಯ ಪ್ರಯತ್ನಿಸುತ್ತಿರುವ ಹಿಂದುತ್ವವಾದಿ ಆರೆಸ್ಸೆಸ್ ಭಾರತದ ಸಂವಿಧಾನದ ವಿರೋಧಿ ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಇನ್ನು ಈ ಬ್ರಾಹ್ಮಣ್ಯವಾದಿ ಸಂಘದ ರಾಜಕೀಯ ಅಂಗವಾದ ಬಿಜೆಪಿ ಪಕ್ಷ ಹೇಗೆ ತಾನೆ ಅಂಬೇಡ್ಕರ್ ರವರನ್ನು ಒಪ್ಪಿಕೊಳ್ಳಲು ಸಾಧ್ಯ? ಈ ಪಕ್ಷದ ಅಧಿನಾಯಕರಾದ ಮೋದಿ ಮತ್ತು ಶಾ ರವರಿಗೆ ಸಂವಿಧಾನವೆನ್ನುವುದು ಅಧಿಕಾರ ಗಿಟ್ಟಿಸಿಕೊಳ್ಳಲು ಬೇಕಾದ ಮೆಟ್ಟಲಾಗಿ ಮಾತ್ರ ಬೇಕಾಗಿದೆ. ಬಹುಜನರ ಮತ ಪಡೆಯಲು ಅಂಬೇಡ್ಕರ್ ಹೆಸರು ಅಗತ್ಯವಿದೆ. ಆದರೆ ಈ ಸನಾತನವಾದಿಗಳ ಒಳಕಾರ್ಯಸೂಚಿ ಅಂಬೇಡ್ಕರ್ ರವರ ಸಂವಿಧಾನವನ್ನು ನಿಧಾನವಾಗಿ ದುರ್ಬಲಗೊಳಿಸಿ ಮನುವಾದಿ ಸಂವಿಧಾನವನ್ನು ಜಾರಿಗೊಳಿಸುವುದೇ ಆಗಿದೆ.

ಈ ನಿಟ್ಟಿನಲ್ಲಿ ಸಂಘಿಗಳಿಗೆ ಅಡ್ಡಿಯಾಗಿರುವುದು ಅಂಬೇಡ್ಕರ್ ರವರು ಪ್ರತಿಪಾದಿಸಿದ ಸಮಾನತೆ ಹಾಗೂ ಸ್ವಾತಂತ್ರ್ಯ ಎನ್ನುವ ತತ್ವ ಸಿದ್ದಾಂತಗಳು. ದಲಿತ ದಮನಿತ ಶೋಷಿತ ವರ್ಗದವರ ಪಾಲಿಗೆ ಅಂಬೇಡ್ಕರ್ ಬೆಳಕಾಗಿದ್ದಾರೆ, ಅವರ ನೋವಿಗೆ ಧ್ವನಿಯಾಗಿದ್ದಾರೆ. ಅಂಬೇಡ್ಕರ್ ಎನ್ನುವ ಭಾರತದ ಭಾಗ್ಯ ವಿಧಾತನ ಹೆಸರೇ ಬಹುಜನರ ಬಾಳಿನ ಉಸಿರಾಗಿದೆ.

ಇದು ಸಂಘಿ ಸಂತಾನಗಳಿಗೆ ತಾಳಲಾಗದ ಸಮಸ್ಯೆಯಾಗಿದೆ. ಹೇಗಾದರೂ ಮಾಡಿ ಅಂಬೇಡ್ಕರ್ ರವರ ಹೆಸರನ್ನು ಹಿನ್ನೆಲೆಗೆ ಸರಿಸಲು ದೇವರ ಹೆಸರಲಿ ಸ್ವರ್ಗ ನರಕಗಳ ಕರ್ಮಸಿದ್ಧಾಂತವನ್ನು ಮುನ್ನಲೆಗೆ ತರಲು ಪ್ರಯತ್ನಿಸಲಾಗುತ್ತಿದೆ. ಅದಕ್ಕಾಗಿಯೇ ದೇಶಾದ್ಯಂತ ರಾಮನನ್ನು ವೈಭವೀಕರಿಸಲಾಯ್ತು, ರಾಮಜನ್ಮಭೂಮಿ ವಿವಾದ ಸೃಷ್ಟಿಸಿ ಅಧಿಕಾರ ಪಡೆದದ್ದೂ ಆಯ್ತು. ರಾಮಮಂದಿರ ನಿರ್ಮಾಣದ ಮೂಲಕ ಜನರ ಚಿತ್ತವನ್ನು ದೇವರತ್ತ ಹರಿಸಲು ಪ್ರಯತ್ನಿಸಲಾಯ್ತು.

