ಕೇಂದ್ರದ ಭಾಷಾ ದಮನವನ್ನು ವಿರೋಧಿಸಲೇ ಬೇಕಿದೆ. ಪ್ರಾದೇಶಿಕ ವಿಶ್ವವಿದ್ಯಾಲಯಗಳ ಹಕ್ಕನ್ನು ಕಿತ್ತುಕೊಳ್ಳುವ ಕೇಂದ್ರದ ಧನ ಸಹಾಯ ಆಯೋಗದ ಶಡ್ಯಂತ್ರವನ್ನು ಪ್ರಶ್ನಿಸಲೇ ಬೇಕಿದೆ. ಸಮಸ್ತ ಕನ್ನಡ ಸಂಘಟನೆಗಳು ಈ ಹಿಂದಿ ಹೇರಿಕೆಯ ದಮನದ ವಿರುದ್ಧ ದ್ವನಿ ಎತ್ತಲೇಬೇಕಿದೆ ಶಶಿಕಾಂತ ಯಡಹಳ್ಳಿ, ಪತ್ರಕರ್ತರು
ಇನ್ನು ಮೇಲೆ ಪಿಹೆಚ್‌ಡಿ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದು ತಮ್ಮ ಹೆಸರಿನ ಮುಂದೆ ಡಾ. ಎಂದು ಸೇರಿಸಿಕೊಳ್ಳಬೇಕೆನ್ನುವವರ ಹಾದಿ ಇನ್ನೂ ಕಠಿಣವಾಗಿದೆ. ಪಿಹೆಚ್‌ಡಿ ಪದವಿ ಪಡೆದು ವಿಶ್ವವಿದ್ಯಾಲಯಗಳ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಬೇಕೆಂಬ ಹಂಬಲ ಹೊಂದಿರುವವರಿಗೆ ಆರಂಭದ ಹಂತವೇ ಕಷ್ಟಸಾಧ್ಯವಾಗುವಂತಿದೆ. ಯಾಕೆಂದರೆ ಪಿಹೆಚ್‌ಡಿ ಪ್ರವೇಶಿಸುವ ಮಾನದಂಡಗಳನ್ನು ಬದಲಾಯಿಸಲಾಗಿದೆ.
ಇಲ್ಲಿಯವರೆಗೆ ಡಾಕ್ಟರೇಟ್ ಮಾಡಬೇಕೆಂದವರಿಗೆ ವಿಶ್ವವಿದ್ಯಾಲಯಗಳೇ ಪ್ರವೇಶ ಪರೀಕ್ಷೆ ನಡೆಸುತ್ತಿದ್ದವು. ಆಯಾ ರಾಜ್ಯಗಳಲ್ಲಿರುವ ವಿಶ್ವವಿದ್ಯಾಲಯಗಳು ಎಂಟ್ರೆನ್ಸ್ ಎಕ್ಸಾಂ ನಡೆಸಿದಾಗ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆದು ಪಾಸಾಗಿ ಪಿಹೆಚ್‌ಡಿ ವ್ಯಾಸಂಗ ಮುಂದುವರೆಸಬಹುದಾಗಿತ್ತು. ಕರ್ನಾಟಕದಲ್ಲಿ ಕನ್ನಡದಲ್ಲಿಯೂ ಬರೆಯಬಹುದಿತ್ತು. ವೈವಾ ಸಂದರ್ಶನ ಕೂಡಾ ಕನ್ನಡದಲ್ಲೇ ಇರಬಹುದಾಗಿತ್ತು. ಆದರೆ ಇನ್ನು ಮುಂದೆ ಪಿಹೆಚ್‌ಡಿ ಗೆ ಪ್ರವೇಶ ಪಡೆಯಲು ರಾಷ್ಟ್ರೀಯ ಅರ್ಹತಾ ಪರೀಕ್ಷೆ ಅಂದರೆ ನೆಟ್ ಎಕ್ಸಾಂ ಬರೆಯಬೇಕಿದೆ. ನೆಟ್ ಪರೀಕ್ಷಾ ಅಂಕಗಳ ಆಧಾರದ ಮೇಲೆ ಪ್ರವೇಶ ನಿರ್ಧರಿತವಾಗುತ್ತದೆ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ಆದೇಶ ಹೊರಡಿಸಿದೆ. ಇಲ್ಲಿಯವರೆಗೆ ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಗಾಗಿ ಹಾಗೂ ಸ್ನಾತಕೋತ್ತರ ಪದವೀಧರರು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಳ್ಳಲು ನೆಟ್ ಪರೀಕ್ಷೆ ಪಾಸಾಗುವುದು ಕಡ್ಡಾಯವಾಗಿತ್ತು ಹಾಗೂ ಈ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುತ್ತಿತ್ತು. ಆದರೆ 2024-25 ಶೈಕ್ಷಣಿಕ ಅವಧಿಯಿಂದ ನೆಟ್ ಪರೀಕ್ಷೆಯ ಅಂಕಗಳನ್ನು ಪಿಹೆಚ್‌ಡಿ ಪ್ರವೇಶ ಪಡೆಯಲು ಪರಿಗಣಿಸಲಾಗುವುದು ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (UGC) ಆದೇಶಿಸಿದೆ. ಪರೀಕ್ಷೆಯ ಅಂಕಗಳನ್ನು ಪರಿಶೀಲಿಸಿ ಪಿಹೆಚ್‌ಡಿ ಗೆ ಪ್ರವೇಶ ದೊರಕಿಸಿ ಕೊಡಲು ಯುಜಿಸಿ ಆಯೋಗವು ತಜ್ಞರ ಸಮಿತಿ ರಚಿಸಿ, ಆ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಪಿಹೆಚ್‌ಡಿ ಅಧ್ಯಯನಕ್ಕೆ ಅನುಮತಿ ದೊರಕುವುದಂತೆ. ಈ ಹೊಸ ಆದೇಶದ ಮೇರೆಗೆ ಯುಜಿಸಿ ನೆಟ್ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಜೂನ್ 2024 ರಿಂದ ಆರಂಭವಾಗುವ ನಿರೀಕ್ಷೆ ಇದೆ.
ಒಳ್ಳೆಯದೇ ಆಯ್ತಲ್ಲಾ? ಒಂದೇ ನೆಟ್ ಪರೀಕ್ಷೆ ಮೂರು ಪ್ರಯೋಜನಗಳು ಎಂಬುದು ಸಂತಸದ ಸಂಗತಿ ಅಲ್ಲವೇ?. ಆದರೆ ಸಮಸ್ಯೆ ಇರುವುದು ನೆಟ್ ಪರೀಕ್ಷೆ ನಡೆಯುವ ಭಾಷಾ ಮಾಧ್ಯಮದಲ್ಲಿ. ಯಾಕೆಂದರೆ ಯುಜಿಸಿ ನೆಟ್ ಪರೀಕ್ಷೆಯನ್ನು ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ ಬರೆಯಬಹುದಾಗಿದೆ. ಉತ್ತರ ಭಾರತದ ಬಹುತೇಕ ರಾಜ್ಯಗಳವರ ಮಾತೃ ಭಾಷೆ ಹಿಂದಿಯಾಗಿದ್ದರಿಂದ ಅವರಿಗೆ ಸಮಸ್ಯೆಯಾಗದು. ಆದರೆ ದಕ್ಷಿಣ ಭಾರತದ ಗ್ರಾಮೀಣ ಪ್ರದೇಶದಿಂದ ಬಂದವರಿಗೆ ಹಿಂದಿ ಭಾಷೆಯ ಮೇಲೆ ಹಿಡಿತವೂ ಇರದು, ಇಂಗ್ಲೀಷ್ ಭಾಷೆ ಕಬ್ಬಿಣದ ಕಡಲೆ. ಕರ್ನಾಟಕದ ಹಳ್ಳಿಗಳಿಂದ ಬಂದ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು ಭಾಷಾ ಸಮಸ್ಯೆಯಿಂದಾಗಿ ಪಿಹೆಚ್‌ಡಿ ಮಾಡುವ ಆಸೆಯನ್ನೇ ಬಿಡಬೇಕಾಗುತ್ತದೆ. ಆ ಪರದೇಶಿ ಹಾಗೂ ವಿದೇಶಿ ಭಾಷೆಗಳ ಮೇಲೆ ಹಿಡಿತ ಸಾಧಿಸಲಾಗದವರ ಡಾಕ್ಟರೇಟ್ ಕನಸು ಕಮರಿಹೋಗುತ್ತದೆ. ಹಠಕ್ಕೆ ಬಿದ್ದು ಪ್ರಯತ್ನಿಸಿದರೂ ಕಡಿಮೆ ಅಂಕಗಳು ಬಂದರೆ ನಿರಾಸೆಯಾಗುತ್ತದೆ.
ಯಾಕೆ ಹೀಗೆ? ಆಯಾ ವಿಶ್ವವಿದ್ಯಾಲಯಗಳು ಪ್ರಾದೇಶಿಕ ಭಾಷೆಯಲ್ಲಿ ಪಿಹೆಚ್‌ಡಿ ಪ್ರವೇಶ ಪರೀಕ್ಷೆ ತೆಗೆದುಕೊಳ್ಳುವುದನ್ನು ನಿರ್ಬಂಧಿಸಿದ್ದು ಯಾಕೆ? ವಿಕೇಂದ್ರೀಕೃತ ಪರೀಕ್ಷಾ ಪದ್ಧತಿಯನ್ನು ಕೇಂದ್ರೀಕೃತ ಗೊಳಿಸಿದ್ದಾದರೂ ಯಾಕೆ?