ಆದರೂ ಜನರೆದೆಯ ಉಸಿರಾದ ಅಂಬೇಡ್ಕರ್ ರವರ ಪ್ರಭಾವ ಕಡಿಮೆಯಾಗದೆ ಹೆಚ್ಚುತ್ತಲೇ ಹೋಯಿತು. ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಷ್ಟೂ ಸಂವಿಧಾನದ ಪರವಾದ ಧ್ವನಿಗಳು ಮೊಳಗುತ್ತಲೇ ಹೋದವು. ಇದರಿಂದಾಗಿ ಹತಾಶೆಗೊಳಗಾದ ಬಿಜೆಪಿಯ ಮಹೋನ್ನತ ನಾಯಕ ಅಮಿತ್ ಶಾರವರು ಸಂಸತ್ತಿನಲ್ಲಿಯೇ ಅಂಬೇಡ್ಕರ್ ರವರ ಮೇಲಿರುವ ತಮ್ಮ ಅಸಹನೆ ಅಸಮಾಧಾನವನ್ನು ಹೊರಹಾಕಿದರು. “ಅಂಬೇಡ್ಕರ್ ಹೆಸರು ಹೇಳುವುದೇ ಶೋಕಿಯಾಗಿದೆ. ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್. ಇದರ ಬದಲಾಗಿ ದೇವರ ನಾಮ ಸ್ಮರಣೆ ಮಾಡಿದ್ದರೆ ಏಳು ಜನ್ಮದಲ್ಲಿ ಸ್ವರ್ಗ ದೊರೆಯುತ್ತಿತ್ತು” ಎಂದು ಹೇಳುವ ಮೂಲಕ ತಮ್ಮ ಅಂತರಂಗವನ್ನು ಬಹಿರಂಗಗೊಳಿಸಿ ಬೆತ್ತಲಾದರು.

ಯಾವಾಗ ಅಂಬೇಡ್ಕರ್ ವಿರೋಧಿ ಹೇಳಿಕೆಯ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಯಿತೋ, ಯಾವಾಗ ವಿರೋಧ ಪಕ್ಷಗಳು ಅಮಿತ್ ಶಾ ರಾಜೀನಾಮೆ ಕೊಡಬೇಕೆಂದು ಪಟ್ಟು ಹಿಡಿದರೋ ಆಗ ಸ್ವತಃ ಪ್ರಧಾನಿ ಮೋದಿಯವರೇ ಸಮರ್ಥನೆಗಿಳಿದರು. ಕಾಂಗ್ರೆಸ್ ಮೇಲೆ ಆರೋಪ ಮಾಡತೊಡಗಿದರು. ‘ಕಾಂಗ್ರೆಸ್ ಅಂಬೇಡ್ಕರ್ ರವರನ್ನು ಚುನಾವಣೆಯಲ್ಲಿ ಸೋಲಿಸಿ ಅವಮಾನ ಮಾಡಿದೆ. ಭಾರತರತ್ನ ಕೊಡಲು ನಿರಾಕರಿಸಿದೆ. ಅಂಬೇಡ್ಕರ್ ಸ್ಮಾರಕ ನಿರ್ಮಿಸಲಿಲ್ಲ”ಎಂದು ದೂಷಣೆ ಮಾಡುತ್ತಾ ಅಮಿತ್ ಶಾರವರ ಅಂಬೇಡ್ಕರ್ ವಿರೋಧಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಹರಸಾಹಸ ಪಡಬೇಕಾಯ್ತು.

ಆಯ್ತು ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಸೋಲಿಸಿತು. ಚುನಾವಣಾ ರಾಜಕೀಯದಲ್ಲಿ ತನ್ನ ಪಕ್ಷದ ಎದುರಾಳಿಯನ್ನು ಸೋಲಿಸುವುದೇ ರಾಜಕಾರಣವಲ್ಲವೇ? ಭಾರತರತ್ನ ಕೊಡಬೇಕಿತ್ತು, ವಿಳಂಬವಾಯ್ತು. ಇದರಲ್ಲಿ ಅಂಬೇಡ್ಕರ್ ರವರಿಗೆ ಆದ ಅವಮಾನ ಏನಿದೆ? ಕಾಂಗ್ರೆಸ್ ಅಂಬೇಡ್ಕರ್ ರವರ ಸ್ಮಾರಕ ನಿರ್ಮಿಸಿಲ್ಲ. ಹೋಗಲಿ ಬಿಜೆಪಿಗರು ಎಷ್ಟು ಸ್ಮಾರಕ ನಿರ್ಮಿಸಿದ್ದಾರೆ? ಇವೆಲ್ಲಾ ಕಳ್ಳನಿಗೊಂದು ಪಿಳ್ಳೆ ನೆಪಗಳಷ್ಟೇ.

“ನನಗೆ ಅಂಬೇಡ್ಕರ್ ರವರ ಬಗ್ಗೆ ಅಪಾರ ಪ್ರೀತಿ ಇದೆ, ಬಿಜೆಪಿ ಅಂಬೇಡ್ಕರ್ ತತ್ವಗಳನ್ನು ಅನುಸರಿಸುತ್ತದೆ” ಎಂದು ಹೇಳುವ ಮೂಲಕ ತಮ್ಮ ಅಂಬೇಡ್ಕರ್ ವಿರೋಧಿ ಮಾತನ್ನು ಮರೆಮಾಚಲು ಶಾ ಯತ್ನಿಸುತ್ತಿದ್ದಾರೆ. ಅಂಬೇಡ್ಕರ್ ರವರ ಸಮಾನತೆಯ ತತ್ವವನ್ನು ಅನುಸರಿಸಿದ್ದರೆ ಹೊಸ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಯಾಕೆ ಆಹ್ವಾನಿಸಲಿಲ್ಲ?. ಯಾಕೆಂದರೆ ರಾಷ್ಟ್ರಪತಿ ಮುರ್ಮುರವರು ಆದಿವಾಸಿ ವಿಧವೆ ಮಹಿಳೆಯಾಗಿದ್ದು ಈ ಸನಾತನಿಗಳ ಸಂಪ್ರದಾಯ ಅದಕ್ಕೆ ಒಪ್ಪುವುದಿಲ್ಲ. ಸಂವಿಧಾನ ಎಲ್ಲರಿಗೂ ಸಮಾನತೆ ಕೊಟ್ಟಿರುವಾಗ ಈ ಬಿಜೆಪಿಯ ಮನುವಾದಿಗಳು ಸನಾತನತೆಗೆ ಬದ್ಧರಾಗಿದ್ದು ಅಂಬೇಡ್ಕರ್ ರ ತತ್ವಕ್ಕೆ ಮಾಡಿದ ಅಪಚಾರ ಅಲ್ಲವೇ?