ಇದಕ್ಕೆ ಭಾಷಾ ಹೇರಿಕೆ ಹಾಗೂ ಪ್ರಾದೇಶಿಕ ತಾರತಮ್ಯ ಎನ್ನುವುದು. ಒಕ್ಕೂಟ ವ್ಯವಸ್ಥೆಯನ್ನು ನಿರಾಕರಿಸಿ ಕೇಂದ್ರ ಸರಕಾರದ ಏಕಾಧಿಪತ್ಯವನ್ನು ಉನ್ನತ ಶಿಕ್ಷಣದಲ್ಲಿ ಪ್ರತಿಷ್ಠಾಪಿಸುವ ಹುನ್ನಾರ ಇದು. ಭಾರತದ ಇತರ ಭಾಷಿಕರ ಮೇಲೆ ಹಿಂದಿಯನ್ನು ಹೇರುವ ಭಾಷಾ ದಬ್ಬಾಳಿಕೆ ಇದು.
ಕೇಂದ್ರದ ಈ ರೀತಿಯ ಭಾಷಾ ದಮನವನ್ನು ವಿರೋಧಿಸಲೇ ಬೇಕಿದೆ. ಪ್ರಾದೇಶಿಕ ವಿಶ್ವವಿದ್ಯಾಲಯಗಳ ಹಕ್ಕನ್ನು ಕಿತ್ತುಕೊಳ್ಳುವ ಕೇಂದ್ರದ ಧನ ಸಹಾಯ ಆಯೋಗದ ಶಡ್ಯಂತ್ರವನ್ನು ಪ್ರಶ್ನಿಸಲೇ ಬೇಕಿದೆ. ಸಮಸ್ತ ಕನ್ನಡ ಸಂಘಟನೆಗಳು ಈ ಹಿಂದಿ ಹೇರಿಕೆಯ ದಮನದ ವಿರುದ್ಧ ದ್ವನಿ ಎತ್ತಲೇಬೇಕಿದೆ. ರಾಜ್ಯ ಸರಕಾರವು ಕೇಂದ್ರದಿಂದಾಗುತ್ತಿರುವ ಭಾಷಾ ತಾರತಮ್ಯದ ವಿರುದ್ಧ ಒಕ್ಕೂಟ ಸರಕಾರಕ್ಕೆ ದೂರು ಕೊಡಬೇಕಿದೆ. ಅದರಿಂದ ಯಾವುದೇ ಪ್ರಯೋಜನ ಆಗದೇ ಹೋದರೆ ಕೋರ್ಟ್ ಮೆಟ್ಟಲು ಹತ್ತಬೇಕಿದೆ. ಮೊದಲಿನ ಹಾಗೆ ವಿಶ್ವವಿದ್ಯಾಲಯಗಳ ಮೂಲಕವೇ ಪ್ರಾದೇಶಿಕ ಭಾಷೆಗಳಲ್ಲಿ ಪಿಹೆಚ್‌ಡಿ ಕಲಿಕೆಗೆ ಪ್ರವೇಶ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಬೇಕಿದೆ. ನೆಟ್ ಮೂಲಕವೇ ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಪಾಸಾಗಲೇಬೇಕೆಂದರೆ ಈ ಪರೀಕ್ಷೆಯನ್ನೂ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಬೇಕು. ಕನ್ನಡಿಗರು ಕನ್ನಡದಲ್ಲೇ ನೆಟ್ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ) ಆಯೋಗದ ಮೇಲೆ ಸಂಸತ್ತನ್ನು ಪ್ರತಿನಿಧಿಸುವ ಕರ್ನಾಟಕದ ಎಂಪಿ ಗಳು ಒತ್ತಡ ಹೇರಬೇಕಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ಸಂಸದರಾದರೆ ಈ ಕುರಿತು ಸಂಸತ್ತಿನಲ್ಲಿ ಪ್ರಶ್ನಿಸಿ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಬೇಕೆಂದು ಪ್ರಜ್ಞಾವಂತ ಮತದಾರರು ಈಗಲೇ ಎಲ್ಲಾ ಪಕ್ಷದ ಉಮೇದುವಾರರಿಗೆ ನಿಬಂಧನೆ ವಿಧಿಸಬೇಕಿದೆ. ಒಟ್ಟಿನ ಮೇಲೆ ಕನ್ನಡ ಭಾಷೆಗೆ, ಕನ್ನಡಿಗರ ಹಿತಾಸಕ್ತಿಗೆ ಧಕ್ಕೆ ತರುವ ಯುಜಿಸಿ ಆದೇಶ ರದ್ದಾಗಬೇಕಿದೆ. ಕನ್ನಡಿಗರು ಕನ್ನಡದಲ್ಲೇ ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆಯುವಂತಾಗಬೇಕಿದೆ.
ಶಶಿಕಾಂತ ಯಡಹಳ್ಳಿ
ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ವೀರಪ್ಪ ಮೊಯಿಲಿಯವರು ಕರಾವಳಿಗೆ ಬಂದು ಫಲಾನುಭವಿಗಳಿಗೆ ಭೂ ಮಸೂದೆಯ ದಿನಗಳನ್ನು ನೆನಪಿಸಬೇಕು