“ಬಿಜೆಪಿ ಮೀಸಲಾತಿಯನ್ನು ಬಲಪಡಿಸುವ ಕೆಲಸ ಮಾಡಿದೆ” ಎಂದು ಹೇಳಿದ ಶಾ ರವರಿಗೆ ಯಾರಾದರೂ ನೆನಪಿಸಬೇಕಿದೆ. ಮಂಡಲ್ ವಿರುದ್ಧ ಕಮಂಡಲ್ ದಂಗೆ ಸೃಷ್ಟಿಸಿದ್ದು ಯಾರು ಅಂತಾ? ಇದೆ ಸಂಘಿಗಳು ಕಾಲೇಜಿನ ವಿದ್ಯಾರ್ಥಿಗಳನ್ನು ಮೀಸಲಾತಿಯ ವಿರುದ್ಧ ಎತ್ತಿಕಟ್ಟಿ ಅನೇಕ ವಿದ್ಯಾರ್ಥಿಗಳ ಸಾವಿಗೆ ಕಾರಣರಾದರು. ಯಾವುದೇ ಕಾರಣಕ್ಕೂ ಮೀಸಲಾತಿ ಕೊಡಬಾರದು ಎಂದು ಹಾದಿ ಬೀದಿಯಲ್ಲಿ ಬೆಂಕಿ ಹಾಕಿ ದಂಗೆ ಎಬ್ಬಿಸಿದ್ದರು.  ಇಂತಹ ಮಹಾಮಹಿಮರು ಈಗ ಮೀಸಲಾತಿ ಪರ ಎಂದು ಬೊಗಳೇ ಬಿಡುತ್ತಿದ್ದಾರೆ.

ಸಂವಿಧಾನ ರಕ್ಷಿಸುವುದಾಗಿ ತೋರಿಕೆ ಮಾತುಗಳನ್ನು ಹೇಳುತ್ತಿರುವ ಪ್ರಧಾನಿಗಳು “ಸಂವಿಧಾನವನ್ನು ಬದಲಿಸಲೆಂದೇ ಬಂದಿದ್ದೇವೆ” ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆಯವರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ? ಸಂವಿಧಾನದ ಪ್ರತಿಯನ್ನು ಬೀದಿಯಲ್ಲಿ ಸುಟ್ಟ ಸಂಘ ಪರಿವಾರದ ಸಂವಿಧಾನ ದ್ರೋಹಿಗಳಿಗೆ ಯಾಕೆ ಶಿಕ್ಷೆ ಕೊಡಿಸಲಿಲ್ಲ? ಯಾಕೆಂದರೆ ಈ ಬಿಜೆಪಿ ಹಾಗೂ ಅದರ ಮಾತೃ ಸಂಸ್ಥೆ ಆರೆಸ್ಸೆಸ್ ಉದ್ದೇಶವೇ ಸಂವಿಧಾನವನ್ನು ಬದಲಾಯಿಸುವುದಾಗಿದೆ. ಮನುಸ್ಮೃತಿ ಪ್ರೇರಿತ ಹಿಂದುತ್ವವಾದಿ ಸಂವಿಧಾನವನ್ನು ಜಾರಿಗೆ ತರುವುದೇ ಆಗಿದೆ. ಬಹುತ್ವವನ್ನು ಸರ್ವನಾಶ ಮಾಡಿ ಹಿಂದುತ್ವವನ್ನು ದೇಶದ ಮೇಲೆ ಹೇರುವುದೇ ಆಗಿದೆ. ಹಿಂದೂ ರಾಷ್ಟ್ರ ಸ್ಥಾಪನೆಯ ಹೆಸರಲ್ಲಿ ಸಂವಿಧಾನದ ಆಶಯಗಳನ್ನು ನಾಶಮಾಡುವುದೇ ಆಗಿದೆ.

ಮನುವಾದಿಗಳ ಮಹದಾಸೆಗೆ ಅಡೆತಡೆಯಾಗಿದ್ದು ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನ. ಅದಕ್ಕಾಗಿಯೇ ಅಂಬೇಡ್ಕರ್ ಹೆಸರು ಹೇಳುವುದೇ ಶೋಕಿ ಎಂದು ಅಮಿತ್ ಶಾ ಬಾಯಲ್ಲಿ ಆರೆಸ್ಸೆಸ್ ಅಜೆಂಡಾ ಪ್ರತಿಧ್ವನಿಸಿದೆ. “ಅಂಬೇಡ್ಕರ್ ಹೆಸರು ಬಿಡಿ, ದೇವರ ನಾಮಸ್ಮರಣೆ ಮಾಡಿ. ಸ್ವರ್ಗ ಸಿಕ್ಕುತ್ತದೆ” ಎಂಬ ಹೊಸ ವರಸೆಯನ್ನು ಬಿಜೆಪಿ ಆರಂಭಿಸಿದೆ. ಈ ದೇಶದ ಬಹುಸಂಖ್ಯಾತ ಜನತೆ ಅಂಬೇಡ್ಕರ್ ರವರ ಸಮಾನತೆ ಸಿದ್ಧಾಂತದ ಪರವಾಗಿದ್ದಾರೆ. ತಮಗೆ ಸ್ವಾಭಿಮಾನದ ಬದುಕನ್ನು ಕೊಟ್ಟ ಬಾಬಾಸಾಹೇಬರ ಬಗ್ಗೆ ದಲಿತ ಶೂದ್ರ ಆದಿವಾಸಿ ಹಿಂದುಳಿದ ವರ್ಗದ ಜನತೆ ಅಂಬೇಡ್ಕರ್ ರವರನ್ನು ತಮ್ಮ ಪಾಲಿನ ದೇವರೆಂದೇ ಅಭಿಮಾನ ತೋರುತ್ತಾರೆ. ಜನರ ಅಭಿಮಾನವನ್ನು ದೇವರ ಆರಾಧನೆಯತ್ತ ತಿರುಗಿಸುವ ಶಡ್ಯಂತ್ರದ ಭಾಗವಾಗಿಯೇ ಅಮಿತ್ ಶಾ ಮಾತಾಡಿದ್ದಾರೆ.

ಚಾತುರ್ವರ್ಣ್ಯ ವ್ಯವಸ್ಥೆ-ಸಾಂಕೇತಿಕ ಚಿತ್ರ

ಸನಾತನ ಪುರೋಹಿತಶಾಹಿ ವರ್ಗವು ಜನರನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ದೇವರು ಧರ್ಮ ಹಾಗೂ ಶಾಸ್ತ್ರಗಳನ್ನು ಶಸ್ತ್ರಗಳಾಗಿ ಬಳಸಿ ಚಾತುರ್ವರ್ಣ್ಯವನ್ನು ಕಾಪಾಡಿಕೊಂಡು ಬಂದಿದ್ದರು. ಎಲ್ಲಿ ಪುರೋಹಿತರ ಈ ಶಡ್ಯಂತ್ರದ ವಿರುದ್ಧ ಶೂದ್ರ ದಲಿತರು ತಿರುಗಿ ಬಿದ್ದು ಸಮಾನತೆ ಕೇಳುತ್ತಾರೋ ಎಂದು ಆತಂಕ ಪೀಡಿತರಾದ ಸನಾತನಿಗಳು ಸ್ವರ್ಗದ ಆಸೆ, ನರಕದ ಭಯವನ್ನು ಸೃಷ್ಟಿಸಿ ಕರ್ಮಸಿದ್ಧಾಂತವನ್ನು ಪ್ರಚಾರಕ್ಕೆ ತಂದರು. ‘ಮುಂದಿನ ಜನ್ಮದ ಅನುಕೂಲತೆಗಾಗಿ ಈ ಜನ್ಮದಲ್ಲಿ ಧ್ವನಿ ಎತ್ತದೇ ದುಡಿದುಡಿದು ಸಾಯಬೇಕು’ ಎಂದು ಜನರನ್ನು ನಂಬಿಸಿದರು. ಇದೇ ಕರ್ಮಸಿದ್ಧಾಂತವನ್ನೇ ಮನುವಾದಿ ಅಮಿತ್ ಶಾ ಸಂಸತ್ತಿನಲ್ಲಿ ಪ್ರತಿಪಾದಿಸಿದ್ದಾರೆ. ‘ಅಂಬೇಡ್ಕರ್ ಹೆಸರಿನ ಬದಲಾಗಿ ದೇವರ ನಾಮ ಸ್ಮರಣೆ ಮಾಡಿದ್ದರೆ ಏಳು ಜನ್ಮದಲ್ಲಿ ಸ್ವರ್ಗ ಸಿಗುತ್ತಿತ್ತು’ ಎಂದು ಪ್ರಲಾಪಿಸಿದ್ದಾರೆ.

ಹೀಗಾಗಿ.. ಅಮಿತ್ ಶಾ ರವರಂತವರು ಅಂಬೇಡ್ಕರ್ ರವರ ವಿರುದ್ಧ ಮಾತಾಡಿದರೆ ದೇಶಾದ್ಯಂತ ಬಹುಜನರು ಪ್ರತಿಭಟಿಸುತ್ತಾರೆ. ಸಂವಿಧಾನದ ವಿರುದ್ಧ ಮನುವಾದಿಗಳು ಹರಿಹಾಯ್ದರೆ ದೇಶವಾಸಿಗಳು ದಂಗೆ ಏಳುತ್ತಾರೆ.  ಅದೆಷ್ಟೋ ಶತಮಾನಗಳ ಬ್ರಾಹ್ಮಣ್ಯದ ಹಿಡಿತದಿಂದ ವಿಮೋಚನೆ ಹೊಂದಿದ ದುಡಿಯುವ ಜನರು ಮತ್ತೆ ಗುಲಾಮಗಿರಿಗೆ ಒಳಗಾಗಲು ಸಿದ್ಧರಾಗಿಲ್ಲ. ಎಂದೂ ಅಂಬೇಡ್ಕರ್ ರವರ ಸಂವಿಧಾನವನ್ನು ಬದಲಾಯಿಸಲು ಜನರು ಬಿಡುವುದಿಲ್ಲ. ಯಾವಾಗ ಶಾ ರವರ ಅಂಬೇಡ್ಕರ್ ವಿರೋಧಿ ಹೇಳಿಕೆಯ ವಿರುದ್ಧ ಜನರ ಪ್ರತಿಭಟನೆ, ಪ್ರತಿಪಕ್ಷಗಳ ವಿರೋಧ ತೀವ್ರವಾಯಿತೋ ಆಗ ಈ ಮೋದಿ ಶಾ ಗಳು ಅಂಬೇಡ್ಕರ್ ಪರವಾಗಿ ಮಾತಾಡಲೇ ಬೇಕಾದ ಅನಿವಾರ್ಯತೆ ಉಂಟಾಯಿತು. ಸಂವಿಧಾನವನ್ನು ಬಿಟ್ಟು ಅಧಿಕಾರದಲ್ಲಿ ಇರುವುದು ಅಸಾಧ್ಯವೆಂಬ ಅರಿವಾಯಿತೋ ಆಗ ಸಂವಿಧಾನದ ಪರವಾಗಿ ಸಮರ್ಥನೆ ಕೊಡಬೇಕಾದ ಪರಿಸ್ಥಿತಿ ಮೋದಿ ಶಾ ಗಳಿಗೆ ಅಗತ್ಯವಾಯ್ತು. ‘ಸಂವಿಧಾನದ ವಿರುದ್ಧ, ಸಂವಿಧಾನ ಕರ್ತೃವಿನ ವಿರುದ್ಧ ಕುಹಕವಾಗಿ ದುರಹಂಕಾರದಿಂದ ಮಾತಾಡಿದರೆ ಈ ದೇಶದ ಜನರು ಸಹಿಸುವುದಿಲ್ಲ’ ಎಂಬ ಸತ್ಯ ಸಂಘಿಗಳಿಗೆ ಮನದಟ್ಟಾಗಬೇಕಿದೆ. ಈ ದೇಶಕ್ಕೆ ಈಗ ಮನುವಾದಿಗಳಿಂದ ವಿಮೋಚನೆ ಬೇಕಿದೆ, ಸನಾತನ ಸಂಘಿಗಳ ಹಿಡಿತದಿಂದ ಬಿಡುಗಡೆ ಬೇಕಿದೆ. ಸಂವಿಧಾನ ಉಳಿಯಲೇ ಬೇಕಿದೆ. ಅಂಬೇಡ್ಕರ್ ರವರ ಆಶಯಗಳು ಜಾರಿಯಾಗಬೇಕಿವೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article